ಈ ದಿನ ಸಂಪಾದಕೀಯ | ತಮಿಳುನಾಡಿನಲ್ಲಿ ಸದ್ದು ಮಾಡುತ್ತಿರುವ ವಿಜಯ್ ಮತ್ತು #GetOut ಫಲಕಗಳು

Date:

Advertisements
2026ರ ಚುನಾವಣೆ ಚಿತ್ರನಟರಾದ ವಿಜಯ್ ಮತ್ತು ಉದಯನಿಧಿಗಳ ನಡುವಿನ ಕಾಳಗವಾಗಿ ಮಾರ್ಪಡಬಹುದು. ಸದ್ಯಕ್ಕೆ ತಮಿಳು ಚಿತ್ರರಂಗ ವಿಜಯ್ ಪರವಾಗಿದೆ. ಎಐಎಡಿಎಂಕೆ ಕೂಡ ವಿಜಯ್ ಜೊತೆ ಹೆಜ್ಜೆ ಹಾಕಲು ಮನಸ್ಸು ಮಾಡಿದಂತಿದೆ. ಬದಲಾವಣೆಯ ಗಾಳಿ ಬೀಸುತ್ತಿದೆ.

ಬುಧವಾರ ತಮಿಳುನಾಡಿನ ಮಾಮಲ್ಲಾಪುರಂನ ಖಾಸಗಿ ರೆಸಾರ್ಟ್‌ಗೆ ಜನರ ಮಹಾಪೂರವೇ ಹರಿದುಬಂದಿತ್ತು. ಅಲ್ಲಿ ನೆರೆದಿದ್ದ ಜನರ ಮುಖದಲ್ಲಿ ಹೊಸ ಉತ್ಸಾಹ ಕಾಣಿಸುತ್ತಿತ್ತು. ಬದಲಾವಣೆಯ ಗಾಳಿ ಬೀಸುತ್ತಿತ್ತು. ಆ ಜನಸ್ತೋಮದ ಉಮೇದನ್ನು ಖುದ್ದಾಗಿ ಕಂಡವರು, ‘ಡಿಎಂಕೆ ಕತೆ ಮುಗಿಯಿತು’ ಎಂಬ ಉದ್ಗಾರವೆಳೆದಿದ್ದರು. 

ಆಡಳಿತಾರೂಢ ಡಿಎಂಕೆ, ನಿಧಾನವಾಗಿ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ. ಅದಕ್ಕೆ ಕಾರಣ, ದುರಾಡಳಿತವೂ ಅಲ್ಲ, ಭ್ರಷ್ಟಾಚಾರವೂ ಅಲ್ಲ. ಅದಕ್ಕಿಂತ ಹೆಚ್ಚಾಗಿ ವಂಶ ಪಾರಂಪರ್ಯ ರಾಜಕಾರಣ ಜನರಲ್ಲಿ ಬೇಸರ ತರಿಸಿದೆ. ಅಪ್ಪ-ಮಗನ ಅಟಾಟೋಪ ಅತಿ ಎನಿಸಿದೆ. ದರ್ಪ-ದುರಹಂಕಾರ ದುಪ್ಪಟ್ಟಾಗಿದೆ. ಅದನ್ನು ಕೊನೆಗಾಣಿಸಬೇಕೆಂಬ ನಿರ್ಧಾರಕ್ಕೆ ಜನ ಬಂದಿದ್ದಾರೆ. ಅವರ ಕೈಯಲ್ಲಿದ್ದ #GetOut ಫಲಕಗಳು ಅವರ ತೀರ್ಮಾನವನ್ನು ತಿಳಿಸುತ್ತಿವೆ. ಆ ಜನರ ನಾಯಕನಾಗಿ ಸದ್ಯಕ್ಕೆ ‘ದಳಪತಿ’ ವಿಜಯ್ ಕಾಣಿಸುತ್ತಿದ್ದಾರೆ.

ಸದ್ಯ ತಮಿಳುನಾಡಿನಲ್ಲಿ ರಜನಿಕಾಂತ್ ಬಿಟ್ಟರೆ, ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಎಂದರೆ, ಅದು ‘ದಳಪತಿ’ ವಿಜಯ್. ಒಂದು ವರ್ಷದ ಹಿಂದೆ ರಾಜಕಾರಣಕ್ಕೆ ಧುಮುಕಿ, ತಮಿಳಗ ವೆಟ್ರಿ ಕಳಗಂ(ಟಿಎಂಕೆ) ಎಂಬ ರಾಜಕೀಯ ಪಕ್ಷ ಹುಟ್ಟುಹಾಕಿ, ಅದರ ಮೊದಲ ವಾರ್ಷಿಕೋತ್ಸವ ಸಮಾರಂಭವನ್ನು ಬುಧವಾರ ಮಾಮಲ್ಲಾಪುರಂನಲ್ಲಿ ಹಮ್ಮಿಕೊಂಡಿದ್ದರು. 2026ರ ವಿಧಾನಸಭಾ ಚುನಾವಣೆಗೆ ಸಿದ್ಧತೆ ಎಂದೇ ಕರೆಯಲಾಗುತ್ತಿರುವ ಈ ಸಮಾರಂಭದ ವೇದಿಕೆಯಲ್ಲಿ ನಟ ವಿಜಯ್‌ ಜೊತೆ ಚುನಾವಣಾ ನಿಪುಣ ಪ್ರಶಾಂತ್ ಕಿಶೋರ್ ಕಾಣಿಸಿಕೊಂಡಿರುವುದು ತೀವ್ರ ಚರ್ಚೆಗೆ ಈಡುಮಾಡಿದೆ.

Advertisements

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಕೊಳೆಗೇರಿಗಳ ಜನ ನೀರು ನೆರಳು ಬೆಳಕಿಲ್ಲದೆ ನರಳಬೇಕಿರುವುದು ನಾಗರಿಕ ಸಮಾಜದ ನಾಚಿಕೆಗೇಡು

ಪಕ್ಕದ ತಮಿಳುನಾಡಿನ ಜನಜೀವನವನ್ನು, ತಮಿಳರ ಭಾಷಾಭಿಮಾನವನ್ನು, ಅವರ ಅತಿರೇಕಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ- ಅಲ್ಲಿನ ಜನರ ನರನಾಡಿಗಳಲ್ಲಿ ಸಿನೆಮಾ ಬೆರೆತುಹೋಗಿರುವುದಕ್ಕೆ ಪುರಾವೆ ಸಿಗುತ್ತದೆ. ಚಿತ್ರರಂಗದ ನಟನಟಿಯರು ನಾಯಕರಾಗಿ ಹೊರಹೊಮ್ಮಿರುವುದು, ರಾಜಕಾರಣಕ್ಕೆ ಬಂದು ರಾಜ್ಯವಾಳಿರುವುದು ಎದ್ದು ಕಾಣುತ್ತದೆ. 10 ವರ್ಷ ಮುಖ್ಯಮಂತ್ರಿಯಾಗಿ ಮೆರೆದ ಜನಪ್ರಿಯ ಚಿತ್ರನಟ ಎಂಜಿಆರ್ ತಮಿಳರ ಆರಾದ್ಯದೈವವೇ ಆಗಿಹೋಗಿದ್ದಾರೆ. ಹಾಗೆಯೇ 14 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ತಮಿಳುನಾಡನ್ನು ಆಳಿದ ಚಿತ್ರನಟಿ ಜಯಲಲಿತಾ ತಮಿಳರ ‘ಅಮ್ಮ’ನಾಗಿ ಚರಿತ್ರೆಯ ಪುಟಗಳಲ್ಲಿ ದಾಖಲಾಗಿದ್ದಾರೆ. ಇವರಿಬ್ಬರಿಗೂ ಮೊದಲೇ ಸಿನೆಮಾ ಕ್ಷೇತ್ರದಿಂದ ರಾಜಕಾರಣಕ್ಕಿಳಿದು, 19 ವರ್ಷಗಳ ಕಾಲ ತಮಿಳುನಾಡನ್ನು ಆಳಿದ ಕರುಣಾನಿಧಿ, ಶೂದ್ರ ಸಂಕೇತವಾಗಿ-ದ್ರಾವಿಡ ಅಸ್ಮಿತೆಯಾಗಿ ಅಜರಾಮರರಾಗಿದ್ದಾರೆ.

ತಮಿಳುನಾಡಿನ ಪರಂಪರೆಯನ್ನು, ರಾಜಕೀಯ ಚರಿತ್ರೆಯನ್ನು ಕಣ್ಣಾರೆ ಕಂಡಿರುವ ಚಿತ್ರನಟ ಜೋಸೆಫ್ ವಿಜಯ್‌, ಬಹುಬೇಡಿಕೆಯ ಸ್ಟಾರ್‌ ನಟನಾಗಿರುವಾಗಲೇ, ಚಿತ್ರರಂಗಕ್ಕೆ ವಿದಾಯ ಹೇಳಿ, ರಾಜಕಾರಣಕ್ಕೆ ಧುಮುಕಿದ್ದಾರೆ. ಎಂಜಿಆರ್, ಜಯಲಲಿತಾ ಮತ್ತು ಕರುಣಾನಿಧಿಯ ಹಾದಿಯಲ್ಲಿಯೇ ಹೆಜ್ಜೆ ಹಾಕುತ್ತಿದ್ದಾರೆ. 1967ರಲ್ಲಿ ಡಿಎಂಕೆ ಮತ್ತು 1977ರಲ್ಲಿ ಎಐಎಡಿಎಂಕೆ ಭಾರೀ ಜಯಭೇರಿ ಪಡೆದ ರೀತಿಯಲ್ಲಿಯೇ, 2026ರಲ್ಲಿ ದಳಪತಿ ವಿಜಯ್ ಇತಿಹಾಸ ಸೃಷ್ಟಿಸಲು ಸಜ್ಜಾಗುತ್ತಿದ್ದಾರೆ.

ಈ ವಿದ್ಯಮಾನಗಳನ್ನು ವಿಶ್ಲೇಷಿಸಿದರೆ, ಒಂದಂತೂ ಸ್ಪಷ್ಟವಾಗುತ್ತದೆ- ವಿಜಯ್ ತಮಿಳುನಾಡು ಬಯಸುವ ದ್ರಾವಿಡಪಡೆ ಕಟ್ಟಲು ಸಿದ್ಧರಾಗುತ್ತಿದ್ದಾರೆ. ಹಾಗೆಯೇ ಬಲಪಂಥೀಯರ ವಿರುದ್ಧವಿರುವ, ಹಿಂದಿ ಹೇರಿಕೆಯನ್ನು ವಿರೋಧಿಸುವ, ಪ್ರಾದೇಶಿಕ ಅಸ್ಮಿತೆಯ ಪರವಿರುವ, ತಳಸಮುದಾಯಗಳನ್ನು ತಬ್ಬಿಕೊಳ್ಳುವ ತವಕದಲ್ಲಿದ್ದಾರೆ.

ಯುವಜನತೆಯ ಶಕ್ತಿ ಅರಿತಿರುವ ಅವರು, ಎಲ್ಲರಿಗೂ ಸಮಾಜ ಅವಕಾಶ ಸಿಗಬೇಕು ಎಂಬುದನ್ನು ಮುನ್ನೆಲೆಗೆ ತಂದು, ಡಿಎಂಕೆಯ ವಂಶ ಪಾರಂಪರ್ಯ ರಾಜಕಾರಣವನ್ನು ಖಂಡತುಂಡವಾಗಿ ಖಂಡಿಸುತ್ತಿದ್ದಾರೆ. ಅಪ್ಪ-ಮಗನ ಆಟವನ್ನು ‘ಫ್ಯೂಡಲ್ ಲಾರ್ಡ್’ಗಳ ಆಡಳಿತ ಎಂದು ಲೇವಡಿ ಮಾಡುತ್ತಿದ್ದಾರೆ. ಇನ್ನು ಕೇಂದ್ರದ ಮಲತಾಯಿ ಧೋರಣೆಯ ವಿರುದ್ಧ, ತ್ರಿಭಾಷಾ ಸೂತ್ರ ಮತ್ತು ಹಿಂದಿ ಹೇರಿಕೆಯ ವಿರುದ್ಧ, ಒಂದು ರಾಷ್ಟ್ರ, ಒಂದು ಚುನಾವಣೆಯ ವಿರುದ್ಧ ನೇರ ಸಮರಕ್ಕಿಳಿದಿದ್ದಾರೆ.

ಅದಕ್ಕಾಗಿ ಹೊಸಗಾಲದ ಸೋಷಿಯಲ್ ಮೀಡಿಯಾವನ್ನು ಬಳಸಿಕೊಂಡು ವಿಜಯ್ ಸಹಿ ಹಾಕಿರುವ #GetOut ಫಲಕಗಳನ್ನು ಬಿಡುಗಡೆ ಮಾಡಿದ್ದಾರೆ. ಬಿಜೆಪಿ ಮತ್ತು ಡಿಎಂಕೆಯನ್ನು ಗುರಿಯಾಗಿಸಿಕೊಂಡು #GetOutModi ಹಾಗೂ #GetOutStalin ಎಂಬ ಫಲಕಗಳನ್ನು ಜನರ ಕೈಗಿತ್ತಿದ್ದಾರೆ. ಆ ಫಲಕಗಳು ಈಗ ತಮಿಳುನಾಡಿನಾದ್ಯಂತ ಸಂಚಲನ ಸೃಷ್ಟಿಸುತ್ತಿವೆ.

ಇದನ್ನೆಲ್ಲ ನೋಡಿಕೊಂಡು ಆಡಳಿತಾರೂಢ ಡಿಎಂಕೆ ಸುಮ್ಮನೆ ಕೂತಿಲ್ಲ. ಮುಖ್ಯಮಂತ್ರಿ ಸ್ಟಾಲಿನ್, ಬಿಜೆಪಿ ವಿರುದ್ಧ ಸಿಡಿದೆದ್ದಿದ್ದಾರೆ. ತ್ರಿಭಾಷಾ ಸೂತ್ರ, ಹಿಂದಿ ಹೇರಿಕೆ, ಯುಜಿಸಿ, ಒಂದು ರಾಷ್ಟ್ರ ಒಂದು ಚುನಾವಣೆಯ ವಿರುದ್ಧ ದಿಟ್ಟ ನಿಲುವು ತಳೆದಿದ್ದಾರೆ. ದಕ್ಷಿಣದ ರಾಜ್ಯಗಳನ್ನು ಒಂದುಗೂಡಿಸಿ ಕೇಂದ್ರದೊಂದಿಗೆ ಸಂಘರ್ಷಕ್ಕಿಳಿದಿದ್ದಾರೆ. ಇನ್ನು ಕೇಂದ್ರದ ಏಜೆಂಟ್‌ನಂತಿರುವ ರಾಜ್ಯಪಾಲರೊಂದಿಗೆ ಜಟಾಪಟಿಗಿಳಿದಿದ್ದಾರೆ.

ಹಾಗೆಯೇ ವಿಜಯ್ ಎಂಬ ಹೊಸಗಾಳಿಯ ಹೊಡೆತ ತಡೆಯಲು, ಪ್ರತಿಗಾಳಿಯಾಗಿ ಪುತ್ರ ಉದಯನಿಧಿಯನ್ನು ಮುನ್ನೆಲೆಗೆ ತಂದಿದ್ದಾರೆ. ಆತನನ್ನು ಶಾಸಕನನ್ನಾಗಿಸಿ, ಸಚಿವ ಸ್ಥಾನ ನೀಡಿ, ಈಗ ಉಪ ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸಿದ್ದಾರೆ. ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿಸುತ್ತಿದ್ದಾರೆ. ಚುನಾವಣೆಯಲ್ಲಿ ಗೆದ್ದು ಗದ್ದುಗೆ ಹಿಡಿಯಬೇಕೆಂಬ ಹಠಕ್ಕೆ ಬಿದ್ದಿದ್ದಾರೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಸುಭದ್ರ ಸರ್ಕಾರವನ್ನು ಅಭದ್ರಗೊಳಿಸುತ್ತಿರುವ ಕಾಂಗ್ರೆಸ್ಸಿಗರು

ತಮಿಳುನಾಡಿನ ಜನ ಪ್ರಾದೇಶಿಕ ಪಕ್ಷಗಳೊಂದಿಗೆ ಗುರುತಿಸಿಕೊಳ್ಳುತ್ತಾರೆ. ಡಿಎಂಕೆ, ಅದು ಬಿಟ್ಟರೆ ಎಐಎಡಿಎಂಕೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗಳಿಗೆ ನೆಲೆಯಿಲ್ಲ. ಮುಂಬರುವ 2026ರ ಚುನಾವಣೆ ಚಿತ್ರನಟರಾದ ವಿಜಯ್ ಮತ್ತು ಉದಯನಿಧಿಗಳ ನಡುವಿನ ಕಾಳಗವಾಗಿ ಮಾರ್ಪಡಬಹುದು. ಸದ್ಯಕ್ಕೆ ತಮಿಳು ಚಿತ್ರರಂಗ ವಿಜಯ್ ಪರವಾಗಿದೆ. ಎಐಎಡಿಎಂಕೆ ಕೂಡ ವಿಜಯ್ ಜೊತೆ ಹೆಜ್ಜೆ ಹಾಕಲು ಮನಸ್ಸು ಮಾಡಿದಂತಿದೆ.

ಒಟ್ಟಿನಲ್ಲಿ ಪಕ್ಕದ ತಮಿಳುನಾಡಿನಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಕರ್ನಾಟಕವನ್ನು ಜಡಗೊಂಡ ಕಾಂಗ್ರೆಸ್, ಬುರ್ನಾಸು ಬಿಜೆಪಿಗೆ ಬಿಟ್ಟುಕೊಟ್ಟ ಜೆಡಿಎಸ್; ಪ್ರಾದೇಶಿಕ ಪಕ್ಷದ ಅಸ್ತಿತ್ವವನ್ನು, ಅಸ್ಮಿತೆಯನ್ನು ಅಣಕಿಸುತ್ತಿದೆ.    

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X