ಸಾಮಾಜಿಕ ಜಾಲತಾಣಗಳ ಖ್ಯಾತಿಯ ಬಗ್ಗೆ ಯುವಜನರು ಎಚ್ಚರ ವಹಿಸುವ ಅಗತ್ಯವಿದೆ. ಅದೊಂದು ಮೋಹಪಾಶವಷ್ಟೇ. ಅಲ್ಲಿ ಸ್ನೇಹ ಬೆಳೆಸಿ ಮೋಸ ಹೋದವರು, ವೈಯಕ್ತಿಕ ಬದುಕು ಹಾಳು ಮಾಡಿಕೊಂಡವರು, ಹಣ ಕಳೆದುಕೊಂಡವರು, ಆತ್ಮಹತ್ಯೆ ಮಾಡಿಕೊಂಡವರಿಗೆ ಲೆಕ್ಕವಿಲ್ಲ. ರೀಲ್ಸ್ ಹುಚ್ಚು ರಾತ್ರೋರಾತ್ರಿ ಖ್ಯಾತಿಯ ಭ್ರಮೆಗೆ ತಳ್ಳುತ್ತಿದೆ.
ಜೂ. 30ರಂದು ಮುಂಬೈನ ಲೋನಾವಾಲಾದಲ್ಲಿ ಉಕ್ಕಿ ಹರಿಯುತ್ತಿದ್ದ ಜಲಪಾತದ ಬಂಡೆಗಳ ಮಧ್ಯೆ ನಿಂತು ಪ್ರವಾಸದ ಖುಷಿ ಅನುಭವಿಸುತ್ತಿದ್ದ ಒಂದೇ ಕುಟುಂಬದ ಒಂಭತ್ತು ಮಂದಿ ರಭಸದಿಂದ ಬಂದ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಹೋಗಿದ್ದರು. ಇಬ್ಬರು ಈಜಿ ದಡ ಸೇರಿದ್ದರೆ, ಏಳು ಮಂದಿ ಮೃತಪಟ್ಟಿದ್ದರು. ಮಕ್ಕಳು, ಮಹಿಳೆಯರು, ಪುರುಷರು ಪರಸ್ಪರ ಕೈಗಳನ್ನು ಬಿಗಿದು ಪ್ರವಾಹದ ಹೊಡೆತದಿಂದ ಬಚಾವ್ ಆಗಲು ಕೆಲ ನಿಮಿಷಗಳ ಕಾಲ ಸೆಣಸಿದ್ದರು. ಈ ಮನಕಲಕುವ ದೃಶ್ಯವನ್ನು ನೋಡಿದ ಜನ ಮರುಗಿದ್ದಾರೆ. ಈ ಎರಡು ಘಟನೆಗಳು ರೀಲ್ಸ್ ಹುಚ್ಚು ಮತ್ತು ಮಳೆಗಾಲದ ಅಪಾಯಗಳ ಬಗ್ಗೆ ಅರಿವು ಮೂಡಿಸಬೇಕಾದ ಘಟನೆಗಳು. ಇಂತಹ ಘಟನೆಗಳು ಇದೇ ಮೊದಲಲ್ಲ, ಇದೇ ಕೊನೆಯದೂ ಅಲ್ಲ. ಯಾಕೆಂದರೆ ಇಂತಹ ಲೆಕ್ಕವಿಲ್ಲದಷ್ಟು ಘಟನೆಗಳು ನಡೆದಿದ್ದರೂ ಜನ ಪಾಠ ಕಲಿಯುತ್ತಿಲ್ಲ.
ಇನ್ನು ಮಳೆಗಾಲದಲ್ಲಿ ನದಿ, ಜಲಪಾತಗಳು ಭೋರ್ಗರೆವುದು, ಉಕ್ಕಿ ಹರಿಯುವುದು ಸಹಜ. ಯುವಜನರು ಸಾಹಸ ಪ್ರವೃತ್ತಿಯನ್ನು ಪ್ರಕೃತಿಯ ಈ ಭೀಕರ, ರೌದ್ರಾವತಾರದ ಮೇಲೆ ತೋರಿಸುವುದೂ, ಮೃತ್ಯುವನ್ನು ಆಹ್ವಾನಿಸುವುದೂ ಒಂದೇ. ತುಂಬಿ ಹರಿಯುವ ನದಿ, ಜಲಪಾತಕ್ಕೆ ಗೊತ್ತೇ ನಮ್ಮ ಜೀವ ಅಮೂಲ್ಯ ಎಂದು! ಪ್ರವಾಸ ಹೋಗುವ ಯುವಜನರಿಗೆ ಪ್ರಕೃತಿ ಸೌಂದರ್ಯವನ್ನು ಅದರ ರಮಣೀಯತೆಯನ್ನು ಸವಿಯುವುದರ ಜೊತೆಗೆ, ಅದರ ರೌದ್ರದ ಅರಿವೂ ಇರಬೇಕು. ಕೆಲವು ಅಪಾಯಕಾರಿ ಸ್ಥಳಗಳಲ್ಲಿ ಮುನ್ನೆಚ್ಚರಿಕೆಯ ಫಲಕಗಳನ್ನು ಅಳವಡಿಸಿದ್ದರೂ ಅದನ್ನು ನಿರ್ಲಕ್ಷಿಸುವ ನಡವಳಿಕೆ ಸಲ್ಲದು. ಆಳವಿದೆ, ಒಳಸುಳಿ ಇದೆ ಎಂದು ಎಚ್ಚರಿಸಿದರೂ ಈಜುವ ಸಾಹಸಕ್ಕೆ ಇಳಿಯುವ ಮನಸ್ಥಿತಿ ಅಪಾಯಕಾರಿ. ಅಲ್ಲೊಂದು ಫೋಟೋ, ವಿಡಿಯೊ ಮಾಡಿ ಇನ್‌ಸ್ಟಾಗ್ರಾಮ್‌ಗೆ ಹಾಕಿ, ಅದನ್ನು ಜನ ಲೈಕಿಸಿದರೆ ಆಗುವ ಲಾಭವೇನು?
ಇದರ ಮಧ್ಯೆ ಮಳೆಗಾಲದಲ್ಲಿ ಟ್ರೆಕ್ಕಿಂಗ್ ಹೋಗುವ ಹವ್ಯಾಸಿಗಳು ಸಾಹಸದ ಹೆಸರಿನಲ್ಲಿ ಮೃತ್ಯುವಶವಾಗುತ್ತಿದ್ದಾರೆ. ಮಳೆಗಾಲದಲ್ಲಿ ನದಿಯ ಭೀಕರತೆ ಹೇಗಿರುತ್ತದೆ ಎಂದು ಅಂದಾಜು ಮಾಡಲು ಸಾಧ್ಯವಿಲ್ಲ. ಯಾವುದೋ ಊರಲ್ಲಿ ಹೆಚ್ಚು ಮಳೆ ಬಂದು ಆ ನೀರು ನದಿಗೆ ಸೇರಿ ರಭಸದಿಂದ ಹರಿದು ಬಂದು ಅಪಾಯಕಾರಿ ಸಂದರ್ಭ ಉಂಟಾಗುತ್ತದೆ. ಈ ಅರಿವು ನಗರದಿಂದ ಹೋದ ಪ್ರವಾಸಿಗರಿಗೆ ಇರುವುದಿಲ್ಲ.
ಕೆಲವು ಅಪಾಯಕಾರಿ ಪ್ರವಾಸಿ ತಾಣಗಳಿಗೆ, ಅದರಲ್ಲೂ ನದಿಗಳಲ್ಲಿ ಸಾಹಸಕ್ರೀಡೆ, ಜಲಪಾತದ ತೀರಾ ಸಮೀಪಕ್ಕೆ ಹೋಗುವುದನ್ನು, ಅಪಾಯಕಾರಿ ಟ್ರೆಕ್ಕಿಂಗ್‌ಗಳಿಗೆ ಈ ಬಿರುಸಿನಿಂದ ಮಳೆ ಸುರಿಯುತ್ತಿರುವ ಸಮಯದಲ್ಲಾದರೂ ಸ್ಥಳೀಯ ಆಡಳಿತ, ಪ್ರವಾಸೋದ್ಯಮ ಇಲಾಖೆ ನಿಷೇಧ ಹೇರಬೇಕು. ನಿಯಮ ಉಲ್ಲಂಘನೆ ಮಾಡಿಯೂ ಅಂತಹ ಕಡೆಗಳಿಗೆ ಹೋದವರ ಬಗ್ಗೆ, ರೀಲ್ಸ್ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಪ್ರವಾಸಿ ತಾಣಗಳನ್ನು ನಿರ್ವಹಣೆ ಮಾಡುವವರೂ ನಿಗಾವಹಿಸಬೇಕು. ಮೊನ್ನೆಯಷ್ಟೇ ಮಂಗಳೂರಿನ ಪೊಲೀಸ್ ಅಧಿಕಾರಿಯೊಬ್ಬರು, ಅಪಾಯದ ಸೂಚನೆಯನ್ನು ಉಲ್ಲಂಘಿಸಿ ಸಮುದ್ರಕ್ಕೆ ಇಳಿದ ಪ್ರವಾಸಿಗರಿಗೆ ಲಾಠಿ ರುಚಿ ತೋರಿಸಿದ್ದ ವಿಡಿಯೊ ಹರಿದಾಡಿತ್ತು.
ಸರ್ಕಾರದ ಪ್ರವಾಸೋದ್ಯಮ ಅಭಿವೃದ್ಧಿ ಎಂಬ ಹೆಸರಿನಲ್ಲಿ ಪ್ರಾಕೃತಿಕ ಸೌಂದರ್ಯವನ್ನು ಹಾಳುಗೆಡಹುವ ರೀತಿಯಲ್ಲಿ ರಸ್ತೆ, ಹೋಟೆಲುಗಳನ್ನು ಕಟ್ಟಿ ಮೋಜಿನ ಜಾಗಗಳನ್ನಾಗಿ ಮಾಡಿರುವ ಪರಿಣಾಮ ಯುವಜನರು ವೀಕೆಂಡ್ ಪಾರ್ಟಿ ಹೆಸರಿನಲ್ಲಿ ಅಂತಹ ಜಾಗಗಳಲ್ಲಿ ಸೇರುತ್ತಿದ್ದಾರೆ. ವಾರಾಂತ್ಯದಲ್ಲಿ ಬೆಂಗಳೂರಿನಿಂದ ನಂದಿ ಬೆಟ್ಟ, ಮೈಸೂರಿನಿಂದ ಚಾಮುಂಡಿ ಬೆಟ್ಟಕ್ಕೆ ಹೋಗುವ ರಸ್ತೆಗಳಲ್ಲಿ ನಗರದಂತೆ ಟ್ರಾಫಿಕ್ ಜಾಮ್ ಆಗುತ್ತಿದೆ ! ಇದು ಪ್ರವಾಸಿ ತಾಣಗಳು ಮೋಜಿನ ತಾಣಗಳಾಗಿರುವುದರ ಕೆಟ್ಟ ಪರಿಣಾಮ. ಪ್ರವಾಸಿ ತಾಣಗಳು ಜೀವ ಕಳೆಯುವ ಜಾಗಗಳಾಗದಂತೆ ತಡೆಯುವುದು ಎಲ್ಲರ ಜವಾಬ್ದಾರಿ.
