ಈ ದಿನ ಸಂಪಾದಕೀಯ | ಮತ್ತೆ ಅಬ್ಬರಿಸಿದ ಭಯೋತ್ಪಾದನೆ- ಮೋಶಾರತ್ತ ದಿಟ್ಟಿ ನೆಟ್ಟ ದೇಶ

Date:

Advertisements

ಪುಲ್ವಾಮ ಹುತಾತ್ಮರ ಹೆಸರಿನಲ್ಲಿ ಮತಗಳನ್ನು ಕೇಳಿದಂತೆ, ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಪ್ರವಾಸಿ ಹುತಾತ್ಮರ ಹೆಸರಿನಲ್ಲಿ ಮತಯಾಚನೆ ಮಾಡಕೂಡದು. ಭಾರತೀಯರ ನೆತ್ತರು ಚುನಾವಣೆಗಳಿಗೆ ಮತ ಯಾಚನೆಗೆ ಬಳಸುವಷ್ಟು ಅಗ್ಗ ಆಗಕೂಡದು. ಮೋದಿ ಸರ್ಕಾರ ಈ ನಿರ್ದಯಿ ಉಗ್ರರ ಬೇಟೆಗೆ ವ್ಯಾಪಕ ಬಲೆ ಬೀಸಿ ಹಿಡಿದು ಅವರ ಕೊರಳುಗಳಿಗೆ ಭಾರತದ ನೆಲದ  ಕಾನೂನಿನ ಕುಣಿಕೆ ತೊಡಿಸಬೇಕಿದೆ. ಈ ಕುರಿತು ಯಾವುದೇ ಚೌಕಾಶಿ ಸಲ್ಲದು.

ಕಾಶ್ಮೀರದಲ್ಲಿ ಭಯೋತ್ಪಾದನೆ ಮತ್ತೆ ಅಬ್ಬರಿಸಿದೆ. ಐದಾರು ವರ್ಷಗಳ ಹಿಂದೆ ಪುಲ್ವಾಮದಲ್ಲಿ 40 ಮಂದಿ ಭಾರತೀಯ ಯೋಧರನ್ನು ಬಲಿ ತೆಗೆದುಕೊಂಡಿದ್ದ ಭಯೋತ್ಪಾದಕರು ಈ ಸಲ ಪಹಲ್ಗಾಮ್‌ ನಲ್ಲಿ ಪ್ರವಾಸಿ ನಾಗರಿಕರ ನೆತ್ತರು ಹರಿಸಿದ್ದಾರೆ. ಇಬ್ಬರು ವಿದೇಶೀಯರೂ ಸೇರಿದಂತೆ 26 ಮಂದಿ ಪ್ರವಾಸಿಗರನ್ನು ಬಲಿ ಪಡೆದ ಕಾಶ್ಮೀರದ ಪಹಲ್ಗಾಮ್ Pahalgamನಲ್ಲಿ ನಡೆದಿರುವ ಈ ಕೃತ್ಯ ಅತ್ಯಂತ ಹೇಯ ಮತ್ತು ಖಂಡನೀಯ.

ಪಾಕಿಸ್ತಾನದ ಲಷ್ಕರ್ ಎ ತಯ್ಯಿಬಾ ಉಗ್ರ ಸಂಘಟನೆಯಿಂದ ಕವಲೊಡೆದ ‘ದಿ ರೆಸಿಸ್ಟೆನ್ಸ್ ಫ್ರಂಟ್’ (ಟಿ.ಆರ್.ಎಫ್) ಈ ಹತ್ಯಾಕಾಂಡದ ಜವಾಬ್ದಾರಿ ಹೊತ್ತಿದೆ. ಮೋದಿ ಸರ್ಕಾರ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆಯ ನಡು ಮುರಿದು ನೆಲಕ್ಕೆ ಕೆಡವಿದೆ ಎಂಬ ಅಮಿತ್ ಶಾ ಅಗ್ಗಳಿಕೆ ದಿಟವಾಗದಿರುವುದು ದುರದೃಷ್ಟಕರ.

ಗೃಹಮಂತ್ರಿ ಅಮಿತ್ ಶಾ ಮಂಗಳವಾರ ರಾತ್ರಿಯೇ ಸ್ಥಳಕ್ಕೆ ಧಾವಿಸಿದ್ದಾರೆ. ಪ್ರಧಾನಿ ಮೋದಿ ಸೌದಿ ಅರೇಬಿಯಾ ಪ್ರವಾಸವನ್ನು ಮೊಟಕು ಮಾಡಿ ವಾಪಸ್‌ ಬಂದಿದ್ದಾರೆ. ಸರ್ಕಾರದ ಇಬ್ಬರು ಮುಖ್ಯರ ಈ ತಕ್ಷಣದ ತುರ್ತು ಪ್ರತಿಕ್ರಿಯೆ ಅತ್ಯಂತ ಸೂಕ್ತ. ಹಾಗೆಯೇ ಇಂತಹ ದುರಂತದ- ದುಃಖದ ಬೇಗೆಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ನೀಚತನಕ್ಕೆ ಆಳುವ ಪಕ್ಷವೂ ಒಳಗೊಂಡಂತೆ ಯಾವ ಪಕ್ಷವೂ ಇಳಿಯಕೂಡದು. ರಾಜಕೀಯ ಭೇದಭಾವವನ್ನು ಬದಿಗೊತ್ತಿ ಒಂದು ದನಿಯಲ್ಲಿ ಮಾತಾಡಬೇಕು. ದೇಶದ ಆಂತರಿಕ ಮತ್ತು ಬಾಹ್ಯ ಸುರಕ್ಷತೆ, ಕೋಮು ಸಾಮರಸ್ಯ ಪರಮ ಆದ್ಯತೆಯ ವಿಷಯ ಆಗಬೇಕು. ಚುನಾವಣೆ ಪ್ರಚಾರಕ್ಕೆ ವಿಷಯವಸ್ತು ಆಗಕೂಡದು. ಪುಲ್ವಾಮ ಹುತಾತ್ಮರ ಹೆಸರಿನಲ್ಲಿ ಮತಗಳನ್ನು ಕೇಳಿದಂತೆ, ಬಿಹಾರ, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಪ್ರವಾಸಿ ಹುತಾತ್ಮರ ಹೆಸರಿನಲ್ಲಿ ಮತಯಾಚನೆ ಮಾಡಕೂಡದು. ಭಾರತೀಯರ ನೆತ್ತರು ಚುನಾವಣೆಗಳಿಗೆ ಮತ ಯಾಚನೆಗೆ ಬಳಸುವಷ್ಟು ಅಗ್ಗವಲ್ಲ. ಮೋದಿ ಸರ್ಕಾರ ಈ ನಿರ್ದಯಿ ಉಗ್ರರ ಬೇಟೆಗೆ ವ್ಯಾಪಕ ಬಲೆ ಬೀಸಿ ಹಿಡಿದು ಅವರ ಕೊರಳುಗಳಿಗೆ ಭಾರತದ ನೆಲದ ಕಾನೂನಿನ ಕುಣಿಕೆ ತೊಡಿಸಬೇಕಿದೆ. ಈ ಕುರಿತು ಯಾವುದೇ ಚೌಕಾಶಿ ಸಲ್ಲದು.

ಅತಿಸೂಕ್ಷ್ಮ ಪ್ರದೇಶವಾದ ಕಾಶ್ಮೀರದಲ್ಲಿನ ಭದ್ರತೆಯ ಏರ್ಪಾಡುಗಳು ಮತ್ತು ಸೇನೆಯ ಸದಾ ಸನ್ನದ್ಧತೆಯನ್ನು ಅಮಿತ್ ಶಾ ಅವರು ಸೇನೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಶೀಲಿಸಿ ದೆಹಲಿಗೆ ಹಿಂತಿರುಗಿದ ಒಂದೇ ವಾರದೊಳಗೆ ಈ ಭಯಾನಕ ಕೃತ್ಯ ಜರುಗಿದೆ. ಬೇಹುಗಾರಿಕೆ ಮೂಲಗಳ ಪ್ರಕಾರ ಒಟ್ಟು ಏಳು ಮಂದಿ ಭಯೋತ್ಪಾದಕರು ಈ ದಾಳಿ ನಡೆಸಿದರು. ಇವರ ಪೈಕಿ ನಾಲ್ವರಿಂದ ಐವರು ಪಾಕಿಸ್ತಾನಿಗಳು. ಆದರೆ ತನಗೂ ಈ ದಾಳಿಗೂ ಸಂಬಂಧವಿಲ್ಲವೆಂದು ಪಾಕಿಸ್ತಾನ ಎಂದಿನಂತೆ ಕೈ ತೊಳೆದುಕೊಂಡಿದೆ. ವಾರದ ಹಿಂದೆಯಷ್ಟೇ ಕಾಶ್ಮೀರವನ್ನು ತನ್ನ ಕುತ್ತಿಗೆಯ ದೊಡ್ಡ ರಕ್ತನಾಳ ಎಂದು ಪಾಕಿಸ್ತಾನ ಬಣ್ಣಿಸಿತ್ತು.

ಕಣಿವೆಯ ಕುತ್ತಿಗೆಯನ್ನು ಉಕ್ಕಿನ ಹಸ್ತದಿಂದ ಬಗೆಬಗೆಯಾಗಿ ಅದುಮಿ ಹಿಡಿದ ಮೋಶಾ ಸರ್ಕಾರ ಸ್ಥಳೀಯ ಜನರನ್ನು ಬಹು ದೂರ ಮಾಡಿಕೊಂಡಿತೇ ಎಂಬ ಪ್ರಶ್ನೆಯನ್ನು ಹಾಲಿ ಪ್ರಕರಣ ಮತ್ತಷ್ಟು ಹಿಗ್ಗಿಸಿದೆ. ಯಾವುದೇ ಆಡಳಿತ, ಸ್ಥಳೀಯರ ವಿಶ್ವಾಸವನ್ನು ಎಷ್ಟರಮಟ್ಟಿಗೆ ಕಳೆದುಕೊಳ್ಳುತ್ತದೆಯೋ ಅಷ್ಟರಮಟ್ಟಿಗೆ ಬೇಹುಗಾರಿಕೆ ದುಸ್ಸಾಧ್ಯವಾಗುತ್ತದೆ ಎಂಬುದು ಅನುಭವದ ನಾಣ್ನುಡಿ.

ಪಹಲ್ಗಾಮ್ ನರಮೇಧ ನಡೆಸಲು ಅಷ್ಟೊಂದು ಸಮಯ ಉಗ್ರರಿಗೆ ಸಿಕ್ಕಿದ್ದಾದರೂ ಹೇಗೆ? ಇಂತಹುದೊಂದು ಅನಾಹುತದ ವಾಸನೆಯನ್ನು ಮುಂದಾಗಿಯೇ ಯಾಕೆ ಹಿಡಿಯಲಿಲ್ಲ, ಮೋದಿ ಸರ್ಕಾರದ ಬೇಹುಗಾರಿಕೆ ಬಾಹು ಎಲ್ಲಿ ನಿದ್ರಿಸಿತ್ತು. ಸುರಕ್ಷತೆ ಮತ್ತು ಭದ್ರತೆಯ ಏರ್ಪಾಡುಗಳು ಯಾಕೆ ಆ ಪಾಟಿ ಸಡಿಲವಾಗಿದ್ದವು ಎಂಬ ಪ್ರಶ್ನೆಗಳಿಗೆ ಮೋದಿ ಸರ್ಕಾರ ಇಂದಲ್ಲ ನಾಳೆ ಉತ್ತರ ನೀಡಲೇಬೇಕು. ಜನರಿಂದ ಆಯ್ಕೆಯಾದ ಸರ್ಕಾರ ಜನರಿಗೆ ಜವಾಬುದೇಹಿ ಎಂಬ ಸಾಂವಿಧಾನಿಕ ಹೊಣೆಗಾರಿಕೆಯಿಂದ ನುಣುಚಿಕೊಳ್ಳಬಾರದು. 56 ಅಂಗುಲಗಳ ಭಾರೀ ಎದೆಯಳತೆಯ (ಛಪ್ಪನ್ ಇಂಚ್ ಕೀ ಛಾತೀ) ಶೌರ್ಯವಂತನೆಂದು ಸಾರುತ್ತ ಬಂದಿರುವ ಪ್ರಧಾನಿಯವರು ಹಿಂಜರಿಯಲು ಯಾವ ಕಾರಣವೂ ಇಲ್ಲ.

ಈ ಹಿಂದೆ 2019ರಲ್ಲಿ ನಡೆದ ಪುಲ್ವಾಮ ದಾಳಿಯಲ್ಲಿ ಭಾರತೀಯ ಸೇನೆಯ 40 ಮಂದಿ ಯೋಧರು ಪ್ರಾಣ ತೆತ್ತರು. ಈ ನರಮೇಧದ ರೂವಾರಿಗಳನ್ನು ಮೋದಿ ಸರ್ಕಾರ ಈವರೆಗೂ ಪತ್ತೆ ಮಾಡಿ ಬಲಿ ಹಾಕಿಲ್ಲ.

“ನಮ್ಮ 900ಕ್ಕೂ ಹೆಚ್ಚು ಯೋಧರು ವಿಮಾನಗಳ ಬದಲು 78 ಬಸ್ಸುಗಳಲ್ಲಿ ಪಯಣಿಸಬೇಕಾದ ಅನಿವಾರ್ಯವನ್ನು ಪಾಕಿಸ್ತಾನ ಭಯೋತ್ಪಾದನೆಯ ದಾಳಿಗೆ ಬಳಸಿಕೊಂಡಿತು. ಹೀಗಾಗಿ ಪಾಕಿಸ್ತಾನವನ್ನು ಕಟಕಟೆಯಲ್ಲಿ ನಿಲ್ಲಿಸಿದ್ದು ಸರಿ. ಆದರೆ ಯೋಧರನ್ನು ಸಾಗಿಸಲು ಗೃಹಮಂತ್ರಾಲಯ ಐದು ವಿಮಾನಗಳನ್ನು ಒದಗಿಸಲು ಯಾಕೆ ನಿರಾಕರಿಸಿತ್ತು? ಭದ್ರತಾ ಪಡೆಗಳ ಚಲನವಲನಕ್ಕೆ ಒಂದು ಗೊತ್ತಾದ ವಿಧಿವಿಧಾನ (ಸ್ಟ್ಯಾಂಡರ್ಡ್ ಆಪರೇಟಿವ್ ಪ್ರೊಸೀಜರ್) ಇರುತ್ತದೆ. ಈ ವಿಧಾನದ ಪ್ರಕಾರ ಭದ್ರತಾ ಪಡೆಗಳ ಪಯಣ ಮದುವೆ ಮೆರವಣಿಗೆಯಂತೆ ಸಾಲುಸಾಲಾಗಿ ನಡೆಯುವುದಿಲ್ಲ. ರಸ್ತೆ ಮಾರ್ಗದ ಪಯಣ ಸುರಕ್ಷಿತವಲ್ಲ. ಹಾಗೆ ಮಾಡಲೇಬೇಕಾಗಿ ಬಂದಾಗ ಪಡೆಗಳನ್ನು ಹೊತ್ತ ವಾಹನಗಳು ಹಾದು ಸಾಗುವ ತನಕ ಇತರೆ ವಾಹನಗಳನ್ನು ದೂರ ದೂರದಲ್ಲಿ ನಿಲ್ಲಿಸಲಾಗುತ್ತದೆ. ಅಂತಹ ವಾಹನಗಳನ್ನು ತಪಾಸಣೆ ಮಾಡಲಾಗುತ್ತದೆ. ಹೀಗಿದ್ದಾಗ ನಮ್ಮ ಯೋಧರನ್ನು ಹೊತ್ತ 78 ಬಸ್ಸುಗಳು ಮದುವೆ ದಿಬ್ಬಣದಂತೆ, ಅಪಾಯವನ್ನು ಕೈಬೀಸಿ ಕರೆಯುವಂತೆ ಮೆರವಣಿಗೆಯಲ್ಲಿ ಹೊರಟಿದ್ದಾದರೂ ಹೇಗೆ? ಪುಲ್ವಾಮ ದಾಳಿಗೆ ಬಳಕೆಯಾದ 300 ಕೇಜಿಗಳಷ್ಟು ಭಾರೀ ಪ್ರಮಾಣದ ಆರ್‌ಡಿಎಕ್ಸ್ ಎಲ್ಲಿಂದ ಬಂತು? ಅದನ್ನು ಹೊತ್ತಿದ್ದ ಕಾರು ಆ ಪ್ರದೇಶದಲ್ಲಿ ಹತ್ತಾರು ದಿನಗಳಿಂದ ಯಾಕೆ ನಿರಾತಂಕವಾಗಿ ಓಡಾಡುತ್ತಿತ್ತು? ಯೋಧರು ರಸ್ತೆ ಮಾರ್ಗವಾಗಿ ತೆರಳುತ್ತಿದ್ದ ಬಸ್ಸುಗಳ ಮೇಲೆ ಭಯೋತ್ಪಾದಕರ ದಾಳಿ ನಡೆಯಬಹುದು ಎಂಬ ಬೇಹುಗಾರಿಕೆ ವರದಿಗಳನ್ನು ಯಾಕಾಗಿ ನಿರ್ಲಕ್ಷಿಸಲಾಯಿತು?”  

ಈ ಪ್ರಶ್ನೆಗಳನ್ನು ಎತ್ತಿದ್ದವರು ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲರು. ಪುಲ್ವಾಮಾ ದಾಳಿ ನಡೆದಾಗ  ರಾಜ್ಯಪಾಲರಾಗಿದ್ದವರು. ಈ ಪ್ರಶ್ನೆಗಳನ್ನು ಎತ್ತಿದ ನಂತರ ಮಲಿಕ್ ಅವರ ಮೇಲೆ ನಾನಾ ಬಗೆಯ ದಾಳಿಗಳಾಗಿವೆ.

ಆರು ವರ್ಷಗಳಾದರೂ ಸತ್ಪಾಲ್ ಮಲಿಕ್ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಪುಲ್ವಾಮದ ಹೆಸರು ಹೇಳಿ 353 ಸೀಟುಗಳ ಭರ್ಜರಿ ಗೆಲುವು ಗಳಿಸಿದ ಮೋದಿಯವರು ಆನಂತರ ಪುಲ್ವಾಮವನ್ನು ಮರೆತೇ ಬಿಟ್ಟರು. ಭಾರತೀಯ ಯೋಧರ ನೆತ್ತರು ಅಗ್ಗವಲ್ಲ, ವ್ಯರ್ಥವಾಗಿ ಅದನ್ನು ಹರಿಯಲು ಬಿಡುವುದಿಲ್ಲ ಎಂಬುದನ್ನು ಅವರು ಕೃತಿಯಲ್ಲಿ ತೋರಲೇ ಇಲ್ಲ. ಪಾಕಿಸ್ತಾನದ ಬಾಲಾಕೋಟ್ ಮೇಲೆ ಭಾರತದ ಸರ್ಜಿಕಲ್ ದಾಳಿಯ ಕುರಿತು ಸಾರಿ ಸಾರಿ ಹೇಳಲಾಯಿತು. ಸಿನೆಮಾ ಮಾಡಲಾಯಿತು. ಆದರೆ ಪುಲ್ವಾಮ ದಾಳಿಯ ಕುರಿತು ಸಮಗ್ರ ತನಿಖೆ ನಡೆಯಲೇ ಇಲ್ಲ.

ಪ್ರವಾಸಿಗರ ರಕ್ಷಣೆಗೆ ಮುಂದಾದ ಸ್ಥಳೀಯ ಯುವಕ ಸೈಯದ್ ಆದಿಲ್ ಹುಸೇನ್ ಶಾ ಎಂಬ ಸ್ಥಳೀಯ ಯುವಕನನ್ನು ಕೂಡ ಉಗ್ರರು ಬಲಿ ತೆಗೆದುಕೊಂಡಿದ್ದಾರೆ. ಪರಾರಿಯಾಗುವ ಬದಲು ಭಯೋತ್ಪಾದಕನೊಬ್ಬನ ಬಂದೂಕನ್ನು ಕಿತ್ತುಕೊಳ್ಳಲು ಯತ್ನಿಸಿ, ತಪ್ಪಿಸಿಕೊಳ್ಳುವ ಅವಕಾಶವೊಂದನ್ನು ಪ್ರವಾಸಿಗರಿಗೆ ಸೃಷ್ಟಿಸುವ ಉಪಾಯ ಆದಿಲ್ ಶಾನದಾಗಿತ್ತು. ಈ ಯುವಕನ ಉಪಾಯ ಫಲಿಸಲಿಲ್ಲ. ಉಗ್ರರು ಮುಸಲ್ಮಾನನೆಂದು ಆದಿಲ್ ನನ್ನು ಬಿಡಲಿಲ್ಲ. ಅಲ್ಲೇ ಆ ಕ್ಷಣದಲ್ಲೇ ಕೊಂದು ಕೆಡವಿದರು. ದ್ವೇಷಕ್ಕೆ ಎದುರಾಗಿ ನಿಲ್ಲುವ  ದಿಟ್ಟತನ, ಕರುಣೆ, ಸಹಾನುಭೂತಿ, ಏಕತೆ, ಸೋದರತ್ವದಂತಹ ಮಾನವೀಯ ಮೌಲ್ಯಗಳನ್ನು ಯಾವ ಬಂದೂಕುಗಳೂ ಕೊಲ್ಲಲಾರವು ಎಂಬುದನ್ನು ರುಜುವಾತು ಮಾಡಿ ತೋರಿದೆ ಆದಿಲ್ ಬಲಿದಾನ. ಪಹಲ್ಗಾಮ್ ನಿಂದ ಐದು ಕಿ.ಮೀ.ದೂರದಲ್ಲಿರುವ ಬೈಸಾರನ್ ಹಚ್ಚಹಸುರಿನ ಹುಲ್ಲುಗಾವಲು ಪುಟ್ಟ ಸ್ವಿಟ್ಜರ್ಲ್ಯಾಂಡ್ ಎಂದೇ ಪ್ರವಾಸಿಗರನ್ನು ಸೂಜಿಗಲ್ಲಾಗಿ ಸೆಳೆದಿತ್ತು.

ಕೆಂಪು ಚಿನ್ನವೆಂದು ಕರೆಯಲಾಗುವ ಕೇಸರಿ ಮಸಾಲೆ ಪದಾರ್ಥದ ಸಾಲು ಸಾಲು ವಿಶಾಲ ಹೊಲಗಳಿಗೆ ಮತ್ತು ನೋಟ ಹರಿದಷ್ಟೂ ಉದ್ದಕ್ಕೆ ಕಣ್ಣು ತುಂಬುತ್ತಿದ್ದ ಸೇಬಿನ ತೋಟಗಳ ಕಾಶ್ಮೀರ ಕಣಿವೆ ಕೆಲ ವರ್ಷಗಳಿಂದ ನಿಂದನೆ, ಅಪಮಾನದ ಮೌನ ಹೊದ್ದು ಮಲಗಿತ್ತು. 370ನೆಯ ಅನುಚ್ಛೇದದ ಅಡಿ ನೀಡಲಾಗಿದ್ದ ಸಾಂವಿಧಾನಿಕ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ರಾಜ್ಯದ ಸ್ಥಾನಮಾನ ಕಿತ್ತುಕೊಂಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಒಡೆದ ಅವಹೇಳನದಡಿ ನಲುಗಿತ್ತು. ಸುಪ್ರೀಮ್ ಕೋರ್ಟ್ ಆದೇಶದ ಪ್ರಕಾರ ಚುನಾವಣೆ ನಡೆಸಿ ವಿಧಾನಸಭೆಯನ್ನು ಮರಳಿ ನೀಡಲಾಗಿತ್ತು. ಆದರೆ ಕೇಂದ್ರಾಡಳಿತ ಪ್ರದೇಶದ ಹಣೆಪಟ್ಟಿ ಈಗಲೂ ಕಳಚಿಲ್ಲ. ಜನರಿಂದ ಆಯ್ಕೆಯಾದ ಮುಖ್ಯಮಂತ್ರಿ ಇದ್ದಾರೆ. ಆದರೆ ರಾಜ್ಯಪಾಲರು ಜನಾದೇಶದ ಸವಾರಿ ಮಾಡುವ ಸ್ಥಿತಿ ತಪ್ಪಿಲ್ಲ. ರಾಷ್ಟ್ರಪತಿ ಆಡಳಿತದಲ್ಲಿದ್ದಾಗಲೇ ಕ್ಷೇತ್ರ ಮರುವಿಗಡಣೆ ನಡೆಸಿ, ಈ ಭೂಭಾಗದ ರಾಜಕೀಯ ಸಮತೋಲನವನ್ನು ಕದಲಿಸಿ ಬಹುಸಂಖ್ಯಾತರ ಅಧಿಕಾರವನ್ನು ಕಸಿಯುವ ಹುನ್ನಾರ ಜಾರಿಯಾಯಿತು. ಹಿಂದುಗಳೇ ಬಹುಸಂಖ್ಯಾತರಾಗಿದ್ದು ಮುಸಲ್ಮಾನರು ಕಡಿಮೆ ಪ್ರಮಾಣದಲ್ಲಿರುವ ಜಮ್ಮು ಸೀಮೆಗೆ ಆರು ವಿಧಾನಸಭಾ ಸೀಟುಗಳನ್ನು ಹೆಚ್ಚುವರಿಯಾಗಿ ನೀಡಲಾಯಿತು. ಮುಸಲ್ಮಾನರು ಬಹುಸಂಖ್ಯಾತರಾಗಿರುವ ಕಾಶ್ಮೀರ ಕಣಿವೆಗೆ ಹೆಚ್ಚುವರಿಯಾಗಿ ನೀಡಿದ ಸೀಟು ಒಂದೇ ಒಂದು.

ತಾನು ಹಿಡಿದಿರುವ ದಾರಿಯತ್ತ ಹೊರಳಿ ನೋಡಿ, ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಮೋದಿ ಸರ್ಕಾರ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X