ಈ ದಿನ ಸಂಪಾದಕೀಯ | ಮೈತ್ರಿ ಕಷ್ಟ; ಅದೇ ಇಷ್ಟ ಎಂದದ್ದೇಕೆ ಕುಮಾರಸ್ವಾಮಿ?

Date:

Advertisements
ಕುಮಾರಸ್ವಾಮಿಯವರು ಆರೆಸ್ಸೆಸ್ ಮತ್ತು ಬಿಜೆಪಿ ನಾಯಕರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಅದು ಅವರಿಗೆ ಕಷ್ಟ ಕೊಡಲಿದೆ. ಆದರೂ ಮೈತ್ರಿಯಿಂದ ಲಾಭವಿದೆ. ಅಕಸ್ಮಾತ್ ಕುಮಾರಸ್ವಾಮಿ, ಪ್ರಜ್ವಲ್, ಡಾ. ಮಂಜುನಾಥ್ ಗೆದ್ದರೆ, ಮೂವರು ಲೋಕಸಭೆಯಲ್ಲಿ, ದೇವೇಗೌಡರು ರಾಜ್ಯಸಭೆಯಲ್ಲಿ ಪ್ರತಿಷ್ಠಾಪಿಸಲ್ಪಡುತ್ತಾರೆ. ನಾಲ್ವರಲ್ಲಿ ಒಬ್ಬರು ಸಚಿವರಾದರೆ, ಅದು ತರುವ ಅಧಿಕಾರ, ಹಣ, ಸುರಕ್ಷತೆ- ಕುಟುಂಬವನ್ನು ಕಾಪಾಡಲಿದೆ ಎಂಬುದು ಗೌಡರ ಲೆಕ್ಕಾಚಾರ…

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರು ಮಾ. 31ರಂದು ಮಂಡ್ಯ ಸಂಸದೆ ಸುಮಲತಾರನ್ನು, ಅವರ ಮನೆಯಲ್ಲಿಯೇ ಭೇಟಿ ಮಾಡಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ತಮಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.

ಸುಮಲತಾರ ಮನೆಗೆ ಹೋಗುವ ಮುಂಚೆ, ‘ಪರಸ್ವರ ಟೀಕೆ-ಟಿಪ್ಪಣಿ ಮಾಡಿಕೊಂಡಿದ್ದೇವೆ. ಅದು ಮುಗಿದ ಅಧ್ಯಾಯ. ನಾವು ಶತ್ರುಗಳಲ್ಲ. ಸುಮಲತಾ ಅವರು ನನ್ನ ಸ್ವಂತ ಅಕ್ಕ ಇದ್ದಂತೆ,’ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದರು.

ಇಷ್ಟಾದರೂ, ಸುಮಲತಾರ ನಡೆ ನಿಗೂಢವಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೋ, ಇಲ್ಲ ಮೈತ್ರಿ ಧರ್ಮ ಪಾಲಿಸಿ ಕುಮಾರಸ್ವಾಮಿಯವರಿಗೆ ಬೆಂಬಲಿಸುತ್ತಾರೋ, ಅದು ಏ. 3ರ ನಂತರ ತಿಳಿಯಲಿದೆ, ಇರಲಿ.

Advertisements

ಮಂಡ್ಯದಲ್ಲಿ ಅಂಬರೀಷ್ ಅಭಿಮಾನಿಗಳನ್ನು ನಿರ್ಲಕ್ಷಿಸಿ ಚುನಾವಣೆ ಗೆಲ್ಲುವುದು ಕಷ್ಟವಿದೆ. ಹಾಗಾಗಿ ಕುಮಾರಸ್ವಾಮಿಯವರಿಗೆ ಈಗ ಸುಮಲತಾರ ಬೆಂಬಲ ಬೇಕಾಗಿದೆ. ಇದೆಲ್ಲವನ್ನು ಅಳೆದು ತೂಗಿದ ಕುಮಾರಸ್ವಾಮಿಯವರು, ಪ್ರತಿಷ್ಠೆಯನ್ನು ಪಕ್ಕಕ್ಕಿಟ್ಟು ಸುಮಲತಾರೊಂದಿಗೆ ಸಂದಾನಕ್ಕಿಳಿದಿದ್ದಾರೆ.

ಆದರೆ, ಮಂಡ್ಯದ ಟಿಕೆಟ್‌ಗಾಗಿಯೇ ಸುಮಲತಾ ಬಿಜೆಪಿ ಸೇರಿದ್ದರು. ಟಿಕೆಟ್ ಸಿಗದೆ, ಐದು ವರ್ಷಗಳ ಕಾಲ ತಮ್ಮನ್ನು ಶತ್ರುವಿನಂತೆ ಕಂಡು, ಕಿಡಿ ಕಾರಿದ ಕುಮಾರಸ್ವಾಮಿಯವರಿಗೆ ಸಿಕ್ಕಿದ್ದು ಸಹಿಸಲಸಾಧ್ಯವಾದ ಸಂಕಟಕ್ಕೆ ಕಾರಣವಾಗಿರಬಹುದು. ಮೈತ್ರಿಯ ಕಾರಣಕ್ಕೆ ಅದನ್ನು ಮರೆತರೂ, ಕುಮಾರಸ್ವಾಮಿಯವರು ತಮ್ಮ ವಿರುದ್ಧ ಆಡಿದ ಕೊಳಕು ಮಾತುಗಳನ್ನು ಮರೆಯುವುದು ಸಾಧ್ಯವೇ?

2006ರಲ್ಲಿ ಒಕ್ಕಲಿಗರ ನಾಯಕ ಕುಮಾರಸ್ವಾಮಿಯವರು ಹಾಗೂ ಲಿಂಗಾಯತರ ನಾಯಕ ಯಡಿಯೂರಪ್ಪನವರು ಒಂದಾಗಿ, ಟ್ವೆಂಟಿ ಟ್ವೆಂಟಿ ಸರ್ಕಾರ ರಚಿಸಿದ್ದರು. ರಾಜ್ಯದ ಎರಡು ಬಲಿಷ್ಠ ಜಾತಿಗಳ ಕೈಗೆ ಅಧಿಕಾರ ಸಿಕ್ಕಾಗ, ಫ್ಯೂಡಲ್ ಬುದ್ಧಿ ಬಹಿರಂಗವಾದಾಗ ಸಂಬಂಧ ಸಡಿಲವಾಯಿತು. 20 ತಿಂಗಳು ಮುಖ್ಯಮಂತ್ರಿಯಾಗುವ ಆಸೆಯಲ್ಲಿದ್ದ ಯಡಿಯೂರಪ್ಪನವರು, ನವೆಂಬರ್ 2011ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರೂ, ಜೆಡಿಎಸ್ ಬೆಂಬಲ ಹಿಂತೆಗೆದುಕೊಂಡಿದ್ದರಿಂದ ‘ಸಾತ್ ದಿನ್ ಕ ಸುಲ್ತಾನ್’ ಎನಿಸಿಕೊಳ್ಳಬೇಕಾಯಿತು. ಹಿರಿಯ ನಾಯಕ ಯಡಿಯೂರಪ್ಪನವರು, ಕುಮಾರಸ್ವಾಮಿಯಿಂದಾದ ಮೋಸ, ಅನ್ಯಾಯವನ್ನು ಮರೆಯುವುದುಂಟೇ?

2018ರಲ್ಲಿ ದತ್ತಪೀಠ ವಿವಾದ ಹುಟ್ಟುಹಾಕಿ, ಸಮಾಜದಲ್ಲಿ ಅಶಾಂತಿ ಸೃಷ್ಟಿಸಿದ ಆರೆಸ್ಸೆಸ್, ವಿಎಚ್‌ಪಿ ಮತ್ತು ಬಜರಂಗದಳಗಳ ಕುರಿತು ಕುಮಾರಸ್ವಾಮಿಯವರು, ‘ಈ ಸಂಘಟನೆಗಳು ಸಮಾಜವನ್ನು ವಿಭಜಿಸುತ್ತವೆ. ಇವರು ಶ್ರೀರಾಮನ ಹೆಸರಿನಲ್ಲಿ ಪ್ರತೀ ವರ್ಷ ಮಾಲೆ ಹಾಕಿಕೊಂಡು ತಾಳ ಬಡಿದುಕೊಂಡು ಚಿಕ್ಕಮಗಳೂರಿನ ಬೀದಿಯಲ್ಲಿ ಭಿಕ್ಷೆ ಬೇಡುತ್ತಾರಂತೆ. ದೇವರೇ ಕಾಪಾಡಬೇಕು. ಕೈಜೋಡಿಸಿ ಮನವಿ ಮಾಡುತ್ತೇನೆ ಇದೆಲ್ಲ ಬೇಡ ನಮಗೆ. ಮೊದಲು ನೀವು ಉಳಿದರೆ ತಾನೇ ದೇವರನ್ನು ಉಳಿಸಲು ಸಾಧ್ಯ?’ ಎಂದಿದ್ದರು.

ಈಗ ಅದೇ ಆರೆಸ್ಸೆಸ್, ವಿಎಚ್‌ಪಿ ಮತ್ತು ಬಜರಂಗದಳದ ಕಾರ್ಯಕರ್ತರೊಂದಿಗೆ ಕುಮಾರಸ್ವಾಮಿಯವರು ಕೈ ಬೆಸೆಯಬೇಕಿದೆ. ಕುಮಾರಸ್ವಾಮಿಯವರಿಗೆ ಅನಿವಾರ್ಯವಾದರೂ, ಅವರ ಒಡಲಾಳದ ಉರಿ ಶಮನವಾಗುವುದೇ?

2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿತ್ತು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಆದರೆ 2019ರಲ್ಲಿ ಶಾಸಕರನ್ನು ಖರೀದಿಸಿದ ಯಡಿಯೂರಪ್ಪನವರು ಸಮ್ಮಿಶ್ರ ಸರ್ಕಾರ ಉರುಳಿಸಿ ಮುಖ್ಯಮಂತ್ರಿಯಾದರು. ಕೆಂಡಾಮಂಡಲವಾದ ಕುಮಾರಸ್ವಾಮಿಯವರು, ಸುಮಾರು ನಾಲ್ಕು ವರ್ಷಗಳ ಕಾಲ ನಿರಂತರವಾಗಿ ಯಡಿಯೂರಪ್ಪನವರನ್ನು ಕುಟುಕುತ್ತಲೇ ಇದ್ದರು.

2011ರಲ್ಲಿ ಕುಮಾರಸ್ವಾಮಿಯವರು ಮಾಡಿದ ಮೋಸಕ್ಕೆ ಪ್ರತಿಯಾಗಿ ಯಡಿಯೂರಪ್ಪನವರು 2019ರಲ್ಲಿ ಸರ್ಕಾರವನ್ನು ಉರುಳಿಸಿರಬಹುದು. ಹೀಗೆ ಪರಸ್ಪರ ಕಾದಾಟಕ್ಕಿಳಿದು ಕೆಸರೆರಚಿಕೊಂಡ ನಾಯಕರು, ಈಗ ಮೈತ್ರಿಯ ಕಾರಣಕ್ಕೆ ಒಂದಾದರೆ, ರಾಜ್ಯದ ಜನ ಇವರನ್ನು ನಂಬುತ್ತಾರೆಯೇ?

2023ರಲ್ಲಿ ಕುಮಾರಸ್ವಾಮಿಯವರು, ‘ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಹಾರಾಷ್ಟ್ರ ಭಾಗದ ಪೇಶ್ವೆಗಳ ವಂಶಕ್ಕೆ ಸೇರಿದ ಬ್ರಾಹ್ಮಣರು. ಇವರು ನಮ್ಮ ಕರ್ನಾಟಕದ ಬ್ರಾಹ್ಮಣರಲ್ಲ, ಶೃಂಗೇರಿಯ ಮಠ ಒಡೆದವರು, ಮಹಾತ್ಮ ಗಾಂಧಿ ಕೊಂದವರು. ಬಿಜೆಪಿಗೆ ತಾಕತ್ತಿದ್ದರೆ ಪ್ರಲ್ಹಾದ್ ಜೋಶಿಯೇ ಸಿಎಂ ಅಭ್ಯರ್ಥಿ ಎಂದು ಘೋಷಿಸಲಿ’ ಎಂದು ಆರೆಸ್ಸೆಸ್, ಬಿಜೆಪಿ, ಪ್ರಲ್ಹಾದ್ ಜೋಶಿಗಳ ಹುನ್ನಾರವನ್ನು ಹೊರಹಾಕಿದ್ದರು. ವಿಧಾನಸಭಾ ಚುನಾವಣೆಗೂ ಮುನ್ನ ಪೇಶ್ವೆ ಬ್ರಾಹ್ಮಣರನ್ನು ಬಿಜೆಪಿ ಸಿಎಂ ಮಾಡುತ್ತೇವೆಂದು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದರು.

ಈಗ ಇದೇ ಪೇಶ್ವೆ ಪ್ರಲ್ಹಾದ್ ಜೋಶಿಯವರ ಕುರಿತು ಕುಮಾರಸ್ವಾಮಿಯವರು, ಮಠ ಒಡೆದಿಲ್ಲ, ಗಾಂಧಿ ಕೊಂದಿಲ್ಲ ಎಂದು ಹೇಳುತ್ತಾರೆಯೇ, ಜನ ಅದನ್ನು ನಂಬುತ್ತಾರೆಯೇ?

2023ರ ವಿಧಾನಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಶಾಸಕರ ಸಂಖ್ಯಾಬಲ ಕುಸಿದಿರಬಹುದು, ಪಕ್ಷ ಮುಳುಗಿಹೋಗಿಲ್ಲ. ಮುಸ್ಲಿಮರೇ ಅಧಿಕ ಸಂಖ್ಯೆಯಲ್ಲಿರುವ ರಾಮನಗರ ಕ್ಷೇತ್ರದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಸೋತಿರಬಹುದು, ಜಾತ್ಯತೀತ ತತ್ವಕ್ಕೆ ತಿಲಾಂಜಲಿ ಇಡಬೇಕಾದ ಅಗತ್ಯವಿರಲಿಲ್ಲ. ಕಡುವಿರೋಧಿಗಳಾದ ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್ ರಾಜ್ಯ ರಾಜಕಾರಣವನ್ನು ಆವರಿಸಿಕೊಳ್ಳುತ್ತಿರಬಹುದು, ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇರಲಿಲ್ಲ.

ಇದನ್ನೂ ಮೀರಿ, ಕುಮಾರಸ್ವಾಮಿಯವರಿಗೆ ಹೆಚ್ಚಿನ ಆಯ್ಕೆಗಳು ಇರಲಿಲ್ಲವೆಂದರೂ; ತತ್ವ-ಸಿದ್ಧಾಂತಗಳು, ಸರಿ-ತಪ್ಪುಗಳ ಜಿಜ್ಞಾಸೆಯಲ್ಲಿ ಕಾಲಹರಣ ಮಾಡುವುದು ರಾಜಕಾರಣವಲ್ಲ ಎಂದಿಟ್ಟುಕೊಂಡರೂ; ಭಾರತೀಯ ಸಂಸ್ಕೃತಿ, ಸನಾತನ ಧರ್ಮ, ದೇಶ ಭಕ್ತಿಯನ್ನು ಪ್ರತಿಪಾದಿಸುವ ಹಿಂದೂ ನಾಯಕನಾಗಿ ಬದಲಾಗುವುದು ಕುಮಾರಸ್ವಾಮಿಯವರಿಗೆ ಕಷ್ಟವಿದೆ. ಈ ಕುರಿತು ತಾವು ಆಡಿದ ಮಾತುಗಳನ್ನು ತಾವೇ ನುಂಗಬೇಕಾದ ಅನಿವಾರ್ಯತೆ ಎದುರಾಗಲಿದೆ.

ಎದುರಾಗಲಿರುವ ಈ ಅನಿವಾರ್ಯತೆಗೂ, ಕಷ್ಟಕ್ಕೂ ಕುಮಾರಸ್ವಾಮಿಯವರು ಸಿದ್ಧರಾಗಿದ್ದಾರೆ. ಏಕೆಂದರೆ ಮೈತ್ರಿಯಿಂದ ಲಾಭವಿದೆ. ಅಕಸ್ಮಾತ್ ಕುಮಾರಸ್ವಾಮಿ, ಪ್ರಜ್ವಲ್, ಡಾ. ಮಂಜುನಾಥ್ ಗೆದ್ದರೆ, ಮೂವರು ಲೋಕಸಭೆಯಲ್ಲಿ, ದೇವೇಗೌಡರು ರಾಜ್ಯಸಭೆಯಲ್ಲಿ ಪ್ರತಿಷ್ಠಾಪಿಸಲ್ಪಡುತ್ತಾರೆ. ನಾಲ್ವರಲ್ಲಿ ಒಬ್ಬರು ಸಚಿವರಾದರೆ, ಅದು ತರುವ ಅಧಿಕಾರ, ಹಣ, ಸುರಕ್ಷತೆ- ಕುಟುಂಬವನ್ನು ಕಾಪಾಡಲಿದೆ ಎಂಬುದು ಗೌಡರ  ಲೆಕ್ಕಾಚಾರ. ಇದು ರಾಜ್ಯದ ಜನತೆಗೆ ಅರ್ಥವಾಗಬೇಕಾಗಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X