ಈ ದಿನ ಸಂಪಾದಕೀಯ | ಮಹಾರಾಷ್ಟ್ರ, ಝಾರ್ಖಂಡ್ ಚುನಾವಣೆ- ಬಿಜೆಪಿ ಪಾಲಿಗೆ ವರವೇ ಅಥವಾ ಶಾಪವೇ?

Date:

Advertisements

ಎರಡು ಲೋಕಸಭಾ ಚುನಾವಣೆಗಳನ್ನು ಸ್ವಂತ ಬಲದ ಮೇಲೆ ಗೆದ್ದಿದ್ದ ಬಿಜೆಪಿ, ಮೂರನೆಯ ಸಲ ಮುಗ್ಗರಿಸಿತ್ತು. ಆ ನಂತರ ಮೊನ್ನೆ ಮೊನ್ನೆ ಜರುಗಿದ ಹರಿಯಾಣ ವಿಧಾನಸಭಾ ಚುನಾವಣೆಗಳಲ್ಲಿ ಎಲ್ಲ ನಿರೀಕ್ಷೆಗಳನ್ನು ಬುಡಮೇಲು ಮಾಡಿ ಬಿಜೆಪಿ ಆ ರಾಜ್ಯದಲ್ಲಿ ಮೂರನೆಯ ಸಲ ಅಧಿಕಾರ ಹಿಡಿದು ಅಚ್ಚರಿ ಮೂಡಿಸಿದೆ. ಆಡಳಿತ ವಿರೋಧಿ ಭಾವನೆಯನ್ನು ಮೆಟ್ಟಿ ಗೆದ್ದಿದೆ

ಮಹಾರಾಷ್ಟ್ರ ಮತ್ತು ಝಾರ್ಖಂಡ್ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಗಳು ಹೊರಬಿದ್ದಿವೆ. ವರ್ಷಾಂತ್ಯವು ನೀಡುವ ರಾಜಕೀಯ ಸಂಕೇತಕ್ಕಾಗಿ ದೇಶ ಎದುರು ನೋಡಿದೆ. ಇದೇ ವರ್ಷದ ಆರಂಭವು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರಕ್ಕೆ ಬಹುಮತ ನೀಡಿತ್ತು. ಕಳೆದ ಹತ್ತು ವರ್ಷಗಳಲ್ಲಿ ಎರಡು ಲೋಕಸಭಾ ಚುನಾವಣೆಗಳನ್ನು ಸ್ವಂತ ಬಲದ ಮೇಲೆ ಗೆದ್ದಿದ್ದ ಮೋದಿ-ಶಾ ನೇತೃತ್ವದ ಬಿಜೆಪಿ, ಮೂರನೆಯ ಸಲ ಮುಗ್ಗರಿಸಿತ್ತು. ಆ ನಂತರ ಮೊನ್ನೆ ಮೊನ್ನೆ ಜರುಗಿದ ಹರಿಯಾಣ ವಿಧಾನಸಭಾ ಚುನಾವಣೆಗಳಲ್ಲಿ ಎಲ್ಲ ನಿರೀಕ್ಷೆಗಳನ್ನು ಬುಡಮೇಲು ಮಾಡಿ ಬಿಜೆಪಿ ಆ ರಾಜ್ಯದಲ್ಲಿ ಮೂರನೆಯ ಸಲ ಅಧಿಕಾರ ಹಿಡಿದು ಅಚ್ಚರಿ ಮೂಡಿಸಿದೆ. ಆಡಳಿತ ವಿರೋಧಿ ಭಾವನೆಯನ್ನು ಮೆಟ್ಟಿ ಗೆದ್ದಿದೆ.
ವರ್ಷಾರಂಭದ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಚೇತರಿಸಿಕೊಂಡು ತಲೆ ಎತ್ತಿದ್ದವು. ಹರಿಯಾಣ ಚುನಾವಣೆ ಫಲಿತಾಂಶ ಈ ಚೇತರಿಕೆಗೆ ಹಂಗಾಮಿ ಹಿನ್ನಡೆಯೇ ಹೌದು. ಇದೀಗ ಮಹಾರಾಷ್ಟ್ರ ಮತ್ತು ಝಾರ್ಖಂಡ್‌ ವಿಧಾನಸಭಾ ಚುನಾವಣೆಗಳು ಬಿಜೆಪಿ ಮತ್ತು ಪ್ರತಿಪಕ್ಷಗಳಿಗೆ ಯಾವ ದಿಕ್ಕು ತೋರಲಿವೆ ಎಂಬುದು ಆತಂಕ ಬೆರೆತ ಕುತೂಹಲದ ವಿಷಯವಾಗಿದೆ.

ಮಹಾರಾಷ್ಟ್ರ ಕೂಡ ಬಂಗಾಳದಂತೆ ಬಲಿಷ್ಠ ಉಪರಾಷ್ಟ್ರೀಯತೆ ಅಸ್ಮಿತೆಯನ್ನು ಹೊಂದಿರುವ ರಾಜ್ಯ. ಇಲ್ಲಿನ ವಿಧಾನಸಭೆಯ ಸದಸ್ಯ ಬಲ 288. ಹರಿಯಾಣದಂತೆ ಝಾರ್ಖಂಡ ಕೂಡ ಪುಟ್ಟ ರಾಜ್ಯ. ವಿಧಾನಸಭಾ ಸದಸ್ಯ ಬಲ 81. ಶಿವಸೇನೆ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್.ಸಿ.ಪಿ) ಮಹಾರಾಷ್ಟ್ರದ ಪ್ರಬಲ ಪ್ರಾದೇಶಿಕ ಪಕ್ಷಗಳು. ಈ ಎರಡೂ ಪಕ್ಷಗಳನ್ನು ಬಿಜೆಪಿ ಹೋಳು ಮಾಡಿದೆ. ಹೋಳುಗಳ ಜೊತೆ ಸೇರಿ ಮಹಾಯುತಿ ಸರ್ಕಾರವನ್ನೂ ರಚಿಸಿದೆ. ತನ್ನ ವಿರುದ್ಧ ನಿಲ್ಲುವ ಪಕ್ಷಗಳನ್ನು ಅಪಹರಿಸುವ ಇಲ್ಲವೇ ಒಡೆಯುವ ಪಕ್ಷವೆಂಬ ಕಳಂಕವನ್ನು ಅಂಟಿಸಿಕೊಂಡಿದೆ. ಈ ಎರಡೂ ಪ್ರಾದೇಶಿಕ ಪಕ್ಷಗಳನ್ನು ಸೀಳಿರುವ ಬಿಜೆಪಿಯ ಕೃತ್ಯ ಮಹಾರಾಷ್ಟ್ರದ ಮತದಾರರನ್ನು ಸಿಟ್ಟಿಗೆಬ್ಬಿಸಿರುವ ಸೂಚನೆಗಳಿವೆ. ಈ ಸೂಚನೆಗಳು ಇದೇ ವರ್ಷಾರಂಭದಲ್ಲಿ ಜರುಗಿದ ಲೋಕಸಭಾ ಚುನಾವಣೆಗಳಲ್ಲಿ ನಿಚ್ಚಳವಾಗಿ ಒಡಮೂಡಿದ್ದವು. ಕಾಂಗ್ರೆಸ್, ಶಿವಸೇನೆ (ಉದ್ಧವ ಠಾಕರೆ ಬಣ), ಎನ್.ಸಿ.ಪಿ (ಶರದ್ ಪವಾರ್ ಬಣ) ಮೈತ್ರಿಕೂಟವಾದ ಮಹಾವಿಕಾಸ ಅಘಾಢಿಯು ಬಿಜೆಪಿಯ ರೆಕ್ಕೆಪುಕ್ಕಗಳನ್ನು ಕತ್ತರಿಸಿತ್ತು.

Advertisements

ಲೋಕಸಭಾ ಚುನಾವಣೆಯಲ್ಲಿ ಒಟ್ಟು 48ರ ಪೈಕಿ ಮಹಾವಿಕಾಸ ಅಘಾಡಿ 31 ಸೀಟುಗಳನ್ನು ಗೆದ್ದಿತ್ತು. ಆಳುವ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿ ಕೇವಲ 17ಕ್ಕೆ ಕುಸಿದಿತ್ತು. ಕಾಂಗ್ರೆಸ್ಸಿನ ಸೀಟುಗಳು ಒಂದರಿಂದ 13ಕ್ಕೆ ಏರಿದ್ದವು. ಬಿಜೆಪಿ 23ರಿಂದ 9ಕ್ಕೆ ಬಿದ್ದಿತ್ತು.

ಹರಿಯಾಣದ ಫಲಿತಾಂಶಗಳು ಇಳಿಜಾರಿನಲ್ಲಿರುವ ಬಿಜೆಪಿಗೆ ಉತ್ಸಾಹ ತುಂಬಿವೆ. ಈ ಅಂಶದ ಆಚೆಗೆ ಮಹಾರಾಷ್ಟ್ರದ ಚುನಾವಣೆಗಳನ್ನು ಪ್ರಭಾವಿಸುವುದು ಸಾಧ್ಯವಿಲ್ಲ. ಎರಡೂ ರಾಜ್ಯಗಳ ಸ್ವರೂಪ ಮತ್ತು ಚುನಾವಣಾ ವಿಷಯಗಳೇ ಬೇರೆ. ಕಳೆದ ಐದು ವರ್ಷಗಳಲ್ಲಿ ಮಹಾರಾಷ್ಟ್ರದ ರಾಜಕಾರಣ ಅಸ್ಥಿರಗೊಂಡಿದೆ. ಮೂವರು ಮುಖ್ಯಮಂತ್ರಿಗಳನ್ನು ಮತ್ತು ನಾಲ್ವರು ಉಪಮುಖ್ಯಮಂತ್ರಿಗಳನ್ನು ಕಂಡಿದೆ. ಶಿವಸೇನೆ ಮತ್ತು ಎನ್.ಸಿ.ಪಿ.ಯನ್ನು ಸೀಳಿದ ಬೆಳವಣಿಗೆ ಮಹಾರಾಷ್ಟ್ರೀಯರ ಅಸ್ಮಿತೆಯನ್ನು ಕೆಣಕಿದೆ.

ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿ ಪ್ರಕಟವಾದರೂ ಮಹಾವಿಕಾಸ ಅಘಾಡಿ ಮೈತ್ರಿಕೂಟದ ಸೀಟು ಹೊಂದಾಣಿಕೆ ಅಂತಿಮಗೊಂಡಿಲ್ಲ. ಗೆದ್ದರೆ ಮುಖ್ಯಮಂತ್ರಿ ಯಾರಾಗಬೇಕೆಂಬ ಕುರಿತು ಒಮ್ಮತ ಮೂಡಿಲ್ಲ. ಮರಾಠಾ ಮೀಸಲಾತಿಯು ಚುನಾವಣಾ ವಿಷಯಗಳ ಪಟ್ಟಿಗೆ ಸೇರಿದರೆ ಆಶ್ಚರ್ಯವಿಲ್ಲ. ಹಿಂದುಳಿದ ವರ್ಗಗಳ ಮತಗಳನ್ನು ಒಲಿಸಿಕೊಳ್ಳಲು ತೀವ್ರ ಪೈಪೋಟಿಯಿದೆ. ಕೃಷಿ ಬಿಕ್ಕಟ್ಟು, ದಲಿತ ಮತಗಳು ಪ್ರಮುಖ ಪಾತ್ರ ವಹಿಸಲಿವೆ.

ಮಹಾವಿಕಾಸ ಅಘಾಡಿ ಮತ್ತು ಮಹಾಯುತಿ ಮೈತ್ರಿಗಳ ನಡುವಣ ಈ ಪೈಪೋಟಿಗೆ ಮೂರನೆಯ ಆಯಾಮವೊಂದು ಸೇರಿಕೊಂಡಿದೆ. ಬಚ್ಚು ಕಾಡು ಅವರ ಪ್ರಹಾರ್ ಜನಶಕ್ತಿ ಪಾರ್ಟಿ, ರಾಜು ಶೆಟ್ಟಿ ಅವರ ಸ್ವಾಭಿಮಾನಿ ಶೇತ್ಕರಿ ಸಂಘಟನಾ ಹಾಗೂ ಸಂಭಾಜೀರಾಜೇ ಅವರ ಸ್ವರಾಜ್ಯ ಸಂಘಟನಾ ಎಂಬ ಸಣ್ಣ ಪಕ್ಷಗಳು ಪರಸ್ಪರ ಕೈಗೂಡಿಸಿ ಸ್ಪರ್ಧಿಸುವ ಸಾಧ್ಯತೆ ಇದೆ.

ಪ್ರಕಾಶ್ ಅಂಬೇಡ್ಕರ್ ಅವರ ವಂಚಿತ ಬಹುಜನ ಅಘಾಡಿ (ವಿಬಿಎ) ಮತ್ತು ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂ.ಎನ್.ಎಸ್) ಪ್ರಭಾವವಿರುವ ಕ್ಷೇತ್ರಗಳಿವೆ. ಕಳೆದ ಸಲ ಮಹಾಯುತಿಯನ್ನು ಬೆಂಬಲಿಸಿದ್ದ ರಾಜ್ ಠಾಕ್ರೆ ಈ ಸಲ ಸ್ವಂತವಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ. ಲೋಕಸಭಾ ಚುನಾವಣೆಗಳಲ್ಲಿ ವಿಬಿಎ ಶೇ.2.75ರಷ್ಟು ಮತಗಳನ್ನು ಪಡೆದಿತ್ತು. ರಾಜ್ಯದ ಜನಸಂಖ್ಯೆಯಲ್ಲಿ ಮರಾಠರದು ಶೇ.30. ದಲಿತರ ಪ್ರಮಾಣ ಶೇ.11.

ಇತರೆ ಪಕ್ಷಗಳ ಗ್ಯಾರಂಟಿ ಯೋಜನೆಗಳನ್ನು ಕಟುವಾಗಿ ಟೀಕಿಸುವ ಮೋದಿ-ಶಾ ಅವರ ಬಿಜೆಪಿ, ಕೆಲ ವಾರಗಳ ಹಿಂದೆ ಮಹಾರಾಷ್ಟ್ರದಲ್ಲಿ ಹಲವು ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿದೆ. ಈ ಉದ್ದೇಶಕ್ಕಾಗಿಯೇ ಮಹಾರಾಷ್ಟ್ರ ಚುನಾವಣೆಯನ್ನು ಹರಿಯಾಣದ ಜೊತೆಯಲ್ಲಿ ಮಾಡದೆ ಕಾಲಾವಕಾಶ ಪಡೆಯಲಾಯಿತು. 21-65 ವಯೋಮಾನದ ಎರಡೂವರೆ ಕೋಟಿ ಹೆಣ್ಣುಮಕ್ಕಳಿಗೆ ತಲಾ ಒಂದೂವರೆ ಸಾವಿರ ರೂಪಾಯಿಯ ಮಾಸಿಕ ನಗದು ನೀಡಿಕೆಯ ಯೋಜನೆ ಈಗಾಗಲೆ 1.85 ಕೋಟಿ ಫಲಾನುಭವಿಗಳನ್ನು ತಲುಪಿದೆ.

ಝಾರ್ಖಂಡದ ರಾಜಕೀಯ ಚಿತ್ರಣವೇ ಬೇರೆ. ಝಾರ್ಖಂಡ್ ಮುಕ್ತಿ ಮೋರ್ಚ (ಜೆಎಂಎಂ) ಮತ್ತು ಕಾಂಗ್ರೆಸ್ ನ ದೋಸ್ತಿ ಸರ್ಕಾರ ಮರು ಆಯ್ಕೆ ಬಯಸಿದೆ. ಈ ರಾಜ್ಯದಲ್ಲಿಯೂ ಬಿಜೆಪಿ ಲೋಕಸಭಾ ಹಿನ್ನಡೆ ಎದುರಿಸಿತು. ಆದರೆ ವಿಧಾನಸಭಾ ಚುನಾವಣೆಗಳಲ್ಲಿ ತೀವ್ರ ಸ್ಪರ್ಧೆ ಒಡ್ಡುವ ನಿರೀಕ್ಷೆಗಳಿವೆ. ಇಲ್ಲಿಯೂ ಜೆ.ಎಂ.ಎಂ. ಮತ್ತು ಕಾಂಗ್ರೆಸ್ ನಡುವೆ ಸೀಟು ಹೊಂದಾಣಿಕೆ ಇನ್ನೂ ಅಂತಿಮ ಆಗಿಲ್ಲ.

ಸುಪ್ರೀಮ್ ಕೋರ್ಟು ಇತ್ತೀಚೆಗೆ ಮಧ್ಯಪ್ರವೇಶಿಸುವ ತನಕ ಹಣ ಅಕ್ರಮ ವರ್ಗಾವಣೆ ಕಾಯಿದೆಯ (ಪಿ.ಎಂ.ಎಲ್.ಎ) ಅಡಿ ಜಾಮೀನು ಬಹುತೇಕ ಅಸಾಧ್ಯವಾಗಿತ್ತು. ಆರೋಪಿಗಳಾದವರಿಗೆ ಅನಿರ್ದಿಷ್ಟಾವಧಿ ಜೈಲುವಾಸ ನಿಶ್ಚಿತವಾಗಿತ್ತು. ಝಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಇದೇ ವರ್ಷದ ಜನವರಿಯಲ್ಲಿ ಈ ಕರಾಳ ಕಾಯಿದೆಯ ಅನ್ವಯ ಬಂಧಿಸಲಾಗಿತ್ತು. ಬಂಧನಕ್ಕೆ ಮುನ್ನ ಸೊರೇನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಝಾರ್ಖಂಡ್ ಹೈಕೋರ್ಟು ಇತ್ತೀಚೆಗೆ ಅವರಿಗೆ ಜಾಮೀನು ನೀಡಿತು. ಅವರು ದೋಷಿಯೆಂದು ಮೇಲ್ನೋಟಕ್ಕೆ ಕಂಡುಬಂದಿಲ್ಲ. ಜಾಮೀನು ನೀಡಿದರೆ ಅವರು ಅಪರಾಧ ಎಸಗುವ ಸಾಧ್ಯತೆ ಇಲ್ಲ ಎಂದು ಹೈಕೋರ್ಟ್ ಸಾರಿತ್ತು. ಈ ಆಪಾದನೆ ಮತ್ತು ಬಂಧನಕ್ಕೆ ಝಾರ್ಖಂಡ್‌ನ ಮತದಾರರು, ವಿಶೇಷವಾಗಿ ಬುಡಕಟ್ಟು ಜನಾಂಗಗಳ ಜನಸಮುದಾಯ ಯಾವ ರೀತಿ ಪ್ರತಿಕ್ರಿಯಿಸಲಿವೆ ಎಂಬುದು ಚುನಾವಣಾ ಫಲಿತಾಂಶವನ್ನು ಪ್ರಭಾವಿಸಲಿದೆ.

ಹೇಮಂತ್ ಜೈಲುಪಾಲಾದಾಗ ಮುಖ್ಯಮಂತ್ರಿ ಆದವರು ಜೆ.ಎಂ.ಎಂ.ನ ಹಿರಿಯ ಮುಖಂಡ ಚಂಪೈ ಸೊರೇನ್. ಜಾಮೀನಿನ ಮೇಲೆ ಬಿಡುಗಡೆಯಾದ ಹೇಮಂತ್ ಅವರು ಪುನಃ ಮುಖ್ಯಮಂತ್ರಿ ಹುದ್ದೆ ಬಯಸಿ ಚಂಪೈ ಅವರನ್ನು ಕೆಳಗಿಳಿಸಿದರು. ಈ ಚರ್ಯೆಯ ವಿರುದ್ಧ ತೀವ್ರ ಅಸಮಾಧಾನಗೊಂಡ ಚಂಪೈ ಬಿಜೆಪಿ ಸೇರಿದ್ದಾರೆ. ಝಾರ್ಖಂಡದ ಮಾಜಿ ಮುಖ್ಯಮಂತ್ರಿ ಮಧು ಕೋಡ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿದ್ದವರು. ಅಕ್ರಮ ಗಣಿಗಾರಿಕೆಯಲ್ಲಿ 4000 ಕೋಟಿ ರುಪಾಯಿಗಳ ಅಕ್ರಮ ಸಂಪತ್ತನ್ನು ಗಳಿಸಿದ್ದ ಆಪಾದನೆ ಅವರ ಮೇಲಿತ್ತು. 44 ತಿಂಗಳ ಕಾಲ ಜೈಲಿನಲ್ಲಿದ್ದರು. ಈಗಲೂ ಹಲವಾರು ಕೇಸುಗಳನ್ನು ಎದುರಿಸಿದ್ದಾರೆ. ಹಾಲಿ ಜಾಮೀನಿನ ಮೇಲೆ ಹೊರಗಿದ್ದಾರೆ. 2017ರಲ್ಲಿ ದೆಹಲಿಯ ಸಿಬಿಐ ಕೋರ್ಟು ಕಲ್ಲಿದ್ದಲು ಹಗರಣದ ಎಂಟು ಕೇಸುಗಳಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ಆದೇಶಕ್ಕೆ ದೆಹಲಿ ಹೈಕೋರ್ಟು ತಡೆಯಾಜ್ಞೆ ನೀಡಿತ್ತು. ಅದೇ ವರ್ಷ ತಮ್ಮ ಚುನಾವಣಾ ವೆಚ್ಚದ ತಪ್ಪು ಲೆಕ್ಕ ನೀಡಿದ್ದಾರೆಂದು ಮುಂದಿನ ಮೂರು ವರ್ಷಗಳ ಕಾಲ ಚುನಾವಣೆಗಳಿಗೆ ಸ್ಪರ್ಧಿಸಲು ಅನರ್ಹ ಎಂದು ಚುನಾವಣಾ ಆಯೋಗ 2018ರಲ್ಲಿ ಸಾರಿತ್ತು.

ಭ್ರಷ್ಟಾಚಾರದ ಅಪರಾವತಾರ ಎಂದು ಬಿಜೆಪಿ ಕೋಡ ಅವರನ್ನು ಹಂಗಿಸಿತ್ತು. ಆದರೆ ಇದೇ ಅಪರಾವತಾರಕ್ಕೆ ಸದ್ದು ಗದ್ದಲವಿಲ್ಲದೆ ಬಾಗಿಲು ತೆರೆದು ಒಳ ಸೇರಿಸಿಕೊಂಡಿದೆ ಬಿಜೆಪಿ. ಭ್ರಷ್ಟಾಚಾರಕ್ಕೆ ತಮ್ಮದು ಶೂನ್ಯಸಹನೆ ಎಂದೆಲ್ಲ ಕೊಚ್ಚಿಕೊಳ್ಳುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗೆ ಕೋಡ ಜೊತೆ ವೇದಿಕೆ ಹಂಚಿಕೊಂಡಿದ್ದರು! ಏಳು ತಿಂಗಳ ಹಿಂದೆ ಫೆಬ್ರವರಿಯಲ್ಲೇ ಕೋಡ ಅವರನ್ನು ಸೇರಿಸಿಕೊಂಡಿದ್ದ ಬಿಜೆಪಿ ಮೊನ್ನೆ ಮೊನ್ನೆಯ ತನಕ ಈ ಸಂಗತಿಯನ್ನು ಮುಚ್ಚಿಟ್ಟಿತ್ತು.

ಮುಂದಿನ ವರ್ಷದ ಆರಂಭದಲ್ಲಿ ದೆಹಲಿ ವಿಧಾನಸಭೆಗೆ ಮತ್ತು ವರ್ಷಾಂತ್ಯದಲ್ಲಿ ಬಿಹಾರದ ವಿಧಾನಸಭೆಗೆ ಚುನಾವಣೆಗಳು ನಡೆಯಲಿವೆ. ಮಹಾರಾಷ್ಟ್ರ ಮತ್ತು ಝಾರ್ಖಂಡ್ ಫಲಿತಾಂಶಗಳು ದೆಹಲಿ- ಬಿಹಾರಕ್ಕೆ ಕೈಮರ ಆಗಲಿವೆಯೇ ಕಾದು ನೋಡಬೇಕಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X