ಪ್ರಧಾನಿ ನರೇಂದ್ರ ಮೋದಿಯವರು ಅತ್ಯುತ್ತಮ ವಾಗ್ಮಿ ಎಂದೇ ಗುರುತಿಸಿಕೊಂಡಿದ್ದಾರೆ. ಟೆಲಿಪ್ರಾಂಪ್ಟರ್ ಇಲ್ಲದೆ, ಅವರೇನೂ ಮಾತನಾಡಲಾರರು ಎಂಬ ವ್ಯಂಗ್ಯಕ್ಕೂ ಗುರಿಯಾಗಿದ್ದಾರೆ. ಇದು ವ್ಯಂಗ್ಯ ಎನ್ನುವುದಕ್ಕಿಂತ ವಾಸ್ತವ ಎಂಬುದು ಹಲವು ಸಂದರ್ಭಗಳಲ್ಲಿ ಸ್ಪಷ್ಟವೂ ಆಗಿದೆ. ಟೆಲಿಪ್ರಾಂಪ್ಟರ್ ಇಟ್ಟುಕೊಂಡೇ ಮಾತನಾಡುವ ಮೋದಿ ಈವರೆಗೆ ಸುದ್ದಿಗೋಷ್ಠಿ ನಡೆಸಿಲ್ಲ, ಸಂದರ್ಶನಗಳನ್ನು ನೀಡಿಲ್ಲ. ಆದರೂ, ತಿಂಗಳಿಗೊಮ್ಮೆ ‘ಮನ್ ಕಿ ಬಾತ್’ ಮೂಲಕ ದೇಶದ ಜನರೊಂದಿಗೆ ‘ಏಕಮುಖ’ವಾಗಿ ಮಾತನಾಡುತ್ತಾರೆ. ಆದರೆ, ಈ ‘ಒನ್ ಸೈಡೆಡ್’ ಭಾಷಣದಲ್ಲಿಯೂ ಅವರು ದೇಶ ಎದುರಿಸುತ್ತಿರುವ ತೀವ್ರ ಕಳವಳಕಾರಿ ಅಥವಾ ವಿವಾದಾತ್ಮಕ ಬಿಕ್ಕಟ್ಟುಗಳ ಕುರಿತು ಎಂದಿಗೂ ಮಾತನಾಡುವುದಿಲ್ಲ. ಬದಲಾಗಿ, ನಿರ್ಲಜ್ಜ ನಿಗೂಢ ಮೌನಕ್ಕೆ ಶರಣಾಗಿದ್ದಾರೆ. ಶರಣಾಗುತ್ತಾರೆ. ಶರಣಾಗುತ್ತಿದ್ದಾರೆ.
ಪ್ರಸ್ತುತ, ದೇಶದ ಲಕ್ಷಾಂತರ ಯುವಜನರ ಭವಿಷ್ಯವನ್ನು ತೂಗುಯ್ಯಾಲೆಯಲ್ಲಿಟ್ಟಿರುವ ‘ನೀಟ್’ (NEET-UG) ಸೇರಿದಂತೆ ವಿವಿಧ ಪರೀಕ್ಷಾ ಅಕ್ರಮಗಳು ಚರ್ಚೆಯಲ್ಲಿವೆ. ನೀಟ್ ಸೇರಿದಂತೆ ಏಪ್ರಿಲ್-ಮೇ ತಿಂಗಳಿನಲ್ಲಿ ನಡೆದ ಹಲವು ಪರೀಕ್ಷೆಗಳಲ್ಲಿ ಪೇಪರ್ ಲೀಕ್, ಅಂಕಗಳ ಅಕ್ರಮ ಹಾಗೂ ವ್ಯವಸ್ಥಿತ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ. ಯುವಜನರು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ತಮ್ಮ ಅಳಲು-ಆಕ್ರಂದನಗಳನ್ನು ಹೊರಹಾಕುತ್ತಿದ್ದಾರೆ. ಆದರೆ, ಈ ವಿಚಾರದಲ್ಲೂ ಪ್ರಧಾನಿಯವರು ಮೌನ ಮುಂದುವರಿದಿದೆ. ನೀಟ್, ಸಿಬಿಎಸ್ಸಿ ಪರೀಕ್ಷಾ ಅವ್ಯವಸ್ಥೆ ಬಗ್ಗೆ ಜನ ಬೀದಿಗಿಳಿದು ಹೋರಾಡುತ್ತಿರುವ ಸರಿ ಹೊತ್ತಿನಲ್ಲಿ ಅಂದ್ರೆ ಮೇ ೩೧ರಂದು ಮೋದಿಯವರು ತಮ್ಮ ಮನ್ ಕೀ ಬಾತ್ನಲ್ಲಿ ಮೋದಿ, ಈ ಅಕ್ರಮದ ವಿರುದ್ಧ ಮಾತನಾಡಲಿಲ್ಲ. ಬದಲಾಗಿ, ಬಿಸಿಲಿನ ತಾಪದಿಂದ ಆರೋಗ್ಯವನ್ನು ಕಾಪಾಡಿಕೊಳ್ಳಿ, ನೀರಿನ ಸಂರಕ್ಷಣೆ ಮಾಡಿ ಎಂಬ ಒಣ ಸಲಹೆಗಳನ್ನು ಕೊಡಲು ಬಳಸಿಕೊಂಡರು.
ಈ ಲೇಖನ ಓದಿದ್ದೀರಾ?: ಪ್ರಜಾಪ್ರಭುತ್ವ ದಮನಕ್ಕೆ ಮೋದಿ ‘SIR’ ಅಸ್ತ್ರ ಬಳಸುತ್ತಿರುವುದು ಯಾಕೆ?
ಹಗಲಿರುಳು ಕಷ್ಟಪಟ್ಟು ಓದಿ, ವ್ಯವಸ್ಥೆಯ ಭ್ರಷ್ಟಾಚಾರದಿಂದಾಗಿ ಭವಿಷ್ಯ ಕಳೆದುಕೊಳ್ಳುವ ಭೀತಿಯಲ್ಲಿರುವ ಸಂತ್ರಸ್ತ ಅಭ್ಯರ್ಥಿಗಳಿಗೆ ಕನಿಷ್ಠ ಪಕ್ಷ ಧೈರ್ಯ ತುಂಬುವ ಅಥವಾ ಸಾಂತ್ವನ ಹೇಳುವ ಒಂದು ಸಣ್ಣ ಪ್ರಯತ್ನವನ್ನೂ ಮೋದಿ ಮಾಡಲಿಲ್ಲ. ಇದೆಲ್ಲವೂ, ಯುವ ಸಮುದಾಯದ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಮೋದಿ ಅವರ ಮೌನವೂ ತೀವ್ರ ಚರ್ಚೆ ಮತ್ತು ಆಕ್ರೋಶಕ್ಕೆ ಗುರಿಯಾಗಿದೆ.
ಇತಿಹಾಸದ ಪುಟಗಳಲ್ಲಿ ಮೋದಿ ಮೌನ
ಮೋದಿಯವರ ‘ಮೌನದ ತಂತ್ರ’ ಕೇವಲ ಪರೀಕ್ಷಾ ಅಕ್ರಮಗಳಿಗಷ್ಟೇ ಸೀಮಿತವಾಗಿಲ್ಲ. ಈ ಹಿಂದೆಯೂ ದೇಶವನ್ನು ತಲ್ಲಣಗೊಳಿಸಿದ ಹಲವು ಪ್ರಮುಖ ಸಂದರ್ಭಗಳಲ್ಲಿ ಅವರು ದೀರ್ಘಕಾಲದವರೆಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿದ್ದರು:
- ಮಣಿಪುರ ಹಿಂಸಾಚಾರ: ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ತಿಂಗಳುಗಟ್ಟಲೆ ಜನಾಂಗೀಯ ಸಂಘರ್ಷ ನಡೆಯಿತು. ನೂರಾರು ಜನರು ಪ್ರಾಣ ಕಳೆದುಕೊಂಡರು. ಸಾವಿರಾರು ಜನರು ನಿರಾಶ್ರಿತರಾದರು. ಆಗಲೂ ಪ್ರಧಾನಿ ಮೋದಿ ತಿಂಗಳುಗಳ ಕಾಲ ಯಾವುದೇ ಸಾರ್ವಜನಿಕ ಹೇಳಿಕೆ ನೀಡದೆ ಮೌನವಾಗಿದ್ದರು. ನಂತರ ಸಂಸತ್ತಿನ ಮುಂಭಾಗ ಅತ್ಯಂತ ಸೀಮಿತವಾಗಿ ಮಾತನಾಡಿದ್ದನ್ನು ಹೊರತುಪಡಿಸಿದರೆ, ಹಿಂಸಾಚಾರದ ಕುರಿತು ಗಂಭೀರವಾಗಿ ಯಾವುದೇ ಮಾತನಾಡಲಿಲ್ಲ. ಅವರ ಮೌನ ವಿರೋಧ ಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಿತ್ತು.
- ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ: ದೇಶಕ್ಕೆ ಒಲಿಂಪಿಕ್ಸ್ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ತಂದುಕೊಟ್ಟ ಹೆಣ್ಣುಮಕ್ಕಳು ಲೈಂಗಿಕ ಕಿರುಕುಳದ ವಿರುದ್ಧ ದೆಹಲಿಯ ರಸ್ತೆಯಲ್ಲಿ ವಾರಗಳ ಕಾಲ ಪ್ರತಿಭಟನೆ ನಡೆಸಿದರು. ಅವರನ್ನು ದೆಹಲಿ ಪೊಲೀಸರು ಎಳೆದಾಡಿ ಮತ್ತಷ್ಟು ದೌರ್ಜನ್ಯ ಎಸಗಿದರು. ಆಗಲೂ, ಮಹಿಳಾ ಕುಸ್ತಿಪಟುಗಳ ನೋವನ್ನು ಮೋದಿ ಆಲಿಸಲಿಲ್ಲ. ಆಲಿಸುವುದಿರಲಿ, ಕನಿಷ್ಠ ಒಂದೇ ಒಂದು ಆಶ್ವಾಸನೆಯ ಮಾತನ್ನಾಡಲಿಲ್ಲ.
- ರೈತ ಹೋರಾಟ (ಕೃಷಿ ಕಾಯ್ದೆಗಳು): 2020-2021ರಲ್ಲಿ ಕೋವಿಡ್ ಸಾಂಕ್ರಾಮಿಕದ ನಡುವೆಯೂ ದೆಹಲಿಯ ಗಡಿಗಳಲ್ಲಿ ರೈತರು ವರ್ಷಕ್ಕೂ ಹೆಚ್ಚು ಕಾಲ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಹರಿಯಾಣ, ದೆಹಲಿ ಪೊಲೀಸರು ರೈತರ ಮೇಲೆ ದಾಳಿ-ದಬ್ಬಾಳಿಕೆ ನಡೆಸಿದರು. ಆಗಲೂ, ರೈತರ ಪ್ರತಿಭಟನೆ ಕುರಿತೂ ಮೋದಿ ಉಸಿರೆತ್ತಲಿಲ್ಲ. ರೈತರೊಂದಿಗೆ ಚರ್ಚಿಸಲು ಬರಲಿಲ್ಲ. ಬರೋಬ್ಬರಿ 1 ವರ್ಷದ ಬಳಿಕ, ರೈತ ಹೋರಾಟಕ್ಕೆ ಮಣಿದು ಕಾಯ್ದೆಗಳನ್ನು ಹಿಂಪಡೆದರು. ಆಗಷ್ಟೇ ದೇಶದ ಕ್ಷಮೆಯಾಚಿಸಿದರು.
- ಕೋವಿಡ್-19 ಎರಡನೇ ಅಲೆಯ ಆಕ್ಸಿಜನ್ ಬಿಕ್ಕಟ್ಟು: ದೇಶದಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಜನರು ಆಸ್ಪತ್ರೆಗಳ ಮುಂಭಾಗ ಪ್ರಾಣ ಬಿಡುತ್ತಿದ್ದ ಅತ್ಯಂತ ಕಠಿಣ ಸಂದರ್ಭದಲ್ಲಿಯೂ ಮೋದಿ ಮೌನಕ್ಕೆ ಶರಣಾಗಿದ್ದರು. ಅವರು ತಕ್ಷಣದ ಯಾವುದೇ ಸಾರ್ವಜನಿಕ ಸಂವಹನ ನಡೆಸಲಿಲ್ಲ. ಬದಲಾಗಿ, ತಟ್ಟೆ-ಗಂಟೆ ಬಾರಿಸಿ ಎಂಬ ಟೊಳ್ಳು ಕರೆಗಳನ್ನು ಕೊಡುವ ಮೂಲಕ ಟೀಕೆಗೆ ಗುರಿಯಾಗಿದ್ದರು.
- ಭಾರತ-ಪಾಕ್ ಕದನ ವಿರಾಮ ಮತ್ತು ಟ್ರಂಪ್ ಕ್ಲೈಮ್: 2025ರ ಏಪ್ರಿಲ್ನಲ್ಲಿ, ಪೆಹಲ್ಗಾಮ್ನಲ್ಲಿ ನಡೆದ ಭೀರಕ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ನಾಗರಿಕರು ಸಾವನ್ನಪ್ಪಿದ್ದರು. ಬಳಿಕ, ಭಾರತ-ಪಾಕಿಸ್ತಾನ ನಡುವೆ ಸಂಘರ್ಷ ಉಂಟಾಗಿತ್ತು. ‘ಆ ಸಂಘರ್ಷವನ್ನು ಕೊನೆಗಾಣಿಸಿ, ಕದನ ವಿರಾಮ ಘೋಷಿಸುವಂತೆ ನಾನೇ ಮಾಡಿದೆ’ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಈವರೆಗೆ ಸುಮಾರು 70ಕ್ಕೂ ಹೆಚ್ಚು ಬಾರಿ ಹೇಳಿಕೊಂಡಿದ್ದಾರೆ. ಆದರೆ, ಆ ಬಗ್ಗೆ ಪ್ರಧಾನಿ ಮೋದಿ ಈವರೆಗೆ ತುಟಿಬಿಚ್ಚಿಲ್ಲ. ಟ್ರಂಪ್ ಹೇಳಿಕೆಯನ್ನು ಸಮ್ಮತಿಸುವ ಅಥವಾ ನಿರಾಕರಿಸುವ ಗೋಜಿಗೆ ಹೋಗಿಲ್ಲ.
ಈ ಮೌನದ ಮರ್ಮವೇನು?
ವಿವಾದಾತ್ಮಕ ಅಥವಾ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುವ ವಿಷಯಗಳ ಬಗ್ಗೆ ಮೋದಿ ಎಂದಿಗೂ ಮಾತನಾಡುವುದಿಲ್ಲ. ವಿವಾದಗಳು ಉಂಟಾದಾಗಲೆಲ್ಲ, ಆ ವಿಷಯವನ್ನು ಸಂಬಂಧಪಟ್ಟ ಇಲಾಖೆಯ ಸಚಿವರ ಹೆಗಲಿಗೆ ಹಾಕಿ, ತಮಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ಮೋದಿ ನುಣುಚಿಕೊಳ್ಳುತ್ತಾರೆ. ಅಧಿಕಾರಿಗಳು ಮಾತ್ರ ಮಾಧ್ಯಮಗಳ ಮುಂದೆ ಬಂದು ಹೇಳಿಕೆಗಳನ್ನು ನೀಡುತ್ತಾರೆ. ಯಾಕೆಂದರೆ, ತಾವು ನೇರವಾಗಿ ಮಾತನಾಡಿದರೆ, ಅದು ತನ್ನ ವೈಯಕ್ತಿಕ ವರ್ಚಸ್ಸಿಗೆ ಧಕ್ಕೆ ತರಬಹುದು ಎಂಬ ದಾರ್ಷ್ಟ್ಯ ಮೋದಿಯಲ್ಲಿದೆ ಎನ್ನುತ್ತಾರೆ ಹಲವಾರು ವಿಶ್ಲೇಷಕರು.



