ಯಾವುದೇ ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗ ಆಗುವ ಕೆಲ ಬದಲಾವಣೆಗಳು, ಆ ಸರ್ಕಾರದ ಜೀವಂತಿಕೆಯನ್ನು ಸಾರುತ್ತವೆ. ಆ ನಿಟ್ಟಿನಲ್ಲಿ, ಕಾಂಗ್ರೆಸ್ ಸರ್ಕಾರದ ಒಂದು ವರ್ಷದ ಆಡಳಿತವನ್ನು ನೋಡಿದರೆ, ರಾಜ್ಯದ ಜನ ನಿರೀಕ್ಷಿಸಿದ ಮಟ್ಟದಲ್ಲಿ ಕೆಲಸಗಳು ಆಗುತ್ತಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಆದರೆ ಸಿಎಂ ಸಿದ್ದರಾಮಯ್ಯನವರು, ಸರ್ಕಾರದ ಸಾಧನೆಗಳ ಸರಮಾಲೆ ಕಟ್ಟಿ, ಅಳುಕಿಲ್ಲದೆ ಧರಿಸಿ, ಸಮರ್ಥನೆಗಿಳಿದಿರುವುದು ಪ್ರಜಾಪ್ರಭುತ್ವದ ಅಣಕದಂತೆ ಕಾಣುತ್ತಿದೆ.
‘ನಮ್ಮ ಸರ್ಕಾರದ ಗ್ಯಾರಂಟಿಗಳು ಜನರ ಮನೆ ಮನೆ ತಲುಪಿವೆ. ಗ್ಯಾರಂಟಿಗಳ ಹೊರತಾಗಿ ಅಭಿವೃದ್ಧಿಗೂ ಹಣ ಮೀಸಲಿಟ್ಟು ಖರ್ಚು ಮಾಡಿದ್ದೇವೆ. ನುಡಿದಂತೆ ನಡೆದು 7.5 ಕೋಟಿ ಜನರ ಆಶಯ ಈಡೇರಿಸಿದ್ದೇವೆ’ ಎಂದಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು.
ಸರ್ಕಾರ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ತಮ್ಮ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡ ಮುಖ್ಯಮಂತ್ರಿಗಳು, ಅರ್ಧ ಸತ್ಯ ಅರ್ಧ ಸುಳ್ಳು ಹೇಳಿದ್ದಾರೆ. ಬಾಯಿ ಬಿಟ್ಟರೆ ಬರೀ ಸುಳ್ಳು ಹೇಳುವವರ ನಡುವೆ, ಸ್ವಲ್ಪ ಸತ್ಯವನ್ನಾದರೂ ಹೇಳಿದ್ದಾರಲ್ಲ, ಕನಿಷ್ಠ ಮಟ್ಟದ ಕೊಡುಗೆಯಾದರೂ ಇದೆಯಲ್ಲ ಎಂದು ಒಪ್ಪಿಕೊಳ್ಳುವಂತಹ ದೈನೇಸಿ ಸ್ಥಿತಿಗೆ ನಾಡಿನ ಜನತೆ ಬಂದು ನಿಂತಿದ್ದಾರೆ. ಅದನ್ನೇ ನಮ್ಮ ಸಾಧನೆ ಎಂದುಕೊಂಡರೆ, ಅದಕ್ಕಿಂತ ಮೂರ್ಖತನ ಮತ್ತೊಂದಿಲ್ಲ.
ಸಿದ್ದರಾಮಯ್ಯನವರ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಉಚಿತ ಬಸ್ ಪ್ರಯಾಣ ಮತ್ತು ಅನ್ನ ಭಾಗ್ಯ ಗ್ಯಾರಂಟಿ ಯೋಜನೆಗಳು ಮಾತ್ರ ಜನರಿಗೆ ತಲುಪಿವೆ. ಅವುಗಳಿಂದ ಬಡವರ ಬದುಕು ಕೊಂಚ ನಿಸೂರಾಗಿದೆ. ಆದರೆ, ಮಧ್ಯಮವರ್ಗವಂತೂ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಬೆಲೆ ಏರಿಕೆ, ನಿರುದ್ಯೋಗ ಮತ್ತು ಹಣದುಬ್ಬರ- ಈ ಮೂರು ಮಧ್ಯಮವರ್ಗವನ್ನು ಹಿಂಡಿ ಹಿಪ್ಪೆ ಮಾಡಿವೆ. ಇವುಗಳನ್ನು ನಿಯಂತ್ರಿಸಲು ಸಿದ್ದರಾಮಯ್ಯನವರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿಲ್ಲವೆಂಬುದು, ನಂಬಿದವರಿಗೆ ನಿರಾಶೆಗೊಳಿಸಿದೆ.
ಇನ್ನು ಬರಗಾಲ, ಹಸಿವು, ಅವಮಾನಗಳನ್ನು ಕಂಡುಂಡವರ ಗೋಳು ಹೇಳತೀರದು. ಅದಕ್ಕೆ ತುತ್ತಾದವರು ಮನೆ-ಮಠ ಬಿಟ್ಟು ಗುಳೇ ಹೋಗುವುದು, ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಸ್ವಲ್ಪಮಟ್ಟಿಗೆ ಸುಧಾರಿಸಿದೆ. ಆದರೆ, ಬರಗಾಲಕ್ಕೆ ಸ್ಪಂದಿಸಬೇಕಾದ ರೀತಿಯಲ್ಲಿ ಸರ್ಕಾರ ಸ್ಪಂದಿಸಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯವೇ ಆಗಿದೆ. ಕೃಷಿ, ಕಂದಾಯ, ತೋಟಗಾರಿಕೆ ಇಲಾಖಾ ಮಂತ್ರಿಗಳು ಬರಗಾಲಕ್ಕೆ ತುತ್ತಾದವರ ಮನೆಬಾಗಿಲಿಗೆ ಹೋಗಿ, ‘ಇದು ನಿಮ್ಮ ಸರ್ಕಾರ’ ಎಂದು ಧೈರ್ಯ ಹೇಳುವ ಕೆಲಸ ಮಾಡಲಿಲ್ಲ. ಕುಡಿಯುವ ನೀರಿಗೆ, ಜಾನುವಾರುಗಳ ಮೇವಿಗೆ ಕೊಡಬೇಕಾದ ಕನಿಷ್ಠ ಕಾಸನ್ನು ಕೊಡಲಿಲ್ಲ. ಅಧಿಕಾರಿಗಳು ತಮ್ಮ ಮಿತಿಯಲ್ಲಿಯೇ ಮಾಡಬಹುದಾದ್ದನ್ನೂ ಮಾಡಲಿಲ್ಲ.
ಬದಲಿಗೆ ಪತ್ರಿಕಾ ಹೇಳಿಕೆಗಳಿಗಷ್ಟೇ ಸೀಮಿತವಾದರು. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ದೂರಿದರು. ಪರಿಹಾರ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸುತ್ತಲೇ ಕಾಲ ಕಳೆದರು. ಇದು ಅಕ್ಷಮ್ಯ ಅಪರಾಧ.
ರಾಜ್ಯದ ತೆರಿಗೆಯ ಪಾಲನ್ನು, ಬರಗಾಲಕ್ಕೆ ಬರಬೇಕಾದ ಪರಿಹಾರದ ಮೊತ್ತವನ್ನು ಸಮಯಕ್ಕೆ ಸರಿಯಾಗಿ ಕೇಂದ್ರ ಸರ್ಕಾರ ಕೊಡಲಿಲ್ಲವೆಂಬುದು ಸತ್ಯ. ಪ್ರಧಾನಿಯವರ ಅಂಗಳದಲ್ಲಿಯೇ ನಿಂತು ಪ್ರತಿಭಟಿಸಿದ್ದು ರಾಜ್ಯ ಸರ್ಕಾರದ ಶ್ಲಾಘನೀಯ ನಡೆ. ಆದರೆ, ಸುಪ್ರೀಂ ಕೋರ್ಟಿನ ಆದೇಶದ ಮೇರೆಗೆ ಬಿಡುಗಡೆಯಾದ ಬರ ಪರಿಹಾರದ ಮೊತ್ತವನ್ನು ಬಳಸುತ್ತಿರುವ ರೀತಿ- 300, 400 ರೂ. ಪರಿಹಾರ ನೀಡಿ, ಬಿತ್ತನೆ ಮಾಡಬೇಡಿ ಎಂದು ಹೇಳಿದ್ದು, ಈಗ ಬಿತ್ತನೆ ಮಾಡದವರಿಗೆ ಪರಿಹಾರ ಇಲ್ಲ ಎನ್ನುತ್ತಿರುವುದು ಸರ್ಕಾರದ ಸರಿಯಾದ ನಡೆಯಲ್ಲ, ಅದು ರೈತರಲ್ಲಿ ಆಕ್ರೋಶ ಹುಟ್ಟಿಸುವುದರಲ್ಲಿ ಅನುಮಾನವಿಲ್ಲ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಕ್ರಿಕೆಟ್ ಆಟ, ಹುಚ್ಚಾಟ, ಜೂಜಾಟ ಮತ್ತು ಧೋನಿಯ ದುಗುಡ
ಇದನ್ನು ಮನಗಂಡ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ‘ರೈತರು ಬರದಿಂದ ಕಂಗೆಟ್ಟು ಸಂಕಷ್ಟದಲ್ಲಿದ್ದಾರೆ. ರೈತರಿಗೆ ಈ ಸರ್ಕಾರದ ಕೊಡುಗೆ ಏನೂ ಇಲ್ಲ. ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳು ಆರಂಭ ಆಗಿವೆ. ಬರ ಪರಿಹಾರ ಹಣವನ್ನು ಸಾಲಕ್ಕೆ ವಜಾ ಮಾಡ್ತಿದ್ದಾರೆ’ ಎಂದು ಆರೋಪಿಸಿದ್ದಾರೆ. ವಸ್ತುಸ್ಥಿತಿ ಅರಿತು ರೈತರ ಪರವಾಗಿ ಕುಮಾರಸ್ವಾಮಿಯವರು ಮಾತನಾಡಿರುವುದು ಸೂಕ್ತ ಮತ್ತು ಸಕಾಲಿಕವಾಗಿದೆ.
ಇದಕ್ಕೆ ತಕ್ಷಣ ಉತ್ತರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‘ಬರ ಪರಿಹಾರದ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸ್ಪಷ್ಟ ಸೂಚನೆ ನೀಡಿದ್ದೇನೆ’ ಎಂದಿರುವುದು, ವಿರೋಧ ಪಕ್ಷಗಳ ಸೂಕ್ತ ಟೀಕೆಗೆ ಸರ್ಕಾರದ ಕಡೆಯಿಂದ ಸ್ಪಂದನೆ ಇದೆ ಎನ್ನುವುದಕ್ಕೆ ಸಾಕ್ಷಿ ಒದಗಿಸಿದೆ. ಒಟ್ಟಾರೆ, ಬರ ಪರಿಹಾರದ ವಿಷಯದಲ್ಲಿ ಸರ್ಕಾರ ಕಣ್ಣಾಮುಚ್ಚಾಲೆ ಆಟ ಆಡುತ್ತಿದೆ ಎನ್ನುವುದು ಸ್ಪಷ್ಟವಾಗುತ್ತದೆ.
ಇನ್ನು ಸರ್ಕಾರದ ಆಡಳಿತಾತ್ಮಕ ವಿಷಯಗಳಿಗೆ ಬಂದರೆ, ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ನಾಲ್ಕು ಜನರನ್ನು ಹೊರತುಪಡಿಸಿ, ಮಿಕ್ಕವರೆಲ್ಲ ಹತ್ತು-ಹದಿನೈದು ವರ್ಷಗಳ ಹಿಂದಿನ ಕಾಂಗ್ರೆಸ್ ಸರ್ಕಾರದ ಮಂತ್ರಿಗಳಂತೆ ಕಾಣುತ್ತಿದ್ದಾರೆ. ಅವರ ಕಾರ್ಯಶೈಲಿ ಕೂಡ ಅದೇ ಹಳೆಯ ರಾಜಮಹಾರಾಜರನ್ನು ನೆನಪಿಸುತ್ತಿದೆ. ಜೊತೆಗೆ ಮರ್ಜಿ-ಮುಲಾಜಿಗೆ ಬಿದ್ದು ನಿಗಮ-ಮಂಡಲಿಗಳ ಅಧಿಕಾರದ ಸ್ಥಾನಗಳನ್ನು, ಗೂಟದ ಕಾರುಗಳನ್ನು ಕರುಣಿಸಿರುವುದು, ಅವು ಮೆರೆದಾಟಕ್ಕಷ್ಟೇ ಸೀಮಿತವಾಗಿರುವುದು- ಬೊಕ್ಕಸ ಬರಿದು ಮಾಡಿ, ಸರ್ಕಾರಕ್ಕೆ ಕೆಟ್ಟ ಹೆಸರು ತರುವುದರಲ್ಲಿ ಅನುಮಾನವೇ ಇಲ್ಲ.
ಯಾವುದೇ ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗ ಆಗುವ ಕೆಲ ಬದಲಾವಣೆಗಳು, ಆ ಸರ್ಕಾರದ ಜೀವಂತಿಕೆಯನ್ನು ಸಾರುತ್ತವೆ. ಆ ನಿಟ್ಟಿನಲ್ಲಿ, ಕಾಂಗ್ರೆಸ್ ಸರ್ಕಾರದ ಒಂದು ವರ್ಷದ ಆಡಳಿತವನ್ನು ನೋಡಿದರೆ, ರಾಜ್ಯದ ಜನ ನಿರೀಕ್ಷಿಸಿದ ಮಟ್ಟದಲ್ಲಿ ಕೆಲಸಗಳು ಆಗುತ್ತಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಸರ್ಕಾರಿ ಯಂತ್ರಾಂಗ ನಿಯಂತ್ರಣಕ್ಕೆ ಸಿಗುತ್ತಿಲ್ಲ ಎನ್ನುವುದು, ಭ್ರಷ್ಟಾಚಾರ ದಂಧೆಯ ರೂಪ ಪಡೆದಿರುವುದು ಎದ್ದು ಕಾಣುತ್ತಿದೆ. ಬಿಜೆಪಿಯ 40% ಕಮಿಷನ್ ಮುಂದಿಟ್ಟುಕೊಂಡು ಬಂದ ಸರ್ಕಾರ, ಅದರ ತನಿಖೆ ಎಲ್ಲಿಗೆ ಬಂದಿದೆ? ಅದನ್ನು ತಿಳಿಯುವ ಹಕ್ಕು ಜನರಿಗಿದೆ ಅಲ್ಲವೇ? ರಾಜ್ಯದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ, ಕೊಲೆ, ದೌರ್ಜನ್ಯಗಳನ್ನು ತಡೆಯುವಲ್ಲಿ ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆಯಲ್ಲವೇ?
ಇನ್ನು ಸರ್ಕಾರದ ನಡೆಯನ್ನು ಸೂಕ್ಷ್ಮವಾಗಿ ಗಮನಿಸಿ, ರಚನಾತ್ಮಕವಾಗಿ ಟೀಕಿಸಿ ಸರಿದಾರಿಗೆ ತರಬೇಕಾದ ವಿರೋಧ ಪಕ್ಷ, ಪ್ರಬುದ್ಧ ನಾಯಕರಿಲ್ಲದೆ ನರಳುತ್ತಿದೆ. ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೊಂದಾಣಿಕೆ ರಾಜಕಾರಣದ ರಾಜರೆನಿಸಿಕೊಂಡು ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದ್ದಾರೆ. ಇವರ ನಡುವೆ ಜೆಡಿಎಸ್‌ನ ಕುಮಾರಸ್ವಾಮಿಯವರು, ಸರ್ಕಾರದ ಹುಳುಕುಗಳನ್ನು ಎತ್ತಿ ತೋರಿಸಿದರೂ, ಯಾವುದನ್ನೂ ತಾರ್ಕಿಕ ಅಂತ್ಯ ಕಾಣಿಸುವುದಿಲ್ಲವೆಂಬ ಆರೋಪಕ್ಕೆ ಗುರಿಯಾಗಿ ನಗಪಾಟಲಿಗೀಡಾಗಿದ್ದಾರೆ.
ಏನತ್ಮಧ್ಯೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು, ತಮ್ಮ ಒಂದು ವರ್ಷದ ಸರ್ಕಾರದ ಸಾಧನೆಗಳ ಸರಮಾಲೆ ಕಟ್ಟಿ, ಅಳುಕಿಲ್ಲದೆ ಧರಿಸಿ, ಸಮರ್ಥನೆಗಿಳಿದಿರುವುದು ಪ್ರಜಾಪ್ರಭುತ್ವದ ಅಣಕದಂತೆ ಕಾಣುತ್ತಿದೆ.

ತುಂಬಾ ತರ್ಕಭದ್ದ ಲೇಖನ. ಈ ಸರ್ಕಾರ ಗ್ಯಾರಂಟಿ ಗುಂಗಿನಲ್ಲೇ ಕಳೆದು ಹೋಗಿದೆ. ಪೆನ್ ಡ್ರೈವ್ ವಿಷಯದಲ್ಲಿ ಅಪರಾಧಿಗಳನ್ನು ಸರ್ಕಾರವೆ ರಕ್ಷಣೆ ಮಾಡಲು ಹೊರಟಿರುವಂತೆ ಭಾಸವಾಗುತ್ತಿದೆ.
ಪತ್ರಿಕೆ ಹೀಗೆ ಶಾಶ್ವತ ವಿರೋಧಿ ಪಕ್ಷವಾಗಿ ತನ್ನ ಕರ್ತವ್ಯ ನಿಭಾಯಿಸಬೇಕು