2013-2018ರವರೆಗೆ ಅನ್ನಭಾಗ್ಯದ ಅಕ್ಕಿ ಬಹಳಷ್ಟು ದುರುಪಯೋಗ ಆಗುತ್ತಿತ್ತು. ಈಗ ಐದು ಕೇಜಿ ಕೊಡುತ್ತಿರುವುದರಿಂದ ಕಾಳಸಂತೆಯಲ್ಲಿ ರೇಷನ್ ಅಕ್ಕಿ ಸಿಗುತ್ತಿಲ್ಲ ಎಂದು ವರದಿಯಾಗಿದೆ. ಇದು ನಿಜಕ್ಕೂ ಉತ್ತಮ ಬೆಳವಣಿಗೆ. ಐದು ಕೆ.ಜಿ ಅಕ್ಕಿಯ ಬದಲಿಗೆ ನೀಡುವ ಹಣದಲ್ಲಿ ಉಳಿದ ಅಡುಗೆ ಸಾಮಗ್ರಿ ಖರೀದಿಸಲು ಅನುಕೂಲವಾಗಿದೆ.
2013ರಲ್ಲಿ ಬಸವ ಜಯಂತಿಯ ದಿನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನವೇ ಸಿದ್ದರಾಮಯ್ಯ ಅವರು ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ 1ರೂಪಾಯಿಗೆ ಕೆ.ಜಿಯಂತೆ, ಒಬ್ಬ ವ್ಯಕ್ತಿಗೆ ತಿಂಗಳಿಗೆ ಹತ್ತು ಕೆ.ಜಿ ಅಕ್ಕಿ ಕೊಡುವ “ಅನ್ನಭಾಗ್ಯ” ಯೋಜನೆ ಜಾರಿ ಮಾಡಿದ್ದರು. ಅದಾಗಿ ಒಂದು ವರ್ಷ ಪೂರೈಸುತ್ತಿದ್ದಂತೆ ಉಚಿತ ಅಕ್ಕಿ ನೀಡುವ ಯೋಜನೆ ಚಾಲ್ತಿಗೆ ಬಂತು. ಯಥಾ ಪ್ರಕಾರ ಆರಂಭದಲ್ಲೇ ಬಿಜೆಪಿಯವರು ತಮ್ಮ ವಿಕೃತ ಹೇಳಿಕೆ ನೀಡುತ್ತಾ, ಬಡವರ ಹಸಿವು ನೀಗಿಸುವ ಯೋಜನೆ ʼಕನ್ನಭಾಗ್ಯʼ ಎಂದು ಟೀಕಿಸಿದರು. ಸರ್ಕಾರಿ ಶಾಲಾ ಮಕ್ಕಳಿಗೆ ವಾರಕ್ಕೆರಡು ಬಾರಿ ಹಾಲು ನೀಡುವ ಕ್ಷೀರಭಾಗ್ಯ, ಅಪೌಷ್ಟಿಕತೆ ನೀಗಿಸುವ ಮೊಟ್ಟೆಭಾಗ್ಯ, ನಗರದ ಬಡವರ ಆಸರೆ ಇಂದಿರಾ ಕ್ಯಾಂಟೀನ್ ಯೋಜನೆ ನೀಡಿದಾಗಲೂ ಅದರ ವಿರುದ್ಧ ಹೊಟ್ಟೆ ತುಂಬಿದವರು ಟೀಕಿಸಿದ ಉದಾಹರಣೆಗಳಿವೆ.
“ಉಚಿತ ಅಕ್ಕಿ ನೀಡಿದರೆ ಜನ ಸೋಂಬೇರಿಗಳಾಗುತ್ತಾರೆ. ಕೃಷಿ ಕೂಲಿ ಕಾರ್ಮಿಕರ ಕೊರತೆಯಾಗುತ್ತದೆ” ಎಂದು ಹೇಳುತ್ತಾ ದುಡಿದು ಉಣ್ಣುವ ಜನರಿಗೆ ಅಕ್ಕಿ ಬಿಟ್ಟರೆ ಬೇರೆ ಅಗತ್ಯಗಳು ಇವೆ ಎಂಬುದನ್ನೇ ಮರೆತು ವರ್ತಿಸಿದ್ರು. ಎಸ್ ಎಲ್ ಭೈರಪ್ಪ ತರಹದವರು ಬಾಲ್ಯದಲ್ಲಿ ಒಪ್ಪೊತ್ತು ಊಟ ಮಾಡಿ ಓದಿ ಕಷ್ಟಪಟ್ಟು ಬೆಳೆದೆ ಎಂದು ಹೇಳುತ್ತಾ ಬಂದವರೂ ಉಚಿತ ಅಕ್ಕಿ ಕೊಡುವ ಯೋಜನೆಯನ್ನು ಅಮಾನವೀಯವಾಗಿ ಟೀಕಿಸಿದರು. ಈಗಲೂ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಹೀನಾಮಾನ ಟೀಕಿಸುವುದರಲ್ಲಿ ಬಲಪಂಥೀಯ ವಿಚಾರಧಾರೆಯ ಬರಹಗಾರರು ಮುಂಚೂಣಿಯಲ್ಲಿದ್ದಾರೆ. ʼನಮ್ಮ ತೆರಿಗೆ ಬಿಟ್ಟಿ ಯೋಜನೆಗಲ್ಲʼ ಎಂದು ಕ್ಯಾಂಪೇನ್ ಮಾಡುವ ಮೂಲಕ ಕರ್ನಾಟಕದ ಉದ್ಯಮಿಗಳು, ಬಲಪಂಥೀಯರು ಬಡವರನ್ನೇ ಪರೋಕ್ಷವಾಗಿ ಹಂಗಿಸಿದ್ದರು.
ಮೊದಲ ಅವಧಿ ಮುಗಿದ ನಂತರ ಬಂದ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಅವರು ಹತ್ತು ಕೆ.ಜಿ ಅಕ್ಕಿಯನ್ನು ಏಳಕ್ಕೆ ಇಳಿಸಿದ್ರು, ನಂತರ ಬಂದ ಬಿಜೆಪಿ ಐದಕ್ಕೆ ಇಳಿಸಿ ಅನ್ನಭಾಗ್ಯ ಯೋಜನೆಯನ್ನು ಹಳ್ಳ ಹಿಡಿಸುವ ಪ್ರಯತ್ನ ಮಾಡಿತ್ತು. ಈ ಬಾರಿ ಮತ್ತೆ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ ಹತ್ತು ಕೆ.ಜಿ ಅಕ್ಕಿ ನೀಡುವುದಕ್ಕೆ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ವಾಗ್ದಾನದಂತೆ ನಡೆದುಕೊಳ್ಳದ ಕಾರಣ, ಅಕ್ಕಿಯ ಕೊರತೆ ಇದ್ದರೂ ಐದು ಕೆ.ಜಿ ಅಕ್ಕಿಯ ಬದಲು ಹಣ ನೀಡುವ ನಿರ್ಧಾರ ಮಾಡಿರುವುದು ಮೆಚ್ಚುವಂಥ ನಡೆ.
ಇದೀಗ ಫೆ 29ರಂದು ಸಿದ್ದರಾಮಯ್ಯ ಸರ್ಕಾರ ತಮ್ಮ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯ ದಶಮಾನೋತ್ಸವ ಆಚರಿಸಿಕೊಂಡಿದೆ. “ಬಿಜೆಪಿಯವರು ಕಾಂಗ್ರೆಸ್ ಮುಕ್ತ ಭಾರತ ಮಾಡುವುದಾಗಿ ಹೇಳುತ್ತಿದ್ದಾರೆ. ಆದರೆ ಕಾಂಗ್ರೆಸ್ ಹಸಿವು ಮುಕ್ತ ಭಾರತ ನಿರ್ಮಿಸಲು ಹೊರಟಿದೆ” ಎಂದು ಸಿದ್ದರಾಮಯ್ಯನವರು ಬಿಜೆಪಿ ನಾಯಕರಿಗೆ ಸರಿಯಾಗಿಯೇ ಟಾಂಗ್ ಕೊಟ್ಟಿದ್ದಾರೆ. ಅನ್ನಭಾಗ್ಯದ ದಶಮಾನೋತ್ಸವ ಮತ್ತು ಪಡಿತರ ವಿತರಕರ ಸಮಾವೇಶ ನಡೆಸಿ ಪ್ರತಿ ಕೇಜಿ ಅಕ್ಕಿಗೆ ಕೊಡುತ್ತಿದ್ದ ಕಮಿಷನ್ ರೂ.1.24ರಿಂದ 1.50ಕ್ಕೆ ಹೆಚ್ಚಿಸಿ ಪಡಿತರ ವಿತರಕರ ಕೈಯನ್ನೂ ಬಲಪಡಿಸಿದ್ದಾರೆ.
ಅನ್ನಭಾಗ್ಯ ಒಂದೆ ಎಂದಲ್ಲ, ಸರ್ಕಾರದ ಯಾವುದೇ ಜನಪರ ಯೋಜನೆಯೇ ಇರಲಿ, ಅದು ಯಶಸ್ವಿಯಾಗಬೇಕಿದ್ದರೆ ಅಧಿಕಾರಿಗಳ ಬದ್ಧತೆ ಬಹಳ ಮುಖ್ಯ. ಆದರೆ ದುರಂತವೆಂದರೆ ಬಹುತೇಕ ಅಧಿಕಾರ ವರ್ಗ ಬೇಲಿಯೇ ಎದ್ದು ಹೊಲ ಮೇಯ್ದಂತೆ ಇರುವುದಂತು ಸತ್ಯ. ಅನ್ನಭಾಗ್ಯದ ಅಕ್ಕಿ ವಿತರಣೆಯಲ್ಲಿ ಪಡಿತರ ಅಂಗಡಿಯವರು ತೂಕದಲ್ಲಿ ಮೋಸ ಮಾಡುವುದು, ಉಳಿಕೆ ಅಕ್ಕಿಯನ್ನು ಖಾಸಗಿ ಅಂಗಡಿಯವರಿಗೆ ಮಾರುವುದು, ಲಾರಿಗಳಲ್ಲಿ ಅಕ್ಕಿ ಮೂಟೆ ಕಳ್ಳತನ, ಕಮಿಷನ್ ವಸೂಲಿ ಹೀಗೆ ಮೋಸ ಮಾಡುತ್ತಾ ಬಂದಿದ್ದಾರೆ. ಅದನ್ನು ಸಂಪೂರ್ಣವಾಗಿ ತಡೆಯಲು ವ್ಯವಸ್ಥೆ ವಿಫಲವಾಗಿದೆ. ಅದೇ ರೀತಿ ಶಾಲಾ ಮಕ್ಕಳಿಗೆ ಪೂರೈಕೆ ಮಾಡುವ ಮೊಟ್ಟೆ, ಹಾಲು ಇವುಗಳಲ್ಲೂ ಕಮಿಷನ್ ಹಾವಳಿ ಆಗಾಗ ಯೋಜನೆಯನ್ನು ಅಣಕಿಸುವಂತೆ ಮಾಡುತ್ತಿದೆ. ಇದಕ್ಕೆಲ್ಲ ರಾಜಕಾರಣಿಗಳು ಮತ್ತು ಅಧಿಕಾರಿಗಳ ಹಣದ ಲಾಲಸೆಯೇ ಕಾರಣ.
ಆರಂಭದಲ್ಲಿ ತಲಾ ಹತ್ತು ಕೆ.ಜಿ ಅಕ್ಕಿ ಕೊಡುತ್ತಿದ್ದಾಗ ಜನರೇ ಹೆಚ್ಚಾದ ಅಕ್ಕಿಯನ್ನು ಹದಿನೈದು ರೂಪಾಯಿಗೆ ಕಾಳಸಂತೆಗೆ ಮಾರುತ್ತಿದ್ದರು. ಬಹುತೇಕ ಹೊಟೇಲ್ಗಳಲ್ಲಿ ಇಡ್ಲಿ, ದೋಸೆಗೆ ಇದೇ ಅಕ್ಕಿಯನ್ನು ಬಳಸುತ್ತಿದ್ದರು. ಸಣ್ಣಪುಟ್ಟ ಊರುಗಳ ದಿನಸಿ ಅಂಗಡಿಯವರು ಜನರಿಂದ ಹದಿನೈದು ರೂಪಾಯಿಗೆ ಖರೀದಿಸಿ ಗ್ರಾಹಕರಿಗೆ 30 ರೂಪಾಯಿಗೆ ಮಾರಾಟ ಮಾಡುತ್ತಿದ್ದರು. 2013-2018ರವರೆಗೆ ಅನ್ನಭಾಗ್ಯದ ಅಕ್ಕಿ ಬಹಳಷ್ಟು ದುರುಪಯೋಗ ಆಗುತ್ತಿತ್ತು. ಈಗ ಐದು ಕೆ.ಜಿ ಕೊಡುತ್ತಿರುವುದರಿಂದ ಕಾಳಸಂತೆಯಲ್ಲಿ ರೇಷನ್ ಅಕ್ಕಿ ಸಿಗುತ್ತಿಲ್ಲ ಎಂದು ವರದಿಯಾಗಿದೆ. ಇದು ನಿಜಕ್ಕೂ ಉತ್ತಮ ಬೆಳವಣಿಗೆ. ಐದು ಕೆ.ಜಿ ಅಕ್ಕಿಯ ಬದಲಿಗೆ ನೀಡುವ ಹಣದಲ್ಲಿ ಉಳಿದ ಅಡುಗೆ ಸಾಮಗ್ರಿ ಖರೀದಿಸಲು ಅನುಕೂಲವಾಗಿದೆ.
ಯೋಜನೆಯೊಂದನ್ನು ಜಾರಿಗೆ ತಂದಾಗ ಅದರ ಸಾಧಕ ಬಾಧಕ ಅರಿತು ಸಕಾಲದಲ್ಲಿ ತಿದ್ದುಪಡಿ ಮಾಡುವುದರಿಂದ ಸರ್ಕಾರದ ಹೊರೆಯೂ ಕಡಿಮೆಯಾಗುತ್ತದೆ. ಸದ್ಯ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗೆ ಹೆಚ್ಚು ಹಣದ ಅಗತ್ಯ ಇರುವ ಕಾರಣ ಯಾವುದೇ ಯೋಜನೆಗಳಲ್ಲಿ ಸೋರಿಕೆಯಾಗದಂತೆ ತಡೆಯುವುದು ಬಹಳ ಮುಖ್ಯ.
