ಮುಖ್ಯಧಾರೆಯ ಮಾಧ್ಯಮಗಳ ಹೊರತಾಗಿ ಸ್ವತಂತ್ರವಾಗಿ ಕೆಲಸ ಮಾಡುತ್ತ ತಮ್ಮದೇ ವೇದಿಕೆಗಳನ್ನು ನಿರ್ಮಿಸಿಕೊಂಡ ಪತ್ರಕರ್ತರು ಪತ್ರಿಕೋದ್ಯಮವನ್ನು ಜೀವಂತವಾಗಿಟ್ಟಿದ್ದಾರೆ. ಇವರ ನ್ಯಾಯ-ನಿಷ್ಠುರದ ಧ್ವನಿ, ಜನಪರ ನಿಲುವು ಎಲ್ಲರಿಗೂ ಇಷ್ಟವಾಗುತ್ತಿದೆ. ಇದು ಒಬ್ಬ ವ್ಯಕ್ತಿಯ ಸಾಧನೆಗೆ ಮಾತ್ರ ಸೀಮಿತವಲ್ಲ, ಭಾರತೀಯ ಮಾಧ್ಯಮದ ಆತ್ಮಾವಲೋಕನಕ್ಕೂ ಅಗತ್ಯವಾಗಿದೆ.
ಪತ್ರಕರ್ತ ಪ್ರಣಯ್ ರಾಯ್ ಅವರಿಗೆ ಈಗ 76ರ ಹರೆಯ. ಈ ವಯಸ್ಸಿನಲ್ಲೂ ಒಂದು ಕೈಯಲ್ಲಿ ಮೈಕ್ ಹಾಗೂ ಇನ್ನೊಂದರಲ್ಲಿ ಮೊಬೈಲ್ ಹಿಡಿದು, ಉತ್ಸಾಹಿ ವರದಿಗಾರನಂತೆ ಖುದ್ದಾಗಿ ಕಣಕ್ಕಿಳಿದು ಚುನಾವಣೆಯನ್ನು ಕವರ್ ಮಾಡುತ್ತಿದ್ದಾರೆ. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸುದ್ದಿ ಮಾಡುತ್ತಿದ್ದವರೇ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದ್ದಾರೆ. ಸದ್ದು ಮಾಡುತ್ತಿದ್ದಾರೆ.
ಪ್ರಣಯ್ ರಾಯ್ ಎನ್ಡಿಟಿವಿ ಕಟ್ಟಿ ನಿಲ್ಲಿಸಿದ ಕಲಿ. ಅದು ಒಂದು ಕಾಲದ ಪ್ರತಿಷ್ಠಿತ ಸುದ್ದಿ ಸಂಸ್ಥೆ. ಕೇವಲ ಸುದ್ದಿ ವಾಹಿನಿಯಷ್ಟೇ ಅಲ್ಲ, ಜನರ ನಂಬಿಕೆಯ ಸಂಕೇತವಾಗಿತ್ತು. ಸತ್ಯಕ್ಕೆ ಹತ್ತಿರವಾದ ವರದಿಗಾರಿಕೆಗೆ ಹೆಸರಾಗಿತ್ತು. ಪ್ರಚೋದನೆಗಿಂತ ಮಾಹಿತಿ ಮತ್ತು ವಿಶ್ಲೇಷಣೆಗೆ ಒತ್ತು ನೀಡುತ್ತಿತ್ತು. ವಿಷಯ ಮಂಡನೆಯಲ್ಲಿ ಶಾಂತ ಶೈಲಿ ರೂಢಿಸಿಕೊಂಡಿತ್ತು. ಅದರಲ್ಲೂ ಭಾರತೀಯ ಚುನಾವಣಾ ಡೇಟಾ ವಿಶ್ಲೇಷಣೆಯಲ್ಲಿ ಮುಂಚೂಣಿಯಲ್ಲಿತ್ತು. ಪ್ರಭುತ್ವದ ವಿರುದ್ಧ ಪ್ರಶ್ನಿಸುವ ಧೈರ್ಯ ಮೈಗೂಡಿಸಿಕೊಂಡಿತ್ತು. ಆ ಸುದ್ದಿ ಸಂಸ್ಥೆಯ ಭಾಗವಾಗುವುದು, ಅಲ್ಲಿಯ ಚರ್ಚೆಗಳಲ್ಲಿ ಗುರುತಿಸಿಕೊಳ್ಳುವುದು ಹೆಮ್ಮೆಯ ವಿಷಯವೆನಿಸಿತ್ತು. ಅಂತಹ ಸುದ್ದಿ ಸಂಸ್ಥೆಯ ಮುಖ್ಯಸ್ಥ ಕಮ್ ಮಾಲೀಕ ಪ್ರಣಯ್ ರಾಯ್, ಅತ್ಯಂತ ಪ್ರಭಾವಿ ಮತ್ತು ವರ್ಚಸ್ವಿ ಪತ್ರಕರ್ತ ಎಂಬ ಹೆಸರು ಪಡೆದಿದ್ದರು.
ಇಂತಹ ಪ್ರಭಾವಿ ಪತ್ರಕರ್ತರನ್ನು ಒಳಗೊಂಡ ಎನ್ಡಿಟಿವಿ ಸುದ್ದಿ ಸಂಸ್ಥೆ ಕೊಂಚಮಟ್ಟಿಗೆ ಎಡಪಂಥೀಯ ವಿಚಾರಧಾರೆಯತ್ತ ಒಲವು ಇಟ್ಟುಕೊಂಡಿತ್ತು. ಪ್ರಗತಿಪರ ಮತ್ತು ಜಾತ್ಯತೀತ ಮೌಲ್ಯಗಳನ್ನು ಅಳವಡಿಸಿಕೊಂಡಿತ್ತು. 2014ರ ನಂತರ, ಇದು ಬದಲಾದ ಭಾರತದಲ್ಲಿ, ಪ್ರಧಾನಿ ಮೋದಿಯವರ ಕೆಂಗಣ್ಣಿಗೆ ಗುರಿಯಾಯಿತು. ಹಣಕಾಸು ಮತ್ತು ಮಾಲೀಕತ್ವದ ವಿವಾದಗಳನ್ನು ಮುನ್ನಲೆಗೆ ತಂದು ಸಂಸ್ಥೆ ಮೇಲೆ ಇಡಿ, ಐಟಿ ದಾಳಿ ಮಾಡಿಸಲಾಯಿತು. ಅದು ಗೋದಿ ಮೀಡಿಯಾಗಳಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಯಿತು. ಪ್ರಭುತ್ವವನ್ನು ಪ್ರಶ್ನಿಸುತ್ತಿದ್ದ ಪತ್ರಕರ್ತರ ನೈತಿಕ ಸ್ಥೈರ್ಯ ಕುಗ್ಗಿಸಲಾಯಿತು. ಕೊನೆಗೆ ಸಂಸ್ಥೆಯನ್ನು ಮೋದಿ ಆಪ್ತ ಅದಾನಿಗೆ ಮಾರಿ ಹೊರಬರುವಂತಹ ಸಂದರ್ಭ ಸೃಷ್ಟಿಸಲಾಯಿತು. ಎನ್ಡಿಟಿವಿಯಿಂದ ಹೊರಬಂದ ನಂತರ ಪ್ರಣಯ್ ರಾಯ್ ಅವರ ಚಾಲ್ತಿ, ವರ್ಚಸ್ಸು, ಪ್ರಭಾವ ಕರಗತೊಡಗಿತು. ಖಿನ್ನತೆ ಆವರಿಸಿ ಮನೆಯಿಂದ ಹೊರಬರದ ಸ್ಥಿತಿ ನಿರ್ಮಾಣವಾಯಿತು.
ಇದನ್ನು ಓದಿದ್ದೀರಾ?: ಮಹಿಳಾ ಮೀಸಲಾತಿ ಮರೆಯಲ್ಲಿ ಮೋದಿ ಸರ್ಕಾರದ ಮಸಲತ್ತು!
ಜೀವನದಲ್ಲಿ ಏರಿಳಿತಗಳು ಸಾಮಾನ್ಯ ಎಂದು ಪ್ರಣಯ್ ರಾಯ್ ವಿಶ್ರಾಂತಿ ಜೀವನದತ್ತ ಮನಸ್ಸು ಹರಿಸಬಹುದಿತ್ತು. ಆದರೆ ಅವರೊಳಗಿದ್ದ ಪತ್ರಕರ್ತ ಅವರನ್ನು ಸುಮ್ಮನಿರಲು ಬಿಡಲಿಲ್ಲ. ಡಿಜಿಟಲ್ ಮಾಧ್ಯಮದ ಮೊರೆ ಹೋದರು, ತಮ್ಮದೇ ಆದ ‘ಡಿಕೋಡರ್’ ಎಂಬ ಯೂಟ್ಯೂಬ್ ಚಾನಲ್ ಆರಂಭಿಸಿದರು. ಅದರಲ್ಲೂ ಐದು ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟವಾಗುತ್ತಿದ್ದಂತೆ, ವಯಸ್ಸನ್ನೂ ಲೆಕ್ಕಿಸದೆ ಮೈ ಕೊಡವಿ ಎದ್ದುನಿಂತರು. ಮೈಕ್ ಮತ್ತು ಮೊಬೈಲ್ ಹಿಡಿದು, ಖುದ್ದು ವರದಿ ಮಾಡಲಿಕ್ಕಾಗಿ ಹೊರಟೇಬಿಟ್ಟರು. ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳದ ಮತದಾರರೊಂದಿಗೆ ಕೂತು ಚುನಾವಣಾ ಚಿತ್ರಗಳನ್ನು, ತಾಜಾ ಸುದ್ದಿಗಳನ್ನು ದೇಶಕ್ಕೆ ಹಂಚತೊಡಗಿದರು.
ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಪ್ರಣಯ್ ರಾಯ್ರ ಸುದ್ದಿಗಳು, ಮುಖ್ಯವಾಹಿನಿಗಳಿಗಿಂತ ಹೆಚ್ಚಿನ ವಿಶ್ವಾಸಾರ್ಹತೆಯನ್ನು ಹೊಂದಿವೆ. ಇವರ ನ್ಯಾಯ-ನಿಷ್ಠುರದ ಧ್ವನಿ ಸ್ವತಂತ್ರ ಪತ್ರಿಕೋದ್ಯಮದ ಬ್ರ್ಯಾಂಡ್ ಆಗುತ್ತಿದೆ. ಅವರ ಜನಪರ ನಿಲುವು ಎಲ್ಲರಿಗೂ ಇಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಣಯ್ ರಾಯ್ ಅವರ ವೃತ್ತಿಧರ್ಮ ಮತ್ತು ಬದ್ಧತೆ ಮರುಮೌಲ್ಯಮಾಪನಗೊಳ್ಳುತ್ತಿದೆ, ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಮಾಧ್ಯಮ ಕ್ಷೇತ್ರವು ರಾಜಕೀಯ ಮತ್ತು ಕಾರ್ಪೊರೇಟ್ ಪ್ರಭಾವಕ್ಕೊಳಗಾಗಿದೆ. ಸುದ್ದಿಗಳ ಸ್ವರೂಪ ಬದಲಾಗುತ್ತಿದೆ ಎಂಬ ಗಂಭೀರ ಟೀಕೆಗಳು ಕೇಳಿಬರುತ್ತಿವೆ. ಮಾಧ್ಯಮಗಳು ಅಧಿಕಾರಸ್ಥರ ಮಡಿಲ ಮಾಧ್ಯಮಗಳಾಗಿ ದಿಕ್ಕು ತಪ್ಪುತ್ತಿರುವುದರ ಬಗ್ಗೆ ಸಮಾಜದ ಆತಂಕ ಹೆಚ್ಚಾಗುತ್ತಿದೆ. ವಿಶ್ವಾಸಾರ್ಹತೆ, ನಿಷ್ಠುರತೆ ಮತ್ತು ಸಂಪಾದಕೀಯ ಸ್ವಾತಂತ್ರ್ಯ ಎಂಬ ಮೌಲ್ಯಗಳು ದಿನದಿಂದ ದಿನಕ್ಕೆ ಚರ್ಚೆಯ ವಿಷಯಗಳಾಗುತ್ತಿವೆ.
ಈ ಹಿನ್ನೆಲೆಯಲ್ಲೇ, ಪ್ರಣಯ್ ರಾಯ್ ಅವರಂತಹ ಪತ್ರಕರ್ತರ ‘ಸ್ವತಂತ್ರ ಧ್ವನಿ’ಗಳ ಅಗತ್ಯ ಅನಿವಾರ್ಯವಾಗುತ್ತಿದೆ. ಸದ್ಯದ ಸ್ಥಿತಿಯಲ್ಲಿ ಪ್ರಣಯ್ ರಾಯ್ ಒಬ್ಬರೇ ಅಲ್ಲ, ಅವರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋದ, ಅತ್ಯಂತ ನಿಖರವಾಗಿ, ಸ್ಪಷ್ಟವಾಗಿ, ಕರಾರುವಾಕ್ಕಾಗಿ ವಿಚಾರ ಮಂಡಿಸುವ ಸ್ವತಂತ್ರ ಪತ್ರಕರ್ತರ ದಂಡು ಮೋದಿಯಿಂದ ಭಾರತವನ್ನು ಬಚಾವು ಮಾಡುವ ಕಾರ್ಯದಲ್ಲಿ ನಿರತವಾಗಿದೆ.
ಮುಖ್ಯಧಾರೆಯ ಮಾಧ್ಯಮಗಳ ಹೊರತಾಗಿ ಸ್ವತಂತ್ರವಾಗಿ ಕೆಲಸ ಮಾಡುತ್ತ ತಮ್ಮದೇ ವೇದಿಕೆಗಳನ್ನು ನಿರ್ಮಿಸಿಕೊಂಡ ಪತ್ರಕರ್ತರಲ್ಲಿ ಪ್ರಮುಖರಾದವರೆಂದರೆ, ರವೀಶ್ ಕುಮಾರ್, ಧ್ರುವ್ ರಾಠಿ, ಬರ್ಖಾ ದತ್, ಫಾಯೆ ಡಿಸೋಜ, ಅಜಿತ್ ಅಂಜುಂ, ಪುಣ್ಯ ಪ್ರಸುನ್ ಬಾಜಪೈ, ಅಭಿಸರ್ ಶರ್ಮಾ, ಅಶ್ರಫ್ ಖಾನುಂ ಶೆರ್ವಾನಿ, ನೇಹಾ ದೀಕ್ಷಿತ್ ಮತ್ತು ಜೋಸಿ ಜೋಸೆಪ್.
ಇವತ್ತು ದೇಶದಲ್ಲಿ ಆಳುವ ಪಕ್ಷದ ವಿರುದ್ಧ ಬಹಳ ದೊಡ್ಡ ಜನದನಿಯಾಗಿ ಹೊರಹೊಮ್ಮಿದವರು 51ರ ಹರೆಯದ ರವೀಶ್ ಕುಮಾರ್. ಇವರು ಎನ್ಡಿಟಿವಿಯ ಭಾಗವಾದಾಗ ಪತ್ರಿಕೋದ್ಯಮದ ವಲಯದಲ್ಲಿ ಪರ-ವಿರೋಧ ನಿಲುವುಗಳಿದ್ದವು. ಪ್ರಣಯ್ ರಾಯ್ ಮೇಲೆ ಹಣಕಾಸಿನ ವಹಿವಾಟಿಗೆ ಸಂಬಂಧಿಸಿದ ಕೆಲ ಆರೋಪಗಳೂ ಇದ್ದವು. ತುಂಬಾ ಚೆನ್ನಾಗಿ ಇಂಗ್ಲಿಷ್ ಬಲ್ಲ, ಮಾತಿನ ಚಮತ್ಕಾರಿಕೆಯಿಂದಲೇ ಎಲ್ಲರನ್ನು ಗೆಲ್ಲುವ-ಮರೆಸುವ ಚತುರ ಎಂಬ ಮಾತೂ ಇತ್ತು. ಜೊತೆಗೆ ಎಡಪಂಥೀಯ ಬುದ್ಧಿಜೀವಿ ವಲಯ ಹಾಗೂ ಉನ್ನತ ಅಧಿಕಾರಿಗಳ ಎಲೀಟ್ ಗ್ರೂಪ್ಗಳನ್ನು ಬುದ್ಧಿವಂತಿಕೆಯಿಂದ ಬಳಸಿಕೊಂಡು ಕಂಫರ್ಟ್ ಝೋನ್ನಲ್ಲಿ ಕೂಲಾಗಿದ್ದಾರೆ ಎಂಬ ಅಪವಾದವೂ ಇತ್ತು. ಜೊತೆಗೆ ಬಹುಜನರಿಂದ ದೂರ ಎಂಬ ದೂರೂ ಇತ್ತು. ಈ ಕೊರತೆಯನ್ನು ನೀಗಿದವರು ರವೀಶ್ ಕುಮಾರ್. ಅವರ ಸರಳ ಹಿಂದಿ ಮಾತು, ತಣ್ಣಗಿನ ನಿರೂಪಣೆ, ವಿಷಯವನ್ನು ಸ್ಪಷ್ಟವಾಗಿ, ನೇರವಾಗಿ ವೀಕ್ಷಕರ ಎದೆಗಿಳಿಸುವ ಬಗೆ ಬೆರಗುಟ್ಟಿಸುವಂಥದ್ದು.
ಇದನ್ನು ಓದಿದ್ದೀರಾ?: ಸಮರಕ್ಕೂ ಮುನ್ನ ಶಸ್ತ್ರತ್ಯಾಗ ಮಾಡಿದರೇ ದಳಪತಿ ವಿಜಯ್?
ಅದರಲ್ಲೂ ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದ ವಿಷಯಗಳು, ಮಂಡಿಸುತ್ತಿದ್ದ ರೀತಿ- ಅವು ಬರಿ ಕಾರ್ಯಕ್ರಮಗಳಲ್ಲ, ಸಾಮಾನ್ಯ ಜನರ ನೋವು, ಸಂಕಟ, ಸಮಸ್ಯೆಗಳತ್ತ ಬೆಳಕು ಚೆಲ್ಲುತ್ತಲೇ, ಪತ್ರಿಕೋದ್ಯಮವನ್ನು ಪಳಗಿಸಿದಂಥವು. ಜನರು ಮತ್ತು ಸರಕಾರದ ನಡುವೆ ಸೇತುವೆಯಂತೆ ಕೆಲಸ ಮಾಡುತ್ತ; ಸರಕಾರದ ಯೋಜನೆಗಳ ಮಾಹಿತಿ ಜನರಿಗೂ, ಜನರ ಸಮಸ್ಯೆಗಳನ್ನು ಸರಕಾರಕ್ಕೂ ತಲುಪಿಸಿದಂಥವು. ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವದ ಬಹಳ ಮುಖ್ಯ ಅಂಶ ಎನ್ನುವುದನ್ನು ಪತ್ರಕರ್ತರಿಗೆ ಪಾಠ ಹೇಳಿಕೊಡುತ್ತ; ಹೆಚ್ಚೂಕಡಿಮೆ ಸತ್ತೇಹೋಗಿದ್ದ ಗ್ರೌಂಡ್ ರಿಪೋರ್ಟಿಂಗ್ನ ಮಹತ್ವವನ್ನು ಮನದಟ್ಟು ಮಾಡಿಸಿದ ಕಾರ್ಯಕ್ರಮಗಳು. ಇಂದು ಇದೇ ಗ್ರೌಂಡ್ ರಿಪೋರ್ಟಿಂಗ್ನತ್ತ ಅವರ ಒಂದು ಕಾಲದ ಬಾಸ್ ಪ್ರಣಯ್ ರಾಯ್ ಹೆಜ್ಜೆಯಿಟ್ಟು ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ. ಸ್ವತಂತ್ರ ಪತ್ರಿಕೋದ್ಯಮವನ್ನು ಬಲಗೊಳಿಸುತ್ತಿದ್ದಾರೆ.
ಇನ್ನು 32ರ ಹರೆಯದ ಧ್ರುವ್ ರಾಠಿ ಎನ್ನುವ ಯುವಕನ ಸಾಮಾಜಿಕ ಕಾಳಜಿ, ರಾಜಕೀಯ ಚಿಂತನೆ ಮತ್ತು ಪರಿಸರ ಸಮಸ್ಯೆಗಳ ಕುರಿತ ವೀಡಿಯೊಗಳು, ದಾಖಲೆಗಳನ್ನಿಟ್ಟು ವಿಷಯ ಮಂಡಿಸುವ ಬಗೆ ಬೆರಗುಟ್ಟಿಸುವಂತಿದೆ. ಒಂದೊಂದು ವಿಡಿಯೋಗಳೂ ಲಕ್ಷಾಂತರ ನೋಡುಗರನ್ನು ತಲುಪಿ, ಜಾಗೃತಿಯನ್ನುಂಟು ಮಾಡುತ್ತಿರುವುದು ಸ್ವತಂತ್ರ ಪತ್ರಿಕೋದ್ಯಮ ಸಾಗಬೇಕಾದ ದಿಕ್ಕನ್ನು ಸ್ಪಷ್ಟಪಡಿಸುತ್ತಿದೆ. ಇದು ಒಬ್ಬ ವ್ಯಕ್ತಿಯ ಸಾಧನೆಗೆ ಮಾತ್ರ ಸೀಮಿತವಲ್ಲ, ಭಾರತೀಯ ಮಾಧ್ಯಮದ ಆತ್ಮಾವಲೋಕನಕ್ಕೂ ಅಗತ್ಯವಾಗಿದೆ. ಸ್ವತಂತ್ರ ಪತ್ರಿಕೋದ್ಯಮ ಈ ಕಾಲದ ಭರವಸೆಯಾಗಿದೆ.





