ನೂತನ ಕಾರ್ಯಪಡೆಯ ಉದ್ದೇಶಗಳನ್ನು ಹೇಳುವಾಗ, ಎಲ್ಲ ಬಗೆಯ ಅರಣ್ಯ ಒತ್ತುವರಿಯನ್ನೂ ತೆರವು ಮಾಡುವುದಾಗಿ ಘೋಷಿಸಲಾಗಿದೆ. ಆದರೆ, ಈಗಾಗಲೇ ಹಗ್ಗಜಗ್ಗಾಟದಲ್ಲಿರುವ ಬಗರ್ ಹುಕುಂ ಜಮೀನುಗಳನ್ನು ಕಾರ್ಯಪಡೆ ಹೇಗೆ ನಿಭಾಯಿಸಲಿದೆ ಎಂಬುದರ ಕುರಿತ ಸ್ಪಷ್ಟತೆ ಮಾತ್ರ ಎಲ್ಲಿಯೂ ಇಲ್ಲ
ವನ್ಯಜೀವಿಗಳೊಂದಿಗಿನ ಮಾನವ ಸಂಘರ್ಷಕ್ಕೆ ಕಡಿವಾಣ ಮತ್ತು ಅರಣ್ಯ ಒತ್ತುವರಿ ತೆರವು ಉದ್ದೇಶಗಳನ್ನು ಇಟ್ಟುಕೊಂಡು ನೂತನ ಕಾರ್ಯಪಡೆ ರಚನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಕಂದಾಯ ಇಲಾಖೆ, ಗೃಹ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಕಾರ್ಯಪಡೆಯ ಭಾಗವಾಗಲಿದ್ದಾರೆ. ಅರಣ್ಯ ಇಲಾಖೆಯ ಉನ್ನತ ಅಧಿಕಾರಿ ನೇತೃತ್ವ ವಹಿಸಲಿದ್ದಾರೆ. ಉದ್ದೇಶ ಮತ್ತು ತಂಡದ ವಿನ್ಯಾಸ ಗಮನಿಸಿದರೆ, ಮೇಲ್ನೋಟಕ್ಕೆ ಸಮತೋಲನ ಸಾಧಿಸಲಾಗಿದೆ ಮತ್ತು ಈ ಸಂದರ್ಭಕ್ಕೆ ಇದು ಅವಶ್ಯವಾಗಿ ಆಗಬೇಕಿದ್ದ ಕೆಲಸ. ಆದರೆ, ಕಾರ್ಯಪಡೆ ಸುಗಮವಾಗಿ ಕಾರ್ಯನಿರ್ವಹಿಸಬೇಕೆಂದರೆ, ಕೆಲವು ತಾಂತ್ರಿಕ ಸಂಗತಿಗಳನ್ನು ಮೊದಲೇ ಬಗೆಹರಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ರಾಜ್ಯದಲ್ಲಿ ಎರಡು ಲಕ್ಷ ಎಕರೆಯಷ್ಟು ಅರಣ್ಯ ಪ್ರದೇಶ ಒತ್ತುವರಿಯಾಗಿದೆ ಎಂಬುದು ಅರಣ್ಯ ಇಲಾಖೆಯ ಅಂದಾಜು. ಕಾರ್ಯಪಡೆಯ ಉದ್ದೇಶಗಳನ್ನು ವಿಸ್ತರಿಸಿ ಹೇಳುವಾಗ, ಈ ಎಲ್ಲ ಅರಣ್ಯ ಒತ್ತುವರಿಯನ್ನೂ ತೆರವು ಮಾಡುವುದಾಗಿ ಘೋಷಿಸಲಾಗಿದೆ. ಆದರೆ, ಈಗಾಗಲೇ ಹಗ್ಗಜಗ್ಗಾಟದಲ್ಲಿರುವ ಬಗರ್ ಹುಕುಂ ಜಮೀನುಗಳನ್ನು ಕಾರ್ಯಪಡೆ ಹೇಗೆ ನಿಭಾಯಿಸಲಿದೆ ಎಂಬುದರ ಕುರಿತ ಸ್ಪಷ್ಟತೆ ಎಲ್ಲಿಯೂ ಇಲ್ಲ. ಹಿಂದೊಮ್ಮೆ ಅರಣ್ಯವಾಗಿದ್ದ ಭೂಮಿಯನ್ನು ನಿಯಮಗಳ ಅನುಸಾರ ಕಂದಾಯ ಇಲಾಖೆಯ ಸುಪರ್ದಿಗೆ ಕೊಡಲಾಗಿತ್ತು. ಅದಾದ ಹಲವು ವರ್ಷಗಳ ನಂತರ, ಅರಣ್ಯ ಇಲಾಖೆಯು ಹಳೆಯ ದಾಖಲಾತಿಗಳನ್ನು ಇಟ್ಟುಕೊಂಡು, ಕಂದಾಯ ಇಲಾಖೆಯಿಂದ ಭೂಮಿ ಸಾಗುವಳಿ ಪಡೆದವರಿಗೆ ಅಕ್ಷರಶಃ ಕಿರುಕುಳ ಕೊಡಲು ಆರಂಭಿಸಿತು. ಹೀಗೆ ಶುರುವಾದ ಅರಣ್ಯ ಮತ್ತು ಕಂದಾಯ ಇಲಾಖೆಯ ನಡುವಿನ ಜಟಾಪಟಿಯಿಂದ, ಸಾಗುವಳಿ ಪಡೆದ ರೈತರಷ್ಟೇ ಅಲ್ಲದೆ, ಇನ್ನೇನು ಸಾಗುವಳಿ ಚೀಟಿ ಪಡೆಯಲಿದ್ದ ರೈತರು ಕೂಡ ಸಂಕಷ್ಟಕ್ಕೆ ಸಿಲುಕಿದರು. ಇದೇ ಕಾರಣಕ್ಕೆ, ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಉಳುಮೆ ಮಾಡುತ್ತಿರುವ (ಬಗರ್ ಹುಕುಂ) ರೈತರ ಬದುಕು ಹಲವು ವರ್ಷಗಳಿಂದ ಅತಂತ್ರ ಸ್ಥಿತಿಯಲ್ಲಿದೆ. ಸರ್ಕಾರಗಳು, ಸರ್ಕಾರಗಳನ್ನು ರಚಿಸಿದ ಪಕ್ಷಗಳು ಬದಲಾಗುತ್ತಲೇ ಇದ್ದರೂ, ಅಧಿಕಾರ ಹಿಡಿಯುವ ಎಲ್ಲ ಪಕ್ಷಗಳೂ ತಮ್ಮದು ರೈತಪರ ಸರ್ಕಾರ ಅಂತ ಎಷ್ಟೇ ಬೀಗಿದರೂ, ಈ ರೈತರ ವಿಷಯದಲ್ಲಿನ ನಯವಂಚನೆ ತಪ್ಪಿಲ್ಲ.
ಗಾಯದ ಮೇಲೆ ಬರೆ ಹಾಕಿದಂತೆ, ಮಳೆಯಾಶ್ರಿತ ಜಮೀನುಗಳ ರೈತರನ್ನು ಬರ, ಅತಿವೃಷ್ಟಿ, ಬೆಲೆ ಏರಿಳಿತ, ಮಾರುಕಟ್ಟೆಯ ಅನಿಶ್ಚಿತತೆ ಕಂಗಾಲು ಮಾಡುತ್ತಿವೆ. ಈ ರೈತರು, ಬೆಳೆ ಬೆಳೆಯಲು ಬ್ಯಾಂಕ್‌ಗಳಿಂದ ಸಾಲ ಪಡೆಯಲಾಗಲೀ, ಹೈನುಗಾರಿಕೆಯಂತಹ ಉಪಕಸುಬುಗಳನ್ನು ಮಾಡಲೆಂದು ಸರ್ಕಾರದಿಂದ ಸಹಾಯಧನ ಪಡೆಯಲಾಗಲೀ, ಕೃಷಿ ಇಲಾಖೆಯಿಂದ ಸಿಗುವ ಸಬ್ಸಿಡಿಗಳನ್ನು ಪಡೆಯಲಾಗಲೀ ಸಾಧ್ಯವೇ ಇಲ್ಲ. ಏಕೆಂದರೆ, ಉಳುಮೆ ಮಾಡುತ್ತಿರುವ ಭೂಮಿ ಅವರದಲ್ಲ. ಈ ಸಮಸ್ಯೆ ಬಗೆಹರಿಯಬೇಕೆಂದರೆ, ಅರಣ್ಯ ಮತ್ತು ಕಂದಾಯ ಇಲಾಖೆಗಳ ನಡುವೆ ಸಮನ್ವಯ ಸಾಧ್ಯವಾಗಬೇಕು. ಜೊತೆಗೆ, ಅರಣ್ಯ ಸಚಿವರು, ಉಪಮುಖ್ಯಮಂತ್ರಿ, ವಿರೋಧ ಪಕ್ಷಗಳ ನಾಯಕರು ಹಾಗೂ ಮುಖ್ಯಮಂತ್ರಿಗಳ ಒತ್ತಾಸೆ ಕೂಡ ಅತ್ಯವಶ್ಯ. ಇದು ಸಾಧ್ಯವಾದರೆ ಮಾತ್ರ ನೂತನ ಕಾರ್ಯಪಡೆಯ ಉದ್ದೇಶಗಳು ಈಡೇರಬಲ್ಲವು. ಇಲ್ಲದಿದ್ದರೆ, ಅರಣ್ಯ ಒತ್ತುವರಿ ತೆರವು ಈಗ ಹೇಗೆ ಅತಂತ್ರ ಸ್ಥಿತಿಯಲ್ಲಿದೆಯೋ ಮುಂದೆಯೂ ಅದೇ ರೀತಿ ಇರಲಿದೆ. ವನ್ಯಜೀವಿಗಳ ಜೊತೆಗಿನ ಮಾನವ ಸಂಘರ್ಷವೂ ತಾರಕಕ್ಕೆ ಏರಲಿದೆ.
ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ