ಸರ್ಕಾರಕ್ಕೆ ತಾಯಿ ಹೃದಯ ಇರಬೇಕು ಎಂದು ಹೇಳುತ್ತಾರೆ. ಅಳುತ್ತಿರುವ ಮಕ್ಕಳ ಅಹವಾಲು ಕೇಳಿಸಿಕೊಳ್ಳುವ ವ್ಯವಧಾನ ತಾಯಿ ಸ್ಥಾನದಲ್ಲಿರುವ ಸರ್ಕಾರಕ್ಕೆ ಬೇಕು. ಆಶಾ ಕಾರ್ಯಕರ್ತರ ಬೇಡಿಕೆಯನ್ನು ಈಡೇರಿಸುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು. ಕುಂಟು ನೆಪ ಹೇಳುವುದನ್ನು ನಿಲ್ಲಿಸಬೇಕು. ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಬೇಕಾಬಿಟ್ಟಿ ಹೇಳಿಕೆ ನೀಡಿದರೆ ಸಮಸ್ಯೆ ಬಗೆಹರಿಯುವುದು ಸಾಧ್ಯವಿಲ್ಲ. ಈಗಾಗಲೇ ಫ್ರೀಡಂ ಪಾರ್ಕ್ ಗುಲಾಬಿ ಬಣ್ಣಕ್ಕೆ ತಿರುಗಿ ಎರಡು ವಾರ ತುಂಬಿದೆ. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ತಾಯಿಹೃದಯದಿಂದ ವರ್ತಿಸಬೇಕಿದೆ.
ಎರಡು ವಾರಗಳಿಂದ ಮನೆಮಠ ಬಿಟ್ಟು ಪುಟ್ಟ ಮಕ್ಕಳನ್ನು ಜೊತೆಗಿಟ್ಟುಕೊಂಡು ಫ್ರೀಡಂ ಪಾರ್ಕಿನ ನೆಲದಲ್ಲಿ ಕೂತ ಆಶಾ ಕಾರ್ಯಕರ್ತೆಯರ ಅಳಲನ್ನು ಕೇಳಿಸಿಕೊಳ್ಳದೇ, ಬೇಡಿಕೆಯನ್ನು ಈಡೇರಿಸದೇ ಅವರ ವಿರುದ್ಧವೇ ನಿರ್ಲಕ್ಷ್ಯದ ಕೇವಲವಾದ ಮಾತುಗಳನ್ನಾಡುವುದು ಕಾಂಗ್ರೆಸ್ ಸರ್ಕಾರಕ್ಕೆ ಖಂಡಿತಾ ಶೋಭೆಯಲ್ಲ. ಸಚಿವ ನರೇಂದ್ರಸ್ವಾಮಿ, “ಆಶಾ ಕಾರ್ಯಕರ್ತರು ಕಂಠೀಹಾರ ಕೇಳಿದರೆ ಕೊಡಿಸಲಾಗುತ್ತಾ” ಎಂದು ಕೇಳಿದ್ದಾರೆ. ಅದೆಷ್ಟು ಅಸೂಕ್ಷ್ಮ ಹೇಳಿಕೆ ! ಆಶಾ ಕಾರ್ಯಕರ್ತೆಯರು ಕನಿಷ್ಠ ಮಾಸಿಕ ಹದಿನೈದು ಸಾವಿರ ಗೌರವಧನ ಕೊಡಬೇಕು ಎಂದು ಕೇಳುವುದು ಕಂಠೀಹಾರ ಕೇಳಿದಷ್ಟು ದುಬಾರಿಯೇ? ಇನ್ನು ಆರೋಗ್ಯ ಸಚಿವ ಯು ಟಿ ಖಾದರ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, “ಆಶಾ ಕಾರ್ಯಕರ್ತರು ಇಲ್ಲದೆಯೂ ಆರೋಗ್ಯ ಕ್ಷೇತ್ರ ನಡೆಯುತ್ತಿದೆ. ಹತ್ತು ದಿನಗಳಿಂದ ಕೆಲಸ ಮಾಡದೇ ಮಕ್ಕಳನ್ನು ಕರೆತಂದು ಪ್ರತಿಭಟನೆ ಮಾಡುತ್ತಿರುವುದು ತಪ್ಪು” ಎಂದು ಹೇಳಿರುವುದು ಉಡಾಫೆತನದ ಪರಮಾವಧಿ. ಮಂತ್ರಿಗಳಿಲ್ಲದೆಯೂ ಆಸ್ಪತ್ರೆಗಳು ನಡೆಯುತ್ತವೆಯಲ್ಲವೇ?
ಎಲ್ಲ ಸರ್ಕಾರಗಳೂ ಆಗಾಗ ಶಾಸಕರು ಮತ್ತು ಸಂಸದರ ವೇತನ ಮತ್ತು ಭತ್ಯೆಯನ್ನು ಹೆಚ್ಚಿಸುತ್ತಿವೆ. ಇದಕ್ಕೆ ಯಾವ ಪಕ್ಷಗಳೂ ವಿರೋಧ ವ್ಯಕ್ತಪಡಿಸದೇ ಸರ್ವಾನುಮತದಿಂದ ಬೆಂಬಲಿಸುತ್ತಿವೆ. ತಿಂಗಳಿಗೆ ರೂ.15 ಸಾವಿರ ಕೊಡಬೇಕೆಂಬ ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನ ಬೇಡಿಕೆಯನ್ನು ಕಂಠೀಹಾರದ ಬೇಡಿಕೆಗೆ ಹೋಲಿಸುತ್ತಿರುವವರು, ಶಾಸಕರು- ಮಂತ್ರಿಗಳ ವೇತನ, ಭತ್ಯೆಗಳನ್ನು ಬೇಕು ಬೇಕೆಂದಾಗಲೆಲ್ಲ ಹೆಚ್ಚಿಸಿಕೊಳ್ಳುವುದು ಸಾಧುವೇ? ಜನರ ತೆರಿಗೆ ಹಣದಲ್ಲಿ ಆಡಳಿತ ನಡೆಯುತ್ತದೆ. ಜನಪ್ರತಿನಿಧಿಗಳು ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಅಧಿಕಾರ ಕಳೆದುಕೊಂಡ ನಂತರ ಪಿಂಚಣಿಯನ್ನೂ ಪಡೆಯುತ್ತಾರೆ. ಇಂತಹ ಅಧಿಕಾರಸ್ಥರು, ಆರೋಗ್ಯ ಕಾರ್ಯಕರ್ತರಾದ ಆಶಾಗಳು ಮಾಸಿಕ ಹದಿನೈದು ಸಾವಿರ ರೂಪಾಯಿ ಗೌರವ ಧನದ ಬೇಡಿಕೆಯನ್ನು ಈಡೇರಿಸುವ ಮಾರ್ಗೋಪಾಯಗಳ ಬಗ್ಗೆ ಮಾತನಾಡಬೇಕೇ ವಿನಃ ಅವರನ್ನು ಅಗೌರವಿಸುವ, ನಿಂದಿಸುವ ಮಾತುಗಳನ್ನಾಡುವುದನ್ನು ಒಪ್ಪಲು ಸಾಧ್ಯವಿಲ್ಲ. ಅಷ್ಟೊಂದು ಅಸೂಕ್ಷ್ಮದಿಂದ ವರ್ತಿಸಿದರೆ ಮುಂದಿನ ಚುನಾವಣೆಗಳಲ್ಲಿ ಈ ತಾಯಂದಿರೇ ಸರಿಯಾದ ಪಾಠ ಕಲಿಸಿಯಾರು ಎಂಬ ಎಚ್ಚರವೂ ಅಗತ್ಯ.
ಈ ದೇಶದಲ್ಲಿ ಅಪೌಷ್ಟಿಕತೆ ನಿರ್ಮೂಲನೆಯಾಗಬೇಕು, ನವಜಾತ ಶಿಶುಮರಣ ತಪ್ಪಬೇಕು, ಬಾಣಂತಿಯರ ಸಾವುಗಳನ್ನು ತಪ್ಪಿಸಬೇಕು ಎಂಬ ಘನ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರವೇ ಅಂಗನವಾಡಿ, ಆಶಾರಂತಹ ಕೋಟ್ಯಂತರ ಆರೋಗ್ಯ ಸೇನಾನಿಗಳನ್ನು ಈ ದೇಶಕ್ಕೆ ಕೊಟ್ಟಿದೆ. ಆದರೆ, ದೇಶದ ಪ್ರತಿಹಳ್ಳಿಯ ಮೂಲೆ ಮೂಲೆಗಳಲ್ಲಿ ಜನರ ಆರೋಗ್ಯ ಕಾಳಜಿ ಮಾಡುವ ಈ ಬಡ ಮಹಿಳೆಯರನ್ನು ಕಾರ್ಮಿಕ ಕಾಯ್ದೆಯಡಿ ಪರಿಗಣಿಸದೇ ಕೇವಲ ಗೌರವ ಧನ ಎಂಬ ಹೆಸರಿನಲ್ಲಿ ಅಗೌರವವಾಗಿ ನಡೆಸಿಕೊಳ್ಳುತ್ತಾ ಬರಲಾಗಿದೆ. ಕೊಡುವ ಗೌರವಧನ ಅವರ ಕೆಲಸವನ್ನು ಗೌರವಿಸುವಂತಿದೆಯೇ, ಅದೂ ಇಲ್ಲ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯಾಗಿ, ಮನಸೋ ಇಚ್ಛೆ ಎಂಬಂತೆ ನಿಗದಿ ಮಾಡಲಾಗಿದೆ. ಅವರೆಲ್ಲರೂ ಚಿಕ್ಕಾಸು ಹೆಚ್ಚಿಸಿಕೊಳ್ಳಲು ಕೂಡ ಆರಂಭದಿಂದ ಇಲ್ಲಿಯವರೆಗೂ ಪ್ರತಿ ವರ್ಷ ಹೋರಾಟ, ಧರಣಿ ನಡೆಸಬೇಕಾಗಿ ಬಂದಿರುವುದು ದುರದೃಷ್ಟಕರ.
2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಆಶಾ ಕಾರ್ಯಕರ್ತರ ಗೌರವಧನವನ್ನು ಹತ್ತು ಸಾವಿರ ರೂಪಾಯಿಗಳಿಗೆ ಹೆಚ್ಚಿಸುವ ಗ್ಯಾರಂಟಿಯನ್ನು ಕಾಂಗ್ರೆಸ್ ನೀಡಿತ್ತು. ಮಹಿಳೆಯರ ಉಚಿತ ಪ್ರಯಾಣ ಯೋಜನೆ ʼಶಕ್ತಿʼ ಯಾವುದೇ ಸಮಸ್ಯೆ ಇಲ್ಲದೇ ಜಾರಿಯಲ್ಲಿದೆ. ಗೃಹ ಲಕ್ಷ್ಮಿ ಯೋಜನೆ ಅತಿ ಹೆಚ್ಚು ವಿವಾದಕ್ಕೆ ಒಳಗಾಗಿಯೂ ಪೂರ್ಣ ಕಂತುಗಳು ಇತ್ತೀಚೆಗಷ್ಟೇ ಮಹಿಳೆಯರ ಖಾತೆಗಳಿಗೆ ಜಮೆ ಆಗಿದೆ. ಈ ಎರಡೂ ಯೋಜನೆಗಳ ಫಲಾನುಭವಿಗಳಲ್ಲಿ ಈ ಗೌರವ ಧನಕ್ಕಾಗಿ ದುಡಿಯುವ ವರ್ಗವೂ ಸೇರಿದೆ. ಹಾಗೆಂದು ಆಶಾ ಕಾರ್ಯಕರ್ತೆಯರಿಗೆ ಕೊಟ್ಟ ಭರವಸೆ ಈಡೇರಿಸದಿರಲು ಇದು ಕಾರಣವಾಗಬಾರದು. ಅಂತಹ ಬದ್ಧತೆ ಕಾಂಗ್ರೆಸ್ ತೋರಬೇಕಿದೆ. ಅಂಗನವಾಡಿ, ಆಶಾರಂತಹ ಗೌರವಧನಕ್ಕಾಗಿ ದುಡಿಯುವ ವರ್ಗ ಕನಿಷ್ಠ ವೇತನವಿಲ್ಲದೇ ಗರಿಷ್ಠ ಕೆಲಸ ಮಾಡಬೇಕು. ಅದರಲ್ಲೂ ದೇಶದಲ್ಲಿ ಆರೋಗ್ಯ ತುರ್ತುಸ್ಥಿತಿಗಳು ಬಂದಾಗ ಆಶಾ ಕಾರ್ಯಕರ್ತೆಯರು ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದರು ಎಂಬುದನ್ನು ದೇಶವೇ ನೋಡಿದೆ. ಇಡೀ ದೇಶವೇ ಲಾಕ್ಡೌನ್ ಆಗಿದ್ದಾಗ, ಜನ ಕೋವಿಡ್ನಿಂದ ತತ್ತರಿಸುತ್ತಿದ್ದಾಗ ಈ ಆಶಾ ಅಕ್ಕಂದಿರುವ ತಮ್ಮ ಮತ್ತು ಕುಟುಂಬದ ಆರೋಗ್ಯ ಕಾಳಜಿಯ ಜೊತೆಗೆ ಮನೆ ಮನೆ ಭೇಟಿ ನೀಡುವ ಮೂಲಕ ಸೋಂಕಿತರ ಮಾಹಿತಿ ಸಂಗ್ರಹ, ಆರೋಗ್ಯ ಕಾಳಜಿಯ ಸಲಹೆಗಳನ್ನು ಕೊಡುವ ಕೆಲಸ ಮಾಡಿದ್ದರು. ಸರ್ಕಾರಿ ವೈದ್ಯರು, ದಾದಿಯರು ಕರ್ತವ್ಯದಲ್ಲಿದ್ದಾಗ ಕೊರೋನಾ ಸೋಂಕಿನಿಂದ ಮೃತಪಟ್ಟರೆ ಅಂತಹ ಕುಟುಂಬಗಳಿಗೆ ಒಂದು ಕೋಟಿ ಪರಿಹಾರ ನೀಡುವ ಬಗ್ಗೆ ಮೋದಿ ಸರ್ಕಾರ ಘೋಷಣೆ ಮಾಡಿತ್ತು. ಆದರೆ, ನೇರವಾಗಿ ಸೋಂಕಿತರ ಮನೆಗಳಿಗೆ ಭೇಟಿ ನೀಡುವ, ಕಫ ಸಂಗ್ರಹಿಸುವ ಕೆಲಸ ಮಾಡಿದ್ದ ಆಶಾ ಕಾರ್ಯಕರ್ತರಿಗೆ ಬಿಡಿಗಾಸೂ ಸಿಗಲಿಲ್ಲ.
ನರೇದ್ರ ಮೋದಿಯವರು ಅಧಿಕಾರ ಹಿಡಿದ ನಂತರ, ಅಂಗನವಾಡಿ, ಆಶಾ ಯೋಜನೆಗಳಿಗೆ ಕೊಡುವ ತನ್ನ ಪಾಲನ್ನು ಕೇಂದ್ರ ಸರ್ಕಾರ ಕಡಿಮೆ ಮಾಡುತ್ತಲೇ ಬಂದಿದೆ. ಇದರ ಪರಿಣಾಮವಾಗಿ ರಾಜ್ಯ ಸರ್ಕಾರಗಳ ಮೇಲೆ ಹೊರೆ ಹೆಚ್ಚಾಗಿದೆ. ಅತ್ತ ಯೋಜನೆಯನ್ನು ನಿಲ್ಲಿಸಲೂ ಆಗದೇ, ಸುಸೂತ್ರವಾಗಿ ನಡೆಸಲೂ ಆಗದೆ ರಾಜ್ಯಸರ್ಕಾರಗಳು ಅಡಕತ್ತರಿಗೆ ಸಿಲುಕಿರುವುದು ದಿಟ. ರಾಜ್ಯದಿಂದ ಲೋಕಸಭೆಗೆ ಹೋದ ಬಿಜೆಪಿ ಸಂಸದರು ಮಂತ್ರಿಗಳಾಗಿಯೂ ಅಧಿಕಾರ ಅನುಭವಿಸುತ್ತಿದ್ದಾರೆ. ಆದರೆ ಅವರಾರೂ ರಾಜ್ಯದ ಜನರ ಪರವಾಗಿ ಧ್ವನಿ ಎತ್ತುತ್ತಿಲ್ಲ. ಮೋದಿ ಸರ್ಕಾರದಿಂದ ರಾಜ್ಯಕ್ಕೆ ಅನುದಾನ ಹಂಚಿಕೆ ತಾರತಮ್ಯ, ಜಿಎಸ್ಟಿ ಪಾಲು ಹಂಚಿಕೆಯಲ್ಲಿ ಮೋಸ, ಬರ ಪರಿಹಾರದಲ್ಲೂ ಮಲತಾಯಿ ಧೋರಣೆ… ಇವೆಲ್ಲವನ್ನೂ ನೋಡಿಯೂ ಕೇಂದ್ರ ಸರ್ಕಾರ ಯಾವ ಅನ್ಯಾಯವನ್ನೂ ಎಸಗಿಲ್ಲ ಎಂದು ಹೇಳುತ್ತಾ ರಾಜ್ಯ ಸರ್ಕಾರವನ್ನೇ ಆರೋಪಿಸುತ್ತಾ, ಕಾಲಹರಣ ಮಾಡುವುದು ರಾಜ್ಯದ ಜನರಿಗೆ ಎಸಗುತ್ತಿರುವ ದ್ರೋಹ. ಇಂತಹ ರಾಜಕಾರಣಿಗಳಿಗೆ ಚುನಾವಣೆಯ ಸಮಯದಲ್ಲಿ ಜನರೇ ಬುದ್ದಿ ಕಲಿಸಬೇಕಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಬಡ ಜನರ ಅನುಕೂಲಕ್ಕಾಗಿ ಕೊಟ್ಟಿದೆ. ಅದು ಮಹಿಳೆಯರ ಸಬಲೀಕರಣದಕ್ಕೆ ದೊಡ್ಡ ಕೊಡುಗೆಯಾಗಿದೆ. ಆದರೆ, ಆಶಾ ಕಾರ್ಯಕರ್ತರಿಗೆ ಕೊಟ್ಟ ಭರವಸೆಯನ್ನು ಗ್ಯಾರಂಟಿ ಯೋಜನೆಯ ಹೆಸರಿನಲ್ಲಿ ಮರೆಯಬಾರದು. ರಾಜ್ಯದಲ್ಲಿ ಬರ ಇದೆ. ರೈತರ ಸಂಕಷ್ಟಗಳಿಗೂ ಸ್ಪಂದಿಸಬೇಕಿದೆ. ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ ಎಂದು ಹೇಳುತ್ತಾ ಅನಗತ್ಯ ಉತ್ಸವ, ಹಬ್ಬಗಳನ್ನು ಮಾಡುವುದನ್ನು ನಿಲ್ಲಿಸಬೇಕು. ಈ ವರ್ಷ ವಿಶ್ವಕನ್ನಡ ಸಮ್ಮೇಳನ ಮಾಡುವುದಾಗಿ ಸರ್ಕಾರ ಘೋಷಿಸಿದೆ. ದುಂದುವೆಚ್ಚದ ಕಾರ್ಯಕ್ರಮಗಳನ್ನು ಸರ್ಕಾರ ನಡೆಸುವುದು ಸರಿಯಲ್ಲ. ಸರ್ಕಾರಕ್ಕೆ ತಾಯಿ ಹೃದಯ ಇರಬೇಕು ಎಂದು ಹೇಳುತ್ತಾರೆ. ಅಳುತ್ತಿರುವ ಮಕ್ಕಳ ಅಹವಾಲು ಕೇಳಿಸಿಕೊಳ್ಳುವ ವ್ಯವಧಾನ ತಾಯಿ ಸ್ಥಾನದಲ್ಲಿರುವ ಸರ್ಕಾರಕ್ಕೆ ಬೇಕು. ಆಶಾ ಕಾರ್ಯಕರ್ತರ ಬೇಡಿಕೆಯನ್ನು ಈಡೇರಿಸುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು. ಕುಂಟು ನೆಪ ಹೇಳುವುದನ್ನು ನಿಲ್ಲಿಸಬೇಕು. ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಬೇಕಾಬಿಟ್ಟಿ ಹೇಳಿಕೆ ಸಮಸ್ಯೆ ಬಗೆಹರಿಯುವುದು ಸಾಧ್ಯವಿಲ್ಲ. ಈಗಾಗಲೇ ಫ್ರೀಡಂ ಪಾರ್ಕ್ ಗುಲಾಬಿ ಬಣ್ಣಕ್ಕೆ ತಿರುಗಿ ಎರಡು ವಾರ ತುಂಬಿದೆ. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ತಾಯಿಹೃದಯದಿಂದ ವರ್ತಿಸಬೇಕಿದೆ.



