ಆಳುವ ಡಿಎಂಕೆ ಪಕ್ಷದ ಸೈದ್ಧಾಂತಿಕ ನಿಲುವನ್ನೇ ವಿಜಯ್ ಪ್ರತಿಪಾದಿಸುತ್ತಿರುವುದು- ತಮಿಳುನಾಡಿನ ಜನಕ್ಕೆ ಭಿನ್ನವಾಗಿ ಕಾಣುತ್ತಿಲ್ಲ. ಜಾತಿ ರಾಜಕಾರಣ, ಚುನಾವಣಾ ಭ್ರಷ್ಟಾಚಾರ- ವಿಜಯ್ ಅಂಕೆಗೂ ಸಿಗುತ್ತಿಲ್ಲ. ಚುನಾವಣೆ ಹತ್ತಿರವಾದಂತೆಲ್ಲ ಇದು ದಳಪತಿ ವಿಜಯ್ ಅರಿವಿಗೂ ಬಂದಿರಬಹುದು.
ಪಕ್ಕದ ತಮಿಳುನಾಡು ಚುನಾವಣೆಗೆ ಕೇವಲ ಒಂದು ವಾರ ಬಾಕಿ ಇದೆ. ಬಿರು ಬಿಸಿಲಿಗೇ ಕಾವೇರಿಸುವಂತೆ ಬಿರುಸಿನ ಪ್ರಚಾರ ನಡೆಯುತ್ತಿದೆ. ಮತದಾರರನ್ನು ಓಲೈಸುವ ಕೊನೆ ಹಂತದ ಕಸರತ್ತು ಬಿರುಸು ಪಡೆಯುತ್ತಿದೆ. ಇಂತಹ ನಿರ್ಣಾಯಕ ಘಟ್ಟದಲ್ಲಿ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ಅಧ್ಯಕ್ಷ ದಳಪತಿ ವಿಜಯ್, ತಮ್ಮ ಹಲವು ಚುನಾವಣಾ ರ್ಯಾಲಿಗಳನ್ನು ದಿಢೀರ್ ರದ್ದು ಮಾಡಿದ್ದಾರೆ. ಚುನಾವಣಾ ಆಯೋಗದಿಂದ ಅನುಮತಿ ಸಿಕ್ಕಿದ್ದರೂ ವಿಲ್ಲಿವಾಕ್ಕಂ, ತಿರುವಳ್ಳೂರು, ಚೆನ್ನೈನ ಟಿ.ನಗರದಲ್ಲಿ ನಡೆಯಬೇಕಿದ್ದ ಚುನಾವಣೆ ರ್ಯಾಲಿಗಳನ್ನು ರದ್ದು ಪಡಿಸಲಾಗಿದೆ.
ಇದು ತಮಿಳುನಾಡಿನ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯ ವಸ್ತುವಾಗಿದೆ. ವಿಜಯ್ ಅವರ ಈ ರಾಜಕೀಯ ನಡೆ, ಅವರ ವಿರೋಧಿಗಳಲ್ಲಿ ಕುತೂಹಲ ಕೆರಳಿಸಿದೆ. ಸೋಲು-ಗೆಲುವಿನ ಲೆಕ್ಕಾಚಾರಕ್ಕೆ ಹಚ್ಚಿದೆ. ಡಿಎಂಕೆ ನಾಯಕರಿಗೆ ‘ವರ್ಕ್ ಫ್ರಂ ಹೋಮ್ ಪ್ರಚಾರ’ವೆಂಬ ಗೇಲಿಯ ವಸ್ತುವಾಗಿ ಬಳಕೆಯಾಗುತ್ತಿದೆ.
ಮತ್ತೊಂದೆಡೆ, ಸಭೆಗಳು ರದ್ದಾಗುತ್ತಿರುವುದರಿಂದ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ. ಟಿವಿಕೆ ಪಕ್ಷದ ಅಭ್ಯರ್ಥಿಗಳು ಕಂಗಾಲಾಗಿ, ವಿಜಯ್ ಅಲಭ್ಯತೆ ತುಂಬಿಕೊಳ್ಳಲು ಹೊಸ ಹಾದಿ ಹಿಡಿದಿದ್ದಾರೆ. ತಿರುವೇರುಂಬೂರ್ ಅಭ್ಯರ್ಥಿ ವಿಜಯ್ ಅವರ ಕಟೌಟ್ ಬಳಸಿ ಪ್ರಚಾರ ಮಾಡುತ್ತಿದ್ದರೆ; ಕೊಳತ್ತೂರು ಅಭ್ಯರ್ಥಿ ವಿಜಯ್ ಅವರಂತೆ ಕಾಣುವ ವ್ಯಕ್ತಿಯನ್ನು ಕರೆಸಿ ಮತಯಾಚನೆ ಮಾಡುತ್ತಿದ್ದಾರೆ. ಕಳೆದ ವರ್ಷ ಕರೂರ್ನಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ 41 ಜನರು ಸಾವನ್ನಪ್ಪಿದ್ದನ್ನು, ಅದು ಈಗಲೂ ಸಿಬಿಐ ವಿಚಾರಣೆಗೊಳಪಡುತ್ತಿರುವುದನ್ನು ನೆನಪಿಸುತ್ತ, ಈ ದುರಂತದ ನಂತರ ವಿಜಯ್ ಸಾರ್ವಜನಿಕ ಸಭೆಗಳ ಬಗ್ಗೆ ಅತ್ಯಂತ ಎಚ್ಚರಿಕೆ ವಹಿಸುತ್ತಿದ್ದಾರೆ ಎಂದು ಸಮಜಾಯಿಷಿ ನೀಡುತ್ತಿದ್ದಾರೆ.
ಆದರೆ, ಟಿವಿಕೆ ಅಧ್ಯಕ್ಷ ವಿಜಯ್ ಅವರ ಈ ಹೊಸ ಬೆಳವಣಿಗೆ ಸಮರಕ್ಕೂ ಮುನ್ನವೇ ಶಸ್ತ್ರತ್ಯಾಗ ಮಾಡಿದ ಯೋಧನನ್ನು ನೆನಪಿಸುತ್ತಿದೆ.
ಇದನ್ನು ಓದಿದ್ದೀರಾ?: ಹಿತಾಸಕ್ತಿಗಳ ತಾಕಲಾಟ- ನ್ಯಾ.ಸ್ವರ್ಣಕಾಂತ ಶರ್ಮ ವಿಚಾರಣೆಯಿಂದ ಹಿಂದೆ ಸರಿಯಲಿ
ತಮಿಳುನಾಡಿನ ಜನಜೀವನವನ್ನು, ಭಾಷಾಭಿಮಾನವನ್ನು, ಅತಿರೇಕಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಅಲ್ಲಿನ ಜನರ ನರನಾಡಿಗಳಲ್ಲಿ ಸಿನೆಮಾ ಬೆರೆತುಹೋಗಿರುವುದಕ್ಕೆ ಪುರಾವೆ ಸಿಗುತ್ತದೆ. ಚಿತ್ರರಂಗದ ನಟನಟಿಯರು ನಾಯಕರಾಗಿ ಹೊರಹೊಮ್ಮಿರುವುದು, ರಾಜಕಾರಣಕ್ಕೆ ಬಂದು ರಾಜ್ಯವಾಳಿರುವುದು ಎದ್ದು ಕಾಣುತ್ತದೆ. 10 ವರ್ಷ ಮುಖ್ಯಮಂತ್ರಿಯಾಗಿ ಮೆರೆದ ಜನಪ್ರಿಯ ಚಿತ್ರನಟ ಎಂಜಿಆರ್ ತಮಿಳಿರ ಆರಾದ್ಯದೈವವೇ ಆಗಿಹೋಗಿದ್ದಾರೆ. ಹಾಗೆಯೇ 14 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಳಿದ ಚಿತ್ರನಟಿ ಜಯಲಲಿತಾ ತಮಿಳರ ‘ಅಮ್ಮ’ನಾಗಿ ಚರಿತ್ರೆಯ ಪುಟಗಳಲ್ಲಿ ದಾಖಲಾಗಿದ್ದಾರೆ. ಇವರಿಬ್ಬರಿಗೂ ಮೊದಲೇ ಸಿನೆಮಾ ಕ್ಷೇತ್ರದಿಂದ ರಾಜಕಾರಣಕ್ಕಿಳಿದು, 19 ವರ್ಷಗಳ ಕಾಲ ತಮಿಳುನಾಡನ್ನು ಆಳಿದ ಕರುಣಾನಿಧಿ, ಶೂದ್ರ ಸಂಕೇತವಾಗಿ-ದ್ರಾವಿಡ ಅಸ್ಮಿತೆಯಾಗಿ ಅಜರಾಮರರಾಗಿದ್ದಾರೆ.
ಇವರೆಲ್ಲರೂ ತಮಿಳರ ಅಂತರಂಗವನ್ನು ಅರಿತಿದ್ದರು. ಜನರೊಂದಿಗೇ ಬೆರೆತು ಬದುಕಿದವರು. ಜನನಾಯಕರೆನಿಸಿಕೊಂಡವರು. ಕರುಣಾನಿಧಿಯವರ ಒರಟು ವರ್ತನೆಯ ಕಾರಣಕ್ಕೆ ರಕ್ಷಾಕವಚ ತೊಟ್ಟು, ಸುರಕ್ಷಿತ ವಲಯದಲ್ಲಿ ಮಾತ್ರ ಕಾಣಿಸಿಕೊಂಡರೂ, ಜಯಲಲಿತಾ ಕೂಡ ತಮಿಳರ ‘ಅಮ್ಮ’ನ ಪಟ್ಟವನ್ನು ಅಲಂಕರಿಸಿದವರು. ಆದರೆ, ಅದೇ ಮಾತುಗಳನ್ನು, ಅದೇ ಸಿನೆಮಾ ಕ್ಷೇತ್ರದಿಂದ ಬಂದ ವಿಜಯಕಾಂತ್, ಕಮಲಾಹಾಸನ್ ಮತ್ತು ರಜನೀಕಾಂತ್ರಿಗೆ ಹೇಳಲಾಗುವುದಿಲ್ಲ. ಇವರೆಲ್ಲರೂ ಅಪಾರ ಅಭಿಮಾನಿಗಳನ್ನು ಹೊಂದಿದ್ದರೂ, ತಮಿಳರ ಹೃದಯದಲ್ಲಿ ಹಾಲು-ನೀರಿನಂತೆ ಬೆರೆತವರಲ್ಲ. ಇವತ್ತಿನ ಚುನಾವಣಾ ರಾಜಕಾರಣ ಈ ನಾಯಕರ ಆಕ್ಷನ್-ಕಟ್ ಸಿನೆಮಾದಂತಲ್ಲ. ಅಭಿಮಾನಿಗಳು ಮತದಾರರಾಗಿ ಬದಲಾಗುವುದಿಲ್ಲ. ಅದಕ್ಕಾಗಿಯೇ ಇವರು ರಾಜಕಾರಣದಲ್ಲಿ ಏಗುವುದು, ಅಧಿಕಾರಕ್ಕೇರುವುದು ಸಾಧ್ಯವಾಗಲಿಲ್ಲ.
ಈ ಮಾತಿಗೆ ಪೂರಕವಾಗಿ ಕಳೆದ ಭಾನುವಾರ ಕನ್ಯಾಕುಮಾರಿಯಲ್ಲಿ ನಡೆದ ದಳಪತಿ ವಿಜಯ್ ಅವರ ರೋಡ್ ಶೋನಲ್ಲಿ ನಡೆದ ಅಭಿಮಾನಿ ಮತ್ತು ಹೂವಿನ ಬಾಂಬ್ ಪ್ರಕರಣವನ್ನು ನೋಡಬಹುದು. ರಸ್ತೆಯ ಇಕ್ಕೆಲಗಳಲ್ಲಿ ಅಭಿಮಾನಿಗಳು ನಿಂತಿದ್ದರು. ಬಿಗಿ ಬಂದೋಬಸ್ತ್ನಲ್ಲಿ ನಟ ವಿಜಯ್ ಸೈಕಲ್ ಏರಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಅಭಿಮಾನಿಗಳತ್ತ ಕೈ ಬೀಸುತ್ತಿದ್ದರು. ಎಲ್ಲವೂ ಸಿನೆಮಾ ಶೈಲಿಯಲ್ಲಿಯೇ ನಡೆಯುತ್ತಿತ್ತು, ಕ್ಯಾಮರಾದಲ್ಲಿ ಸೆರೆಯಾಗುತ್ತಿತ್ತು. ಆಗ ಇದ್ದಕ್ಕಿದ್ದಂತೆ ಒಬ್ಬ ಅಭಿಮಾನಿ, ಆ ಬಿಗಿ ಬಂದೋಬಸ್ತನ್ನೂ ದಾಟಿ ಬಂದು ಸೈಕಲ್ ಮೇಲೆ ಬರುತ್ತಿದ್ದ ನಟ ವಿಜಯ್ ಮೇಲೆ ಹೂವಿನ ಚೆಂಡೊಂದನ್ನು ಎಸೆದರು. ಅಷ್ಟಕ್ಕೇ ಗಾಬರಿಬಿದ್ದ ವಿಜಯ್ ಸೈಕಲನ್ನು ಅಲ್ಲಿಯೇ ಬಿಟ್ಟು, ಹಿಂದೆ ಬರುತ್ತಿದ್ದ ಕ್ಯಾರವಾನ್ ಏರಿಬಿಟ್ಟರು.
ಈ ವಿಡಿಯೋ ತುಣುಕು ತಮಿಳುನಾಡಿನಾದ್ಯಂತ ಈಗ ವೈರಲ್ ಆಗುತ್ತಿದೆ. ಪರದೆಯ ಮೇಲೆ ನೂರಾರು ಜನರನ್ನು ಚಚ್ಚಿ ಬಿಸಾಕಿದ ಹೀರೋ, ಈಗ ಜೀವಭಯದಿಂದ ಓಡಿದ್ದು ಲೇವಡಿಗೆ ಒಳಗಾಗುತ್ತಿದೆ. ಈತ ಜನನಾಯಕನೇ ಎಂಬ ಅನುಮಾನಕ್ಕೆ ಕಾರಣವಾಗಿದೆ. ಚರ್ಚೆಗಳಾಗುತ್ತಿವೆ.
ತಮಿಳುನಾಡಿನ ರಾಜಕೀಯ ಇತಿಹಾಸವನ್ನು ಗಮನಿಸಿದರೆ- ಕರುಣಾನಿಧಿ, ಎಂಜಿಆರ್, ಜಯಲಲಿತಾ ಅವರು ಭ್ರಷ್ಟರಾದರೂ, ದುರಾಡಳಿತವಿದ್ದರೂ ಶೂದ್ರ ಸಂಕೇತ, ದ್ರಾವಿಡ ಅಸ್ಮಿತೆಯಾಗಿ ಜನಮಾನಸದಲ್ಲಿ ನೆಲೆಯೂರಿದವರು. ಆದರೆ ದಳಪತಿ ವಿಜಯ್, ರಾಜಕಾರಣಕ್ಕೆ ಅಡಿಯಿಡುವಾಗ ಆ ರೀತಿ ಗಟ್ಟಿಯಾದ ಸೈದ್ಧಾಂತಿಕ ನಿಲುವು-ಧೋರಣೆಗಳ ಸಿದ್ಧತೆಯನ್ನು ಮಾಡಿಕೊಳ್ಳಲಿಲ್ಲ. ಕಾರ್ಯಕರ್ತರನ್ನು ಸಿದ್ಧಗೊಳಿಸಲಿಲ್ಲ. ಜೊತೆಗೆ ಭಯಕ್ಕೆ ಬಿದ್ದ ಡಿಎಂಕೆ ಮತ್ತು ಬಿಜೆಪಿ- ಕೊನೆಯ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ಸಿಗದಂತೆ ಮತ್ತು ಕರೂರು ಕಾಲ್ತುಳಿತದ ವಿಚಾರಣೆಯಲ್ಲಿ ವ್ಯಸ್ತರಾಗುವಂತೆ ನೋಡಿಕೊಂಡರು. ಅವರ ರಾಜಕಾರಣವನ್ನು ವಿಜಯ್ ಕೂಡ ಅರಿಯದಾದರು. ವಿಜಯ್, ರಾಜಕೀಯಕ್ಕಾಗಿ ಹಿಂದಿ ಹೇರಿಕೆಯನ್ನು ಅತ್ಯುಗ್ರವಾಗಿ ವಿರೋಧಿಸುತ್ತಾರೆ. ಒಕ್ಕೂಟ ವ್ಯವಸ್ಥೆಯ ಪರವಿದ್ದು, ಮೋದಿಯವರ ತಾರತಮ್ಯ ನೀತಿಯನ್ನು ಟೀಕಿಸುತ್ತಾರೆ. ಆದರೆ ಬಿಜೆಪಿ-ಆರ್ಎಸ್ಎಸ್ನ ಹಿಂದುತ್ವ ರಾಜಕಾರಣವನ್ನು ಅರಿಯಲು ವಿಫಲರಾಗಿದ್ದಾರೆ.
ಇದನ್ನು ಓದಿದ್ದೀರಾ?: ಬಿಸಿ ಗಾಳಿ- ಪ್ರಕೃತಿಯ ಮುನಿಸಲ್ಲ, ಮಾನವನಿರ್ಮಿತ ಸಮಸ್ಯೆಗಳ ಪ್ರತಿಫಲ
ಅವರ ಹಿನ್ನಡೆಗೆ ಮತ್ತೊಂದು ಮುಖ್ಯ ಕಾರಣವೆಂದರೆ, ಹಿಂದಿ ಹೇರಿಕೆ, ಒಕ್ಕೂಟ ವ್ಯವಸ್ಥೆಯ ಪರವಿದ್ದು ಕೇಂದ್ರದ ತಾರತಮ್ಯ ನೀತಿಯ ವಿರುದ್ಧ ಸೆಟೆದು ನಿಲ್ಲುವುದನ್ನು ಆಡಳಿತಾರೂಢ ಡಿಎಂಕೆ ಸರ್ಕಾರವೇ ಸಮರ್ಥವಾಗಿ ನಿರ್ವಹಿಸುತ್ತಿದೆ. ಆಳುವ ಪಕ್ಷದ ಸೈದ್ಧಾಂತಿಕ ನಿಲುವನ್ನೇ ವಿಜಯ್ ಪ್ರತಿಪಾದಿಸುತ್ತಿರುವುದು- ತಮಿಳುನಾಡಿನ ಜನಕ್ಕೆ ಭಿನ್ನವಾಗಿ ಕಾಣುತ್ತಿಲ್ಲ. ಹೋದಲ್ಲಿ ಬಂದಲ್ಲಿ ಜನ ಸೇರುತ್ತಾರೆ- ಅಭಿಮಾನಿಗಳನ್ನು ಮತದಾರರನ್ನಾಗಿ ಪರಿವರ್ತಿಸಲಾಗುತ್ತಿಲ್ಲ. ಜಾತಿ ರಾಜಕಾರಣ, ಚುನಾವಣಾ ಭ್ರಷ್ಟಾಚಾರ- ವಿಜಯ್ ಅಂಕೆಗೂ ಸಿಗುತ್ತಿಲ್ಲ.
ಚುನಾವಣೆ ಹತ್ತಿರವಾದಂತೆಲ್ಲ ಇದು ದಳಪತಿ ವಿಜಯ್ ಅರಿವಿಗೂ ಬಂದಿರಬಹುದು. ರಾಜಕಾರಣ ಸಿನೆಮಾದಂತಲ್ಲ ಎನ್ನುವುದು ಅರ್ಥವಾಗಿರಬಹುದು. ಹಾಗಾಗಿ ಚುನಾವಣಾ ರ್ಯಾಲಿಗಳನ್ನು ರದ್ದು ಮಾಡುತ್ತಿದ್ದಾರೆ. ಅಭಿಮಾನಿಗಳ ಹೂವಿನ ಚೆಂಡನ್ನು ಕೂಡ ಬಾಂಬ್ನಂತೆ ಭ್ರಮಿಸಿ ಓಡುತ್ತಿದ್ದಾರೆ. ಇದು ಸಮರಕ್ಕೂ ಮುನ್ನವೇ ಶಸ್ತ್ರತ್ಯಾಗದಂತೆ ಕಂಡರೆ ಆಶ್ಚರ್ಯವಿಲ್ಲ.




