ಈ ದಿನ ಸಂಪಾದಕೀಯ | ಕ್ರಿಕೆಟ್ ಆಟ, ಹುಚ್ಚಾಟ, ಜೂಜಾಟ ಮತ್ತು ಧೋನಿಯ ದುಗುಡ

Date:

ಇತ್ತೀಚಿನ ದಿನಗಳಲ್ಲಿ ಎಲ್ಲವೂ ಮಿತಿ ಮರೆತು ಅತಿಯಾಗುತ್ತಿದೆ. ಕ್ರೀಡಾಸ್ಫೂರ್ತಿ ಮರೆಯಾಗಿ ಹುಚ್ಚಾಟ ಮೆರೆದಾಡುತ್ತಿದೆ. ಭಾರತದಲ್ಲಿ ಕ್ರಿಕೆಟ್ ಇಂದು ಕೇವಲ ಆಟವಾಗಿ ಉಳಿದಿಲ್ಲ. ಕೋಟ್ಯಂತರ ರೂಪಾಯಿಗಳ ವಹಿವಾಟುಳ್ಳ ಬೃಹತ್ ಉದ್ಯಮವಾಗಿ ಬೆಳೆದು ನಿಂತಿದೆ. ರೋಚಕ ಕ್ಷಣವನ್ನು ಕಟ್ಟಿಕೊಡುವ ಚುಟುಕು ಕ್ರಿಕೆಟ್ ಬೆಟ್ಟಿಂಗ್ ಎಂಬ ಭೂತಕ್ಕೂ ಬಲಿಯಾಗಿದೆ. ಯುವಜನತೆಯ ಪ್ರಾಣಕ್ಕೂ ಕುತ್ತು ತಂದಿದೆ…

ಆರ್‍‌ಸಿಬಿ ಕೊನೆಗೂ ಗೆದ್ದಿದೆ. ‘ಈ ಸಲ ಕಪ್ ನಮ್ದೇ’ ಎಂದು ಹೇಳಿ ಹೇಳಿ ಬಸವಳಿದಿದ್ದ ಅಭಿಮಾನಿಗಳಿಗಂತೂ ಫೈನಲ್ ಗೆದ್ದಷ್ಟೇ ಖುಷಿಯಾಗಿದೆ. ಈ ಬಾರಿಯ ಐಪಿಎಲ್‌ನಲ್ಲಿ ಆರಂಭದಿಂದಲೂ ಅಭಿಮಾನಿಗಳಿಗೆ ನಿರಾಸೆ ಮೂಡಿಸುತ್ತಲೇ ಬಂದ ಆರ್‍‌ಸಿಬಿ ತಂಡ, ಸತತ ಸೋಲುಗಳಿಂದ ಪಾತಾಳ ಮುಟ್ಟಿತ್ತು, ಅಂಕಗಳ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಕೊನೆಗೆ ಸೋಲನ್ನೇ ಸೋಲಿಸಿದ ತಂಡ ಸತತ ಆರು ಲೀಗ್ ಪಂದ್ಯಗಳನ್ನು ಗೆದ್ದು, ಐಪಿಎಲ್ 2024ರ ಪ್ಲೇಆಫ್‌ಗೆ ಪ್ರವೇಶಿಸುವ ಮೂಲಕ ಇತಿಹಾಸ ನಿರ್ಮಿಸಿದೆ.

ಗೆದ್ದ ಆರ್‍‌ಸಿಬಿ ತಂಡವನ್ನು ಶ್ಲಾಘಿಸಬೇಕಾಗಿದೆ. ಅದಕ್ಕಿಂತಲೂ ಸೋತ ಚೆನ್ನೈ ತಂಡವನ್ನು, ಅದು ತೋರಿದ ಸಭ್ಯತೆಯನ್ನು ಶ್ಲಾಘಿಸುವುದು ಪ್ರತಿಯೊಬ್ಬ ಕ್ರೀಡಾಪ್ರೇಮಿಯ ಕರ್ತವ್ಯವಾಗಿದೆ. ಇವುಗಳ ನಡುವೆಯೇ, ಗಮನಿಸಬೇಕಾದ ಅಂಶವೆಂದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಐದು ಬಾರಿ ಚಾಂಪಿಯನ್ಸ್ ಆಗಿಸಿದ ಮಹೇಂದ್ರ ಸಿಂಗ್ ಧೋನಿಯ ದುಗುಡ. ತಂಡವನ್ನು ಗೆಲ್ಲಿಸುವ ಅಪೂರ್ವ ಅವಕಾಶ ಧೋನಿಯ ಕೈಯಲ್ಲಿತ್ತು. ಅದು ಅವರಿಗೆ ಸುಲಭವಾಗಿತ್ತು. ಅಂತಹ ಹಲವು ಒತ್ತಡದ ಸಂದರ್ಭಗಳನ್ನು ತಣ್ಣಗೆ ನಿಭಾಯಿಸಿದ, ತಂಡವನ್ನು ಗೆಲ್ಲಿಸಿದ ದಾಖಲೆ ಅವರ ಹೆಸರಿನಲ್ಲಿಯೇ ಇತ್ತು.

ಕೊನೆಯ ಓವರ್ ಕೌತುಕದಿಂದ ಕೂಡಿತ್ತು. ತಂಡಕ್ಕೆ ಬೇಕಾಗಿದ್ದು 17 ರನ್‌ಗಳು. 18 ಮತ್ತು 19ನೇ ಓವರ್‍‌ಗಳನ್ನು ಅತ್ಯುತ್ತಮವಾಗಿ ಆಡಿ, ಟೆಂಪೋ ಬಿಲ್ಡ್ ಮಾಡಿದ್ದ ಧೋನಿ, 20ನೇ ಓವರ್‍‌ನ ಮೊದಲ ಬಾಲನ್ನು ಸಿಕ್ಸರ್‍‌ಗೆ ಎತ್ತಿದರು. ಅಲ್ಲಿಗೆ ಆರ್‍‌ಸಿಬಿ ಕನಸು ಭಗ್ನಗೊಳ್ಳುವ ಸೂಚನೆ ಸಿಕ್ಕಿತು. ಅಭಿಮಾನಿಗಳ ಕಣ್ಣಲ್ಲಿ ನೀರು ಜಿನುಗತೊಡಗಿತು. ಚೆನ್ನೈ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಆದರೆ ಧೂಮಕೇತುವಿನಂತೆ ಬಂದೆರೆಗಿದ ಎರಡನೇ ಬಾಲ್, ಧೋನಿಯನ್ನು ಬಲಿ ಪಡೆದಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಧೋನಿಯ ನಿರ್ಗಮನದ ನಂತರವೂ ಚೆನ್ನೈ ತಂಡಕ್ಕೆ ಗೆಲ್ಲುವ ಅವಕಾಶವಿತ್ತು. ಬೇಕಾಗಿದ್ದು 11 ರನ್‌ಗಳು, ಇದ್ದದ್ದು 2 ಬಾಲ್, ಬ್ಯಾಟರ್ ಜಡೇಜಾ. ಜಡೇಜಾರ ಆಟ ಕಂಡವರು, ಅದು ಅವರಿಗೆ ಸವಾಲೇ ಅಲ್ಲ ಎಂದರು. ಆದರೆ, ಧೋನಿ ನಿರ್ಗಮನದಿಂದ ಜಡೇಜಾರ ಆತ್ಮಸ್ಥೈರ್ಯ ಕುಸಿದುಹೋಗಿತ್ತು. ಕೊನೆಯ ಎರಡೂ ಬಾಲ್‌ಗಳಲ್ಲಿ ರನ್ ಗಳಿಸದೆ, ಗರ ಬಡಿದವರಂತೆ ನಿಂತುಬಿಟ್ಟರು. ಆರ್‍‌ಸಿಬಿ ಆಟಗಾರರ ಹರ್ಷ, ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.

ಆಟ ಕೊಡುವ ಸಂತೋಷ, ಆತ್ಮಸ್ಥೈರ್ಯ ಮತ್ತು ಸ್ಫೂರ್ತಿಗೆ ಯಾವುದೂ ಸಮವಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲವೂ ಅತಿಯಾಗುತ್ತಿದೆ. ಕ್ರೀಡಾಸ್ಫೂರ್ತಿ ಮರೆಯಾಗಿ ಹುಚ್ಚಾಟ ಮೆರೆದಾಡುತ್ತಿದೆ. ಪಂದ್ಯದ ನಂತರ ನಡೆದ ಕೆಲ ಅಹಿತಕರ ಘಟನೆಗಳು ಈಗ ಸೋಷಿಯಲ್ ಮೀಡಿಯಾ ಮೂಲಕ ಕಾಣಿಸಿಕೊಂಡು, ಹೊಸಗಾಲದ ಯುವಜನತೆಯ ವಿಕ್ಷಿಪ್ತತೆಯನ್ನು ಹೊರಹಾಕುತ್ತಿವೆ.

ಭಾರತದಲ್ಲಿ ಕ್ರಿಕೆಟ್ ಇಂದು ಕೇವಲ ಆಟವಾಗಿ ಉಳಿದಿಲ್ಲ. ಕೋಟ್ಯಂತರ ರೂಪಾಯಿಗಳ ವಹಿವಾಟುಳ್ಳ ಬೃಹತ್ ಉದ್ಯಮವಾಗಿ ಬೆಳೆದು ನಿಂತಿದೆ. ಕ್ರಿಕೆಟ್ ಆಟಗಾರ ರನ್ ಹೊಳೆ ಹರಿಸುವ, ವಿಕೆಟ್ ಉರುಳಿಸುವ, ಕ್ಯಾಚ್ ಹಿಡಿಯುವ ಮಷೀನ್ ಆಗಿದ್ದಾನೆ. ಪ್ರೇಕ್ಷಕರು ಹುಚ್ಚು ಅಭಿಮಾನಿಗಳಾಗಿ, ದೇಶಪ್ರೇಮಿಗಳಾಗಿ ರೂಪಾಂತರಗೊಂಡಿದ್ದಾರೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಪ್ಲಾನ್ ಬಿ ಬಗೆಗಿನ ಮಾತು ಮತ್ತು ನಾಯಕನ ಹಿಂದಿನ ನಾಯಕ

ಗೆದ್ದರೆ ಹೊಗಳುವ, ಸೋತರೆ ಕೆರಳುವ ಜನ, ಅದನ್ನೊಂದು ಆಟ, ಅಲ್ಲಿ ಸೋಲು-ಗೆಲುವು ಸಾಮಾನ್ಯ ಎನ್ನುವುದನ್ನೇ ಮರೆತಿದ್ದಾರೆ. ಇಂತಹ ಒತ್ತಡದಲ್ಲಿ ಆಡಬೇಕಾದ ಆಟಗಾರ, ಆಟದ ಸೊಗಸನ್ನು, ಕಲಾತ್ಮಕತೆಯನ್ನು ಕಡೆಗಣಿಸಿ, ತಂತ್ರಗಾರಿಕೆಗೆ ತಲೆಬಾಗಿದ್ದಾನೆ. ಪ್ರೇಕ್ಷಕರು, ಆಯ್ಕೆದಾರರು, ತಂಡದ ಮಾಲೀಕರು, ಜಾಹೀರಾತುದಾರರು, ಬೆಟ್ಟಿಂಗ್ ಕಟ್ಟುವವರ ಒತ್ತಡಕ್ಕೆ ಒಳಗಾಗಿ ಜೀವವನ್ನು ಒತ್ತೆಯಿಟ್ಟು ಮೈದಾನಕ್ಕಿಳಿಯಬೇಕಾದ ಸ್ಥಿತಿ ಎದುರಾಗಿದೆ.

ಇವುಗಳ ನಡುವೆಯೇ ಕ್ಷಣಕ್ಷಣಕ್ಕೂ ರೋಚಕ ಕ್ಷಣವನ್ನು ಕಟ್ಟಿಕೊಡುವ ಚುಟುಕು ಕ್ರಿಕೆಟ್, ಅಭಿಮಾನಿಗಳಿಗೆ ಥ್ರಿಲ್ ಕೊಡುವ ಆಟವಾಗಿ, ಮನರಂಜನೆ ನೀಡುವ ಆಟವಾಗಿ, ಮುಂದುವರೆದು ಬೆಟ್ಟಿಂಗ್ ಎಂಬ ಭೂತಕ್ಕೆ ಬಲಿಯಾಗಿದೆ. ಈ ಬೆಟ್ಟಿಂಗ್ ಜಾಲಕ್ಕೆ ಸಿಲುಕಿ ಮನೆ-ಮಠವನ್ನು ಕಳೆದುಕೊಂಡವರ ವ್ಯಥೆ ಹೇಳತೀರದಾಗಿದೆ. ಕೋರ್ಟು ಕಚೇರಿ ಅಲೆಯುತ್ತಿರುವವರ ಸ್ಥಿತಿ ಅಂದಾಜಿಗೂ ಸಿಗದಂತಾಗಿದೆ. ಬೆಟ್ಟಿಂಗ್ ದಂಧೆಯಲ್ಲಿ ಬಡವರಷ್ಟೇ ಅಲ್ಲ, ಮಧ್ಯಮವರ್ಗ, ಶ್ರೀಮಂತರು, ಅಧಿಕಾರಿಗಳು, ರಾಜಕಾರಣಿಗಳು, ರೌಡಿಗಳು, ಪೊಲೀಸರೂ ಇದ್ದಾರೆ. ಇವರೊಂದಿಗೆ ಆನ್‌ಲೈನ್ ಬುಕ್ಕಿಗಳು, ಮ್ಯಾಚ್ ಫಿಕ್ಸರ್‍‌ಗಳು, ಹ್ಯಾಕರ್‍‌ಗಳು, ಮಾಫಿಯಾ ಡಾನ್‌ಗಳೂ ಇದ್ದಾರೆ. ಇವರೆಲ್ಲರಿಗೂ ಐಪಿಎಲ್ ಹಬ್ಬದಂತೆ, ಚಿನ್ನದ ಮೊಟ್ಟೆ ಇಡುವ ಕೋಳಿಯಂತೆ ಕಾಣುತ್ತದೆ.

ದುರಂತವೆಂದರೆ, ದೇಶದಲ್ಲಿ ಕಠಿಣ ಕಾಯ್ದೆ ಕಾನೂನುಗಳಿವೆ. ಆದರೆ ಬೆಟ್ಟಿಂಗ್ ದಂಧೆ ಪೊಲೀಸರ ಕಣ್ಮುಂದೆಯೇ ಅವ್ಯಾಹತವಾಗಿ ನಡೆಯುತ್ತಿದೆ. ಕೆಲವರಿಗೆ ಲಾಭ ತರುವ ಹೊಸ ದಂಧೆಯಾಗಿ ಮಾರ್ಪಾಡಾಗಿದೆ. ಮೊಬೈಲ್ ಆ್ಯಪ್‌ ಮೂಲಕ ಅಕ್ರಮವಾಗಿ ನಡೆಯುವ ಬೆಟ್ಟಿಂಗ್ ದಂಧೆ ರಾಜ್ಯಾದ್ಯಂತ ಜೋರಾಗಿದೆ. ಶ್ರಮವಿಲ್ಲದೆ ಕೂತಲ್ಲಿಯೇ ಹಣ ಗಳಿಸುವ ದುರಾಸೆಗೆ ಬಿದ್ದ ಜನ, ನಂತರ ಬೆಟ್ಟಿಂಗ್ ಚಟಕ್ಕೆ ಬಲಿಯಾಗುತ್ತಾರೆ. ಕೊನೆಗೆ ಹೆಣವಾಗುತ್ತಾರೆ. ಅವರನ್ನು ಸಾಕಿ ಸಲಹಿದ ಕುಟುಂಬಗಳಿಗೆ ಕೊಡಬಾರದ ಕಷ್ಟ ಕೊಡುತ್ತಾರೆ.

ನೆಪಮಾತ್ರಕ್ಕೆ ಅಲ್ಲೊಂದು ಇಲ್ಲೊಂದು ಪ್ರಕರಣ ಸುದ್ದಿಯಾಗುತ್ತವೆ. ಪೊಲೀಸ್ ಫೈಲ್ ಸೇರಿ ಸದ್ದಿಲ್ಲದಾಗುತ್ತವೆ. ಅಂಥದೇ ಒಂದು ಪ್ರಕರಣ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಉದ್ಬಾಳ ಗ್ರಾಮದಿಂದ ವರದಿಯಾಗಿದೆ. 29 ವರ್ಷದ ಮುದಿಬಸವ ಎಂಬ ಯುವಕ ಬೆಟ್ಟಿಂಗ್ ಚಟಕ್ಕೆ ಬಿದ್ದು, ಸಾಲಗಾರರ ಕಿರುಕುಳ ತಾಳಲಾರದೆ ನೇಣಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನೆಲ ಬಿಟ್ಟು ನಭದಲ್ಲಿ ತೇಲಾಡುತ್ತಿರುವ, ಕಾಲ ಕೇಳುವ ವೇಗೋತ್ಕರ್ಷಕ್ಕೆ ಒಗ್ಗಿಹೋಗಿರುವ ಇವತ್ತಿನ ಯುವ ಪೀಳಿಗೆಯ ಮನಸ್ಸನ್ನು ಅರಿತು, ಅವರನ್ನು ದೇಶದ ಒಳಿತಿಗಾಗಿ ಒಗ್ಗಿಸುವ, ಪ್ರಭಾವಿಸುವ, ಪ್ರೇರೇಪಿಸುವ ಅಗತ್ಯವಿದೆ. ಜೊತೆಗೆ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನ, ಹಕ್ಕು ಬಾಧ್ಯತೆಗಳನ್ನು ತಿಳಿಸಿಕೊಡುವ ಅನಿವಾರ್ಯತೆಯೂ ಇದೆ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಮೂರು ಪ್ರಕರಣಗಳು ಮತ್ತು ‘ಮಾನವಂತ’ ಮಾಧ್ಯಮಗಳು

ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ, ನಟ...

ಈ ದಿನ ಸಂಪಾದಕೀಯ | ಕೊಡುವ ಸ್ಥಾನದಲ್ಲಿರುವವರು ಒಳ್ಳೆಯದನ್ನೇ ಕೊಡಬೇಕು ಎಂದು ರಾಜ್ ಹೇಳಿದ್ದು ಯಾರಿಗೆ?

ಇಲ್ಲಿ ಯಾರು ಏನು ಬೇಕಾದರೂ ಮಾಡಬಹುದು, ಮಾತಾಡಬಹುದು. ಇಂತಹ ಪರಿಸ್ಥಿತಿ ನಿರ್ಮಾಣವಾಗಲು...