ಸುಗ್ಗಿಯಿಂದ ಹಿಗ್ಗಿದ ಡಾ.ಬೆಸಗರಹಳ್ಳಿ ರಾಮಣ್ಣ

Date:

ಕಥೆಗಾರ್ತಿ ದಯಾ ಗಂಗನಘಟ್ಟ ಅವರ ‘ಉಪ್ಪುಚ್ಚಿ ಮುಳ್ಳು’ ಕಥಾ ಸಂಕಲನ, ಡಾ.ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿಗೆ ಆಯ್ಕೆಯಾಗಿದೆ. ಇಂದು ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಬೆಳಗ್ಗೆ 10ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ. ಆ ನೆಪದಲ್ಲಿ ಅಪ್ಪಟ ಹಳ್ಳಿಹೈದ ಡಾ.ಬೆಸಗರಹಳ್ಳಿ ರಾಮಣ್ಣರ ಕುರಿತು ಟಿಪ್ಪಣಿ…

‘ಮಂಡ್ಯಾ ಅಂದ್ರೆ ಇಂಡ್ಯಾ’ ಎಂದು ನಂಬಿದ್ದ, ಅದನ್ನು ತಮ್ಮ ಕೃತಿಗಳಲ್ಲಿ ಕಂಡರಿಸಿದ, ಹೆಸರಿನೊಂದಿಗೆ ಹಳ್ಳಿಯ ನಂಟನ್ನು ಅಂಟಿಸಿಕೊಂಡೇ ಬದುಕಿದ ರಾಮಣ್ಣ, ಅಪ್ಪಟ ಹಳ್ಳಿಗ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ಆಗಸ್ಟ್ 15, 1938ರಲ್ಲಿ ಜನಿಸಿದ ರಾಮಣ್ಣರಿಗೆ, ಕಣ್ಣು ಬಿಟ್ಟಾಕ್ಷಣ ಕಂಡದ್ದು ಹಳ್ಳಿ ಬದುಕು, ಕಿವಿ ತುಂಬಿದ್ದು ದೇಸೀ ಭಾಷೆ. ಬಾಲ್ಯದ ನೆನಪುಗಳು, ಹಳ್ಳಿ ಬದುಕು ಮತ್ತು ಭಾಷೆಯೇ ಅವರ ಆಸ್ತಿ. ಅದನ್ನೇ- ತಮ್ಮ ಸುತ್ತಲಿನ ಸಂಕಟ, ಸಂಭ್ರಮ, ಸೊಕ್ಕುಗಳನ್ನೇ- ಅಕ್ಷರರೂಪಕ್ಕಿಳಿಸಿದರು, ಕತೆಗಳನ್ನಾಗಿ ಕಟ್ಟಿಕೊಟ್ಟರು. ಕನ್ನಡ ಕಥಾ ಪರಂಪರೆಯನ್ನು ಸಮರ್ಥವಾಗಿ ಮುಂದುವರೆಸಿದರು, ಸಾಹಿತ್ಯ ಲೋಕವನ್ನು ಸಮೃದ್ಧಗೊಳಿಸಿದರು. ಹಳ್ಳಿಗಾಡಿನ ಅಸಲಿ ಕತೆಗಾರ ಡಾ.ಬೆಸಗರಹಳ್ಳಿ ರಾಮಣ್ಣ.

ಬೆಸಗರಹಳ್ಳಿ, ಕೊಪ್ಪ, ಮದ್ದೂರು, ಮೈಸೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದ ರಾಮಣ್ಣ, ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದತ್ತ ಒಲವು ಮೂಡಿತು. ಮೈಸೂರಿನ ಸಾಂಸ್ಕೃತಿಕ ಲೋಕ, ಸಾಹಿತಿಗಳ ಸಹವಾಸ ಅವರನ್ನು ಅಕ್ಷರಲೋಕಕ್ಕೆ ಎಳೆಯಿತು. ಸುಪ್ತವಾಗಿದ್ದ ಸಾಹಿತ್ಯ ಚಿಗುರಲು, ಅರಳಲು ಪರಿಸರ ಪ್ರೇರಣೆ ಒದಗಿಸಿತು. ಬಾಲ್ಯದ ಅನುಭವಗಳು ಬಳ್ಳಿಯಲ್ಲಿ ಹೂವು ಅರಳಿದಷ್ಟೇ ಸಹಜವಾಗಿ ಕತೆಗಳಾಗಿ ಅರಳತೊಡಗಿದವು. ಇಪ್ಪತ್ನಾಲ್ಕು ವರ್ಷಕ್ಕೇ, ವಿದ್ಯಾರ್ಥಿಯಾಗಿದ್ದಾಗಲೇ ‘ಹಾವಿಲ್ಲದ ಹುತ್ತ’ ಎಂಬ ಕತೆಯನ್ನು ಪ್ರಜಾವಾಣಿ ದೀಪಾವಳಿ ವಿಶೇಷಾಂಕಕ್ಕೆ, ವಿದ್ಯಾರ್ಥಿ ವಿಭಾಗದ ಕಥಾಸ್ಪರ್ಧೆಗೆ ಕಳಿಸಿದ್ದರು. ಈ ಕತೆ ತೀರ್ಪುಗಾರರ ಮೆಚ್ಚುಗೆ ಪಡೆಯಿತು. ಇದಾಗಿ ಮೂರು ವರ್ಷಗಳಾದ ಮೇಲೆ ಮತ್ತೆ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಗೆ ‘ಸುಗ್ಗಿ’ ಕತೆ ಕಳಿಸಿದರು. ಅದು ಪ್ರಥಮ ಬಹುಮಾನ ಗಳಿಸಿತು. ಇಲ್ಲಿಂದ ರಾಮಣ್ಣನವರ ಬರವಣಿಗೆಯ ಬದುಕು ಬಿಚ್ಚಿಕೊಳ್ಳಲಾರಂಭಿಸಿತು.

ಒಡಲಾಳದಲ್ಲಿ ಅವಿತು ಕೂತಿದ್ದ ಪಾತ್ರಗಳು, ಕಥೆಗಳು ಕಾವೇರಿ ನದಿಯಂತೆ ಹರಿಯತೊಡಗಿದವು- ಕನ್ನಂಬಾಡಿ ಕಟ್ಟೆಯೇ ಒಡೆದಂತೆ!

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಒಂದು ಹುಡುಗಿಗೆ ಬಿದ್ದ ಕನಸು, ಘರ್ಜನೆ, ನೆಲದ ಒಡಲು, ಹರಕೆಯ ಹಣ, ನೆಲದ ಸಿರಿ, ಕನ್ನಂಬಾಡಿ, ಸುಗ್ಗಿ, ಕೊಳಲು, ಖಡ್ಗ ಎಂಬ ಕಥಾ ಸಂಕಲನಗಳನ್ನು; ರಕ್ತಕಣ್ಣೀರು, ತೋಳಗಳ ನಡುವೆ ಎಂಬ ಕಾದಂಬರಿಗಳನ್ನು; ಶೋಕಚಕ್ರ ಎಂಬ ಕವನ ಸಂಕಲನವನ್ನು ಹೊರತಂದು ಕನ್ನಡ ಸಾಹಿತ್ಯ ಲೋಕದಲ್ಲಿ ದಾಖಲಾಗಿಹೋದರು.

ಇದನ್ನು ಓದಿದ್ದೀರಾ?: ಎಚ್.ಡಿ ದೇವೇಗೌಡರ `ನೇಗಿಲ ಗೆರೆಗಳು’ ಕೃತಿ ಕುರಿತು ರಾಜಾರಾಂ ತಲ್ಲೂರ್ ಬರೆಹ

ಇತ್ತ ರಾಮಣ್ಣನವರು ವೈದ್ಯರಾಗಿ ಮಂಡ್ಯದ ಹಳ್ಳಿಗಳಲ್ಲಿ ಸೇವೆ ಸಲ್ಲಿಸುತ್ತ ಜನಾನುರಾಗಿಯಾಗುತ್ತಿದ್ದರೆ, ಅತ್ತ ಸಾಹಿತ್ಯ ವಲಯದಲ್ಲಿ ಕತೆಗಾರರಾಗಿ ಸಾಹಿತಿಗಳ ಆತ್ಮೀಯ ಮಿತ್ರನಾಗಿ ಮಾರ್ಪಾಡಾಗಿದ್ದರು. ರಾಮಣ್ಣ ಮೂಲತಃ ಸ್ನೇಹಜೀವಿ. ಮನೆಗೆ ಯಾರೇ ಬಂದರೂ, ಎಷ್ಟೇ ಹೊತ್ತಾದರೂ ಅವರಿಗೆ ಊಟ ಮಾಡಿಸಿ, ಬಾವುಣಿಕೆ ತೋರುವ ಅಪರೂಪದ ಅಂತಃಕರಣಿ. ಗಾಂಧಿ ಪ್ರೇಮಿ, ಬಾಡೂಟದ ಬಂಧು.

ನವೋದಯ, ನವ್ಯದ ಹೊತ್ತಲ್ಲೇ, ಬಂಡಾಯದ ಬೀಜ ಬಿತ್ತನೆ ಆರಂಭಿಸಿದ್ದ ಕಾಲದಲ್ಲಿಯೇ ಬೆಸಗರಹಳ್ಳಿಯ ರಾಮಣ್ಣ ಕೂಡ ಬರವಣಿಗೆಯ ಆರಂಬ ಮಾಡಿದ್ದರು. ಉಳುಮೆ, ಬಿತ್ತನೆ, ಕಳೆ, ದನಕರ, ಕಾಗೆ-ನಾಯಿ, ಸುಗ್ಗಿ, ಮೆದೆ, ಬದಗಳನ್ನು ಬಿಡಿಸಿಡುತ್ತಿದ್ದರು. ವ್ಯವಸ್ಥೆಯ ವಿರುದ್ಧ ಸಿಟ್ಟಿನಿಂದ ಸಿಡಿಯುತ್ತಿದ್ದ, ದಮನಿತರ ಪರ ದನಿ ಎತ್ತುತ್ತ ಅವರ ನೋವು, ಕ್ರೋಧಗಳಿಗೆ ಬರವಣಿಗೆಯ ಮುಲಾಮು ಹಚ್ಚುತ್ತಿದ್ದ ಭಾವಜೀವಿ ರಾಮಣ್ಣ, ಆ ಮೂಲಕ ಸಮಾಜಕ್ಕಂಟಿದ ರೋಗಕ್ಕೆ ಮದ್ದರೆಯುತ್ತಿದ್ದರು. ಚೆಲುವನ ಪರಂಗಿ ಗಿಡಗಳು ಎಂಬ ಕತೆ ಇದಕ್ಕೊಂದು ಉತ್ತಮ ಉದಾಹರಣೆ.

ಊರಿನ ಶ್ರೀಮಂತ ಗೌಡರಿಂದ ಸಾಲ ಪಡೆದ ದಲಿತನೊಬ್ಬ, ಜಮೀನನ್ನು ಅವರಿಗೆ ಬಿಟ್ಟುಕೊಟ್ಟು, ಅದೇ ಜಮೀನಿನಲ್ಲಿ ಕೂಲಿಕಾರನಾಗಿ ಗೇಯುತ್ತ, ಬೇಯುತ್ತ ಬದುಕುತ್ತಿದ್ದರೆ, ಆತನ ಮಗ ಒಂಚೂರು ಓದು ಬರಹ ಕಲಿತು, ತಿಳಿದವರಿಂದ ಪರಂಗಿಯ ಬಗ್ಗೆ ತಿಳಿವಳಿಕೆ ಪಡೆದು, ಪುಕ್ಕಟೆಯಾಗಿ ಸಿಕ್ಕ ಪರಂಗಿ ಬೀಜಗಳನ್ನು ತಂದು, ಅಪ್ಪನ ವಿರೋಧದ ನಡುವೆಯೂ ತಮ್ಮ ಜಮೀನಿನ ಒಂದು ಮೂಲೆಗೆ ಹಾಕಿ ಬೆಳೆಸುತ್ತಾನೆ. ಅವು ಆಳುದ್ದ ಬೆಳೆದು ಕಾಯಿ ಬಿಟ್ಟು ನಿಂತಾಗ ಖುಷಿಗೊಳ್ಳುತ್ತಾನೆ. ಆದರೆ ಅಪ್ಪ ಅದನ್ನೋಡಿ ಒಳಗೊಳಗೇ ನೋವು ನುಂಗುತ್ತಿರುತ್ತಾನೆ. ಅತ್ತ ಅಪ್ಪ ಇವು ಯಾರಿಗೂ ಸಿಗಬಾರದು ಎಂದು ಆ ಪರಂಗಿ ಗಿಡಗಳನ್ನೆಲ್ಲ ಕಡಿದು ಹಾಕುತ್ತಾನೆ. ಒಂದೇ ಸಮಯದಲ್ಲಿ ಚೆಲುವನಿಗೆ ಅಪ್ಪ-ಗೌಡ ಇಬ್ಬರೂ ತನ್ನ ಪಾಲಿನ ವಿಲನ್‌ಗಳಂತೆ ಕಾಣತೊಡಗುತ್ತಾರೆ. ಆದರೆ ಅಪ್ಪನ ಬೇಗುದಿಯೇ ಬೇರೆ, ಗೌಡನ ಗತ್ತಿನ ಗುಟುರೇ ಬೇರೆ, ಚೆಲುವನ ಚಿತ್ತವೇ ಬೇರೆ.

ಈ ಕಥೆಯನ್ನು ಕನ್ನಡದ ಸೃಜನಶೀಲ ನಿರ್ದೇಶಕರಾದ ಟಿ.ಎಸ್.ರಂಗಾ ‘ಉದ್ಭವ್’ ಎಂಬ ಹೆಸರಿನಲ್ಲಿ ಹಿಂದಿ ಭಾಷೆಯಲ್ಲಿ ಸಾಕ್ಷ್ಯಚಿತ್ರ ಮಾಡಿದ್ದಾರೆ. ಇವರ ಇನ್ನೊಂದು ಕಥೆ ಗಾಂಧಿಯನ್ನು ನಂಜುಂಡೇಗೌಡರು ‘ನಾನು ಗಾಂಧಿ ಅಲ್ಲ’ ಎಂಬ ಮಕ್ಕಳ ಚಿತ್ರ ಮಾಡಲು ಬಳಸಿಕೊಂಡಿದ್ದಾರೆ. ಇವರ ಕಥೆಗಳು ಬೇರೆ ಭಾಷೆಗೂ ಅನುವಾದಗೊಂಡಿವೆ. ರಾಮಣ್ಣರ ‘ಬೇಲಾ’ ಕಥೆಯನ್ನು ವಿಮರ್ಶಕ ಜಿ.ಎಚ್.ನಾಯಕರು ಕನ್ನಡದ ಶ್ರೇಷ್ಠ ಕತೆಗಳಲ್ಲೊಂದು ಎಂದು ಪ್ರಶಂಸಿಸಿದ್ದಾರೆ.

ನಂಬಿದ ಮೌಲ್ಯಗಳನ್ನು ಬಿಡದೆ ಬದುಕಿದ ರಾಮಣ್ಣ ನಿವೃತ್ತಿಯ ನಂತರ ಮಂಡ್ಯದಲ್ಲೊಂದು ಮನೆ ಮಾಡಿ, ಅದಕ್ಕೆ `ನೆಲದ ಒಡಲು’ ಎಂದು ಹೆಸರಿಟ್ಟು ಸರಳವಾಗಿ ಬದುಕಿದ ಸಜ್ಜನ. ಇಂತಹ ರಾಮಣ್ಣ ಜುಲೈ 13, 1998ರಂದು ಕೊನೆಯುಸಿರೆಳೆದಾಗ, ಅವರ ಬೆನ್ನಿಗಿದ್ದದ್ದು ಕೂಡ ಅವರು ನಂಬಿಕೊಂಡು ಬಂದ ಆದರ್ಶಗಳೆ. ‘ಭೂತಕಾಲದ ಪರಿಚಯವಿಲ್ಲದವನು ವರ್ತಮಾನ ಕಾಲದಲ್ಲಿ ಇದ್ದೂ ಸತ್ತಂತೆಯೆ. ಇಂಥವನು ಏನು ಬರೆದರೂ ಅದರಲ್ಲಿ ಮುಂಗಾಣ್ಕೆಯ ಕೊರತೆ ಎದ್ದು ಕಾಣುತ್ತದೆ…’ ಎಂದ ರಾಮಣ್ಣ ಭವಿಷ್ಯತ್ತಿನಲ್ಲಿ ಬದುಕುವಂತಹ ಕತೆಗಳನ್ನೇ ಕೊಟ್ಟು, ಈಗಲೂ ಆ ಕತೆಗಳ ಮೂಲಕವೇ ನಮ್ಮ ನಡುವೆ ಬದುಕಿರುವ ಅಪ್ಪಟ ಹಳ್ಳಿಹೈದ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ ಸೋಲಿನ ಸೇಡು ತೀರಿಸಿಕೊಳ್ಳಲು ಬಿಜೆಪಿ ತಹತಹ; ಕೇಸರಿ ಪಕ್ಷದ ಬತ್ತಳಿಕೆಯಲ್ಲಿರುವ ಆ ಅಸ್ತ್ರ ಯಾವುದು?

ಮೋದಿ ಮತ್ತು ಶಾ ಅವರ ಮೂಗುದಾರವನ್ನು ಹರಿದೊಗೆದು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿರುವ...

ಮೋಹನದಾಸ ಪೈ : ರಾಮ ಆದ್ರೆ ರಾಮ; ರಾವಣ ಆದ್ರೆ ರಾವಣ!

ನಮ್ಮ ಸರ್ಕಾರಗಳು- ಯಡಿಯೂರಪ್ಪ/ಬೊಮ್ಮಾಯಿ/ಸಿದ್ಧರಾಮಯ್ಯ.. ಎಲ್ಲರೂ ಕೈಗಾರಿಕಾ ನೀತಿ ರೂಪಿಸಿ, ಬರುವವರಿಗೆ ಸಬ್ಸಿಡಿ...

ಈ ದಿನ ವಿಶೇಷ | ಮುಸ್ಲಿಮರಿಲ್ಲದ ‘ಮೊಹರಂ’ ಹಿಂದೆ ಏನೇನೆಲ್ಲ ಇದೆ ಗೊತ್ತಾ?

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೈಕನವಾಡಿಯಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲ...

ನುಡಿ ನಮನ | ಮುಂಬಯಿ ಕನ್ನಡ ರಂಗಭೂಮಿಯ ಆದ್ಯ ಪ್ರವರ್ತಕರಲ್ಲೊಬ್ಬರು ಸದಾನಂದ ಸುವರ್ಣ

ಸದಾನಂದ ಸುವರ್ಣ ಅವರು ನೂರಾರು ಕನ್ನಡ, ತುಳು ನಾಟಕಗಳನ್ನು ರಚಿಸಿ ನಿರ್ದೇಶಿಸಿದ...