‘ಈ ದಿನ’ ಸಂಪಾದಕೀಯ | ನಿದ್ದೆಯಿಂದ ಎದ್ದಿರುವ ನ್ಯೂಸ್ ಚಾನೆಲ್ ಒಕ್ಕೂಟ ಮರ್ಯಾದೆ ಉಳಿಸಿಕೊಳ್ಳಲಿ

Date:

Advertisements
ಪತ್ರಿಕೋದ್ಯೋಗದ ಘನತೆಯನ್ನು ಮೂರಾಬಟ್ಟೆ ಮಾಡುವ ಒಂದೇ ಒಂದು ವಿಷಯದ ಬಗ್ಗೆಯೂ ಪ್ರತಿಕ್ರಿಯಿಸದ, ದ್ವೇಷ ಹರಡುವ ಸುದ್ದಿವಾಹಿನಿಗಳ ಬಗ್ಗೆ ಸುಪ್ರೀಂ ಕೋರ್ಟ್ ಎಚ್ಚರಿಸಿದರೂ ಬಾಯಿಗೆ ಬೀಗ ಹಾಕಿಕೊಂಡಿದ್ದ ಸುದ್ದಿವಾಹಿನಿಗಳ ಒಕ್ಕೂಟಕ್ಕೆ ಈಗ ಎಚ್ಚರ ಆಗಿರುವಂತಿದೆ

ಮಾಧ್ಯಮಗಳು, ಅದರಲ್ಲೂ ವಿಶೇಷವಾಗಿ ಸುದ್ದಿವಾಹಿನಿಗಳು ದೇಶದಲ್ಲಿ ದ್ವೇಷ ಹೆಚ್ಚಿಸುವ ಕೆಲಸ ಮಾಡುತ್ತಿವೆ ಎಂದು ಸುಪ್ರೀಂ ಕೋರ್ಟ್ ಪದೇ-ಪದೇ ಕಳವಳ ವ್ಯಕ್ತಪಡಿಸುತ್ತಿದೆ. ಇದಕ್ಕೆ ಪೂರಕವೆಂಬಂತೆ, ದೇಶದ ವಿಪಕ್ಷಗಳ ಒಕ್ಕೂಟ ‘ಇಂಡಿಯಾ,’ “ದ್ವೇಷ ಹರಡುತ್ತಿರುವ ಈ 14 ಮಂದಿ ಸುದ್ದಿ ನಿರೂಪಕರು ನಡೆಸಿಕೊಡುವ ಯಾವುದೇ ಕಾರ್ಯಕ್ರಮಗಳಲ್ಲಿ ನಮ್ಮ ಒಕ್ಕೂಟದ ಯಾವುದೇ ರಾಜಕೀಯ ಪಕ್ಷದ ಪ್ರತಿನಿಧಿಗಳೂ ಪಾಲ್ಗೊಳ್ಳುವುದಿಲ್ಲ,” ಎಂದು ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ, ದೇಶದ ಪ್ರತಿಷ್ಠಿತ ಸುದ್ದಿವಾಹಿನಿಗಳಿಗೆ ಸೇರಿದ, ಚರ್ಚೆಯ ವೇಳೆ ಅತಿಮಾನುಷ ಶಕ್ತಿ ಮೈಮೇಲೆ ಬಂದವರಂತೆ ಅಬ್ಬರಿಸುವ, ರಣೋತ್ಸಾಹಿ ಕಿಡಿಗೇಡಿಗಳು ಕಾಣಿಸಿಕೊಂಡಿದ್ದಾರೆ. ಸುದ್ದಿವಾಹಿನಿಗಳು ರಾಜಕೀಯ ಮೇಲಾಟಗಳಲ್ಲಿ ನೇರವಾಗಿಯೇ ಪ್ರಬಲ ಬಿಜೆಪಿ ಪಕ್ಷಪಾತಿಗಳಾಗಿ ತೊಡಗಿಕೊಂಡಿರುವ ಈ ದುರಂತ ಕಾಲದಲ್ಲಿ ಇಂತಹ ನಿರ್ಧಾರಗಳು ಅತಿರೇಕ ಅನ್ನಿಸಿದರೂ ಅತ್ಯವಶ್ಯ.

ಈ ವಿಷಯ ಸುದ್ದಿಯಾಗಿದ್ದು ಎರಡು ದಿನದ ಹಿಂದೆ (ಸೆ.14). ನಂತರದ ಎರಡು ದಿನದ ಅವಧಿಯಲ್ಲಿ, ಕೇಂದ್ರದ ಆಡಳಿತಾರೂಢ ಬಿಜೆಪಿ ಮತ್ತು ಅದರ ಮೈತ್ರಿಪಕ್ಷಗಳ ಮಂದಿ, ‘ಇಂಡಿಯಾ’ ಒಕ್ಕೂಟದ ಈ ನಿಲುವನ್ನು, ಅವರದೇ ಪದಕೋಶದಿಂದ ‘ಹಿಟ್ ಲಿಸ್ಟ್’ ಎಂದು ಹೆಸರಿಟ್ಟುಕೊಂಡು ಹುಯಿಲೆಬ್ಬಿಸುತ್ತಲೇ ಇದ್ದಾರೆ. ಸ್ವಲ್ಪ ತಡವಾಗಿ ಪ್ರತಿಕ್ರಿಯಿಸಿರುವ, ಸುದ್ದಿವಾಹಿನಿಗಳ ಒಕ್ಕೂಟ (News Broadcasters and Digital Association – NBDA), “ಇದು ತುರ್ತು ಪರಿಸ್ಥಿತಿಯಂತಹ ಕ್ರಮ,” ಎಂದು ಬಣ್ಣಿಸಿದೆ. ಬಿಜೆಪಿ ಮತ್ತು ಎನ್‌ಬಿಡಿಎ ತಕರಾರುಗಳಿಗೆ ತಣ್ಣನೆಯ ಪ್ರತ್ಯುತ್ತರ ಕೊಟ್ಟಿರುವ ‘ಇಂಡಿಯಾ’ ಒಕ್ಕೂಟದ ಪ್ರತಿನಿಧಿಗಳು, “ಇದು ಬಹಿಷ್ಕಾರವಲ್ಲ, ಬ್ಲ್ಯಾಕ್ ಲಿಸ್ಟ್ ಕೂಡ ಅಲ್ಲ, ದ್ವೇಷ ಹರಡುವ ಮಂದಿಗೆ ನಾವು ಅಸಹಕಾರ ತೋರುವ ದಾರಿ,” ಎಂದು ಸಮರ್ಥಿಸಿಕೊಂಡಿದ್ದಾರೆ.

ಸುದ್ದಿವಾಹಿನಿಗಳ ಒಕ್ಕೂಟವು ಪತ್ರಿಕಾ ಹೇಳಿಕೆಯಲ್ಲಿ ‘ಪತ್ರಿಕೋದ್ಯೋಗದ ನೈತಿಕತೆ,’ ‘ತುರ್ತು ಪರಿಸ್ಥಿತಿ’ ಮುಂತಾದ ಪದಗಳನ್ನು ಯಾವುದೋ ಮಂಪರಿನಲ್ಲಿ ಬಳಸಿರುವಂತಿದೆ. ಒಕ್ಕೂಟ ಸರ್ಕಾರವು 2021ರ ಮೇ ತಿಂಗಳಿಂದ ಇದುವರೆಗೆ 150ಕ್ಕೂ ಹೆಚ್ಚು ಸುದ್ದಿ ಜಾಲತಾಣಗಳನ್ನು (ನ್ಯೂಸ್ ವೆಬ್‌ಸೈಟ್) ಮತ್ತು ಯೂಟ್ಯೂಬ್ ವಾಹಿನಿಗಳನ್ನು ಮುಚ್ಚಿಸಿದೆ. ಈ ಪಟ್ಟಿಯಲ್ಲಿ ಸುಳ್ಳುಸುದ್ದಿ ಬಿತ್ತುವ ಕೆಲವು ಜಾಲತಾಣಗಳು ಇದ್ದವಾದರೂ, ಆ ನೆಪದಲ್ಲಿ ತನ್ನ ಹಿತಾಸಕ್ತಿಗಳ ವಿರುದ್ಧ ಮಾತನಾಡುವವರ ಜಾಲತಾಣ ಮತ್ತು ಯೂಟ್ಯೂಬ್ ವಾಹಿನಿಗಳನ್ನೂ ಮುಚ್ಚಿಸಿದ್ದು ಜಗಜ್ಜಾಹೀರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ತಮ್ಮ ಸರ್ಕಾರದ ಕಾರ್ಯಕ್ರಮಗಳನ್ನು ವಿಮರ್ಶಿಸುವ ಸುದ್ದಿವಾಹಿನಿಗಳಿಗೆ, ಪ್ರಸಾರ ತಡೆಯಬಾರದೇಕೆ ಎಂದು ನೋಟಿಸ್ ಜಾರಿ ಮಾಡಲಾಗಿದ್ದು ಚರಿತ್ರಾರ್ಹ. ಹಾಥ್ರಸ್ ಹತ್ಯಾಕಾಂಡದ ವರದಿ ಮಾಡಲು ತೆರಳಿದ್ದ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರನ್ನು ಬರೋಬ್ಬರಿ 850 ದಿನಗಳ ಕಾಲ ಬಂಧನದಲ್ಲಿ ಇಡಲಾಗಿತ್ತು. ತಮ್ಮ ಮೇಲಿದ್ದ ಆರೋಪಗಳನ್ನು ಕೇಳಿ ಸ್ವತಃ ಸಿದ್ದಿಕ್ ಕಪ್ಪನ್ ವ್ಯಂಗ್ಯ ವಿಷಾದದ ನಗೆ ನಕ್ಕಿದ್ದೂ ಉಂಟು.

Advertisements

ಒಂದೇ ವರ್ಷದಲ್ಲಿ (2022) ದೇಶದ ನಾನಾ ಭಾಗಗಳ 194 ಮಂದಿ ಪತ್ರಕರ್ತರನ್ನು ಟಾರ್ಗೆಟ್ ಮಾಡಿ ತೊಂದರೆ ಕೊಡಲಾಗಿದೆ. ಕಹಿಸತ್ಯಗಳನ್ನು ಬೆಳಕಿಗೆ ತಂದ ಕಾರಣಕ್ಕೆ ಎಂಟು ಮಂದಿ ಪತ್ರಕರ್ತರನ್ನು ಕೊಲೆ ಮಾಡಲಾಗಿದೆ. 194 ಪತ್ರಕರ್ತರ ಪೈಕಿ 70 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಅಥವಾ ಬಂಧಿಸಲಾಗಿದೆ. 14 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನಾಲ್ವರ ವಿರುದ್ಧ ಪೊಲೀಸರು ಮತ್ತು ಜಾರಿ ನಿರ್ದೇಶನಾಲಯದ ಸಮನ್ ಜಾರಿಯಾಗಿದೆ. 15 ಮಂದಿ ಮೇಲೆ ದೈಹಿಕ ಹಲ್ಲೆ ನಡೆದಿದೆ. ಪ್ರತಿಷ್ಠಿತ ಪ್ರಶಸ್ತಿ ಪಡೆಯಲು ವಿದೇಶಕ್ಕೆ ಹೋಗದಂತೆಯೂ ಕೆಲವರನ್ನು ನಿರ್ಬಂಧಿಸಲಾಗಿದೆ. ತನಗೆ ಕಹಿಪ್ರಶ್ನೆಗಳನ್ನು ಕೇಳಿದ ಪತ್ರಕರ್ತರೊಬ್ಬರಿಗೆ, “ನೀವು ಹೀಗೆಲ್ಲ ಮಾತಾಡಿದ್ರೆ, ನಿಮ್ಮ ಮಾಲೀಕರಿಗೆ ಕರೆ ಮಾಡಿ ಹೇಳಬೇಕಾಗುತ್ತದೆ,” ಎಂದು ಸಚಿವೆ ಸ್ಮೃತಿ ಇರಾನಿ ಸಾರ್ವಜನಿಕವಾಗಿ ಬೆದರಿಕೆ ಹಾಕುತ್ತಾರೆ. ಇನ್ನು, ಪ್ರಭುತ್ವಕ್ಕೆ ಗಟ್ಟಿ ಪ್ರಶ್ನೆಗಳನ್ನು ಕೇಳುವಲ್ಲಿ ಮತ್ತು ಸರ್ಕಾರಗಳನ್ನು ವಿಮರ್ಶಿಸುವಲ್ಲಿ ಮುಂಚೂಣಿಯಲ್ಲಿದ್ದ ಎನ್‌.ಡಿ ಟಿವಿಯನ್ನು ಹೇಗೆಲ್ಲ ಹಣಿಯಲಾಯಿತು, ನಂತರ ಆ ಸುದ್ದಿವಾಹಿನಿಯನ್ನು ಹಂತಹಂತವಾಗಿ ಅದಾನಿ ಒಡೆತನಕ್ಕೆ ಹೇಗೆ ಜಾರಿಸಿಕೊಳ್ಳಲಾಯಿತು ಎಂಬುದೆಲ್ಲ ಎಲ್ಲರಿಗೂ ಗೊತ್ತಿರುವ ಸಂಗತಿ. ಇದೆಲ್ಲವೂ ಒಂದು ತೂಕವಾದರೆ, ದೇಶದ ಪ್ರಧಾನಿ ಮತ್ತು ಬಿಜೆಪಿ ನಾಯಕ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಾಗಿನಿಂದ ಒಂದೂ ಸುದ್ದಿಗೋಷ್ಠಿ ನಡೆಸಿಲ್ಲ ಎಂಬುದು ಇನ್ನೊಂದು ತೂಕ.

ನಿಜವಾಗಿಯೂ ಪತ್ರಿಕೋದ್ಯೋಗದ ಘನತೆಯನ್ನು ಮೂರಾಬಟ್ಟೆ ಮಾಡುವ ಇಂತಹ ಒಂದೇ ಒಂದು ವಿಷಯದ ಬಗ್ಗೆಯೂ ಪ್ರತಿಕ್ರಿಯಿಸದ ಮತ್ತು ದ್ವೇಷ ಹರಡುವ ಸುದ್ದಿವಾಹಿನಿಗಳ ಬಗ್ಗೆ ಸುಪ್ರೀಂ ಕೋರ್ಟ್ ಎಚ್ಚರಿಸಿದರೂ ಬಾಯಿಗೆ ಬೀಗ ಹಾಕಿಕೊಂಡಿದ್ದ ಸುದ್ದಿವಾಹಿನಿಗಳ ಒಕ್ಕೂಟಕ್ಕೆ ಈಗ ಎಚ್ಚರ ಆಗಿರುವಂತಿದೆ. ‘ಇಂಡಿಯಾ’ ಒಕ್ಕೂಟದ ‘ಮಾಧ್ಯಮ ಅಸಹಕಾರ ಚಳವಳಿ’ ಬಗ್ಗೆ ಮಾತನಾಡಿದಷ್ಟೇ ಧೈರ್ಯವಾಗಿ, ಪ್ರಭುತ್ವದ ಅಧ್ವಾನಗಳ ವಿರುದ್ಧವೂ ದನಿಯೆತ್ತಿದರೆ ಮಾತ್ರ ಸುದ್ದಿವಾಹಿನಿಗಳ ಒಕ್ಕೂಟಕ್ಕೆ ಚೂರುಪಾರು ಮರ್ಯಾದೆ ಉಳಿಯಲಿದೆ. ಇಲ್ಲದಿದ್ದರೆ, ‘ಸ್ಟ್ಯಾಂಡಪ್ ಕಾಮಿಡಿ’ಯ ಸರಕಾಗುವುದು ನಿಶ್ಚಿತ.

ಮುಖ್ಯ ಚಿತ್ರ: ‘ಇಂಡಿಯಾ’ ಒಕ್ಕೂಟದ ಪಟ್ಟಿಯಲ್ಲಿರುವ ‘ರಿಪಬ್ಲಿಕ್’ ಸುದ್ದಿವಾಹಿನಿಯ ಸಂಪಾದಕ ಅರ್ನಬ್ ಗೋಸ್ವಾಮಿ

ಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X