ಈ ದಿನ ಸಂಪಾದಕೀಯ | ಕರಾವಳಿಯ ʼಸಜ್ಜನʼರು ಇನ್ನಾದರೂ ಮೌನ ಮುರಿಯಬೇಕು

Date:

Advertisements

ದಕ್ಷಿಣ ಕನ್ನಡ ಜಿಲ್ಲೆಯ ಕಾನೂನು ಸುವ್ಯವಸ್ಥೆ ಸರ್ಕಾರದ ಹಿಡಿತಕ್ಕೆ ಸಿಗುತ್ತಿಲ್ಲ. ಪೊಲೀಸರು ಬಿಗಿ ಕ್ರಮ ಕೈಗೊಳ್ಳುತ್ತಿಲ್ಲ. ಗೃಹಸಚಿವರು ಖಡಕ್‌ ಆಗಿಲ್ಲ, ಉಸ್ತುವಾರಿ ಸಚಿವರು ಅಸಮರ್ಥರು ಎಂಬ ಬಗ್ಗೆ ಟೀಕಿಸುವ ಮುನ್ನ ಜಿಲ್ಲೆಯ ಸುಶಿಕ್ಷಿತ ಜನರು, ನಿವೃತ್ತರು, ಉದ್ಯಮಪತಿಗಳು, ಯುನಿವರ್ಸಿಟಿಗಳ ಪ್ರೊಫೆಸರ್‌ಗಳು, ವಕೀಲರು, ವೈದ್ಯರು, ಎಂಜಿನಿಯರ್‌ಗಳು ಸಮಾಜ ಕಟ್ಟುವ ಬಗ್ಗೆ ಮಾತನಾಡಬೇಕಿದೆ. ಇವರ ಮಹಾಮೌನ ಜಿಲ್ಲೆಗೆ ದುಬಾರಿಯಾಗಲಿದೆ.

ಪಶ್ಚಿಮಘಟ್ಟ ಮತ್ತು ಅರಬ್ಬಿ ಸಮುದ್ರದಿಂದ ಆವೃತವಾದ ಜಿಲ್ಲೆ ದಕ್ಷಿಣ ಕನ್ನಡ. ಅಡಿಕೆ, ತೆಂಗು, ರಬ್ಬರ್‌, ಕಾಳು ಮೆಣಸು, ಗೋಡಂಬಿ ಹೀಗೆ ಎಲ್ಲ ಪ್ರಮುಖ ಬೆಳೆಗಳಿಗೂ ಉತ್ತಮ ಬೆಲೆಯಿದೆ. ಇಲ್ಲಿನ ರೈತರ ಬದುಕು ಬೇರೆ ರೈತರಿಗಿಂತ ಭಿನ್ನ. ತೋಟಗಾರಿಕಾ ಬೆಳೆಗಳೇ ಪ್ರಧಾನವಾಗಿರುವ ಕಾರಣ ಮಳೆ -ಬರ ಎರಡೂ ಅಷ್ಟೊಂದು ಕಾಡದು. ತರಕಾರಿ, ಹೂ ಹಣ್ಣಿನ ಬೆಳೆಗಾರರು ಎದುರಿಸುವ ಆತಂಕ ಇಲ್ಲಿಲ್ಲ. ಮೀನುಗಾರಿಕೆ ಕೂಡ ಇಲ್ಲಿನ ಜನರ ಮುಖ್ಯ ಜೀವನೋಪಾಯ. ಬ್ರಿಟಿಷರ ಪ್ರಭಾವದಿಂದಾಗಿ ಕ್ರೈಸ್ತ ಮಿಷನರಿಗಳು ಮಂಗಳೂರಿನಲ್ಲಿ ಕಟ್ಟಿದ ಶಿಕ್ಷಣ ಸಂಸ್ಥೆಗಳಿಗೆ ಶತಮಾನದ ಇತಿಹಾಸವಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಈ ಜಿಲ್ಲೆಯನ್ನು ರಾಜ್ಯದ ಪ್ರಮುಖ ಶೈಕ್ಷಣಿಕ ಕೇಂದ್ರವನ್ನಾಗಿ ಮಾಡಿದೆ. ‌

ಬುದ್ಧಿವಂತರ ಜಿಲ್ಲೆ ಎಂಬ ಹೆಸರಿಗೆ ಸಾಕ್ಷಿ ಎಂಬಂತೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಮೊದಲೆರಡು ಸ್ಥಾನವನ್ನು ಈ ಜಿಲ್ಲೆ ಉಳಿಸಿಕೊಳ್ಳುತ್ತ ಬಂದಿದೆ. ವಿಶೇಷವೆಂದರೆ ದಕ್ಷಿಣ ಕನ್ನಡದ ಬಹುತೇಕ ಸರ್ಕಾರಿ ಶಾಲಾ ಕಾಲೇಜುಗಳು ಮೂಲಸೌಕರ್ಯ ಮತ್ತು ಶಿಕ್ಷಣದ ಗುಣಮಟ್ಟದಲ್ಲೂ ಮುಂದಿವೆ. ಕಡಲ ಸೌಂದರ್ಯ, ಭೂತಾರಾಧನೆ, ಯಕ್ಷಗಾನ, ಸಂಪದ್ಭರಿತ ದೇವಾಲಯಗಳು, ಮನಸೂರೆಗೊಳ್ಳುವ ಬ್ರಿಟಿಷರ ಕಾಲದ ಚರ್ಚ್‌ಗಳು, ಇತಿಹಾಸ ಪ್ರಸಿದ್ಧ ಮಸೀದಿಗಳು ಈ ಜಿಲ್ಲೆಯ ಸಾಂಸ್ಕೃತಿಕ ಮೌಲ್ಯವನ್ನು ಹೆಚ್ಚಿಸಿದೆ. ಕ್ರೈಸ್ತರು, ಬ್ಯಾರಿಗಳು, ಹಿಂದೂಗಳು ಎಲ್ಲರೂ ಈ ನಾಡಿನ ಸಾಂಸ್ಕೃತಿಕ- ಶೈಕ್ಷಣಿಕ ಬೆಳವಣಿಗೆಗೆ ಕಾರಣರಾಗಿದ್ದಾರೆ. ಹಿಂದು- ಮುಸ್ಲಿಂ ಸೌಹಾರ್ದತೆಗೆ ಇಲ್ಲಿನ ಭೂತಾರಾಧನೆ ಸಾಕ್ಷಿಯಾಗಿದೆ. ಬೊಬ್ಬರ್ಯ ಮತ್ತು ಅಲಿ ಎಂಬ ಮುಸ್ಲಿಂ ಭೂತಗಳನ್ನು ಹಿಂದೂಗಳು ಆರಾಧಿಸುತ್ತಾರೆ. ದೇವಾಲಯಗಳ ವಾರ್ಷಿಕ ಜಾತ್ರೆಗೆ ಹೊರೆಕಾಣಿಕೆ ಕೊಡುವ, ದೇವರ ರಥ ಸಾಗುವಾಗ ಕೈ ಮುಗಿದು ಕಾಣಿಕೆ ನೀಡಿ ಶ್ರದ್ಧೆಯಿಂದ ನಡೆದುಕೊಳ್ಳುವ ಪದ್ಧತಿಯನ್ನು ಬ್ಯಾರಿಗಳು ರೂಢಿಸಿಕೊಂಡಿದ್ದಾರೆ.

Advertisements

ಇಂತಹ ಸಾಂಸ್ಕೃತಿಕ ವೈಭವದ, ಧರ್ಮ ಸೌಹಾರ್ದತೆಯ ರಾಜಧಾನಿ ಎಂಬಂತಿದ್ದ ದಕ್ಷಿಣ ಕನ್ನಡ ಜಿಲ್ಲೆ ಅದರಲ್ಲೂ ಜಿಲ್ಲಾಕೇಂದ್ರ ಮಂಗಳೂರು ಕಳೆದ ಒಂದು ದಶಕದಿಂದ ಸದಾ ಕೋಮುದ್ವೇಷದ ಭಾಷಣಗಳು, ನಿಷೇಧಗಳು, ಹಲ್ಲೆ, ಕೊಲೆಗಳಿಗೆ ಕುಖ್ಯಾತವಾಗುತ್ತಿದೆ. ರಾಜ್ಯದ ಯಾವ ಜಿಲ್ಲೆಯಲ್ಲೂ ನಡೆಯದ ಹಿಂದೂ ಮುಸ್ಲಿಂ ಪ್ರತೀಕಾರದ ಹತ್ಯೆಗಳು ನಡೆಯುತ್ತಿವೆ. ದಕ್ಷಿಣ ಕನ್ನಡದ ಒಂದೆರಡು ಕ್ಷೇತ್ರ ಬಿಟ್ಟರೆ ಮತ್ತೆಲ್ಲ ಕ್ಷೇತ್ರಗಳಲ್ಲಿ ಸತತವಾಗಿ ಬಿಜೆಪಿ ಶಾಸಕರೇ ಗೆದ್ದು ಬರುತ್ತಿದ್ದಾರೆ. ಮೂರು ದಶಕದಿಂದ ಬಿಜೆಪಿಯವರೇ ಸಂಸದರಾಗಿ ಆಯ್ಕೆಯಾಗುತ್ತಿದ್ದಾರೆ. ಹಾಗೆ ಆಯ್ಕೆಯಾಗಿ ಬರುತ್ತಿರುವ ಎಲ್ಲರಲ್ಲೂ ಮುಖ್ಯವಾಗಿ ಕಾಡಿರುವ ವ್ಯಾಧಿ ಕೋಮುವಾದ. ಸದಾ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಕೆರಳಿಸುವ, ಅವರ ಕೊಲೆ ನಡೆದಾಗ ಅವರನ್ನು ಹುತಾತ್ಮರಂತೆ ವೈಭವೀಕರಿಸಿ ಕುಟುಂಬಕ್ಕೆ ಒಂದಷ್ಟು ಹಣ ಕೊಟ್ಟು ಮತ್ತೆ ಪ್ರತೀಕಾರವನ್ನು ಭುಗಿಲೆಬ್ಬಿಸುವುದು ನಡೆಯುತ್ತಲೇ ಇದೆ. ಬಡತನದಿಂದ ಅರ್ಧದಲ್ಲಿಯೇ ಶಾಲೆ ಬಿಟ್ಟ ಯುವಕರನ್ನು ಹಿಂದುತ್ವವಾದಿ ಸಂಘಟನೆಗಳಿಗೆ ಸೇರಿಸಿಕೊಂಡು ಅವರ ಮನಸ್ಸಿನಲ್ಲಿ ಹುಸಿ ಹಿಂದುತ್ವದ ವಿಷ ತುಂಬಿ ಕೊಲೆ, ಗಲಭೆಯಂತಹ ಕೃತ್ಯಗಳಿಗೆ ಬಲಿ ಹಾಕಲಾಗುತ್ತಿದೆ. ದಕ್ಷಿಣ ಕನ್ನಡ ಹಿಂದುತ್ವದ ಪ್ರಯೋಗಶಾಲೆಯಾಗಿಯಷ್ಟೇ ಉಳಿದಿಲ್ಲ, ಅಪಾಯಕಾರಿ ಕಾರ್ಖಾನೆಯಾಗಿದೆ.

ಆರೆಸ್ಸೆಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟ, ಅರುಣ್‌ ಕುಮಾರ್‌ ಪುತ್ತಿಲ, ಶರಣ್‌ ಪಂಪ್ವೆಲ್ ಮುಂತಾದವರು ಮುಸ್ಲಿಂ ದ್ವೇಷದ ಭಾಷಣ ಮಾಡುವುದನ್ನೇ ವೃತ್ತಿ ಮಾಡಿಕೊಂಡವರು. ಅವರಷ್ಟೇ ಬೇಜವಾಬ್ದಾರಿಂದ ಬಿಜೆಪಿಯ ಶಾಸಕರಾದ ಹರೀಶ್‌ ಪೂಂಜಾ, ಡಾ ಭರತ್‌ಶೆಟ್ಟಿ, ವೇದವ್ಯಾಸ ಕಾಮತ್‌, ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲ್‌, ಇದೇ ಜಿಲ್ಲೆಯವರಾದ ಸಚಿವೆ ಶೋಭಾ ಕರಂದ್ಲಾಜೆ ಸದಾ ಕೋಮು ದ್ವೇಷದ ರಾಜಕಾರಣ ಮಾಡುತ್ತಲೇ ಬಂದಿದ್ದಾರೆ. ಆದರೂ ಇಲ್ಲಿನ ಜನ ಇವರನ್ನೇ ಗೆಲ್ಲಿಸುತ್ತಿದ್ದಾರೆ ಎಂದರೆ ಜನರೂ ಕೋಮುವಾದಿಗಳಾಗಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಒಂದು ಕಾಲದಲ್ಲಿ ಕಮ್ಯುನಿಸ್ಟರನ್ನು ಗೆಲ್ಲಿಸಿಕೊಂಡಿದ್ದ ನೆಲವದು. ಮಂಗಳೂರಿಗೆ ಯಾವುದೇ ಐಟಿ ಕಂಪನಿಗಳು ಬರುತ್ತಿಲ್ಲ, ಅಲ್ಲಿಂದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತು ಹೊರ ಬರುವ ಎಂಜಿನಿಯರಿಂಗ್ ಪದವೀಧರರಿಗೆ ಊರಲ್ಲಿ ಉದ್ಯೋಗ ಮಾಡುವಂತಿಲ್ಲ. ಅವರೆಲ್ಲ ಬೆಂಗಳೂರು, ವಿದೇಶಗಳಲ್ಲಿ ಉದ್ಯೋಗ ಮಾಡುವಂತಾಗಿದೆ. ಸದಾ ಕೋಮು ಗಲಭೆ, ಬಂದ್‌, ನಿಷೇಧಾಜ್ಞೆಗಳಂತಹ ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸುವ ಘಟನೆಗಳು ನಡೆಯುವ ಕಾರಣಕ್ಕೆ ಐಟಿ ಕಂಪನಿಗಳು ಮಂಗಳೂರಿಗೆ ಬರಲು ಹಿಂದೇಟು ಹಾಕುತ್ತಿವೆ ಎಂಬ ಮಾತುಗಳು ಬಹಳ ವರ್ಷಗಳ ಹಿಂದೆಯೇ ಕೇಳಿ ಬಂದಿತ್ತು. ಬಹುರಾಷ್ಟ್ರೀಯ ಕಂಪನಿಯೊಂದು ತಾನು ಹೊಸದಾಗಿ ವಿಸ್ತರಣೆಗೆ ಹೊರಟಾಗ ಆ ಊರಿನ ಬಗ್ಗೆ ಎಲ್ಲಾ ಆಯಾಮಗಳಲ್ಲಿಯೂ ಯೋಚಿಸಿ ತೀರ್ಮಾನ ತೆಗೆದುಕೊಳ್ಳುತ್ತದೆ. ಅದು ಮಾಡಲೇಬೇಕಿರುವ ಕೆಲಸ. ರಾಜಕಾರಣಿಗಳು, ಧಾರ್ಮಿಕ ಮೂಲಭೂತವಾದಿಗಳ ಕೋಮುದ್ವೇಷದ ನಡವಳಿಕೆಗಳು ಜಿಲ್ಲೆಯ ವಿದ್ಯಾವಂತ ಯುವಕರಿಗೆ ತಮ್ಮೂರಲ್ಲಿ ಕೆಲಸ ಮಾಡುವ ಅವಕಾಶವನ್ನು ತಪ್ಪಿಸಿದೆ. ಪೋಷಕರು ಒಂಟಿಯಾಗಿ ಬದುಕುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ದುರಂತವೆಂದರೆ ಹೀಗಾದರೂ ಸುಶಿಕ್ಷಿತ ವಲಯ ಈ ಬಗ್ಗೆ ಮಾತನಾಡುತ್ತಿಲ್ಲ.

ಐಟಿ ಉದ್ಯೋಗಿಗಳು ಕೋಮುವಾದವನ್ನು, ಸುಳ್ಳು ಸುದ್ದಿಗಳನ್ನು, ತಿರುಚಿದ ಇತಿಹಾಸವನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚುವುದರಲ್ಲಿ ಮುಂಚೂಣಿಯಲ್ಲಿದ್ದಾರೆ. ಮುಸ್ಲಿಂ ರಾಷ್ಟ್ರಗಳಲ್ಲಿ ದುಡಿಯುತ್ತ ಮುಸ್ಲಿಮರನ್ನು ದ್ವೇಷಿಸುವುದು, ಕ್ರೈಸ್ತರ ದೇಶದಲ್ಲಿ ನೆಲೆನಿಂತು ಅಲ್ಲಿನ ಎಲ್ಲ ಸೌಲಭ್ಯ ಪಡೆದುಕೊಂಡು ಭಾರತದಲ್ಲಿ ಕೋಮುದ್ವೇಷಕ್ಕೆ ತುಪ್ಪ ಸುರಿಯುವ ಬಹಳ ಮಂದಿ ಇದ್ದಾರೆ. ಪ್ರಧಾನಿ ಮೋದಿಯವರು ವಿದೇಶಕ್ಕೆ ಹೋದಾಗ ಮುಗಿಬೀಳುವ ಬಹುತೇಕ ಭಾರತೀಯರು ಅದೇ ವರ್ಗಕ್ಕೆ ಸೇರಿದವರು. ಯಾವ ದೇಶಕ್ಕೆ ಹೋದರೂ, ಎಷ್ಟೇ ಶಿಕ್ಷಣ ಪಡೆದರೂ ಮನಸ್ಸಿನ ತುಂಬ ಕೋಮುವಾದದ ವಿಷ ತುಂಬಿಕೊಂಡ ಸಮೂಹ ತಮ್ಮ ಊರಿನ ಪರಿಸ್ಥಿತಿಗೆ ಮರುಗುವುದು ದುಬಾರಿಯ ನಿರೀಕ್ಷೆಯೇ ಸರಿ. ಆದರೆ, ದಕ್ಷಿಣ ಕನ್ನಡದಲ್ಲಿ ಶಿಕ್ಷಣ ಸಂಸ್ಥೆಗಳ ಸಾಮ್ರಾಜ್ಯವನ್ನೇ ಕಟ್ಟಿಕೊಂಡ ಹಿಂದೂ, ಕ್ರೈಸ್ತ, ಮುಸಲ್ಮಾನ ಸಮುದಾಯದ ಶಿಕ್ಷಣೋದ್ಯಮಿಗಳು, ಹಣವಂತರು ತಮ್ಮದೇ ಜಿಲ್ಲೆ ಕೋಮುವಾದಿ ಜಿಲ್ಲೆ ಎಂಬ ಕುಖ್ಯಾತಿ ಪಡೆಯುತ್ತಿರುವಾಗ ಎಚ್ಚೆತ್ತುಕೊಳ್ಳದೇ ಇದ್ದರೆ ಆ ನೆಲಕ್ಕೆ ಮಾಡುವ ದ್ರೋಹವಾದೀತು. ಈಗ ಪಕ್ಕದ ಊರಿಗೆ, ಪಕ್ಕದ ಮನೆಗೆ ಬಿದ್ದ ಬೆಂಕಿ ಮುಂದೊಂದು ದಿನ ತಮ್ಮ ಮನೆಯನ್ನೂ ಸುಟ್ಟೀತು ಎಂಬ ಎಚ್ಚರ ಇರಬೇಕು. ಮಂಗಳೂರಿನ ಶಾಲೆ ಕಾಲೇಜುಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುವ ಬಗ್ಗೆ ದೂರದೂರಿನ ಪೋಷಕರು ಗಂಭೀರವಾಗಿ ಯೋಚಿಸುವ ಸಮಯ ಬಂದೀತು.

ಆರೆಸ್ಸೆಸ್‌, ಬಜರಂಗದಳ, ವಿಶ್ವ ಹಿಂದೂ ಪರಿಷತ್‌, ಶ್ರೀರಾಮ ಸೇನೆ ಸಂಘಟನೆಗಳ ಮುಖಂಡರು ಯಾವುದೇ ಧಾರ್ಮಿಕ ಕಾರ್ಯಕ್ರಮ ಅಥವಾ ಸಮಾವೇಶವೇ ಇರಲಿ ಅಲ್ಲಿ ಮುಸ್ಲಿಮರನ್ನು ಟೀಕಿಸದೇ, ಅವರಿಗೆ ಬೆದರಿಕೆ ಹಾಕದೇ, ಅವರ ವಿರುದ್ಧ ಹಿಂದೂಗಳನ್ನು ಪ್ರಚೋದಿಸದೇ ಮಾತು ಮುಗಿಸುತ್ತಿಲ್ಲ. ಅಷ್ಟು ಸಾಲದೆಂಬಂತೆ ಬೆಂಗಳೂರು ಕಡೆಯಿಂದ ಚಕ್ರವರ್ತಿ ಸೂಲಿಬೆಲೆ, ಪುನೀತ್‌ ಕೆರೆಹಳ್ಳಿ ತರಹದ ಸಮಾಜ ಘಾತಕ ವ್ಯಕ್ತಿಗಳನ್ನು ಧಾರ್ಮಿಕ ಕಾರ್ಯಕ್ರಮಗಳಿಗೆ ಕರೆಸಿ ದ್ವೇಷ ಭಾಷಣ ಮಾಡಿಸುವ ಹೊಸ ಬೆಳವಣಿಗೆ ದಕ್ಷಿಣ ಕನ್ನಡದ ಹಿಂದೂ ಸಂಘಟನೆಗಳಿಂದ ಕಂಡು ಬರುತ್ತಿದೆ. ಅವರ ಜೊತೆಗೆ ಶಾಸಕರಾಗಿ ತಮ್ಮ ಕ್ಷೇತ್ರದ ಎಲ್ಲ ಜನರ ರಕ್ಷಣೆ, ಸುರಕ್ಷತೆಯ ಬಗ್ಗೆ ಯೋಚಿಸುವ ಬದಲು ಮುಸ್ಲಿಮರ ಜೊತೆಗೆ ಸೇರಬೇಡಿ, ಅವರನ್ನು ಧಾರ್ಮಿಕ ಕಾರ್ಯಗಳಿಗೆ ಕರೆಯಬೇಡಿ, ಅವರ ಜೊತೆಗೆ ವ್ಯಾಪಾರ ಮಾಡಬೇಡಿ, ಪ್ರತೀಕಾರ ತೀರಿಸಿ ಎಂದು ಕರೆ ಕೊಡುವುದು ಅಕ್ಷಮ್ಯ ಅಪರಾಧ. ದುರಂತವೆಂದರೆ ಇಂತಹ ದ್ವೇಷ ಭಾಷಣ ಮಾಡಿದ ಕಾರಣಕ್ಕೆ ಪೊಲೀಸರು ಎಫ್‌ಐಆರ್‌ ದಾಖಲಿಸಿದರೆ, ಒಂದೇ ದಿನದಲ್ಲಿ ಪ್ರಕರಣ ರದ್ದು ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತಾರೆ, ತಕ್ಷಣ ಕೋರ್ಟ್‌ನಲ್ಲಿ ತಡೆಯಾಜ್ಞೆ ಸಿಗುತ್ತಿದೆ. ಕೋಮುವಾದಿಗಳಿಗೆ ಕಾನೂನಿನ ಭಯವಿಲ್ಲದಂತಾಗಿ ಹೋಗಿದೆ. ಹಿಂದು ಒಬ್ಬನ ಕೊಲೆಯಾದಾಗ ರಾಜ್ಯದ ಎಲ್ಲಾ ಬಿಜೆಪಿ ಮುಖಂಡರು ಮಂಗಳೂರಿಗೆ ಹೋಗಿ ಪ್ರತೀಕಾರದ ಭಾಷಣ ಮಾಡುತ್ತಾರೆ. ಆ ಕೊಲೆಗೆ ಸಂಬಂಧವೇ ಇಲ್ಲದ ವ್ಯಕ್ತಿಯನ್ನು, ಒಂದು ಹಿಂದೂ ಹೆಣಕ್ಕೆ ಒಂದು ಮುಸ್ಲಿಂ ಹೆಣ ಬೀಳಬೇಕು ಎಂಬ ಕಾರಣಕ್ಕೆ ತಮ್ಮದೇ ಪಕ್ಷದ ಕಾರ್ಯಕರ್ತರು ಮುಸ್ಲಿಮರನ್ನು ಕೊಚ್ಚಿ ಹಾಕಿದಾಗ ಸರ್ಕಾರವನ್ನು ಟೀಕಿಸುತ್ತಾರೆ. ತಮ್ಮ ಧರ್ಮದ ಯುವಕರಿಗೆ ಬುದ್ಧಿ ಹೇಳುವುದಿಲ್ಲ. ಇವರ ಪ್ರಚೋದಕಾರಿ ಭಾಷಣ ಕೇಳಿ ಕೊಲೆ ಕೃತ್ಯದಲ್ಲಿ ಭಾಗಿಯಾದ ಯುವಕರು ಜೈಲು ಪಾಲಾಗುತ್ತಾರೆ. ಅವರ ಕುಟುಂಬಗಳು ಕೋರ್ಟು, ಜಾಮೀನು ಅಂತ ಅಲೆಯಬೇಕಾಗಿದೆ. ಸತ್ತವನ ಕುಟುಂಬದ ಜೊತೆ ಕೊಂದವನ ಕುಟುಂಬವೂ ಸಂಕಷ್ಟ ಎದುರಿಸುವಂತಾಗಿದೆ. ಇದು ರಾಜಕೀಯ ನಾಯಕರಿಗೆ ಅರ್ಥವಾಗುತ್ತಿಲ್ಲ ಎಂದಲ್ಲ. ಅವರಿಗೆ ಬೇರೆ ರಾಜಕಾರಣ ಗೊತ್ತಿಲ್ಲ. ಮುಂದಿನ ಚುನಾವಣೆಗೆ ಟಿಕೆಟ್‌ ಸಿಗಬೇಕು, ಮತ್ತೆ ಗೆದ್ದು ಅಧಿಕಾರ ಅನುಭವಿಸಬೇಕು. ಇಷ್ಟೇ ಅವರ ಅಜೆಂಡಾ.

ದಕ್ಷಿಣ ಕನ್ನಡ ಜಿಲ್ಲೆಯ ಕಾನೂನು ಸುವ್ಯವಸ್ಥೆ ಸರ್ಕಾರದ ಹಿಡಿತಕ್ಕೆ ಸಿಗುತ್ತಿಲ್ಲ. ಪೊಲೀಸರು ಬಿಗಿ ಕ್ರಮ ಕೈಗೊಳ್ಳುತ್ತಿಲ್ಲ. ಗೃಹಸಚಿವರು ಖಡಕ್‌ ಆಗಿಲ್ಲ, ಉಸ್ತುವಾರಿ ಸಚಿವರು ಅಸಮರ್ಥರು ಎಂಬ ಬಗ್ಗೆ ಟೀಕಿಸುವ ಮುನ್ನ ಜಿಲ್ಲೆಯ ಸುಶಿಕ್ಷಿತ ಜನರು, ನಿವೃತ್ತರು, ಉದ್ಯಮಪತಿಗಳು, ಯುನಿವರ್ಸಿಟಿಗಳ ಪ್ರೊಫೆಸರ್‌ಗಳು, ವಕೀಲರು, ವೈದ್ಯರು, ಎಂಜಿನಿಯರ್‌ಗಳು ಸಮಾಜ ಕಟ್ಟುವ ಬಗ್ಗೆ ಮಾತನಾಡಬೇಕಿದೆ. ಆದರೆ, ಆಸ್ಪತ್ರೆಗಳಲ್ಲಿ ವೈದ್ಯರು ಧರ್ಮ ನೋಡಿ ಚಿಕಿತ್ಸೆ ನಿರಾಕರಿಸುವ ಘಟನೆಗಳು, ತರಗತಿಯಲ್ಲಿ ಪಾಠ ಮಾಡುವ ಮೇಷ್ಟ್ರುಗಳು ಕೋಮುವಾದ ಬಿತ್ತುವ ಕೆಲಸ ಮಾಡುತ್ತಿರುವುದು ತೆರೆದಿಟ್ಟ ಸತ್ಯ. ಮಂಗಳೂರು ವಿವಿಯ ಹಿಂದಿನ ಕುಲಪತಿಯವರ ಮೇಲೆ ಇಂತಹ ಹಲವು ಆರೋಪಗಳು ಬಂದಿದ್ದವು. ಇಂತಹ ಸಮಯದಲ್ಲಿ ಎಡವೂ ಅಲ್ಲದೆ, ಬಲವೂ ಅಲ್ಲದಂತಿರುವ ಜನರಾದರೂ ಹರಿದ ಸಾಮರಸ್ಯದ ವಸ್ತ್ರವನ್ನು ಹೊಲಿಯುವ ಕೆಲಸ ಮಾಡಬೇಕಿದೆ. ಮೊದಲು ಕೋಮುವಾದದ ವಿರುದ್ಧ ಮಾತನಾಡುವ ಧೈರ್ಯ ತೋರಬೇಕು. ಶಿಕ್ಷಣ ಸಂಸ್ಥೆ, ಆಸ್ಪತ್ರೆ, ಉದ್ಯಮ ನಡೆಸುತ್ತಾ ಹಣ ಮಾಡುವುದನ್ನೇ ಸೇವೆ ಎಂದುಕೊಂಡವರು, ಕೋಮುವಾದಿ ಸಂಘಟನೆಗಳಿಗೆ ದೇಣಿಗೆ ನೀಡಿ, ಮುಸ್ಲಿಮರಿಗೆ ಇಫ್ತಾರ್‌ ಕೂಟ ಏರ್ಪಡಿಸುವ ಗೋಸುಂಬೆತನ ಬಿಡಬೇಕು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X