ಇಂದಿನಿಂದ (ಮಾರ್ಚ್ 21) ಎಸ್ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆಗಳು ಆರಂಭಗೊಳ್ಳುತ್ತಿವೆ. ಇದು ನಿಮ್ಮ ಬದುಕಿನ ಮೊದಲ ಅಥವಾ ಕೊನೆಯ ಪರೀಕ್ಷೆಯಲ್ಲ. ನರ್ಸರಿ/ಅಂಗನವಾಡಿಯಿಂದ ಆರಂಭಗೊಂಡು ಇಲ್ಲಿಯ ತನಕ ಸುಮಾರು 12 ವರ್ಷಗಳ ಕಾಲ ಅನೇಕ ಪರೀಕ್ಷೆಗಳನ್ನು ಎದುರಿಸಿ, ತೇರ್ಗಡೆಗೊಂಡು ಈ ಹಂತಕ್ಕೆ ತಲಪಿದ್ದೀರಿ.
ತಿಳಿದಿರಲಿ, ಶಾಲಾ ಕಾಲೇಜುಗಳ ಪರೀಕ್ಷೆಗಳಲ್ಲಿ ಪಾಸಾಗುವುದಕ್ಕಿಂತ ಬದುಕಿನ ಪರೀಕ್ಷೆಯಲ್ಲಿ ಪಾಸಾಗುವುದು ಬಹಳ ಮುಖ್ಯ. ಭಯಪಡಬೇಡಿ. ಒತ್ತಡಗಳಿಗೆ ಒಳಗಾಗಬೇಡಿ. ನಿಮಗೆ ತಿಳಿದಿರುವ, ಗೊತ್ತಿರುವ, ಓದಿರುವ ವಿಷಯಗಳನ್ನು ಚೆನ್ನಾಗಿ ಬರೆಯಿರಿ. ಪರೀಕ್ಷಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿರಿ.
ಪ್ರತಿಯೊಂದು ಪರೀಕ್ಷೆಗೂ ಮುನ್ನಾ ದಿನ ರಾತ್ರಿ ಪ್ರವೇಶ ಪತ್ರ ಒಳಗೊಂಡಂತೆ, ಪರೀಕ್ಷೆಗೆ ಬೇಕಾದ ಎಲ್ಲ ಸಾಮಗ್ರಿಗಳನ್ನು ಸಿದ್ಧಪಡಿಸಿಟ್ಟುಕೊಂಡು, ಬೇಗ ನಿದ್ದೆ ಮಾಡಿರಿ. ಬೆಳಿಗ್ಗೆ ಬೇಗನೇ ಎದ್ದು ಸ್ನಾನ ಮಾಡಿ, ತಿಂಡಿ ತಿಂದು, ಒಂದು ಲೀಟರ್ ಶುದ್ದವಾದ ಕುಡಿಯುವ ನೀರನ್ನು ತೆಗೆದುಕೊಂಡು ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ನಿಮ್ಕ ಪರೀಕ್ಷಾ ಕೇಂದ್ರ ತಲಪಿರಿ.
ಪರೀಕ್ಷೆ ಬರೆಯುವಾಗ ಸಮಯ ಪಾಲನೆ ಮಾಡುವುದು ಮುಖ್ಯ ಎಂಬುದು ತಮಗೆ ಗೊತ್ತು. ಪ್ರಶ್ನೆ ಪತ್ರಿಕೆ ಕೈಸೇರಿದಾಗ ಎಲ್ಲ ಪ್ರಶ್ನೆಗಳನ್ನು ಒಮ್ಮೆ ಓದಿರಿ. ಮೊದಲಿಗೆ ತಮಗೆ ಗೊತ್ತಿರುವ, ಸುಲಭದ ಪ್ರಶ್ನೆಗಳಿಗೆ ಉತ್ತರ ಬರೆಯಲು ಆರಂಭಿಸಿರಿ. ಉತ್ತರ ಗೊತ್ತಿಲ್ಲದ ಪ್ರಶ್ನೆಗಳಿಗೆ ಉತ್ತರ ನೆನಪಿಸಿಕೊಳ್ಳುತ್ತಾ ಕಾಲ ಹರಣ ಮಾಡಬೇಡಿ. ಗೊಂದಲಗಳಿರುವ ಅಥವಾ ಕಠಿಣ ಎನಿಸುವ ಪ್ರಶ್ನೆಗಳಿಗೆ ನಂತರ ಉತ್ತರ ಬರೆಯಿರಿ.
ಪ್ರತಿಯೊಂದು ಪರೀಕ್ಷೆ ಮುಗಿದು, ಪರೀಕ್ಷಾ ಕೇಂದ್ರದಿಂದ ಹೊರಗಡೆ ಬಂದ ನಂತರ, ಬರೆದಿರುವ ಉತ್ತರಗಳ ಸರಿ/ತಪ್ಪುಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಮುಂದಿನ ಪರೀಕ್ಷೆಗೆ ಓದಿ, ತಯಾರಿ ನಡೆಸುತ್ತಿರಿ. ಬದುಕಿನಲ್ಲಿ ಸೋಲು, ಗೆಲುವು ಇದ್ದಿದ್ದೇ. ಎಲ್ಲ ರೀತಿಯ ಸವಾಲುಗಳನ್ನು ಎದುರಿಸುವ ಎದೆಗಾರಿಕೆ ನಿಮಗಿರಲಿ.
ಎಲ್ಲ ಪರೀಕ್ಷೆಗಳು ನಿಮಗೆ ಸುಲಭವಾಗಲಿ. ಗೆದ್ದು ಬನ್ನಿ, ಆಲ್ ದಿ ಬೆಸ್ಟ್.