20 ತಿಂಗಳು ಜನರು ಭಯದಲ್ಲೇ ಬದುಕಿದ್ದಾರೆ. ಕುಕಿ ಮತ್ತು ಮೈತೇಯಿಗಳಿಬ್ಬರೂ ಶಸ್ತ್ರಗಳನ್ನು ತೊರೆದು ಶಾಂತಿಯತ್ತ ಹೆಜ್ಜೆ ಇಡಬೇಕಾಗಿದೆ. ಹೀಗಾಗಿ ನಾಗರಿಕರಲ್ಲಿ ಹೆಚ್ಚಿನ ವಿಶ್ವಾಸ ಮೂಡಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ಬಿರೇನ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ಫೆಬ್ರವರಿ 13ರಂದು ಮಣಿಪುರ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಯಿತು. ಈಗ ರಾಜ್ಯದ ಅಧಿಕಾರ ರಾಜ್ಯಪಾಲರ ಕೈಯಲ್ಲಿದೆ. 20 ತಿಂಗಳ ಹಿಂಸಾಚಾರದ ಬಳಿಕ, ಬಹಳ ತಡವಾಗಿಯಾದರೂ ಬಿರೇನ್ ಕುರ್ಚಿಯಿಂದ ಇಳಿಯುವುದಕ್ಕೆ ಬಿಜೆಪಿಯೊಳಗಿನ ಆಂತರಿಕ ಒತ್ತಡಗಳೂ ಕಾರಣವಾಗಿದ್ದವು. ರಾಷ್ಟ್ರಪತಿ ಆಡಳಿತ ಜಾರಿಯಾದ ಬಳಿಕ ಏನಾದರೂ ಬದಲಾವಣೆಗಳು ಘಟಿಸುತ್ತವೆಯೇ ಎಂಬ ನಿರೀಕ್ಷೆಗಳು ರಾಜ್ಯದ ಜನರಲ್ಲಿದ್ದವು. ಇದರ ಬೆನ್ನಲ್ಲೇ ಫೆಬ್ರುವರಿ 20ರಂದು ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರು ಹೊರಡಿಸಿರುವ ಹೊಸ ಆದೇಶವು ಮಣಿಪುರದಲ್ಲಿ ಮುಂದಾಗಬಹುದಾದ ಪಲ್ಲಟಗಳನ್ನು ಸೂಚಿಸುತ್ತಿದೆ.
”ಎಲ್ಲ ಸಮುದಾಯಗಳ ಜನರಲ್ಲಿ, ವಿಶೇಷವಾಗಿ ಕಣಿವೆ ಮತ್ತು ಗುಡ್ಡಗಾಡಿನ ಯುವಕರಲ್ಲಿ ಮನವಿ ಮಾಡುತ್ತೇನೆ. ರಾಜ್ಯದಲ್ಲಿ ಲೂಟಿ ಮಾಡಲ್ಪಟ್ಟ ಮತ್ತು ಅಕ್ರಮವಾಗಿ ಸಂಗ್ರಹಿಸಿರುವ ಶಸ್ತ್ರಾಸ್ತ್ರಗಳನ್ನು, ಮದ್ದುಗುಂಡುಗಳನ್ನು ಮುಂದಿನ ಏಳು ದಿನಗಳಲ್ಲಿ ಹಿಂತಿರುಗಿಸಬೇಕೆಂದು ಕೋರುತ್ತೇನೆ. ಇಂದಿನಿಂದಲೇ (ಗುರುವಾರದಿಂದಲೇ) ಈ ಆದೇಶ ಜಾರಿಗೆ ಬರುತ್ತಿದೆ. ಏಳು ದಿನಗಳೊಳಗೆ ನಿಮ್ಮ ಹತ್ತಿರದ ಪೊಲೀಸ್ ಠಾಣೆ, ಹೊರಠಾಣೆ ಅಥವಾ ಭದ್ರತಾ ಪಡೆಗಳ ಶಿಬಿರಕ್ಕೆ ಶಸ್ತ್ರಗಳನ್ನು ನೀಡಬಹುದು. ಈ ಪ್ರಕ್ರಿಯೆಯಿಂದಾಗಿ ಮಣಿಪುರದಲ್ಲಿ ಶಾಂತಿ ಮರುಸ್ಥಾಪನೆಗೆ ಖಾತ್ರಿಯ ಸೂಚನೆ ಸಿಗುತ್ತದೆ. ನಿಗದಿತ ಸಮಯದೊಳಗೆ ಶಸ್ತ್ರಾಸ್ತ್ರಗಳನ್ನು ಹಿಂತಿರುಗಿಸಿದರೆ ಯಾವುದೇ ದಂಡನಾತ್ಮಕ ಕ್ರಮವನ್ನು ಕೈಗೊಳ್ಳುವುದಿಲ್ಲ ಎಂಬ ಭರವಸೆಯನ್ನು ನಿಮಗೆ ನೀಡಲು ಬಯಸುತ್ತೇನೆ. ಸೂಚಿತ ದಿನದೊಳಗೆ ಶಸ್ತ್ರಗಳನ್ನು ಹಿಂತಿರುಗಿಸದೆ ಹೋದರೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಉಜ್ವಲ ಭವಿಷ್ಯದ ಭರವಸೆ ಮತ್ತು ವಿಶ್ವಾಸದೊಂದಿಗೆ ನಮ್ಮ ರಾಜ್ಯವನ್ನು ಪುನರ್ ನಿರ್ಮಿಸೋಣ. ಮುಂದೆ ಬಂದು ಶಾಂತಿಯನ್ನು ಆರಿಸಿಕೊಳ್ಳಿರಿ” ಎಂದು ಮನವಿ ಮಾಡಿದ್ದಾರೆ ಗವರ್ನರ್ ಭಲ್ಲಾ.
2023ನೇ ಇಸವಿಯ ಮೇ 3ರಂದು ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದಾಗ ಮಣಿಪುರ ಪೊಲೀಸ್ ತರಬೇತಿ ಕೇಂದ್ರ ಸೇರಿದಂತೆ ಹಲವು ಪೊಲೀಸ್ ಠಾಣೆಗಳಿಂದ ನಾಗರಿಕರು ಬಂದೂಕುಗಳನ್ನು ಹೊತ್ತೊಯ್ದರು. ಇದಕ್ಕೆ ಪೊಲೀಸ್ ಅಧಿಕಾರಿಗಳೂ ಪರೋಕ್ಷವಾಗಿ ಬೆಂಬಲ ನೀಡಿದ್ದರು ಎಂಬ ಸಂಗತಿ ಆನಂತರದಲ್ಲಿ ಬಯಲಾಗಿತ್ತು. ಆದರೆ ಅಂದು ಮಾಡಿದ ಎಡವಟ್ಟಿನಿಂದಾಗಿ ಜನರ ಕೈಗೆ ಬಂದೂಕುಗಳು ಹೋಗಿದ್ದಂತೂ ಸತ್ಯ. ಸರ್ಕಾರವೇ ಒಪ್ಪಿಕೊಂಡಿರುವ ಪ್ರಕಾರ, “5,000 ಶಸ್ತ್ರಾಸ್ತ್ರಗಳು ಲೂಟಿಯಾಗಿವೆ”. ಈ ಕಾರಣಕ್ಕಾಗಿಯೇ ಮಣಿಪುರ ಸಂಘರ್ಷ ಇಷ್ಟು ದೀರ್ಘ ಮುಂದುವರಿಯಿತು ಎನ್ನಬಹುದು. ಜನರಿಂದ ಬಂದೂಕು ಕಸಿಯದ ಹೊರತು ಮಣಿಪುರದಲ್ಲಿ ಶಾಂತಿಯೆಂಬುದು ಮರೀಚಿಕೆ. ನಾಗರಿಕರು ಶಸ್ತ್ರಾಸ್ತ್ರಗಳನ್ನು ಮರಳಿಸದಿದ್ದರೆ ಮಣಿಪುರ ಆಂತರಿಕ ಕದನ ಮುಗಿಯದ ಅಧ್ಯಾಯವಾಗುತ್ತದೆ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ ಎಂದು ಹೇಳುವ ಮುನ್ನ ಶಾಲೆಗಳ ಸ್ಥಿತಿ ಗಮನಿಸಿ ಸಚಿವರೇ
ಈವರೆಗೆ 225ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. 60,000 ಜನರು ನಿರಾಶ್ರಿತ ಶಿಬಿರಗಳಲ್ಲಿ ಜೀವ ಉಳಿಸಿಕೊಂಡಿದ್ದಾರೆ, 1500 ಮಂದಿ ಗಾಯಗೊಂಡಿದ್ದಾರೆ, 28 ಜನರು ಕಾಣೆಯಾಗಿದ್ದಾರೆ ಅರ್ಥಾತ್ ನಿಗೂಢವಾಗಿ ಹತ್ಯೆಯಾಗಿದ್ದಾರೆ. 13,247 ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ. ಮಕ್ಕಳ ಶಿಕ್ಷಣದಲ್ಲಿ ಏರುಪೇರಾಗಿದೆ. ಇಷ್ಟಾದರೂ ಪ್ರಧಾನಿ ನರೇಂದ್ರ ಮೋದಿಯವರು ಈವರೆಗೂ ಮಣಿಪುರಕ್ಕೆ ಕಾಲಿಡಲಿಲ್ಲ. ಸಮುದಾಯಗಳ ನಡುವೆ ಬಿರುಕು ಮೂಡಲು ಪ್ರಮುಖ ಕಾರಣವಾಗಿದ್ದ ಬಿರೇನ್, ಪದಚ್ಯುತಿಯೂ ತಡವಾಯಿತು. ಅಂತಿಮವಾಗಿ ರಾಷ್ಟ್ರಪತಿ ಆಡಳಿತ ಹೇರಿಕೆಯಾಯಿತು. ಇಷ್ಟೆಲ್ಲದರ ನಡುವೆ ಶಸ್ತ್ರಾಸ್ತ್ರಗಳನ್ನು ಹಿಂತಿರುಗಿಸಿ ಶಾಂತಿಯ ಕಡೆ ಹೆಜ್ಜೆ ಇಡುವಂತೆ ಗವರ್ನರ್ ಒತ್ತಾಯಿಸಿರುವುದು ಮಹತ್ವದ ನಡೆಯೇ ಸರಿ.
ರಾಜ್ಯಪಾಲರ ಮಾತನ್ನು ನಿಜಕ್ಕೂ ನಾಗರಿಕರು ಪಾಲಿಸುತ್ತಾರಾ? ಎಂಬುದು ಸದ್ಯ ನಮ್ಮ ಮುಂದಿರುವ ಪ್ರಶ್ನೆ. ಗುಡ್ಡಗಾಡು ಮತ್ತು ಕಣಿವೆ ಭಾಗದ ಕೆಲವೆಡೆ ನಾಗರಿಕರು ಶಸ್ತ್ರಾಸ್ತ್ರಗಳೊಂದಿಗೆ ಶರಣಾಗಿದ್ದಾರೆಂಬ ವರದಿಗಳಾಗಿವೆ. ಆದರೆ ಜನರಿಗೆ ಆಡಳಿತ ವ್ಯವಸ್ಥೆಯ ಮೇಲೆ ಆತಂಕವಿದೆ. ”ಒಂದು ವೇಳೆ ನಾವು ಶಸ್ತ್ರಾಸ್ತ್ರಗಳನ್ನೆಲ್ಲ ಒಪ್ಪಿಸಿದ ಬಳಿಕ, ನಮ್ಮ ವಿರುದ್ಧ ಕ್ರಮ ಜರುಗಿಸಬಹುದು” ಎಂಬ ಗುಮಾನಿ ಅವರದ್ದು. ಏಳು ದಿನಗಳ ಒಳಗೆ ಶಸ್ತ್ರಗಳನ್ನು ಒಪ್ಪಿಸದಿದ್ದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂಬ ಮಾತನ್ನೂ ರಾಜ್ಯಪಾಲರು ಆಡಿದ್ದಾರೆ. ಮಣಿಪುರ ಪತ್ರಕರ್ತರು ಹೇಳುವ ಪ್ರಕಾರ, ”ರಾಜ್ಯ ಪೊಲೀಸ್ ಪಡೆ ಜೊತೆಗೆ ಮಣಿಪುರದಲ್ಲಿ ಮಿಲಿಟರಿ, ಪ್ಯಾರಾ ಮಿಲಿಟರಿ ಫೋರ್ಸ್ ಬೀಡುಬಿಟ್ಟಿವೆ. ಅಸ್ಸಾಂ ರೈಫಲ್ಸ್, ಭಾರತೀಯ ಸೇನೆ, ರ್‍ಯಾಪಿಡ್ ಆಕ್ಷನ್ ಫೋರ್ಸ್, ಸಿಆರ್‌ಪಿಎಫ್, ಬಿಎಸ್‌ಎಫ್, ಐಟಿಬಿಪಿ ಕಾರ್ಯಾಚರಣೆಯಲ್ಲಿ ತೊಡಗಿವೆ. ಸುಮಾರು 70,000 ರಕ್ಷಣಾ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ.” ಒಂದು ಪುಟ್ಟ ರಾಜ್ಯದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿ ಸೇರುವುದು ಮುಂದಾಗಬಹುದಾದ ಕ್ರಮಗಳ ಮುನ್ಸೂಚನೆ ಎಂದೇ ಭಾವಿಸಲಾಗುತ್ತಿದೆ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಪಾಠ ಕಲಿಯದ ‘ರೈಲ್ವೆ ಇಲಾಖೆ’
ರಾಜ್ಯಪಾಲರ ಮಾತಿನಲ್ಲಿ ನಂಬಿಕೆ ಇಟ್ಟು, ಬಂದೂಕುಗಳನ್ನು ಹಿಂತಿರುಗಿಸಿ, ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ತಮ್ಮ ಹೋರಾಟಗಳನ್ನು ನಾಗರಿಕರು ಮುಂದುವರಿಸುವುದು ಸರಿಯಾದ ಆಯ್ಕೆಯಾಗುತ್ತದೆ. ಒಂದು ವಾರದೊಳಗೆ ಎಷ್ಟು ಶಸ್ತ್ರಾಸ್ತ್ರಗಳನ್ನು ಒಪ್ಪಿಸಲಾಗುತ್ತದೆ ಎಂಬ ಕುತೂಹಲವಂತೂ ಇದ್ದೇ ಇದೆ. ಮೈತೇಯಿ ಸಮುದಾಯದ ನಾಗರಿಕ ಗುಂಪು, “ಮತ್ತಷ್ಟು ಕಾಲಾವಕಾಶ ವಿಸ್ತರಿಸಬೇಕು” ಎಂದು ಕೋರಿದೆ. ಈ ಆಗ್ರಹವನ್ನು ರಾಜ್ಯಪಾಲರು ಮುಕ್ತ ಮನಸ್ಸಿನಿಂದ ನೋಡಬೇಕಾಗುತ್ತದೆ. 20 ತಿಂಗಳು ಜನರು ಭಯದಲ್ಲೇ ಬದುಕಿದ್ದಾರೆ. ಕುಕಿ ಮತ್ತು ಮೈತೇಯಿಗಳಿಬ್ಬರೂ ಶಸ್ತ್ರಗಳನ್ನು ತೊರೆದು ಶಾಂತಿಯತ್ತ ಹೆಜ್ಜೆ ಇಡಬೇಕಾಗಿದೆ. ಹೀಗಾಗಿ ನಾಗರಿಕರಲ್ಲಿ ಹೆಚ್ಚಿನ ವಿಶ್ವಾಸ ಮೂಡಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ. ಆದರೆ ನಿಶಸ್ತ್ರೀಕರಣದ ಕಾರ್ಯವು ಯಾವುದೇ ಕಾರಣಕ್ಕೂ ಬಂದೂಕಿನ ನಳಿಕೆಯಲ್ಲಾಗದಿರಲಿ ಎಂಬುದು ರಾಜ್ಯಪಾಲರ ವಿವೇಚನೆಯಾಗಲಿ.
