ಈ ದಿನ ಸಂಪಾದಕೀಯ | ಮೈತ್ರಿ ಕಷ್ಟ; ಅದೇ ಇಷ್ಟ ಎಂದದ್ದೇಕೆ ಕುಮಾರಸ್ವಾಮಿ?

Date:

ಕುಮಾರಸ್ವಾಮಿಯವರು ಆರೆಸ್ಸೆಸ್ ಮತ್ತು ಬಿಜೆಪಿ ನಾಯಕರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಅದು ಅವರಿಗೆ ಕಷ್ಟ ಕೊಡಲಿದೆ. ಆದರೂ ಮೈತ್ರಿಯಿಂದ ಲಾಭವಿದೆ. ಅಕಸ್ಮಾತ್ ಕುಮಾರಸ್ವಾಮಿ, ಪ್ರಜ್ವಲ್, ಡಾ. ಮಂಜುನಾಥ್ ಗೆದ್ದರೆ, ಮೂವರು ಲೋಕಸಭೆಯಲ್ಲಿ, ದೇವೇಗೌಡರು ರಾಜ್ಯಸಭೆಯಲ್ಲಿ ಪ್ರತಿಷ್ಠಾಪಿಸಲ್ಪಡುತ್ತಾರೆ. ನಾಲ್ವರಲ್ಲಿ ಒಬ್ಬರು ಸಚಿವರಾದರೆ, ಅದು ತರುವ ಅಧಿಕಾರ, ಹಣ, ಸುರಕ್ಷತೆ- ಕುಟುಂಬವನ್ನು ಕಾಪಾಡಲಿದೆ ಎಂಬುದು ಗೌಡರ ಲೆಕ್ಕಾಚಾರ…

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರು ಮಾ. 31ರಂದು ಮಂಡ್ಯ ಸಂಸದೆ ಸುಮಲತಾರನ್ನು, ಅವರ ಮನೆಯಲ್ಲಿಯೇ ಭೇಟಿ ಮಾಡಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ತಮಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.

- Advertisement -

ಸುಮಲತಾರ ಮನೆಗೆ ಹೋಗುವ ಮುಂಚೆ, ‘ಪರಸ್ವರ ಟೀಕೆ-ಟಿಪ್ಪಣಿ ಮಾಡಿಕೊಂಡಿದ್ದೇವೆ. ಅದು ಮುಗಿದ ಅಧ್ಯಾಯ. ನಾವು ಶತ್ರುಗಳಲ್ಲ. ಸುಮಲತಾ ಅವರು ನನ್ನ ಸ್ವಂತ ಅಕ್ಕ ಇದ್ದಂತೆ,’ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಪಾನ್ ಅಂಗಳದಲ್ಲಿ ಮಿನುಗಿದ ಭಾರತದ ‘ಚಿನ್ನ’ದ ನಾರಿಯರು: ಕಷ್ಟಗಳನ್ನು...

ಜಪಾನ್‌ನ ಐಚಿ ಪ್ರಾಂತ್ಯದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಭಾರತೀಯ ಮಹಿಳಾ ಕ್ರೀಡಾಪಟುಗಳ ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಿದೆ. ಬಡತನ, ಗಾಯದ ನೋವು ಹಾಗೂ ಸಮಾಜದ ಕಟ್ಟುಪಾಡುಗಳನ್ನು ಮೆಟ್ಟಿ ನಿಂತು 14 ಚಿನ್ನದ...

ವ್ಯವಸ್ಥೆಯ ವೈಫಲ್ಯಕ್ಕೆ 32 ಬೈಗಾ ಕಂದಮ್ಮಗಳ ಬಲಿ: ಬುಡಕಟ್ಟು...

ಕೇಂದ್ರ, ರಾಜ್ಯ ಸರ್ಕಾರಗಳು ಇಂತಹ ಅಳಿದುಳಿಯುತ್ತಿರುವ ಬುಡಕಟ್ಟು ಸಮುದಾಯದ ಕಡೆಗೆ ತಮ್ಮ ಮತ ಬಾಚುವ ಕಣ್ಣು ಮುಚ್ಚಿ ತನ್ಮ ಕರ್ತವ್ಯದ ಕಣ್ಣು ತೆರೆದು ನೋಡುವುದು ಅಗತ್ಯ. ಬೈಗಾ ಸಮುದಾಯದಂತಹ ಅಪರೂಪದ ಬುಡಕಟ್ಟು ಸಂತತಿಯನ್ನು...

ಆದಿವಾಸಿ ಕಲಾವಿದನ ನಿಧನದ 25 ವರ್ಷಗಳ ನಂತರ ₹18...

ಈ ಚಿತ್ರಕಲಾಕೃತಿಯಲ್ಲಿ ಚಿತ್ರಿತವಾಗಿರುವ ನಾಗ, ಭೂಮಿತಾಯಿಯ ಪ್ರತೀಕ. ನಾಗನ ಮೇಲೆ ನಿಂತಿರುವ ವಿಶಾಲ ವೃಕ್ಷ, ಪ್ರಕೃತಿ ಮತ್ತು ಬದುಕಿನ ಸಂಬಂಧದ ಪ್ರತಿಫಲನ. ಗೊಂಡ್ ಆದಿವಾಸಿ ಕಲಾವಿದನ ಚಿತ್ರ ಕಲಾಕೃತಿಯೊಂದು ಆತನ ಮರಣದ 25...

ಇಷ್ಟಾದರೂ, ಸುಮಲತಾರ ನಡೆ ನಿಗೂಢವಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೋ, ಇಲ್ಲ ಮೈತ್ರಿ ಧರ್ಮ ಪಾಲಿಸಿ ಕುಮಾರಸ್ವಾಮಿಯವರಿಗೆ ಬೆಂಬಲಿಸುತ್ತಾರೋ, ಅದು ಏ. 3ರ ನಂತರ ತಿಳಿಯಲಿದೆ, ಇರಲಿ.

ಮಂಡ್ಯದಲ್ಲಿ ಅಂಬರೀಷ್ ಅಭಿಮಾನಿಗಳನ್ನು ನಿರ್ಲಕ್ಷಿಸಿ ಚುನಾವಣೆ ಗೆಲ್ಲುವುದು ಕಷ್ಟವಿದೆ. ಹಾಗಾಗಿ ಕುಮಾರಸ್ವಾಮಿಯವರಿಗೆ ಈಗ ಸುಮಲತಾರ ಬೆಂಬಲ ಬೇಕಾಗಿದೆ. ಇದೆಲ್ಲವನ್ನು ಅಳೆದು ತೂಗಿದ ಕುಮಾರಸ್ವಾಮಿಯವರು, ಪ್ರತಿಷ್ಠೆಯನ್ನು ಪಕ್ಕಕ್ಕಿಟ್ಟು ಸುಮಲತಾರೊಂದಿಗೆ ಸಂದಾನಕ್ಕಿಳಿದಿದ್ದಾರೆ.

ಆದರೆ, ಮಂಡ್ಯದ ಟಿಕೆಟ್‌ಗಾಗಿಯೇ ಸುಮಲತಾ ಬಿಜೆಪಿ ಸೇರಿದ್ದರು. ಟಿಕೆಟ್ ಸಿಗದೆ, ಐದು ವರ್ಷಗಳ ಕಾಲ ತಮ್ಮನ್ನು ಶತ್ರುವಿನಂತೆ ಕಂಡು, ಕಿಡಿ ಕಾರಿದ ಕುಮಾರಸ್ವಾಮಿಯವರಿಗೆ ಸಿಕ್ಕಿದ್ದು ಸಹಿಸಲಸಾಧ್ಯವಾದ ಸಂಕಟಕ್ಕೆ ಕಾರಣವಾಗಿರಬಹುದು. ಮೈತ್ರಿಯ ಕಾರಣಕ್ಕೆ ಅದನ್ನು ಮರೆತರೂ, ಕುಮಾರಸ್ವಾಮಿಯವರು ತಮ್ಮ ವಿರುದ್ಧ ಆಡಿದ ಕೊಳಕು ಮಾತುಗಳನ್ನು ಮರೆಯುವುದು ಸಾಧ್ಯವೇ?

2006ರಲ್ಲಿ ಒಕ್ಕಲಿಗರ ನಾಯಕ ಕುಮಾರಸ್ವಾಮಿಯವರು ಹಾಗೂ ಲಿಂಗಾಯತರ ನಾಯಕ ಯಡಿಯೂರಪ್ಪನವರು ಒಂದಾಗಿ, ಟ್ವೆಂಟಿ ಟ್ವೆಂಟಿ ಸರ್ಕಾರ ರಚಿಸಿದ್ದರು. ರಾಜ್ಯದ ಎರಡು ಬಲಿಷ್ಠ ಜಾತಿಗಳ ಕೈಗೆ ಅಧಿಕಾರ ಸಿಕ್ಕಾಗ, ಫ್ಯೂಡಲ್ ಬುದ್ಧಿ ಬಹಿರಂಗವಾದಾಗ ಸಂಬಂಧ ಸಡಿಲವಾಯಿತು. 20 ತಿಂಗಳು ಮುಖ್ಯಮಂತ್ರಿಯಾಗುವ ಆಸೆಯಲ್ಲಿದ್ದ ಯಡಿಯೂರಪ್ಪನವರು, ನವೆಂಬರ್ 2011ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರೂ, ಜೆಡಿಎಸ್ ಬೆಂಬಲ ಹಿಂತೆಗೆದುಕೊಂಡಿದ್ದರಿಂದ ‘ಸಾತ್ ದಿನ್ ಕ ಸುಲ್ತಾನ್’ ಎನಿಸಿಕೊಳ್ಳಬೇಕಾಯಿತು. ಹಿರಿಯ ನಾಯಕ ಯಡಿಯೂರಪ್ಪನವರು, ಕುಮಾರಸ್ವಾಮಿಯಿಂದಾದ ಮೋಸ, ಅನ್ಯಾಯವನ್ನು ಮರೆಯುವುದುಂಟೇ?

2018ರಲ್ಲಿ ದತ್ತಪೀಠ ವಿವಾದ ಹುಟ್ಟುಹಾಕಿ, ಸಮಾಜದಲ್ಲಿ ಅಶಾಂತಿ ಸೃಷ್ಟಿಸಿದ ಆರೆಸ್ಸೆಸ್, ವಿಎಚ್‌ಪಿ ಮತ್ತು ಬಜರಂಗದಳಗಳ ಕುರಿತು ಕುಮಾರಸ್ವಾಮಿಯವರು, ‘ಈ ಸಂಘಟನೆಗಳು ಸಮಾಜವನ್ನು ವಿಭಜಿಸುತ್ತವೆ. ಇವರು ಶ್ರೀರಾಮನ ಹೆಸರಿನಲ್ಲಿ ಪ್ರತೀ ವರ್ಷ ಮಾಲೆ ಹಾಕಿಕೊಂಡು ತಾಳ ಬಡಿದುಕೊಂಡು ಚಿಕ್ಕಮಗಳೂರಿನ ಬೀದಿಯಲ್ಲಿ ಭಿಕ್ಷೆ ಬೇಡುತ್ತಾರಂತೆ. ದೇವರೇ ಕಾಪಾಡಬೇಕು. ಕೈಜೋಡಿಸಿ ಮನವಿ ಮಾಡುತ್ತೇನೆ ಇದೆಲ್ಲ ಬೇಡ ನಮಗೆ. ಮೊದಲು ನೀವು ಉಳಿದರೆ ತಾನೇ ದೇವರನ್ನು ಉಳಿಸಲು ಸಾಧ್ಯ?’ ಎಂದಿದ್ದರು.

ಈಗ ಅದೇ ಆರೆಸ್ಸೆಸ್, ವಿಎಚ್‌ಪಿ ಮತ್ತು ಬಜರಂಗದಳದ ಕಾರ್ಯಕರ್ತರೊಂದಿಗೆ ಕುಮಾರಸ್ವಾಮಿಯವರು ಕೈ ಬೆಸೆಯಬೇಕಿದೆ. ಕುಮಾರಸ್ವಾಮಿಯವರಿಗೆ ಅನಿವಾರ್ಯವಾದರೂ, ಅವರ ಒಡಲಾಳದ ಉರಿ ಶಮನವಾಗುವುದೇ?

2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿತ್ತು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಆದರೆ 2019ರಲ್ಲಿ ಶಾಸಕರನ್ನು ಖರೀದಿಸಿದ ಯಡಿಯೂರಪ್ಪನವರು ಸಮ್ಮಿಶ್ರ ಸರ್ಕಾರ ಉರುಳಿಸಿ ಮುಖ್ಯಮಂತ್ರಿಯಾದರು. ಕೆಂಡಾಮಂಡಲವಾದ ಕುಮಾರಸ್ವಾಮಿಯವರು, ಸುಮಾರು ನಾಲ್ಕು ವರ್ಷಗಳ ಕಾಲ ನಿರಂತರವಾಗಿ ಯಡಿಯೂರಪ್ಪನವರನ್ನು ಕುಟುಕುತ್ತಲೇ ಇದ್ದರು.

2011ರಲ್ಲಿ ಕುಮಾರಸ್ವಾಮಿಯವರು ಮಾಡಿದ ಮೋಸಕ್ಕೆ ಪ್ರತಿಯಾಗಿ ಯಡಿಯೂರಪ್ಪನವರು 2019ರಲ್ಲಿ ಸರ್ಕಾರವನ್ನು ಉರುಳಿಸಿರಬಹುದು. ಹೀಗೆ ಪರಸ್ಪರ ಕಾದಾಟಕ್ಕಿಳಿದು ಕೆಸರೆರಚಿಕೊಂಡ ನಾಯಕರು, ಈಗ ಮೈತ್ರಿಯ ಕಾರಣಕ್ಕೆ ಒಂದಾದರೆ, ರಾಜ್ಯದ ಜನ ಇವರನ್ನು ನಂಬುತ್ತಾರೆಯೇ?

2023ರಲ್ಲಿ ಕುಮಾರಸ್ವಾಮಿಯವರು, ‘ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಹಾರಾಷ್ಟ್ರ ಭಾಗದ ಪೇಶ್ವೆಗಳ ವಂಶಕ್ಕೆ ಸೇರಿದ ಬ್ರಾಹ್ಮಣರು. ಇವರು ನಮ್ಮ ಕರ್ನಾಟಕದ ಬ್ರಾಹ್ಮಣರಲ್ಲ, ಶೃಂಗೇರಿಯ ಮಠ ಒಡೆದವರು, ಮಹಾತ್ಮ ಗಾಂಧಿ ಕೊಂದವರು. ಬಿಜೆಪಿಗೆ ತಾಕತ್ತಿದ್ದರೆ ಪ್ರಲ್ಹಾದ್ ಜೋಶಿಯೇ ಸಿಎಂ ಅಭ್ಯರ್ಥಿ ಎಂದು ಘೋಷಿಸಲಿ’ ಎಂದು ಆರೆಸ್ಸೆಸ್, ಬಿಜೆಪಿ, ಪ್ರಲ್ಹಾದ್ ಜೋಶಿಗಳ ಹುನ್ನಾರವನ್ನು ಹೊರಹಾಕಿದ್ದರು. ವಿಧಾನಸಭಾ ಚುನಾವಣೆಗೂ ಮುನ್ನ ಪೇಶ್ವೆ ಬ್ರಾಹ್ಮಣರನ್ನು ಬಿಜೆಪಿ ಸಿಎಂ ಮಾಡುತ್ತೇವೆಂದು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದರು.

ಈಗ ಇದೇ ಪೇಶ್ವೆ ಪ್ರಲ್ಹಾದ್ ಜೋಶಿಯವರ ಕುರಿತು ಕುಮಾರಸ್ವಾಮಿಯವರು, ಮಠ ಒಡೆದಿಲ್ಲ, ಗಾಂಧಿ ಕೊಂದಿಲ್ಲ ಎಂದು ಹೇಳುತ್ತಾರೆಯೇ, ಜನ ಅದನ್ನು ನಂಬುತ್ತಾರೆಯೇ?

2023ರ ವಿಧಾನಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಶಾಸಕರ ಸಂಖ್ಯಾಬಲ ಕುಸಿದಿರಬಹುದು, ಪಕ್ಷ ಮುಳುಗಿಹೋಗಿಲ್ಲ. ಮುಸ್ಲಿಮರೇ ಅಧಿಕ ಸಂಖ್ಯೆಯಲ್ಲಿರುವ ರಾಮನಗರ ಕ್ಷೇತ್ರದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಸೋತಿರಬಹುದು, ಜಾತ್ಯತೀತ ತತ್ವಕ್ಕೆ ತಿಲಾಂಜಲಿ ಇಡಬೇಕಾದ ಅಗತ್ಯವಿರಲಿಲ್ಲ. ಕಡುವಿರೋಧಿಗಳಾದ ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್ ರಾಜ್ಯ ರಾಜಕಾರಣವನ್ನು ಆವರಿಸಿಕೊಳ್ಳುತ್ತಿರಬಹುದು, ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇರಲಿಲ್ಲ.

ಇದನ್ನೂ ಮೀರಿ, ಕುಮಾರಸ್ವಾಮಿಯವರಿಗೆ ಹೆಚ್ಚಿನ ಆಯ್ಕೆಗಳು ಇರಲಿಲ್ಲವೆಂದರೂ; ತತ್ವ-ಸಿದ್ಧಾಂತಗಳು, ಸರಿ-ತಪ್ಪುಗಳ ಜಿಜ್ಞಾಸೆಯಲ್ಲಿ ಕಾಲಹರಣ ಮಾಡುವುದು ರಾಜಕಾರಣವಲ್ಲ ಎಂದಿಟ್ಟುಕೊಂಡರೂ; ಭಾರತೀಯ ಸಂಸ್ಕೃತಿ, ಸನಾತನ ಧರ್ಮ, ದೇಶ ಭಕ್ತಿಯನ್ನು ಪ್ರತಿಪಾದಿಸುವ ಹಿಂದೂ ನಾಯಕನಾಗಿ ಬದಲಾಗುವುದು ಕುಮಾರಸ್ವಾಮಿಯವರಿಗೆ ಕಷ್ಟವಿದೆ. ಈ ಕುರಿತು ತಾವು ಆಡಿದ ಮಾತುಗಳನ್ನು ತಾವೇ ನುಂಗಬೇಕಾದ ಅನಿವಾರ್ಯತೆ ಎದುರಾಗಲಿದೆ.

ಎದುರಾಗಲಿರುವ ಈ ಅನಿವಾರ್ಯತೆಗೂ, ಕಷ್ಟಕ್ಕೂ ಕುಮಾರಸ್ವಾಮಿಯವರು ಸಿದ್ಧರಾಗಿದ್ದಾರೆ. ಏಕೆಂದರೆ ಮೈತ್ರಿಯಿಂದ ಲಾಭವಿದೆ. ಅಕಸ್ಮಾತ್ ಕುಮಾರಸ್ವಾಮಿ, ಪ್ರಜ್ವಲ್, ಡಾ. ಮಂಜುನಾಥ್ ಗೆದ್ದರೆ, ಮೂವರು ಲೋಕಸಭೆಯಲ್ಲಿ, ದೇವೇಗೌಡರು ರಾಜ್ಯಸಭೆಯಲ್ಲಿ ಪ್ರತಿಷ್ಠಾಪಿಸಲ್ಪಡುತ್ತಾರೆ. ನಾಲ್ವರಲ್ಲಿ ಒಬ್ಬರು ಸಚಿವರಾದರೆ, ಅದು ತರುವ ಅಧಿಕಾರ, ಹಣ, ಸುರಕ್ಷತೆ- ಕುಟುಂಬವನ್ನು ಕಾಪಾಡಲಿದೆ ಎಂಬುದು ಗೌಡರ  ಲೆಕ್ಕಾಚಾರ. ಇದು ರಾಜ್ಯದ ಜನತೆಗೆ ಅರ್ಥವಾಗಬೇಕಾಗಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ನಕಲಿ ಆಹಾರ ಮತ್ತು ಔಷಧ: ಜನರ ಜೀವದ ಜೊತೆ ಚೆಲ್ಲಾಟ

ಆಹಾರ ಮತ್ತು ಔಷಧಗಳ ಉತ್ಪಾದನೆ, ಸಂಗ್ರಹಣೆ ಹಾಗೂ ವಿತರಣಾ ವ್ಯವಸ್ಥೆಯಲ್ಲಿ ನಡೆಯುವ...

ಈ ದಿನ ಸಂಪಾದಕೀಯ | ಸಾಮರಸ್ಯ ಇರಲೆನ್ನುವ ಆರೆಸ್ಸೆಸ್, ಸಮಾನತೆ ಬೇಕೆಂದು ಸಾರುವುದಿಲ್ಲವೇಕೆ?

ಜಾತಿಪದ್ಧತಿಯೊಂದಿಗೆ ರಾಜಿ ಮಾಡಿಕೊಂಡ ಆರೆಸ್ಸೆಸ್ ಪ್ರಣೀತ ಸಾಮರಸ್ಯ ವಾದದಿಂದ ಅಸ್ಪೃಶ್ಯರು, ದಲಿತರು...

ಈ ದಿನ ಸಂಪಾದಕೀಯ | ಅಮೆರಿಕ ದಾದಾಗಿರಿಗೆ ಮೋದಿ ಮೌನ- ರಾಜತಾಂತ್ರಿಕತೆಯಲ್ಲ, ಶರಣಾಗತಿ!

ಅಮೆರಿಕ ಜೊತೆಗಿನ ಭಾರತದ ನಂಟು 'ಸಮಾನ ಸಾರ್ವಭೌಮತ್ವ'ದ ಮೇಲೆ ಆಧಾರಿತವಾಗಿರಬೇಕೇ ಹೊರತು,...

ಈ ದಿನ ಸಂಪಾದಕೀಯ | ಯಾರು ದೇಶದ್ರೋಹಿಗಳು? ಮೋದಿ ಭಾರತದ ಹೊಸ ನಿರೂಪಣೆ ಅಪಾಯಕಾರಿ

ಮೋದಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿಯೇತರ ಪಕ್ಷಗಳ ಮುಖಂಡರನ್ನು, ಬಿಜೆಪಿ ವಿರೋಧಿಗಳನ್ನು,...