ಪ್ರಜಾಪ್ರಭುತ್ವದ ಜೀವಾಳ ಇರುವುದೇ ಜನರ ಅಭಿವ್ಯಕ್ತಿಯಲ್ಲಿ. ಅದು ಚಿತ್ರಕಲೆ, ಸಂಗೀತ, ನಾಟಕ, ಛಾಯಾಚಿತ್ರ, ಸಿನಿಮಾ ಹೀಗೆ ಬೇರೆ ಬೇರೆ ಮಾಧ್ಯಮಗಳಲ್ಲಿ ವ್ಯಕ್ತವಾಗುತ್ತದೆ. ಸರ್ಕಾರದ ನೀತಿ ನಿಯಮಗಳ ಬಗ್ಗೆ ಓರೆಕೋರೆಗಳ ಬಗ್ಗೆ ಎಚ್ಚರಿಸುವುದು ದೇಶದ ಜನಗಳ ಜವಾಬ್ದಾರಿ. ಅದಕ್ಕೆ ಸ್ಪಂದಿಸುವುದು, ನಿರ್ಲಕ್ಷಿಸುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ಆದರೆ, ಅಭಿವ್ಯಕ್ತಪಡಿಸುವುದಕ್ಕೇ ಅವಕಾಶ ನೀಡದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾಡ್ರಾ ಅವರ ಪುತ್ರ, ಕಲಾವಿದ ಹಾಗೂ ಛಾಯಾಗ್ರಾಹಕ ರೇಹಾನ್ ರಾಜೀವ್ ವಾಡ್ರಾ ಅವರ ‘ನೋ ಐಡಿಯಾ ಈಸ್ ಫೈನಲ್’ (No Idea Is Final) ಎಂಬ ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನಕ್ಕೆ ನವದೆಹಲಿಯ ಬಿಕಾನೇರ್ ಹೌಸ್ (Bikaner House) ಆಡಳಿತ ಮಂಡಳಿ ಕತ್ತರಿ ಹಾಕಿದೆ. ಇದು ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ ಮೋದಿ ಸರ್ಕಾರದ ಜನ ವಿರೋಧಿ ಧೋರಣೆಯನ್ನು ಸಿನಿಮಾ, ಛಾಯಾಚಿತ್ರ, ಕಾರ್ಟೂನ್ಗಳ ಮೂಲಕ ಎತ್ತಿ ತೋರಿಸುವುದು ಅಪರಾಧ ಎಂಬಂತೆ ಪರಿಗಣಿಸುತ್ತಿರುವುದು ಆತಂಕಕಾರಿ ವಿದ್ಯಮಾನ..
ಸರ್ಕಾರವನ್ನ ಟೀಕಿಸುವ ವ್ಯಂಗ್ಯಚಿತ್ರಗಳ ಪ್ರಕಟಣೆ ತಡೆಯುವುದು, ಅಂತಹ ಕಲಾವಿದರ ಸೋಷಿಯಲ್ ಮೀಡಿಯಾ ಖಾತೆಗಳನ್ನು ಬಂದ್ ಮಾಡುವುದು, ಸ್ಟಾಂಡಪ್ ಕಾಮಿಡಿ ಶೋಗಳನ್ನು ರದ್ದುಪಡಿಸುವುದು, ಸರ್ಕಾರದ ನೀತಿಗಳನ್ನು ಪ್ರಶ್ನಿಸುವ ವ್ಯಕ್ತಿಗಳ ಭಾಷಣಗಳಿಗೆ ಅವಕಾಶ ನಿರಾಕರಿಸುವುದು, ಸರ್ವಾಧಿಕಾರಿ ನಡವಳಿಕೆಯನ್ನು ಬಿಂಬಿಸುವ ಸಿನಿಮಾ, ನಾಟಕಗಳಿಗೆ ಸೆನ್ಸಾರ್ ಹೆಸರಿನಲ್ಲಿ ತಡೆಯೊಡ್ಡುವುದು ಮುಂತಾದ ದುಷ್ಟೃತ್ಯ ನಿರಂತರವಾಗಿ ನಡೆಯುತ್ತಿದೆ. ಜೆನ್ ಝೀ ಪ್ರತಿಭಟನೆಯ ಸಂದರ್ಭದಲ್ಲಿ ರೇಹಾನ್ ವಾಡ್ರಾ ತೆಗೆದಿರುವ ಛಾಯಾಚಿತ್ರಗಳ ಪ್ರದರ್ಶನಕ್ಕೆ ಅಡ್ಡಿ ಮಾಡಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಮಾಡಲಾಗುತ್ತ ಬಂದಿರುವ ಪ್ರಹಾರ ಸರಣಿಯಲ್ಲಿ ಇತ್ತೀಚಿನದು.
ಆತ್ಮಕತೆಯ ಭಾಗಗಳಿಗೂ ಕತ್ತರಿ ಹಾಕಲು ಸೂಚಿಸಲಾಗುತ್ತಿದೆ ಎಂಬುದು ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಯಾವ ಮಟ್ಟಕ್ಕೆ ತಲುಪಿದೆ ಎಂಬುದನ್ನು ಸೂಚಿಸುತ್ತದೆ. ಈ ಎಲ್ಲವನ್ನೂ ಸಂಘ ಪರಿವಾರದ ವಿರುದ್ಧವಿರುವ ವ್ಯಕ್ತಿಗಳ ಮೇಲಷ್ಟೇ ಪ್ರಯೋಗಿಸಲಾಗುತ್ತಿದೆ. ಭಾರತದ ಇತಿಹಾಸ ತಿರುಚುವ, ನೆಹರೂ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಸುಳ್ಳು ಕಥನ, ಮಹಾತ್ಮ ಗಾಂಧಿ ಅವರನ್ನು ಅವಮಾನಿಸುವ, ಗಾಂಧಿ ಹತ್ಯೆಯನ್ನು ʼವಧೆʼ ಎಂದು ವೈಭವೀಕರಿಸುವ, ಗಾಂಧಿ ಹಂತಕ ಗೋಡ್ಸೆಯನ್ನು ದೇಶಭಕ್ತ ಎಂದು ಬಿಂಬಿಸುವ ಪುಸ್ತಕ, ಸಿನಿಮಾ, ನಾಟಕ ಪ್ರದರ್ಶನಕ್ಕೆ ಯಾವುದೇ ಅಡ್ಡಿ ಆತಂಕವಿಲ್ಲ. ಬಲಪಂಥೀಯ ಚಿಂತನೆಯನ್ನು ವ್ಯವಸ್ಥಿತವಾಗಿ ಪಠ್ಯಗಳಲ್ಲಿ ತುರುಕಲಾಗುತ್ತಿದೆ. ಒಟ್ಟಿನಲ್ಲಿ ಒಕ್ಕೂಟ ಸರ್ಕಾರ ಒಂದು ಪಂಥಕ್ಕಷ್ಟೇ ಅಚ್ಚುಮೆಚ್ಚಿನ ಸರ್ಕಾರವಾಗಿ ಕೆಲಸ ಮಾಡುತ್ತಿದೆ ಎಂದರೆ ತಪ್ಪಾಗದು.
ಇತ್ತೀಚೆಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕತೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love)ಪ್ರಕಟಣೆಯ ಸಂದರ್ಭದಲ್ಲಿ ಕೆಲ ಭಾಗಗಳಿಗೆ ಕತ್ತರಿ ಹಾಕಲು ಪ್ರಕಾಶನ ಸಂಸ್ಥೆ ಸೂಚಿಸಿದ್ದು, ಸೋನಿಯಾ ನಿರಾಕರಿಸಿದ್ದ ಸುದ್ದಿಯಾಗಿತ್ತು. ನವೆಂಬರ್ನಲ್ಲಿ ಬಿಡುಗಡೆಗೆ ಉದ್ದೇಶಿಸಿದ್ದ ಪುಸ್ತಕವನ್ನು ಮೊದಲು ಪ್ರಕಟಣೆಗೆ ಒಪ್ಪಿಕೊಂಡಿದ್ದ ಪೆಂಗ್ವಿನ್ ರ್ಯಾಂಡಮ್ ಹೌಸ್ ಎರಡು ತಿಂಗಳ ಹಿಂದೆ ಆತ್ಮಕತೆಯ ಕೆಲ ಭಾಗಗಳನ್ನು ತೆಗೆದು ಹಾಕುವಂತೆ ಸೋನಿಯಾರನ್ನು ಕೋರಿತ್ತು. ಅದಕ್ಕೆ ಒಪ್ಪದ ಕಾರಣ ಪ್ರಕಾಶನ ಸಂಸ್ಥೆಯು ಹಿಂದೆ ಸರಿದಿತ್ತು. ನಂತರ, ಪ್ರಸ್ತುತ ಈ ಆತ್ಮಕಥನವನ್ನು ಹಾರ್ಪರ್ಕಾಲಿನ್ಸ್ (HarperCollins) ಪ್ರಕಾಶನ ಸಂಸ್ಥೆಯು ಹೊರತರುತ್ತಿದೆ. ಒಬ್ಬ ವಿದೇಶಿ ಪ್ರಜೆಯಾಗಿ, ಭಾರತದ ಸೊಸೆಯಾಗಿ, ಕಾಂಗ್ರೆಸ್ ಅಧ್ಯಕ್ಷೆಯಾಗಿ, ಸಂಸದೆಯಾಗಿರುವ ಸೋನಿಯಾ ಗಾಂಧಿ ಭಾರತದ ರಾಜಕಾರಣದಲ್ಲಿ ವಿಶೇಷ ವ್ಯಕ್ತಿ. ಅವರು ನಾಲ್ಕು ದಶಕಗಳ ರಾಜಕೀಯ ಏಳುಬೀಳುಗಳನ್ನು ಕಂಡಿದ್ದಾರೆ. ಅಂತಹ ವ್ಯಕ್ತಿಯ ಆತ್ಮಕತೆಯ ಕೆಲವು ಭಾಗಗಳಿಗೆ ಕತ್ತರಿ ಹಾಕಲು ಪ್ರಕಾಶನ ಸಂಸ್ಥೆ ಯಾಕೆ ಹೇಳಿತ್ತು? ಪ್ರಕಟಣೆಗೆ ಯಾಕೆ ನಿರಾಕರಿಸಿತ್ತು? ಯಾರ ಒತ್ತಡವಿತ್ತು? ಸೋನಿಯಾರ ಆತ್ಮಕತೆಯಲ್ಲಿ ಇರಬಹುದಾದ ಅಂಶಗಳ ಬಗ್ಗೆ 56 ಇಂಚಿನ ಎದೆಯಲ್ಲಿ ಉಂಟಾದ ನಡುಕ ಪ್ರಕಾಶನ ಸಂಸ್ಥೆಯ ನಿರ್ಧಾರದ ಹಿಂದಿದೆ ಎಂಬುದು ಗುಟ್ಟಿನ ವಿಚಾರವೇನಲ್ಲ. ಕೋಟ್ಯಂತರ ರೂಪಾಯಿಗಳ ವಾರ್ಷಿಕ ಆದಾಯ ಇರುವ ದೇಶದ ಪ್ರಖ್ಯಾತ ಪ್ರಕಾಶನ ಸಂಸ್ಥೆಗೆ ಇ.ಡಿ. ಭಯ ಇಲ್ಲದೇ ಇರುವುದೇ?
ಈಗ ಸೋನಿಯಾರ ಮೊಮ್ಮಗ ರೇಹಾನ್ ಅವರ ಛಾಯಾಚಿತ್ರ ಪ್ರದರ್ಶನದ 74 ಛಾಯಾಚಿತ್ರಗಳನ್ನು ತೆರವುಗೊಳಿಸಲು ಬಿಕಾನೇರ್ ಸಂಸ್ಥೆ ಸೂಚಿಸಿದೆ. ʼಸಂಸ್ಥೆಯ ನಿಲುವಿಗೆ ವಿರುದ್ಧʼ ಎಂಬ ಲಘು ಕಾರಣ ಕೊಟ್ಟಿದೆ. ಇದರ ಹಿಂದೆ ಮೋದಿ ಸರ್ಕಾರದ ಕೈವಾಡ ಅಲ್ಲಗಳೆಯುವಂತಿಲ್ಲ. ಇತ್ತೀಚೆಗೆ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುವುದಕ್ಕೆ ನಿಷೇಧ ಹೇರಿರುವ ಕ್ರಮವನ್ನು ವಿರೋಧಿಸಿ ಸಿಜೆಪಿ ತಿರಂಗ ಮೆರವಣಿಗೆ ಮಾಡಿತ್ತು. ಈ ಸಂದರ್ಭದಲ್ಲಿ ದೆಹಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿತ್ತು. ರೇಹಾನ್ ಛಾಯಾಚಿತ್ರ ಪ್ರದರ್ಶನದಲ್ಲಿ ತಿರಂಗಾ ಮೆರವಣಿಗೆಯ ಚಿತ್ರಕ್ಕೆ ಅವಕಾಶ ನಿರಾಕರಿಸಲಾಗಿದೆ. ಬಿಕಾನೇರ್ ಹೌಸ್ ಸ್ಪಷ್ಟನೆಯ ಪ್ರಕಾರ, ಯಾವುದೇ ರಾಜಕೀಯ ಪ್ರೇರಿತ ಛಾಯಾಚಿತ್ರಗಳಿಗೆ ಅವಕಾಶ ಇಲ್ಲ ಎಂಬ ನಿಯಮ ಬಹಳ ಹಿಂದಿನಿಂದಲೂ ಇದೆ. ಆದರೆ, ರೇಹಾನ್ ಹೇಳಿಕೆಯ ಪ್ರಕಾರ ಪ್ರದರ್ಶನದ ಹಿಂದಿನ ದಿನ ಬಿಕಾನೇರ್ ಹೌಸ್ ಸಿಬ್ಬಂದಿ ಛಾಯಾಚಿತ್ರಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿತ್ತಂತೆ. ನಂತರ ಏಕಾಏಕಿ ಬಹುತೇಕ ಛಾಯಾಚಿತ್ರಗಳನ್ನು ತೆರವುಗೊಳಿಸಲು ಸೂಚಿಸಿದೆ. ಇದು ಸ್ಪಷ್ಟವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆಯೇ ಸರಿ.
ಜೆನ್ ಝೀ ಪ್ರತಿಭಟನೆ ಇತಿಹಾಸದ ಪುಟ ಸೇರಿದೆ. ಈ ಪ್ರತಿಭಟನೆಗಳು ಉಂಟು ಮಾಡುವ ಮುಂದಿನ ಪರಿಣಾಮಕ್ಕಾಗಿ ದೇಶ ಕಾತರಿಸಿ ಕಾದಿದೆ. ಪ್ರತಿಭಟನೆಯ ಸಂದರ್ಭದ ಚಿತ್ರಗಳು, ವಿಡಿಯೋಗಳು ಎಲ್ಲೆಡೆ ಸಿಗುತ್ತವೆ. ಅವು ಪ್ರತಿಯೊಬ್ಬರ ಮೊಬೈಲ್ನಲ್ಲಿ ಸೆರೆಯಾಗಿ ದೇಶದ ‘ಮೊಮೊರಿ’ ಸೇರಿಯಾಗಿದೆ. ಇನ್ನೂ ಜೆನ್ ಝೀ ಯುವಕ ರೇಹಾನ್, ಸೆಲಬ್ರಿಟಿ ಸಂಸದೆ ಪ್ರಿಯಾಂಕಾ ವಾಡ್ರಾ ಅವರ ಪುತ್ರ ಎಂಬ ಕಾರಣಕ್ಕೆ ಆತನ ಪ್ರದರ್ಶನ ಹೆಚ್ಚು ಗಮನ ಸೆಳೆದಿರುವುದು ಹೌದು. ರೇಹಾನ್ ಕ್ಯಾಮೆರಾಗಳಲ್ಲಿ ಸೆರೆಯಾದ ಛಾಯಾಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಸಿಗದಿದ್ದರೂ ಅವು ಬೇರೆ ಬೇರೆ ವೇದಿಕೆಗಳಲ್ಲಿ ಕಾಣಸಿಗಬಹುದು, ಅಥವಾ ಮುಂದೆ ಹಲವು ವರ್ಷಗಳ ನಂತರ ಭಾರತದ ಐತಿಹಾಸಿಕ ಕ್ಷಣಗಳ ಮಹತ್ವದ ದಾಖಲೆಗಳಾಗಿ ಭದ್ರವಾಗಿರಬಹುದು. ಆದರೆ, ಈ ದೇಶದ ಜನರ ಮತ ಪಡೆದು ರಚನೆಯಾದ ಸರ್ಕಾರ ದೇಶದ ಭದ್ರತೆಗೆ ಧಕ್ಕೆಯಾಗುವ ವಿಚಾರ ಹೊರತುಪಡಿಸಿ, ಇಂತಹ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಮಾಡುವುದು ಸಂವಿಧಾನ ವಿರೋಧಿ ಕ್ರಮ.
ಪ್ರಜಾಪ್ರಭುತ್ವದ ಜೀವಾಳ ಇರುವುದೇ ಜನರ ಅಭಿವ್ಯಕ್ತಿಯಲ್ಲಿ. ಅದು ಚಿತ್ರಕಲೆ, ಸಂಗೀತ, ನಾಟಕ, ಛಾಯಾಚಿತ್ರ, ಸಿನಿಮಾ ಹೀಗೆ ಬೇರೆ ಬೇರೆ ಮಾಧ್ಯಮಗಳಲ್ಲಿ ವ್ಯಕ್ತವಾಗುತ್ತದೆ. ಸರ್ಕಾರದ ನೀತಿ ನಿಯಮಗಳ ಬಗ್ಗೆ ಓರೆಕೋರೆಗಳ ಬಗ್ಗೆ ಎಚ್ಚರಿಸುವುದು ದೇಶದ ಜನಗಳ ಜವಾಬ್ದಾರಿ. ಅದಕ್ಕೆ ಸ್ಪಂದಿಸುವುದು, ನಿರ್ಲಕ್ಷಿಸುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ಆದರೆ, ಅಭಿವ್ಯಕ್ತಪಡಿಸುವುದಕ್ಕೇ ಅವಕಾಶ ನೀಡದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ.
ಖ್ಯಾತ ಸ್ಟ್ಯಾಂಡಪ್ ಕಮೆಡಿಯನ್ ಕುನಾಲ್ ಕಾಮ್ರ ಅವರ ಬೆಂಗಳೂರು ಪ್ರದರ್ಶನವನ್ನು ರದ್ದುಗೊಳಿಸಿ, ಹೊರವಲಯದಲ್ಲಿ ಸೀಮಿತ ಸಭಿಕರಿಗಷ್ಟೇ ಅವಕಾಶ ಮಾಡಿಕೊಡಲಾಗಿತ್ತು. ಕಾಂಗ್ರೆಸ್ ಆಳ್ವಿಕೆಯ ರಾಜ್ಯವೂ ಅಭಿವ್ಯಕ್ತಿ ಸ್ವಾತಂತ್ರ್ಯ ದಮನದ ಹಾದಿ ಹಿಡಿದ್ದದ್ದು ಖಂಡನೀಯ. ಇತ್ತೀಚೆಗೆ ಬೆಂಗಳೂರಿನಲ್ಲಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ನಡೆದ ಶಾಂತಿಯುತ ಪ್ರತಿಭಟನೆಯ ವಿರುದ್ಧ ಪೊಲೀಸರು ರಕ್ಕಸ ಬಲಪ್ರದರ್ಶನ ನಡೆಸಿದರು. ಲಾಠಿ ಬೀಸಿ ಥಳಿಸಿ ಎಳೆದಾಡಿದ್ದು ಹೇಯ ಕೃತ್ಯ. ದೆಹಲಿಯಲ್ಲಿ ಗ್ಯಾನೇಶ್ ವಿರುದ್ಧ ಪ್ರತಿಭಟಿಸುವ ಅದೇ ಕಾಂಗ್ರೆಸ್ ಪಾರ್ಟಿಯ ಸರ್ಕಾರ ಕರ್ನಾಟಕದಲ್ಲಿ ಅಧಿಕಾರದಲ್ಲಿದೆ. ದೆಹಲಿ ಮತ್ತು ಬೆಂಗಳೂರಿನ ಪ್ರತಿಭಟನೆಗಳಿಗೆ ಭಿನ್ನ ಅಳತೆಗೋಲುಗಳು ಯಾಕೆಂದು ರಾಜ್ಯ ಸರ್ಕಾರ ಸಮಜಾಯಿಷಿ ಒದಗಿಸಬೇಕು.
ಇದನ್ನೂ ಓದಿ ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್
ಬೆಂಗಳೂರಿನಲ್ಲಿ ಸಂಘಪರಿವಾರದ ತಿರಂಗಾ ಯಾತ್ರೆ ನಡೆಯಿತು. ಕಾಂಗ್ರೆಸ್ ಸರ್ಕಾರ ಯಾತ್ರೆಗೆ ಅನುಮತಿ ನೀಡಿತ್ತು. ಆದರೆ, ದೆಹಲಿಯಲ್ಲಿ ಯುವಜನತೆ ತಿರಂಗಾ ಹಿಡಿದು ಮೆರವಣಿಗೆ ಮಾಡಲು ಹೊರಟರೆ ಪೊಲೀಸರು ಬಲಪ್ರಯೋಗ ಮಾಡಿದ್ದರು. ಸಿಜೆಪಿ ಮುಖ್ಯಸ್ಥರನ್ನು ಜೈಲಿಗೆ ಅಟ್ಟಿದ್ದರು. ಕೆಲವರನ್ನು ಗೃಹಬಂಧನದಲ್ಲಿಟ್ಟಿದ್ದರು. ಈ ದೇಶದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತಿರಂಗಾ ಹಿಡಿಯುವುದು ಯಾವಾಗಿನಿಂದ ಅಪರಾಧವಾಯಿತು? ಮೋದಿ ಸರ್ಕಾರದ ಈ ದಮನಕಾರಿ ನೀತಿ ಮುಂದೊಂದು ದಿನ ಸರ್ಕಾರಕ್ಕೆ ಮಾತ್ರವಲ್ಲ, ಬಿಜೆಪಿಗೂ ಮುಳುವಾಗಲಿದೆ.





