ಈ ದಿನ ಸಂಪಾದಕೀಯ | ಬಡವರ ಜೀವಕ್ಕೆ ಕಂಟಕ ತರುತ್ತಿರುವ ಜೀವಜಲ; ಆಡಳಿತಶಾಹಿಯೇ ಹೊಣೆ

Date:

Advertisements
ನೀರು ಮನುಷ್ಯನ ಮೂಲಭೂತ ಅಗತ್ಯಗಳಲ್ಲೊಂದು. ಶುದ್ಧ ಕುಡಿಯುವ ನೀರು ಪಡೆಯುವುದು ಜನರ ಮೂಲಭೂತ ಹಕ್ಕು. ಆದರೆ, ನಮ್ಮ ವ್ಯವಸ್ಥೆಯಲ್ಲಿನ ಅವ್ಯವಸ್ಥೆಯಿಂದಾಗಿ ಜೀವ ಕಾಪಾಡಬೇಕಾದ ಜೀವಜಲ ಜೀವಕ್ಕೆ ಕುತ್ತು ತರುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಂದಿಲ್ಲೊಂದು ಕಡೆ ಕಲುಷಿತ ನೀರಿನಿಂದ ಅನಾಹುತಗಳು ನಡೆಯುತ್ತಲೇ ಇವೆ. ಬಡವರ ಬದುಕು ಬಿರುಗಾಳಿಗೆ ಸಿಕ್ಕ ತರಗೆಲೆಯಂತಾಗಿದೆ. ಕ್ಷುಲ್ಲಕ ಕಾರಣಗಳಿಗಾಗಿ ಅವರ ಜೀವ ಹರಣವಾಗುತ್ತಿದೆ. ಇದು ಸರ್ಕಾರಕ್ಕೆ ಹಾಗೂ ಆಡಳಿತಶಾಹಿಗೆ ನಾಚಿಕೆಗೇಡಿನ ಸಂಗತಿಯಾಗಬೇಕು.

ಚಿತ್ರದುರ್ಗ ನಗರದ ಹೊರವಲಯದಲ್ಲಿರುವ ಕವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಕುಡಿದು ಇಬ್ಬರು ಮೃತಪಟ್ಟು, 78 ಮಂದಿ ಆಸ್ಪತ್ರೆ ಪಾಲಾಗಿರುವ ಪ್ರಕರಣ ನಡೆದಿರುವುದು ಆತಂಕಕಾರಿಯಾಗಿದೆ. ಕವಾಡಿಗರ ಹಟ್ಟಿ ಪರಿಶಿಷ್ಟ ಜಾತಿ, ಪಂಗಡಗಳ ಜನರೇ ಹೆಚ್ಚಾಗಿರುವ ಪ್ರದೇಶ. ದಿನನಿತ್ಯದ ಬದುಕಿಗೇ ಸಾಕಷ್ಟು ಸೆಣಸಾಡಬೇಕಾದ ಅಲ್ಲಿನ ಜನರಿಗೆ ಕುಡಿಯುವ ನೀರು ಕೂಡ ಮಾರಣಾಂತಿಕವಾಗಿ ಪರಿಣಮಿಸಿರುವುದು ಅತ್ಯಂತ ನೋವಿನ ವಿಚಾರವಾಗಿದೆ. ಘಟನೆಗೆ ವಾಟರ್ ಮ್ಯಾನ್‌ನ ವೈಯಕ್ತಿಕ ದ್ವೇಷ ಕಾರಣ ಎನ್ನುವುದರಿಂದ ಹಿಡಿದು ಹಲವು ಕೋನಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಕಲುಷಿತ ನೀರು ಜನರ ಪ್ರಾಣಕ್ಕೆ ಕಂಟಕ ತರುತ್ತಿರುವ ಪ್ರಕರಣಗಳು, ಜೀವಜಲ ಜೀವಹರಣ ಮಾಡುತ್ತಿರುವ ಘಟನೆಗಳು ರಾಜ್ಯದಲ್ಲಿ ಪದೇ ಪದೇ ನಡೆಯುತ್ತಿರುವುದು ಗಂಭೀರ ವಿಚಾರವಾಗಿದೆ.

ಮೇ 26ರಂದು ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ರೇಕಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಓರ್ವ ಬಾಲಕ ಸಾವನ್ನಪ್ಪಿದ್ದ. 30 ಜನ ಅಸ್ವಸ್ಥರಾಗಿದ್ದರು. ಆಗಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ನಂತರವೂ ಇಂಥ ಘಟನೆಗಳು ನಿಲ್ಲಲಿಲ್ಲ. ರಾಯಚೂರಿನ ಲಿಂಗಸುಗೂರು, ಗೊರೆಬಾಳ, ಜೂಲಗುಡ್ಡಗಳಲ್ಲಿ ಇಂಥವೇ ಘಟನೆಗಳು ವರದಿಯಾದವು. ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ವೈ ಎನ್ ಹೊಸಕೋಟೆ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 15 ಜನ ಅಸ್ವಸ್ಥರಾದ ಘಟನೆ ಜುಲೈನಲ್ಲಿ ನಡೆದಿತ್ತು.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಂದಿಲ್ಲೊಂದು ಕಡೆ ಕಲುಷಿತ ನೀರಿನಿಂದ ಅನಾಹುತಗಳು ನಡೆಯುತ್ತಲೇ ಇವೆ. ಸರ್ಕಾರ ಅಲ್ಲೊಮ್ಮೆ ಇಲ್ಲೊಮ್ಮೆ ಕ್ರಮ ಜರುಗಿಸಿತು. ಕೊಪ್ಪಳ ಜಿಲ್ಲೆ ಕನಕಗಿರಿ ತಾಲ್ಲೂಕಿನ ಬಸರಿಹಾಳ, ಕುಷ್ಟಗಿಯ ಬಿಜಕಲ್ ಗ್ರಾಮದ ವಾಂತಿ ಭೇದಿ ಪ್ರಕರಣ, ದೇವದುರ್ಗದ ರೇಕಲಮರಡಿ ಗ್ರಾಮದ ಕಲುಷಿತ ನೀರಿನ ಪ್ರಕರಣಗಳ ತನಿಖೆಗೆ ಸಿದ್ದರಾಮಯ್ಯ ಸರ್ಕಾರ ಮೂವರು ಅಧಿಕಾರಿಗಳ ಸಮಿತಿ ರಚನೆ ಮಾಡಿತ್ತು. ಬೀದರ್‌ನ ಬರೀದಾಬಾದ್ ಗ್ರಾಮದಲ್ಲಿ ಮಲಿನ ನೀರು ಕುಡಿದು 21 ಮಂದಿ ಅಸ್ವಸ್ಥರಾಗಿ ಆಸ್ಪತ್ರೆ ಪಾಲಾಗಿದ್ದರು. ಆಗ ಅದರ ವ್ಯಾಪ್ತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ತಾಲ್ಲೂ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಯನ್ನು ಅಮಾನತು ಮಾಡಲಾಗಿತ್ತು.

Advertisements

ನೀರು ಮನುಷ್ಯನ ಮೂಲಭೂತ ಅಗತ್ಯಗಳಲ್ಲೊಂದು. ಶುದ್ಧ ಕುಡಿಯುವ ನೀರು ಪಡೆಯುವುದು ಜನರ ಮೂಲಭೂತ ಹಕ್ಕು. ಆದರೆ, ನಮ್ಮ ವ್ಯವಸ್ಥೆಯಲ್ಲಿನ ಅವ್ಯವಸ್ಥೆಯಿಂದಾಗಿ ಜೀವ ಕಾಪಾಡಬೇಕಾದ ಜಲವೇ ಜೀವಕ್ಕೆ ಕುತ್ತು ತರುತ್ತಿದೆ. ಕಳವಳಕಾರಿ ಸಂಗತಿಯೆಂದರೆ, ಕಲುಷಿತ ನೀರು ಕುಡಿದು ಸಾಯುತ್ತಿರುವವರಲ್ಲಿ ಗ್ರಾಮೀಣ ಭಾಗದ ಬಡವರು ಹಾಗೂ ಮಕ್ಕಳೇ ಹೆಚ್ಚು. ಹಾಗೆಂದು ನಗರಗಳಲ್ಲಿ ಇಂಥ ಘಟನೆಗಳು ನಡೆಯುವುದೇ ಇಲ್ಲ ಎನ್ನಲಾಗದು. 2023ರ ಜೂನ್‌ನಲ್ಲಿ, ಬೆಂಗಳೂರಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಬಿಬಿಎಂಪಿ ಸರಬರಾಜು ಮಾಡಿದ್ದ ನೀರು ಸೇವಿಸಿ 98 ಮಕ್ಕಳು ಸೇರಿದಂತೆ 118 ಮಂದಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. ಆದರೆ, ಹಳ್ಳಿಗಳಲ್ಲಿ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗದೇ ಇರುವುದು ಕೂಡ ಇಂಥ ಸಂದರ್ಭಗಳಲ್ಲಿ ಸಾವು ನೋವಿನ ಪ್ರಕರಣಗಳು ಹೆಚ್ಚಾಗಲು ಕಾರಣವಾಗುತ್ತವೆ.   

ವರದಿಯೊಂದರ ಪ್ರಕಾರ, ದೇಶದಲ್ಲಿ ಪ್ರತಿ ನಾಲ್ಕು ಗಂಟೆಗೊಬ್ಬರು ಕಲುಷಿತ ನೀರು ಕುಡಿದು ಸಾವನ್ನಪ್ಪುತ್ತಿದ್ದಾರೆ ಕರ್ನಾಟಕದಲ್ಲಿ ಇದರ ಪ್ರಮಾಣ ಕೊಂಚ ಕಡಿಮೆ. ಇಲ್ಲಿ 13 ದಿನಕ್ಕೆ ಒಬ್ಬರು ಕಲುಷಿತ ನೀರಿನಿಂದ ಸಾಯುತ್ತಿದ್ದಾರೆ. ಕಲುಷಿತ ನೀರು ಕುಡಿಯುವವರು ಹೆಪಟೈಟಿಸ್, ಟೈಫಾಯಿಡ್, ವಾಂತಿ, ಭೇದಿ, ಕಾಲರಾದಂಥ ರೋಗಗಳಿಗೆ ಗುರಿಯಾಗುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ಮಕ್ಕಳಲ್ಲಿ ಅತಿ ಹೆಚ್ಚು ಸಾವಿನ ಪ್ರಕರಣಗಳು ಸಂಭವಿಸುತ್ತಿರುವುದು ಭೇದಿಯ ಕಾರಣಕ್ಕೆ. ವೈದ್ಯರೇ ಹೇಳುವಂತೆ, ಇವೆಲ್ಲ ಹೆಚ್ಚಿನ ಬಾರಿ ಕಲುಷಿತ ನೀರಿನಿಂದಾಗುತ್ತಿದ್ದು, ತಪ್ಪಿಸಬಹುದಾದ ಸಾವುಗಳಾಗಿವೆ. ಆದರೆ, ನಮ್ಮ ಸರ್ಕಾರಗಳ ನಿರ್ಲಕ್ಷ್ಯ, ಅಧಿಕಾರಶಾಹಿಯ ಬೇಜವಾಬ್ದಾರಿಯಿಂದಾಗಿ ಜೀವಜಲ ಹಲವು ಜೀವಗಳಿಗೆ ಮಾರಕವಾಗುತ್ತಲೇ ಇದೆ.

ರಾಜ್ಯದ ಬಹುತೇಕ ಎಡೆಗಳಲ್ಲಿ ಚರಂಡಿಯಲ್ಲೇ ಅಥವಾ ಅದರ ಪಕ್ಕದಲ್ಲೇ ಕುಡಿಯುವ ನೀರಿನ ಪೈಪುಗಳು ಹಾದುಹೋಗಿವೆ. ಪೈಪುಗಳು ಒಡೆದಾಗ ಕುಡಿಯುವ ನೀರಿನೊಂದಿಗೆ ಚರಂಡಿ ನೀರು ಮಿಶ್ರಣಗೊಂಡು ಅನಾಹುತಗಳು ಸಂಭವಿಸುತ್ತಿವೆ. ಇನ್ನು ಕೆಲವೆಡೆ ನೀರಿನ ಸಂಗ್ರಹಾಗಾರಗಳನ್ನು ಶುಚಿಗೊಳಿಸದೇ ಇರುವುದು, ನೀರಿನ ಗುಣಮಟ್ಟ ಕಾಯ್ದುಕೊಳ್ಳದೆ ಇರುವುದು, ಕೆರೆ ಕುಂಟೆಗಳಿಂದ ನೇರವಾಗಿ ಕುಡಿಯಲು ನೀರು ಒದಗಿಸುವುದು ಇಂಥ ಘಟನೆಗಳಿಗೆ ಕಾರಣವಾಗುತ್ತಿದೆ.  

ಈ ಸುದ್ದಿ ಓದಿದ್ದೀರಾ: ಈ ದಿನ ಸಂಪಾದಕೀಯ | ಈ ಹತ್ಯೆಗಳಲ್ಲಿ ಮೋದಿ- ಯೋಗಿ- ಮೀಡಿಯಾ ಸಮಾನ ಪಾಲುದಾರರು          

ಒಂದು ವರದಿಯ ಪ್ರಕಾರ, ರಾಜ್ಯದಲ್ಲಿ ಸುಮಾರು ಹದಿನೇಳೂವರೆ ಸಾವಿರ ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಹಾಗೆ ತೆರೆಯಲಾದ ಬಹುತೇಕ ಘಟಕಗಳಿಗೆ ಗುಣಮಟ್ಟಕ್ಕೆ ಸಂಬಂಧಿಸಿದ ಐಎಸ್‌ಒ ಅಥವಾ ಬಿಐಎಸ್‌ ಮಾನದಂಡಗಳಿಲ್ಲ ಎಂದು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ವರದಿ ತಿಳಿಸಿತ್ತು. ಇನ್ನು ಹಲವು ಊರುಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ನಾನಾ ಕಾರಣಗಳಿಂದಾಗಿ ಸ್ಥಗಿತಗೊಂಡಿವೆ.

ಶುದ್ಧ ಕುಡಿಯುವ ನೀರನ್ನು ಒದಗಿಸಲಾಗದಿದ್ದರೆ ಅದು ಗಂಭೀರ ಲೋಪ. ಸರ್ಕಾರ ಈ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ವಿಷಪೂರಿತ ನೀರಿನ ಮೂಲಗಳನ್ನು ಬಂದ್ ಮಾಡಬೇಕು. ಶುದ್ಧ ಕುಡಿಯುವ ನೀರು ಕಟ್ಟ ಕಡೆಯವನಿಗೂ ಸಿಗುವುದನ್ನು ಖಾತರಿಪಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕವಾಡಿಗರ ಹಟ್ಟಿಯಂಥ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು.

ಬಡವರ ಬದುಕು ಬಿರುಗಾಳಿಗೆ ಸಿಕ್ಕ ತರಗೆಲೆಯಂತಾಗಿದೆ. ಕ್ಷುಲ್ಲಕ ಕಾರಣಗಳಿಗಾಗಿ ಅವರ ಜೀವ ಹರಣವಾಗುತ್ತಿದೆ. ಇದು ಸರ್ಕಾರಕ್ಕೆ ಹಾಗೂ ಆಡಳಿತಶಾಹಿಗೆ ನಾಚಿಕೆಗೇಡಿನ ಸಂಗತಿಯಾಗಬೇಕು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X