ಈ ದಿನ ಸಂಪಾದಕೀಯ | ಬೆಲೆ ಏರಿಕೆ, ನಿರುದ್ಯೋಗವೇ ಚುನಾವಣೆ ವಿಷಯ; ಎಚ್ಚೆತ್ತ ಮತದಾರರು

Date:

Advertisements
ಅಚ್ಛೇ ದಿನಗಳು ಬರಲಿಲ್ಲ ಎಂಬುದು ಜನರ ಅಭಿಪ್ರಾಯಗಳಿಂದ ಸ್ಪಷ್ಟವಾಗುತ್ತದೆ. ದೇಶಭಕ್ತಿಯ ಹೆಸರಲ್ಲಿ ಅಧಿಕಾರಕ್ಕೆ ಬಂದ ಪಕ್ಷವು, ಈಗ ಭಕ್ತಿಯನ್ನು ಹಿಡಿದು ಚುನಾವಣೆ ಎದುರಿಸುವ ಕಸರತ್ತು ನಡೆಸಿ ವಿಫಲವಾಗಿದೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಭಾವನಾತ್ಮಕ ವಿಚಾರಗಳು ಬದಿಗೆ ಸರಿದು, ಬದುಕಿನ ಸಂಗತಿಗಳು ಮುನ್ನೆಲೆಗೆ ಬಂದಿರುವುದನ್ನು ಸಮೀಕ್ಷೆಗಳು ಎತ್ತಿ ಹಿಡಿಯುತ್ತಿವೆ.

ಸಮೀಕ್ಷೆ ಮತ್ತು ಸಂಶೋಧನೆಗಳಿಗೆ ಹೆಸರಾದ ‘ಸೆಂಟರ್‌ ಫಾರ್‌ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್‌’ (ಸಿಎಸ್‌ಡಿಎಸ್‌) ಸಂಸ್ಥೆಯು ತನ್ನ ಸಂಶೋಧನ ಕಾರ್ಯಕ್ರಮವಾದ ‘ಲೋಕನೀತಿ’ ಮೂಲಕ ಬಿಚ್ಚಿಟ್ಟಿರುವ ಅಂಕಿ- ಅಂಶಗಳು ಮಹತ್ವದ ಸಂಗತಿಗಳನ್ನು ತಿಳಿಸಿವೆ.

ಸಿಎಸ್‌ಡಿಎಸ್‌- ಲೋಕನೀತಿ ಸರ್ವೇಗಳು ವೈಜ್ಞಾನಿಕ ಎಂಬ ಕಾರಣಕ್ಕೆ ಗಮನ ಸೆಳೆಯುತ್ತವೆ. 2024ರ ಲೋಕಸಭೆ ಚುನಾವಣೆ ಕುರಿತು ಈ ಸಂಸ್ಥೆಯು ಏನು ಹೇಳಬಹುದೆಂಬ ಕುತೂಹಲಗಳಿದ್ದವು. ಅಂತಿಮವಾಗಿ ವಿವರಗಳು ಹೊರಬಿದ್ದಿದೆ.

Advertisements

ನಿರುದ್ಯೋಗ ಮತ್ತು ಬೆಲೆ ಏರಿಕೆ ಬಗ್ಗೆ ಅರ್ಧದಷ್ಟು ಮತದಾರರು ಕಳವಳ ವ್ಯಕ್ತಪಡಿಸಿರುವುದು ಮತ್ತು ಆ ವಿಷಯಗಳ ಮೇಲೆ ಚುನಾವಣೆ ನಡೆಯುತ್ತಿರುವುದು ಸರ್ವೇಯಿಂದ ಸ್ಪಷ್ಟವಾಗಿದೆ.

”ಕಳೆದ ಐದು ವರ್ಷಗಳಲ್ಲಿ ಉದ್ಯೋಗ ಪಡೆಯುವುದು ಸುಲಭವಾಗಿತ್ತೋ? ಕಷ್ಟವಾಗಿತ್ತೋ?” ಎಂಬ ಪ್ರಶ್ನೆಗೆ ಶೇ. 62ರಷ್ಟು ಜನರು “ಉದ್ಯೋಗ ಪಡೆಯುವುದು ಕಷ್ಟವಾಗಿದೆ” ಎಂದಿದ್ದಾರೆ. ಈ ಅಭಿಪ್ರಾಯ ತಾಳಿದವರಲ್ಲಿ ಶೇ. 62ರಷ್ಟು ಗ್ರಾಮೀಣರು, ಶೇ. 59ರಷ್ಟು ಪಟ್ಟಣವಾಸಿಗಳು, ಶೇ. 65ರಷ್ಟು ನಗರವಾಸಿಗಳು ಇದ್ದಾರೆ. ಶೇ. 65ರಷ್ಟು ಪುರುಷರು, ಶೇ. 59ರಷ್ಟು ಮಹಿಳೆಯರು ಈ ಪ್ರತಿಕ್ರಿಯೆ ನೀಡಿದ್ದಾರೆ. ಕೆಲಸ ಪಡೆಯುವುದು ಸುಲಭ ಎಂದವರಲ್ಲಿ ಶೇ. 17ರಷ್ಟು ಹಿಂದೂ ಮೇಲ್ಜಾತಿಯವರು, ಶೇ. 12ರಷ್ಟು ಒಬಿಸಿಗಳು, ಶೇ. 12ರಷ್ಟು ಎಸ್‌ಸಿಗಳು,  ಶೇ. 9ರಷ್ಟು ಎಸ್‌ಟಿಗಳು, ಶೇ. 6ರಷ್ಟು ಮುಸ್ಲಿಮರು, ಶೇ. 9ರಷ್ಟು ಇತರರು ಇದ್ದಾರೆ. ಆದರೆ ಹಿಂದೂ ಮೇಲ್ಜಾತಿಯ ಶೇ. 57ರಷ್ಟು ಜನರು, ಶೇ. 63ರಷ್ಟು ಒಬಿಸಿಗಳು, ಶೇ. 63ರಷ್ಟು ಎಸ್‌ಸಿಗಳು, ಶೇ. 59ರಷ್ಟು ಎಸ್‌ಟಿಗಳು, ಶೇ. 67ರಷ್ಟು ಮುಸ್ಲಿಮರು, ಶೇ. 62ರಷ್ಟು ಇತರರು ಪ್ರತಿಕ್ರಿಯಿಸಿ ಕೆಲಸ ಪಡೆಯುವುದು ಕಷ್ಟವಾಗಿದೆ ಎಂದು ಅಭಿಪ್ರಾಯ ತಾಳಿದ್ದಾರೆ. ಉದ್ಯೋಗ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಶೇ. 19 ಹಿಂದೂ ಮೇಲ್ಜಾತಿಯವರು, ಶೇ.17ರಷ್ಟು ಒಬಿಸಿಗಳು, ಶೇ. 17ರಷ್ಟು ಎಸ್‌ಸಿ, ಶೇ. 25ರಷ್ಟು ಎಸ್‌ಟಿಗಳು, ಶೇ.18 ಮುಸ್ಲಿಮರು ಮತ್ತು ಶೇ. 20ರಷ್ಟು ಇತರರು ತಿಳಿಸಿದ್ದಾರೆ.

”ಕಳೆದ ಐದು ವರ್ಷಗಳಲ್ಲಿ ಬೆಲೆ ಏರಿಕೆ ಆಗಿದೆಯೇ?” ಎಂಬ ಪ್ರಶ್ನೆಗೆ  ಶೇ. 71ರಷ್ಟು ಹೌದು ಎಂದರೆ, ಶೇ. 13ರಷ್ಟು ಜನರು ಇಲ್ಲ ಎಂದಿದ್ದಾರೆ. ಶೇ. 13ರಷ್ಟು ಜನ ಯಥಾಸ್ಥಿತಿ ಇರುವುದಾಗಿ ಹೇಳಿದ್ದಾರೆ. ”ಉದ್ಯೋಗ ಕಳೆದುಕೊಳ್ಳಲು ಯಾರು ಕಾರಣ?” ಎಂದು ಕೇಳಿದಾಗ, ಶೇ. 21ರಷ್ಟು ಜನರು ಕೇಂದ್ರ ಸರ್ಕಾರವನ್ನು, ಶೇ. 17ರಷ್ಟು ಮಂದಿ ರಾಜ್ಯ ಸರ್ಕಾರವನ್ನು, ಶೇ. 57ರಷ್ಟು ಜನರು ಕೇಂದ್ರ ಮತ್ತು ರಾಜ್ಯ ಎರಡನ್ನೂ ಉಲ್ಲೇಖಿಸಿದ್ದಾರೆ. ಬೆಲೆ ಏರಿಕೆ ಆಗಿದೆ ಎಂದವರು ಶೇ. 71 ಮಂದಿ. ಅದರಲ್ಲಿ ಶೇ. 76ರಷ್ಟು ಬಡವರು, ಶೇ. 70ರಷ್ಟು ಅತಿ ಬಡವರು, ಶೇ. 66 ಮಧ್ಯಮ ವರ್ಗ, ಶೇ. 68ರಷ್ಟು ಮೇಲ್ವರ್ಗದ ಜನರು ಇದ್ದಾರೆ. ಶೇ. 72ರಷ್ಟು ಗ್ರಾಮೀಣರು, ಶೇ. 69ರಷ್ಟು ಪಟ್ಟಣವಾಸಿಗಳು, ಶೇ. 33ರಷ್ಟು ನಗರ ವಾಸಿಗಳು ಬೆಲೆ ಏರಿಕೆಯಾಗಿದೆ ಎಂದಿರುವುದು ಗಮನಾರ್ಹ.

ಮಾರ್ಚ್‌ 28ರಿಂದ ಏಪ್ರಿಲ್‌ 8ರ ನಡುವೆ ನಡೆಸಿದ ಸಮೀಕ್ಷೆ ಇದಾಗಿದೆ. ಭಾರತದ 19 ರಾಜ್ಯಗಳಿಗೆ ಸೇರಿದ 100 ಲೋಕಸಭಾ ಕ್ಷೇತ್ರಗಳಲ್ಲಿನ 100 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ 400 ಮತದಾನ ಕೇಂದ್ರಗಳಿಗೆ ಒಳಪಟ್ಟ 10,019 ಮತದಾರರನ್ನು ಈ ಸಮೀಕ್ಷೆ ಒಳಗೊಂಡಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶದ ಕುರಿತು ನಿಖರವಾಗಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದ ‘ಈದಿನ.ಕಾಂ’, ಲೋಕಸಭೆ ಚುನಾವಣೆ ಸಂಬಂಧ ಇತ್ತೀಚೆಗೆ ಸರ್ವೇಯನ್ನು ಪ್ರಕಟಿಸಿದೆ. ಸಿಎಸ್‌ಡಿಎಸ್‌ ಸಮೀಕ್ಷೆ ಹೇಳುತ್ತಿರುವ ಸಂಗತಿಯನ್ನೇ ಈದಿನ ಮೆಗಾ ಸರ್ವೇಯೂ ಹೇಳಿದೆ. ರಾಜ್ಯದಲ್ಲಿ ಶೇ. 76.55ರಷ್ಟು ಜನರು ಬೆಲೆ ಏರಿಕೆ ಹೆಚ್ಚಾಗಿದೆ ಎಂದೂ, ಶೇ. 53.18ರಷ್ಟು ಜನರು ಉದ್ಯೋಗ ಕಡಿಮೆಯಾಗಿದೆ ಎಂದೂ, ಶೇ. 45.75ರಷ್ಟು ಜನರು ಭ್ರಷ್ಟಾಚಾರ ಹೆಚ್ಚಾಗಿದೆ ಎಂದು, ಶೇ. 42.02ರಷ್ಟು ಜನರು ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಹೆಚ್ಚಿದೆ ಎಂದು ಅಭಿಪ್ರಾಯ ತಾಳಿದ್ದಾರೆ. ಆದರೆ ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನ ಮತ್ತು ಖ್ಯಾತಿ ಹೆಚ್ಚಿದೆ ಎಂದು ಶೇ. 47.64ರಷ್ಟು ಜನರು ನಂಬಿಕೊಂಡಿದ್ದಾರೆ. ಮತ್ತೊಂದೆಡೆ ಶೇ. 56.14ರಷ್ಟು ಜನರು ಗ್ಯಾರಂಟಿಗಳ ಕಾರಣಕ್ಕೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ. ಅದರಲ್ಲಿ ಮಹಿಳೆಯರೇ ಶೇ. 59.28ರಷ್ಟು ಇದ್ದಾರೆ.

”ನಾವು ನಾಲ್ಕು ನೂರು ಸೀಟುಗಳನ್ನು ಗೆಲ್ಲುತ್ತೇವೆ” ಎಂದು ಬಿಜೆಪಿ ನಾಯಕರು ಹೇಳುತ್ತಿರುವುದಕ್ಕೂ ನಂಬಲಾರ್ಹ ಸಂಸ್ಥೆಗಳ ಸಮೀಕ್ಷೆಗಳಿಂದ ಹೊರಬೀಳುತ್ತಿರುವ ಅಂಶಗಳಿಗೂ ತಾಳೆಯಾಗುತ್ತಿಲ್ಲ. 2019ರ ಸಾರ್ವತ್ರಿಕ ಚುನಾವಣೆಯು ಪುಲ್ವಾಮಾ ದುರಂತದ ಮೇಲೆ ನಡೆದು ಅದರ ಲಾಭವನ್ನು ಆಡಳಿತಾರೂಢ ಬಿಜೆಪಿ ಪಡೆದುಕೊಂಡಿತ್ತು. ದೇಶದಾದ್ಯಂತ ಸಮೂಹ ಸನ್ನಿ ಸೃಷ್ಟಿಯಾಗಿದ್ದು ಮೋದಿಯವರಿಗೆ ವರದಾನವಾಗಿತ್ತು. ಆದರೆ ಪುಲ್ವಾಮಾ ದುರಂತದ ಸತ್ಯಗಳು ಹೊರಗೆ ಬರಲಿಲ್ಲ. ಬಿಜೆಪಿಯ ನಾಯಕ ಮತ್ತು ಪುಲ್ವಾಮಾ ಘಟನೆ ನಡೆದಾಗ ಜಮ್ಮು-ಕಾಶ್ಮೀರದಲ್ಲಿ ರಾಜ್ಯಪಾಲರಾಗಿದ್ದ ಸತ್ಯಪಾಲ್ ಮಲ್ಲಿಕ್ ಕೆಲ ಕಹಿ ಸತ್ಯಗಳನ್ನು ಕೆಲವು ತಿಂಗಳ ಹಿಂದೆ ಹೇಳಿಕೊಂಡಿದ್ದಾರೆ. ಬಿಜೆಪಿ ಸರ್ಕಾರ ನಿರ್ಲಕ್ಷ್ಯ ತಾಳಿದ್ದನ್ನು ಬೊಟ್ಟು ಮಾಡಿದ್ದಾರೆ. ಆದರೆ ಸತ್ಯಪಾಲ್ ಅವರ ಬಾಯಿ ಮುಚ್ಚಿಸುವ ಪ್ರಯತ್ನವನ್ನು ಬಿಜೆಪಿ ಯಶಸ್ವಿಯಾಗಿ ಮಾಡಿದೆ.

2014ರಲ್ಲಿ ಮೋದಿಯವರ ನಾಯಕತ್ವದಲ್ಲಿ ಬಿಜೆಪಿ ಚುನಾವಣೆಗೆ ಬಂದಾಗ, ”ಭ್ರಷ್ಟಾಚಾರ ನಿರ್ಮೂಲನೆ ಮಾಡಲಾಗುವುದು, ಬೆಲೆ ಏರಿಕೆ ತಗ್ಗಿಸಲಾಗುವುದು, ಒಳ್ಳೆಯ ದಿನಗಳು ಬರಲಿವೆ” ಎಂಬ ಘೋಷಣೆಗಳನ್ನು ಮಾಡಿದ್ದರು. ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣವನ್ನು ಪ್ರತಿಯೊಬ್ಬರ ಖಾತೆಗೂ ಹಾಕಲಾಗುವುದು ಎಂದು ಸುಳ್ಳು ಹೇಳಲಾಗಿತ್ತು. 2019ರ ಚುನಾವಣೆ ಮೋದಿಯವರ ಐದು ವರ್ಷಗಳ ವೈಫಲ್ಯಗಳ ಮೇಲೆ ನಡೆಯದಂತೆ ನೋಡಿಕೊಳ್ಳಲಾಯಿತು. ಜನರ ಮುಗ್ಧ ದೇಶಪ್ರೇಮವನ್ನು ಚುನಾವಣೆಯ ಸರಕನ್ನಾಗಿ ಮಾಡಿಕೊಂಡು ಯಾಮಾರಿಸಲಾಯಿತು. ಆದರೆ 2024ರ ಎಲೆಕ್ಷನ್ ಬಿಜೆಪಿಗೆ ಸುಲಭವಾಗಿಲ್ಲ. ಮೋದಿ ತನ್ನ ಸಾಧನೆಗಳೇನು ಎಂದು ಹೇಳುತ್ತಿಲ್ಲ. ಬರೀ ಸುಳ್ಳುಗಳ ಮೇಲೆ ಸೌಧವನ್ನು ಕಟ್ಟಲು ಹೊರಟಿರುವುದು ನಿಚ್ಚಳವಾಗಿ ಕಾಣುತ್ತಿದೆ. ಎಲ್ಲ ಕಿರುಕುಳದ ನಡುವೆಯೂ ಪರ್ಯಾಯ ಮಾಧ್ಯಮಗಳ ದನಿ ಹೆಚ್ಚಾಗುತ್ತಿದೆ. ಪ್ರಭುತ್ವದ ಪರವಾಗಿ ಮುಖ್ಯವಾಹಿನಿ ಮಾಧ್ಯಮಗಳು ಮಾಡುವ ಯೋಜಿತ ಪ್ರಚಾರಗಳನ್ನು ಜನರು ಪ್ರಶ್ನಿಸಲು ಶುರುಮಾಡಿದ್ದಾರೆ.

”ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸಲಾಗುವುದು” ಎಂದು ಮೋದಿ ಹೇಳಿದ್ದರು. ಆದರೆ ವಾಸ್ತವದಲ್ಲಿ ಇರುವ ಉದ್ಯೋಗಗಳನ್ನು ಜನರು ಕಳೆದುಕೊಂಡಿದ್ದಾರೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ 30 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಉಳಿದಿವೆ.

2022ರಲ್ಲಿ ದೇಶಾದ್ಯಂತ ಒಟ್ಟು 15,783 ಯುವಜನರು ನಿರುದ್ಯೋಗದ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2018ರಿಂದ 2022ರ ನಡುವೆ 28,464 ಯುವಜನರು ನಿರುದ್ಯೋಗದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿರುದ್ಯೋಗ ದರವು 2012ರಲ್ಲಿ (ಮೋದಿ ಅಧಿಕಾರಕ್ಕೆ ಬರುವ ಹಿಂದಿನ ವರ್ಷ) ಶೇ. 2.1 ಇತ್ತು; ಪ್ರಸ್ತುತ ಶೇ. 6.1ಕ್ಕೆ ಏರಿಕೆಯಾಗಿದೆ. 2018ರ ನಂತರದಲ್ಲಿ ನಿರುದ್ಯೋಗ ದರವು ಕಳೆದ 45 ವರ್ಷಗಳಲ್ಲಿಯೇ ಅತ್ಯಂತ ಕೆಟ್ಟ ಪರಿಸ್ಥಿತಿಗೆ ತಲುಪಿತ್ತು. ಮುಖ್ಯವಾಗಿ ವಿದ್ಯಾವಂತ ನಿರುದ್ಯೋಗಿಗಳ ಪ್ರಮಾಣ ಆತಂಕಕಾರಿಯಾಗಿದೆ. ಪದವೀಧರರಲ್ಲಿ ನಿರುದ್ಯೋಗ ದರವು ಶೇ. 19.2ರಿಂದ ಶೇ. 35.8ಕ್ಕೆ ಏರಿದರೆ, ಸ್ನಾತಕೋತ್ತರ ಪದವಿ ಪಡೆದವರಲ್ಲಿ ಈ ನಿರುದ್ಯೋಗ ದರವು ಶೇ. 36.2ರಷ್ಟು ದಾಖಲಾಗಿದೆ.

ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. 2014ರಲ್ಲಿ 450 ರೂ. ಇದ್ದ ಅಡುಗೆ ಅನಿಲ ಈಗ 1,100 ರೂ. ತಲುಪಿದೆ. ಪೆಟ್ರೋಲ್‌ ಬೆಲೆ ನೂರು ರೂಪಾಯಿ ದಾಟಿ ಬಹಳ ಕಾಲವೇ ಆಗಿ ಹೋಗಿದೆ. ಒಂದು ಕೆ.ಜಿ ಅಡುಗೆ ಎಣ್ಣೆ ದರ 200 ರೂ. ದಾಟಿತ್ತು. ಇವೆಲ್ಲವೂ ಮೋದಿ ಕಾಲದ ಬೆಲೆ ಏರಿಕೆಯ ಸ್ಯಾಂಪಲ್‌ಗಳು.

ಅಚ್ಛೇ ದಿನಗಳು ಬರಲಿಲ್ಲ ಎಂಬುದು ಜನರ ಅಭಿಪ್ರಾಯಗಳಿಂದ ಸ್ಪಷ್ಟವಾಗುತ್ತದೆ. ದೇಶಭಕ್ತಿಯ ಹೆಸರಲ್ಲಿ ಅಧಿಕಾರಕ್ಕೆ ಬಂದ ಪಕ್ಷವು, ಈಗ ಭಕ್ತಿಯನ್ನು ಹಿಡಿದು ಚುನಾವಣೆ ಎದುರಿಸುವ ಕಸರತ್ತು ನಡೆಸಿ ವಿಫಲವಾಗಿದೆ. ಚುನಾವಣಾ ಬಾಂಡ್‌ ಮೂಲಕ ಭ್ರಷ್ಟಾಚಾರವನ್ನು ಕಾನೂನಾತ್ಮಕಗೊಳಿಸಿ, ನ್ಯಾಯಾಂಗದ ಚಾಟಿ ಏಟಿಗೆ ಸುಸ್ತಾಗಿದೆ. ಪಾಕಿಸ್ತಾನದ ವಿಚಾರವನ್ನು ಮುನ್ನೆಲೆಗೆ ತಂದು ಚುನಾವಣಾ ಪ್ರಚಾರ ಮಾಡಿದರೆ, ‘ಚೀನಾ ಅತಿಕ್ರಮಣ’ದ ಪ್ರಶ್ನೆ ಧುತ್ತೆಂದು ನಿಲ್ಲುತ್ತದೆ. ಬಿಜೆಪಿ ಬತ್ತಳಿಕೆಯಲ್ಲಿನ ಅಸ್ತ್ರಗಳೆಲ್ಲವೂ ಒಂದೊಂದಾಗಿ ಖಾಲಿಯಾದಂತೆ ಕಾಣುತ್ತಿದೆ. ಜನರ ನೈಜ ಸಮಸ್ಯೆಗಳಿಗೆ ಮರಳಿ ಉತ್ತರಿಸಲೇಬೇಕಾದ ಸಂದಿಗ್ಧತೆ ಬಿಜೆಪಿಗೆ ಎದುರಾಗಿರುವುದು ಸ್ಪಷ್ಟ. ಭಾವನಾತ್ಮಕ ಸಂಗತಿಗಳಿಗಿಂತ ಬದುಕಿನ ಸಂಗತಿಗಳು ಚುನಾವಣೆಯ ವಿಷಯವಾಗಬೇಕು ಎಂದು ಜನ ನಿರ್ಧರಿಸುತ್ತಿರುವುದು ಆಶಾದಾಯಕ ಬೆಳವಣಿಗೆ. ಚುನಾವಣೆಯಲ್ಲಿ ಮುಖ್ಯವಾಗಬೇಕಾದದ್ದು ಇದೇ ಅಲ್ಲವೇ?

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X