ಈ ದಿನ ಸಂಪಾದಕೀಯ | ಬರಗಾಲದಲ್ಲೂ ಸರ್ಕಾರ ಸಚಿವರಿಗಾಗಿ ಐಷಾರಾಮಿ ಕಾರು ಕೊಳ್ಳುವ ಅಗತ್ಯವಿತ್ತೇ?

Date:

Advertisements
ಸರ್ಕಾರದ ಪ್ರತಿ ಪೈಸೆಯೂ ಪ್ರಜೆಗಳದ್ದು. ಅದನ್ನು ಬಳಸುವಾಗ ಅತ್ಯಂತ ಜವಾಬ್ದಾರಿಯಿಂದಿರಬೇಕಾಗುತ್ತದೆ; ಜತನದಿಂದ ವೆಚ್ಚ ಮಾಡಬೇಕಾಗುತ್ತದೆ. ಆದರೆ, ಸದ್ಯದ ಪರಿಸ್ಥಿತಿ ನೋಡಿದರೆ, ಅಧಿಕಾರಿಗಳಾಗುವುದೇ, ಸಚಿವರಾಗುವುದೇ ಜನರ ದುಡ್ಡಿನಲ್ಲಿ ಐಷಾರಾಮಿ ಸೌಲಭ್ಯ ಅನುಭವಿಸಲು ಎನ್ನುವಂತಾಗಿದೆ.

ಸಿದ್ದರಾಮಯ್ಯ ಸಂಪುಟದ ಸಚಿವರು ಖುಷಿಯಾಗಿದ್ದಾರೆ. ಯಾಕೆಂದರೆ, ಅವರಿಗೆ ಹೊಚ್ಚ ಹೊಸ ಕಾರುಗಳು ಬಳಕೆಗೆ ಸಿಗಲಿವೆ. ರಾಜ್ಯ ಸರ್ಕಾರವು ತನ್ನ 33 ಸಚಿವರಿಗೆ ಹೊಸ ಕಾರುಗಳನ್ನು ಕೊಳ್ಳಲು 9.9 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಎಲ್ಲ ಸಚಿವರೂ ಟೊಯೋಟಾ ಕಂಪನಿ ಆಗಸ್ಟ್ 29ರಂದು ಬಿಡುಗಡೆ ಮಾಡಿರುವ ಹೈಬ್ರಿಡ್ ಹೈಕ್ರಾಸ್ ಕಾರುಗಳನ್ನು ಪಡೆಯಲಿದ್ದಾರೆ. ಒಂದೊಂದು ಕಾರಿನ ಬೆಲೆ 30 ಲಕ್ಷ ರೂಪಾಯಿಗಳು.

ಅಗತ್ಯ ಇರಲಿ, ಇಲ್ಲದಿರಲಿ; ಹೊಸ ಸರ್ಕಾರಗಳು ಬಂದೊಡನೆ ಸಚಿವರಿಗೆ ಹೊಸ ಕಾರುಗಳನ್ನು ಕೊಳ್ಳುವುದು ಒಂದು ಸಂಪ್ರದಾಯವೇ ಆಗಿಬಿಟ್ಟಿದೆ. 2021ರಲ್ಲಿ ಯಡಿಯೂರಪ್ಪನವರು ಸಚಿವರು, ಸಂಸದರಿಗಾಗಿ 60 ಹೊಸ ಕಾರುಗಳನ್ನು ಕೊಳ್ಳಲು ಒಪ್ಪಿಗೆ ನೀಡಿದ್ದರು. ಆಗ ಸರ್ಕಾರದ ಆರ್ಥಿಕ ಸ್ಥಿತಿ ದಯನೀಯವಾಗಿತ್ತು. ಕೊರೋನಾ ಸಾಂಕ್ರಾಮಿಕದ ನಂತರ ರಾಜ್ಯ ಹಣಕಾಸಿನ ಮುಗ್ಗಟ್ಟನ್ನು ಎದುರಿಸುತ್ತಿತ್ತು. ಎಲ್ಲ ವರ್ಗಗಳ ಜನರೂ ಕೈಯಲ್ಲಿ ಹಣವಿಲ್ಲದೇ ಪರದಾಡುತ್ತಿದ್ದರು. ಹಣದ ವಿನಿಮಯ ಬಹುತೇಕ ನಿಂತೇಹೋಗಿತ್ತು. ಜೊತೆಗೆ ಆಗ ಸಚಿವರು ಬಳಸುತ್ತಿದ್ದ ಇನ್ನೋವಾ ಕಾರುಗಳು ಉತ್ತಮ ಸ್ಥಿತಿಯಲ್ಲಿಯೇ ಇದ್ದವು. ಆದರೂ, 38 ಸಚಿವರು, 28 ಸಂಸದರಿಗೆ ಹೊಸ ಕಾರು ನೀಡಲು ಸರ್ಕಾರ ಮುಂದಾಗಿತ್ತು. ಅದಕ್ಕಾಗಿ 13.80 ಕೋಟಿ ರೂಪಾಯಿಗಳನ್ನು ವ್ಯಯಿಸಿತ್ತು. ಆಗಿನ ಮುಖ್ಯಮಂತ್ರಿ ಯಡಿಯೂರಪ್ಪನವರ ಕ್ರಮದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಅದಕ್ಕೂ ಮುಂಚೆ, 2020ರಲ್ಲಿ, ರಾಜ್ಯಸಭಾ ಸದಸ್ಯರಾದ ಎಚ್ ಡಿ ದೇವೇಗೌಡ ಅವರಿಗೆ 60 ಲಕ್ಷದ ವೋಲ್ವೋ ಕಾರನ್ನು ಸರ್ಕಾರದಿಂದ ನೀಡಲಾಗಿತ್ತು. ಕಾರು ಕೊಳ್ಳಲು ಇರುವ ಹಣಕಾಸಿನ ಮಿತಿಯ ಎರಡು ಪಟ್ಟು ಮೌಲ್ಯದ ಕಾರನ್ನು ಕೊಂಡು, ಅವರ ಬಳಕೆಗೆ ನೀಡಲಾಗಿತ್ತು. ರಾಜ್ಯದ ಜನಪ್ರತಿನಿಧಿಗಳು ಬಳಸುತ್ತಿರುವ ಅತಿ ದುಬಾರಿ ಕಾರು ಅದಾಗಿತ್ತು.
ಕೇವಲ ಮಂತ್ರಿಗಳಿಗಷ್ಟೇ ಅಲ್ಲ, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳೂ ಸರ್ಕಾರಿ ಕಾರುಗಳನ್ನು ಬಳಸುತ್ತಾರೆ. 2022ರ ಆಗಸ್ಟ್‌ನಲ್ಲಿ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಮತ್ತು ಇಲಾಖಾ ಮುಖ್ಯಸ್ಥರು ಸೇರಿ ವಿವಿಧ ಹಂತಗಳ ಅಧಿಕಾರಿಗಳಿಗೆ ಹೊಸ ಕಾರು ಖರೀದಿಗೆ ಇದ್ದ ಆರ್ಥಿಕ ಮಿತಿಯನ್ನು ಹೆಚ್ಚಿಸಲಾಗಿತ್ತು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮುಂತಾದವರಿಗೆ ವಾಹನ ಖರೀದಿ ಸಾಮರ್ಥ್ಯವನ್ನು ₹14 ಲಕ್ಷದಿಂದ ₹20 ಲಕ್ಷಕ್ಕೆ, ಡಿಸಿ, ಜಿಲ್ಲಾ ಪಂಚಾಯತ್ ಸಿಇಒ, ಎಸ್ಪಿ ಮುಂತಾದವರಿಗೆ ವಾಹನ ಖರೀದಿ ಸಾಮರ್ಥ್ಯವನ್ನು ₹9ರಿಂದ ₹18 ಲಕ್ಷಕ್ಕೆ, ಎಸಿ, ಡಿವೈಎಸ್ಪಿ ಮುಂತಾದವರಿಗೆ ವಾಹನ ಖರೀದಿ ಸಾಮರ್ಥ್ಯವನ್ನು ₹6.50ರಿಂದ ₹12,50 ಲಕ್ಷಕ್ಕೆ ಹೆಚ್ಚಿಸಲಾಗಿತ್ತು.

Advertisements

ಸಚಿವರಿಗೆ ಪದೇ ಪದೆ ಹೊಸ ಕಾರುಗಳು; ಅಧಿಕಾರಿಗಳಿಗೆ ಆಗಿಂದಾಗ್ಗೆ ಹೊಸ ಕಾರುಗಳು. ಆಗಾಗ ಅದರ ಮಿತಿ ಹೆಚ್ಚಳ; ಇದನ್ನು ನೋಡಿ ನಮ್ಮ ಜನರ ಎದೆ ಒಡೆದರೂ ಅಚ್ಚರಿಯೇನಿಲ್ಲ. ಸಚಿವರಿಗೆ, ಅಧಿಕಾರಿಗಳಿಗೆ ಕಾರುಗಳನ್ನು ಕೊಳ್ಳಲು, ಅವುಗಳಿಗೆ ಇಂಧನ, ನಿರ್ವಹಣೆ ವೆಚ್ಚಕ್ಕೆ ವರ್ಷಕ್ಕೆ ಕೋಟ್ಯಂತರ ರೂಪಾಯಿ ಖರ್ಚಾಗುತ್ತಿದೆ. ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ಸಚಿವರು, ಅಧಿಕಾರಿಗಳು ಬಳಸುವ ಕಾರುಗಳು, ಅವುಗಳ ನಿರ್ವಹಣೆ ವೆಚ್ಚವೇ ಉಳಿದ ಬಾಬತ್ತುಗಳಿಗಿಂತ ಹೆಚ್ಚಾಗಿರುತ್ತದೆ. ನಿಜವಾದ ಉದ್ದೇಶಕ್ಕೆ ಬಳಕೆಯಾಗುವ, ಜನರಿಗೆ ತಲುಪುವ ಹಣ ಅತ್ಯಲ್ಪ ಮೊತ್ತವಾಗಿರುತ್ತದೆ.

ಸರ್ಕಾರದ ಪ್ರತಿ ಪೈಸೆಯೂ ಪ್ರಜೆಗಳದ್ದು. ಅದನ್ನು ಬಳಸುವಾಗ ಅತ್ಯಂತ ಜವಾಬ್ದಾರಿಯಿಂದಿರಬೇಕಾಗುತ್ತದೆ; ಜತನದಿಂದ ವೆಚ್ಚ ಮಾಡಬೇಕಾಗುತ್ತದೆ. ಆದರೆ, ಸದ್ಯದ ಪರಿಸ್ಥಿತಿ ನೋಡಿದರೆ, ಅಧಿಕಾರಿಗಳಾಗುವುದೇ, ಸಚಿವರಾಗುವುದೇ ಜನರ ದುಡ್ಡಿನಲ್ಲಿ ಐಷಾರಾಮಿ ಸೌಲಭ್ಯ ಅನುಭವಿಸಲು ಎನ್ನುವಂತಾಗಿದೆ. ಎಲ್ಲ ಸರ್ಕಾರಗಳ ಅವಧಿಯಲ್ಲೂ ಇದು ಪುನರಾವರ್ತನೆಯಾಗುತ್ತಿದೆ. ಸಚಿವರಾದ ನಂತರ ಹೊಸ ಕಾರು ಖರೀದಿಸುವುದು, ಅಧಿಕೃತ ನಿವಾಸ ನವೀಕರಿಸುವುದು ದಂಧೆ ಎನ್ನುವಂತಾಗಿಬಿಟ್ಟಿದೆ. ಬಹುತೇಕ ಸಂದರ್ಭಗಳಲ್ಲಿ ಇವು ಅನಗತ್ಯವಾಗಿ ನಡೆಯುತ್ತಿರುತ್ತವೆ.

ರಾಜ್ಯದಲ್ಲಿ ಬರಗಾಲ ಇದೆ. ಮಳೆಯನ್ನೇ ನಂಬಿದ್ದ ರೈತರು ಹೇಗಪ್ಪಾ ಬದುಕು ಎಂದು ಆತಂಕಗೊಂಡಿದ್ದಾರೆ. ಕೆಲವು ಕಡೆಗಳಲ್ಲಂತೂ ಕುಡಿಯುವ ನೀರಿಗೂ ತತ್ವಾರ ಬಂದಿದೆ. ಜಾನುವಾರುಗಳಿಗೆ ಮೇವಿನ ಕೊರತೆ ಇದೆ. ಬರ ಪರಿಹಾರಕ್ಕಾಗಿ ಹಣವನ್ನು ಹೊಂದಿಸುವುದು ನಿಜಕ್ಕೂ ಸವಾಲಿನ ಕೆಲಸವಾಗಿದೆ. ಇದರ ಜೊತೆಗೆ ಸಿದ್ದರಾಮಯ್ಯನವರು ಚುನಾವಣೆಯಲ್ಲಿ ಜನರಿಗೆ ನೀಡಿದ್ದ ಭರವಸೆಯಂತೆ ಐದು ಗ್ಯಾರಂಟಿಗಳನ್ನು ಈಡೇರಿಸಲು ಹರಸಾಹಸ ಪಡುತ್ತಿದ್ದಾರೆ. ಹಲವು ವೆಚ್ಚಗಳಿಗೆ ನಿರ್ಬಂಧ ವಿಧಿಸಿ, ಮತ್ತೊಂದಷ್ಟು ವೆಚ್ಚಗಳಲ್ಲಿ ಕಡಿತ ಮಾಡಿ ಹಣ ಉಳಿತಾಯ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಸರ್ಕಾರದ ಅನೇಕ ಇಲಾಖೆಗಳಲ್ಲಿ ಸಿಬ್ಬಂದಿಗೆ ಸರಿಯಾದ ಸಮಯಕ್ಕೆ ಸಂಬಳ ಕೈಸೇರುತ್ತಿಲ್ಲ. ಇತ್ತೀಚೆಗೆ ಕನಕಪುರದಲ್ಲಿ ಪೌರ ಕಾರ್ಮಿಕರಿಬ್ಬರು ಅವರಿಗೆ ಕೊಡುವ ಅಲ್ಪ ಸಂಬಳವನ್ನೂ ಸತತ 15 ತಿಂಗಳಿನಿಂದ ಕೊಡದೇ ಸತಾಯಿಸಿದ್ದರಿಂದ ರೋಸಿಹೋಗಿ, ಮೈಮೇಲೆ ಮಲ ಸುರಿದುಕೊಳ್ಳುವ ಮೂಲಕ ಪ್ರತಿಭಟನೆ ನಡೆಸಿದ್ದರು. ಇಂಥ ಸ್ಥಿತಿಯಲ್ಲಿ ಸಚಿವರಿಗೆ ಹೊಸ ಐಷಾರಾಮಿ ಕಾರುಗಳ ಅಗತ್ಯವಿತ್ತೇ? ಅದಕ್ಕಾಗಿ ಸರ್ಕಾರ 10 ಕೋಟಿ ರೂಪಾಯಿ ಖರ್ಚು ಮಾಡುವುದು ಬೇಕಿತ್ತೇ?
ಜನರ ಕಷ್ಟಗಳ ಅರಿವಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಸ ಕಾರುಗಳನ್ನು ಕೊಳ್ಳಲು ಅನುಮತಿ ನೀಡಿರುವುದು ಖೇದಕರ. ಇದು ಗಂಭೀರವಾದ ವಿಚಾರವಾಗಿದ್ದು, ಈ ಸಂಬಂಧ ಸ್ಪಷ್ಟ ಮಾರ್ಗಸೂಚಿ ರೂಪಿಸಬೇಕಿದೆ. ಸಚಿವರ ಕಾರು ಖರೀದಿ ಸಂಬಂಧ ಕಠಿಣ ನಿಯಮಗಳನ್ನು ಜಾರಿಗೆ ತರಬೇಕಿದೆ. ಯಾವುದೇ ಒಂದು ಕಾರು ಇಂತಿಷ್ಟು ಕಿಮೀ ಓಡಿದ ನಂತರವಷ್ಟೇ ಅವುಗಳ ಜಾಗಕ್ಕೆ ಹೊಸ ಕಾರುಗಳನ್ನು ತರಬೇಕು. ಸರ್ಕಾರಗಳು ಬದಲಾದಾಗಲೆಲ್ಲ ಮತ್ತು ಸಚಿವರ ವೈಯಕ್ತಿಕ ಇಚ್ಛೆ, ಲಾಬಿಗೆ ತಕ್ಕಂತೆ ಕಾರುಗಳನ್ನು ಬದಲಾಯಿಸಬಾರದು.

ಜನಪ್ರತಿನಿಧಿಗಳು ಜನರಿಗೆ ಉತ್ತರದಾಯಿಗಳಾಗಿರಬೇಕು. ತಾವು ಮಾಡುವುದನ್ನು ಜನ ಎಚ್ಚರಿಕೆಯಿಂದ ಗಮನಿಸುತ್ತಿರುತ್ತಾರೆ ಎನ್ನುವುದನ್ನು ಅವರು ಮರೆಯಬಾರದು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X