ಉತ್ತರ ಭಾರತದ ಅತ್ಯಂತ ಪ್ರಭಾವಶಾಲಿ ‘ಕುಲೀನ’ ಜಾತಿ ಎಂದು ಕರೆಯಲಾಗುವ ರಜಪೂತ ಕುಲದ ಖ್ಯಾತ ಹೆಸರು ಆನಂದ ಮೋಹನ ಸಿಂಗ್. ದಲಿತ-ಹಿಂದುಳಿದ- ಮೀಸಲಾತಿ ವಿರೋಧಿ ರಾಜಕಾರಣ ಈತನ ಹೆಗ್ಗುರುತು
ಬಿಹಾರ ರಾಜಕಾರಣವನ್ನು ಹಾಸುಹೊಕ್ಕಾಗಿ ಹೆಣೆದು ಬಲಿತು ಸೊಕ್ಕಿದವರು ಬಾಹುಬಲಿಗಳು. ಇವರು ಶಾಸಕರಾಗಿದ್ದಾರೆ, ಮಂತ್ರಿಗಳಾಗಿದ್ದಾರೆ, ಸಂಸದರೂ ಆಗಿ ಆಯ್ಕೆಯಾಗಿದ್ದಾರೆ. ರಾಜಕಾರಣಿಗಳ ಜೇಬಿನಲ್ಲಿ ಇವರ ಕೈ, ಇವರ ಜೇಬಿನಲ್ಲಿ ರಾಜಕಾರಣಿಗಳ ಕೈ ಎಂಬಂತಹ ಅಪವಿತ್ರ ಮೈತ್ರಿ. ಉತ್ತರ ಭಾರತದಲ್ಲಿ ಬಾಹುಬಲಿಗಳು ಎಂದರೆ ಗೂಂಡಾಗಳು, ರೌಡಿಗಳು, ಕುಪ್ರಸಿದ್ಧ ಪಾತಕಿಗಳು, ಕೊಲೆ ಸುಲಿಗೆ, ಅಪಹರಣ ಗ್ಯಾಂಗುಗಳ ನಾಯಕರು.
ಇಂತಹವನೇ ಒಬ್ಬ ರಜಪೂತ ಬಾಹುಬಲಿ ಆನಂದ ಮೋಹನ ಸಿಂಗ್. 14 ವರ್ಷಗಳ ಜೈಲುವಾಸದ ನಂತರ ಈತನಿಗೆ ಬಿಡುಗಡೆ ಭಾಗ್ಯವನ್ನು ಬಿಹಾರ ಸರ್ಕಾರ ಕಲ್ಪಿಸಿದೆ. ಅದಕ್ಕೆಂದೇ ಬಿಹಾರ ಕಾರಾಗೃಹ ಕೈಪಿಡಿಯ ನಿಯಮಗಳಿಗೆ ತಿದ್ದುಪಡಿ ತಂದಿದೆ. ಒಂದು ಕಾಲದ ಸಮತಾ ಪಾರ್ಟಿಯ ತಮ್ಮ ಈ ಸಹೋದ್ಯೋಗಿಗಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ತಾವೇ ಮುಂದೆ ನಿಂತು ತಿದ್ದುಪಡಿ ಮಾಡಿಸಿದ್ದಾರೆ. ಈ ಅಸಾಧಾರಣ ಅಕೃತ್ಯ ದೇಶದ ಗಮನ ಸೆಳೆದಿದೆ. ವಿವಾದಕ್ಕೆ ಈಡಾಗಿದೆ. ಇನ್ನೂ 26 ಮಂದಿ ಕೈದಿಗಳು ಈ ಸಂದರ್ಭದಲ್ಲಿ ಬಿಡುಗಡೆ ಹೊಂದುತ್ತಿದ್ದಾರೆ.
ಉತ್ತರ ಭಾರತದ ಅತ್ಯಂತ ಪ್ರಭಾವಶಾಲಿ ‘ಕುಲೀನ’ ಜಾತಿ ಎಂದು ಕರೆಯಲಾಗುವ ರಜಪೂತ ಕುಲದ ಖ್ಯಾತ ಹೆಸರು ಆನಂದ ಮೋಹನ ಸಿಂಗ್. ದಲಿತ-ಹಿಂದುಳಿದ- ಮೀಸಲಾತಿ ವಿರೋಧಿ ರಾಜಕಾರಣ ಈತನ ಹೆಗ್ಗುರುತು.
2024ರ ಲೋಕಸಭಾ ಚುನಾವಣೆಗಳು ಸಮೀಪಿಸುತ್ತಿದ್ದು, ರಾಜಕೀಯ ಪಕ್ಷಗಳು ಈಗಾಗಲೆ ಜಾತಿಗಳ ಬೆಂಬಲದ ಲೆಕ್ಕಾಚಾರದಲ್ಲಿ ತೊಡಗಿವೆ. ಬಿಹಾರದಲ್ಲಿ ರಜಪೂತ ಮತದಾರರ ಪ್ರಮಾಣ ಶೇ.6ರಿಂದ 7ರಷ್ಟು. ತಮ್ಮ ಬೆಂಬಲ ನೆಲೆಗಳನ್ನು ಹಿಂದುಳಿದ ವರ್ಗಗಳಿಂದ ವಿಸ್ತರಿಸಿಕೊಂಡು ಸವರ್ಣೀಯ ಜಾತಿಗಳನ್ನು ತಲುಪುವುದು ಸಂಯುಕ್ತ ಜನತಾದಳದ ತಂತ್ರ. ಸಿಂಗ್ ಬಿಡುಗಡೆಯನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆ. ಈ ಕುರಿತು ಪ್ರತಿಪಕ್ಷ ಬಿಜೆಪಿ ಮೊನ್ನೆಯ ತನಕ ಬಾಯಿ ಹೊಲಿದುಕೊಂಡಿತ್ತು. ತನ್ನ ಪಾರಂಪರಿಕ ಬೆಂಬಲ ನೆಲೆಯಾದ ರಜಪೂತರನ್ನು ಎದುರು ಹಾಕಿಕೊಳ್ಳಲು ಬಯಸಿರಲಿಲ್ಲ ಕಡೆಗೂ ತುಟಿ ಬಿಚ್ಚಿದೆ. ಆದರೆ ಅದು ಟೀಕಿಸಿರುವುದು ಕಾರಾಗೃಹ ನಿಯಮಗಳ ತಿದ್ದುಪಡಿಯನ್ನೇ ವಿನಾ ಆನಂದ ಮೋಹನ ಸಿಂಗ್ ಬಿಡುಗಡೆಯನ್ನಲ್ಲ.
ಗುಜರಾತ್ ಬಿಜೆಪಿ ಸರ್ಕಾರ ಬಿಲ್ಕಿಸ್ ಬಾನು ಮತ್ತು ಆಕೆಯ ಕುಟುಂಬದ ಸದಸ್ಯರ ಅತ್ಯಾಚಾರ-ಕೊಲೆಯ 11 ಅಪರಾಧಿಗಳಿಗೆ ಕ್ಷಮಾದಾನ ನೀಡಿ ಅವಧಿಗೆ ಮುನ್ನವೇ ಜೈಲಿನಿಂದ ಬಿಡುಗಡೆ ಮಾಡಿತ್ತು. ಈ ಬಿಡುಗಡೆಯ ಹಿಂದೆಯೂ ಚುನಾವಣಾ ಲಾಭ ಪಡೆಯುವ ತಂತ್ರವೇ ಕೆಲಸ ಮಾಡಿತ್ತು. ಈ ಪ್ರಕರಣ ಇದೀಗ ಸುಪ್ರೀಮ್ ಕೋರ್ಟಿನ ಮುಂದಿದೆ.
ಸ್ನಾನದ ಕೋಣೆಯಲ್ಲಿ ಎಲ್ಲರೂ ಬೆತ್ತಲೆ- ಹಮಾಮ್ ಮೇಂ ಸಬ್ ನಂಗಾ ಎಂಬ ಗಾದೆ ಮಾತೊಂದಿದೆ. ಅದು ಭಾರತ ದೇಶದ ರಾಜಕೀಯ ಪಕ್ಷಗಳಿಗೆ ಹೆಚ್ಚು ಕಡಿಮೆ ಹೊಂದಿಕೊಳ್ಳುತ್ತದೆ.
69 ವರ್ಷ ವಯಸ್ಸಿನ ಆನಂದ ಮೋಹನ್ ಮಾಜಿ ಸಂಸದ. 1994ರಲ್ಲಿ ಗೋಪಾಲ್ ಗಂಜ್ ಜಿಲ್ಲಾಧಿಕಾರಿ ಜಿ.ಕೃಷ್ಣಯ್ಯ ಅವರ ಹತ್ಯೆಯಲ್ಲಿ ಸಿಂಗ್ ದೋಷಿಯೆಂದು ಸಾರಿದ್ದ ನ್ಯಾಯಾಲಯ ಮರಣದಂಡನೆ ನೀಡಿತ್ತು. ಆದರೆ ಪಾಟ್ನಾ ಹೈಕೋರ್ಟ್ ಮತ್ತು ಸುಪ್ರೀಮ್ ಕೋರ್ಟ್ ಈ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿದ್ದವು.
ಉತ್ತರ ಬಿಹಾರದ ಕೋಸಿ ಕ್ಷೇತ್ರದ ಬಾಹುಬಲಿಯೆಂದೇ ಕುಖ್ಯಾತನೀತ. 1990ರಲ್ಲಿ ಜನತಾದಳದ ಟಿಕೆಟ್ ಪಡೆದು ಸಹರ್ಸಾ ಜಿಲ್ಲೆಯ ಮಹಿಷಿ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದ. 1974ರಲ್ಲಿ ಜೆಪಿ ಅವರ ಸಂಪೂರ್ಣ ಕ್ರಾಂತಿ ಆಂದೋಲನದಿಂದ ತನ್ನ 17ನೆಯ ವಯಸ್ಸಿನಲ್ಲಿ ರಾಜಕಾರಣ ಪ್ರವೇಶಿಸಿದ್ದ. ತುರ್ತುಪರಿಸ್ಥಿತಿಯಲ್ಲಿ ಎರಡು ವರ್ಷ ಜೈಲುವಾಸ. ಸಹರ್ಸಾದಿಂದ ಶಾಸಕನಾಗಿದ್ದ. 1996ರ ಲೋಕಸಭಾ ಚುನಾವಣೆಗಳಲ್ಲಿ ಸಮತಾ ಪಾರ್ಟಿ ಅಭ್ಯರ್ಥಿಯಾಗಿ ಜೈಲಿನಿಂದಲೇ ಸ್ಪರ್ಧಿಸಿ ಶಿವಹರ್ ಕ್ಷೇತ್ರದಿಂದ ಗೆದ್ದಿದ್ದ.1998ರಲ್ಲಿ ಮರು ಆಯ್ಕೆ ಹೊಂದಿದ್ದ ಕೂಡ.
ಸವರ್ಣೀಯರ ಹಕ್ಕುಗಳಿಗಾಗಿ ಹೋರಾಡಲು 1993ಯಲ್ಲಿ ಬಿಹಾರ ಪೀಪಲ್ಸ್ ಪಾರ್ಟಿ ಕಟ್ಟಿದ್ದ. ಪತ್ನಿ ಲವ್ಲೀ 1994ರಲ್ಲಿ ವೈಶಾಲಿ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಆರಿಸಿ ಬಂದಿದ್ದರು.
ಬಿಹಾರ ಕಾರಾಗೃಹ ಕೈಪಿಡಿ ತಿದ್ದುಪಡಿಗೆ ಮುನ್ನ 14 ವರ್ಷಗಳ ಶಿಕ್ಷೆಯನ್ನು ಪೂರ್ಣಗೊಳಿಸಿದರೂ, ಹೀನಾತಿಹೀನ ಪಾತಕಗಳನ್ನು ಮಾಡಿದವರ ಶಿಕ್ಷೆಯನ್ನು ತಗ್ಗಿಸಿ ಬಿಡುಗಡೆ ಮಾಡುವಂತಿರಲಿಲ್ಲ. ಇಂತಹ ಪಾತಕಿಗಳು ಕನಿಷ್ಠ 20 ವರ್ಷಗಳನ್ನು ಜೈಲಿನಲ್ಲಿ ಕಳೆಯಲೇಬೇಕಿತ್ತು. ಆಗ ಮಾತ್ರ ಅವರು ಜೀವಾವಧಿ ಶಿಕ್ಷೆಯನ್ನು ಪೂರೈಸಿದ್ದಾರೆಂದು ಪರಿಗಣಿಸಿ ಅವಧಿಗೆ ಮುನ್ನವೇ ಕ್ಷಮಾದಾನ ನೀಡಿ ಬಿಡುಗಡೆ ಮಾಡುವ ಅವಕಾಶವಿತ್ತು.
ಅತ್ಯಾಚಾರ- ಕೊಲೆ, ಡಕಾಯಿತಿ-ಕೊಲೆ, ವರದಕ್ಷಿಣೆಗಾಗಿ ಕೊಲೆ, 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿನ ಕೊಲೆ, ಹಲವು ಕೊಲೆಗಳನ್ನು ಮಾಡಿರುವ, ಜೈಲಿನಲ್ಲಿದ್ದು ಕೊಲೆ ಮಾಡಿರುವ, ಪೆರೋಲ್ ಮೇಲಿದ್ದಾಗ ಕೊಲೆ ಮಾಡಿರುವ, ಭಯೋತ್ಪಾದನೆ ಕೃತ್ಯದಲ್ಲಿ ಕೊಂದಿರುವ, ಕಳ್ಳಸಾಗಣೆಯಲ್ಲಿ ಕೊಂದಿರುವ ಹಾಗೂ ಕರ್ತವ್ಯನಿರತ ಸರ್ಕಾರಿ ಅಧಿಕಾರಿಯ ಕೊಲೆ ಮಾಡಿರುವವರು ಕನಿಷ್ಠ 20 ವರ್ಷಗಳ ಕಾರಾಗೃಹ ವಾಸ ಅನುಭವಿಸಲೇಬೇಕಿತ್ತು.
ಬಿಹಾರ ಕಾರಾಗೃಹ ಕೈಪಿಡಿಯಿಂದ ಇದೇ ಏಪ್ರಿಲ್ 10ರಂದು ‘ಕರ್ತವ್ಯ ನಿರತ ಸರ್ಕಾರಿ ಅಧಿಕಾರಿ’ (a civil servant on duty) ಎಂಬ ಪದಗಳನ್ನು ಕೈಬಿಡುವ ತಿದ್ದುಪಡಿ ತರಲಾಯಿತು. ಆನಂದ ಮೋಹನ ಸಿಂಗ್ ಬಿಡುಗಡೆಗೆ ದಾರಿ ಮಾಡಿದ ತಿದ್ದುಪಡಿಯಿದು. ಮಗ ಮತ್ತು ಆರ್.ಜೆ.ಡಿ.ಶಾಸಕ ಚೇತನ್ ಆನಂದ್ ಮದುವೆಗಾಗಿ ಪೆರೋಲ್ ಮೇಲೆ ಹೊರಗಿದ್ದಾನೆ ಆನಂದ ಮೋಹನ ಸಿಂಗ್. ಪುನಃ ಒಳಕ್ಕೆ ಹೋಗುವ ಅಗತ್ಯ ಬೀಳಲಾರದು. ಲೋಕಸಭಾ ಚುನಾವಣೆಯಲ್ಲಿ ನಿತೀಶ್ ಪಕ್ಷದ ಹುರಿಯಾಳಾಗುವ ಎಲ್ಲ ಸಾಧ್ಯತೆಯಿದೆ.
ಕ್ಷಮಾದಾನ ಮಾಡಿ ಶಿಕ್ಷೆಯ ಅವಧಿಯನ್ನು ತಗ್ಗಿಸುವ ಅವಕಾಶ ಕಾನೂನಿನಲ್ಲಿ ಇದೆ ಹೌದು. ಆದರೆ ತಮ್ಮ ದುಷ್ಕೃತ್ಯಗಳಿಗಾಗಿ ಪಶ್ಚಾತ್ತಾಪಪಟ್ಟು ಸುಧಾರಿಸಿಕೊಂಡು ಸನ್ನಡತೆಯ ಹಾದಿ ಹಿಡಿದು ಹೊಸ ಬದುಕು ಆರಂಭಿಸುವವರಿಗೆ ಮಾತ್ರವೇ ಈ ಅವಕಾಶ ದೊರೆಯಬೇಕು. ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಲಾಭಗಳಿಗಾಗಿ ಈ ಅವಕಾಶವನ್ನು ದುರ್ಬಳಕೆ ಮಾಡುವುದು ಸರ್ವಥಾ ಸಲ್ಲದು.
