ಸರ್ಕಾರ ಕಲಾವಿದೆಯರ ಸ್ಥಿತಿಗತಿ ಅಧ್ಯಯನಕ್ಕೆ ಸಮಿತಿ ರಚನೆ ಮಾಡಬಹುದು. ಆದರೆ, ಕುಟುಂಬದಂತಿರುವ ಚಿತ್ರರಂಗದ ಹುಳುಕುಗಳನ್ನು ಅವರವರೇ ನಿವಾರಿಸಿಕೊಳ್ಳಬೇಕು. ಮನೆಯೊಳಗಿನ ಕೊಳಕನ್ನು ಅವರೇ ಹೊರ ಹಾಕಬೇಕು. ಅಂತಹ ಮನಸ್ಸಿನ ಶುದ್ಧ ಹಸ್ತರು ಇಲ್ಲಿ ಯಾರೂ ಇಲ್ಲವೇ ಎಂಬ ಅನುಮಾನ ಕಾಡುತ್ತಿದೆ. ಮತ್ತೆ ಮತ್ತೆ ಅದೇ ಶ್ರುತಿ ಹರಿಹರನ್, ಸಂಜನಾ ಗಲ್ರಾನಿ, ಚೇತನ್ ಇವರೇ ಧ್ವನಿ ಎತ್ತಬೇಕೇ? ಹಾಗಿದ್ದರೆ ಮಿಕ್ಕವರ ಧ್ವನಿಯನ್ನು ಅದುಮಿಟ್ಟವರು ಯಾರು ?
ಯಾವ ರಂಗದಲ್ಲಿ ಮಹಿಳೆ ಅತೀಹೆಚ್ಚು ಲೈಂಗಿಕ ಶೋಷಣೆಗೆ ಒಳಗಾಗುತ್ತಾಳೆ ಎಂದು ಕೇಳಿದರೆ ಅದು ಸಿನಿಮಾ ರಂಗ ಅಥವಾ ಮನರಂಜನಾ ಕ್ಷೇತ್ರ ಎಂದು ಯಾವುದೇ ಅನುಮಾನ ಇಲ್ಲದೇ ಹೇಳಬಹುದು. ಯಾಕೆಂದರೆ ಅದೊಂದು ರಮ್ಯ ಜಗತ್ತು. ಬೆಡಗು ಬೇಡುವ ಜಾಗ. ಅಲ್ಲಿಗೆ ಹೋಗುವ ಹೆಣ್ಣುಮಕ್ಕಳು ʼಸಿನಿಮಕ್ಕೆ ಬೇಕಾದಷ್ಟುʼ ಅಥವಾ ಚಿತ್ರತಂಡ ಬಯಸುವಷ್ಟು, ತುಸು ಹೆಚ್ಚೇ ಬೋಲ್ಡ್ ಆಗಿರಬೇಕು. ಅಷ್ಟೇ ಅಲ್ಲ ಹೆಣ್ಣುಮಕ್ಕಳು ಪುರುಷರೊಂದಿಗೆ ತಿಂಗಳುಗಳ ಕಾಲ ಕೆಲಸ ಮಾಡುವ ಅನಿವಾರ್ಯತೆ ಇರುತ್ತದೆ. ರಾತ್ರಿ ಹಗಲು ಶೂಟಿಂಗ್‌ನಲ್ಲಿ ಇರುತ್ತಾರೆ. ಕೋಟಿಗಟ್ಟಲೆ ಹಣ ಹೂಡಲಾಗಿರುತ್ತದೆ. ಈ ಎಲ್ಲಾ ಪ್ರಜ್ಞೆ ಇಟ್ಟುಕೊಂಡೇ ಕಲಾವಿದೆಯರು ಸಿನಿಮಾ ಮತ್ತು ಮಾಡೆಲಿಂಗ್ ಕ್ಷೇತ್ರಕ್ಕೆ ಅಡಿಯಿಡುತ್ತಾರೆ. ಹಾಗಂತ ಅವಕಾಶ ಕೊಟ್ಟಿದ್ದಕ್ಕಾಗಿ ತಾವು ಲೈಂಗಿಕ ಕಿರುಕುಳ ಕೊಡಬಹುದು, ದೈಹಿಕ ಸುಖಕ್ಕೆ ಕರೆಯಬಹುದು, ಅವಕಾಶ ಬೇಕಾದರೆ ನಟಿಯರು ಅವೆಲ್ಲವನ್ನೂ ಸಹಿಸಿಕೋಬೇಕು ಎಂಬ ಮನಸ್ಥಿತಿಯನ್ನು ಒಪ್ಪಲಾಗದು. ಆದರೆ ಹೀಗೆ ಸಹಿಸಿಕೊಂಡು, ಪ್ರತಿಭಟಿಸದ ಪರಿಣಾಮ ಎಲ್ಲಾ ಚಿತ್ರರಂಗ ಸ್ವಚ್ಛ ಮಾಡಲಾಗದಷ್ಟು ಗಬ್ಬೆದ್ದು ನಾರುತ್ತಿದೆ.
ಸಿನಿಮಾ ಕ್ಷೇತ್ರದಲ್ಲಿ ಕಾಸ್ಟಿಂಗ್ ಕೌಚ್ ನಡೆಯುತ್ತಿದೆ ಎಂಬುದು ಬಹಿರಂಗ ಸತ್ಯ. ಇತ್ತೀಚೆಗೆ ಕೇರಳ ಸಿನಿಮಾರಂಗದಲ್ಲಿ ದುಡಿಯುವ ಮಹಿಳೆಯರ ಸ್ಥಿತಿಗತಿ ಅಧ್ಯಯನ ವರದಿ ಬಹಿರಂಗಗೊಂಡ ನಂತರ ಹಲವು ರಾಜ್ಯಗಳಲ್ಲಿ ಹೇಮಾ ಕಮಿಟಿ ತರಹದ ಕಮಿಟಿ ರಚನೆಯಾಗಬೇಕು ಎಂಬ ಬೇಡಿಕೆಗಳು ಬಂದಿವೆ. ಹೇಮಾ ಕಮಿಟಿ ವರದಿ ಬಂದ ನಂತರ ಹಿಂದಿ, ತಮಿಳು, ತೆಲುಗು ಚಿತ್ರರಂಗದಲ್ಲಿ ನಟಿಯರು ಮಾತನಾಡಲು ಶುರುಮಾಡಿದ್ದರು. ಆದರೆ ಕನ್ನಡ ಚಿತ್ರರಂಗ ಮುಗುಮ್ಮಾಗಿಯೇ ಕೂತಿದೆ. ಇದರ ನಡುವೆ ಕಲಾವಿದೆಯರು ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ಅಧ್ಯಯನಕ್ಕೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚಿಸುವಂತೆ ಒತ್ತಾಯಿಸಿ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (ಫೈರ್) ನಿಯೋಗ ಗುರುವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಜೊತೆಗೆ ನಟಿ ಸಂಜನಾ ಗಲ್ರಾನಿ ಕೂಡಾ ಸಿಎಂ ಮತ್ತು ಗೃಹಸಚಿವರನ್ನು ಖುದ್ದು ಭೇಟಿಯಾಗಿ ಪ್ರತ್ಯೇಕ ಮನವಿ ಸಲ್ಲಿಸಿದ್ದಾರೆ. ಅದರ ಬೆನ್ನಲ್ಲೇ ಚಿತ್ರರಂಗದ ಎಲ್ಲರನ್ನೂ ಒಟ್ಟುಗೂಡಿಸಿ ಸಭೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಇಂದು (ಶುಕ್ರವಾರ) ಸೂಚನೆ ನೀಡಿತ್ತು. ಹಾಗಾಗಿ ಸೆ.16 ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕಲಾವಿದೆಯರು ಹಾಗೂ ಚಿತ್ರರಂಗದ ಪ್ರಮುಖರ ಸಭೆ ನಡೆಸಲು ಮುಂದಾಗಿದೆ.
ಸರ್ಕಾರ ಸತ್ಯಶೋಧನ ಸಮಿತಿ ಮಾಡಬಹುದಷ್ಟೇ. ಆದರೆ ಕುಟುಂಬದಂತಿರುವ ಚಿತ್ರರಂಗದ ಹುಳುಕುಗಳನ್ನು ಅವರವರೇ ನಿವಾರಿಸಿಕೊಳ್ಳಬೇಕು. ಮನೆಯೊಳಗಿನ ಕೊಳಕನ್ನು ಅವರೇ ಹೊರ ಹಾಕಬೇಕು. ಅಂತಹ ಮನಸ್ಸಿನ ಶುದ್ಧ ಹಸ್ತರು ಅಲ್ಲಿ ಯಾರೂ ಇಲ್ಲವೇ ಎಂಬ ಅನುಮಾನ ಕಾಡುತ್ತದೆ. ಮತ್ತೆ ಮತ್ತೆ ಅದೇ ಶ್ರುತಿ ಹರಿಹರನ್, ಸಂಜನಾ ಗಲ್ರಾನಿ, ಚೇತನ್ ಇವರೇ ಧ್ವನಿ ಎತ್ತಬೇಕೇ? ಹಾಗಿದ್ದರೆ ಮಿಕ್ಕವರ ಧ್ವನಿಯನ್ನು ಅದುಮಿಟ್ಟವರು ಯಾರು ?
ದುಡಿಯುವ ಸ್ಥಳ ಎಂದ ಕೂಡಲೇ ಅದು ತಿಂಗಳ ಸಂಬಳ ಪಡೆಯುವ ಕಚೇರಿ, ಕಾರ್ಖಾನೆಗಳು ಮಾತ್ರವಲ್ಲ, ಹೊಟ್ಟೆಪಾಡಿಗಾಗಿ ಮಾಡುವ ಎಲ್ಲ ಕೆಲಸಗಳೂ ವೃತ್ತಿ/ದುಡಿಮೆ ಎನಿಸುತ್ತದೆ. ಮನರಂಜನಾ ಕ್ಷೇತ್ರ ಕೂಡಾ ಅದಕ್ಕೆ ಹೊರತಾಗಿಲ್ಲ. ಸಿನಿಮಾ ನಿರ್ಮಾಣ ಸಂಸ್ಥೆಗಳ ಅಡಿಯಲ್ಲಿ ಹೆಣ್ಣು ಗಂಡು ಎಂಬ ಭೇದವಿಲ್ಲದೇ ನೂರಾರು ಮಂದಿ ದುಡಿಯುತ್ತಿರುತ್ತಾರೆ. ಅಷ್ಟೇ ಅಲ್ಲ ಅದು ಒಂದು ಕಡೆ ಕುಳಿತು ಮಾಡುವ ಕೆಲಸವಲ್ಲ. ಒಂದೊದು ಸೃಜನಶೀಲ ಕೆಲಸ. ಇಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ನೀಡುವುದಕ್ಕೆ ಬಹಳಷ್ಟು ಅವಕಾಶ ಇರುತ್ತದೆ. ಅಂತಹ ಸಂದರ್ಭಗಳಲ್ಲಿ ಏಕಾಏಕಿ ಹೊರಬರಲೂ ಆಗದೇ ತಮ್ಮೊಳಗೇ ನೋವು ನುಂಗಿಕೊಂಡವರೇ ಹೆಚ್ಚು. ಆಗೊಮ್ಮೆ, ಈಗೊಮ್ಮೆ ಎಲ್ಲೋ ಸಂದರ್ಶನಗಳಲ್ಲಿ ಕೆಣಕಿ ಕೇಳಿದಾಗ ತಮ್ಮ ನೋವುಗಳನ್ನು ಹೇಳಿಕೊಂಡು ಅದು ಮೂರು ದಿನದ ಸುದ್ದಿಯಾಗಿ ಹೋಗುತ್ತಿದೆ. ಆದರೆ ಶಾಶ್ವತವಾಗಿ ಕಲಾವಿದೆಯರಿಗೆ ಈ ಕ್ಷೇತ್ರ ಸುರಕ್ಷಿತ ತಾಣ ಎಂದ ಭಾವ ಬರಬೇಕಿದ್ದರೆ ಅದಕ್ಕಾಗಿ ಸಂಘಟಿತ ಹೋರಾಟಕ್ಕೆ ನಟಿಯರೂ ಅಣಿಯಾಗಬೇಕಿದೆ.
ಸಿನಿಮಾರಂಗದಲ್ಲಿ ನಡೆಯುತ್ತಿರುವ ಕಾಸ್ಟಿಂಗ್ ಕೌಚ್ ಬಗ್ಗೆ ʼಅದು ಸಾಮಾನ್ಯʼ ಎಂದು ನೋಡುವ ನಡೆಯೇ ಅನೈತಿಕ. ಮಹಿಳೆಗೆ ಎಲ್ಲಿಯೇ ಆಗಲಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಆಕೆಯನ್ನು ಮುಟ್ಟುವುದು ಕೂಡಾ ಲೈಂಗಿಕ ಕಿರುಕುಳಕ್ಕೆ ಸಮ. ಸಿನಿಮಾವನ್ನು ʼಕಲಾ ಸರಸ್ವತಿಯ ಸೇವೆʼ ಎಂದು ಹೇಳಿಕೊಳ್ಳುವ ಸಿನಿಮಾ ಕಲಾವಿದರು ಆ ಸೇವೆಯಲ್ಲಿ ಭಾಗಿಯಾದ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವುದು ಅಕ್ಷಮ್ಯ. ಹಾಗೆಯೇ ಘಟನೆ ನಡೆದು ಹತ್ತಾರು ವರ್ಷಗಳ ನಂತರ ಆರೋಪ ಮಾಡಿ, ದೂರು ನೀಡಿ ಅದರಿಂದ ಸಿಗುವ ನ್ಯಾಯ ಸೊನ್ನೆ. ಸಂತ್ರಸ್ತರೇ ಅವಮಾನಕ್ಕೊಳಗಾಗುವುದು ಮಾತ್ರ ನಿಶ್ಚಿತ. ಆದರೆ ತಾವು ದುಡಿಯುವ ಜಾಗ ಅಥವಾ ನಿರ್ಮಾಣ ಸಂಸ್ಥೆಗಳಲ್ಲಿ ನಮ್ಮ ದೂರು ಆಲಿಸುವವರು ಇದ್ದಾರೆ ಎಂದಾದರೆ ಅದು ಕೊಡುವ ಧೈರ್ಯವೇ ಬೇರೆ. ಆಗ ಹಲವರು ತಮಗಾದ ನೋವುಗಳನ್ನು ಹೇಳಿಕೊಂಡಾರು. ಅಂತಹ ವೇದಿಕೆ ಇಲ್ಲದೇ ಇರುವ ಕಾರಣ ಈಗೀಗ ಸೋಷಿಯಲ್ ಮೀಡಿಯಾ ಮೂಲಕ Me too ಎಂದು ತಮ್ಮ ನೋವನ್ನು ಹೊರಹಾಕುತ್ತಿದ್ದಾರೆ. ಅದನ್ನೊಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಎಷ್ಟೇ ದೊಡ್ಡ ನಟಿಯರಾದರೂ ಅಸಹಾಯಕರಾಗಿ ಬಿಡುತ್ತಾರೆ.
2013ರಲ್ಲಿ ದೆಹಲಿಯಲ್ಲಿ ನಿರ್ಭಯ ಪ್ರಕರಣದ ನಂತರ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತು ದೇಶದೆಲ್ಲೆಡೆ ಭುಗಿಲೆದ್ದ ಆಕ್ರೋಶ ಜನಜಾಗೃತಿಯಾಗಿ ಬದಲಾಗಿತ್ತು. ಕೆಲಸದ ಸ್ಥಳಗಳಲ್ಲಿಯೂ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಯುವ ಅಗತ್ಯದ ಬಗ್ಗೆಯೂ ಎಚ್ಚೆತ್ತುಕೊಳ್ಳುವಂತಾಯಿತು. ಈ ಉದ್ದೇಶದಿಂದ ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ, ನಿಷೇಧ ಮತ್ತು ಪರಿಹಾರ ಕಾಯ್ದೆಯನ್ನು ಅದೇ ವರ್ಷದ ಮನಮೋಹನ್ ಸಿಂಗ್ ಸರ್ಕಾರ ಜಾರಿಗೊಳಿಸಿತ್ತು. ಪ್ರತಿ ಸಂಸ್ಥೆಗಳಲ್ಲೂ ಆಂತರಿಕ ದೂರು ಸಮಿತಿ ಇರಬೇಕು ಎಂಬುದು ಕಾಯ್ದೆಯ ಬಹುಮುಖ್ಯ ಅಂಶವಾಗಿತ್ತು. ಆದರೆ ಒಂದು ದಶಕದ ನಂತರವೂ ಹಲವು ಖಾಸಗಿ ಸಂಸ್ಥೆಗಳಲ್ಲಿ ಇಂತಹ ದೂರು ಸಮಿತಿಗಳೇ ಇಲ್ಲ. ಇನ್ನು ಸಿನಿಮಾ, ಕ್ರೀಡಾ ತರಬೇತಿ ಸಂಸ್ಥೆಗಳಲ್ಲಿ ಇಂಥವು ಇದ್ದರೆ ಅದು ವಿಶೇಷವೇ ಸರಿ. ಕಳೆದ ವರ್ಷ ಕುಸ್ತಿ ಪಟುಗಳು ಬೀದಿಗಿಳಿದು ಹೋರಾಟ ಮಾಡುವಂತಾಗಿದ್ದು, ಕುಸ್ತಿ ಫೆಡರೇಷನ್‌ನಂತಹ ದೇಶ ಮಟ್ಟದ ಸಂಸ್ಥೆಯಲ್ಲಿ ಆಂತರಿಕ ದೂರು ಸಮಿತಿ ಇರಲಿಲ್ಲ!.
ಯಾವುದೇ ಸರ್ಕಾರಿ ಇಲಾಖೆ, ಸಂಸ್ಥೆ, ಕಚೇರಿ, ಸರ್ಕಾರದ ಅಧೀನ ಸಂಸ್ಥೆಗಳು, ನಿಗಮ ಮಂಡಳಿ, ಸಹಕಾರ ಸಂಸ್ಥೆ, ಖಾಸಗಿ ಸಂಸ್ಥೆಗಳು, ಎನ್‌ಜಿಒಗಳು, ಶಿಕ್ಷಣ ಸಂಸ್ಥೆಗಳು, ಮನರಂಜನಾ ಕ್ಷೇತ್ರ, ಕಾರ್ಖಾನೆ, ಆಸ್ಪತ್ರೆ, ನರ್ಸಿಂಗ್ ಹೋಂಗಳನ್ನು ಕೆಲಸದ ಸ್ಥಳಗಳು ಎಂದು ಕಾಯ್ದೆಯ ಎರಡನೇ ಸೆಕ್ಷನ್ ಈ ಬಗ್ಗೆ ಸ್ಪಷ್ಟವಾಗಿ ಹೇಳಿದೆ. ಲೈಂಗಿಕ ದೌರ್ಜನ್ಯದ ವ್ಯಾಪ್ತಿಗೆ ಯಾವೆಲ್ಲ ಕ್ರಿಯೆಗಳು ಒಳಪಡುತ್ತವೆ ಎಂದೂ ಹೇಳಿದೆ. ಒತ್ತಾಯದ ಸ್ಪರ್ಶ, ಲೈಂಗಿಕ ಕ್ರಿಯೆಗಾಗಿ ಒತ್ತಾಯ, ಲೈಂಗಿಕತೆ ಕುರಿತು ಅಸಭ್ಯ ಮಾತುಗಳು, ನೀಲಿಚಿತ್ರ ತೋರಿಸುವುದು, ಲೈಂಗಿಕ ಕ್ರಿಯೆಗೆ ಗುರಿಯಾಗಿ ಆಡುವ ಮಾತು, ಆಮಿಷ ಅಥವಾ ಬೆದರಿಕೆ ಒಡ್ಡುವುದು, ಅಂತಹ ಎಸ್‌ಎಂಎಸ್, ಪೋಟೋ ಕಳಿಸುವುದು ಇವೆಲ್ಲವೂ ಲೈಂಗಿಕ ಕಿರುಕುಳದ ವ್ಯಾಪ್ತಿಗೆ ಬರುತ್ತದೆ.
ಹತ್ತಕ್ಕಿಂತ ಹೆಚ್ಚು ಮಂದಿ ಮಹಿಳೆಯರು ಕೆಲಸ ಮಾಡುವ ಕಡೆ ಆಂತರಿಕ ದೂರು ಸಮಿತಿ ಇರಬೇಕು. ಆದರೆ ಬಹುತೇಕ ಕಚೇರಿ ಸಂಸ್ಥೆಗಳಲ್ಲಿ ಈ ಕಾಯ್ದೆಯನ್ನು ಕಾಲ ಕಸ ಮಾಡಲಾಗಿದೆ. ಇನ್ನು ಮನರಂಜನಾ ಕ್ಷೇತ್ರದ ಬಗ್ಗೆ ಅದು ಮಹಿಳೆಯರ ಸುರಕ್ಷತೆಯ ಬಗ್ಗೆ ಗಂಭೀರ ಕ್ರಮಗಳನ್ನು ಕೈಗೊಳ್ಳುತ್ತದೆ ಎಂಬುದನ್ನು ನಿರೀಕ್ಷಿಸಲೂ ಸಾಧ್ಯವಿಲ್ಲ. ಕೇರಳದಲ್ಲಿ ಹೇಮಾ ಕಮಿಟಿ ವರದಿ ಬಹರಂಗವಾಗಿ ಒಬ್ಬೊಬ್ಬರೇ ನಟ, ನಿರ್ದೇಶಕರ ವಿರುದ್ಧ ಆರೋಪ ಮಾಡುತ್ತಿದ್ದಂತೆ ಕೇರಳದ ಸಿನಿಮಾ ಕಲಾವಿದರ ಸಂಘ AMMA ಅಧ್ಯಕ್ಷ ಹಿರಿಯ ನಟ ಮೋಹನ್ ಲಾಲ್ ರಾಜೀನಾಮೆ ನೀಡಿದ್ದಲ್ಲದೇ ಇಡೀ ಸಂಘವನ್ನು ವಿಸರ್ಜನೆ ಮಾಡಲಾಯಿತು. ನಿಜಕ್ಕೂ ಸಿನಿಮಾರಂಗದಲ್ಲಿ ಕಲಾವಿದೆಯರಿಗೆ ಆಗುತ್ತಿರುವ ಶೋಷಣೆಯ ವಿರುದ್ಧ ಅವರೆಲ್ಲರೂ ನಿಂತಿದ್ರೆ, ಅದು ಇಡೀ ಜಗತ್ತಿನ ಮನರಂಜನಾ ಕ್ಷೇತ್ರಕ್ಕೊಂದು ಮಾದರಿಯಾಗುತ್ತಿತ್ತು. ಆದ್ರೆ ಅಮ್ಮದ ಕಾರ್ಯಕಾರಿ ಮಂಡಳಿಯ ನಡೆ “ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡ” ಎಂಬಂತಾಗಿದೆ. ಅವರಲ್ಲಿ ಯಾರಿಗೂ ತಾವು ಸ್ತ್ರೀಪೀಡಕರಲ್ಲ ಎಂದು ಹೇಳಿಕೊಳ್ಳುವ ಧೈರ್ಯ ಇಲ್ಲ. ಎಲ್ಲಿ ತಮ್ಮ ಮೇಲೆ ಯಾವ ನಟಿ ಆರೋಪಿಸುತ್ತಾರೋ ಅಪರಾಧಿ ಭಾವದಲ್ಲಿ ಅವರೆಲ್ಲ ನಡುಗಿ ಹೋಗಿರುವಂತಿದೆ.
ಸರ್ಕಾರ, ಕಲಾವಿದೆಯರ ಸ್ಥಿತಿಗತಿ ಅಧ್ಯಯನಕ್ಕೆ ಹೇಮಾ ಕಮಿಟಿ ರೀತಿಯಲ್ಲಿಯೇ ಇಲ್ಲೊಂದು ಕಮಿಟಿ ಮಾಡಬಹುದು. ಅದು ಅಧ್ಯಯನ ಮಾಡಿ ಎರಡೋ ಮೂರು ವರ್ಷಗಳಲ್ಲಿ ವರದಿ ಕೊಡಬಹುದು. ವರದಿ ಬಂದ ತಕ್ಷಣ ಒಂದಷ್ಟು ಸುದ್ದಿ, ಸದ್ದು ಆಗಬಹುದು. ಮತ್ತೆ ಎಲ್ಲವೂ ತಣ್ಣಗಾಗುತ್ತದೆ.
ಮೊದಲು ಎಲ್ಲ ಕಲಾವಿದೆಯರೂ ಒಂದಾಗಿ ಪ್ರತಿಭಟಿಸುವ ಅಗತ್ಯವಿದೆ. ಒಬ್ಬ ನಟಿ ತಮಗಾದ ಅನ್ಯಾಯ ಹೇಳಿಕೊಂಡರೆ ಮಿಕ್ಕವರು ಆಕೆಯ ಬೆಂಬಲಕ್ಕೆ ಯಾವುದೇ ಅಂಜಿಕೆ, ಭಯ ಇಲ್ಲದೇ ನಿಲ್ಲಬೇಕಿದೆ. ತಾವಿಲ್ಲದೇ ಸಿನಿಮಾರಂಗ ಇಲ್ಲ ಎಂಬುದನ್ನು ಮೊದಲು ಕಲಾವಿದೆಯರು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಎಲ್ಲರೂ ತಮ್ಮ ತಮ್ಮ ಕೆರಿಯರ್ ಬಗ್ಗೆ ಮಾತ್ರ ಯೋಚಿಸುತ್ತಾ ಸೇಫ್ ಝೋನ್‌ನಲ್ಲಿ ಇರಲು ಬಯಸಿದರೆ, ಈ ಅನ್ಯಾಯ ಹೀಗೇ ಮುಂದುವರಿಯುತ್ತದೆ. ಭವಿಷ್ಯದಲ್ಲಿ ಸಿನಿಮಾರಂಗಕ್ಕೆ ಬರಲಿರುವ ಸೋದರಿಯರ ಸುರಕ್ಷತೆಗಾಗಿಯಾದರೂ ಎಲ್ಲಾ ಪ್ರೊಡಕ್ಷನ್ ಹೌಸ್‌ಗಳಲ್ಲಿ ಲೈಂಗಿಕ ದೌರ್ಜನ್ಯ ತಡೆ ದೂರು ಸಮಿತಿ ರಚನೆ ಮಾಡಲು ಕಲಾವಿದೆಯರು ಒತ್ತಾಯಿಸಬೇಕು. ನಿರ್ಮಾಪಕರೂ ಅಷ್ಟೇ, ಈ ಕಳಂಕಿತ ಚಿತ್ರರಂಗವನ್ನು ಶುದ್ಧೀಕರಿಸುವ ನಿಟ್ಟಿನಲ್ಲಿ ತಾವಾಗಿಯೇ ದೂರು ಸಮಿತಿ ರಚನೆ ಮಾಡಿ, ಅವರ ನೋವುಗಳನ್ನು ಆಲಿಸುವ ಮೂಲಕ ಕಲಾವಿದೆಯರಿಗೆ ಭರವಸೆ ತುಂಬುವ ಕೆಲಸ ಮಾಡಬೇಕಿದೆ.
