ಈ ದಿನ ಸಂಪಾದಕೀಯ | ಮೊದಲ ಭಾಷಣದಲ್ಲೇ ಬಿಜೆಪಿಗರ ಬೆವರಿಳಿಸಿದ ರಾಹುಲ್ ಮತ್ತು ಮಹುವಾ

Date:

Advertisements
ಆಡಳಿತ ಪಕ್ಷ ದಾರಿ ತಪ್ಪಿ ನಡೆದಾಗ ಎಚ್ಚರಿಸುವ, ಜನಕಲ್ಯಾಣದ ವಿಷಯದಲ್ಲಿ ಜಾಣನಿದ್ರೆಗೆ ಜಾರದಂತೆ ಎಚ್ಚರದಲ್ಲಿಡುವ ಮಹತ್ವದ ಜವಾಬ್ದಾರಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯದು. ಆಡಳಿತ ಪಕ್ಷದ ಲೋಪ–ದೋಷಗಳನ್ನು ತಿದ್ದುವ ಮೂಲಕ ಜನರ ನೋವಿಗೆ ದನಿಯಾಗಬೇಕಾದ ಗುರುತರ ಹೊಣೆ ಈ ಸ್ಥಾನದ್ದಾಗಿದೆ. ಅಂತಹ ಅವಕಾಶವನ್ನು ರಾಹುಲ್ ಗಾಂಧಿ ಸಮರ್ಥವಾಗಿ ನಿಭಾಯಿಸಲಿ, ಜನತಂತ್ರ ವ್ಯವಸ್ಥೆಗೆ ಬೆಲೆ ತರಲಿ.

‘ನೀವು ಸ್ಪೀಕರ್ ಆಗಿ ಆಯ್ಕೆಯಾದ ಸಂದರ್ಭದಲ್ಲಿ, ಆ ಕುರ್ಚಿಯಲ್ಲಿ ಕೂರುವ ಗಳಿಗೆಯಲ್ಲಿ ಪ್ರಧಾನಿ ಮೋದಿಯವರ ಕೈ ಕುಲುಕುವಾಗ, ತಲೆ ಬಾಗಿ, ನಡು ಬಗ್ಗಿಸಿದಿರಿ. ನಾನು ಕೈ ಕುಲುಕುವಾಗ ನೇರ ನಿಂತಿರಿ, ಏನಿದರ ಅರ್ಥ. ಸ್ಪೀಕರ್ ಎಂದರೆ ಪಕ್ಷಾತೀತರು. ಈ ಸದನದ ಮುಖ್ಯಸ್ಥರು. ಯಾರಿಗೂ ನಡುಬಗ್ಗಿಸುವ ಅಗತ್ಯವಿಲ್ಲ’ ಎಂದರು ವಿಪಕ್ಷ ನಾಯಕ ರಾಹುಲ್ ಗಾಂಧಿ.

ರಾಹುಲ್ ಅವರ ಮಾತಿಗೆ ಇಡೀ ಸದನವೇ ಮೇಜು ಕುಟ್ಟಿ ಸದ್ದು ಮಾಡಿತು. ಸ್ಪೀಕರ್ ಓಂ ಬಿರ್‍ಲಾ ಮುಖ ಕಪ್ಪಿಟ್ಟಿತು.

ಮುಂದುವರೆದ ರಾಹುಲ್, ‘ತಮ್ಮನ್ನು ತಾವು ಹಿಂದೂಗಳೆಂದು ಕರೆದುಕೊಳ್ಳುವವರು ಹಿಂಸಾಚಾರ ಹಾಗೂ ದ್ವೇಷದಲ್ಲಿ ಹಗಲಿರುಳು ನಿರತರಾಗಿದ್ದಾರೆ’ ಎಂದರು. ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸದನದಲ್ಲಿ ಕೋಲಾಹಲ ಉಂಟಾಯಿತು. ರಾಹುಲ್‌ ಅವರೊಂದಿಗಿನ ಮೊದಲ ನೇರ ಮುಖಾಮುಖಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ‘ಇಡೀ ಹಿಂದೂ ಸಮಾಜವು ಹಿಂಸಾ ಪ್ರವೃತ್ತಿಯಿಂದ ಕೂಡಿದೆ ಎಂದು ಕರೆಯುವುದು ತುಂಬಾ ಗಂಭೀರ ಆರೋಪ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆರೇಳು ಸಚಿವರು ಎದ್ದು ನಿಂತು ಕ್ಷಮೆಯಾಚನೆಗೆ ಪಟ್ಟು ಹಿಡಿದರು.

Advertisements

ಅದಕ್ಕೆ ಉತ್ತರಿಸಿದ ರಾಹುಲ್‌, ‘ನಾನು ಹಿಂದೂ ಸಮುದಾಯದ ಬಗ್ಗೆ ಹೇಳಿಲ್ಲ. ಹಿಂದೂ ಯಾವತ್ತೂ ದ್ವೇಷ ಹಾಗೂ ಹಿಂಸೆಯನ್ನು ಹರಡುವುದಿಲ್ಲ. ಮೋದಿ ಎಂದರೆ ಇಡೀ ಹಿಂದೂ ಸಮಾಜವಲ್ಲ. ಬಿಜೆಪಿ ಎಂದರೆ ಇಡೀ ಹಿಂದೂ ಸಮಾಜವಲ್ಲ. ಆರ್‌ಎಸ್‌ಎಸ್ ಇಡೀ ಹಿಂದೂ ಸಮಾಜವಲ್ಲ. ಬಿಜೆಪಿ ದ್ವೇಷ ಹಾಗೂ ಹಿಂಸಾಚಾರವನ್ನು ಹರಡುತ್ತದೆ’ ಎಂದು ತಿರುಗೇಟು ಕೊಟ್ಟರು.

ಪ್ರಧಾನಿ ಮೋದಿಯವರು ಕಸಿವಿಸಿಗೊಳಗಾದರು. ಕಕ್ಕಾಬಿಕ್ಕಿಯಾದರು. ಏನು ಹೇಳಬೇಕೆಂದು ತೋಚದೆ ತಣ್ಣಗಾದರು.

ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ಮತ್ತು ಪ್ರಧಾನಿ ಮೋದಿಯವರದ್ದು ಆಡಿದ್ದೇ ಆಟವಾಗಿತ್ತು. ಅದೇ ಆಡಳಿತವಾಗಿತ್ತು, ಕಾನೂನಾಗಿತ್ತು. ವಿರೋಧ ಪಕ್ಷಗಳೇ ಇಲ್ಲದಂತೆ ಮಾಡಿ ಸರ್ವಾಧಿಕಾರಿ ಆಡಳಿತ ಜಾರಿಯಲ್ಲಿತ್ತು. ಅಪರಿಮಿತ ಅಧಿಕಾರ ಬಲದಿಂದ ರಾಹುಲ್ ಮತ್ತು ಕಾಂಗ್ರೆಸ್ ಪಕ್ಷದ ಮೇಲೆ ನಿರಂತರ ದಾಳಿ ಮಾಡಿತ್ತು. ‘ಪಪ್ಪು’ ಎಂದು ವ್ಯಂಗ್ಯವಾಡುವ, ಅಪಮಾನಿಸುವ ಮೂಲಕ ಅವರನ್ನು ಇಲ್ಲವಾಗಿಸಬಹುದೆಂದು ಭಾವಿಸಿತ್ತು. ರಾಹುಲ್‌ರನ್ನು ಹಣಿಯುವುದೇ ಬಿಜೆಪಿ ಐಟಿ ಸೆಲ್‌ನ ಪೂರ್ಣಕಾಲಿಕ ಉದ್ಯೋಗವಾಗಿತ್ತು. ದೇಶದ ಜನ ಇದನ್ನು ನಂಬಿದರು, ನಕ್ಕರು, ಹಂಚಿದರು. ದೇಶಾದ್ಯಂತ ಹಲವು ಕೇಸು ದಾಖಲಿಸಿದರು. ಪಾರ್ಲಿಮೆಂಟಿನಿಂದಲೂ ಹೊರಹಾಕಿದರು. ಸಾಲದೆಂದು ಸುದ್ದಿ ಮಾಧ್ಯಮಗಳನ್ನು ಬಳಸಿಕೊಂಡು, ‘ರಾಹುಲ್ ನಾಯಕನಲ್ಲ’ ಎಂದು ಪ್ರತಿಷ್ಠಾಪಿಸಲು ಪ್ರಯತ್ನಿಸಿದರು.

ಆದರೆ ಜನ ರಾಹುಲ್ ಗಾಂಧಿ ಪರ ನಿಂತರು. ರಾಹುಲ್ ಸಂಸತ್ತಿನಲ್ಲಿ ಜನರ ದನಿಯಾದರು. ಸಂಸತ್‌ನಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾಡಿದ ಮೊದಲ ಭಾಷಣದಲ್ಲಿಯೇ, ತಮಗೆ ಸಿಕ್ಕ ಅಪೂರ್ವ ಅವಕಾಶ ಮತ್ತು ಎದುರಾದ ಸವಾಲು- ಎರಡನ್ನು ಸಮರ್ಥವಾಗಿ ನಿಭಾಯಿಸಿ ಸೈ ಎನಿಸಿಕೊಂಡರು. ಅವರ ಮಾತಿನಲ್ಲಿದ್ದ ನಿಖರತೆ, ಮಂಡನೆ, ವಿರೋಧಿಗಳನ್ನು ಕಟ್ಟಿಹಾಕಿದ ಬಗೆ ವಿಶೇಷವಾಗಿತ್ತು. ಇಂತಹ ಒಬ್ಬ ಪ್ರತಿಭಾನ್ವಿತ ಸಂಸದೀಯ ಪಟುವನ್ನು ‘ಪಪ್ಪು’ ಎಂದು ಜರೆದರು. ಮಾಡಿದ ಮಹಾಪರಾಧಕ್ಕೆ ಮೋದಿಯವರು ಇಂದು ತಲೆ ತಗ್ಗಿಸಿ ನಿಂತರು.

ಇದನ್ನು ಓದಿದ್ದೀರಾ:? ಈ ದಿನ ಸಂಪಾದಕೀಯ | ಬಹಳ ಕಾಲ ನೆನಪಿನಲ್ಲುಳಿಯುವ ಫೈನಲ್ ಪಂದ್ಯ

ರಾಹುಲ್ ಗಾಂಧಿಯಷ್ಟೇ ಪ್ರಖರವಾಗಿ, ಖಂಡತುಂಡವಾಗಿ ಮಾತನಾಡಿದ ಮತ್ತೊಬ್ಬ ಸಂಸತ್ ಸದಸ್ಯರೆಂದರೆ ಮಹುವಾ ಮೊಹಿತ್ರಾ. ಸರ್ಕಾರದ ತಪ್ಪುಗಳನ್ನು ಎತ್ತಿ ತೋರುವ, ಕಟುವಾಗಿ ಟೀಕಿಸುವ ಧೈರ್ಯಸ್ಥೆ ಎಂದೇ ಹೆಸರಾಗಿದ್ದ ಮಹುವಾರ ಮೇಲೆ ಇಲ್ಲದ ಆರೋಪ ಹೊರಿಸಿ, ಸಂಸತ್ತಿನಿಂದ ಹೊರಹಾಕಲಾಗಿತ್ತು. ದೇಶದ ಜನತೆಯ ಮುಂದೆ ಖಳನಾಯಕಿಯನ್ನಾಗಿ ಚಿತ್ರಿಸಲಾಗಿತ್ತು. ಚುನಾವಣೆಯಲ್ಲಿ ಸೋಲಿಸಲು ಶಕ್ತಿಮೀರಿ ಶ್ರಮಿಸಲಾಗಿತ್ತು.

ಆದರೆ ಜನ ಆಕೆಯ ಪರ ನಿಂತರು. ಗೆಲ್ಲಿಸಿದರು. ಸಂಸತ್ತಿನಲ್ಲಿ ಮತ್ತೆ ಮಹುವಾ ಮಾತು ಮಾರ್ದನಿಸುವಂತೆ ನೋಡಿಕೊಂಡರು. ಇದು ನಿಜಕ್ಕೂ ಜನರ ಗೆಲುವು. ನಿನ್ನೆ ಸಂಸತ್ತಿನಲ್ಲಿ ಮೊದಲ ಬಾರಿಗೆ ಮಾತಿಗೆ ನಿಂತ ಮಹುವಾ, ‘ಕಳೆದ ಬಾರಿ ನಾನು ಇಲ್ಲಿ ಮಾತನಾಡಲು ಎದ್ದಾಗ, ಅವಕಾಶ ನೀಡಲಿಲ್ಲ. ಓರ್ವ ಸಂಸದೆಯ ಧ್ವನಿಯನ್ನು ಹತ್ತಿಕ್ಕಿ ಆಡಳಿತ ಪಕ್ಷ ಭಾರೀ ಬೆಲೆ ತೆತ್ತಿದೆ. ನೀವು ನನ್ನನ್ನು ಕೆಳಗಿಳಿಸುವ ಪ್ರಯತ್ನದಲ್ಲಿರುವಾಗ ಜನ ನಿಮ್ಮ 63 ಸಂಸದರನ್ನು ಶಾಶ್ವತವಾಗಿ ಕೆಳಗಿಳಿಸಿದರು. ಈ ಬಾರಿ ನಮ್ಮನ್ನು ಮೌನವಾಗಿಸಲು ಸಾಧ್ಯವಿಲ್ಲ’ ಎಂದು ಎಚ್ಚರಿಸಿದರು.

ಸಂಸದೀಯ ಪ್ರಜಾಸತ್ತೆಯಲ್ಲಿ ಪ್ರಧಾನಮಂತ್ರಿಗೆ ಇರುವಷ್ಟೇ ಜವಾಬ್ದಾರಿ ವಿರೋಧ ಪಕ್ಷದ ನಾಯಕನಿಗೂ ಇದೆ. ಹೀಗಾಗಿ, ಈ ಸ್ಥಾನವನ್ನು ಛಾಯಾಪ್ರಧಾನಮಂತ್ರಿ ಎಂದೇ ಕರೆಯಲಾಗುತ್ತದೆ. ಆಡಳಿತ ಪಕ್ಷದ ಲೋಪ–ದೋಷಗಳನ್ನು ತಿದ್ದುವ ಮೂಲಕ ಜನರ ನೋವಿಗೆ ದನಿಯಾಗಬೇಕಾದ ಗುರುತರ ಹೊಣೆ ಈ ಸ್ಥಾನದ್ದಾಗಿದೆ. ಆಡಳಿತ ಪಕ್ಷ ದಾರಿ ತಪ್ಪಿ ನಡೆದಾಗ ಎಚ್ಚರಿಸುವ, ಜನಕಲ್ಯಾಣದ ವಿಷಯದಲ್ಲಿ ಜಾಣನಿದ್ರೆಗೆ ಜಾರದಂತೆ ಎಚ್ಚರದಲ್ಲಿಡುವ ಮಹತ್ವದ ಜವಾಬ್ದಾರಿ ವಿರೋಧ ಪಕ್ಷದ ನಾಯಕನದು.

ಅಂತಹ ಅವಕಾಶವನ್ನು ರಾಹುಲ್ ಗಾಂಧಿ ಸಮರ್ಥವಾಗಿ ನಿಭಾಯಿಸಲಿ, ಜನತಂತ್ರ ವ್ಯವಸ್ಥೆಗೆ ಬೆಲೆ ತರಲಿ. ರಾಹುಲ್ ಬೆಂಬಲಕ್ಕೆ ನಿಂತ ಮಹುವಾ ರೀತಿ ಉಳಿದ ಸಂಸತ್ ಸದಸ್ಯರು ಕೂಡ ಬುದ್ಧಿ ಬೆಳೆಸಿಕೊಂಡರೆ, ಬೆಂಬಲಕ್ಕೆ ನಿಂತರೆ- ದೇಶದಲ್ಲಿ ಪ್ರಜಾಪ್ರಭುತ್ವ ಉಸಿರಾಡಲಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X