ಅಷ್ಟಕ್ಕೂ, ಇಂತಹ ಆಧ್ಯಾತ್ಮಿಕ ವ್ಯಕ್ತಿಗಳ ಪ್ರವಚನಗಳು ಈ ತರಬೇತಿ ಕಾರ್ಯಕ್ರಮದಿಂದಾಚೆಗೆ ಶಾಸಕರಿಗೆ ಸಿಗುವುದೇ ಇಲ್ಲವೇ? ಒಂದು ವೇಳೆ, ತಮಗೆ ಅಂತಹ ಪ್ರವಚನಗಳು ಅವಶ್ಯ ಎನಿಸಿದರೆ ವೈಯಕ್ತಿಕ ನೆಲೆಯಲ್ಲಿ ಅದನ್ನು ಪಡೆದುಕೊಳ್ಳಲು ಶಾಸಕರು ಸ್ವತಂತ್ರರಲ್ಲವೇ?
ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 70 ಮಂದಿ ಅಭ್ಯರ್ಥಿಗಳು ನೂತನ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅಧಿವೇಶನ, ಬಜೆಟ್, ನೀತಿ-ನಿಯಮಾವಳಿಗಳು, ಕ್ಷೇತ್ರದ ಅಭಿವೃದ್ಧಿ, ಅನುದಾನ ಸದ್ಬಳಕೆ, ಶಾಸಕರ ಹಕ್ಕುಗಳು… ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ನೂತನ ಶಾಸಕರಿಗೆ ತರಬೇತಿ ಕೊಡುವುದು ವಾಡಿಕೆ. ಅದರಂತೆ, ಈ ಬಾರಿ ಜೂನ್ 26ರಿಂದ ಮೂರು ದಿನಗಳ ಕಾಲ ರಾಜ್ಯದ ಹಿರಿಯ ರಾಜಕಾರಣಿಗಳಿಂದ ತರಬೇತಿ ಕಾರ್ಯಕ್ರಮ ನಿಗದಿಯಾಗಿದೆ. ಆದರೆ, ಅದೇ ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ವ್ಯಕ್ತಿಗಳಿಂದ ‘ವಿಶೇಷ ತರಗತಿ’ಗಳನ್ನೂ ಆಯೋಜಿಸಲಾಗಿದೆ. ಈ ವಿಶೇಷ ತರಗತಿಗಳ ಕುರಿತು ಸಾರ್ವಜನಿಕ ವಲಯದಿಂದ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ, ವಿಧಾನಸಭಾ ಅಧ್ಯಕ್ಷ ಯು ಟಿ ಖಾದರ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಖಂಡಿತ ಇದು ಒಳ್ಳೆಯ ಬೆಳವಣಿಗೆಯಲ್ಲ.
2016ರಲ್ಲಿ ಹರ್ಯಾಣ ವಿಧಾನಸಭೆಯಲ್ಲಿ ತರುಣ್ ಸಾಗರ್ ಅವರ ಭಾಷಣ ಏರ್ಪಾಡಾದಾಗ, ಇತ್ತೀಚೆಗಷ್ಟೇ ನೂತನ ಸಂಸತ್ ಭವನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಾಧು-ಸಂತರ ದಂಡು ನೆರೆದಾಗ, ತಮ್ಮ ಪಕ್ಷ ಹೇಗೆ ಪ್ರತಿಕ್ರಿಯಿಸಿತ್ತು ಎಂಬುದನ್ನು ರಾಜ್ಯದ ಕಾಂಗ್ರೆಸ್ ನಾಯಕರು ಒಮ್ಮೆ ನೆನಪು ಮಾಡಿಕೊಳ್ಳಬೇಕಿದೆ. “ಅದು ಪಕ್ಷದ ಮಾತಾಯಿತು, ಇದು ಅಧಿಕೃತವಾಗಿ ಸರ್ಕಾರದ ಕಾರ್ಯಕ್ರಮ. ಹಾಗಾಗಿ ಅದಕ್ಕೂ ಇದಕ್ಕೂ ಸಂಬಂಧವಿಲ್ಲ,” ಎಂಬ ವಾದವನ್ನು ಮಾನ್ಯ ಸಭಾಧ್ಯಕ್ಷರು ಮಂಡಿಸಬಹುದು. ಆದರೆ, ಭಾರತೀಯ ಸಂವಿಧಾನ ಹೇಳುವ ಮೌಲ್ಯಗಳಿಗೂ ಮತ್ತು ಆಧ್ಯಾತ್ಮಿಕ ವ್ಯಕ್ತಿಗಳ ಭಾಷಣಗಳಿಗೂ ಎತ್ತಣ ಸಂಬಂಧವಿದೆ ಎಂದು ಹೇಳಬಹುದೇ? ಆಧ್ಯಾತ್ಮಿಕ ವ್ಯಕ್ತಿಗಳಿಂದ ಶಾಸಕರಿಗೆ ಪ್ರವಚನ ಕೊಡಿಸುವ ಕಾರ್ಯಕ್ರಮವನ್ನು ಸಮರ್ಥಿಸಿಕೊಳ್ಳುವ ಮಟ್ಟಕ್ಕೆ ಸಭಾಧ್ಯಕ್ಷರು ಇಳಿಯುತ್ತಾರೆಂದರೆ, ತಾವು ಅಲಂಕರಿಸಿರುವುದು ಸಾಂವಿಧಾನಿಕ ಹುದ್ದೆ ಎಂಬುದನ್ನು ಅವರು ಮರೆತಿದ್ದಾರೆ ಎಂದೇ ಅರ್ಥ.
ಈ ಸಂಪಾದಕೀಯ ಓದಿದ್ದೀರಾ?: ಈ ದಿನ ಸಂಪಾದಕೀಯ | ಸರ್ಕಾರಿ ಆಸ್ಪತ್ರೆಗಳು ಜನಸ್ನೇಹಿಯಾಗುವುದು ಯಾವಾಗ?
ಹರ್ಯಾಣ ವಿಧಾನಸಭೆಗೆ ಬಂದಿದ್ದ ತರುಣ್ ಸಾಗರ್ ಎಂಬ ಆಧ್ಯಾತ್ಮಿಕ ವ್ಯಕ್ತಿ, “ಧರ್ಮ ಎಂಬುದು ಗಂಡನಿದ್ದಂತೆ, ರಾಜಕಾರಣ ಎಂಬುದು ಹೆಂಡತಿ. ಗಂಡನ ನೀತಿಗಳನ್ನು ಹೆಂಡತಿ ಒಪ್ಪಿ ನಡೆಯಬೇಕು,” ಎಂಬ ಮಹಾನ್ ಹಿತವಚನವನ್ನು ಶಾಸಕರ ಕಿವಿಗೆ ತುಂಬಿದ್ದರು. ಆ ಸಂದರ್ಭದಲ್ಲಿ, ಭಾರತೀಯ ಸಂವಿಧಾನದ ಮೌಲ್ಯಗಳನ್ನು ನಿಜಾರ್ಥದಲ್ಲಿ ಗೌರವಿಸುವ ಕೆಲವರಷ್ಟೇ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಬಹುತೇಕ ಮಂದಿಗೆ ತರುಣ್ ಸಾಗರ್ ಅವರ ಮಾತು ನಿಜವೆನ್ನಿಸಿದ್ದು ಅಚ್ಚರಿಯೇನಲ್ಲ. ಏಕೆಂದರೆ, ಆಧ್ಯಾತ್ಮಿಕ ವ್ಯಕ್ತಿಗಳನ್ನು ಹುಡುಕಿಕೊಂಡು ಹೋಗಿ ಕಾಲಿಗೆರಗಿ ಬರುವ, ಅವರು ಹೇಳಿದ್ದನ್ನೆಲ್ಲ ಚಾಚೂ ತಪ್ಪದೆ ಪಾಲಿಸುವ ದುರ್ಬಲ ಮನಸ್ಥಿತಿಯ ಜನಪ್ರತಿನಿಧಿಗಳಿರುವ ದೇಶ ನಮ್ಮದು. ಹಾಗೆ ಕಾಲಿಗೆರಗುವ ಮುನ್ನ ತಾನು ಜನಪ್ರತಿನಿಧಿ, ಸಂವಿಧಾನ ಮಾತ್ರವೇ ತಾನು ಪಾಲಿಸಬೇಕಿರುವ ಧರ್ಮ ಎಂಬ ಯಾವುದೇ ಎಚ್ಚರವೂ ರಾಜಕೀಯ ನಾಯಕರುಗಳಿಗೆ ಇಲ್ಲದಿರುವುದು ದುರಂತ. ಆಧ್ಯಾತ್ಮಿಕ ವ್ಯಕ್ತಿಗಳಿಂದ ಶಾಸಕರಿಗೆ ಪ್ರವಚನ ಏರ್ಪಡಿಸುವ ಮೂಲಕ ಮಾನ್ಯ ಸಭಾಧ್ಯಕ್ಷರು ಕೂಡ, ಧಾರ್ಮಿಕ ಮತ್ತು ಆಧ್ಯಾತ್ಮಿಕ ವ್ಯಕ್ತಿಗಳ ಮಾತನ್ನು ಜನಪ್ರತಿನಿಧಿಗಳು ಆಲಿಸಬೇಕು ಮತ್ತು ಪಾಲಿಸಬೇಕು ಎಂಬ ಸಂದೇಶ ಸಾರಲು ಮುಂದಾಗಿರುವಂತಿದೆ. ಮುಖ್ಯಮಂತ್ರಿ ಯಾರಾಗಬೇಕು, ಉಪ ಮುಖ್ಯಮಂತ್ರಿ ಯಾರಾಗಬೇಕು, ತಮ್ಮ ಜಾತಿಯವ ಮಂತ್ರಿಯಾಗಬೇಕು ಎಂದೆಲ್ಲ ಆಧ್ಯಾತ್ಮಿಕ ವ್ಯಕ್ತಿಗಳು ವಶೀಲಿಬಾಜಿ ಮಾಡುವ ಮಟ್ಟಕ್ಕೆ ರಾಜಕಾರಣ ಕಲುಷಿತಗೊಂಡಾಗಿದೆ. ಈಗ ಆಯೋಜಿಸಿರುವ ‘ಪ್ರವಚನ’ ಕಾರ್ಯಕ್ರಮ ಇದರ ಮುಂದುವರಿದ ಭಾಗವಷ್ಟೇ. ಅಷ್ಟಕ್ಕೂ, ಇಂತಹ ಆಧ್ಯಾತ್ಮಿಕ ವ್ಯಕ್ತಿಗಳ ಪ್ರವಚನಗಳು ಈ ತರಬೇತಿ ಕಾರ್ಯಕ್ರಮದಿಂದಾಚೆಗೆ ಶಾಸಕರಿಗೆ ಸಿಗುವುದೇ ಇಲ್ಲವೇ? ಒಂದು ವೇಳೆ, ತಮಗೆ ಅಂತಹ ಪ್ರವಚನಗಳು ಅವಶ್ಯ ಎನಿಸಿದರೆ ವೈಯಕ್ತಿಕ ನೆಲೆಯಲ್ಲಿ ಅದನ್ನು ಪಡೆದುಕೊಳ್ಳಲು ಶಾಸಕರು ಸ್ವತಂತ್ರರಲ್ಲವೇ?
ಕಾಲ ಮಿಂಚಿಲ್ಲ… ಮಾನ್ಯ ಸಭಾಧ್ಯಕ್ಷರು ತಮ್ಮ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಬೇಕು. ಈ ನೆಲದಲ್ಲಿ ಸಂವಿಧಾನವೇ ಅಗ್ರಗಣ್ಯ, ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಜನರ ಮಾತನ್ನಷ್ಟೇ ಆಲಿಸಬೇಕು ಮತ್ತು ಸಂವಿಧಾನದ ಮೌಲ್ಯಗಳನ್ನಷ್ಟೇ ಪಾಲಿಸಿದರೆ ಸಾಕು ಎಂಬುದನ್ನು ನೂತನ ಶಾಸಕರಿಗೆ ಮನದಟ್ಟು ಮಾಡಿಕೊಡಬೇಕು. ಇದು ಸಾಧ್ಯವಾಗದಿದ್ದರೆ, ಕೆಟ್ಟದೊಂದು ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗುತ್ತದೆ.
ಬರಹಗಳನ್ನು ಆಲಿಸಲು ಇಲ್ಲಿ ಕ್ಲಿಕ್ ಮಾಡಿ: ಈದಿನ.ಕಾಮ್ ಕೇಳುದಾಣ
ನೂತನ ಶಾಸಕರಿಗೆ ಸಂವಿಧಾನದ, ರಾಜ್ಯದ, ಕೇಂದ್ರದ ಕುರಿತ ಆ ಕ್ಷೇತ್ರದ ತಜ್ಞ ಹಿರಿಯ ಅನುಭವಿಗಳ ಉಪನ್ಯಾಸ ಕೊಡಿಸಿರಿ.