ಈ ದಿನ ಸಂಪಾದಕೀಯ | ರಾಹುಲ್ ಕಾರ್ಯಸೂಚಿಗೆ ಮೋದಿ ಮಣೆ ಹಾಕಿ ಶರಣಾದ ಗುಟ್ಟೇನು?

Date:

Advertisements
ಜಾತಿಜನಗಣತಿಯನ್ನು ಇಂಡಿಯಾ ಒಕ್ಕೂಟ ಗಂಭೀರವಾಗಿ ಕೈಗೆತ್ತಿಕೊಂಡಿರುವ ಹೊಸ ಪರಿಸ್ಥಿತಿಯಲ್ಲಿ, ಈ ಕನಿಷ್ಠ ಲಂಗೋಟಿಯೂ ಇಲ್ಲದೆ ಬಿಹಾರ ಚುನಾವಣೆ ಎದುರಿಸುವುದು ಕಷ್ಟವೆಂದು ಮೋದಿ ಪರಿವಾರಕ್ಕೆ ಮನವರಿಕೆ ಆದಂತಿದೆ

ಜಾತಿಜನಗಣತಿಯನ್ನು ತೀವ್ರವಾಗಿ ವಿರೋಧಿಸುತ್ತಿದ್ದ ಮೋದಿ ಮತ್ತು ಪರಿವಾರ ತಿಪ್ಪರಲಾಗ ಹೊಡೆದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಪಾದಿಸುತ್ತಿರುವ ಜಾತಿಗಣತಿಯ ಕಾರ್ಯಸೂಚಿಯನ್ನು ಅಪಹರಿಸಿದೆ. ಮುಂದಿನ ಜನಗಣತಿಯ ಭಾಗವಾಗಿ  ಜಾತಿಗಣತಿಯನ್ನೂ ನಡೆಸುವುದಾಗಿ ಸಾರಿದೆ ಮೋದಿ ಸರ್ಕಾರ. ಪಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ಸಿಟ್ಟು ಶೋಕದ ಮನಸ್ಥಿತಿ ದೇಶದಲ್ಲಿ ನೆಲೆಸಿದೆ. ಹಂತಕರಿಗೆ ಶಿಕ್ಷೆಯಾಗಬೇಕು ಎಂಬ ಒಕ್ಕೊರಲಿನ ಆಗ್ರಹವಿದೆ. ಹಂತಕರ ಹಿಂದಿರುವ ಪಾಕಿಸ್ತಾನಕ್ಕೆ ಪಾಠ ಕಲಿಸಬೇಕೆಂಬ ಮನಸ್ಥಿತಿ ಆವರಿಸಿದೆ. ತಮ್ಮ ರಕ್ತ ಕುದಿಯುತ್ತಿರುವುದಾಗಿ ಮೋದಿ ಮೊನ್ನೆಯಷ್ಟೇ ಹೇಳಿದ್ದರು.

ಪಾಕಿಸ್ತಾನದ ವಿರುದ್ಧ ಪ್ರತೀಕಾರದ ಬಹುದೊಡ್ಡ ತೀರ್ಮಾನದ ನಿರೀಕ್ಷೆಯಲ್ಲಿದ್ದ ಮೋದಿ ಮೀಡಿಯಾವಂತೂ ಅತೀವ ನಿರಾಸೆಯಲ್ಲಿ ಕನಲಿದೆ. ಅದರ ಪ್ರತೀಕ್ಷೆ ಹುಸಿಯಾಗಿದೆ. ರಾಹುಲ್ ಗಾಂಧಿಯವರನ್ನು ‘ಪಪ್ಪು’ ಅಥವಾ ‘ಪೆದ್ದ’ ಎಂದು ಹತ್ತು-ಹನ್ನೆರಡು ವರ್ಷ ಹಗಲಿರುಳೂ ಬಿಜೆಪಿಯ ತಮಟೆ ಬಡಿದಿತ್ತು ಈ ಗೋದಿ ಮೀಡಿಯಾ. ತಾನು ‘ಪೆದ್ದ’ ಎಂದು ಸಾರಿದ್ದ ಅದೇ ರಾಹುಲ್ ಗಾಂಧಿಯ ‘ಐಡಿಯಾ’ವನ್ನು ಎಗರಿಸಿ ತನ್ನದೆಂದು ಚಿಮ್ಮಿಸಿದ್ದಾರೆ ಮೋದಿ. ಜಾತಿಗಣತಿಯು ದೇಶವನ್ನು ಒಡೆಯುತ್ತದೆ, ಸಮಾಜವನ್ನು ಚೆದುರಿಸಿ ಚೆಲ್ಲಾಪಿಲ್ಲಿ ಮಾಡಿ ಹಾಳುಗೆಡವುತ್ತದೆ ಎಂದೆಲ್ಲ ತುತ್ತೂರಿ ಊದಿದ್ದ ಮಡಿಲ ಮೀಡಿಯಾ ಮೋದಿ ನಡೆಯಿಂದ ದಿಕ್ಕೆಟ್ಟಿದೆ. ರಾಜಕೀಯ ಲೆಕ್ಕಾಚಾರ ಏನೇ ಇರಲಿ. ತಾವು ಕಡುವಾಗಿ ವಿರೋಧಿಸುತ್ತಿದ್ದ ಜಾತಿ ಜನಗಣತಿಯನ್ನು ಇದೀಗ ತಮ್ಮದೇ ಅನುಕ್ರಮ ಎಂದು ತಮಟೆ ಬಾರಿಸಿದೆ ಮೋದಿ ಸರ್ಕಾರ. ಜಾತಿ ಎಂದವನಿಗೆ ಲಾತ ಕೊಡ್ತೀನಿ ಎನ್ನುತ್ತಿದ್ದ ಮಂತ್ರಿ ಮಾಗಧರೆಲ್ಲ ಈಗ ಹಠಾತ್ತನೆ ಜಾತಿ ಜನಗಣತಿಗೆ ಉಘೇ ಉಘೇ ಹೇಳತೊಡಗಿದ್ದಾರೆ.

‘ಜಾತಿ ನಹೀ ಪೂಛಾ ಧರಮ್ ಪೂಛಾ’ ಎಂದು ಪಹಲ್ಗಾಮ್ ದುರಂತದಲ್ಲೂ ಜಾತಿಜನಗಣತಿ ವಿರುದ್ಧ ಪೋಸ್ಟರ್ ಮಾಡಿತ್ತು ಬಿಜೆಪಿ. ಕುಂಭಮೇಳದಲ್ಲಿ ಯಾರೂ ಜಾತಿ ಕೇಳಲಿಲ್ಲ, ಜಾತಿಯ ಮಾತಾಡುತ್ತೀರಲ್ಲ ಎಂದು ಮೂದಲಿಸಿತ್ತು.

Advertisements

2011ರಲ್ಲಿ ಯುಪಿಎ ಸರ್ಕಾರ ಜಾತಿ ಜನಗಣತಿಯಲ್ಲಿ ಸಾಮಾಜಿಕ-ಆರ್ಥಿಕ ಸಮೀಕ್ಷೆಯನ್ನೂ ನಡೆಸಿತ್ತು. ಈ ಸಮೀಕ್ಷೆಯ ದತ್ತಾಂಶವನ್ನು ಈವರೆಗೆ ಹೊರ ಹಾಕಲಾಗಿಲ್ಲ. 2014ರ ತನಕ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ಕೂಡ ಬಹಿರಂಗಗೊಳಿಸಿರಲಿಲ್ಲ. ಆದರೆ ರಾಹುಲ್ ಗಾಂಧಿ ಈ ಕೊರತೆಯನ್ನು ತುಂಬಿಸುವಂತೆ ನಡೆದುಕೊಂಡಿದ್ದಾರೆ.

ಅತ್ಯಲ್ಪ ಪ್ರಮಾಣದ ಜನಸಂಖ್ಯೆ ಹೊಂದಿರುವ ಬಲಿಷ್ಠ ಜಾತಿಗಳು ದೇಶವನ್ನು ಆಳುತ್ತ ಬಂದಿವೆ. ನೀತಿ ನಿರ್ಧಾರಗಳನ್ನು ರೂಪಿಸಿವೆ. ರಾಜಕೀಯ ಅಧಿಕಾರವನ್ನು ತಮ್ಮ ಮುಷ್ಟಿಯಲ್ಲಿ ಇರಿಸಿಕೊಂಡಿವೆ. ಈ ‘ಪಿರಮಿಡ್’ ಮಾದರಿ ತಲೆಕೆಳಗಾಗಬೇಕಿದೆ. ದಲಿತರು-ಆದಿವಾಸಿಗಳು-ಹಿಂದುಳಿದವರ ವಿಶಾಲ ತಳ ತುದಿ ತಲುಪಬೇಕಿದೆ. ಕೆಲವೇ ಕೆಲವರನ್ನು ಹೊಂದಿರುವ ತುದಿಯು ಕೆಳಕ್ಕೆ ಬರಬೇಕಿದೆ. ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಕಳೆದ ಕೆಲ ವರ್ಷಗಳಿಂದ ದೇಶದಲ್ಲಿ ನಿಧಾನವಾಗಿ ಆದರೆ ನಿಶ್ಚಿತವಾಗಿ ಜಾತಿಜನಗಣತಿಯ ಅಗತ್ಯವನ್ನು ಶೂದ್ರ ಬಹುಜನ ಮನದಲ್ಲಿ ಬಿತ್ತುತ್ತ ಬಂದಿದ್ದಾರೆ. ಜಾತಿಜನಗಣತಿಯ ಬೇಡಿಕೆಯನ್ನು ಅದರ ಹಿಂದಿನ ತರ್ಕವನ್ನು, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಧರ್ಮದ ಹೆಸರಿನಲ್ಲಿ ತಿರಸ್ಕರಿಸುತ್ತ ಬರಲಾಗಿದೆ.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಕರ್ನಾಟಕಕ್ಕೂ ಕಾಲಿಟ್ಟ ಮಾಬ್ ಲಿಂಚಿಂಗ್; ಇಲ್ಲಿ ಸರ್ಕಾರ ಜೀವಂತವಿದೆಯೇ?

ಬಿಹಾರದಲ್ಲಿ ವಿಧಾನಸಭಾ ಚುನಾವಣೆಗಳು ಕದ ಬಡಿದಿವೆ. ಬಿಜೆಪಿ ತೀವ್ರತರ ತಯಾರಿ ನಡೆಸಿದೆ. ಪೆಹಲ್ಗಾಮ್ ದುರಂತದ ಮರುದಿನವೇ ಪ್ರಧಾನಿ ಬಿಹಾರದ ಮಧುಬನಿ ಜಿಲ್ಲೆಯ ರ್ಯಾಲಿಯೊಂದರಲ್ಲಿ ಭಾಗವಹಿಸಿದ್ದೇ ಈ ಮಾತಿಗೆ ನಿದರ್ಶನ. ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸುವವರು ಯಾರೂ ಬಿಹಾರದ ಜಾತಿಲೆಕ್ಕಾಚಾರವನ್ನು ಕಡೆಗಣಿಸುವ ತಪ್ಪು ಮಾಡುವುದಿಲ್ಲ. ಬಿಜೆಪಿಯೂ ಈ ಮಾತಿಗೆ ಹೊರತಲ್ಲ. ಲೋಕಸಭೆ ಚುನಾವಣೆಗೆ ತುಸುವೇ ಮುನ್ನ ಬಿಜೆಪಿಯನ್ನುಆಲಿಂಗಿಸಿದ ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾದಳವೂ ಜಾತಿ ಜನಗಣತಿಯ ಆದ್ಯ ಪ್ರತಿಪಾದಕ ಪಕ್ಷ. ಬಿಹಾರದಲ್ಲಿ ಹಿಂದುಳಿದವರು ಮತ್ತು ಅತಿ ಹಿಂದುಳಿದವರ ಶೇಕಡಾವಾರು ಪ್ರಮಾಣ 63.14. ಹಿಂದುಳಿದ ಜಾತಿಗಳ ಪ್ರಮಾಣ ಶೇ. 27.13 ಮತ್ತು ಅತಿ ಹಿಂದುಳಿದ ಜಾತಿಗಳ ಪ್ರಮಾಣ ಶೇ. 36.01. ಪರಿಶಿಷ್ಟರ ಪ್ರಮಾಣ ಶೇ.19.65 ಮತ್ತು ಪರಿಶಿಷ್ಟ ಬುಡಕಟ್ಟುಗಳ ಪ್ರಮಾಣ ಶೇ.1.68. ಜನರಲ್ ಕೆಟಗರಿಯ ಪ್ರಮಾಣ ಶೇ.15.64. ಈ 15.64 ರಷ್ಟು ಜನರಿಗೆ ಶೇ.10ರಷ್ಟು ಮೀಸಲಾತಿಯನ್ನು ಮೋದಿ ಸರ್ಕಾರ ನೀಡಿ ಆಗಿದೆ. ಉಳಿದ ಶೇ.84ರಷ್ಟು ಜನತೆಯನ್ನು ಸಂಭಾಳಿಸಬೇಕಿದೆ. ಜಾತಿ ಜನಗಣತಿಯನ್ನು ನಡೆಸುವ ಭರವಸೆಯನ್ನಾದರೂ ಅವರ ಕಣ್ಣ ಮುಂದೆ ತೂಗಿಬಿಡಬೇಕಿದೆ. ಜಾತಿಜನಗಣತಿಯನ್ನು ಇಂಡಿಯಾ ಒಕ್ಕೂಟ ಗಂಭೀರವಾಗಿ ಕೈಗೆತ್ತಿಕೊಂಡಿರುವ ಹೊಸ ಪರಿಸ್ಥಿತಿಯಲ್ಲಿ, ಈ ಕನಿಷ್ಠ ಲಂಗೋಟಿಯೂ ಇಲ್ಲದೆ ಬಿಹಾರ ಚುನಾವಣೆ ಎದುರಿಸುವುದು ಕಷ್ಟವೆಂದು ಮೋದಿ ಪರಿವಾರಕ್ಕೆ ಮನವರಿಕೆ ಆದಂತಿದೆ.

ದ್ರೋಣಾಚಾರ್ಯರುಗಳು ಯಾವ್ಯಾವ ಏಕಲವ್ಯರುಗಳ ಹೆಬ್ಬರಳುಗಳನ್ನು ಕತ್ತರಿಸಿವೆ ಎಂಬುದನ್ನು ಬಟಾಬಯಲು ಮಾಡುವುದೇ ಜಾತಿಜನಗಣತಿ. ಇಂಡಿಯಾ ಮೈತ್ರಿ ಕೂಟ ಇದೇ ಸದನದಲ್ಲಿ ಜಾತಿ ಜನಗಣತಿ ವಿಧೇಯಕವನ್ನು ಅಂಗೀಕರಿಸಲಿದೆ. ಈ ಮಾತನ್ನು ಬರೆದಿಟ್ಟುಕೊಳ್ಳಿ-  ಶೇ.50ರ ಮೀಸಲಾತಿಯ ಗೋಡೆಯನ್ನು ಕೆಡವಲಿದ್ದೇವೆ ಎಂದು ಹತ್ತು ತಿಂಗಳ ಹಿಂದೆ  ಲೋಕಸಭೆಯಲ್ಲಿ ನಿಂತು ಘೋಷಿಸಿದ್ದರು ರಾಹುಲ್ ಗಾಂಧಿ. ಅವರನ್ನು ಮೋದಿ ಸಂಗಾತಿಗಳು ಗೇಲಿ ಮಾಡಿದ್ದರು. ‘ಖುದ್ದು ತನ್ನ ಜಾತಿ ಯಾವುದು ಅಂತಾನೇ ಗೊತ್ತಿಲ್ಲದವನು (ಜಾತಿ)ಗಣತಿಯ ಮಾತಾಡ್ತಾನೆ’ ಎಂದಿದ್ದರು. ರಾಹುಲ್ ಜಾತಿಯನ್ನು ಪ್ರಶ್ನಿಸಿ ಚಪ್ಪಾಳೆ ತಟ್ಟಿ ವ್ಯಂಗ್ಯ ಮಾಡಿ ನಗಲಾಗಿತ್ತು. ಹೀಗೆ ಗೇಲಿ ಮಾಡಿದ್ದವರು ಅನುರಾಗ್ ಠಾಕೂರ್. ‘ಗೋಲಿ ಮಾರೋ ಸಾಲೋಂ ಕೋ’ ಎಂಬುದಾಗಿ ಮುಸ್ಲಿಮರ ವಿರುದ್ಧ ಬಹಿರಂಗ ಸಭೆಯಲ್ಲಿ ಘೋಷಣೆ ಕೂಗಿಸಿದ ಖ್ಯಾತಿಯ ಅದೇ ಅನುರಾಗ್ ಠಾಕೂರ್ ಇವರು.

ದೇಶದ ಸಂಪನ್ಮೂಲಗಳು ಕೆಳಗೆ ಬಿದ್ದ ಜನಸಮುದಾಯಗಳಿಗೆ ದಕ್ಕುತ್ತಲೇ ಇಲ್ಲ. ಹಾಗೆ ದಕ್ಕಬೇಕಿದ್ದರೆ ಯಾವ ಜಾತಿಯ ಜನರ ಸಂಖ್ಯೆ ಎಷ್ಟು ಎಂಬುದು ಗೊತ್ತಾಗಬೇಕು. ಗೊತ್ತಾಗಲು ಜಾತಿ ಜನಗಣತಿ ನಡೆಯಬೇಕು ಎಂಬುದು ಕಾಂಗ್ರೆಸ್ ಪಕ್ಷದ ನಿಲುವು. ಕಾಂಗ್ರೆಸ್‌ನ ಮಿತ್ರಪಕ್ಷವಾದ ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಜನತಾದಳವೂ ಈ ನಿಲುವನ್ನು ಪ್ರತಿಪಾದಿಸಿವೆ.

ಇತ್ತೀಚಿನ ದಶಕಗಳಲ್ಲಿ ಜಾತಿಜನಗಣತಿ ಮತ್ತು ಪ್ರಾತಿನಿಧ್ಯ ಕುರಿತು ಕೇಳಿ ಬಂದಿದ್ದ ಮೊದಲ ಗಟ್ಟಿ ದನಿ ಬಿ.ಎಸ್.ಪಿ.ಯ ಮಾನ್ಯವರ ಕಾನ್ಶೀರಾಮ್ ಅವರದಾಗಿತ್ತು. “ಜಿಸ್ ಕೀ ಜಿತನೀ ಸಂಖ್ಯಾ ಭಾರಿ, ಉಸ್ಕೀ ಉತನೀ ಹಿಸ್ಸೇದಾರಿ” (ಯಾವ್ಯಾವ ಜಾತಿಯ ಜನಸಂಖ್ಯೆ ಎಷ್ಟೆಷ್ಟಿದೆಯೋ ಅವರಿಗೆ ಅಷ್ಟಷ್ಟು ಹಿಸ್ಸೇದಾರಿ). ಈ ಹಿಸ್ಸೇದಾರಿಯಲ್ಲಿ, ಸಾಮಾಜಿಕ, ಆರ್ಥಿಕ, ರಾಜಕಾರಣ ಸೇರಿದ್ದವು.

‘ಜಾತಿ ಇರುವ ತನಕ ನನ್ನ ಸಮುದಾಯದ ಪ್ರಯೋಜನಕ್ಕಾಗಿ ಅದನ್ನು ಬಳಸಿಕೊಳ್ಳುತ್ತೇನೆ. ನಿಮಗೇನಾದರೂ ಸಮಸ್ಯೆ ಇದ್ದರೆ ಜಾತಿವ್ಯವಸ್ಥೆಯನ್ನು ಅಂತ್ಯಗೊಳಿಸಿ’ ಎಂಬುದಾಗಿ ಕಾನ್ಶೀರಾಮ್ ಸವರ್ಣೀಯ ಮನಸ್ಥಿತಿಗಳಿಗೆ ಸವಾಲು ಎಸೆದಿದ್ದರು.

ಅಜಮಾಸು ಇದೇ ತತ್ವದ ಪ್ರತಿಪಾದನೆ ರಾಹುಲ್ ಗಾಂಧಿ ಅವರದು. ಕೇವಲ ಸಂಸತ್ತಿನಲ್ಲಿ ಒತ್ತಡ ಹೇರುವುದು ಮಾತ್ರವಲ್ಲ, ಜಾತಿ ಜನಗಣತಿಯ ಪರವಾಗಿ ಬೇರುಮಟ್ಟದಲ್ಲಿ ಪ್ರಚಾರಸಮರವನ್ನೇ ನಡೆಸಿದ್ದರು. ತೆಲಂಗಾಣದಲ್ಲಿ ಅವರ ಒತ್ತಾಸೆಯಿಂದಾಗಿಯೇ ಕಾಂಗ್ರೆಸ್ ಸರ್ಕಾರ ಜಾತಿ ಜನಗಣತಿ ಮುಗಿಸಿ ಮೀಸಲು ಜಾರಿ ಮಾಡಿದೆ. ‘ಪಲ್ಟೀಕುಮಾರ್’ ಎಂಬ ಅಭಿದಾನ ಗಳಿಸಿರುವ ಕೇಸರಿ ಗೆಳೆಯ ನಿತೀಶ್ ಕುಮಾರ್ ಕೂಡ ತಮ್ಮ ರಾಜ್ಯದಲ್ಲಿ ಜಾತಿಜನಗಣತಿ ನಡೆಸಿ ಅದರ ಪ್ರಕಾರ ಮೀಸಲಾತಿಯನ್ನು ಕೂಡ ಜಾರಿಗೊಳಿಸಿದ್ದಾರೆ.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಮರ್ಯಾದೆಗೇಡು ಹತ್ಯೆಗಳು ನಿಲ್ಲಬೇಕಿದ್ದರೆ ಜಾತಿವಿನಾಶ ಆಗಲೇಬೇಕು

ಇಂದಿರಾ ಸಾಹ್ನಿ ವರ್ಸಸ್ ಭಾರತ ಒಕ್ಕೂಟ (1992) ಕೇಸಿನ ತೀರ್ಪಿನಲ್ಲಿ ಒಟ್ಟು ಪ್ರಮಾಣ ಶೇ.50ರ ಮಿತಿಯನ್ನು ದಾಟಕೂಡದು ಎಂದು ವಿಧಿಸಿರುವುದು ಹೌದು. ಆದರೆ ಜಾತಿ ಜನಗಣತಿಯ ಅಂಕಿಅಂಶಗಳು ಬೇರೆಯದೇ ಹೊಸ ಕತೆಯನ್ನು ಹೊಸ ಚಿತ್ರಣದ ವಾಸ್ತವತೆಗಳನ್ನು ಅನಾವರಣಗೊಳಿಸಿವೆ. ಬಿಹಾರದ ಶೇ.65ರ ಮೀಸಲಾತಿಯನ್ನು ಸುಪ್ರೀಮ್ ಕೋರ್ಟ್ ಕೂಡ ತಡೆ ಹಿಡಿದಿಲ್ಲ.

ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಜಾತಿಜನಗಣತಿಯನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳುತ್ತ ಬಂದಿದ್ದ ಪ್ರಬಲ ಪ್ರತಿಪಾದಕರು. ಯಾವ ಜಾತಿಯ ಜನರ ಸಂಖ್ಯೆ ಎಷ್ಟೆಷ್ಟು ಎಂದು ಎಣಿಸಬೇಕು, ಅವರ ರಾಜಕೀಯ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳ ಅಧ್ಯಯನವೂ ಈ ಎಣಿಕೆಯಲ್ಲಿ ಸೇರಬೇಕು. ಈ ದತ್ತಾಂಶದ ಆಧಾರದ ಮೇರೆಗೆ ದೇಶದ ಸಂಪನ್ಮೂಲಗಳ ಹಂಚಿಕೆ ಆಗಬೇಕು. ಸಾಮಾಜಿಕ ನ್ಯಾಯದ ಈ ವಾದವನ್ನು ರಾಹುಲ್ ಗಾಂಧೀ ಸಂಸತ್ತಿನ ಒಳಗೆ ಮತ್ತು ಹೊರಗೆ ಮಂಡಿಸುತ್ತಲೇ ಬಂದಿದ್ದಾರೆ. ಈ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಮೋದಿ ನೇತೃತ್ವದ ಒಕ್ಕೂಟ ಸರ್ಕಾರವನ್ನು ಆಗ್ರಹಿಸಿದ್ದಾರೆ. ತಮ್ಮ ಪಕ್ಷದ ರಾಜ್ಯ ಸರ್ಕಾರಗಳು ಜಾತಿ ಜನಗಣತಿ ನಡೆಸುವಂತೆ ಆದೇಶ ನೀಡಿದ್ದಾರೆ. ತೆಲಂಗಾಣ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಆದೇಶವನ್ನು ಪರಿಪಾಲಿಸಿದೆ. ಕರ್ನಾಟಕ ಸರ್ಕಾರ ಈ ಹಿಂದೆಯೇ ತಯಾರಿದ್ದ ಜನಗಣತಿಯ ವರದಿಯನ್ನು ಜಾರಿಗೆ ತರುವುದಿರಲಿ, ಅದನ್ನು ಬಹಿರಂಗಪಡಿಸಲೂ ಮೀನಮೇಷ ಎಣಿಸುತ್ತಿದೆ. ರಾಹುಲ್ ಒತ್ತಡದ ಕಾರಣ ಈ ವರದಿಯನ್ನು ಕನಿಷ್ಠ ಪಕ್ಷ ಸಚಿವ ಸಂಪುಟದ ಮುಂದೆಯಾದರೂ ಮಂಡಿತವಾಗಿದೆ.

ಮುಂಬರುವ ಜನಗಣತಿಯಲ್ಲಿ ಜಾತಿ ಜನಗಣತಿಯನ್ನೂ ನಡೆಸಲಾಗುವುದು ಎಂಬ ಮೋದಿ ಸರ್ಕಾರದ ಪ್ರಕಟಣೆಯನ್ನು ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಸ್ವಾಗತಿಸಿದ್ದಾರೆ. ಬೆಂಬಲವನ್ನೂ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕೆಲವು ಪ್ರಶ್ನೆಗಳನ್ನೂ ಕೇಳಿದ್ದಾರೆ. ಜನಗಣತಿ- ಜಾತಿ ಜನಗಣತಿ ಯಾವಾಗ ನಡೆಯಲಿದೆ, ಹೇಗೆ, ಯಾವ ರೀತಿಯ ಪ್ರಶ್ನೆಗಳನ್ನು ಕೇಳಲಾಗುವುದು, ಒಂದು ವೇಳಾಪಟ್ಟಿಯನ್ನು ತಿಳಿಸಿ ಎಂದಿದ್ದಾರೆ.

ತೆಲಂಗಾಣದ ಮಾದರಿಯೇ ನೀಲನಕ್ಷೆಯಾಗಲಿ. ಬಿಹಾರ ಮತ್ತು ತೆಲಂಗಾಣದ ಎರಡು ಮಾದರಿಗಳಲ್ಲಿ ನೆಲಮುಗಿಲುಗಳ ಅಂತರವಿದೆ. ತೆಲಂಗಾಣ ಮಾದರಿ ಎಂಟು-ಹತ್ತು ಮಂದಿ ಅಧಿಕಾರಿಗಳು ಮುಚ್ಚಿದ ಬಾಗಿಲುಗಳ ಹಿಂದೆ ಕುಳಿತು ರೂಪಿಸಿದ್ದಲ್ಲ. ಜಾತಿಗಣತಿಯ ನೀಲನಕ್ಷೆ ನೀಡಲು ಕಾಂಗ್ರೆಸ್ ಸಿದ್ಧವಿದೆ. ಜಾತಿ ಜನಗಣತಿ ಕೇವಲ ಎಣಿಕೆಗೆ ಸೀಮಿತವಲ್ಲ. ಮೀಸಲಾತಿಯ ಪ್ರಮಾಣ ಶೇ.50ರ ಮಿತಿಯನ್ನು ಮೀರಬೇಕು. ತೆಲಂಗಾಣ ಈ ಮಿತಿಯನ್ನು ಕೆಡವಿ ಹಾಕಿದೆ ಎಂದು ರಾಹುಲ್ ಹೇಳಿದ್ದಾರೆ.

ಅಪ್ರಸ್ತುತ ಪ್ರಶ್ನೆಗಳನ್ನು ಕೇಳಿದರೆ ಈ ಜಾತಿಜನಗಣತಿಯಿಂದ ಯಾವ ಪ್ರಯೋಜನವೂ ಇಲ್ಲ. ತೆಲಂಗಾಣದಲ್ಲಿ ಕಾರ್ಪೊರೇಟ್ ಸಂರಚನೆಯಲ್ಲಿ ಸಿಇಒಗಳು, ಮ್ಯಾನೇಜ್ಮೆಂಟ್ ತಂಡಗಳು, ಮಾಲೀಕರ ಪೈಕಿ ಒಬ್ಬ ದಲಿತ ಆದಿವಾಸಿ, ಹಿಂದುಳಿದ ವ್ಯಕ್ತಿಯೂ ಸಿಗುವುದಿಲ್ಲ. ಶೇ.90ರಷ್ಟು ಇಂಡಿಯಾಗೆ ಅಲ್ಲಿ ಪ್ರಾತಿನಿಧ್ಯವೇ ಸಿಕ್ಕಿಲ್ಲ. ಆಧುನಿಕ ಗುಲಾಮಗಿರಿಯೇ ಆಗಿರುವ ಗಿಗ್ ಕಾರ್ಮಿಕರ ಪೈಕಿ ಒಬಿಸಿ ದಲಿತ ಆದಿವಾಸಿಗಳೇ ತುಂಬಿದ್ದಾರೆಂಬ ಅಂಶಗಳನ್ನು ತೆಲಂಗಾಣದ ಜಾತಿ ಜನಗಣತಿ ಹೊರಹಾಕಿದೆ.

2011ರ ನಂತರ ಜನಗಣತಿಯೇ ನಡೆದಿಲ್ಲ. ಬಜೆಟ್ಟಿನಲ್ಲಿ 1500 ಕೋಟಿಯಿಂದ 570 ಕೋಟಿಗೆ ಇಳಿಸಲಾಗಿದೆ ಬಜೆಟ್ಟಿನಲ್ಲಿ. 2021ರಲ್ಲೇ ಜನಗಣತಿ ನಡೆಯಬೇಕಿತ್ತು. ಕೋವಿಡ್ ನಂತರ 2023ರಲ್ಲೂ ನಡೆಯಲಿಲ್ಲ. 2024ರಲ್ಲಿ ಚುನಾವಣೆಯ ನೆಪ ಒಡ್ಡಲಾಯಿತು. ಇದೀಗ ಜಾತಿಗಣತಿಯ ಮಾತಾಡಿದೆ. ಆದರೆ ಯಾವಾಗ ಎಂದು ಈಗಲೂ ತಿಳಿಸಿಲ್ಲ. ಪ್ರಸಕ್ತ ಬಜೆಟ್‌ನಲ್ಲಿ ಜನಗಣತಿಗೆ ಹಂಚಿಕೆ ಮಾಡಿರುವ ಮೊತ್ತವನ್ನು 1500 ಕೋಟಿ ರುಪಾಯಿಗಳಿಂದ 570 ಕೋಟಿಗೆ ಇಳಿಸಲಾಗಿದೆ. ಜಾತಿಗಣತಿಯನ್ನು ಈ ವರ್ಷವೂ ನಡೆಸುವ ಇರಾದೆ ಕಂಡಿರಲಿಲ್ಲ. ಇದೀಗ ಮುಂದಿನ ಜನಗಣತಿಯ ಮಾತಾಡಲಾಗಿದೆ. ಕ್ಷೇತ್ರಗಳ ಮರುವಿಂಗಡಣೆಗೆ ಮುನ್ನ ಜಾತಿ ಜನಗಣತಿ ನಡೆಯಲೇಬೇಕಿದೆ.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಒಳಮೀಸಲಾತಿ ಗಣತಿ ಚಾರಿತ್ರಿಕ ದಾಖಲೆ, ತಪ್ಪದೇ ಭಾಗಿಯಾಗಿರಿ

ಮಂಡಲ್ ವರದಿ ಜಾರಿ ನಂತರದ ಮಂಡಲ್ ರಾಜಕಾರಣವು ಬಿಜೆಪಿ-ಪರಿವಾರದ ಕಮಂಡಲ ರಾಜಕಾರಣವನ್ನು ಕಕ್ಕಾಬಿಕ್ಕಿ ಆಗಿಸಿತ್ತು. ಆದರೆ ಉಗ್ರ ಹಿಂದುತ್ವದ ಅಸ್ತ್ರದಿಂದ ಮಂಡಲ್ ರಾಜಕಾರಣವನ್ನು ಅರಗಿಸಿಕೊಂಡಿತ್ತು ಕಮಂಡಲ ರಾಜಕಾರಣ. ಹತ್ತು ವರ್ಷಗಳ ನಂತರ ಇದೀಗ ಜಾತಿ ಜನಗಣತಿ ವಾದದ ಮುಂದೆ ಮತ್ತೊಮ್ಮೆ ಮೊನ್ನೆಮೊನ್ನೆಯ ತನಕ ತಬ್ಬಿಬ್ಬಾಗಿತ್ತು. ಜಾತಿ ಜನಗಣತಿಯ ಅಸ್ತ್ರಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂದು ತೋಚದೆ ಒಳಗೊಳಗೇ ತತ್ತರಿಸಿತ್ತು. ತಾನು ಅದುಮಿಟ್ಟಿದ್ದ ಮಂಡಲ್ ರಾಜಕಾರಣ ಪುನಃ ಬಿಜೆಪಿ-ಸಂಘಪರಿವಾರವನ್ನು ಕಾಡಿತ್ತು. ಇದೀಗ ಮಂಡಲ-ಕಮಂಡಲವನ್ನು ಒಂದರ ಪಕ್ಕ ಒಂದನ್ನಿಡುವ ಅಸಾಧ್ಯ ಭರವಸೆ ನೀಡಿದೆ. ನೀಡಿದ ಭರವಸೆಯನ್ನು ಈಡೇರಿಸಲಿದೆಯೇ ಅಥವಾ ಕೇವಲ ತೋರಿಕೆಯ ಜಾತಿ ಜನಗಣತಿ ಆಗಲಿದೆಯೇ ಎಂದು ಕಾದು ನೋಡಬೇಕಿದೆ.

ಮಹಿಳಾ ಮೀಸಲಾತಿ ವಿಧೇಯಕವನ್ನೇನೋ ಅಂಗೀಕರಿಸಿದೆ. ಜನಗಣತಿ ನಡೆದು ಕ್ಷೇತ್ರ ಮರುವಿಂಗಡಣೆ ಆದ ನಂತರ ಜಾರಿಗೆ ಬರುವುದೆಂದು ಮೋದಿ ಹೇಳಿದ್ದಾರೆ. ಆದರೆ ಮಹಿಳಾ ಮೀಸಲಾತಿಗೆ ಮೊದಲ ಹೆಜ್ಜೆಯಾದ ಜನಗಣತಿ ಯಾವಾಗ ನಡೆಯುತ್ತದೆಂದು ಈಗಲೂ ಹೇಳಿಲ್ಲ. ಈ ಹಿನ್ನೆಲೆಯಲ್ಲಿ ಜಾತಿ ಜನಗಣತಿಗೂ ಇದೇ ದುಸ್ಥಿತಿ ಬಾರದಿರಲಿ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X