ಕೆಂಪುಕೋಟೆಯ ವೇದಿಕೆಯಿಂದ ತಾವು ಮಾಡಿರುವ ಭಾಷಣಗಳಲ್ಲಿ ಪರಿವಾರವಾದ ಮತ್ತು ಭ್ರಷ್ಟಾಚಾರ ಈ ದೇಶ ಎದುರಿಸಿರುವ ಎರಡು ಪ್ರಬಲ ಸವಾಲುಗಳು ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ಪರಿವಾರವಾದದ ಪ್ರಬಲ ವಿರೋಧಿ ಬಿಜೆಪಿ ಎಂದು ಎದೆತಟ್ಟಿ ಹೇಳಿಕೊಂಡಿದ್ದಾರೆ. ಆದರೆ ಆಡುವುದೇ ಬೇರೆ, ಆಚರಣೆಯೇ ಬೇರೆ
ಶಿಕಾರಿಪುರ ವಿಧಾನಸಭಾ ಕ್ಷೇತ್ರ ಕಳೆದ ನಲವತ್ತು ವರ್ಷಗಳಿಂದ ರಾಜ್ಯ ಬಿಜೆಪಿ ದೈತ್ಯ ತಲೆಯಾಳು ಬಿ.ಎಸ್.ಯಡಿಯೂರಪ್ಪ ಅವರ ಪಾಳೆಯಪಟ್ಟು. ಚುನಾವಣಾ ರಾಜಕಾರಣದಿಂದ ಅವರನ್ನು ನಿವೃತ್ತಗೊಳಿಸಿತ್ತು ಬಿಜೆಪಿ. ಫೆಬ್ರವರಿಯಲ್ಲಿ ಯಡಿಯೂರಪ್ಪ ವಿದಾಯ ಭಾಷಣ ಮಾಡಿದ್ದರು. ಅಪ್ಪನ ಅಧಿಕಾರದಂಡ ಮಗನಿಗೆ ಹಸ್ತಾಂತರ ಆಯಿತು. ಮೇ ತಿಂಗಳ ಚುನಾವಣೆಗಳಲ್ಲಿ ಅಪ್ಪನ ಪಾಳೆಯಪಟ್ಟಿನಿಂದ ವಿಧಾನಸಭೆಯನ್ನು ಪ್ರವೇಶಿಸಿದವರು ಯಡಿಯೂರಪ್ಪ ಅವರ ಎರಡನೆಯ ಮಗ ಬಿ.ವೈ.ವಿಜಯೇಂದ್ರ. ಈ ಮುನ್ನ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿದ್ದರು. ವಯಸ್ಸು 47. ಯಡಿಯೂರಪ್ಪ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದಾಗ, ಉಪಮುಖ್ಯಮಂತ್ರಿ–ಮುಖ್ಯಮಂತ್ರಿ ಆಗಿದ್ದಾಗ ತೆರೆಮರೆಯಲ್ಲಿ ಅಧಿಕಾರ ಸೂತ್ರ ಹಿಡಿದಿದ್ದವರು.
ಬಿಜೆಪಿಯ ಬಲಿಷ್ಠ ಕುರುಬ ಮುಂದಾಳು ಕೆ.ಎಸ್.ಈಶ್ವರಪ್ಪ ಅವರಿಗೆ ಕಡ್ಡಾಯ ಚುನಾವಣಾ ನಿವೃತ್ತಿ ನೀಡಲಾಯಿತು. ತಮ್ಮ ಮಗ ಕಾಂತರಾಜ್‌ಗೆ ಟಿಕೆಟ್ ನೀಡಬೇಕೆಂಬ ಈಶ್ವರಪ್ಪ ಕೋರಿಕೆ ತಿರಸ್ಕೃತವಾಗಿತ್ತು. ಸೊಸೆಗೆ ಟಿಕೆಟ್ ನೀಡುತ್ತೇವೆಂಬ ಇಂಗಿತವನ್ನು ಈಶ್ವರಪ್ಪ ಅವರೇ ತಿರಸ್ಕರಿಸಿದ ವರದಿಗಳಿದ್ದವು. ಪಕ್ಷ ಒಂದೇ. ಆದರೆ ಈಶ್ವರಪ್ಪ ಅವರಿಗೆ ತಿರಸ್ಕರಿಸಲಾದದ್ದು, ಯಡಿಯೂರಪ್ಪನವರಿಗೆ ಪುರಸ್ಕೃತವಾಗಿತ್ತು. ಸಕ್ರಿಯ ರಾಜಕಾರಣದಿಂದ ತಾವು ಸಂಪೂರ್ಣ ತೆರೆಮರೆಗೆ ಸರಿಯುವ ಮುನ್ನ ಕಿರಿಯ ಮಗನನ್ನು ಪ್ರಮುಖ ಹುದ್ದೆಯಲ್ಲಿ ಪ್ರತಿಷ್ಠಾಪಿಸುವ ತಂದೆಯ ಬಯಕೆ ಈಡೇರಿದೆ.
ತಾನು ವಂಶವಾದದ ವಿರೋಧಿ ಎಂದು ಹೇಳಿಕೊಂಡು ಬರುತ್ತಿರುವ ಬಿಜೆಪಿ, ಖುದ್ದು ವಂಶವಾದದಲ್ಲಿ ಮುಳುಗೇಳುತ್ತ ಬಂದಿದೆ. ಇದೀಗ ವಿಜಯೇಂದ್ರ ಅವರಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಪಟ್ಟ ಕಟ್ಟಿರುವುದು ಮೋದಿಯವರ ಎರಡೆಳೆ ನಾಲಗೆಯ ನೂರಾರು ನುಡಿ ಮತ್ತು ನಡೆಗಳಿಗೆ ಮತ್ತೊಂದು ಸೇರ್ಪಡೆಯಿದು.
ರಾಜ್ಯ ಬಿಜೆಪಿಯನ್ನು ಯಡಿಯೂರಪ್ಪ ಮತ್ತು ಅವರ ಕುಟುಂಬದ ಬಿಗಿಮುಷ್ಠಿಯಿಂದ ಬಿಡಿಸಿಕೊಂಡು ವಶಕ್ಕೆ ತೆಗೆದುಕೊಳ್ಳುವ ಆರೆಸ್ಸೆಸ್ ಮುಂದಾಳು ಬಿ.ಎಲ್. ಸಂತೋಷ್ ಅವರ ಮತ್ತೊಂದು ಪ್ರಯತ್ನ ಮಣ್ಣುಪಾಲಾಗಿದೆ. ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಿ ಬಿಜೆಪಿಯ ತಳಪಾಯವನ್ನು ಲಿಂಗಾಯತ ಸಮುದಾಯದ ಆಚೆಗೆ ವಿಸ್ತರಿಸುತ್ತೇನೆಂಬ ಅವರ ಪ್ರಯತ್ನ ಕೈಗೂಡಿರಲಿಲ್ಲ. ಇತ್ತೀಚಿನ ವಿಧಾನಸಭಾ ಚುನಾವಣಾ ಫಲಿತಾಂಶಗಳು ಅದರ ಮೇಲೆ ತಣ್ಣೀರು ಎರಚಿದ್ದವು.
ವಂಶವಾದದ ನೆಪವೊಡ್ಡಿ 2018ರಲ್ಲಿ ವಿಜಯೇಂದ್ರ ಅವರಿಗೆ ವಿಧಾನಸಭೆ ಚುನಾವಣೆ ಟಿಕೆಟ್ ನಿರಾಕರಿಸಲಾಗಿತ್ತು. ಅದೇ ಕಾರಣ ಮುಂದೆ ಮಾಡಿ ಇತ್ತೀಚಿನ ಬೊಮ್ಮಾಯಿ ಸರ್ಕಾರದಲ್ಲಿ ಮಂತ್ರಿ ಹುದ್ದೆಯನ್ನೂ ನೀಡಿರಲಿಲ್ಲ.
ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಹಲವು ಸ್ಪರ್ಧಿಗಳಿದ್ದರು. ಈ ಪೈಕಿ ಸಿ.ಟಿ.ರವಿ, ಅಶ್ವತ್ಥನಾರಾಯಣ, ಆರ್.ಅಶೋಕ್, ವಿ.ಸೋಮಣ್ಣ, ಬಸನಗೌಡ ಪಾಟೀಲ ಯತ್ನಾಳ, ಶೋಭಾ ಕರಂದ್ಲಾಜೆ ಹೆಸರುಗಳು ಪ್ರಮುಖ. ಈ ನಡುವೆ ಒಕ್ಕಲಿಗ ಸೀಮೆಯ ಬಲಿಷ್ಠ ಪಕ್ಷವೆಂದು ಹೆಸರಾಗಿದ್ದ ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾದಳ ಬಿಜೆಪಿಯ ತೆಕ್ಕೆ ಸೇರಿತು. ಹೀಗಾಗಿ ಒಕ್ಕಲಿಗ ಆಕಾಂಕ್ಷಿಗಳು ಹಿಂದೆ ಸರಿಯಬೇಕಾಯಿತು. ಇದೀಗ ವಿಜಯೇಂದ್ರ ನೇಮಕದ ನಂತರ ಲಿಂಗಾಯತ ಆಕಾಂಕ್ಷಿಗಳಾಗಿದ್ದ ಪೈಕಿ ವಿ.ಸೋಮಣ್ಣ, ಬಸನಗೌಡ ಪಾಟೀಲ ಯತ್ನಾಳ ಅವರಿಗೂ ನಿರಾಶೆ.
ಒಕ್ಕಲಿಗ ಮತ್ತು ಲಿಂಗಾಯತ ಎರಡೂ ಸಮುದಾಯಗಳನ್ನು ರಮಿಸಿರುವ ಬಿಜೆಪಿ ರಾಜ್ಯ ವಿಧಾನಸಭೆಯ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಲಿಂಗಾಯತ ಮುಂದಾಳನ್ನು ತರುವ ಅವಕಾಶಗಳು ತೀರಾ ವಿರಳ. ಹಿಂದುಳಿದ ವರ್ಗಗಳ ಓಲೈಕೆ ಬಾಕಿ ಉಳಿದಿದೆ.
ಕೇವಲ ಪ್ರತಿಭೆ ಸಾಮರ್ಥ್ಯಗಳ ಆಧಾರದ ಮೇಲೆ ವಿಜಯೇಂದ್ರ ಅವರಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ನೀಡಿದ್ದೇವೆಂದು ಬಿಜೆಪಿ ಹೇಳುವಂತಿಲ್ಲ. ಯಾಕೆಂದರೆ ತಂದೆಯ ನೆರಳಿನಿಂದ ಹೊರಬಿದ್ದು ಸ್ವಂತ ಬಲದಿಂದ ವಿಜಯೇಂದ್ರ ಸಾಧಿಸಿರುವ ಕಣ್ಣುಕೋರೈಸುವ ಸಾಧನೆ ಹುಡುಕಿದರೂ ಸಿಗುವುದಿಲ್ಲ. 2019ರಲ್ಲಿ ಕೃಷ್ಣರಾಜಪೇಟೆಯನ್ನು ಗೆದ್ದು ಕೊಟ್ಟದ್ದೇ ದೊಡ್ಡ ಸಾಧನೆ ಎಂದು ಹೇಳಲು ಬರುವುದಿಲ್ಲ. ಅಷ್ಟು ಮಾತ್ರಕ್ಕೇ ರಾಜ್ಯ ಬಿಜೆಪಿ ಹುದ್ದೆ ನೀಡಲು ಬರುವುದಿಲ್ಲ.
ಯಡಿಯೂರಪ್ಪ ಅವರು ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯರು. ಒಬ್ಬ ಮಗ ರಾಜ್ಯ ಬಿಜೆಪಿ ಅಧ್ಯಕ್ಷರು. ಮತ್ತೊಬ್ಬ ಮಗ ಬಿ ವೈ ರಾಘವೇಂದ್ರ ಎರಡನೆಯ ಅವಧಿಗೆ ಲೋಕಸಭಾ ಸದಸ್ಯರು. 2024ರ ಚುನಾವಣೆಯಲ್ಲಿ ಮೂರನೆಯ ಸಲ ಟಿಕೆಟ್ ಸಿಕ್ಕರೆ ಆಶ್ಚರ್ಯಪಡಬೇಕಿಲ್ಲ.
ಪ್ರಧಾನಿ ಮೋದಿ ಮತ್ತು ಬಿಜೆಪಿ ಹೆಜ್ಜೆ ಹೆಜ್ಜೆಗೆ ವಂಶವಾದ ಅಥವಾ ಪರಿವಾರವಾದವನ್ನು ಬಲವಾಗಿ ವಿರೋಧಿಸಿಕೊಂಡು ಬಂದಿದೆ. ಜೊತೆ ಜೊತೆಗೆ ಅದನ್ನೇ ಅನುಸರಿಸುತ್ತಲೂ ಬಂದಿರುವುದು ಬಹುದೊಡ್ಡ ವಿಡಂಬನೆ.
ಕೆಂಪುಕೋಟೆಯ ವೇದಿಕೆಯಿಂದ ತಾವು ಮಾಡಿರುವ ಭಾಷಣಗಳಲ್ಲಿ ಪರಿವಾರವಾದ ಮತ್ತು ಭ್ರಷ್ಟಾಚಾರ ಈ ದೇಶ ಎದುರಿಸಿರುವ ಎರಡು ಪ್ರಬಲ ಸವಾಲುಗಳು ಎಂದು ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ಪರಿವಾರವಾದದ ಪ್ರಬಲ ವಿರೋಧಿ ಬಿಜೆಪಿ ಎಂದು ಎದೆತಟ್ಟಿ ಹೇಳಿಕೊಂಡಿದ್ದಾರೆ. ಆದರೆ ಆಡುವುದೇ ಬೇರೆ, ಆಚರಣೆಯೇ ಬೇರೆ. ಈ ಮಾತಿಗೆ ನೂರಾರು ನಿದರ್ಶನಗಳು ಬಿಜೆಪಿಯ ಅಂಗಳದಲ್ಲಿ ಚೆಲ್ಲಿಕೊಂಡಿವೆ.
ಪರಿವಾರವಾದದ ಬಲದಿಂದಲೇ ರಾಜಕಾರಣ ನಡೆಸಿರುವ ಪ್ರಾದೇಶಿಕ ಪಕ್ಷಗಳೊಂದಿಗೆ ಗೆಳೆತನ ಬೆಳೆಸುವುದೂ ಆಷಾಢಭೂತಿತನ ಅಲ್ಲವೇ? ಹರಿಯಾಣದ ದುಷ್ಯಂತ ಚೌಟಾಲ ಅವರ ಜನನಾಯಕ ಜನತಾ ಪಾರ್ಟಿ, ಅನುಪ್ರಿಯಾ ಪಟೇಲ್ ಅವರ ಅಪ್ನಾದಳ, ಚಿರಾಗ್ ಪಾಸ್ವಾನ್ ಅವರ ಲೋಕಜನಶಕ್ತಿ ಪಾರ್ಟಿ, ಜಗನ್ ಅವರ ವೈ.ಎಸ್.ಆರ್. ಕಾಂಗ್ರೆಸ್ ಪಾರ್ಟಿ, ಇತ್ತೀಚಿನವರೆಗೆ ದೋಸ್ತಿ ಹೊಂದಿದ್ದ ಶಿವಸೇನೆ, ತೆಲಂಗಾಣದ ಬಿ.ಆರ್.ಎಸ್. ಪಾರ್ಟಿಯಿಂದ ಹಿಡಿದು ಮೊನ್ನೆ ಕರ್ನಾಟಕದಲ್ಲಿ ಕೈ ಜೋಡಿಸಿದ ಜಾತ್ಯತೀತ ಜನತಾದಳ ಅಪ್ಪಟ ಪರಿವಾರವಾದಿ ಪಕ್ಷಗಳಲ್ಲ ಎಂದು ಮೋದಿಯವರು ಬಹಿರಂಗವಾಗಿ ಸಾರಬೇಕು. ತಾವು ಆಚರಿಸುವ ವಂಶವಾದ ಹಂಸ ಬಿಳುಪಿನ ಪರಿಶುಭ್ರ, ಮತ್ತೊಬ್ಬರದು ವಿಕೃತ ವಿಕರಾಳವೇ? ಎಲ್ಲ ಜನತೆಯನ್ನು ಎಲ್ಲ ಕಾಲಕ್ಕೂ ಮೂರ್ಖರನ್ನಾಗಿಸುವುದು ಸಾಧ್ಯವಿಲ್ಲ.