ನಾಡಿನ ಸಂಪತ್ತು, ಸಂಪನ್ಮೂಲ, ಅಧಿಕಾರ, ಅವಕಾಶಗಳ ಸಿಂಹಪಾಲನ್ನು ಇಲ್ಲಿಯವರೆಗೆ ನಿರಂತರ ಅನುಭವಿಸಿಕೊಂಡು ಬಂದಿರುವ ಬಲಿಷ್ಠ ಸಮುದಾಯಗಳಿಗೆ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಅಭದ್ರತೆ ಹುಟ್ಟಿಸಿರಬಹುದು. ಅಧಿಕಾರದ ಮೇಲಿನ ಹಿಡಿತ ಸಡಿಲವಾದೀತು ಎಂಬ ಅಳುಕು ಕಾಡಿರಬಹುದು
ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಎಸ್ ಕಾಂತರಾಜ್ ನೇತೃತ್ವದ ಸಮಿತಿ ಜಾತಿ ಜನಗಣತಿ– ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿತ್ತು. ಈ ವರದಿ ಮಂಡನೆಗೆ ಮುಂಚೆಯೇ ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿ ಪೂರ್ಣಗೊಂಡಿತ್ತು.
ಆ ನಂತರ ಅಧಿಕಾರ ಹಿಡಿದ ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರ 14 ತಿಂಗಳಲ್ಲೇ ಉರುಳಿ ಬಿತ್ತು. ಉಳಿದ ಅವಧಿಯನ್ನು ಪೂರೈಸಿದ್ದು ಬಿಜೆಪಿ ಸರ್ಕಾರ. ಈ ಎರಡೂ ಸರ್ಕಾರಗಳು ಜಾತಿಜನಗಣತಿಯ ವರದಿಯನ್ನು ಪಡೆಯುವ ಗೋಜಿಗೆ ಹೋಗಿರಲಿಲ್ಲ.
ಇದೀಗ ಪುನಃ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಸರ್ಕಾರ ಕಾಂತರಾಜ್ ವರದಿಯನ್ನು ಅಂಗೀಕರಿಸುವುದಾಗಿ ಸಾರಿದೆ. ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ನವೆಂಬರ್ ಅಂತ್ಯದೊಳಗೆ ಪರಿಷ್ಕೃತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ ಪ್ರಕಟಿಸಿದ್ದಾರೆ. ಈ ಮಧ್ಯೆ ಬಿಹಾರದಲ್ಲಿ ಎರಡೇ ವರ್ಷಗಳಲ್ಲಿ ಜಾತಿ ಜನಗಣತಿಯನ್ನು ಪೂರ್ಣಗೊಳಿಸಿ ನಿತೀಶ್ ಕುಮಾರ್ ಸರ್ಕಾರ ಆ ವರದಿಯನ್ನು ಸ್ವೀಕರಿಸಿದ ನಂತರ ಜಾತಿ ಜನಗಣತಿಯ ಕೂಗಿಗೆ ಹೆಚ್ಚಿನ ಬಲ ಸಿಕ್ಕಿದೆ. ಖರ್ಗೆ–ರಾಹುಲ್–ಸೋನಿಯಾ ನೇತೃತ್ವದ ಕಾಂಗ್ರೆಸ್ ಪಕ್ಷ ಜಾತಿ ಜನಗಣತಿಯನ್ನು ದೊಡ್ಡ ರೀತಿಯಲ್ಲಿ ಬೆಂಬಲಿಸಿದೆ. ಕರ್ನಾಟಕದಲ್ಲಿಯೂ ಕಾಂತರಾಜ್ ವರದಿ ಜಾರಿಗೆ ಒತ್ತಡ ಹೆಚ್ಚಿದೆ. ಆದರೆ, ಕಾಂಗ್ರೆಸ್ ಸರ್ಕಾರದಲ್ಲಿರುವ ಬಲಿಷ್ಠ ಸಮುದಾಯಗಳ ನಾಯಕರೇ ವರದಿ ಬಿಡುಗಡೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಲಿಂಗಾಯತ, ಒಕ್ಕಲಿಗ ಸಮುದಾದಯಗಳಿಗೆ ಈ ವರದಿ ಬಹಿರಂಗವಾಗುವುದು ಇಷ್ಟವಿಲ್ಲ.
ಗುರುವಾರ (ನವೆಂಬರ್2 ) ರಾಜ್ಯ ಒಕ್ಕಲಿಗರ ಸಂಘ ಆದಿಚುಂಚನಗಿರಿ ಮಠದಲ್ಲಿ ಈ ಕುರಿತು ಸಭೆ ನಡೆಯಿತು. ಮೂರೂ ಮುಖ್ಯ ರಾಜಕೀಯ ಪಕ್ಷಗಳ ಒಕ್ಕಲಿಗ ಶಾಸಕರು ಸೇರಿ ಈ ವರದಿಯನ್ನು ವಿರೋಧಿಸುವ ತೀರ್ಮಾನ ಮಾಡಿದ್ದಾರೆ. ಸಭೆಯಲ್ಲಿ ನಿರ್ಮಲಾನಂದ ಸ್ವಾಮೀಜಿ, ಪಟ್ಟ ನಾಯಕನಹಳ್ಳಿ ಮಠದ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಜೊತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸಚಿವ ಚಲುವರಾಯ ಸ್ವಾಮಿ ಕೂಡಾ ಹಾಜರಿದ್ದು ಒಪ್ಪಿಗೆ ನೀಡಿರುವುದು ದುರದೃಷ್ಟಕರ ನಡವಳಿಕೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಒಕ್ಕಲಿಗರ ಮತವಷ್ಟೇ ಕಾರಣವೇ? ಉಳಿದ ಸಮುದಾಯಗಳು ಕಾಂಗ್ರೆಸ್‌ಗೆ ಮತ ಹಾಕಿಲ್ಲವೇ? ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಬಲಿಷ್ಠವಾಗಿರುವ ಜನಾಂಗಗಳ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ಒಂದು ವೇಳೆ ಕಾಂತರಾಜ್ ವರದಿಯನ್ನು ತಿರಸ್ಕರಿಸುವ ತೀರ್ಮಾನಕ್ಕೆ ಬಂದರೆ ಅದು ‘ಅಹಿಂದ’ ಜನವರ್ಗಗಳಿಗೆ ಬಗೆಯುವ ಘೋರ ಅನ್ಯಾಯವಾಗಲಿದೆ.
“ವರದಿ ಸಿದ್ದಪಡಿಸುವಲ್ಲಿ ಲೋಪವಾಗಿದೆ” ಎಂದು ಸ್ವಾಮೀಜಿಗಳು ಹೇಳಿದ್ದಾರೆ. ವರದಿ ಬಿಡುಗಡೆಯಾಗದೇ ಅದರಲ್ಲಿರುವ ಲೋಪಗಳು ಯಾರಿಗಾದರೂ ಹೇಗೆ ತಿಳಿಯುತ್ತದೆ? ಅಷ್ಟೇ ಅಲ್ಲ “ಜಾತಿ ಜನಗಣತಿ ವರದಿಯನ್ನು ಅನುಷ್ಠಾನ ಮಾಡುವ ಮುನ್ನ ನಮ್ಮ ಅಭಿಪ್ರಾಯ ಕೇಳಬೇಕು” ಎಂದು ನಂಜಾವಧೂತ ಸ್ವಾಮಿಗಳು ಹೇಳಿದ್ದಾರೆ. ಅಷ್ಟಕ್ಕೂ ಸರ್ಕಾರದ ಆಡಳಿತದಲ್ಲಿ ಮೂಗು ತೂರಿಸಲು ಇವರೆಲ್ಲ ಯಾರು? ತಾವು ಧಾರ್ಮಿಕ ಮುಖಂಡರೋ ಅಥವಾ ರಾಜಕೀಯ ಮುಖಂಡರೋ ಎಂಬುದನ್ನು ಸ್ಪಷ್ಟಪಡಿಸಬೇಕು.
ನಾಡಿನ ಸಂಪತ್ತು, ಸಂಪನ್ಮೂಲ, ಅಧಿಕಾರ, ಅವಕಾಶಗಳ ಸಿಂಹಪಾಲನ್ನು ಇಲ್ಲಿಯವರೆಗೆ ನಿರಂತರ ಅನುಭವಿಸಿಕೊಂಡು ಬಂದಿರುವ ಬಲಿಷ್ಠ ಸಮುದಾಯಗಳಿಗೆ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಅಭದ್ರತೆ ಹುಟ್ಟಿಸಿರಬಹುದು. ಅಧಿಕಾರದ ಮೇಲಿನ ಹಿಡಿತ ಸಡಿಲವಾದೀತು ಎಂಬ ಅಳುಕು ಕಾಡಿರಬಹುದು. ಆದರೆ ಅಹಿಂದ ವರ್ಗಗಳು ಶತಮಾನಗಳಿಂದ ಎಲ್ಲ ಅವಕಾಶಗಳಿಂದ ವಂಚಿತರಾಗಿರುವವರು. ಬಾಯಿ ಸತ್ತ ಈ ಬಡ ಸಮುದಾಯಗಳಿಗೆ ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಸಾಮಾಜಿಕ ರಾಜಕೀಯ ಆರ್ಥಿಕ ನ್ಯಾಯ ಸಿಗುವುದು ಯಾವ ಕಾಲಕ್ಕೆ?
ದೇಶದ ಅಹಿಂದ ವರ್ಗಗಳು ಈಗಾಗಲೇ ಮನುವಾದಿ ಫ್ಯಾಸಿಸ್ಟರ ಅಟ್ಟಹಾಸದಲ್ಲಿ ನಲುಗಿ ಹೋಗಿವೆ. ಆಳುವವರ ಕುಮ್ಮಕ್ಕಿನಿಂದ ಮೀಸಲಾತಿ ವಿರೋಧಿಗಳ ಪಡೆ ನೂರ್ಮಡಿ ಬೆಳೆಯುತ್ತಿದೆ. ಸಂವಿಧಾನವನ್ನು ಬದಲಾಯಿಸುವ ಬೆದರಿಕೆ ಬಾಗಿಲು ಬಡಿಯುತ್ತಿದೆ. ಈ ತಬ್ಬಲಿ ವರ್ಗಗಳು ದಿಕ್ಕೇ ತೋಚದ ಅಸಹಾಯಕ ಸ್ಥಿತಿ ತಲುಪಿವೆ. ಇಂತಹ ಅಂಧಕಾರದ ಸ್ಥಿತಿಯಲ್ಲಿ ಜಾತಿ ಜನಗಣತಿ ಎಂಬ ಅರೆತೆರೆದ ಆಶಾವಾದದ ಬೆಳಕಿಂಡಿಯನ್ನೂ ಮುಚ್ಚಿಹಾಕುವುದು ಪರಮ ಅನ್ಯಾಯ.
ಕಾಂಗ್ರೆಸ್ ಹೈ ಕಮಾಂಡ್ ದೇಶದಲ್ಲೆಡೆ ಜಾತಿ ಜನಗಣತಿ ಮಾಡಬೇಕು ಎಂಬ ವಾದವನ್ನು ಬಲವಾಗಿ ಮಂಡಿಸಿದೆ. ಅಧಿಕಾರಕ್ಕೆ ಬಂದರೆ ಈ ಆಶ್ವಾಸನೆಯನ್ನು ಜಾರಿಗೆ ತರುವುದಾಗಿ ರಾಹುಲ್ ಗಾಂಧಿ ವಚನ ನೀಡಿದ್ದಾರೆ. ಕಾಂತರಾಜ್ ವರದಿಯನ್ನು ಅಂಗೀಕರಿಸುವ ಸಿದ್ದರಾಮಯ್ಯ ಧೈರ್ಯದ ಮೂಲ ಇದೇ ಆಗಿದೆ. ಈ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಮಠದಲ್ಲಿ ನಡೆದ ಸಭೆಯ ನಿರ್ಧಾರವನ್ನು ಸಾಮಾಜಿಕ ನ್ಯಾಯಪರರು ಒಪ್ಪುವುದು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದ ಒಕ್ಕಲಿಗ ಸಚಿವರು ಶಾಸಕರು ತಮ್ಮದೇ ಪಕ್ಷದ ಹೈಕಮಾಂಡ್ ವಿರುದ್ಧ ಬಹಿರಂಗ ಬಂಡಾಯ ಸಾರಿರುವುದು ಮಾತ್ರವಲ್ಲ, ಸಾಮಾಜಿಕ ನ್ಯಾಯವನ್ನೂ ಧಿಕ್ಕರಿಸಿದ್ದಾರೆ.
ಈ ಎಲ್ಲಾ ಅಡತಡೆಗಳನ್ನು ಮೀರಿ ಈಗಾಗಲೆ ಸಾರಿರುವ ತಮ್ಮ ನಿಲುವಿಗೆ ಬದ್ಧರಾಗಿ ವರದಿ ಅಂಗೀಕರಿಸಿ ಸಾಮಾಜಿಕ ನ್ಯಾಯ ನೀಡಿಕೆಯ ದಾರಿಯಲ್ಲಿ ಸಾಗುವ ದಿಟ್ಟತನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೋರಬೇಕು. ಮುಂದೆ ಚುನಾವಣಾ ರಾಜಕೀಯದಿಂದ ವಿಮುಖರಾಗುವ ಬಗ್ಗೆ ಈಗಾಗಲೇ ನಿರ್ಧಾರ ಮಾಡಿರುವ ಅಹಿಂದ ನಾಯಕ ಈ ಐತಿಹಾಸಿಕ ಅವಕಾಶಕ್ಕೆ ಬೆನ್ನು ತಿರುಗಿಸಕೂಡದು.