ಈ ದಿನ ಸಂಪಾದಕೀಯ | ರಾಜದ್ರೋಹದ ಕಾನೂನನ್ನು ಬಲಪಡಿಸಬೇಕೆಂಬ ಶಿಫಾರಸು ಅನಾಹುತಕಾರಿ

Date:

Advertisements
ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತುಳಿಯಲು ಸರ್ಕಾರಗಳು ದುರ್ಬಳಕೆ ಮಾಡಿಕೊಳ್ಳುತ್ತಿರುವ ವಸಾಹತುಶಾಹಿ ಕಾನೂನಿದು. ಈ ಕಾನೂನನ್ನು ಸುಪ್ರೀಂ ಕೋರ್ಟು 2022ರ ಮೇ ತಿಂಗಳಲ್ಲೇ ತಡೆ ಹಿಡಿದಿದೆ ಮತ್ತು ಬಲವಾದ ಆಕ್ಷೇಪಗಳನ್ನು ಪ್ರಕಟಿಸಿದೆ. ಈ ಕರಾಳ ಕಾನೂನನ್ನು ರದ್ದು ಮಾಡುವ ಕುರಿತು ವಾದ ಮಂಡನೆಯನ್ನು ಆಲಿಸುವ ಇಂಗಿತ ನೀಡಿದೆ ಕೂಡ.

ರಾಜದ್ರೋಹಕ್ಕೆ ಶಿಕ್ಷೆ ನೀಡುವ ಕಾನೂನನ್ನು ಉಳಿಸಿಕೊಳ್ಳಬೇಕಷ್ಟೇ ಅಲ್ಲದೆ, ಹೆಚ್ಚಿನ ಶಿಕ್ಷೆಯನ್ನು ನಿಗದಿ ಮಾಡಿ ಬಲಪಡಿಸಬೇಕು ಎಂದು ಭಾರತ ಕಾನೂನು ಆಯೋಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ! ಸ್ವತಂತ್ರ ಸಾರ್ವಭೌಮ ಗಣರಾಜ್ಯವನ್ನು  ಹಿಂದಕ್ಕೆ ಎಳೆದೊಯ್ಯುವ ಪ್ರತಿಗಾಮಿ ಶಿಫಾರಸು ಇದು.  

ವ್ಯಕ್ತಿಯೊಬ್ಬ ಬಾಯಿಮಾತಿನಲ್ಲಿ ಅಥವಾ ಬರೆಹದಲ್ಲಿ ಅಥವಾ ಸಂಕೇತಗಳಲ್ಲಿ, ಅಥವಾ ದೃಶ್ಯ ಪ್ರಾತಿನಿಧ್ಯದಲ್ಲಿ ವಿಧಿದ್ವಾರಾ ಸ್ಥಾಪಿಸಲಾಗಿರುವ ಭಾರತ ಸರ್ಕಾರದ ವಿರುದ್ಧ ದ್ವೇಷ, ತಿರಸ್ಕಾರ ಅಥವಾ ಅಸಂತೋಷ ಉಂಟು ಮಾಡುವುದು ಅಥವಾ ಅಂತಹ ಪ್ರಯತ್ನ ಮಾಡುವುದು ರಾಜದ್ರೋಹ. ಭಾರತೀಯ ಅಪರಾಧ ಸಂಹಿತೆಯ 124 ಎ ಸೆಕ್ಷನ್ ಈ ವ್ಯಾಖ್ಯೆಯನ್ನು ನೀಡುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟವನ್ನು ಬಗ್ಗು ಬಡಿಯಲು 130 ವರ್ಷಗಳ ಹಿಂದೆ ಬ್ರಿಟಿಷ್ ಆಡಳಿತ ಜಾರಿಗೆ ತಂದಿದ್ದ ಕಾನೂನು.

ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತುಳಿಯಲು ಸರ್ಕಾರಗಳು ದುರ್ಬಳಕೆ ಮಾಡಿಕೊಳ್ಳುತ್ತಿರುವ ವಸಾಹತುಶಾಹಿ ಕಾನೂನು. ಈ ಕಾನೂನಿನ ಜಾರಿಯನ್ನು ಸುಪ್ರೀಮ್ ಕೋರ್ಟು 2022ರ ಮೇ ತಿಂಗಳಲ್ಲೇ ತಡೆ ಹಿಡಿದಿದೆ ಮತ್ತು ಬಲವಾದ ಆಕ್ಷೇಪಗಳನ್ನು ಪ್ರಕಟಿಸಿದೆ. ಈ ಕರಾಳ ಕಾನೂನನ್ನು ರದ್ದು ಮಾಡುವ ಕುರಿತು ವಾದ ಮಂಡನೆಯನ್ನು ಆಲಿಸುವ ಇಂಗಿತ ನೀಡಿದೆ ಕೂಡ.

Advertisements

ಇಂತಹ ಹಿನ್ನೆಲೆಯಿದ್ದಾಗಲೂ ರಾಜದ್ರೋಹದ ಕಾನೂನನ್ನು ಉಳಿಸಿಕೊಂಡು ಅದನ್ನು  ಇನ್ನಷ್ಟು ಬಲಪಡಿಸುವ ಅರ್ಥಾತ್ ಕರಾಳಗೊಳಿಸುವ ಶಿಫಾರಸನ್ನು ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವುದು ಅತ್ಯಂತ ದುರದೃಷ್ಟಕರ. ನೆಲದ ಅತ್ಯುನ್ನತ ನ್ಯಾಯಾಲಯ ವರ್ಷದ ಹಿಂದೆ ವ್ಯಕ್ತಪಡಿಸಿದ ಆತಂಕಗಳನ್ನು ಕಾನೂನು ಆಯೋಗ ನಿರ್ಲಕ್ಷಿಸುವುದಾದರೂ ಹೇಗೆ? ವಸಾಹತುಶಾಹಿ ಕಾನೂನಿದು ಎಂಬ ಆಕ್ಷೇಪವನ್ನೂ ಆಯೋಗ ಲೆಕ್ಕಕ್ಕೆ ಇಟ್ಟಿಲ್ಲ. ನಮ್ಮ ಇಡೀ ಕಾನೂನು ವ್ಯವಸ್ಥೆಯ ಹಂದರವೇ ವಸಾಹತುಶಾಹಿಯ ಬಳುವಳಿ ಎಂಬ ಮೇಲ್ ಸ್ತರದ ಹೊಣೆಗೇಡಿ ವಾದವನ್ನು ಮುಂದೆ ಮಾಡಿದೆ.

ಮಾವೋವಾದಿ ತೀವ್ರವಾದ, ಭಯೋತ್ಪಾದನೆ, ವಿಚ್ಛಿದ್ರಕಾರಿ ಆಂದೋಳನಗಳು ಹಾಗೂ ಈಶಾನ್ಯ ಭಾರತದಲ್ಲಿ ಜನಾಂಗೀಯ ಘರ್ಷಣೆಗಳ ಪರಿಸ್ಥಿತಿಯನ್ನು ಆಯೋಗವು ತನ್ನ ಶಿಫಾರಸಿಗೆ ಸಮರ್ಥನೆಯಾಗಿ ಬಳಸಿಕೊಂಡಿದೆ. ದೇಶದ ಆಂತರಿಕ ಭದ್ರತೆಗೆ ಬೆದರಿಕೆಗಳಿವೆ ಎಂದಿದೆ.

‘ದೇಶಹಿತಕ್ಕೆ ಬಾಧೆ ಒಡ್ಡುವಂತೆ ನಾಗರಿಕ ಸಮಾಜವನ್ನು (ಸಿವಿಲ್ ಸೊಸೈಟಿ) ಎತ್ತಿಕಟ್ಟುವ, ಬುಡಮೇಲು ಮಾಡುವಂತಹ ಶಕ್ತಿಗಳು’ ಮತ್ತು ‘ಅದೃಶ್ಯ ಸೇನೆಗಳ ಸಮರ’ ಕುರಿತು ರಾಷ್ಟ್ರೀಯ ಸುರಕ್ಷತಾ ಸಲಹೆಗಾರ ಅಜಿತ್ ಡೋವಲ್ ಈ ಹಿಂದೆ ನೀಡಿದ್ದ ಎಚ್ಚರಿಕೆಯು ತೀವ್ರ ವಿವಾದಕ್ಕೆ ಮತ್ತು ಟೀಕೆಗೆ ಗುರಿಯಾಗಿತ್ತು. ಜನತಂತ್ರ ವಿರೋಧಿ, ನಾಗರಿಕ ಹಕ್ಕುಗಳ ದಮನಕಾರಿ ಎಂಬ ಖಂಡನೆಗೆ ಒಳಗಾಗಿದ್ದ ಡೋವಲ್ ಮಾತುಗಳನ್ನು ಆಯೋಗವು ಎತ್ತಿ ಹಿಡಿದು ತನ್ನ ಶಿಫಾರಸಿಗೆ ಸಮರ್ಥನೆಯಾಗಿ ಒದಗಿಸಿರುವುದು ಆಘಾತಕಾರಿ.  

ಪಾಕಿಸ್ತಾನ ಸಾಕಿದ್ದ ತಾಲಿಬಾನಿ ಶಕ್ತಿಗಳು ಇದೀಗ ತನ್ನ ಸೃಷ್ಟಿಕರ್ತನನ್ನೇ ನುಂಗಲು ಬಾಯಿ ತೆಗೆದಿವೆ. ಪಾಕಿಸ್ತಾನ ಎದುರಿಸಿರುವ ಆಂತರಿಕ ಭದ್ರತೆಯ ಅಪಾಯಗಳಿಗೆ ಹೋಲಿಸಿದಲ್ಲಿ ಭಾರತದ್ದು ಸಮಸ್ಯೆಯೇ ಅಲ್ಲ. ಹೀಗಿದ್ದಾಗಲೂ ರಾಜದ್ರೋಹದ ಕಾನೂನನ್ನು ಅಲ್ಲಿನ ಲಾಹೋರ್ ಹೈಕೋರ್ಟು ಮೊನ್ನೆ  ಸಂವಿಧಾನಬಾಹಿರ ಎಂದು ಸಾರಿತು. ಪಾಕಿಸ್ತಾನದ ಸುಪ್ರೀಂ ಕೋರ್ಟು ಲಾಹೋರ್ ಹೈಕೋರ್ಟಿನ ಈ ತೀರ್ಪನ್ನು ಎತ್ತಿ ಹಿಡಿಯುತ್ತದೆಯೇ ಎಂದು ಕಾದು ನೋಡಬೇಕಿದೆ. ಭಾರತ ಮತ್ತು ಪಾಕಿಸ್ತಾನಕ್ಕೆ ಈ ಕಾನೂನನ್ನು ಕೊಟ್ಟವರು ಬ್ರಿಟಿಷರು. ಅವರು ಈ ಕಾನೂನನ್ನು ರದ್ದು ಮಾಡಿ ಹದಿನಾಲ್ಕು ವರ್ಷಗಳಾದವು.

‘ಸಾರ್ವಜನಿಕ ಅವ್ಯವಸ್ಥೆ ಉಂಟು ಮಾಡುವಂತಹ ಹಿಂಸೆಯನ್ನು ಪ್ರಚೋದಿಸುವ ಪ್ರವೃತ್ತಿ ಎಂಬ ಪದಗಳನ್ನು ರಾಜದ್ರೋಹದ ವ್ಯಾಖ್ಯೆಗೆ ಸೇರಿಸಬೇಕು. ವಾಸ್ತವವಾಗಿ ಹಿಂಸೆಯನ್ನು ಉಂಟು ಮಾಡುವುದಿರಲಿ, ಹಿಂಸೆ ಉಂಟು ಮಾಡುವ ಒಲವನ್ನು ಹೊಂದಿರುವುದೂ ರಾಜದ್ರೋಹವೇ’ ಎಂಬ ಆಯೋಗದ ವಾದ ಅನಾಹುತಕಾರಿ. ಜನತಾಂತ್ರಿಕ ವ್ಯವಸ್ಥೆಗೆ ಮಾರಕ. ಸರ್ವಾಧಿಕಾರೀ ಆಡಳಿತ ವ್ಯವಸ್ಥೆಗಳು ಮಾತ್ರವೇ ಹೊಂದಿರಬಹುದಾದ ಜನ ದಮನ ಉದ್ದೇಶದ ದುಷ್ಟತನ.

ಕಳೆದ ವರ್ಷ ಸುಪ್ರೀಮ್ ಕೋರ್ಟಿನ ಮುಂದೆ ಈ ಕಾನೂನನ್ನು ಮೋದಿ ಸರ್ಕಾರ ತೀವ್ರವಾಗಿ ಸಮರ್ಥಿಸಿಕೊಂಡಿತ್ತು. ಆದರೆ ಕೋರ್ಟು ಚಾಟಿ ಬೀಸಿದ ನಂತರ ದಾರಿಗೆ ಬಂದಿತ್ತು. ಮರುವಿಮರ್ಶೆ ಮಾಡುವುದಾಗಿ ನಿವೇದಿಸಿಕೊಂಡಿತ್ತು. ಸೂಕ್ತ ವೇದಿಕೆಯಿಂದ  ಮರುವಿಮರ್ಶೆಗೆ ಒಳಪಡಿಸುವ ತನಕ ಈ ಕಾನೂನಿನ ಕುರಿತ ವಿಚಾರಣೆಯನ್ನು ಮುಂದೂಡುವಂತೆ ನ್ಯಾಯಾಲಯವನ್ನು ಕೋರಿತ್ತು.

ಮರುವಿಮರ್ಶೆ ಮಾಡುತ್ತೇನೆಂದು ಸುಪ್ರೀಮ್ ಕೋರ್ಟಿಗೆ ನಿವೇದಿಸಿಕೊಂಡ ಮೋದಿ ಸರ್ಕಾರ ಕಾಲಾವಕಾಶ ಖರೀದಿ ತಂತ್ರವನ್ನು ಅನುಸರಿಸಿತೇ ಎಂಬ ಸಂಶಯ ಈಗ ಮೂಡುವುದೇ ಆದರೆ ಅದು ಸ್ವಾಭಾವಿಕ. ಕಳೆದ ಒಂಬತ್ತು ವರ್ಷಗಳಿಂದ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಭಿನ್ನಮತದ ಆವರಣಗಳು ಕುಗ್ಗತೊಡಗಿವೆ. ಹಿಂದುತ್ವವಾದಿ ಶಕ್ತಿಗಳಿಂದ ತೀವ್ರ ಆಕ್ರಮಣಕ್ಕೆ ಒಳಗಾಗುತ್ತಿವೆ.

ಇಂತಹ ಕಳವಳದ ಕಾಲಘಟ್ಟದಲ್ಲಿ ರಾಜದ್ರೋಹದ ಕಾನೂನನ್ನು ಬಲಪಡಿಸಬೇಕೆಂಬ ಕಾನೂನು ಆಯೋಗದ ಶಿಫಾರಸು ಅತ್ಯಂತ ಆತಂಕಕಾರಿ. ಸಂಸತ್ತಿನ ಕಡೆಗೂ ಆಸೆಗಣ್ಣಿನಿಂದ ನೋಡುವಂತಿಲ್ಲ. ನಾಗರಿಕ ಸ್ವಾತಂತ್ರ್ಯವನ್ನು ಅದು ಎತ್ತಿ ಹಿಡಿದೀತು ಎಂದು ನೆಚ್ಚುವಂತಿಲ್ಲ.

ಉಳಿದಿರುವ ಏಕಮಾತ್ರ ಆಶಾಕಿರಣ ಸುಪ್ರೀಮ್ ಕೋರ್ಟು. ಕಳೆದ ವರ್ಷ ಮೇ ತಿಂಗಳಲ್ಲಿ ಕೇಂದ್ರದ ಆಶ್ವಾಸನೆಯ ಮೇರೆಗೆ ತಡೆ ಹಿಡಿದಿದ್ದ ವಿಚಾರಣೆಯನ್ನು ತಾನು ಮುಂದುವರೆಸಬೇಕು. ಜನವಿರೋಧಿ ಕಾನೂನನ್ನು ಅಂತ್ಯಗೊಳಿಸಬೇಕು ಇಲ್ಲವೇ ಈ ಉಗ್ರ ಉರಗದ ಹಲ್ಲಿನ ತಳದ ವಿಷದ ಸಂಚಿಯನ್ನು ಕಿತ್ತೆಸೆಯಬೇಕು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X