ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ ಹಾಗೂ ಪಂಚಮ ಎಂಬುದಾಗಿ ಮನುಷ್ಯರನ್ನು ಏಣಿಶ್ರೇಣಿಗಳಲ್ಲಿ ವರ್ಗೀಕರಿಸಿ ಪಂಚಮರನ್ನು ಕ್ಷುದ್ರ ಜಂತುಗಳಿಗೂ ಕಡೆಯಾಗಿ ನಡೆಸಿಕೊಳ್ಳುವ ಸಮಾಜವಿದು. ಕೊಳೆ ಮಾಡಲೆಂದೇ ಹುಟ್ಟಿದವರು ಮತ್ತು ಅವರ ಕೊಳೆಯನ್ನು ತೊಳೆಯಲೆಂದು ಸಾವಿರಾರು ವರ್ಷಗಳಿಂದ ಮೈಮನಸುಗಳನ್ನೇ ಕಸಬರಿಗೆ ಮಾಡಿಕೊಂಡಿರುವ ಎರಡು ಮುಖ್ಯ ಜನವರ್ಗಗಳಿವೆ ಭಾರತದಲ್ಲಿ.
‘ರೇಷ್ಮೆ ಹುಳ ಗೂಡು ಕಟ್ಟುತ್ತೆ. ಆ ಹುಳಗಳ ಬೇಯಿಸಿ ಗೂಡಿನ ನೂಲನ್ನು ಮಡಿ ಬಟ್ಟೆಗಾಗಿ ಬಳಸಲಾಗುತ್ತದೆ. ನಗರದ ಮಡಿ ಸ್ವಚ್ಛತೆಗಾಗಿ ಪೌರಕಾರ್ಮಿಕರು ಬೇಯಿಸಲ್ಪಡುತ್ತಿದ್ದಾರೆ’.. . . ” ಎಂಬುದೊಂದು ದೇವನೂರ ಮಹಾದೇವ ಅವರ ಮಾತನ್ನು ಇಲ್ಲಿ ನೆನೆಸಿಕೊಳ್ಳಬೇಕಿದೆ.
ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ ಹಾಗೂ ಪಂಚಮ ಎಂಬುದಾಗಿ ಮನುಷ್ಯರನ್ನು ಏಣಿಶ್ರೇಣಿಗಳಲ್ಲಿ ವರ್ಗೀಕರಿಸಿ ಪಂಚಮರನ್ನು ಕ್ಷುದ್ರ ಜಂತುಗಳಿಗೂ ಕಡೆಯಾಗಿ ನಡೆಸಿಕೊಳ್ಳುವ ಸಮಾಜವಿದು. ಕೊಳೆ ಮಾಡಲೆಂದೇ ಹುಟ್ಟಿದವರು ಮತ್ತು ಅವರ ಕೊಳೆಯನ್ನು ತೊಳೆಯಲೆಂದು ಸಾವಿರಾರು ವರ್ಷಗಳಿಂದ ಮೈಮನಸುಗಳನ್ನೇ ಕಸಬರಿಗೆ ಮಾಡಿಕೊಂಡಿರುವ ಎರಡು ಮುಖ್ಯ ಜನವರ್ಗಗಳಿವೆ ಭಾರತದಲ್ಲಿ.
ಹಿಂದು ಪವಿತ್ರ ಗ್ರಂಥಗಳು ಉಲ್ಲೇಖಿಸುವ ರೌರವ ನರಕವನ್ನು ಇನ್ನೆಲ್ಲೋ ಬೇರೆ ಲೋಕದಲ್ಲಿ ಹುಡುಕುವ ಪಾಖಂಡಿಗಳಿದ್ದಾರೆ. ಆದರೆ ಅವರೇ ಅದನ್ನು ಇಲ್ಲೇ ಈ ಭರತ ಭೂಮಿಯಲ್ಲೇ ಸೃಷ್ಟಿ ಮಾಡಿ ಪಾಲಿಸಿ ಪೋಷಿಸುತ್ತ ಬಂದಿದ್ದಾರೆ.
2011ರ ಜನಗಣತಿಯನ್ನು ತೆರೆದರೆ ಸಾಕು ಮನುಷ್ಯ ಮಲವನ್ನು ಮತ್ತೊಬ್ಬ ಮನುಷ್ಯ ಕೈಯಾರೆ ಹೊತ್ತು ಸಾಗಿಸುವ ಅಮಾನುಷತೆ ಗಹಗಹಿಸಿದೆ. ಈ ಸಮಾಜದ ಘೋರವಾಸ್ತವಗಳ ತಿಪ್ಪೆಗಳನ್ನು ಸಾರಿಸಿ ರಂಗೋಲಿ ಇಡುವ ಸರ್ಕಾರಿ ದಾಖಲೆಗಳಲ್ಲೇ ಇಂತಹ ನರಕ ಇದ್ದಿತೆಂದರೆ ಇನ್ನು ಹಸಿ ಸತ್ಯದ ವಾಸ್ತವ ಎಷ್ಟು ಅಕರಾಳವಿಕರಾಳ ಇದ್ದೀತು?
ಕಸಗುಡಿಸುವುದು ಭಾರತ ದೇಶದಲ್ಲಿ ಅತ್ಯಂತ ಕಳಂಕಿತ ಕಸುಬು. ಜಾತಿ ಆಧಾರಿತ ಏಣಿಶ್ರೇಣಿಯ ತಳಾತಳದ ಜಾತಿಗಳವರ ಮೇಲೆ ಶತಮಾನಗಳಿಂದ ಬಲವಂತವಾಗಿ ಹೇರಿರುವ ಮೀಸಲಾತಿ. ಈ ಮೀಸಲಾತಿಯನ್ನು ಕಂಡು ಕರುಬುವವರು ಯಾರೂ ಇಲ್ಲ. ಈ ಮೀಸಲಾತಿಯನ್ನು ಅಂತ್ಯಗೊಳಿಸಬೇಕೆಂದು ಪ್ರತಿಭಟಿಸಿದವರು ಇಲ್ಲ. ಇನ್ನು ಈ ಮೀಸಲಾತಿಯಲ್ಲಿ ಪಾಲು ಕೇಳುವವರು ದಿಕ್ಕಿಲ್ಲ. ನೂರಕ್ಕೆ ನೂರಷ್ಟನ್ನು ‘ಅಸ್ಪೃಶ್ಯರಿಗೇ’ ಬಿಟ್ಟುಕೊಡಲಾಗಿದೆ.
ಕನಿಷ್ಠ ನೈರ್ಮಲ್ಯ ಪ್ರಜ್ಞೆಯೂ ಇಲ್ಲದಿರುವ ಭಾರತದಂತಹ ದೇಶದಲ್ಲಿ ಮಲ, ಉಚ್ಚೆ, ಉಗುಳು, ವಾಂತಿ, ಮಕ್ಕಳು-ಮುದುಕರ ಮಲಮೂತ್ರ ವಿಸರ್ಜನೆಗೆ ಕಟ್ಟಿಕೊಳ್ಳುವ ನ್ಯಾಪಿಗಳು, ಪ್ರಾಣಿಗಳ ಕೊಳೆತ ಕಳೇಬರಗಳು, ಜಗಿದು ಉಗಿದದ್ದು, ಎಂಜಲು, ಹಳಸಿದ- ಕೊಳೆತ ಅಹಾರ ಪದಾರ್ಥಗಳು ಹೀಗೆ ಇನ್ನೂ ಏನೇನನ್ನು ಊಹಿಸಿಕೊಳ್ಳಬಹುದೋ ಅದೆಲ್ಲವನ್ನು ಬರಿಗೈಗಳಿಂದಲೇ ಗುಡಿಸಿ, ಬಾಚಿ, ಬಳಿದು ವಾಹನಗಳಿಗೆ ಸುರಿದು ಸಾಗಿಸುತ್ತಾರೆ ಪೌರಕಾರ್ಮಿಕರು. ನಿತ್ಯ ಇಂತಹ ಲಕ್ಷಾಂತರ ಟನ್ನುಗಳಷ್ಟು ಅಸಹನೀಯ ಉಚ್ಚಿಷ್ಟಕ್ಕೆ ‘ಕಸ’ ಎಂಬ ಸಹನೀಯ ಹೆಸರಿಂದ ಕರೆಯಲಾಗುತ್ತಿದೆ. ನಗರಗಳನ್ನು ಹಾದು ಜಿಲ್ಲಾ ಕೇಂದ್ರಗಳು, ಸಣ್ಣಪುಟ್ಟ ಊರುಗಳ ಸತ್ಯ ಬೇರೆಯೇ ಇದೆ. ಚರಂಡಿ ಸ್ವಚ್ಛ ಮಾಡುವವರು ಮಲವನ್ನೂ ಸ್ವಚ್ಛ ಮಾಡುತ್ತಾರೆ ಇಲ್ಲಿ. ಹಂದಿಗಳು ಮೆದ್ದು ಬಿಟ್ಟದ್ದನ್ನು ಪೊರಕೆಯಿಂದ ಶುಚಿ ಮಾಡಿ ಎತ್ತಿ ಹಾಕುವುದನ್ನು ಸಂಸ್ಕಾರವಂತ ಮಂದಿ ಕಣ್ಣಿಂದ ನೋಡಲೂ ಅಸಹ್ಯಪಟ್ಟು ಮುಖ ತಿರುಗಿಸಿಕೊಳ್ಳುತ್ತಾರೆ.
ಸೂಕ್ಷ್ಮ ರೋಗಾಣುಗಳಿರುವ ಸೋಂಕುಗಳೊಂದಿಗೆ ದಿನನಿತ್ಯ ಈಡಾಡುವ ಪೌರ ಕಾರ್ಮಿಕರು ಹಲವು ಬಗೆಯ ಸೋಂಕು ರೋಗಗಳಿಗೆ ತುತ್ತಾಗಿರುತ್ತಾರೆ. ಇವರ ಆಯಸ್ಸು ಅಲ್ಪ. ಮಲದ ಗುಂಡಿಗಳಿಗೆ ಇಳಿದು ವಿಷಗಾಳಿಗೆ ತುತ್ತಾಗಿ ಹೆಣವಾದವರ ಲೆಕ್ಕವನ್ನು ಇಟ್ಟಿದೆಯೇ ಈ ಸಮಾಜ?
ಹೇಲು ಉಗುಳು ಉಚ್ಚೆ ಕಸಕಡ್ಡಿ ಬಳಿಯುವುದು ಯಾವ ಸಾಮಾಜಿಕ ವಿಶೇಷಾಧಿಕಾರಗಳ ಪಟ್ಟಿ ಸೇರುತ್ತದೆಂದು ಹೇಳುವವರಿದ್ದಾರೆಯೇ? ಮನೆ ತುಂಬಿಸಿಕೊಳ್ಳುವ ಸೊಸೆಗೆ ಎಲ್ಲಕ್ಕಿಂತ ಮೊದಲು ಮಲ ಬಾಚುವ ತಗಡಿನ ಚೌಕಗಳು, ಬುಟ್ಟಿ ಹಾಗೂ ಪೊರಕೆಯನ್ನು ಕೈಗಿಡುವ ಲಕ್ಷಾಂತರ ಸಫಾಯಿ ಕರ್ಮಚಾರಿಗಳು ಈಗಲೂ ಇದ್ದಾರೆ ಈ ದೇಶದಲ್ಲಿ.
ಜೈಲುಗಳಲ್ಲಿ ಕೂಡ ಕಸ ಗುಡಿಸುವ ಕೆಲಸಕ್ಕೆ ಅಸ್ಪೃಶ್ಯ ಮತ್ತಿತರೆ ತಳಜಾತಿಗಳ ಕೈದಿಗಳನ್ನು ನೇಮಕ ಮಾಡಬೇಕು ಎಂಬ ಧೋರಣೆಯನ್ನೇ ಇಂದಿಗೂ ಬಹುತೇಕ ಜೈಲು ಕೈಪಿಡಿಗಳು ಹೇಳುತ್ತವೆ.
ವೈದ್ಯರು, ವಕೀಲರು, ಪುರೋಹಿತರು, ವಣಿಕರು, ವ್ಯಾಪಾರ ಉದ್ದಿಮೆದಾರರು ತಮ್ಮ ಮಕ್ಕಳೂ ತಮ್ಮ ಕಸುಬುಗಳನ್ನು ಹೆಮ್ಮೆಯಿಂದ ತಮ್ಮ ಮಕ್ಕಳ ಕೈಗಿಡುತ್ತಾರೆ. ಆದರೆ ಸಫಾಯಿ ಕರ್ಮಚಾರಿಗಳು ತಮ್ಮ ಮಕ್ಕಳು ತಮ್ಮಂತೆ ಪೌರ ಕಾರ್ಮಿಕರಾಗದಿರಲಿ ಎಂದು ಜೀವನ ಪರ್ಯಂತ ಆಶಿಸುತ್ತಾರೆ..
2016ರ ಏಪ್ರಿಲ್ ಆರರಂದು ಗುಜರಾತಿನ ಅಹ್ಮದಾಬಾದ್ ನ ಮಾನವ ಅಭಿವೃದ್ಧಿ ಸಂಪನ್ಮೂಲ ಕೇಂದ್ರ (ಎಚ್.ಡಿ.ಆರ್.ಸಿ.) ಎಂಬ ಸ್ವಯಂಸೇವಾ ಸಂಸ್ಥೆಯೊಂದು ಕಸ ಗುಡಿಸುವ ಸಫಾಯಿ ಕರ್ಮಚಾರಿಗಳ ಕೆಲಸಕ್ಕೆಂದು ಜಾಹೀರಾತೊಂದನ್ನು ನೀಡಿತ್ತು. ಬ್ರಾಹ್ಮಣರು ಮತ್ತು ಕ್ಷತ್ರಿಯ ಜಾತಿಗಳ ಅಭ್ಯರ್ಥಿಗಳಿಗೆ ಆದ್ಯತೆ ನೀಡುವುದಾಗಿ ಸಾರಿತ್ತು. ಯಾವುದೇ ಸಮುದಾಯದ ಭಾವನೆಗಳನ್ನು ನೋಯಿಸುವುದು ತಮ್ಮ ಉದ್ದೇಶ ಆಗಿರಲಿಲ್ಲ. ಸಮತಾ ಸಮಾಜದ ಮಾತಾಡುತ್ತಿರುವ ಹೊತ್ತಿನಲ್ಲಿ ಕಸ ಗುಡಿಸುವ ಮತ್ತು ಪಾಯಿಖಾನೆ ತೊಳೆಯುವ ಕೆಲಸವನ್ನು ಯಾಕೆ ಹೀನಾಯವಾಗಿ ಕಾಣುತ್ತೀರಿ ಎಂದು ಪ್ರಶ್ನಿಸುವುದು ನಮ್ಮ ಇರಾದೆಯಾಗಿತ್ತು. ಜಾತಿ ಆಧಾರಿತ ಕಸಬುಗಳ ವ್ಯವಸ್ಥೆಗೆ ಸವಾಲು ಎಸೆಯುವುದು ಮತ್ತು ನೈರ್ಮಲ್ಯದ ಕೆಲಸಗಳನ್ನು ಬಲಿಷ್ಠ ಜಾತಿಗಳಿಗೂ ನೀಡುವ ಮೂಲಕ ಸಾಮಾಜಿಕ ಸಮಾನತೆ ಸಾಧಿಸುವುದು ತನ್ನ ಉದ್ದೇಶವಾಗಿತ್ತೆಂದು ಈ ಸ್ವಯಂಸೇವಾ ಸಂಸ್ಥೆ ಸ್ಪಷ್ಟಪಡಿಸಿತ್ತು.
ಈ ಜಾಹೀರಾತು ವ್ಯಾಪಕ ಚರ್ಚೆ ಮತ್ತು ವಿವಾದವನ್ನು ಹುಟ್ಟಿ ಹಾಕಿತು. ರಜಪೂತ ಶೌರ್ಯ ಫೌಂಡೇಷನ್ ಮತ್ತು ಯುವಶಕ್ತಿ ಸಂಘಟನೆಯಂತಹ ಸಂಸ್ಥೆಗಳು ಈ ಜಾಹೀರಾತಿನ ವಿರುದ್ಧ ರೊಚ್ಚಿಗೆದ್ದವು. ಸ್ವಯಂಸೇವಾ ವಿರುದ್ಧ ಪೊಲೀಸರು ಕೇಸು ದಾಖಲಿಸಿದರು.
ಹೀಗೆ ಯಾವ ರೀತಿಯಿಂದಲೂ ಮಾನ ಘನತೆಗೆ ಎರವಾದ ಮತ್ತು ಕೀಳೆಂದು ಹಳಿದು ಅಸಹ್ಯಪಡುವ ಕೆಲಸವನ್ನು ಮಾಡುವುದು ಪೌರಕಾರ್ಮಿಕರ ಆಯ್ಕೆಯೇನೂ ಅಲ್ಲ. ಹೊಟ್ಟೆ ತುಂಬಿಸಿಕೊಳ್ಳಬೇಕಿದ್ದರೆ, ಬಟ್ಟೆ ಉಡಬೇಕಿದ್ದರೆ ಈ ಕೀಳು ಕೆಲಸವನ್ನು ಮಾಡಲೇಬೇಕೆಂದು ತಳಾತಳ ವರ್ಗಗಳ ಜನರಿಗೆ ಈ ಸಮಾಜ ವಿನಾ ಕಾರಣ ವಿಧಿಸಿರುವ ಕ್ರೂರ ಶಿಕ್ಷೆಯಿದು.
ಬೆಂಗಳೂರಿನ ಶೇ.30ರಷ್ಟು ಪೌರಕಾರ್ಮಿಕರು ಕೆಲಸಕ್ಕೆ ಬಾರದೆ ಗೈರು ಹಾಜರಾಗುತ್ತಿದ್ದಾರೆಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡರು ದೂರಿದ್ದಾರೆ. ಮೂರು ಎಚ್ಚರಿಕೆಗಳ ನಂತರವೂ ಕೆಲಸದಿಂದ ತಪ್ಪಿಸಿಕೊಳ್ಳುವವರನ್ನು ಸೇವೆಯಿಂದ ವಜಾ ಮಾಡುವುದಾಗಿ ನೀಡಿರುವ ಎಚ್ಚರಿಕೆಯ ಭಾಷೆ ಖಂಡನೀಯ. ಕಾರ್ಪೊರೇಟ್ ಜಗತ್ತು, ಗೌಡರ ಮಾತುಗಳನ್ನು ಬೆಂಬಲಿಸಿರುವುದು ಅತ್ಯಂತ ನಿರೀಕ್ಷಿತ. ಪೌರಕಾರ್ಮಿಕರ ಸೇವೆಯನ್ನು ಕಾಯಂ ಮಾಡಿದ್ದು ತೀರಾ ಇತ್ತೀಚೆಗೆ. ಎಲ್ಲ ಪೌರಕಾರ್ಮಿಕರಿಗೂ ಈ ಸೌಲಭ್ಯ ದೊರೆತಿಲ್ಲ. ಗುತ್ತಿಗೆ ಆಧಾರದ ಶೋಷಣೆ ಇನ್ನೂ ತೊಲಗಿಲ್ಲ. ಭಾರತಕ್ಕೆ ಸ್ವತಂತ್ರ ಬಂದರೂ ಅನೇಕರು ಈಗಲೂ ತಬ್ಬಲಿಗಳಾಗಿ ಉಳಿದಿದ್ದಾರೆ. ಅವರ ಪೈಕಿ ಪೌರಕಾರ್ಮಿಕರೂ ಸೇರಿದ್ದಾರೆ.
ಸಮಾಜದ ಶೇ.90ರಷ್ಟು ಜನ ಅಸಹ್ಯಪಟ್ಟುಕೊಳ್ಳುವ ಕಸುಬಿನಲ್ಲಿ ತೊಡಗಿರುವ, ಕಸುಬಿನಿಂದಾಗಿ ರೋಗ ರುಜಿನಗಳಿಗೆ ತುತ್ತಾಗುವ ಜನರನ್ನು ನಾಗರಿಕವೆಂದು ತನ್ನನ್ನು ತಾನೇ ಕರೆದುಕೊಳ್ಳುವ ಸಮಾಜ ನಡೆಸಿಕೊಳ್ಳುತ್ತಿರುವ ವೈಖರಿ ಯಾವ ರೀತಿಯಿಂದಲೂ ಮಾದರಿ ಎನಿಸುವುದಿಲ್ಲ.
ಅವರನ್ನು ಮನುಷ್ಯರೆಂದು ನಡೆಸಿಕೊಳ್ಳುವುದರಿಂದ ಹಿಡಿದು, ಅವರಿಗೆ ಸುರಕ್ಷತಾ ಸಲಕರಣೆಗಳು, ಉಡುಗೆ ತೊಡುಗೆಗಳನ್ನು ಒದಗಿಸಬೇಕಿದೆ. ಬೇರೆ ಯಾರೂ ಮಾಡಲು ಒಪ್ಪದಿರುವ ಕೆಲಸವನ್ನು ಮಾಡುತ್ತಿರುವ ಅವರಿಗೆ ಸಮಾಜ ಸರ್ಕಾರ ಋಣಿಯಾಗಿರಬೇಕಿದೆ. ಈ ಋಣವನ್ನು ಕಾರ್ಯರೂಪದಲ್ಲಿ ತೀರಿಸಬೇಕಿದೆ. ಇದು ಔದಾರ್ಯ ಅಲ್ಲ, ಆದ್ಯ ಕರ್ತವ್ಯ. ತನ್ನ ಕರ್ತವ್ಯವನ್ನೇ ನಿರ್ವಹಿಸದಿರುವ ಸಮಾಜ ಮತ್ತು ಸರ್ಕಾರ ಪೌರಕಾರ್ಮಿಕರನ್ನು ಉದ್ದೇಶಿಸಿ ಬಳಸಿರುವ ‘ಭಾಷೆ’ ಖಂಡನೀಯ. ತನ್ನ ಕರ್ತವ್ಯವನ್ನು ಮರೆತಿರುವ, ಪ್ರಾಮಾಣಿಕತೆಯ ಕುರಿತು ತಲೆ ಕೆಡಿಸಿಕೊಳ್ಳದೆ ಹಲವು ಬಗೆಯ ಭ್ರಷ್ಟಾಚಾರಗಳಲ್ಲಿ ಮುಳುಗಿರುವ ಆಳುವ ವರ್ಗ ತನ್ನನ್ನು ತಾನು ಮೊದಲು ನೆಟ್ಟಗೆ ಮಾಡಿಕೊಳ್ಳಲಿ.
ದೇಶದ ರಾಜಕೀಯ ಮತ್ತು ಸಾಮಾಜಿಕ ಬದುಕಿಗೆ ಗೆದ್ದಲು ಹಿಡಿಸಿ, ತಾವು ಕೊಬ್ಬಿರುವ ಜನವರ್ಗಗಳು ಆತ್ಮನಿರೀಕ್ಷೆ ಮಾಡಿಕೊಳ್ಳಬೇಕಿದೆ. ನಿಜ ಕಾಯಕಜೀವಿಗಳನ್ನು ಘನತೆ ಗೌರವಗಳಿಂದ ಕಾಣಬೇಕಿದೆ.





