‘ಹಕ್ಕಿ ಗೂಡು ಕಟ್ಟಿದ್ದಂತೆ ಮನೆ ನಿರ್ಮಿಸಿದ್ದೆವು’; ಸಿಲ್ಕ್ಯಾರಾ ‘ಹೀರೋ’ ಹಸನ್‌ ಪತ್ನಿಯ ಅಳಲು

Date:

ಸಿಲ್ಕ್ಯಾರಾ ಕಾರ್ಮಿಕರ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರ್‍ಯಾಟ್ ಹೋಲ್ ಮೈನರ್ಸ್ ತಂಡದ ಹಸನ್‌ ವಕೀಲ್‌ರ ಮನೆಯನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳು ಧ್ವಂಸಗೊಳಿಸಿದ್ದಾರೆ. ಅಕ್ರಮವಾಗಿ ಮನೆ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿ ಆ ಮನೆಯನ್ನು ಕೆಡವಲಾಗಿದೆ.

ಅಧಿಕಾರಿಗಳ ದೌರ್ಜನ್ಯದ ಬಗ್ಗೆ ಅಳಲು ತೋಡಿಕೊಂಡಿರುವ ಹಸನ್‌ ವಕೀಲ್ ಅವರ ಪತ್ನಿ ಶಬಾನಾ, “ನಾವ್ಯಾರೂ ಮನೆಯಲ್ಲಿ ಇರಲಿಲ್ಲ. ಮಕ್ಕಳಷ್ಟೇ ಮನೆಯಲ್ಲಿದ್ದರು. ಅವರನ್ನು ಹೊರಕ್ಕೆ ಎಳೆದು ಮನೆ ಕೆಡವಲಾಗಿದೆ, ಹಲ್ಲೆ ಮಾಡಲಾಗಿದೆ” ಎಂದು ಹೇಳಿದ್ದಾರೆ. “ಹಕ್ಕಿ ಒಂದೊಂದೆ ಕಡ್ಡಿಯನ್ನು ಸಂಗ್ರಹಿಸಿ ಗೂಡು ಕಟ್ಟುವಂತೆ, ನಾವು ನಮ್ಮ ಮನೆ ಕಟ್ಟಿದ್ದೆವು. ಆದರೆ ಈಗ ನಮ್ಮ ಮನೆ ನೆಲಸಮ ಮಾಡಲಾಗಿದೆ,” ಎಂದು ಶಬಾನಾ ಕಣ್ಣೀರು ಹಾಕಿದ್ದಾರೆ.

Wakeel Hassan house demolish
ಸಿಲ್ಕ್ಯಾರಾ ಹೀರೋ ಹಸನ್‌ ಮನೆ ಧ್ವಂಸ

ಹಸನ್‌ರ ಮನೆ ಧ್ವಂಸ ಮಾಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಅಧಿಕಾರಿಗಳು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದ್ದಾರೆ. ಆದರೆ, “ನಾವು ಈಗ ಇರುವ ಮನೆಯನ್ನು ಕೆಡವಲಾಗಿದೆ. ಬೇರೆ ಮನೆ ನಿರ್ಮಿಸಿ ಕೊಡುತ್ತೇವೆ ಎಂದು ಹೇಳಿದ್ದಾರೆ. ಆದರೆ, ಆ ಮನೆಯನ್ನು ಎಲ್ಲಿ, ಯಾವಾಗ ಕಟ್ಟಿಕೊಡುತ್ತಾರೆ ತಿಳಿದಿಲ್ಲ. ನಾವಿದ್ದ ಮನೆ ಹೇಗಿದ್ದರೂ ಕೂಡಾ ನಾವು ಅಲ್ಲಿ ಎಷ್ಟೋ ವರ್ಷ ಜೀವಿಸಿದ್ದೇವೆ. ಆದರೆ ಈಗ ಧ್ವಂಸ ಮಾಡಲಾಗಿದೆ,” ಎಂದು ಶಬಾನಾ ಹೇಳುತ್ತಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಉತ್ತರಾಖಂಡದ ಸಿಲ್ಕ್ಯಾರಾದಲ್ಲಿ ಸುರಂಗದೊಳಗೆ ಸಿಲುಕಿದ್ದ 39 ಮಂದಿ ಕಾರ್ಮಿಕರ ರಕ್ಷಣೆಯಲ್ಲಿ ಹಸನ್ ವಕೀಲ್ ಪ್ರಮುಖ ಪಾತ್ರ ನಿಭಾಯಿಸಿದ್ದರು. ಈಗ ಒತ್ತುವರಿ ವಿರೋಧಿ ಕಾರ್ಯಾಚರಣೆಯಲ್ಲಿ ದೆಹಲಿ ಅಭಿವೃದ್ಧಿ ಪ್ರಾಧಿಕಾರ ಹಸನ್ ಅವರ ಮನೆಯನ್ನು ನೆಲಸಮ ಮಾಡಿದೆ. “ನಮ್ಮ ದೇಶಕ್ಕೆ ವಕೀಲ್ ಹಸನ್ ನೀಡಿದ ಕೊಡುಗೆ ಏನೆಂದು ನಮಗೆ ತಿಳಿದಿರಲಿಲ್ಲ,” ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ಹಸನ್ ಕುಟುಂಬಕ್ಕೆ ನರೇಲಾದಲ್ಲಿ ಫ್ಲಾಟ್ ನೀಡುವುದಾಗಿ ಡಿಡಿಎ ಘೋಷಿಸಿದೆ. ಸದ್ಯಕ್ಕೆ ತಾತ್ಕಾಲಿಕ ವಾಸಸ್ಥಳ ಮತ್ತು ಉದ್ಯೋಗದ ಭರವಸೆಯನ್ನು ನೀಡಿದೆ. ಆದರೆ, ಹಸನ್ ಕುಟುಂಬ ಈಶಾನ್ಯ ದೆಹಲಿಯ ಖಜೂರ್ ಖಾಸ್ ಬಳಿ ಮನೆ ನೀಡುವಂತೆ ಮನವಿ ಮಾಡಿದೆ.

ಮೋದಿಗೆ ನೀಡಿದ್ರು ರಕ್ಷಣಾ ಕಾರ್ಯಾಚರಣೆ ಶ್ರೇಯಸ್ಸು!

ದೆಹಲಿಯ ಬಸ್‌ ನಿಲ್ದಾಣದಿಂದ ಹಿಡಿದು ಮೆಟ್ರೋವರೆಗೆ ಸಿಲ್ಕ್ಯಾರಾ ರಕ್ಷಣಾ ಕಾರ್ಯವು ಮೋದಿ ಸರ್ಕಾರದ ಯಶಸ್ಸು ಎಂಬಂತೆ ಬಿಂಬಿಸುವ ಪೋಸ್ಟರ್‌ಗಳನ್ನು ಹಾಕಲಾಗಿದೆ. ವಿಡಿಯೋ ಕರೆಯಲ್ಲಿ ಕಾರ್ಮಿಕರೊಂದಿಗೆ ಮೋದಿ ಮಾತನಾಡಿದ ಸ್ಕ್ರೀನ್‌ಶಾಟ್‌ ಅನ್ನು ಕೂಡಾ ಪೋಸ್ಟರ್‌ನಲ್ಲಿ ನಾವು ಕಾಣಬಹುದು.

ಪೋಸ್ಟರ್‌ನಲ್ಲಿ ಪ್ರಧಾನಿ ಮೋದಿ ಚಿತ್ರ ದೊಡ್ಡದಾಗಿದ್ದರೆ, ರ್‍ಯಾಟ್ ಹೋಲ್ ಮೈನರ್ಸ್ ತಂಡ ಕಾರ್ಮಿಕರನ್ನು ರಕ್ಷಣೆ ಮಾಡುವ ಚಿತ್ರಗಳನ್ನು ಚಿಕ್ಕದಾಗಿ ಹಾಕಲಾಗಿದೆ. ಜೊತೆಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಚಿತ್ರವೂ ಕೂಡಾ ಇದೆ. ಆದರೆ ಆಸ್ಟ್ರೇಲಿಯಾದಿಂದ ಕರೆಸಿಕೊಂಡಿದ್ದ, ರಕ್ಷಣಾ ಕಾರ್ಯಕ್ಕೆ ಪ್ರಮುಖ ಕೊಡುಗೆ ನೀಡಿದ ಅಂತಾರಾಷ್ಟ್ರೀಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಅವರ ಉಲ್ಲೇಖವೇ ಇಲ್ಲ. ರಕ್ಷಣಾ ಕಾರ್ಯದ ಸಂಪೂರ್ಣ ಶ್ರೇಯಸ್ಸನ್ನು ಪ್ರಧಾನಿ ಮೋದಿಗೆ ನೀಡಲಾಗಿದೆ.

ಪರಿಹಾರ ತಿರಸ್ಕರಿಸಿದ್ದ ಕಾರ್ಮಿಕರು

ಕಾರ್ಮಿಕರು ಸರ್ಕಾರ ಘೋಷಿಸಿದ ಐವತ್ತು ಸಾವಿರ ರೂಪಾಯಿ ಪರಿಹಾರವನ್ನು ಆರಂಭದಲ್ಲಿ ತಿರಸ್ಕರಿಸಿದ್ದರು. “ನಮಗೆ ಪರಿಹಾರ ಬೇಡ, ಈ ಕೆಲಸದಿಂದ ಮುಕ್ತಿ ನೀಡಿ” ಎಂದು ಕಾರ್ಮಿಕರು ಬೇಡಿಕೊಂಡಿದ್ದರು. ಆದರೆ ಯಾವುದೇ ಪ್ರತಿಕ್ರಿಯೆ ಇಲ್ಲದ ಕಾರಣ ಕೊನೆಗೆ ಬೇರೆ ದಾರಿಯಿಲ್ಲದೆ ಕಾರ್ಮಿಕರು ತಲಾ ಐವತ್ತು ಸಾವಿರ ರೂಪಾಯಿ ಪರಿಹಾರವನ್ನು ಸ್ವೀಕರಿಸಿದ್ದರು.

ನಾವು ಬಡವರು, ನಮ್ಮ ಜೀವನ ಹೀಗೆಯೇ….

ಮಾಧ್ಯಮಗಳಲ್ಲಿ ರ್‍ಯಾಟ್ ಮೈನರ್‌ಗಳನ್ನು ಮೀಡಿಯಾಗಳು ಹಿರೋಗಳೆಂದು ತೋರಿಸುತ್ತಿದ್ದ ಸಂದರ್ಭದಲ್ಲಿಯೇ ಮಾತನಾಡಿದ್ದ ರ್‍ಯಾಟ್ ಮೈನರ್‌ ಫಿರೋಸ್ ಖುರೇಷಿ, “ನಮಗೆ ಒಂದು ಲಕ್ಷ ರೂಪಾಯಿಯ ಚೆಕ್ ಅನ್ನು ನೀಡಲಾಗಿದೆ. ಮುಂಬೈನಲ್ಲಿ ಇಂಡಿಯನ್ ಐಡಿಯಲ್ ತಂಡ ನಮ್ಮನ್ನು ಆಹ್ವಾನಿಸಿದೆ. ಆದರೆ ಹೀರೋ ಟ್ರೀಟ್‌ಮೆಂಟ್ ಹೆಚ್ಚು ಕಾಲ ಉಳಿಯದು. ಜನರು ನಮ್ಮನ್ನು ಕ್ರಮೇಣ ಮರೆಯುತ್ತಾರೆ ಎಂಬುವುದು ನಮಗೆ ತಿಳಿದಿದೆ. ನಾವು ಬಡವರು, ನಮ್ಮ ಜೀವನ ಹೀಗೆಯೇ ಸಾಗುತ್ತದೆ,” ಎಂದು ಹೇಳಿಕೊಂಡಿದ್ದರು.

ಸಂಗಮ್ ವಿಹಾರದಲ್ಲಿಯೂ ಮನೆ ಧ್ವಂಸ

ಫೆಬ್ರವರಿ 29 ರಂದು ಅತಿಕ್ರಮಣ ನೆಪದಲ್ಲಿ ದೆಹಲಿಯ ಸಂಗಮ್ ವಿಹಾರದಲ್ಲಿ ಮನೆಗಳನ್ನು ಧ್ವಂಸ ಮಾಡಲಾಗಿದೆ. ಇಲ್ಲಿ ಹಲವಾರು ವರ್ಷಗಳಿಂದ ಜನರು ವಾಸವಾಗಿದ್ದರು. ಈ ಪ್ರದೇಶದ ಜನರಿಗೆ ಮನೆ ಧ್ವಂಸ ಮಾಡುವ ಒಂದು ದಿನದ ಮುನ್ನವಷ್ಟೇ ನೋಟಿಸ್ ನೀಡಲಾಗಿತ್ತು. ಹಸನ್ ರಕ್ಷಣಾ ಕಾರ್ಯಾಚರಣೆ ಮೂಲಕ ಸುದ್ದಿಯಾಗಿದ್ದ ಕಾರಣ ಅವರ ಮನೆ ಕೆಡವುತ್ತಿದ್ದಂತೆ ಮಾಧ್ಯಮದಲ್ಲಿ ಸುದ್ದಿಯಾಗಿದೆ. ಹಸನ್‌ಗೆ ಮನೆ ನೀಡುವ ಭರವಸೆಯನ್ನೂ ನೀಡಲಾಗಿದೆ. ಆದರೆ, ಸಂಗಮ್ ವಿಹಾರದಂತಹ ಇತರೆ ಪ್ರದೇಶದಲ್ಲಿ ಅಕ್ರಮ ನೆಪದಲ್ಲಿ ತಮ್ಮ ಮನೆ ಕಳೆದುಕೊಂಡ ಜನರ ಗತಿಯೇನು? 39 ಜನರನ್ನು ರಕ್ಷಿಸಿದ ಹಸನ್‌ಗೆ ತಮ್ಮ ಮನೆಯನ್ನು ಉಳಿಸಲು ಸಾಧ್ಯವಾಗದೆ ಇರುವಾಗ ಉಳಿದ ಸಾಮಾನ್ಯ ಜನರ ಪಾಡು ಕೇಳುವವರು ಯಾರು ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ.

ಬರೀ ಹಸನ್ ಮನೆ ಅಕ್ರಮವೇ?

ವಕೀಲ್ ಹಸನ್‌ರ ಮನೆ ಕೆಡವಿರುವ ವೀಡಿಯೋದಲ್ಲಿ ಅಕ್ಕಪಕ್ಕದಲ್ಲಿರುವ ಮನೆ ಹಾಗೆಯೇ ಇರುವುದು ಕಾಣಬಹುದು. ಹಾಗಾದರೆ, ಡಿಡಿಎ ಪ್ರಕಾರ ಹಸನ್‌ರ ಮನೆಯೊಂದೇ ಅಕ್ರಮವೇ ಎಂದು ಪ್ರಶ್ನಿಸಲಾಗುತ್ತಿದೆ. ಡಿಡಿಎ ತನ್ನ ಹೇಳಿಕೆಯಲ್ಲಿ ಜಮೀನಿನ ಮೂರು ಭಾಗಗಳ ಪೈಕಿ, ಎರಡರಲ್ಲಿ ಅತಿಕ್ರಮಣ ಮಾಡಲಾಗಿದೆ ಎಂದು ಹೇಳಿದೆ. ಒಂದರಲ್ಲಿ ಹಸನ್‌ ಅತಿಕ್ರಮಣ ಮಾಡಿದ್ದರೆ, ಇನ್ನೊಂದರಲ್ಲಿ ಗೋಯಲ್ ಎಂಬವರು ಅತಿಕ್ರಮಣ ಮಾಡಿದ್ದಾರೆ. ಆದರೆ ಕಾನೂನಿನ ತಡೆಯಾಜ್ಞೆ ಇದ್ದ ಕಾರಣ ಗೋಯಲ್ ಮನೆ ಕೆಡವಲಾಗಿಲ್ಲ.

ಅಲ್ಪಸಂಖ್ಯಾತರೇ ಬಲಿಯೇ?

ಇನ್ನೊಂದೆಡೆ ದೇಶದಲ್ಲಿ ನಡೆದ ತೆರವು ಕಾರ್ಯಾಚರಣೆ ಪ್ರಕರಣಗಳಲ್ಲಿ ಹೆಚ್ಚಾಗಿ ತಮ್ಮ ಆಸ್ತಿ-ಪಾಸ್ತಿ ಕಳೆದುಕೊಳ್ಳುತ್ತಿರುವವರು ಯಾವ ಸಮುದಾಯವೆಂದು ನಾವು ನೋಡಿದಾಗ ಮೊದಲ ಸ್ಥಾನದಲ್ಲಿ ಬರುವುದು ಅಲ್ಪಸಂಖ್ಯಾತರು! ಈ ಸಂದರ್ಭದಲ್ಲೇ ನಾವು ದೆಹಲಿಯ ಜಹಾಂಗೀರ್ ಪುರದಲ್ಲಿ ನಡೆದ ತೆರವು ಕಾರ್ಯಾಚರಣೆ, ದೆಹಲಿ ಮೆಹ್ರೋಲಿಯಲ್ಲಿನ 600 ವರ್ಷಗಳ ಹಳೆಯ ಮಸೀದಿಯನ್ನು ಕೆಡವಿದ ಘಟನೆಯನ್ನು ನೆನಪಿಸಿಕೊಳ್ಳಬಹುದು. ಒಟ್ಟಾರೆಯಾಗಿ ದೇಶದಲ್ಲಿ ಕೇಂದ್ರ ಸರ್ಕಾರವು ಅಲ್ಪಸಂಖ್ಯಾತರನ್ನು ಸಂಪೂರ್ಣವಾಗಿ ಅಕ್ರಮವಾಗಿ ನೆಲೆಸಿರುವ ಜನರೆಂದು ಪ್ರತಿಪಾದಿಸುವ ಎಲ್ಲ ಪ್ರಯತ್ನಗಳು ಕೆಲವು ಘಟನೆಗಳ ಮೂಲಕ ಸಾಬೀತಾಗುತ್ತಿದೆ.

ಬಿಜೆಪಿ ಕಾರ್ಯಾಲಯ ಅಕ್ರಮವಲ್ಲವೇ?

ಇತ್ತೀಚೆಗೆ ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಅನ್ನು ಅಸಂವಿಧಾನಿಕ ಎಂದು ಹೇಳಿದೆ. ಕೇಂದ್ರ ಸರ್ಕಾರವು ದೇಣಿಗೆ ಸಂಗ್ರಹಕ್ಕಾಗಿ ಜಾರಿಗೆ ತಂದ ಕಾನೂನು ಇದಾಗಿದೆ. ಈ ಅಕ್ರಮ ದೇಣಿಗೆಯಿಂದ ಬಂದ ಹಣದಿಂದಲೇ ಬಿಜೆಪಿಯ ಕಾರ್ಯಾಲಯವನ್ನು ನಿರ್ಮಿಸಲಾಗಿದೆ. ಬಡವರ ಮನೆ ಅಕ್ರಮವಾಗುವುದಾದರೆ ಈ ಬಿಜೆಪಿ ಕಾರ್ಯಾಲಯ ಅಕ್ರಮವಾಗುವುದಿಲ್ಲವೇ, ಬಡ ಜನರಿಗೆ ಮಾತ್ರ ಈ ಕಾನೂನು ಅನ್ವಯವೇ? ಎಂಬ ಪ್ರಶ್ನೆಯಿದೆ. ಬಡ ಜನರು ಕಟ್ಟಿದ ಮನೆ ಅಕ್ರಮವೆಂದಾದರೆ ಚುನಾವಣಾ ಬಾಂಡ್‌ನ ಅಕ್ರಮ ಹಣದಿಂದ ಈ ಪಕ್ಷಗಳು ಮಾಡಿದ ಎಲ್ಲಾ ಕಾರ್ಯಗಳು ಖಂಡಿತವಾಗಿಯೂ ಅಕ್ರಮವೇ ಆಗುತ್ತದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

26/11 ದಾಳಿಯ ಉಗ್ರ ಕಸಬ್‌ನನ್ನು ಗಲ್ಲಿಗೇರಿಸಲು ವಾದ ಮಂಡಿಸಿದ್ದ ವಕೀಲ ಮುಂಬೈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ಮುಂಬೈನ 26/11ರ ಭಯೋತ್ಪಾದನಾ ದಾಳಿಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ವಕೀಲ ಉಜ್ವಲ್...

ಪಿಎಂ ಮೋದಿ ಸೂಪರ್‌ ಮ್ಯಾನ್ ಅಲ್ಲ ದುಬಾರಿ ಮ್ಯಾನ್: ಪ್ರಿಯಾಂಕಾ ಗಾಂಧಿ ವ್ಯಂಗ್ಯ

ಪ್ರಧಾನಿ ನರೇಂದ್ರ ಮೋದಿ ಸೂಪರ್ ಮ್ಯಾನ್ ಅಲ್ಲ ಬದಲಾಗಿ ಅವರು ದುಬಾರಿ...

ಅರವಿಂದ್ ಕೇಜ್ರಿವಾಲ್ ಆರೋಗ್ಯವಾಗಿದ್ದಾರೆ, ಆದರೆ ದಿನಕ್ಕೆ ಎರಡು ಡೋಸ್ ಇನ್ಸುಲಿನ್ ನೀಡಲಾಗುತ್ತಿದೆ: ವೈದ್ಯರು

ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್...

Fact Check | ಹಿಮಾಚಲದಲ್ಲಿ ಪ್ರಿಯಾಂಕಾ ಗಾಂಧಿ ಅಕ್ರಮವಾಗಿ ಬಂಗಲೆ ಖರೀದಿಸಿಲ್ಲ!

ಲೋಕಸಭಾ ಚುನಾವಣೆಯ ಸಮಯದಲ್ಲಿ ಹಿಮಾಚಲ ಪ್ರದೇಶದ ಛರಾಬ್ರಾದಲ್ಲಿರುವ ಪ್ರಿಯಾಂಕಾ ಗಾಂಧಿ ಅವರ...