ಈ ದಿನ ಸಂಪಾದಕೀಯ | ಡಬಲ್‌ ಎಂಜಿನ್‌ ಸರ್ಕಾರ ಇರುವಲ್ಲೇ ಹೆಚ್ಚು ಗಲಭೆ ನಡೆಯುತ್ತಿರುವುದೇಕೆ?

Date:

Advertisements
ಮಣಿಪುರದಲ್ಲಿ ಅಧಿಕಾರದಲ್ಲಿರುವುದು ಬಿಜೆಪಿ ಸರ್ಕಾರ. ಹೋದಲ್ಲೆಲ್ಲ ಅವರೇ ಹೇಳಿಕೊಂಡು ತಿರುಗುವ ʼಡಬಲ್‌ ಎಂಜಿನ್‌ʼ ಸರ್ಕಾರ. ಬಿಜೆಪಿ ಆಡಳಿತವಿರುವ ರಾಜ್ಯಗಳನ್ನು ಗಮನಿಸಿದರೆ ಎಲ್ಲಾ ರಾಜ್ಯಗಳಲ್ಲೂ ಗಲಭೆ ತಡೆಯುವಲ್ಲಿ  ವಿಫಲರಾಗಿದ್ದಾರೆ

ಈಶಾನ್ಯ ಭಾರತದ ಪುಟ್ಟ ರಾಜ್ಯ ಮಣಿಪುರದಲ್ಲಿ ಊರಿಗೆ ಊರೇ ಬೆಂಕಿಯ ಜ್ವಾಲೆಯಲ್ಲಿ ನಲುಗಿದೆ. ಮಣಿಪುರದ ಅಖಿಲ ಬುಡಕಟ್ಟು ವಿದ್ಯಾರ್ಥಿ ಒಕ್ಕೂಟ ಮೇ 4ರಂದು ‘ಬುಡಕಟ್ಟು ಐಕ್ಯತಾ ಮೆರವಣಿಗೆ’ಯನ್ನು ಆಯೋಜಿಸಿತ್ತು. ಮೆರಣಿಗೆಯ ಮೇಲೆ ಕಲ್ಲು ತೂರಾಟ ನಡೆದಿದೆ. ನಂತರ ವಿಕೋಪಕ್ಕೆ ತಿರುಗಿ ಹಿಂಸಾಚಾರ ಭುಗಿಲೆದ್ದಿದೆ. ಕಂಡಲ್ಲಿ ಗುಂಡು ಹೊಡೆಯುವ ಆದೇಶ ಹೊರಡಿಸುವಷ್ಟು ಪರಿಸ್ಥಿತಿ ಕೈ ಮೀರಿದೆ.

ಕೋರ್ಟ್‌ ಆದೇಶದ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸುವುದಕ್ಕೆ ಸರ್ಕಾರ ಅವಕಾಶ ನೀಡಿದ್ದೇ ದೊಡ್ಡ ಲೋಪ. ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡುವುದರಲ್ಲಿ ಪೊಲೀಸ್‌ ಇಲಾಖೆ ವಿಫಲವಾಗಿದೆ. ಕಣಿವೆ ಪ್ರದೇಶದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ನಗರ ಪ್ರದೇಶಕ್ಕೆ ವ್ಯಾಪಿಸಿದೆ. ಸುಮಾರು ಎಂಟು ಜಿಲ್ಲೆಗಳಲ್ಲಿ ಹಿಂಸಾಚಾರ ನಡೆದಿದೆ. ಅಲ್ಲಿಯವರೆಗೆ ಸರ್ಕಾರ ಏನು ಮಾಡುತ್ತಿತ್ತು?

ಅಷ್ಟಕ್ಕೂ ಮಣಿಪುರದಲ್ಲಿ ಇರುವುದು ಬಿಜೆಪಿ ಸರ್ಕಾರ. ಹೋದಲ್ಲೆಲ್ಲ ಅವರೇ ಹೇಳಿಕೊಂಡು ತಿರುಗುವ ʼಡಬಲ್‌ ಎಂಜಿನ್‌ʼ ಸರ್ಕಾರ. ಬಿಜೆಪಿ ಆಡಳಿತವಿರುವ ರಾಜ್ಯಗಳನ್ನು ಗಮನಿಸಿದರೆ ಎಲ್ಲಾ ರಾಜ್ಯಗಳಲ್ಲೂ ಗಲಭೆ ತಡೆಯುವಲ್ಲಿ ಅವರು ವಿಫಲರಾಗಿದ್ದಾರೆ. ಕರ್ನಾಟಕದ ಮೂರು ಮುಕ್ಕಾಲು ವರ್ಷಗಳ ಬಿಜೆಪಿಯ ಆಡಳಿತವನ್ನು ನೋಡಿದರೆ ಅದು ಸ್ಪಷ್ಟವಾಗುತ್ತದೆ.

Advertisements

ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸಿಎಎ ವಿರುದ್ಧದ ಹೋರಾಟ ಬೆಂಗಳೂರಿನಲ್ಲೂ ಹಲವು ದಿನಗಳ ಕಾಲ ನಡೆದಿತ್ತು. ಯಾವುದೇ ಹಿಂಸಾಚಾರ ಆಗದ ರೀತಿಯಲ್ಲಿ ಪ್ರಗತಿಪರ ಮತ್ತು ಮುಸ್ಲಿಂ ಸಂಘಟನೆಗಳು ನಡೆದುಕೊಂಡಿದ್ದವು. ಆದರೆ ಮಂಗಳೂರಿನಲ್ಲಿ ಮಾತ್ರ ಸಿಎಎ ಪ್ರತಿಭಟನೆ ಯಾಕೆ ಹಿಂಸಾರೂಪ ಪಡೆಯಿತು? ಕಾರಣ ಸ್ಪಷ್ಟ, ಬಿಜೆಪಿ ನಾಯಕರ ಪ್ರಚೋದನಕಾರಿ ಹೇಳಿಕೆಗಳು ಮತ್ತು ಪೊಲೀಸರ ಕುಮ್ಮಕ್ಕು ಕಾರಣವಾಗಿತ್ತು ಎಂಬುದಕ್ಕೆ ಸಾಕಷ್ಟು ಪುರಾವೆಗಳು ಇವೆ. ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆಯುತ್ತಿದ್ದಾಗ ನಿಂತು ನೋಡುತ್ತಿದ್ದ ಪೊಲೀಸರ ಬಳಿ ಬಂದು “ಇನ್ನೂ ಒಂದು ಹೆಣವೂ ಬಿದ್ದಿಲ್ಲವೇ” ಎನ್ನುತ್ತಾ ಪೊಲೀಸ್‌ ಅಧಿಕಾರಿಯೊಬ್ಬರು ಗೋಲಿಬಾರ್‌ ಗೆ ಪ್ರಚೋದನೆ ನೀಡುತ್ತಿದ್ದ ದೃಶ್ಯವನ್ನು ಇಡೀ ರಾಜ್ಯವೇ ನೋಡಿದೆ. ಗಲಭೆಗೆ ಪ್ರಚೋದನೆ ನೀಡುವಲ್ಲಿ ದೃಶ್ಯ ಮಾಧ್ಯಮಗಳು ಪೈಪೋಟಿಗೆ ಬಿದ್ದಿದ್ದವು. ಕಡೆಗೂ ಗೋಲಿಬಾರ್‌ನಲ್ಲಿ ಇಬ್ಬರು ಮುಸ್ಲಿಂ ಯುವಕರು ಪ್ರಾಣ ತೆರಬೇಕಾಯಿತು.

ಆಗ ಗೃಹಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ನಂತರ ಮುಖ್ಯಮಂತ್ರಿಯಾಗಿ ಕರಾವಳಿಗೆ ಹೋದಾಗ, ಕೋಮು ವೈಷಮ್ಯದ ಘಟನೆಗಳ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ʼಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತದೆʼ ಎಂದು ಅತ್ಯಂತ ಬೇಜವಾಬ್ದಾರಿಯ ಉತ್ತರ ನೀಡಿದ್ದರು. ಆ ನಂತರ ಕರಾವಳಿಯಲ್ಲಿ ನಿತ್ಯ ಕೋಮುದ್ವೇಷದ ಘಟನೆಗಳು ಸರಣಿಯಂತೆ ನಡೆದುವು.

ಸಮಾಜದ ಸ್ವಾಸ್ಥ್ಯ ಕೆಡಿಸುವ ಹಲವು ಬೆಳವಣಿಗೆಗಳು ನಡೆದರೂ ಸರ್ಕಾರ ಯಾವುದೇ ಕಾನೂನು ಕ್ರಮ ಕೈಗೊಂಡಿರಲಿಲ್ಲ. ಶಿವಮೊಗ್ಗದಲ್ಲಿ ಹಿಂದೂಪರ ಸಂಘಟನೆಯ ಯುವಕ ಹರ್ಷನ ಕೊಲೆಯಾದ ರಾತ್ರಿ ಅಮಾಯಕ ಮುಸ್ಲಿಂ ಮನೆಗಳಿಗೆ, ವಾಹನಗಳಿಗೆ ಬೆಂಕಿ ಹಚ್ಚಲಾಯಿತು. 144 ಸೆಕ್ಷನ್‌ ಇದ್ದರೂ, ಸ್ವತಃ ಸಚಿವರಾಗಿದ್ದ ಕೆ ಎಸ್‌ ಈಶ್ವರಪ್ಪ ಮತ್ತು ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಶವಯಾತ್ರೆಯಲ್ಲಿ ಪಾಲ್ಗೊಂಡು ಇನ್ನಷ್ಟು ಗಲಭೆಗೆ ಪ್ರೇರಣೆಯಾಗಿದ್ದರು. ದೊಂಬಿ, ಗಲಭೆ ನಡೆಯಲು ಬಿಟ್ಟು ವಿರೋಧ ಪಕ್ಷದವರ ಮೇಲೆ ಗೂಬೆ ಕೂರಿಸುವ ಕೆಟ್ಟ ಚಾಳಿಯನ್ನು ಬಿಜೆಪಿ ಮಾಡುತ್ತಲೇ ಬಂದಿದೆ. ಗಲಭೆ ಸೃಷ್ಟಿಸಿ ಅದರಿಂದ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು, ಕಾರ್ಯಕರ್ತರ ಕೊಲೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ʼಶವ ರಾಜಕಾರಣʼ ಬಿಜೆಪಿಗೆ ಕರಗತವಾಗಿದೆ.

ದೆಹಲಿಯ ಕಾನೂನು ಸುವ್ಯವಸ್ಥೆ ಗೃಹ ಇಲಾಖೆಯ ಅಡಿ ಬರುತ್ತದೆ. ಅಲ್ಲಿನ ಶಾಹೀನ್‌ ಭಾಗ್‌ನಲ್ಲಿ ನಡೆಯುತ್ತಿದ್ದ ಶಾಂತಿಯುತ ಪ್ರತಿಭಟನೆಯ ಮೇಲೆ ಬಿಜೆಪಿ ಬೆಂಬಲಿತರು ನಡೆಸಿದ ದಾಳಿ, ಅದನ್ನು ಪೊಲೀಸರು ನಿಂತು ನೋಡುತ್ತಿದ್ದ ಪರಿ, ಜೆಎನ್‌ಯುನಲ್ಲಿ ಎಬಿವಿಪಿ ವಿದ್ಯಾರ್ಥಿಗಳು ನಡೆಸಿದ ಗೂಂಡಾಗಿರಿ, ಗೃಹ ಇಲಾಖೆ ಯಾವುದೇ ಆರೋಪಿಗಳ ವಿರುದ್ಧ ಕ್ರಮ ಜರುಗಿಸದೇ ಇರುವುದು, ಪ್ರಸ್ತುತ ದೆಹಲಿಯಲ್ಲಿ ಧರಣಿ ನಿರತ ಕುಸ್ತಿಪಟುಗಳ ಮೇಲೆ ಪೊಲೀಸ್ ಬಲಪ್ರಯೋಗ ಮುಂತಾದ ಬೆಳವಣಿಗೆಗಳನ್ನು ನೋಡಿದರೆ ಬಿಜೆಪಿಗರಿಗೆ ಗಲಭೆ, ಹಿಂಸಾಚಾರ ಎಂದರೆ ಬಹಳ ಇಷ್ಟ ಎಂಬುದು ಸ್ಪಷ್ಟವಾಗುತ್ತದೆ.

ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಯಾಗುವುದಕ್ಕೂ ಎರಡು ತಿಂಗಳಿರುವಾಗ ಮಾಸಿಕ ಎರಡೆರಡು ಬಾರಿ ರಾಜ್ಯಕ್ಕೆ ಬಂದು ಹಲವು ಯೋಜನೆಗಳನ್ನು ಘೋಷಿಸಿ, ಉದ್ಘಾಟಿಸಿ ಹೋಗುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಸದ್ಯ ಕರ್ನಾಟಕದಲ್ಲಿ ಸರಣಿ ರೋಡ್‌ ಶೋ, ಸಮಾವೇಶಗಳಲ್ಲಿ ವ್ಯಸ್ತರಾಗಿದ್ದಾರೆ.

ಕೊರೋನಾ ಎರಡನೇ ಅಲೆ ದೇಶದೆಲ್ಲೆಡೆ ಅಟ್ಟಹಾಸ ತೋರುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿ ರಾಜ್ಯಗಳಿಗೆ ನೆರವಾಗುವ ಬದಲು ಪಶ್ಚಿಮಬಂಗಾಳದಲ್ಲಿ ಒಂದು ತಿಂಗಳ ಕಾಲ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದರು. ಈಗ ತಮ್ಮದೇ ಸರ್ಕಾರ ಇರುವ ಮಣಿಪುರ ಹಿಂಸಾಚಾರದಲ್ಲಿ ನಲುಗುತ್ತಿದೆ. ಮೋದಿ ಯಥಾಪ್ರಕಾರ ಕರ್ನಾಟಕದಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ನಾಳೆ, ನಾಡಿದ್ದು ಬೆಂಗಳೂರಿನ ರಸ್ತೆ ರಸ್ತೆಗಳಲ್ಲಿ ಸಂಚರಿಸಲಿದ್ದಾರೆ.

ಗೆಲುವಿಗಾಗಿ, ಅಧಿಕಾರಕ್ಕಾಗಿ ಸದಾ ಹಾತೊರೆಯುವ ಇಂತಹ ರಾಜಕಾರಣಿಗಳಿಗೆ, ಪಕ್ಷಗಳಿಗೆ ಜನ ಬುದ್ದಿ ಕಲಿಸುವವರೆಗೂ ಇದು ಹೀಗೇ ಮುಂದುವರಿಯುತ್ತದೆ. ಅವರ ಅಟ್ಟಹಾಸಗಳಿಗೆ ಕರ್ನಾಟಕದಿಂದಲೇ ತಡೆ ಬೀಳುವಂತಾದರೆ ದೇಶಕ್ಕೆ ಒಂದು ಉತ್ತಮ ಸಂದೇಶ ರವಾನಿಸಿದಂತಾಗಲಿದೆ. ರಾಜ್ಯದಲ್ಲಿ ನಡೆದ ಕೋಮುವಾದಿ ಅಭಿಯಾನಗಳಿಗೆ ಪ್ರಜ್ಞಾವಂತ ಜನರ ನಿಲುವು ಏನಾಗಿತ್ತು ಎಂಬುದನ್ನು ಈ ಚುನಾವಣಾ ಫಲಿತಾಂಶ ಎತ್ತಿ ತೋರಿಸಬೇಕಾಗಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X