ವಕ್ಫ್ ಬೋರ್ಡ್ ವತಿಯಿಂದ 15 ಜಿಲ್ಲೆಗಳಲ್ಲಿ ಮಹಿಳಾ ಕಾಲೇಜು ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಅದೇ ರೀತಿ ತಾಲೂಕು ಮತ್ತು ಜಿಲ್ಲೆಗಳಲ್ಲಿ ವಕ್ಫ್ ಬೋರ್ಡ್ ವತಿಯಿಂದ ಆಸ್ಪತ್ರೆ ನಿರ್ಮಾಣಕ್ಕೂ ಚಿಂತನೆ ಇದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಖ್ಫ್ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದರು.
ವಿಕಾಸಸೌಧ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ವಕ್ಫ್ ಅಧ್ಯಕ್ಷರು ಹಾಗೂ ಅಧಿಕಾರಿಗಳ ಸಭೆ ನಡೆಸಿದ ಅವರು, “ವಕ್ಫ್ ಆಸ್ತಿ ದೇವರ ಆಸ್ತಿ. ಇದರ ಸಂರಕ್ಷಣೆ ಎಲ್ಲರ ಕರ್ತವ್ಯ. ವಕ್ಫ್ ಆಸ್ತಿ ಸಂರಕ್ಷಣೆ ಕೇವಲ ಸಚಿವ ಅಥವಾ ರಾಜ್ಯಾಧ್ಯಕ್ಷರ ಜವಾಬ್ದಾರಿ ಮಾತ್ರವಲ್ಲ. ಜಿಲ್ಲಾಧ್ಯಕ್ಷರು ಹಾಗೂ ಅಧಿಕಾರಿಗಳ ಹೊಣೆಗಾರಿಕೆಯೂ ಹೌದು” ಎಂದರು.
“ವಕ್ಫ್ ಆಸ್ತಿ ಸರ್ಕಾರ ಕೊಟ್ಟಿದ್ದು, ಅದು ಸರ್ಕಾರಕ್ಕೆ ಸೇರಿದ್ದು ಎಂಬ ಭಾವನೆ ಇದೆ. ಒಂದೇ ಒಂದು ಇಂಚು ಜಾಗ ಕೂಡ ವಕ್ಫ್ ಬೋರ್ಡ್ ಸರ್ಕಾರದಿಂದ ಪಡೆದಿಲ್ಲ. ವಕ್ಫ್ ಆಸ್ತಿ ಸಮುದಾಯದ ಒಳಿತಿಗಾಗಿ ದಾನಿಗಳು ಕೊಟ್ಟಿರುವ ದಾನ ಆಗಿದೆ. ಕಬಾರಸ್ಥಾನ ಹೊರತು ಪಡಿಸಿದರೆ ಸರ್ಕಾರದಿಂದ ನಮಗೆ ಬೇರೆ ಯಾವುದೇ ಜಾಗ ಕೊಟ್ಟಿಲ್ಲ” ಎಂದು ಹೇಳಿದರು
“ಜಿಲ್ಲಾ ಮಟ್ಟದಲ್ಲಿ ವಕ್ಫ್ ಅದಾಲತ್ ನಡೆಸುತ್ತಿರುವುದರಿಂದ ಹಲವಾರು ಸಮಸ್ಯೆ ಬಗೆಹರಿದಿದ್ದು ರಾಜ್ಯದ ಪ್ರತಿ ಜಿಲ್ಲೆಯಲ್ಲೂ ನಡೆಸಲಾಗುವುದು” ಎಂದರು.
This video cannot be played in your browser. Open the video directly
ಸಭೆಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರು ತಮ್ಮ ಜಿಲ್ಲೆಗಳ ಸಮಸ್ಯೆ ಹೇಳಿಕೊಂಡರು. ಕಾಲೇಜು ಹಾಗೂ ಆಸ್ಪತ್ರೆ ನಿರ್ಮಾಣ ಕ್ಕೆ ಜಾಗ ಕೊಡಲು ದಾನಿಗಳು ಸಿದ್ದ ಇರುವ ಬಗ್ಗೆಯೂ ಸಭೆಯ ಗಮನಕ್ಕೆ ತಂದರು.
ಇದೇ ಸಂದರ್ಭದಲ್ಲಿ ಒಂದು ವರ್ಷ ಪೂರೈಸಿದ ರಾಜ್ಯ ವಖ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ ಅವರನ್ನು ಸನ್ಮಾನಿಸಲಾಯಿತು. ಒಂದು ವರ್ಷದ ಸಾಧನೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.
ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಸದಸ್ಯ ರಾದ ಯಾಕೊಬ್, ಮೌಲನಾ ಶಾಫಿ ಸಾದಿ, ರಿಯಾಜ್, ಅಸೀಫ್, ವಸತಿ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಸಿ ಇ ಒ ಜಿಲಾನಿ ಮೊಕಾಶಿ ಉಪಸ್ಥಿತರಿದ್ದರು.





