ಒಂದು ಕಡೆ ಪ್ರೊಪಗಾಂಡ ಸಿನಿಮಾಗಳಿಗೆ ಸಿಕ್ಕಾಪಟ್ಟೆ ಪ್ರಚಾರ ಸಿಗುತ್ತದೆ. ಮತ್ತೊಂದೆಡೆ ಭಿನ್ನ ಆಲೋಚನಾ ಕಥನಗಳುಳ್ಳ ಸಿನಿಮಾಗಳಿಗೆ ಬಹುಸಂಖ್ಯಾತವಾದದ ಕತ್ತಿ ಝಳಪಿಸಲಾಗುತ್ತದೆ, ಬೆದರಿಸಲಾಗುತ್ತದೆ...
ಮಲಯಾಳಂ ಚಿತ್ರರಂಗದ ಹಿರಿಯ ನಟ ಮೋಹನ್ ಲಾಲ್ ಮುಖ್ಯಭೂಮಿಕೆಯಲ್ಲಿರುವ, ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿದ ಇತ್ತೀಚಿನ ಮಲಯಾಳಂ ಸಿನಿಮಾ ‘ಎಲ್2: ಎಂಪುರಾನ್’ ವಿವಾದವನ್ನು ಹುಟ್ಟುಹಾಕಿದೆ. 2019ರಲ್ಲಿ ತೆರೆ ಕಂಡ ‘ಲೂಸಿಫರ್’ ಸಿನಿಮಾದ ಮುಂದುವರಿದ ಭಾಗವಾಗಿ ಬಂದಿರುವ ಎಂಪುರಾನ್, 2002ರ ಗುಜರಾತ್ ಹತ್ಯಾಕಾಂಡವನ್ನು ಉಲ್ಲೇಖಿಸಿದೆ ಎಂಬ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಸುಮಾರು 17 ದೃಶ್ಯಗಳಿಗೆ ಕತ್ತರಿ ಪ್ರಯೋಗಿಸಲು ಚಿತ್ರತಂಡವೇ ಒಪ್ಪಿಕೊಂಡಿದೆ. ಆ ಮೂಲಕ ಬಲಪಂಥೀಯರ ದಾಳಿಗೆ ಚಿತ್ರತಂಡ ಮಣಿದಿರುವುದು ಸ್ಪಷ್ಟವಾಗಿದೆ.
2002ರಲ್ಲಿ ಗುಜರಾತ್‌ನಲ್ಲಿ ನರೇಂದ್ರ ಮೋದಿಯವರು ಮುಖ್ಯಮಂತ್ರಿಯಾಗಿದ್ದಾಗ ಕೋಮು ಹಿಂಸಾಚಾರ ನಡೆದಿತ್ತು. ಈ ಅಮಾನವೀಯ ನರಮೇಧವನ್ನು ಹೋಲುವ ದೃಶ್ಯಗಳು ಸಿನಿಮಾದಲ್ಲಿವೆ ಎಂಬುದು ಸಂಘಪರಿವಾರದ ಆಕ್ಷೇಪ.
ಬಲರಾಜ್ ಪಟೇಲ್ ಯಾನೆ ಬಾಬಾ ಬಜರಂಗಿ ಎಂಬ ಪಾತ್ರವು ಬಾಬುಭಾಯಿ ಪಟೇಲ್ ಅಲಿಯಾಸ್ ಬಾಬು ಬಜರಂಗಿಗೆ ಹೋಲುತ್ತಿದೆ ಎಂದು ಆರೋಪಿಸಲಾಗಿದೆ. ಬಜರಂಗದಳದ ಮಾಜಿ ನಾಯಕ ಬಾಬು ಬಜರಂಗಿ 2002ರ ಗುಜರಾತ್ ಗಲಭೆಯಲ್ಲಿ ಪ್ರಮುಖ ಅಪರಾಧಿ. ವಿಶೇಷವಾಗಿ 97 ಮುಸ್ಲಿಮರನ್ನು ಕೊಂದ ನರೋಡಾ ಪಾಟಿಯಾ ಹತ್ಯಾಕಾಂಡದ ನೇತೃತ್ವವನ್ನು ವಹಿಸಿದ್ದ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಹೀಗಿರುವಾಗ ಆ ವ್ಯಕ್ತಿಯನ್ನು ಹೋಲುವ ಪಾತ್ರವನ್ನು ಸೃಷ್ಟಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸುವುದು, ಅದಕ್ಕೆ ಚಿತ್ರತಂಡ ಬೆಚ್ಚುವುದು ಆತಂಕಕಾರಿ ಸಂಗತಿ.
ಈಗಾಗಲೇ ಸೆನ್ಸಾರ್ ಮಂಡಳಿಯಿಂದ ಅನುಮತಿ ಪಡೆದ ಸಿನಿಮಾವನ್ನು, ಮರು ಸೆನ್ಸಾರ್‌ಗೆ ಕಳುಹಿಸುವುದು ಒಳ್ಳೆಯ ಸಂದೇಶವನ್ನು ನೀಡುವುದಿಲ್ಲ. ಈ ಹಿಂದೆಯೂ ಇಂತಹ ಬೆಳವಣಿಗೆಗಳಾಗಿವೆ. ಹಿಂದುತ್ವ ಪಡೆಯ ಆಕ್ಷೇಪ ವ್ಯಕ್ತವಾದ ತಕ್ಷಣ ಹೆದರಿಕೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಪುಟ್ಟ ರಾಷ್ಟ್ರಗಳಿಂದ ಇಸ್ರೇಲ್, ರಷ್ಯಾ, ಅಮೆರಿಕ ಕಲಿಯುವುದು ಬಹಳಷ್ಟಿದೆ!
ನಯನತಾರಾ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ಅನ್ನಪೂರ್ಣಿ’ ಸಿನಿಮಾಕ್ಕೂ ಇಂತಹದ್ದೇ ವಿರೋಧ ವ್ಯಕ್ತವಾದಾಗ ನೆಟ್‌ಫ್ಲಿಕ್ಸ್ ಒಟಿಟಿಯಿಂದಲೇ ಆ ಸಿನಿಮಾವನ್ನು ತೆರವು ಮಾಡಲಾಗಿತ್ತು. ಚಿತ್ರಮಂದಿರದಲ್ಲಿ ತೆರೆಕಂಡಾಗ ವಿವಾದವಾಗದ ‘ಅನ್ನಪೂರ್ಣಿ’ ಒಟಿಟಿಯಲ್ಲಿ ಸದ್ದು ಮಾಡಿದಾಗ ಆಕ್ರೋಶಕ್ಕೆ ಗುರಿಯಾಗಿತ್ತು. ‘ಈ ಸಿನಿಮಾ ಲವ್ ಜಿಹಾದ್ ಪ್ರೋತ್ಸಾಹಿಸಿದೆ, ರಾಮ ಮಾಂಸಾಹಾರಿ ಎಂದು ಬಿಂಬಿಸಲಾಗಿದೆ’ ದೂರು ದಾಖಲಿಸಿ, ನಯನತಾರಾ ವಿರುದ್ಧ ಎಫ್‌ಐಆರ್ ಹಾಕಲಾಗಿತ್ತು. ಚೆಫ್ ಆಗುವ ಕನಸು ಹೊತ್ತ ಬ್ರಾಹ್ಮಣ ಸಮುದಾಯದ ಹೆಣ್ಣುಮಗಳೊಬ್ಬಳು ಆಹಾರ ಮಡಿವಂತಿಕೆಯನ್ನು ಮೀರಬೇಕಾದ ಸಂದಿಗ್ಧತೆಗೆ ಸಿಲುಕಿದಾಗ, ಆಕೆಯ ಮುಸ್ಲಿಂ ಗೆಳೆಯನಾಡುವ ಮಾತುಗಳು ವಾಲ್ಮೀಕಿ ರಾಮಾಯಣದ ಉಲ್ಲೇಖವನ್ನು ಮಾಡುತ್ತವೆ. ‘ರಾಮನು ಮಾಂಸಾಹಾರ ತಿನ್ನುತ್ತಿದ್ದ ಎಂದು ರಾಮಾಯಣದಲ್ಲಿ ಬರೆಯಲಾಗಿದೆ’ ಎಂಬ ಶ್ಲೋಕವನ್ನು ಉದ್ಗರಿಸುವ ಫರ್ಹಾನ್, ಗೆಳತಿ ಅನ್ನಪೂರ್ಣಿಯ ಕರ್ಮಠತನ ಹೋಗಲಾಡಿಸಲು ಯತ್ನಿಸುತ್ತಾನೆ. ಈ ಅಂಶವನ್ನು ಇಟ್ಟುಕೊಂಡು ಕಲ್ಪಿತ ಲವ್ ಜಿಹಾದ್ ಆರೋಪವನ್ನು ಮಾಡಲಾಗಿತ್ತು. ಹಿಂದೂಗಳಿಗೆ ಅವಹೇಳನವಾಗಿದೆ ಎಂದು ವಾದಿಸಲಾಗಿತ್ತು.
ತಮಿಳಿನ ಪ್ರತಿಭಾನ್ವಿತ ನಿರ್ದೇಶಕ ಪ.ರಂಜಿತ್ ನಿರ್ದೇಶಿಸಿದ ‘ತಂಗಲಾನ್’ ಸಿನಿಮಾ ದಲಿತರ ಸ್ವಾಭಿಮಾನ ಮತ್ತು ಅಸ್ಮಿತೆಯನ್ನು ವಿನೂತನವಾಗಿ ತೆರೆಗೆ ತಂದಿತು. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’ ಕೃತಿಯಲ್ಲಿನ ವಿಚಾರಧಾರೆಗಳನ್ನು ಸಶಕ್ತವಾಗಿ ಸಿನಿಮಾ ಪರಿಭಾಷೆಗೆ ಅಳವಡಿಸಲಾಗಿದೆ ಎಂದು ವಿಮರ್ಶಕರಿಂದ ಪ್ರಶಂಸೆಗೆ ಒಳಗಾದ, ಯಶಸ್ವಿ ಚಿತ್ರವೆನಿಸಿದ್ದ ತಂಗಲಾನ್, ಒಟಿಟಿಗೆ ಬರಲು ಪರದಾಡಬೇಕಾಯಿತು. ಈ ಸಿನಿಮಾವು ಸಮುದಾಯಗಳ ಮಧ್ಯೆ ಒಡಕು ಮೂಡಿಸುತ್ತದೆ ಎಂದು ಕೋರ್ಟ್‌ನಲ್ಲಿ ದಾವೆ ಹೂಡಲಾಯಿತು. ಆದರೆ ಅಂತಿಮವಾಗಿ ಚಿತ್ರತಂಡದ ಪರ ತೀರ್ಪು ಬಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಯಿತು.
ತಮ್ಮ ವಿಚಾರಧಾರೆಗೆ ವಿರುದ್ಧವಾದ ಸಿನಿಮಾಗಳು ಬಂದಾಗ ಭೀಕರ ಪ್ರಹಾರ ನಡೆಸುವ ಸಂಘಪರಿವಾರದ ಪಡೆ, ಕಳೆದ ಒಂದು ದಶಕದಲ್ಲಿ ಸಾಲು ಸಾಲು ಪ್ರೊಪಗಾಂಡ ಸಿನಿಮಾಗಳನ್ನು ಪ್ರೋತ್ಸಾಹಿಸಿದೆ. ನಕಲಿ ಕಥನ ಮತ್ತು ಅರೆಬರೆ ಸತ್ಯಗಳನ್ನಿಟ್ಟುಕೊಂಡು ಬಂದ ಸಿನಿಮಾಗಳ ಪಟ್ಟಿ ದೊಡ್ಡದಿದೆ. ಇತ್ತೀಚೆಗೆ ಬಿಡುಗಡೆಯಾಗಿ ‘ಛಾವಾ’, ಕಂಗನಾರ ‘ಎಮೆರ್ಜೆನ್ಸಿ’ಯಿಂದ ಪಟ್ಟಿ ಮಾಡುತ್ತಾ ಹೋಗಬಹುದು. ಉರಿ: ದಿ ಸರ್ಜಿಕಲ್ ಸ್ಟ್ರೈಕ್, ಗದರ್ 2, ಆರ್ಟಿಕಲ್ 370, ಫೈಟರ್, ತೇಜಸ್, ಆಪರೇಷನ್ ವ್ಯಾಲೆಂಟೈನ್ ಸೇರಿದಂತೆ ಹಲವು ಚಿತ್ರಗಳು ಸೈನ್ಯದ ಸಾಧನೆಗಳನ್ನು ಮೋದಿ ಸರ್ಕಾರಕ್ಕೆ ಸಲ್ಲಿಸುವ ಹಾಗೂ ಜನರ ಮನಸ್ಸಿನಲ್ಲಿ ಅತ್ಯುಗ್ರ ರಾಷ್ಟ್ರೀಯತೆ ಬಿತ್ತುವ ಕೆಲಸ ಮಾಡಿದವು.
ಅಕ್ಷಯ್ ಕುಮಾರ್ ಅಭಿನಯದ ಕೇಸರಿ, ಸಾಮ್ರಾಟ್ ಪೃಥ್ವಿರಾಜ್, ಅಜಯ್ ದೇವಗನ್ ಅಭಿನಯದ ತಾನಾಜಿ, ಬಯೋಪಿಕ್ ಹೆಸರಲ್ಲಿ ಬಂದ ಪಿಎಂ ನರೇಂದ್ರ ಮೋದಿ, ಠಾಕ್ರೆ, ಮೈ ಅಟಲ್ ಹೂ, ಸ್ವಾತಂತ್ರ್ಯವೀರ ಸಾವರ್ಕರ್, ಹೆಡಗೇವಾರ್, ಗಾಂಧಿ ಗೋಡ್ಸೆ ಏಕ್ ಯುದ್ಧ, ಇತಿಹಾಸದ ಮುಸುಕು ಧರಿಸಿ ಬಂದ ದಿ ಕಾಶ್ಮೀರ್ ಫೈಲ್ಸ್, ದಿ ಕೇರಳ ಸ್ಟೋರಿ, 72 ಹೂರೇ, ಆಕ್ಸಿಡೆಂಟ್ ಒರ್ ಕಾನ್ಸ್ಪಿರಸಿ ಗೋಧ್ರಾ, ದಿ ಸಬರಮತಿ ರಿಪೋರ್ಟ್, ಹಮಾರೆ ಬಾರಹ್, ರಜಾಕರ್, ಅಜ್ಮೀರ್- 92, ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್, ಮಾಜಿ ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿ ಸಾವಿನ ಸುತ್ತ ಹೆಣೆದಿರುವ ದಿ ತಾಷ್ಕೆಂಟ್ ಫೈಲ್ಸ್ -ಹೀಗೆ ಬಿಜೆಪಿ ಪ್ರಣೀತ ಕಥನಗಳನ್ನು ಕಟ್ಟುವ ಸಾಲುಸಾಲು ಚಿತ್ರಗಳು ಇತ್ತೀಚಿನ ವರ್ಷಗಳಲ್ಲಿ ತೆರೆ ಕಂಡಿವೆ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ವ್ಯಂಗ್ಯ ವಿನೋದಗಳ ಮೇಲೆ ಬುಲ್ಡೋಝರ್ ಹರಿಸುವ ಊಸರವಳ್ಳಿಗಳು!
‘ಕಾಶ್ಮೀರ್ ಫೈಲ್ಸ್’ ಮತ್ತು ‘ದಿ ಕೇರಳ ಸ್ಟೋರಿ’ ಸಿನಿಮಾಗಳಿಗೆ ನೇರವಾಗಿ ಪ್ರಧಾನಿ ಮೋದಿಯಂಥವರೇ ಪ್ರಚಾರವನ್ನು ಮಾಡಿದರು. ಕಾಶ್ಮೀರ್ ಫೈಲ್ಸ್‌ಗೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ಘೋಷಿಸಲಾಗಿತ್ತು. ‘ಕೇರಳಸ್ಟೋರಿ’ ಕುರಿತು ಚುನಾವಣಾ ಭಾಷಣದಲ್ಲಿ ಮೋದಿ ಮಾತನಾಡಿದ್ದರು.
ಒಂದು ಕಡೆ ಪ್ರೊಪಗಾಂಡ ಸಿನಿಮಾಗಳಿಗೆ ಪ್ರಚಾರ ಸಿಗುತ್ತದೆ. ಮತ್ತೊಂದೆಡೆ ಭಿನ್ನ ಆಲೋಚನಾ ಕಥನಗಳುಳ್ಳ ಸಿನಿಮಾಗಳಿಗೆ ಬಹುಸಂಖ್ಯಾತವಾದದ ಕತ್ತಿ ಝಳುಪಿಸಿ ಬೆದರಿಸಲಾಗುತ್ತದೆ. ಒಂದು ಸಣ್ಣ ಪ್ರತಿರೋಧವನ್ನು ಸಹಿಸಲಾಗದ ಮತ್ತು ದ್ವೇಷದ ಪರಮಾವಧಿಯನ್ನು ಮೀರುವ ವಾತಾವರಣ ಸೃಷ್ಟಿಸಲಾಗುತ್ತದೆ. ಈಗ ಎಂಪುರಾನ್‌ಗೆ ಎದುರಾಗಿರುವುದು ಅಂತಹದ್ದೇ ಬಿಕ್ಕಟ್ಟು. ಇದನ್ನು ಗಟ್ಟಿಯಾಗಿ ಹೆದರಿಸಲಾಗದ ಚಿತ್ರತಂಡ ಕತ್ತರಿ ಪ್ರಯೋಗಕ್ಕೆ ಮುಂದಾಗಿದ್ದು ಆಲೋಚಿಸಬೇಕಾದ ಸಂಗತಿ. ಪ್ರಭುತ್ವಕ್ಕೆ ಪ್ರಶ್ನೆಯಾಗಬಲ್ಲ ಸಿನಿಮಾಗಳನ್ನು ನಿರ್ಮಾಣ ಮಾಡಲು ಆಲೋಚಿಸುವವರ ಮುಂದೆ ‘ಕತ್ತರಿ’ ಎಂಬ ಅಸ್ತ್ರ ತೂಗುಗತ್ತಿಯಾಗಿ ಕಾಡುತ್ತಲೇ ಇರುತ್ತದೆ.
