ಸಂಘ ಪರಿವಾರ ರಾಷ್ಟ್ರಧ್ವಜವನ್ನು ತಿರಸ್ಕರಿಸಿದರೂ, ಬಿಜೆಪಿ ನಾಯಕರು ಸೈನಿಕರನ್ನು ಅವಮಾನಿಸಿದರೂ, ಮೂರನೇ ವ್ಯಕ್ತಿ ಮಧ್ಯೆ ಪ್ರವೇಶಿಸಿ ಕದನ ವಿರಾಮ ಘೋಷಿಸಿದರೂ- ಪ್ರಧಾನಿ ಮೋದಿಯವರು ಮಾತ್ರ ತುಟಿ ಬಿಚ್ಚುತ್ತಿಲ್ಲ.
ಗಡಿಯಲ್ಲಿ ಪ್ರಾಣದ ಹಂಗು ತೊರೆದು ಹೋರಾಡುವ ಸೈನಿಕರಿಗೆ ನೈತಿಕ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ, ಕರ್ನಾಟಕದ ಸಿದ್ದರಾಮಯ್ಯ ಸರ್ಕಾರವು ಮೇ 9ರಂದು ‘ತಿರಂಗಾ ಯಾತ್ರೆ’ ಆಯೋಜಿಸಿತ್ತು. ಈ ಯಾತ್ರೆಯು ಭಯೋತ್ಪಾದನೆ ತೊಲಗಲಿ ಎಂಬ ಘೋಷಣೆ ಮೂಲಕ, ದೇಶದ ಏಕತೆ, ಭದ್ರತೆ ಹಾಗೂ ಸಾರ್ವಭೌಮತೆಗಾಗಿ ನಾವು ಸೈನ್ಯದ ಜೊತೆಗಿದ್ದೇವೆ ಎಂಬ ಬಲವಾದ ಸಂದೇಶವನ್ನು ನೀಡುವುದಾಗಿತ್ತು.
ಈ ಯಾತ್ರೆಯಲ್ಲಿ ಇಡೀ ಸರ್ಕಾರ ತ್ರಿವರ್ಣ ಧ್ವಜ ಹಿಡಿದು ಹೆಜ್ಜೆ ಹಾಕಿತ್ತು. ಪಕ್ಷಭೇದ ಮರೆತು ಉದಾತ್ತ ಮನೋಭಾವದೊಂದಿಗೆ ಈ ಯಾತ್ರೆಯಲ್ಲಿ ಪಾಲ್ಗೊಳ್ಳಲು ವಿರೋಧ ಪಕ್ಷಗಳ ನಾಯಕರಿಗೂ ಸರ್ಕಾರ ಆಹ್ವಾನ ನೀಡಿತ್ತು. ಆದರೆ ಈ ಯಾತ್ರೆಯಲ್ಲಿ ವಿರೋಧ ಪಕ್ಷಗಳ ನಾಯಕರೂ ಕಾಣಲಿಲ್ಲ, ಸಾರ್ವಜನಿಕರೂ ಪಾಲ್ಗೊಳ್ಳಲಿಲ್ಲ.
ಇಂದು ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಯಶಸ್ಸಿನ ಹಿನ್ನೆಲೆಯಲ್ಲಿ ಭಾರತೀಯ ಸೈನಿಕರಿಗೆ ನೈತಿಕಸ್ಥೈರ್ಯ ತುಂಬಲು ರಾಜ್ಯಾದ್ಯಂತ ತಿರಂಗಾ ಯಾತ್ರೆ ನಡೆಸಲಾಗುವುದು ಎಂದು ಭಾರತೀಯ ಜನತಾ ಪಕ್ಷ ಹೇಳಿದೆ ಮತ್ತು ರಾಷ್ಟ್ರಧ್ವಜಗಳನ್ನು ಹಿಡಿದು ರಸ್ತೆಗಿಳಿದಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ನಿರ್ಭೀತ ನ್ಯಾಯಮೂರ್ತಿಗಳು ಮತ್ತು ಕಾಕತಾಳೀಯ ಕಾವ್ಯಾತ್ಮಕ ನ್ಯಾಯ
ದೇಶದ ಜನ ಗಡಿಭಾಗಕ್ಕೆ ತೆರಳಿ ಯುದ್ಧ ಮಾಡುವುದು ಕಷ್ಟ. ಆದರೆ ಯುದ್ಧ ಮಾಡುವ ಸೈನಿಕರಿಗೆ ನೈತಿಕಸ್ಥೈರ್ಯ ತುಂಬುವ ಕೆಲಸವನ್ನಾದರೂ ಮಾಡಬಹುದು. ಆ ನಿಟ್ಟಿನಲ್ಲಿ ಬಿಜೆಪಿ ಹಮ್ಮಿಕೊಂಡಿರುವ ತಿರಂಗಾ ಯಾತ್ರೆಯಲ್ಲಿ ಎಲ್ಲರೂ ಪಾಲ್ಗೊಳ್ಳಲಿ, ಪಕ್ಷಾತೀತವಾಗಿರಲಿ ಎಂಬ ಉದ್ದೇಶದಿಂದ ಪಕ್ಷದ ಚಿಹ್ನೆ ಬಳಸುತ್ತಿಲ್ಲ ಎಂದಿದ್ದಾರೆ ಪಕ್ಷದ ವರಿಷ್ಠರು. ಆದರೆ ಈ ಯಾತ್ರೆಯಲ್ಲೂ ಕಾಂಗ್ರೆಸ್ಸಿಗರು ಕಾಣಿಸಿಕೊಳ್ಳಲಿಲ್ಲ, ಸಾರ್ವಜನಿಕರೂ ಪಾಲ್ಗೊಳ್ಳಲಿಲ್ಲ.
ಅಂದರೆ, ತಿರಂಗಾ ಯಾತ್ರೆ ಎನ್ನುವುದು ದೇಶದ ಏಕತೆ, ಭದ್ರತೆ ಹಾಗೂ ಸಾರ್ವಭೌಮತೆಗಾಗಿ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ದೊಡ್ಡ ಗಂಟಲಲ್ಲಿ ಹೇಳುತ್ತಿದ್ದರೂ, ಅವರಲ್ಲಿಯೇ ಏಕತೆ ಕಾಣುತ್ತಿಲ್ಲ. ಬದಲಿಗೆ ಪ್ರವರ ಮತ್ತು ಪ್ರಚಾರವೇ ಎದ್ದು ಕಾಣುತ್ತಿದೆ. ಅದರಲ್ಲಿ ಚುನಾವಣೆಗಳನ್ನು ಗೆಲ್ಲಲು ಮತ್ತು ಅಧಿಕಾರ ಹಿಡಿಯಲು ದೇಶದ ಸೇನೆಯನ್ನು, ಸೈನಿಕರನ್ನು, ರಾಷ್ಟ್ರಧ್ವಜವನ್ನು ಹೇಗೆಲ್ಲ ಬಳಸಿಕೊಳ್ಳಬಹುದೆಂಬ ಲೆಕ್ಕಾಚಾರವೇ ಅಡಗಿದೆ. ಅದು ಅವರ ತಿರಂಗಾ ಯಾತ್ರೆಯಲ್ಲಿ ಎದ್ದು ಕಾಣುತ್ತಿದೆ.
ಅಸಲಿಗೆ ಬಿಜೆಪಿಗೆ ಸೈದ್ಧಾಂತಿಕ ತಳಹದಿಯನ್ನು ಹಾಕಿಕೊಟ್ಟಿದ್ದು ಹಾಗೂ ಸಂಘಟನಾ ಶಕ್ತಿಯನ್ನು ಒದಗಿಸಿದ್ದು ಮತ್ತು ಒದಗಿಸುತ್ತಿರುವುದು ಆರ್‌ಎಸ್‌ಎಸ್. ಆದರೆ ಈ ಸಂಘಪರಿವಾರಕ್ಕೆ ರಾಷ್ಟ್ರಧ್ವಜದ ಬಗ್ಗೆಯಾಗಲೀ, ಸಂವಿಧಾನದ ಬಗ್ಗೆಯಾಗಲೀ ಹಿಂದಿನಿಂದಲೂ ಗೌರವ ಭಾವ ಇರಲಿಲ್ಲ. ಬದಲಿಗೆ ತಿರಸ್ಕಾರವಿತ್ತು. ಆರ್‌ಎಸ್‌ಎಸ್ ಕಚೇರಿಗಳಲ್ಲಿ ಹದಿನೈದು ವರ್ಷಗಳ ಹಿಂದಿನವರೆಗೆ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ಆಚರಣೆ ಇರಲಿಲ್ಲ. ಅವರ ಕಚೇರಿಗಳಲ್ಲಿ ಅವರು ಆರೋಹಣ ಮಾಡುತ್ತಿದ್ದುದು ಕೇಸರಿ ಧ್ವಜವನ್ನೇ ಹೊರತು, ರಾಷ್ಟ್ರಧ್ಚಜವನ್ನಲ್ಲ.
ಬಿಜೆಪಿ ನಾಯಕರಿಗೆ ದೇಶದ ಸಾರ್ವಭೌಮತೆಗಿಂತ; ಪಾಕಿಸ್ತಾನ, ಉಗ್ರರ ನೆಪದಲ್ಲಿ ಮುಸ್ಲಿಮರನ್ನು ಹೀಯಾಳಿಸುವುದು ಮುಖ್ಯ. ಅವರ ಈ ‘ದೇಶಭಕ್ತಿ’ ದೇಶಕ್ಕಾಗಿ ಹೋರಾಡುವ ಸೈನಿಕರನ್ನೂ ಬಿಟ್ಟಿಲ್ಲ.
ಇದಕ್ಕೆ ಬಹುದೊಡ್ಡ ಉದಾಹರಣೆಯಾಗಿ, ಕರ್ನಲ್ ಸೋಫಿಯಾ ಖುರೇಷಿಯವರ ಬಗ್ಗೆ ಕೀಳುಮಟ್ಟದ ಭಾಷೆ ಬಳಸಿ ಅವಮಾನಿಸಿದ ಬಿಜೆಪಿ ನಾಯಕನ ನಡೆ ನೋಡಬಹುದು. ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ದಾಳಿ ಮಾಡಿದ ಆಪರೇಷನ್ ಸಿಂಧೂರ್ ಬಗ್ಗೆ ಮಾಹಿತಿ ನೀಡಲು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಇಬ್ಬರು ದಿಟ್ಟ ಮಹಿಳೆಯರ ಪೈಕಿ ಕರ್ನಲ್ ಸೋಫಿಯಾ ಖುರೇಷಿ ಕೂಡ ಒಬ್ಬರಾಗಿದ್ದರು. ಅವರು ಅತ್ಯಂತ ಸಂಯಮದಿಂದ ದಾಳಿಯ ವಿವರಗಳನ್ನು ಇಡೀ ಜಗತ್ತಿಗೇ ವಿವರಿಸಿದರು. ಅದನ್ನು ಇಡೀ ದೇಶವೇ ಶ್ಲಾಘಿಸಿ ಸಂಭ್ರಮಿಸಿತು.
ದುರದೃಷ್ಟಕರ ಸಂಗತಿ ಎಂದರೆ, ಮಧ್ಯಪ್ರದೇಶದ ಬಿಜೆಪಿ ಸರ್ಕಾರದ ಬುಡಕಟ್ಟು ಸಚಿವ ಕುನ್ವರ್ ವಿಜಯ್ ಶಾ, ‘ನಮ್ಮ ದೇಶದ ಪುತ್ರಿಯರ ಸಿಂಧೂರವನ್ನು ಅಳಿಸಿದ ಪಾಕಿಸ್ತಾನದ ಉಗ್ರರಿಗೆ ಪಾಠ ಕಲಿಸಲು ಅವರ ಸಹೋದರಿಯನ್ನೇ ಪ್ರಧಾನಿ ಮೋದಿಯವರು ಕಳಿಸಿದರು’ ಎಂದು ಖುರೇಷಿಯ ಧರ್ಮ ಹುಡುಕಿದರು, ಹಂಗಿಸಿದರು, ಆನಂದಿಸಿದರು.
ಬಿಜೆಪಿ ಮುಖಂಡ, ಸಚಿವ ವಿಜಯ್ ಶಾ ಅವರ ಹೇಳಿಕೆ ಭಾರತೀಯ ಸಶಸ್ತ್ರ ಪಡೆಗಳ ಘನತೆಗೆ ಧಕ್ಕೆ ತರುತ್ತದೆ, ಅವರ ತ್ಯಾಗ-ಬಲಿದಾನಕ್ಕೆ ಮಸಿ ಬಳಿಯುತ್ತದೆ ಎಂದು ತೀರ್ಮಾನಿಸಿದ ಮಧ್ಯಪ್ರದೇಶ ಹೈಕೋರ್ಟ್, ಬಿಜೆಪಿ ಮುಖಂಡನ ವಿರುದ್ಧ ಎಫ್ಐಆರ್ ದಾಖಲಿಸುವಂತೆ ರಾಜ್ಯ ಪೊಲೀಸರಿಗೆ ಆದೇಶಿಸಿದೆ.
ದೇಶ ಕಾಯುವ ಸೈನಿಕರನ್ನು ಹೀಗೆ ಅವಮಾನಿಸುವುದು ಅಕ್ಷಮ್ಯ ಅಪರಾಧ ಎಂದು ನ್ಯಾಯಮೂರ್ತಿಗಳೇ ಮುಂದಾಗಿ ಅಧಿಕಾರಸ್ಥ ರಾಜಕಾರಣಿಗಳ ಕಿವಿ ಹಿಂಡುತ್ತಿದ್ದಾರೆ. ಆದರೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ದೇಶದ ಉದ್ದಗಲಕ್ಕೂ ಜಾಹೀರಾತು ಫಲಕಗಳನ್ನು ಪ್ರದರ್ಶಿಸುವ ಮೂಲಕ ಪಾಕಿಸ್ತಾನದ ಉಗ್ರ ನೆಲೆಗಳ ಮೇಲಿನ ದಾಳಿಯನ್ನು ಮೋದಿಯವರ ಖಾತೆಗೆ ಜಮಾ ಮಾಡುತ್ತಿದೆ. ಪ್ರಧಾನಿ ಮೋದಿಯವರಿಗೆ ಸೇನೆಯ ಸಮವಸ್ತ್ರ ತೊಡಿಸಿ, ರಾಕೆಟ್ ಉಡಾಯಿಸುತ್ತಿದೆ. ಫಲಕಗಳಲ್ಲಿಯೇ ಪಾಕಿಸ್ತಾನವನ್ನು ಪಲ್ಟಿ ಹೊಡೆಸುತ್ತಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮೋದಿಯ ಅಮೃತಕಾಲದಲ್ಲಿ ದಾಳಿ ಮತ್ತು ದ್ವೇಷಕ್ಕಿದೆ ಮಾರುಕಟ್ಟೆ
ವಿಪರ್ಯಾಸಕರ ಸಂಗತಿ ಎಂದರೆ, ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ದಾಳಿ ಮುಂದುವರೆಯುತ್ತಿರುವಾಗಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯೆ ಪ್ರವೇಶಿಸಿ, ಕದನ ವಿರಾಮ ಘೋಷಿಸಿದರು. ಜಾಗತಿಕ ಮಟ್ಟದಲ್ಲಿ ದೇಶದ ನಾಯಕತ್ವ ವಹಿಸಿದ ಪ್ರಧಾನಿಯನ್ನೇ ನಗಣ್ಯ ಮಾಡಿದರು.
ಸಂಘ ಪರಿವಾರ ರಾಷ್ಟ್ರಧ್ವಜವನ್ನು ತಿರಸ್ಕರಿಸಿದರೂ, ಬಿಜೆಪಿ ನಾಯಕರು ಸೈನಿಕರನ್ನು ಅವಮಾನಿಸಿದರೂ, ಮೂರನೇ ವ್ಯಕ್ತಿ ಮಧ್ಯೆ ಪ್ರವೇಶಿಸಿ ಕದನ ವಿರಾಮ ಘೋಷಿಸಿದರೂ- ಪ್ರಧಾನಿ ಮೋದಿಯವರು ಮಾತ್ರ ತುಟಿ ಬಿಚ್ಚುತ್ತಿಲ್ಲ. ಆದರೆ, ಚುನಾವಣೆ ಗೆಲ್ಲಲು, ಅಧಿಕಾರಕ್ಕೇರಲು ತಿರಂಗ ಯಾತ್ರೆಯನ್ನೂ, ಸೈನಿಕರನ್ನೂ ಬಳಸಿಕೊಳ್ಳಲು ಇವರು ಹೇಸುವುದಿಲ್ಲ.
ಇವರು ನಮ್ಮ ನಾಯಕರು, ದೇಶಭಕ್ತರು!?
