ಈ ದಿನ ಸಂಪಾದಕೀಯ | ಡಿಲಿಮಿಟೇಷನ್: 50% ಸಮಾನ ಕ್ಷೇತ್ರಗಳ ಹೆಚ್ಚಳವಾಗಲಿ; ಶಾಶ್ವತ ಸಂವಿಧಾನಾತ್ಮಕ ರಕ್ಷಣೆ ಸಿಗಲಿ

Date:

ಬಿಜೆಪಿಯ ತಂತ್ರಗಳಿಗೆ ಅವಕಾಶ ದೊರೆತರೆ, ಚುನಾವಣೆಯಲ್ಲಿ ಮತದಾರರು ನೀಡುವ ತೀರ್ಪಿಗೂ ಪಕ್ಷಗಳು ಪಡೆಯುವ ಸ್ಥಾನಗಳಿಗೂ ದೊಡ್ಡ ಅಂತರ ಉಂಟಾಗುತ್ತದೆ. ಹೆಚ್ಚು ಜನರ ಬೆಂಬಲವಿಲ್ಲದೆಯೂ ನಿರ್ದಿಷ್ಟ ಪಕ್ಷ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು. ಆಳುವವರು ತಮ್ಮ ಅನುಕೂಲಕ್ಕೆ ತಕ್ಕಂತೆ ಮತದಾರರನ್ನೇ ಆಯ್ದುಕೊಳ್ಳುವ ಈ ಕುತಂತ್ರವು ಜನತಂತ್ರದ ಅಣಕವಾಗುತ್ತದೆ.

ನವೆಂಬರ್ 30ರ ಸೋಮವಾರದಿಂದ ಸಂಸತ್ತಿನ ವಿಶೇಷ ಅಧಿವೇಶನ ಆರಂಭವಾಗುತ್ತಿದೆ. ಕಳೆದ ಏಪ್ರಿಲ್‌ನಲ್ಲಿ ಲೋಕಸಭೆಯಲ್ಲಿ ಅಗತ್ಯ ಬಹುಮತ ಪಡೆಯಲಾಗದೆ ಸೋಲುಂಡಿದ್ದ ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಪರಿಷ್ಕರಿಸಿ ಮಂಡಿಸಲು ಮೋದಿ ಸರ್ಕಾರ ಮುಂದಾಗಿದೆ. ಈ ಮಸೂದೆಯ ಕುರಿತು ಪ್ರತಿಪಕ್ಷಗಳು ತೆಗೆದುಕೊಳ್ಳುವ ನಿರ್ಧಾರವು ಕೇವಲ 2029ರ ಲೋಕಸಭಾ ಚುನಾವಣೆಯ ಭವಿಷ್ಯವನ್ನಷ್ಟೇ ಅಲ್ಲ, ಭಾರತದ ಜನತಂತ್ರ ಮತ್ತು ಒಕ್ಕೂಟ ವ್ಯವಸ್ಥೆಯ ಭವಿಷ್ಯವನ್ನೂ ನಿರ್ಧರಿಸಲಿದೆ.

- Advertisement -

ಕ್ಷೇತ್ರ ಮರುವಿಂಗಡಣೆಯು ಅಧಿಕಾರದಲ್ಲಿರುವ ಪಕ್ಷ ತನ್ನ ಅಧಿಕಾರವನ್ನು ಉಳಿಸಿಕೊಳ್ಳುವ ಸಾಧನವಲ್ಲ. ಅದು ಜನತಂತ್ರವನ್ನು ವಿಸ್ತರಿಸುವ ಕ್ರಮ. ಆದರೆ, 2029ರ ಲೋಕಸಭಾ ಚುನಾವಣೆಯಲ್ಲಿ ತನಗೆ ಅನುಕೂಲವಾಗುವಂತೆ ದೇಶದ ಚುನಾವಣಾ ವ್ಯವಸ್ಥೆಯನ್ನೇ ಪುನಾರಚಿಸಲು ಬಿಜೆಪಿ ತಂತ್ರ ಹೆಣೆಯುತ್ತಿದೆ. ಮಹಿಳಾ ಮೀಸಲಾತಿಯನ್ನೂ ‘ಡಿಲಿಮಿಟೇಷನ್‌’ಗೆ ಗಂಟು ಹಾಕಿ, ವಿಪಕ್ಷಗಳನ್ನೇ ಪ್ರಜಾತಂತ್ರ ವಿರೋಧಿಗಳಂತೆ ಬಿಂಬಿಸಲು ಮೋದಿ ಸರ್ಕಾರ ಮುಂದಾಗಿದೆ. ಅಧಿಕಾರದಲ್ಲಿರುವವರು ತಮ್ಮ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಚುನಾವಣಾ ಕ್ಷೇತ್ರಗಳನ್ನು ರೂಪಿಸಿಕೊಳ್ಳಲು ಸಾಧ್ಯವಾದರೆ, ಅದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಮೂಲ ಆಶಯಕ್ಕೇ ಧಕ್ಕೆಯಾಗಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೆಬ್ಬೆರಳು ಕತ್ತರಿಸಿದ ಆಕ್ರಮಣಕಾರರು, ಗುಮಾಸ್ತರನ್ನು ಸೃಷ್ಟಿಸಿದ ಮೆಕಾಲೆ- ಇದು...

ಇತಿಹಾಸದ ಹೆಸರಿನಲ್ಲಿ ಆಯ್ದ ನಿರೂಪಣೆ; ಜಾತಿ ಪ್ರಾಬಲ್ಯ, ಶಿಕ್ಷಣದ ಹಕ್ಕು ಮತ್ತು ಆಧುನಿಕ ಅಭಿವೃದ್ಧಿಯ ವಾಸ್ತವಗಳು ಪ್ರಧಾನಿ ನರೇಂದ್ರ ಮೋದಿ ಅವರು ಇತಿಹಾಸದ ಹೆಸರಿನಲ್ಲಿ ಮುಂದಿಟ್ಟಿರುವ ಹೆಬ್ಬೆರಳು ಕತ್ತರಿಸಿದ ಆಕ್ರಮಣಕಾರರು ಮತ್ತು ಗುಮಾಸ್ತರನ್ನು ಸೃಷ್ಟಿಸಿದ...

ಸಂಸತ್ತಿನ ಈ ವಿಶೇಷ ಅಧಿವೇಶನ ಮಹಿಳೆಯರಿಗಾಗಿ ಅಲ್ಲ; ಕ್ಷೇತ್ರ...

ಮಹಿಳಾ ಮೀಸಲಾತಿಯನ್ನು ಯಾರೂ ವಿರೋಧಿಸಲು ಧೈರ್ಯ ಮಾಡುವುದಿಲ್ಲ ಎಂಬುದು ಸರ್ಕಾರದ ಲೆಕ್ಕವಾಗಿದೆ. ಹೀಗಾಗಿ ಕ್ಷೇತ್ರ ಮರುವಿಂಗಡಣೆಯ ಪ್ರಸ್ತಾವನೆಯನ್ನು ಮಹಿಳಾ ಮೀಸಲಾತಿಯ ಸೆರಗಿಗೆ ಗಂಟುಹಾಕುವ ಪ್ರಯತ್ನ ನಡೆದಿದೆ. ಭಾರತದ ಚುನಾವಣಾ ನಕ್ಷೆಯನ್ನೇ ಮರುರೂಪಿಸಬಲ್ಲ ಮಸೂದೆಯೊಂದನ್ನು ಬಹಳ...

ಸಂಸ್ಕೃತದ ಗೋಡೆ ಕೆಡವಿ ಕನ್ನಡ ಕಟ್ಟಿದ ಕವಿ ಕನಕದಾಸ!

ಕೇವಲ ಭಕ್ತರಾಗಿ ಮಾತ್ರವಲ್ಲದೆ, ಅಡುಗೆಮನೆಯ ಬೀಸುವ ಕಲ್ಲಿನಿಂದ ಹಿಡಿದು ಹೊಲದ ರಾಗಿಯವರೆಗೆ ನಮ್ಮದೇ ನೆಲದ ಉದಾಹರಣೆಗಳ ಮೂಲಕ ಕನ್ನಡ ಭಾಷೆಗೆ ಆಧ್ಯಾತ್ಮಿಕ ಮತ್ತು ಸಾಹಿತ್ಯಿಕ ಘನತೆಯನ್ನು ತಂದುಕೊಟ್ಟ ಮಹಾನ್ ಕ್ರಾಂತಿಕಾರಿ ಕವಿ ಕನಕದಾಸರು. ಭಾಷೆಯೊಂದು...

ಭಾರತೀಯ ಸಂವಿಧಾನದ 82ನೇ ವಿಧಿಯ ಪ್ರಕಾರ, ಪ್ರತಿ ಜನಗಣತಿಯ ನಂತರ ಲೋಕಸಭಾ ಸ್ಥಾನಗಳ ರಾಜ್ಯವಾರು ಹಂಚಿಕೆ ಮತ್ತು ಕ್ಷೇತ್ರಗಳ ಭೌಗೋಳಿಕ ಗಡಿಗಳನ್ನು ಮರುಪರಿಶೀಲಿಸಲು ಅವಕಾಶವಿದೆ. ಈ ಪ್ರಕ್ರಿಯೆಯನ್ನು ಸಂಸತ್ತು ರೂಪಿಸುವ ಕಾನೂನಿನ ಪ್ರಕಾರ ಅನುಷ್ಠಾನಗೊಳಿಸಬೇಕು.

ಆದರೆ, ಸ್ವಾತಂತ್ರ್ಯಾನಂತರದ ಆರಂಭಿಕ ದಶಕಗಳಲ್ಲಿ ಜನಸಂಖ್ಯೆಯ ಬೆಳವಣಿಗೆಯಲ್ಲಿ ರಾಜ್ಯಗಳ ನಡುವೆ ದೊಡ್ಡ ವ್ಯತ್ಯಾಸಗಳು ಕಂಡುಬಂದವು. ಆ ಸಂದರ್ಭದಲ್ಲಿ ದೇಶದ ಜನಸಂಖ್ಯೆಯನ್ನು ನಿಯಂತ್ರಿಸುವುದು ರಾಷ್ಟ್ರೀಯ ಆದ್ಯತೆಯಾಗಿತ್ತು. ಕೇಂದ್ರ ಸರ್ಕಾರದ ಜನಸಂಖ್ಯಾ ನಿಯಂತ್ರಣ ನೀತಿಯನ್ನು ದಕ್ಷಿಣ ಭಾರತದ ರಾಜ್ಯಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದವು. ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ ಹಾಗೂ ಕುಟುಂಬ ಕಲ್ಯಾಣ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿದವು. ಪರಿಣಾಮವಾಗಿ, ಜನಸಂಖ್ಯೆಯ ಬೆಳವಣಿಗೆಯನ್ನು ಗಣನೀಯವಾಗಿ ನಿಯಂತ್ರಿಸುವಲ್ಲಿ ಯಶಸ್ವಿಯಾದವು.

ಈಗ ಅದೇ ಸಾಧನೆಯನ್ನು ಆ ರಾಜ್ಯಗಳ ರಾಜಕೀಯ ಅಧಿಕಾರವನ್ನು ಮೊಟಕುಗೊಳಿಸಲು ಆಧಾರವಾಗಿಸಿಕೊಳ್ಳಲು ಮೋದಿ ಸರ್ಕಾರ ಹವಣಿಸುತ್ತಿದೆ. ಏಪ್ರಿಲ್‌ನಲ್ಲಿ ಮಂಡಿಸಿದ ಮಸೂದೆಯ ಮೂಲಕ ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ ಮರುವಿಂಗಡಣೆ ಮಾಡಿ, ಜನಸಂಖ್ಯಾ ನಿಯಂತ್ರಣದಲ್ಲಿ ವಿಫಲವಾದ ರಾಜ್ಯಗಳಿಗೆ ಹೆಚ್ಚು ಲೋಕಸಭಾ ಸ್ಥಾನಗಳನ್ನು ನೀಡಿ, ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯದ ಪಾಲನ್ನು ಕಡಿಮೆ ಮಾಡಲು ಮುಂದಾಗಿತ್ತು.

ಇದರ ವಿರುದ್ಧ ವಿಪಕ್ಷಗಳು ಒಂದಾಗಿ ಹೋರಾಟ ನಡೆಸಿದವು. ಮಸೂದೆಯನ್ನು ಸೋಲಿಸಿದವು. ಮಸೂದೆ ವಿರುದ್ಧದ ಈ ಹೋರಾಟವು ಉತ್ತರ ಭಾರತದ ಜನರ ವಿರುದ್ಧ ದಕ್ಷಿಣ ಭಾರತದ ಜನರ ಹೋರಾಟವಲ್ಲ. ಹೆಚ್ಚು ಜನಸಂಖ್ಯೆ ಹೊಂದಿರುವ ಕ್ಷೇತ್ರಗಳಿಗೆ ಹೆಚ್ಚಿನ ಪ್ರತಿನಿಧಿಗಳನ್ನು ಒದಗಿಸುವುದರ ಜೊತೆಗೆ, ರಾಜ್ಯಗಳ ಸಾಪೇಕ್ಷ ರಾಜಕೀಯ ಪ್ರಾತಿನಿಧ್ಯವನ್ನು ಉಳಿಸಬೇಕೆಂಬ ಒಕ್ಕೂಟದ ಆಶಯಕ್ಕೂ ಆದ್ಯತೆ ನೀಡಬೇಕು.

ಏಕೆಂದರೆ, ಸಂಸತ್ತಿನಲ್ಲಿ ರಾಜ್ಯಗಳ ಪ್ರಾತಿನಿಧ್ಯದ ಪ್ರಮಾಣವು ಕೇವಲ ಸರ್ಕಾರ ರಚಿಸುವುದಕ್ಕಷ್ಟೇ ಸೀಮಿತವಲ್ಲ. ಕೇಂದ್ರ ಸರ್ಕಾರದ ನೀತಿಗಳು, ಸಂಪನ್ಮೂಲಗಳ ಹಂಚಿಕೆ, ತೆರಿಗೆ ವ್ಯವಸ್ಥೆ, ರಾಜ್ಯಗಳ ಅಧಿಕಾರ, ಭಾಷಾ ಹಕ್ಕುಗಳು ಮತ್ತು ಸಂವಿಧಾನ ತಿದ್ದುಪಡಿಗಳಂತಹ ಮಹತ್ವದ ವಿಚಾರಗಳ ಮೇಲೆಯೂ ಅದು ಪರಿಣಾಮ ಬೀರುತ್ತದೆ.

ಒಂದು ಭೌಗೋಳಿಕ ಭಾಗದ ರಾಜಕೀಯ ಪ್ರಾಬಲ್ಯ ಅತಿಯಾಗಿ ಹೆಚ್ಚಾದರೆ, ಉಳಿದ ಭಾಗಗಳ ಅಭಿಪ್ರಾಯ ಮತ್ತು ಹಿತಾಸಕ್ತಿಗಳು ನಿರ್ಲಕ್ಷ್ಯಕ್ಕೆ ಒಳಗಾಗುವ ಅಪಾಯವಿದೆ. ಸಂವಿಧಾನ ತಿದ್ದುಪಡಿಗಳಿಗೆ ಬೇಕಿರುವ ಬಹುಮತವನ್ನು ಕೆಲವೇ ರಾಜ್ಯಗಳ ಸಂಸದರ ಬೆಂಬಲದಿಂದ ಪಡೆಯುವಂತಹ ಪರಿಸ್ಥಿತಿ ನಿರ್ಮಾಣವಾದರೆ, ದಕ್ಷಿಣದ ರಾಜ್ಯಗಳ ಸಂಸದೀಯ ಪ್ರಭಾವ ಮತ್ತಷ್ಟು ದುರ್ಬಲವಾಗುತ್ತದೆ. ಭಾರತದಂತಹ ಬಹುಭಾಷಿಕ, ಬಹುಸಾಂಸ್ಕೃತಿಕ ದೇಶದಲ್ಲಿ ಇಂತಹ ಅಧಿಕಾರ ಕೇಂದ್ರೀಕರಣಕ್ಕೆ ಅವಕಾಶವಿರಬಾರದು.

ಆದ್ದರಿಂದಲೇ, 1976ರಲ್ಲಿ ಇಂದಿರಾ ಗಾಂಧಿ ಸರ್ಕಾರ 42ನೇ ಸಂವಿಧಾನ ತಿದ್ದುಪಡಿಯ ಮೂಲಕ ರಾಜ್ಯವಾರು ಲೋಕಸಭಾ ಸ್ಥಾನಗಳ ಮರುಹಂಚಿಕೆಯನ್ನು 25 ವರ್ಷಗಳ ಅವಧಿಗೆ ಸ್ಥಗಿತಗೊಳಿಸಿತ್ತು. 2001ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರವೂ 84ನೇ ಸಂವಿಧಾನ ತಿದ್ದುಪಡಿಯ ಮೂಲಕ ಆ ನಿರ್ಬಂಧವನ್ನು ಮತ್ತೆ 25 ವರ್ಷಗಳಿಗೆ ವಿಸ್ತರಿಸಿತು. ಭಿನ್ನ ರಾಜಕೀಯ ಸಿದ್ಧಾಂತಗಳನ್ನು ಪ್ರತಿನಿಧಿಸುತ್ತಿದ್ದ ಎರಡೂ ಸರ್ಕಾರಗಳು ರಾಜ್ಯಗಳ ಪ್ರಾತಿನಿಧ್ಯವನ್ನು ರಕ್ಷಿಸುವ ಅಗತ್ಯವನ್ನು ಒಪ್ಪಿಕೊಂಡಿದ್ದವು.

ಆದರೆ, ಮೋದಿ ಸರ್ಕಾರ ತನ್ನ ಅಧಿಕಾರ ದಾಹಕ್ಕಾಗಿ ರಾಜ್ಯಗಳ ಪ್ರಾತಿನಿಧ್ಯವನ್ನೇ ಕಡೆಗಣಿಸಿ ಕ್ಷೇತ್ರ ಮರುವಿಂಗಡಣೆಗೆ ಯತ್ನಿಸಿ ಸೋಲುಂಡಿದೆ. ಇದೀಗ ದಕ್ಷಿಣ ಭಾರತದ ರಾಜ್ಯಗಳಿಗೆ ಈಗಿರುವುದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ನೀಡುವುದಾಗಿ ಭರವಸೆ ನೀಡುತ್ತಿದೆ. ಎಲ್ಲ ರಾಜ್ಯಗಳಲ್ಲಿಯೂ ಸಮಾನವಾಗಿ 50%ರಷ್ಟು ಸ್ಥಾನಗಳನ್ನು ಹೆಚ್ಚಿಸುವ ಪ್ರಸ್ತಾಪವಿಟ್ಟಿದೆ.

ಈ ಹೊಸ ಪ್ರಸ್ತಾಪದಂತೆ, ಕರ್ನಾಟಕದ ಲೋಕಸಭಾ ಸ್ಥಾನಗಳು 28ರಿಂದ 42ಕ್ಕೆ ಹೆಚ್ಚಾಗಲಿವೆ. ಅದೇ ರೀತಿ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಲೋಕಸಭಾ ಸ್ಥಾನಗಳ ಸಂಖ್ಯೆಯೂ ಸುಮಾರು 50%ರಷ್ಟು ಹೆಚ್ಚಲಿದೆ. ಜೊತೆಗೆ, ಕ್ಷೇತ್ರ ಮರುವಿಂಗಡಣೆಯ ಮೇಲಿನ ನಿರ್ಬಂಧವನ್ನು 2051ರವರೆಗೆ ಮುಂದುವರಿಸುವ ಉದ್ದೇಶವನ್ನೂ ವ್ಯಕ್ತಪಡಿಸಲಾಗಿದೆ.

ರಾಜ್ಯಗಳ ಪ್ರಾತಿನಿಧ್ಯದ ಕುರಿತು ವ್ಯಕ್ತವಾಗಿದ್ದ ಆಕ್ಷೇಪಗಳಿಗೆ ಹೊಸ ಮಸೂದೆಯಲ್ಲಿ ಭಾಗಶಃ ಸ್ಪಂದನೆ ದೊರೆತಿದೆ. ಆದರೂ, ಮೂಲಭೂತ ಪ್ರಶ್ನೆಯೊಂದು ಹಾಗೆಯೇ ಉಳಿದಿದೆ. ಅದು: 2051ರ ನಂತರ ಏನಾಗುತ್ತದೆ?

ಇಂದಿನ ಸಮಸ್ಯೆಯನ್ನು ಇನ್ನೂ 25 ವರ್ಷಗಳ ಕಾಲ ಮುಂದೂಡಿದರೆ, 2051ರಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ವಿವಿಧ ರಾಜ್ಯಗಳು ತಮ್ಮ ರಾಜಕೀಯ ಪ್ರಾತಿನಿಧ್ಯವನ್ನು ಉಳಿಸಿಕೊಳ್ಳಲು ಮತ್ತೆ ಹೋರಾಟ ನಡೆಸಬೇಕಾಗುತ್ತದೆ.

ಆದ್ದರಿಂದ, ಈಗ ಪ್ರಸ್ತಾಪಿಸಿರುವ 50% ಸಮಾನ ಹೆಚ್ಚಳದ ತತ್ವವನ್ನು ಹಾಲಿ ಕ್ಷೇತ್ರ ಮರುವಿಂಗಡಣೆಗೆ ಮಾತ್ರ ಸೀಮಿತಗೊಳಿಸಬಾರದು. ಮುಂದಿನ ಎಲ್ಲ ಕ್ಷೇತ್ರ ಮರುವಿಂಗಡಣೆಗಳಲ್ಲಿಯೂ ರಾಜ್ಯಗಳ ಪ್ರಾತಿನಿಧ್ಯದ ಪಾಲನ್ನು ರಕ್ಷಿಸುವ ಶಾಶ್ವತ ತತ್ವವಾಗಿ ಅದನ್ನು ರೂಪಿಸಬೇಕು. ಸಂವಿಧಾನದ 81 ಮತ್ತು 82ನೇ ವಿಧಿಗಳಲ್ಲಿ ಈ ಕುರಿತು ಸ್ಪಷ್ಟವಾದ ರಕ್ಷಣೆಯನ್ನು ಅಳವಡಿಸಬೇಕು. ಭವಿಷ್ಯದಲ್ಲಿ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಎಷ್ಟೇ ಹೆಚ್ಚಿಸಿದರೂ, ಯಾವುದೇ ರಾಜ್ಯದ ಸಾಪೇಕ್ಷ ರಾಜಕೀಯ ಪ್ರಾತಿನಿಧ್ಯಕ್ಕೆ ಧಕ್ಕೆಯಾಗದಂತೆ ಸಂವಿಧಾನಾತ್ಮಕ ವ್ಯವಸ್ಥೆ ರೂಪಿಸಬೇಕು.

ಈ ಲೇಖನ ಓದಿದ್ದೀರಾ?: ಸಂಸತ್ತಿನ ಈ ವಿಶೇಷ ಅಧಿವೇಶನ ಮಹಿಳೆಯರಿಗಾಗಿ ಅಲ್ಲ; ಕ್ಷೇತ್ರ ಮರುವಿಂಗಡಣೆಗಾಗಿ!

ಎಲ್ಲ ರಾಜ್ಯಗಳಲ್ಲಿಯೂ 50% ಸಮಾನ ಕ್ಷೇತ್ರಗಳ ಹೆಚ್ಚಳಕ್ಕೆ ಸಂವಿಧಾನಾತ್ಮಕ ರಕ್ಷಣೆ ದೊರೆತರೂ, ಹಾಲಿ ಕ್ಷೇತ್ರ ಮರುವಿಂಗಡಣೆಯಲ್ಲಿ ಎದುರಾಗಬಹುದಾದ ಮತ್ತೊಂದು ಅಪಾಯವಿದೆ. ಅದು ಕ್ಷೇತ್ರಗಳ ಗಡಿ ನಿರ್ಧಾರಕ್ಕೆ ಸಂಬಂಧಿಸಿದ್ದು. ಕ್ಷೇತ್ರಗಳ ಭೌಗೋಳಿಕ ಗಡಿಗಳನ್ನು ಹೇಗೆ ನಿರ್ಧರಿಸಲಾಗುತ್ತದೆ? ಯಾವ ಗ್ರಾಮಗಳನ್ನು ಯಾವ ಕ್ಷೇತ್ರಕ್ಕೆ ಸೇರಿಸಲಾಗುತ್ತದೆ? ಯಾವ ನಗರ ಪ್ರದೇಶಗಳನ್ನು ವಿಭಜಿಸಲಾಗುತ್ತದೆ? ಯಾವ ಸಮುದಾಯಗಳ ಮತದಾರರನ್ನು ಯಾವ ಕ್ಷೇತ್ರಗಳಲ್ಲಿ ಹಂಚಲಾಗುತ್ತದೆ? ಇವೆಲ್ಲವೂ ಚುನಾವಣೆಯ ಫಲಿತಾಂಶಗಳ ಮೇಲೆ ಪರಿಣಾಮ ಬೀರಬಲ್ಲವು.

ಕ್ಷೇತ್ರಗಳ ಗಡಿಗಳನ್ನು ರಾಜಕೀಯ ಪಕ್ಷಪಾತದಿಂದ ರೂಪಿಸುವುದನ್ನು ‘ಜೆರಿಮ್ಯಾಂಡರಿಂಗ್’ ಎಂದು ಕರೆಯಲಾಗುತ್ತದೆ. ಪ್ರತಿಸ್ಪರ್ಧಿ ಪಕ್ಷದ ಬೆಂಬಲಿಗರನ್ನು ಹಲವು ಕ್ಷೇತ್ರಗಳಿಗೆ ಚದುರಿಸಿ ಅವರ ಚುನಾವಣಾ ಪ್ರಭಾವವನ್ನು ಕುಗ್ಗಿಸುವುದು ‘ಕ್ರ್ಯಾಕಿಂಗ್’. ಅಂತಹ ಮತದಾರರನ್ನು ಕೆಲವೇ ಕ್ಷೇತ್ರಗಳಲ್ಲಿ ಕೇಂದ್ರೀಕರಿಸಿ, ಉಳಿದ ಕ್ಷೇತ್ರಗಳಲ್ಲಿ ಅವರ ಪ್ರಭಾವವನ್ನು ಕಡಿಮೆ ಮಾಡುವುದು ‘ಪ್ಯಾಕಿಂಗ್’.

ಈ ತಂತ್ರಗಳಿಗೆ ಅವಕಾಶ ದೊರೆತರೆ, ಚುನಾವಣೆಯಲ್ಲಿ ಪಕ್ಷಗಳು ಪಡೆಯುವ ಮತಗಳ ಪ್ರಮಾಣಕ್ಕೂ ಅವು ಗೆಲ್ಲುವ ಸ್ಥಾನಗಳಿಗೂ ದೊಡ್ಡ ಅಂತರ ಉಂಟಾಗಬಹುದು. ಹೆಚ್ಚಿನ ಜನಬೆಂಬಲವಿಲ್ಲದೆಯೂ ನಿರ್ದಿಷ್ಟ ಪಕ್ಷ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು. ಆಳುವವರು ತಮ್ಮ ಅನುಕೂಲಕ್ಕೆ ತಕ್ಕಂತೆ ಮತದಾರರನ್ನೇ ಆಯ್ದುಕೊಳ್ಳುವ ಈ ಕುತಂತ್ರವು ಜನತಂತ್ರದ ಅಣಕವಾಗುತ್ತದೆ.

ಇಂತಹ ಕುತಂತ್ರಗಳಿಂದ ಕೂಡಿದ ಕ್ಷೇತ್ರ ಮರುವಿಂಗಡಣೆಯು ಸಾಮಾಜಿಕ ನ್ಯಾಯದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ಈಗಾಗಲೇ ದೇಶದ ಜನಸಂಖ್ಯೆಯಲ್ಲಿ ಗಮನಾರ್ಹ ಪಾಲು ಹೊಂದಿದ್ದರೂ ಲೋಕಸಭೆಯಲ್ಲಿ ಸೀಮಿತ ಪ್ರಾತಿನಿಧ್ಯ ಹೊಂದಿರುವ ಮುಸ್ಲಿಂ ಸಮುದಾಯ ಸೇರಿದಂತೆ ವಿವಿಧ ಅಲ್ಪಸಂಖ್ಯಾತ ಸಮುದಾಯಗಳ ರಾಜಕೀಯ ಪ್ರಭಾವವನ್ನು ಮತ್ತಷ್ಟು ದುರ್ಬಲಗೊಳಿಸುವ ಅಪಾಯವಿದೆ.

2023ರಲ್ಲಿ ಅಸ್ಸಾಂನಲ್ಲಿ ನಡೆದ ಕ್ಷೇತ್ರ ಮರುವಿಂಗಡಣೆಯ ಸಂದರ್ಭದಲ್ಲಿ ಮುಸ್ಲಿಂ ಮತದಾರರು ನಿರ್ಣಾಯಕವಾಗಿದ್ದ ಕೆಲವು ಕ್ಷೇತ್ರಗಳನ್ನು ವಿಭಜಿಸಲಾಗಿದೆ ಹಾಗೂ ಕೆಲವು ಕ್ಷೇತ್ರಗಳ ಸ್ವರೂಪವನ್ನೇ ಬದಲಾಯಿಸಲಾಗಿದೆ ಎಂಬ ಗಂಭೀರ ಆರೋಪಗಳಿವೆ. ಸಂಸತ್ತಿನಲ್ಲಿ ಕ್ಷೇತ್ರಗಳ ಸಂಖ್ಯೆ ಹೆಚ್ಚಾದರೂ ಸಮಾಜದ ಬಹುದೊಡ್ಡ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯ ದೊರೆಯದಿದ್ದರೆ, ಅದನ್ನು ಪ್ರಜಾಪ್ರಭುತ್ವದ ವಿಸ್ತರಣೆ ಎನ್ನಲು ಸಾಧ್ಯವೇ?

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕ್ಷೇತ್ರ ಮರುವಿಂಗಡಣೆಯಲ್ಲಿರುವ ಅಪಾಯಗಳನ್ನು ಗುರುತಿಸುವುದು ಎಷ್ಟು ಮುಖ್ಯವೋ, ಅದಕ್ಕೆ ಪರ್ಯಾಯವಾದ ನ್ಯಾಯಸಮ್ಮತ ವ್ಯವಸ್ಥೆಯನ್ನು ರೂಪಿಸುವುದೂ ಅಷ್ಟೇ ಮುಖ್ಯ.

ಪ್ರಸ್ತುತ ಸಂವಿಧಾನಾತ್ಮಕ ವ್ಯವಸ್ಥೆಯ ಪ್ರಕಾರ, 2026ರ ನಂತರ ನಡೆಯುವ ಮೊದಲ ಜನಗಣತಿಯ ಸಂಬಂಧಿತ ಅಂಕಿಅಂಶಗಳು ಪ್ರಕಟವಾದ ಮೇಲೆ ಲೋಕಸಭಾ ಸ್ಥಾನಗಳ ಮರುಹಂಚಿಕೆಯ ಪ್ರಶ್ನೆ ಮತ್ತೆ ಎದುರಾಗಲಿದೆ. ಹೊಸ ಸಂವಿಧಾನ ತಿದ್ದುಪಡಿಯ ಮೂಲಕ ಈ ವ್ಯವಸ್ಥೆಯನ್ನು ಬದಲಾಯಿಸದಿದ್ದರೆ, ಜನಸಂಖ್ಯಾ ಆಧಾರಿತ ಮರುಹಂಚಿಕೆಯ ಆತಂಕ ಉಳಿಯಲಿದೆ.

ಆದ್ದರಿಂದ, ಈಗ ಪ್ರಸ್ತಾಪವಾಗಿರುವ ಎಲ್ಲ ರಾಜ್ಯಗಳ ಲೋಕಸಭಾ ಸ್ಥಾನಗಳ 50% ಸಮಾನ ಹೆಚ್ಚಳವು ಒಂದು ಪರ್ಯಾಯ ಮಾರ್ಗವೆಂದು ವಿಶ್ಲೇಷಕರು ಹೇಳುತ್ತಾರೆ. ಈ ಸಮಾನ ಹೆಚ್ಚಳದಿಂದ ರಾಜ್ಯಗಳ ನಡುವಿನ ಪ್ರಸ್ತುತ ರಾಜಕೀಯ ಪ್ರಾತಿನಿಧ್ಯದ ಪ್ರಮಾಣವನ್ನು ಬಹುತೇಕ ಉಳಿಸಿಕೊಳ್ಳಬಹುದು. ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಪ್ರತಿನಿಧಿಗಳನ್ನು ಒದಗಿಸಬಹುದು. ಮಹಿಳಾ ಮೀಸಲಾತಿಯನ್ನೂ ಅನುಷ್ಠಾನಗೊಳಿಸಬಹುದು.

ಆದರೆ, ರಾಜ್ಯಗಳ ಪ್ರಾತಿನಿಧ್ಯದ ರಕ್ಷಣೆ, ಕ್ಷೇತ್ರ ಮರುವಿಂಗಡಣೆ ಆಯೋಗದ ಸ್ವಾಯತ್ತತೆ, ಕ್ಷೇತ್ರಗಳ ಗಡಿ ನಿರ್ಧಾರದಲ್ಲಿ ಪಾರದರ್ಶಕತೆ ಹಾಗೂ ಸಾಮಾಜಿಕ ನ್ಯಾಯದ ರಕ್ಷಣೆ – ಇವೆಲ್ಲವೂ ಕ್ಷೇತ್ರ ಮರುವಿಂಗಡಣೆಯ ಅವಿಭಾಜ್ಯ ಭಾಗವಾಗಬೇಕು.

ದೇಶದ ಸಂವಿಧಾನಾತ್ಮಕ ವ್ಯವಸ್ಥೆಯನ್ನು ಬದಲಾಯಿಸುವಷ್ಟು ಮಹತ್ವದ ಮಸೂದೆಯ ವಿಚಾರದಲ್ಲಿ ಯಾವುದೇ ರಾಜಕೀಯ ಪಕ್ಷವೂ ಕೇವಲ ತನ್ನ ತಾತ್ಕಾಲಿಕ ಲಾಭವನ್ನು ಪರಿಗಣಿಸಬಾರದು. ಏಕೆಂದರೆ, ಇಂದು ಒಂದು ರಾಜಕೀಯ ಪಕ್ಷಕ್ಕೆ ಅನುಕೂಲಕರವಾಗಿ ಕಾಣಿಸುವ ವ್ಯವಸ್ಥೆಯೇ ಭವಿಷ್ಯದಲ್ಲಿ ಆ ಪಕ್ಷದ ರಾಜಕೀಯ ಅಸ್ತಿತ್ವಕ್ಕೆ ಅಪಾಯ ತಂದೊಡ್ಡಬಹುದು. ಇಂದು ಒಂದು ಸರ್ಕಾರಕ್ಕೆ ನೀಡುವ ಅನಿಯಂತ್ರಿತ ಅಧಿಕಾರವು ನಾಳೆ ಮತ್ತೊಂದು ಸರ್ಕಾರದ ಕೈಯಲ್ಲಿಯೂ ಇರಬಹುದು. ಹೀಗಾಗಿ, ವ್ಯಕ್ತಿಗಳು ಮತ್ತು ಪಕ್ಷಗಳನ್ನು ಆಧರಿಸಿ ಸಂವಿಧಾನಾತ್ಮಕ ರಕ್ಷಣೆಗಳನ್ನು ನಿರ್ಧರಿಸುವುದು ಅಪಾಯಕಾರಿ.

ಆದ್ದರಿಂದಲೇ, ಎಲ್ಲ ರಾಜ್ಯಗಳಲ್ಲಿಯೂ 50%ರಷ್ಟು ಸಮಾನ ಕ್ಷೇತ್ರಗಳ ಹೆಚ್ಚಳದ ತತ್ವಕ್ಕೆ ಹಾಲಿ ಕ್ಷೇತ್ರ ಮರುವಿಂಗಡಣೆಯಲ್ಲಿ ಮಾತ್ರವಲ್ಲದೆ ಭವಿಷ್ಯದಲ್ಲಿಯೂ ಸಂವಿಧಾನಾತ್ಮಕ ರಕ್ಷಣೆ ಇರಬೇಕು. 2051ರ ನಂತರವೂ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯದ ಪಾಲು ಕುಸಿಯದಂತೆ ಖಾತರಿಪಡಿಸಬೇಕು. ಕ್ಷೇತ್ರ ಮರುವಿಂಗಡಣೆ ಆಯೋಗದ ಸ್ವತಂತ್ರ ಕಾರ್ಯನಿರ್ವಹಣೆಗೆ ಭದ್ರವಾದ ವ್ಯವಸ್ಥೆ ರೂಪಿಸಬೇಕು. ರಾಜಕೀಯ ಪಕ್ಷಪಾತದಿಂದ ಕ್ಷೇತ್ರಗಳ ಗಡಿಗಳನ್ನು ತಿರುಚುವುದನ್ನು ತಡೆಯಬೇಕು. ಮಹಿಳೆಯರು ಮತ್ತು ದುರ್ಬಲ ಸಮುದಾಯಗಳ ರಾಜಕೀಯ ಪ್ರಾತಿನಿಧ್ಯವನ್ನು ಹೆಚ್ಚಿಸಬೇಕು.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಜರಾತ್ SSR | ಕರಡು ಮತದಾರರ ಪಟ್ಟಿ ಪ್ರಕಟ: 12 ಲಕ್ಷಕ್ಕೂ ಹೆಚ್ಚು ಹೊಸ ಮತದಾರರ ಸೇರ್ಪಡೆ!

ಭಾರತೀಯ ಚುನಾವಣಾ ಆಯೋಗವು 2027ರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (SSR) ಅಡಿಯಲ್ಲಿ...

ತಮಿಳುನಾಡು: ತಿರುಪರಂಕುಂಡ್ರಂ ಸಿಕಂದರ್ ದರ್ಗಾದಲ್ಲಿ ನೂರಕ್ಕೂ ಹೆಚ್ಚು ಮುಸ್ಲಿಂ ಭಕ್ತರಿಂದ ಪ್ರಾರ್ಥನೆ

ಮಧುರೈನ ತಿರುಪರಂಕುಂಡ್ರಂ ಬೆಟ್ಟದ ಮೇಲಿರುವ ಹಜರತ್ ಸುಲ್ತಾನ್ ಸಿಕಂದರ್ ಬಾದುಷಾ ಔಲಿಯಾ...

ವಿಧಾನಸಭಾ ಚುನಾವಣೆಗಳ ಮೇಲೆ ಕಣ್ಣಿಟ್ಟು ಸಂಸತ್ತಿನ ವಿಶೇಷ ಅಧಿವೇಶನ: ತೇಜಸ್ವಿ ಯಾದವ್ ಆರೋಪ

ಮುಂಬರುವ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಸಂಸತ್ತಿನ...

ಬಾಗಲಕೋಟೆ | ಡಿ.1 ರಂದು ಜಿಲ್ಲೆಗೆ ಸಿಎಂ : ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ

ಬೀಳಗಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಬಾದಾಮಿ ತಾಲೂಕಿನ ಹೂಲಗೇರಿ ಗ್ರಾಮದಲ್ಲಿ...