ಸಿಎಂ ಡಿಕೆ ಶಿವಕುಮಾರ್ ಅವರು ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ತಾಲ್ಲೂಕು ಮಟ್ಟದಿಂದಲೇ ರೌಡಿಗಳ ನಿಗ್ರಹಕ್ಕೆ ಟಾಸ್ಕ್‌ಫೋರ್ಸ್ ರಚನೆಗೆ ಸೂಚನೆ ನೀಡಿರುವುದು ಕೂಡ ಒಂದು ಆಪ್ಯಾಯ ಅಚ್ಚರಿ. “ನಿಮ್ಮ ಆತ್ಮಸಾಕ್ಷಿಯ ಪ್ರಕಾರ ಕೆಲಸ ಮಾಡಿ, ಸಿಎಂ ಕಚೇರಿಯಿಂದ ಕರೆ ಬಂದರೂ ಮಣಿಯಬಾರದು. ಹೋಗುವಾಗ ದಾಖಲೆಯ ರಾಶಿ ಇಟ್ಟು ಹೋಗಿ” ಎಂದು ಹೇಳಿರುವುದು ಭವಿಷ್ಯದಲ್ಲಿ ಸ್ವಚ್ಛ ಆಡಳಿತ ನೀಡುವ ಇಂಗಿತದಂತಿದೆ. ಆಡಿದ ಈ ಮಾತನ್ನು ನಡೆಸಿಕೊಡುವ ಹೊಣೆ ಅಧಿಕಾರಿಗಳ ಮೇಲಷ್ಟೇ ಇಲ್ಲ ಸಿಎಂ ಮೇಲೂ ಇದೆ.
ಚುನಾವಣೆ ಮುಗಿದು ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗ ಹೊಸ ಯೋಜನೆಗಳ ಘೋಷಣೆ, ಭರವಸೆಯ ಮಹಾಪೂರ ಹರಿಸುವುದು ಸಹಜ. ಆದರೆ, ಕರ್ನಾಟಕದಲ್ಲಿ ಮೂರು ವರ್ಷದಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಿ ಸಿದ್ದರಾಮಯ್ಯ ಅವರ ಉತ್ತರಾಧಿಕಾರಿಯಾಗಿ ಡಿ ಕೆ ಶಿವಕುಮಾರ್ ಅಧಿಕಾರ ವಹಿಸಿಕೊಂಡ ತಕ್ಷಣ ಅವರು ನಡೆಸಿದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ ದಿಟ್ಟ ನಿರ್ಧಾರಗಳು ಭರವಸೆ ಮೂಡಿಸಿವೆ. ಪ್ರಮಾಣವಚನ ಸ್ವೀಕರಿಸಿ ನೇರ ವಿಧಾನಸೌಧಕ್ಕೆ ಬಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಅತ್ಯಂತ ಮಹತ್ವದ ಕಾರ್ಯಕ್ರಮವೊಂದನ್ನು ಅವರು ಘೋಷಿಸಿದರು. ಪ್ರತಿ ಗ್ರಾಮ ಪಂಚಾಯ್ತಿಯಲ್ಲಿ ಯುವ ಸಮುದಾಯದ ಸಾಂಸ್ಕೃತಿಕ ಚಟುವಟಿಕೆಗೆಂದೇ “ಭಾರತ್ ಜೋಡೋ ಯುವಕ ಸಂಘ” ಸ್ಥಾಪನೆ, ಅದಕ್ಕಾಗಿ ಹತ್ತು ಲಕ್ಷ ರೂಪಾಯಿ ಅನುದಾನ ನೀಡುವ ಭರವಸೆ. ಅತ್ಯಂತ ದೂರಗಾಮಿ ಯೋಜನೆಯಿದು. ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸುವ ದೃಷಿಯಿಂದಲೂ ಮಹತ್ವದ ತೀರ್ಮಾನ. ಗ್ರಾಮ ಹೋಬಳಿ ಮಟ್ಟದಲ್ಲಿ ಸಕ್ರಿಯವಾಗುತ್ತಿರುವ ಆರೆಸ್ಸೆಸ್‌ನ ವಿವಿಧ ಸಂಘಟನೆಗಳು ಯುವ ಸಮೂಹವನ್ನು ಸೆಳೆದು ಕೋಮು ದ್ವೇಷದ ಕಾಲಾಳುಗಳನ್ನಾಗಿಸುತ್ತಿದೆ. ಇಂತಹ ಸಂಕೀರ್ಣ ಸಂದರ್ಭದಲ್ಲಿ ಪರ್ಯಾಯವಾಗಿ, ಕೋಮುವಾದಿ ಸಿದ್ದಾಂತದ ವಿರುದ್ಧ ಇರುವವರನ್ನು ಒಟ್ಟುಗೂಡಿಸಲು ಮತ್ತು ಜಾತ್ಯತೀತ ಸಾಂಸ್ಕೃತಿಕ ವಾತಾವರಣದ ಮೂಲಕ ಯುವಕರನ್ನು ಕೋಮುವಾದದ ಕಡೆಗೆ ಹೋಗದಂತೆ ತಡೆಯುವ ನಿಟ್ಟಿನಲ್ಲಿಯೂ ಇದೊಂದು ದಿಟ್ಟ ನಿರ್ಧಾರ. ಇಂತಹ ಒಂದು ಯೋಜನೆಯನ್ನು ಕೆಪಿಸಿಸಿ ಅಧ್ಯಕ್ಷರಾಗಿದ್ದೂ ಇಷ್ಟು ವರ್ಷ ಮಾಡದಿರುವುದು ಅಚ್ಚರಿ ಮೂಡಿಸಿದೆ. ವಾಸ್ತವದಲ್ಲಿ ಬ್ರಿಟಿಷರ ವಿರುದ್ಧ ಇಡೀ ದೇಶವನ್ನು ಸಂಘಟಿಸಿದ್ದ ಕಾಂಗ್ರೆಸ್ ಪಕ್ಷ ಇಷ್ಟು ಸುದೀರ್ಘ ಕಾಲ ದೇಶದಲ್ಲಿ ಆಡಳಿತ ನಡೆಸಿದ್ದರೂ ಇಂತಹ ಸಾಂಸ್ಕೃತಿಕ ಸಂಘಟನೆಯ ಮಹತ್ವ ಅರಿತಂತಿರಲಿಲ್ಲ. ಅರಿತಿದ್ದರೂ ಜಾರಿಗೆ ತಂದ ಉದಾಹರಣೆಗಳಿಲ್ಲ.
ಬಿಜೆಪಿ ವಿರುದ್ಧ ಆಕ್ರಮಣಕಾರಿ ರಾಜಕಾರಣದ ಸಾಮರ್ಥ್ಯವುಳ್ಳ ಚಾಣಕ್ಷ ರಾಜಕಾರಣಿ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಸುದೀರ್ಘ ಕಾಲ ಅಧಿಕಾರ ಹಿಡಿಯುವ ಯೋಜನೆಯ ನೀಲನಕ್ಷೆಯನ್ನು ಸಿದ್ಧ ಮಾಡಿಟ್ಟುಕೊಂಡಿರುವಂತೆ ಕಾಣುತ್ತಿದೆ. ಮೂರು ವರ್ಷಗಳಿಂದ ಕೇವಲ ಅಧಿಕಾರ ಹಸ್ತಾಂತರದ ಸುತ್ತಲೇ ಗಿರಕಿ ಹೊಡೆಯುತ್ತಲಿದ್ದು ಕಾಂಗ್ರೆಸ್ ಸರ್ಕಾರಕ್ಕೆ ಹೊಸ ಮುಖ್ಯಮಂತ್ರಿ, ಪಕ್ಷಕ್ಕೆ ಹೊಸ ಅಧ್ಯಕ್ಷರ ನೇಮಕ ಕಾರ್ಯಕರ್ತ ಶ್ರೇಣಿಯಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. 2028ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅಷ್ಟರಲ್ಲಿ ಆಡಳಿತ ವಿರೋಧಿ ಭಾವನೆಯನ್ನು ಮೆಟ್ಟಿ ನಿಂತು, ಕಾಂಗ್ರೆಸ್ ಪಕ್ಷಕ್ಕೆ ಮತ್ತೊಮ್ಮೆ ಗೆಲುವು ಗಳಿಸಿಕೊಡುವುದೇ ಅಲ್ಲದೆ ಕೋಮುವಾದವನ್ನು ಸೋಲಿಸುವ ದೊಡ್ಡ ಹೊಣೆ ಡಿ ಕೆ ಶಿವಕುಮಾರ್ ಮತ್ತು ಹೊಸ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಮೇಲಿದೆ. ಈ ಹೊಣೆಯ ಗಣನೀಯ ಪಾಲನ್ನು ಕೋಮುವಾದಿ ಶಕ್ತಿಗಳ ವಿರುದ್ಧ ನಿರಂತರ ಎತ್ತರದ ದನಿಯಲ್ಲಿ ಮಾತಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರ ಮೇಲಿದೆ. ಧರ್ಮದ ಆಧಾರದ ಮೇಲೆ ದ್ವೇಷವನ್ನು ಬಿತ್ತಿ ಸಮಾಜವನ್ನು ಒಡೆಯುತ್ತಿರುವ ಶಕ್ತಿಗಳನ್ನು ಮಟ್ಟ ಹಾಕಲೆಂದೇ ಖರ್ಗೆ ಅವರ ಕೈಗೆ ಗೃಹಖಾತೆ ಒಪ್ಪಿಸಿದಂತಿದೆ. ಈ ಕೆಲಸವನ್ನು ಅವರು ಅತ್ಯಂತ ನಿಷ್ಠುರವಾಗಿ ಮಾಡಬಲ್ಲರು. ಕಾನೂನಿನ ಸರಪಳಿಯ ಪರಿವೆಯೇ ಇಲ್ಲದಂತೆ ಮೆರೆಯುತ್ತಿರುವ ಈ ಶಕ್ತಿಗಳ ನಿಗ್ರಹ ಕಾಲದ ಅಗತ್ಯವಾಗಿದೆ.
ಮುಖ್ಯಮಂತ್ರಿಯವರು ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ತಾಲ್ಲೂಕು ಮಟ್ಟದಿಂದಲೇ ರೌಡಿಗಳ ನಿಗ್ರಹಕ್ಕೆ ಟಾಸ್ಕ್‌ಫೋರ್ಸ್ ರಚನೆಗೆ ಸೂಚನೆ ನೀಡಿರುವುದು ಕೂಡ ಒಂದು ಆಪ್ಯಾಯ ಅಚ್ಚರಿ. ಮುಖ್ಯಮಂತ್ರಿ ಅಷ್ಟಕ್ಕೇ ನಿಲ್ಲಿಸಿಲ್ಲ. ನಿಮ್ಮ ಆತ್ಮಸಾಕ್ಷಿಯ ಪ್ರಕಾರ ಕೆಲಸ ಮಾಡಿ, ಸಿಎಂ ಕಚೇರಿಯಿಂದ ಕರೆ ಬಂದರೂ ಮಣಿಯಬಾರದು. ಹೋಗುವಾಗ ದಾಖಲೆಯ ರಾಶಿ ಇಟ್ಟು ಹೋಗಿ ಎಂದು ಹೇಳಿವುದು ಭವಿಷ್ಯದಲ್ಲಿ ಸ್ವಚ್ಛ ಆಡಳಿತ ನೀಡುವ ಇಂಗಿತದಂತಿದೆ. ಆಡಿದ ಈ ಮಾತನ್ನು ನಡೆಸಿಕೊಡುವ ಹೊಣೆ ಅಧಿಕಾರಿಗಳ ಮೇಲಷ್ಟೇ ಇಲ್ಲ ಸಿಎಂ ಮೇಲೂ ಇದೆ. ಎಲ್ಲ ಸಚಿವರ ಮೇಲೂ ಇದೆ. ಚುನಾವಣೆಗೆ ಮುನ್ನ ಉಳಿದಿರುವ ಎರಡು ವರ್ಷಗಳ ಕಾಲ ತಾವು ನೀಡಬಹುದಾದ ಆಡಳಿತದ ಕುರಿತು ಹೊಸ ಮುಖ್ಯಮಂತ್ರಿ ಕುತೂಹಲ ಸೃಷ್ಟಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರ, ಸಮಾಜದಲ್ಲಿ ಸಾಮರಸ್ಯ ಕಾಪಾಡುವ ಉದ್ದೇಶದಿಂದ “ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ 2025” ಮಂಡನೆ ಮಾಡಿದ್ದರೂ ರಾಜ್ಯಪಾಲರು ಅಂಕಿತ ಹಾಕದೇ ಪರಿಶೀಲನೆಗಾಗಿ ರಾಷ್ಟ್ರಪತಿಗಳಿಗೆ ಕಳಿಸಿದ್ದಾರೆ. ಅದಕ್ಕೆ ಅಂಕಿತ ಪಡೆಯುವ ನಿಟ್ಟಿನಲ್ಲಿ ಡಿ ಕೆ ಸರ್ಕಾರ ಪ್ರಯತ್ನ ಮಾಡಬೇಕಿದೆ. ಅಷ್ಟೇ ಅಲ್ಲ ಕೋಮುದ್ವೇಷ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ, ಕಲ್ಲಡ್ಕ ಪ್ರಭಾಕರ ಭಟ್, ಹಲವು ಕ್ರಿಮಿನಲ್ ಪ್ರಕರಣಗಳ ಆರೋಪಿ ಪುನೀತ್ ಕೆರೆಹಳ್ಳಿ ತರಹದ ಸಮಾಜಘಾತುಕ ಶಕ್ತಿಗಳ ವಿರುದ್ಧದ ಪ್ರಕರಣಗಳಿಗೆ ಕೋರ್ಟ್ ತಡೆ ನೀಡಿದೆ. ಅವುಗಳ ತೆರವಿಗೆ ಸರ್ಕಾರ ಪ್ರಯತ್ನವನ್ನೇ ನಡೆಸಿಲ್ಲ. ಇದು ಕ್ರಿಮಿನಲ್ ಚಟುವಟಿಕೆ ಪುನರಾವರ್ತನೆಗೆ ಪ್ರೋತ್ಸಾಹ ನೀಡಿದಂತಾಗಿದೆ. ಕೋಮುವಾದವನ್ನು ಮಟ್ಟ ಹಾಕದೇ ಈ ನಾಡು ಸರ್ವ ಜನಾಂಗದ ಶಾಂತಿಯ ತೋಟವಾಗಲು ಸಾಧ್ಯವಿಲ್ಲ. ಆರೆಸ್ಸೆಸ್ ಬಗ್ಗೆ ಮೃದು ಧೋರಣೆ ಹೊಂದಿದಂತೆ ಕಂಡು ಬಂದಿರುವ ಡಿಕೆಶಿ, ಕೋಮುವಾದದ ನಿಗ್ರಹಕ್ಕೆ ಪಣ ತೊಡುವರೇ ಎಂಬ ಅನುಮಾನ ಜನರಲ್ಲಿದೆ. ಈ ಅನುಮಾನವನ್ನು ನಿವಾರಿಸುವಂತೆ ಅವರು ನಡೆದುಕೊಳ್ಳಬೇಕಿದೆ.
ಸಿದ್ದರಾಮಯ್ಯ ಅವರು ಅಧಿಕಾರ ಹಸ್ತಾಂತರ ಮಾಡುವಾಗ ತೋರಿದ ಮುತ್ಸದ್ದಿತನ, ಒಂದಿನತೂ ವಿಪಕ್ಷಗಳ ಬಾಯಿಗೆ ಆಹಾರವಾಗದಂತೆ ಇಬ್ಬರೂ ನಡೆದುಕೊಂಡ ರೀತಿ ಅಪರೂಪದ ಮಾದರಿಯಾಗಿದೆ. ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಹೈಕಮಾಂಡ್ ತೀರ್ಮಾನ ಪ್ರಕಟಿಸುವಾಗಲೂ ಇಬ್ಬರೂ ದೆಹಲಿಯಲ್ಲಿ ಜೊತೆಯಲ್ಲಿಯೇ ಇದ್ದರು. ಬೆಂಗಳೂರಿಗೆ ಬಂದು ತಮ್ಮ ರಾಜೀನಾಮೆ ತೀರ್ಮಾನ ಮಾಡುವ ಪ್ರೆಸ್‌ಮೀಟ್‌ನಲ್ಲೂ, ಲೋಕಭವನಕ್ಕೆ ತೆರಳಿ ರಾಜೀನಾಮೆ ಪತ್ರ ನೀಡುವಾಗಲೂ, ಆನಂತರ ಸಿಎಂ ಗೃಹಕಚೇರಿ ಕೃಷ್ಣದಲ್ಲಿ ನಡೆದ ಪ್ರೆಸ್ ಮೀಟ್‌ನಲ್ಲೂ ಜೊತೆ ಜೊತೆಗೇ ಇದ್ದು ಒಗ್ಗಟ್ಟಿನ ಸಂದೇಶ ರವಾನಿಸಿದ್ದಾರೆ. ಸಿದ್ದರಾಮಯ್ಯ ಅವರ ಪಾದ ಮುಟ್ಟಿ ಆಶೀರ್ವಾದ ಪಡೆದ ಡಿಕೆ ನಡೆ, ಅಧಿಕಾರ ವಹಿಸಿಕೊಂಡ ನಂತರ ಖಾತೆ ಹಂಚಿಕೆಯಲ್ಲೂ ಸಿದ್ದರಾಮಯ್ಯ ಅವವ ಸಲಹೆ ಪಡೆದಿರುವುದು ಡಿಕೆಯವರ ವ್ಯಕ್ತಿತ್ವಕ್ಕೆ ಮತ್ತಷ್ಟು ಮೆರುಗು ತಂದಿದೆ. ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ ಇಬ್ಬರೂ ಜೊತೆಯಾಗಿಯೇ ಪ್ರೆಸ್‌ಮೀಟ್ ಮಾಡುತ್ತಿದ್ದರು. ಹೊರಗೆ, ಮಾಧ್ಯಮಗಳಲ್ಲಿ ಕುರ್ಚಿ ಕದನದ ನಿರೂಪಣೆಗಳು ನಡೆಯುತ್ತಿದ್ದಾಗ, ಇಬ್ಬರೂ ವೇದಿಕೆಗಳಲ್ಲಿ ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಿದ್ದರು. ಡಿಕೆಯವರು ನಮ್ಮ ನಾಯಕ ಸಿದ್ದರಾಮಯ್ಯ ಎಂದು ಪದೇ ಪದೇ ಹೇಳುತ್ತಿದ್ದರು. ಸಿಎಂ ಆಗುವ ತನ್ನ ಆಕಾಂಕ್ಷೆಗೆ ಹೈಕಮಾಂಡ್ ಮಟ್ಟದಲ್ಲಿ ನಿರಂತರ ಪ್ರಯತ್ನ ನಡೆಸುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮುನಿಸು, ಮಾತಿನ ಚಕಮಕಿ ನಡೆಸದೇ ಬಹಳ ಮುತ್ಸದ್ದಿತನದಿಂದ ನಡೆದುಕೊಂಡಿದ್ದಾರೆ. ಈಗ ಅವರ ಕನಸು ನನಸಾಗಿದೆ. ತಮ್ಮ ವರ್ಚಸ್ಸನ್ನು ಬದಲಿಸಿಕೊಳ್ಳುವ ಈ ಕ್ರಿಯೆಯನ್ನು ಅವರು ಜಾರಿಯಲ್ಲಿಟ್ಟು, ಅತ್ಯುತ್ತಮ ಆಡಳಿತ ನೀಡಿ ಮತ್ತೊಂದು ಮಾದರಿಯನ್ನು ಸ್ಥಾಪಿಸಬೇಕು. ಯಶಸ್ವೀ ‘ವ್ಯಾಪಾರೋದ್ಯಮಿ’ ಎಂದು ಹೆಸರು ಗಳಿಸಿರುವ ಶಿವಕುಮಾರ್ ಅವರು, ತಮ್ಮ ವ್ಯಕ್ತಿಗತ ಹಿತಾಸಕ್ತಿಗಳನ್ನು ರಾಜ್ಯದ ಜನರ ಕಲ್ಯಾಣಕ್ಕಾಗಿ ಪಕ್ಕಕ್ಕೆ ಇರಿಸಬೇಕು.





