ದೆಹಲಿಯ ನಿರ್ಭಯ ಪ್ರಕರಣದ ನಂತರ 2013ರಲ್ಲಿ ʼನಿರ್ಭಯ ನಿಧಿʼ ಸ್ಥಾಪಿಸಲಾಗಿತ್ತು. ಈ ನಿಧಿಗೆ ಹಂಚಿಕೆ ಮಾಡಲಾಗಿದ್ದ ಶೇ.50ರಷ್ಟು ಹಣವನ್ನು ಮಾತ್ರವೇ ಬಿಡುಗಡೆ ಮಾಡಲಾಗಿತ್ತು ಮತ್ತು ಶೇ. 29ರಷ್ಟು ಹಣವನ್ನು ಮಾತ್ರವೇ ವಿನಿಯೋಗಿಸಲಾಗಿತ್ತು. 2021ರ ಸಾಲಿನ ಅಂಕಿಅಂಶವಿದು
‘ಮಹಿಳೆಯರ ಮೇಲೆ ನಡೆಯುವ ಪಾತಕಗಳು ಕ್ಷಮಿಸಲಾಗದ ಪಾಪಕೃತ್ಯಗಳು. ಅಪರಾಧಿಗಳು ಯಾರೇ ಆಗಿದ್ದರೂ ಅವರಿಗೆ ಶಿಕ್ಷೆ ಆಗಲೇಬೇಕು’ ಎಂದಿದ್ದಾರೆ ಪ್ರಧಾನಮಂತ್ರಿ ನರೇಂದ್ರ ಮೋದಿ. ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಜಲಗಾಂವ್ ನಲ್ಲಿ ಜರುಗಿದ ‘ಲಖಪತಿ ದೀದಿ’ ರ್‍ಯಾಲಿಯಲ್ಲಿ ಸಾವಿರಾರು ಮಹಿಳಾ ಸಭಿಕರನ್ನು ಉದ್ದೇಶಿಸಿ ಪ್ರಧಾನಿಯವರು ಮಾತಾಡಿದ್ದ ಸಂದರ್ಭವದು.
ಕೋಲ್ಕತ್ತದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಯುವ ವೈದ್ಯೆಯ ಮೇಲೆ ನಡೆದಿರುವ ಘೋರ ಅತ್ಯಾಚಾರ ದೇಶವನ್ನು ಬೆಚ್ಚಿ ಬೀಳಿಸಿತು. ಅದರ ಬೆನ್ನಿಗೇ ಬಿಹಾರದ ದಲಿತ ಕಿಶೋರಿಯ ಮೇಲೆ ಅತ್ಯಾಚಾರ ನಡೆಸಿ ಕ್ರೂರವಾಗಿ ಕೊಲ್ಲಲಾಯಿತು. ಮಹಾರಾಷ್ಟ್ರದ ಬದ್ಲಾಪುರದಲ್ಲಿ ಎಳೆಯ ಕಂದಮ್ಮಗಳು ವಿಕೃತ ಲೈಂಗಿಕ ಲಾಲಸೆಗೆ ಗುರಿಯಾದವು.
ಈ ಹಿನ್ನೆಲೆಯಲ್ಲಿ ಪ್ರಧಾನಿಯವರು ಬಾಯಿ ತೆರೆದು ಮಾತಾಡಿರುವುದನ್ನು ಮೆಚ್ಚಲೇಬೇಕು. ಇದೇ ತಿಂಗಳ 15ರ ಸ್ವಾತಂತ್ರ್ಯದ ದಿನದಂದು ಕೆಂಪುಕೋಟೆಯಿಂದ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದರು ಮೋದಿ. ಅಂದು ಕೂಡ ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ದನಿ ಎತ್ತಿದ್ದರು.
‘ನಮ್ಮ ಹೆಣ್ಣುಮಕ್ಕಳು ಮತ್ತು ಸೋದರಿಯರ ನೋವು ಆಕ್ರೋಶ ನನಗೆ ಅರ್ಥವಾಗುತ್ತದೆ. ಸರ್ಕಾರಗಳು ಬರುತ್ತವೆ ಹೋಗುತ್ತವೆ. ಆದರೆ, ಮಹಿಳೆಯ ಘನತೆಯನ್ನು ಪ್ರಾಣವನ್ನು ಕಾಪಾಡುವುದು ಎಲ್ಲ ಸರ್ಕಾರವಾಗಿ ಸಮಾಜವಾಗಿ ನಮ್ಮ ಬಹುದೊಡ್ಡ ಹೊಣೆಗಾರಿಕೆ’ ಎಂಬ ಅವರ ಮಾತು ಅಕ್ಷರಶಃ ಸತ್ಯ.
ಆದರೆ, ಮೋದಿಯವರು ನುಡಿದಿರುವಂತೆ ನಡೆದುಕೊಂಡು ಬಂದಿದ್ದಾರೆಯೇ? ಅವರ ಮಾತು ಮತ್ತು ಕೃತಿಯ ನಡುವೆ ನೆಲ-ಮುಗಿಲಿನ ಅಂತರವಿದೆ. ಉನ್ನಾಂವ್, ಹಾಥರಸ್, ಕಥುವಾ, ಮಣಿಪುರದ ಅತ್ಯಾಚಾರ ಸಂತ್ರಸ್ತೆಯರು ಮೋದಿಯವರ ಸೋದರಿಯರಲ್ಲವೇ? ವಿನೇಶ್ ಫೋಗಟ್, ಸಾಕ್ಷಿ ಮಲ್ಲಿಕ್ ಅವರು ‘ತಮ್ಮ ಮನೆಯ ಹೆಣ್ಣುಮಕ್ಕಳು’ ಅಲ್ಲವೇ? ಅವರ ನೋವುಗಳು ಆಕ್ರೋಶಗಳು ಯಾವ್ಯಾವ ಕಾರಣಗಳಿಗಾಗಿ ಅರ್ಥ ಆಗಿಲ್ಲ ಎಂದು ಈಗಲಾದರೂ ಬಾಯಿ ಬಿಟ್ಟು ಹೇಳುವರೇ?
ಅವರ ಹತ್ತು ವರ್ಷಗಳ ಆಳ್ವಿಕೆಯಲ್ಲಿ ಮಹಿಳೆಯ ಮೇಲಿನ ಲೈಂಗಿಕ ಹಿಂಸೆ ಮತ್ತು ಸ್ತ್ರೀ ದ್ವೇಷ ತಗ್ಗಿಲ್ಲ. 2021ರ ರಾಷ್ಟ್ರೀಯ ಕ್ರೈಮ್ ರೆಕಾರ್ಡ್ಸ್ ಬ್ಯೂರೋದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ನಿತ್ಯ 86 ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ. ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳು ಪ್ರತಿಯೊಂದು ತಾಸಿಗೆ 49ರಂತೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. 2014-2022ರ ನಡುವೆ ಮಹಿಳೆಯರ ಮೇಲಿನ ದೌರ್ಜನ್ಯಗಳ ಪ್ರಮಾಣ ಶೇ.56.3ರಿಂದ ಶೇ.66.4ಕ್ಕೆ ಜಿಗಿದಿದೆ. 2022ರಲ್ಲಿ ಹೆಣ್ಣುಮಕ್ಕಳ ವಿರುದ್ಧ ಭಾರತದಲ್ಲಿ ದಾಖಲಾದ ಅಪರಾಧಗಳ ಸಂಖ್ಯೆ 4.45 ಲಕ್ಷ. ಈ ಪೈಕಿ ಅತ್ಯಾಚಾರ ಪ್ರಕರಣಗಳು 31,516. ಮರ್ಯಾದೇಗೇಡು ಹತ್ಯೆಯ ಕೃತ್ಯಗಳು ಹೆಚ್ಚಿವೆ.
ಉನ್ನಾಂವ್, ಹಾಥರಸ್, ಕಥುವಾ ಪ್ರಕರಣಗಳಲ್ಲಿ ಆಳುವವರಿಗೆ ಬೇಕಾಗಿದ್ದ ಅತ್ಯಾಚಾರಿಗಳನ್ನು ರಕ್ಷಿಸುವ ಕೆಲಸವೇ ನಡೆಯಿತು. ಗುಜರಾತಿನ ಕೋಮು ಗಲಭೆಗಳಿಂದ ಹಿಡಿದು ಮಣಿಪುರದ ಜನಾಂಗೀಯ ಘರ್ಷಣೆಗಳವರೆಗೆ ಸ್ತ್ರೀದ್ವೇಷ ಪ್ರವೃತ್ತಿಯೇ ಪ್ರತಿಬಿಂಬಿಸಿದೆ. ಪ್ರಜ್ವಲ್ ರೇವಣ್ಣನಂತಹ ಲೈಂಗಿಕ ಪಿಪಾಸುವಿನ ಪರವಾಗಿ ಮತ ಯಾಚಿಸಿದ್ದವರು ಇದೇ ಮೋದಿಯವರು. ಈತನ ವಿಡಿಯೋಗಳು ಜಗಜ್ಜಾಹೀರಾದ ನಂತರವೂ ತುಟಿ ಬಿಚ್ಚಿಲ್ಲ.
ಬಹಳ ಹಿಂದೆ ಹೋಗುವುದು ಬೇಡ. ಕಳೆದ ವರ್ಷ ನಡೆದದ್ದನ್ನೇ ಮತ್ತೊಮ್ಮೆ ಕಣ್ಣ ಮುಂದೆ ತಂದುಕೊಳ್ಳಲಿ ಮೋದಿಯವರು. ಅಂತಾರಾಷ್ಟ್ರೀಯ ಖ್ಯಾತಿಯ ನಮ್ಮ ಮೂವರು ಕ್ರೀಡಾಪಟುಗಳು ಕಣ್ಣೀರಿಡುತ್ತು ತಾವು ಗೆದ್ದು ತಂದ ಬಂಗಾರದ ಪದಕಗಳನ್ನು ಗಂಗೆಯ ಪಾಲು ಮಾಡಲು ಹೊರಟಿದ್ದರು. ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಗಳಿಸಿದ್ದ ಪದಕಗಳವು. ಅವರ ರಕ್ತ ಬೆವರಿನ ಸಾಧನೆಯ ಸಂಕೇತಗಳು. ದೇಶದ ಹೆಮ್ಮೆಯ ಪ್ರತೀಕಗಳು. ಆಕಾಶದಿಂದ ನಕ್ಷತ್ರಗಳನ್ನು ಕಿತ್ತು ತಂದುಕೊಡಿ ಎಂಬಂತಹ ಅಸಾಧ್ಯ ಬೇಡಿಕೆ ಅವರದಲ್ಲ. ಕ್ರೀಡೆಯಲ್ಲಿ ಭವಿಷ್ಯವನ್ನು ಅರಸಿ ಬಂದ ಹಳ್ಳಿಗಾಡಿನ ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ಕಾಡಿಸಿ ಪೀಡಿಸಿರುವ ಹೆಣ್ಣುಬಾಕನೊಬ್ಬನ ವಿರುದ್ಧ ಕ್ರಮ ಕೈಗೊಳ್ಳಿ ಎಂಬುದಷ್ಟೇ ಅವರ ಬೇಡಿಕೆಯಾಗಿತ್ತು. ಮೋದಿಯವರ ನೇತೃತ್ವದಲ್ಲಿ ‘ವಿಶ್ವಗುರುವಿನ ಸ್ಥಾನ’ ಪಡೆದಿದೆ ಎಂದು ಕೊಚ್ಚಿಕೊಳ್ಳುವ, ‘ಜಗತ್ತಿನ ಜನತಂತ್ರದ ಜನನಿ’ ಎಂದು ಬೀಗುವ ಬಲಿಷ್ಠ ಭಾರತದ ಕಾನೂನು ಸುವ್ಯವಸ್ಥೆಗೆ ಇದೊಂದು ಭಾರೀ ಸವಾಲೇನೂ ಆಗಬಾರದಿತ್ತು.
ವರ್ಷಗಳ ಹಿಂದೆ ಪದಕಗಳನ್ನು ಗೆದ್ದು ಹಿಂತಿರುಗಿದ್ದ ವಿನೇಶ್ ಅವರನ್ನು ಮೋದಿಯವರು ತಮ್ಮ ಮನೆ ಮಗಳು ಎಂದು ಕರೆದಿದ್ದರು. ಆದರೆ ಬಿಜೆಪಿಯ ದುರುಳ ದುಷ್ಟರು ಈ ನಿಮ್ಮ ಮನೆ ಮಗಳ ಮೈಮೇಲೆ ಕೈ ಹಾಕಿದರೆಂದು ವಿನೇಶ್ ಕಣ್ಣೀರುಗರೆದರೆ ಮೋದಿ ಗಾಢ ಮೌನ ಧರಿಸಿದ್ದರು. ಇತ್ತೀಚಿನ ಲೋಕಸಭಾ ಚುನಾವಣೆಗಳಲ್ಲಿ ಬ್ರಿಜ್ ಭೂಷಣ್ ಮಗ ಕರಣ್ ಸಿಂಗ್‌ಗೆ ಬಿಜೆಪಿ ಟಿಕೆಟ್ ಕೊಟ್ಟರು. ಮೋದೀಜಿ ಅಮಿತ್ ಶಾಜಿ ಹಾಗೂ ಯೋಗೀಜಿ ಇಬ್ಬರೂ ತಮ್ಮ ಪಾಲಿಗೆ ದೇವತಾ ಸಮಾನರು ಎಂದು ಬ್ರಿಜಭೂಷಣ್ ಬಣ್ಣಿಸಿದ್ದರಲ್ಲಿ ಆಶ್ಚರ್ಯವೇನಿದೆ?
ಬೇಟಿ ಬಚಾವೋ ಎಂದು ಗಂಟಲು ಹರಿಯುವಂತೆ ಕೂಗುವವರ ನಾಲಗೆಗಳು ತಮ್ಮದೇ ಪಕ್ಷದ ಮಂತ್ರಿಗಳು, ಶಾಸಕರು, ಸಂಸದರು ಅಪರಾಧಿ ಸ್ಥಾನದಲ್ಲಿ ನಿಂತಾಗ ಸೇದಿ ಹೋಗುವುದು ಯಾಕೆ ಎಂಬ ಪ್ರಶ್ನೆಯನ್ನು ಕೇಳಬಾರದು. ಕೇಳಿದವರಿಗೆ ದೇಶದ್ರೋಹಿ ಇಲ್ಲವೇ ಹಿಂದುತ್ವ ವಿರೋಧಿ ಎಂಬ ಹಣೆಪಟ್ಟಿ ಹಚ್ಚಿ ಐ.ಟಿ.ಸೆಲ್ ಗಳು ಅವರ ಚಾರಿತ್ರ್ಯಹರಣದ ಅಭಿಯಾನ ಆರಂಭಿಸುತ್ತವೆ. ಪ್ರಶ್ನೆ ಕೇಳುವವರು ರಾಜಕಾರಣಿಗಳಾಗಿದ್ದರೆ ಕೇಂದ್ರೀಯ ತನಿಖಾ ಏಜೆನ್ಸಿಗಳು ಅವರ ಬೆನ್ನು ಬಿದ್ದು ಬೇಟೆಯಾಡುತ್ತವೆ.
ಕಣ್ಣೀರು ಒರೆಸಿಕೊಳ್ಳುತ್ತ ಬಂಗಾರದ ಪದಕಗಳನ್ನು ಗಂಗೆಗೆ ಬಿಡಲು ಹೊರಟ ಕ್ರೀಡಾಳು ಹೆಣ್ಣುಮಕ್ಕಳ ಚಿತ್ರ ಭಾರತ ಮಾತ್ರವಲ್ಲ ಯಾವ ದೇಶಕ್ಕೂ ಶೋಭೆ ತರುವುದಿಲ್ಲ. ಹೆಣ್ಣನ್ನು ದೇವತೆಯೆಂದು ಪೂಜೆ ಮಾಡುತ್ತೇವೆಂದು ಬೊಗಳೆ ಬಿಡುವವರು ಆಕೆಯನ್ನು ಕಾಲ ಕೆಳಗೆ ತುಳಿದು ಹೊಸಕಿ ಹಾಕುತ್ತ ಬಂದಿದ್ದಾರೆ. ಕುಲದೀಪ್ ಸೆಂಗರ್, ಚಿನ್ಮಯಾನಂದ, ಬ್ರಿಜ್‌ಭೂಷಣ್ ಸಿಂಗ್ ಅವರಂತಹ ಹೆಣ್ಣುಬಾಕರನ್ನು ಕಡೆಯ ಗಳಿಗೆ ತನಕ ರಕ್ಷಿಸಿಕೊಳ್ಳುತ್ತ ಬಂದಿದ್ದಾರೆ.
ಬ್ರಿಜ್‌ಭೂಷಣ ಶರಣ ಸಿಂಗ್ ಕಳೆದ ಹನ್ನೊಂದು ವರ್ಷಗಳಿಂದ ಭಾರತೀಯ ಕುಸ್ತಿ ಫೆಡರೇಷನ್ನಿನ ಅಧ್ಯಕ್ಷ. ಉತ್ತರಪ್ರದೇಶದ ಐದಾರು ಜಿಲ್ಲೆಗಳಲ್ಲಿ ದಟ್ಟ ರಾಜಕೀಯ ಪ್ರಭಾವ ಹೊಂದಿರುವ ಕುಖ್ಯಾತ ಬಾಹುಬಲಿ. ಆರು ಬಾರಿ ಲೋಕಸಭಾ ಸಂಸದ. ಈ ಪೈಕಿ ಐದು ಬಾರಿ ಬಿಜೆಪಿಯ ಸಂಸದ. ಸುಪ್ರೀಮ್ ಕೋರ್ಟ್ ಆದೇಶ ನೀಡುವ ತನಕ ಈತನ ಮೇಲೆ ಎಫ್.ಐ.ಆರ್. ದಾಖಲಿಸಿಕೊಳ್ಳಲೂ ತಯಾರಿರಲಿಲ್ಲ ಪೊಲೀಸರು. ಪಾರ್ಲಿಮೆಂಟಿನ ಹೊಸ ಕಟ್ಟಡದ ಉದ್ಘಾಟನೆ ಸಮಾರಂಭದಲ್ಲಿ ಈತ ಗಮ್ಮತ್ತಾಗಿ ಮಿಂಚುತ್ತಿದ್ದ. ಅತ್ತ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಪದಕಗಳನ್ನು ಗೆದ್ದು ತಂದ ವಿನೇಶ ಫೋಗಟ್ ಮತ್ತು ಸಾಕ್ಷಿ ಮಾಲಿಕ್ ಅವರನ್ನು ಪೊಲೀಸರು ರಸ್ತೆಗಳಲ್ಲಿ ಎಳೆದಾಡಿದರು. ಸಾಕ್ಷಿ ಮಾಲಿಕ್ ಅವರನ್ನು ನೆಲಕ್ಕೆ ಕೆಡವಿ ಮುಖದ ಮೇಲೆ ಬೂಟುಗಾಲಿಟ್ಟು ಒತ್ತಿ ಹಿಡಿದ ಘೋರ ದೃಶ್ಯಗಳು ಮೋದಿ ಆಡಳಿತದ ಎರಡೆಳೆ ನಾಲಗೆಗೆ ಶಾಶ್ವತ ಸಾಕ್ಷಿಯಾಗಿ ಉಳಿಯಲಿವೆ.
ಗುಜರಾತ್ ಬಿಜೆಪಿ ಸರ್ಕಾರ ಬಿಲ್ಕಿಸ್ ಬಾನು ಮತ್ತು ಆಕೆಯ ಕುಟುಂಬದ ಸದಸ್ಯರ ಅತ್ಯಾಚಾರ-ಕೊಲೆಯ 11 ಮಂದಿ ಅಪರಾಧಿಗಳಿಗೆ ಕ್ಷಮಾದಾನ ನೀಡಿ ಅವಧಿಗೆ ಮುನ್ನವೇ ಜೈಲಿನಿಂದ ಬಿಡುಗಡೆ ಮಾಡಿದ್ದು ನೆನಪಿದೆಯೇ? ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಈ ಹನ್ನೊಂದು ಮಂದಿ ಗರ್ಭಿಣಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಆಕೆಯ ಮೂರು ವರ್ಷದ ಹಸುಳೆಯನ್ನು ನೆಲಕ್ಕೆ ಬಡಿದು ಹತ್ಯೆ ಮಾಡಿದ್ದವರು. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದಂದು ಗುಜರಾತ್ ಸರ್ಕಾರ ಈ ಪಾತಕಿಗಳಿಗೆ ಕರುಣಿಸಿದ ಕ್ಷಮೆಯಿದು. ಹಣೆಗೆ ತಿಲಕ ಇರಿಸಿ, ಕೊರಳಿಗೆ ಹೂಮಾಲೆ ತೊಡಿಸಿ, ಮಿಠಾಯಿ ಹಂಚಿ ಈ ಅತ್ಯಾಚಾರಿಗಳ ಬಿಡುಗಡೆಯನ್ನು ಸಂಭ್ರಮಿಸಲಾಗಿತ್ತು. ಆದರೆ ಆ ನಂತರ ಸುಪ್ರೀಮ್ ಕೋರ್ಟು ಈ ಬಲಾತ್ಕಾರಿಗಳನ್ನು ಮತ್ತೆ ಸೆರೆಮನೆಗೆ ತಳ್ಳಿ ಸಾಮಾಜಿಕ ಲಜ್ಜೆಯನ್ನು ಕಾಪಾಡಿತು.
ʼಡೇರಾ ಸಚ್ಚಾ ಸೌದಾʼದ ಗುರು ರಾಮ್ ರಹೀಮ್ ಎರಡು ಅತ್ಯಾಚಾರಗಳು ಮತ್ತು ಹತ್ಯೆಯೊಂದರ ಅಪರಾಧಿ. ಜೀವಾವಧಿ ಶಿಕ್ಷೆ ಎದುರಿಸುತ್ತಿದ್ದಾನೆ. ಆದರೆ, ಈ ಸಜೆ ಕಾಗದಕ್ಕಷ್ಟೇ ಸೀಮಿತ. ಮೊನ್ನೆ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವಕ್ಕೆ ಎರಡು ದಿನಗಳ ಮುನ್ನ ಹತ್ತನೆಯ ಸಲ 21 ದಿನಗಳ ಪೆರೋಲ್ ಮೇಲೆ ಬಿಡುಗಡೆಯಾಗಿದ್ದಾನೆ. ಈ ಹಿಂದೆ ಲೋಕಸಭಾ ಚುನಾವಣೆಗಳು ನಡೆದಾಗಲೂ 50 ದಿನಗಳ ಪೆರೋಲ್ ದೊರೆತಿತ್ತು. ಹರಿಯಾಣದಲ್ಲಿ ಚುನಾವಣೆಗಳು ನಡೆದಾಗಲೆಲ್ಲ ಇವನಿಗೆ ಪೆರೋಲ್ ಹಬ್ಬ. ಇಲ್ಲಿಯ ತನಕ ಈ ಅತ್ಯಾಚಾರಿಗೆ 250 ದಿನಗಳ ಪೆರೋಲ್ ಮೋಜು ಮಜಾ ನೀಡಲಾಗಿದೆ.
ದೆಹಲಿಯ ನಿರ್ಭಯ ಪ್ರಕರಣದ ನಂತರ 2013ರಲ್ಲಿ ‘ನಿರ್ಭಯ ನಿಧಿ’ ಸ್ಥಾಪಿಸಲಾಗಿತ್ತು. ಈ ನಿಧಿಗೆ ಹಂಚಿಕೆ ಮಾಡಲಾಗಿದ್ದ ಶೇ.50ರಷ್ಟು ಹಣವನ್ನು ಮಾತ್ರವೇ ಬಿಡುಗಡೆ ಮಾಡಲಾಗಿತ್ತು ಮತ್ತು ಶೇ. 29ರಷ್ಟು ಹಣವನ್ನು ಮಾತ್ರವೇ ವಿನಿಯೋಗಿಸಲಾಗಿತ್ತು. 2021ರ ಸಾಲಿನ ಅಂಕಿಅಂಶವಿದು.
ಕಳೆದ ತಿಂಗಳು ಜಾರಿಯಾಗಿರುವ ಭಾರತೀಯ ನ್ಯಾಯ ಸಂಹಿತೆಯು ಎಫ್.ಐ.ಆರ್.ಗಳನ್ನು ದಾಖಲಿಸುವಲ್ಲಿ ಮತ್ತು ವಿಚಾರಣೆಗಳಲ್ಲಿ ಆಗುತ್ತಿದ್ದ ವಿಳಂಬಕ್ಕೆ ಕಡಿವಾಣ ಹಾಕಿದೆ ಎಂದಿದ್ದಾರೆ. ಕೆಂಪುಕೋಟೆಯ ನಿಂತು ಓತಪ್ರೋತವಾಗಿ ಭಾಷಣ ಬಿಗಿದರೆ ಸಾಲದು. ಆಡಿದ ಮಾತುಗಳನ್ನು ನಡೆಸಿಕೊಡಬೇಕು ಕೂಡ.
