ಕಾಂಗ್ರೆಸ್ ವತಿಯಿಂದ ರಂಜಾನ್ ಹಬ್ಬದ ಪ್ರಯುಕ್ತ ಅಕ್ಕಿ ಮತ್ತು ಇತರ ದಿನಸಿ ಸಾಮಾಗ್ರಿಗಳನ್ನು ವಿತರಣೆ ಮಾಡುತ್ತಿರುವುದು ಕಂಡು ಬಂದಿದೆ, ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವಾಗ ದಾವಣಗೆರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ಮುಸ್ಲಿಂ ಮತದಾರರನ್ನು ಓಲೈಸುವ ನಿಟ್ಟಿನಲ್ಲಿ ಇಂತಹ ಕೃತ್ಯಗಳನ್ನು ನಡೆಸಿ, ಆಸೆ ಆಮಿಷ ತೋರಿಸುವ ಕುತಂತ್ರ ರೂಪಿಸುತ್ತಿದೆ ಎಂದು ದಾವಣಗೆರೆ ಜಿಲ್ಲಾ ಬಿಜೆಪಿ ವಕ್ತಾರ ಬಿ.ಎಂ. ಸತೀಶ್ ಕೊಳೇನಹಳ್ಳಿ ಆರೋಪಿಸಿದ್ದಾರೆ.
ದಾವಣಗೆರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಲಿನ ಮುನ್ಸೂಚನೆಯಿಂದ ಕಾಂಗ್ರೆಸ್ ಪಕ್ಷ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಂಡಿದೆ. ಅಡ್ಡದಾರಿ ಹಿಡಿದು ಮತದಾರರಿಗೆ ರಂಜಾನ್ ಹಬ್ಬದ ಪ್ರಯುಕ್ತ ಆಹಾರ ಧಾನ್ಯಗಳ ವಿತರಣೆ ಮಾಡುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದೆ. ನೂರು ವರ್ಷಗಳ ಇತಿಹಾಸವಿದೆ ಎಂದು ಹೇಳಿಕೊಳ್ಳುವ ಪಕ್ಷಕ್ಕೆ ಇಂತಹ ದುರ್ಗತಿ ಬರಬಾರದಾಗಿತ್ತು ಎಂದು ವ್ಯಂಗ್ಯವಾಡಿದರು.
ಯಾವಾಗಲೂ ಭ್ರಷ್ಟ ನಡೆ ಅನುಸರಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮತದಾರ ಪ್ರಭು ಬರುವ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕುಕ್ಕರ್ ಹಂಚಿ ಮತದಾರರಿಗೆ ಆಸೆ ಆಮಿಷ ತೋರಿಸಿದ್ದು ಇನ್ನು ಮರೆಯದೆ ಮನಸ್ಸಿನಲ್ಲಿ ಇರುವಾಗ ಮತ್ತೇ ಇಂತಹ ಕೃತ್ಯಕ್ಕೆ ಇಳಿದಿರುವುದು ಭ್ರಷ್ಟ ಕಾಂಗ್ರೆಸ್‌ಗೆ ಇನ್ನು ಬುದ್ದಿ ಬಂದಿಲ್ಲ. ಭಗತ್ ಸಿಂಗ್ ನಗರ, ಯಲ್ಲಮ್ಮನಗರ, ಎಸ್.ಒ.ಜಿ ಕಾಲೋನಿಯಲ್ಲಿ ಕಾಂಗ್ರೆಸ್ ಪಕ್ಷ ಮತದಾರರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಧನಂಜಯ ರಾಘವೇಂದ್ರ, ಕಡ್ಲೆಬಾಳು, ವಿಶ್ವಾಸ್ ಎಚ್.ಪಿ. ಮತ್ತಿತರರಿದ್ದರು.