- ಬೇರೆ ಪರೀಕ್ಷೆಗಳತ್ತ ಗಮನಹರಿಸಲಾಗದೆ ಅಭ್ಯರ್ಥಿಗಳಿಗೆ ಒದ್ದಾಡುವ ಪರಿಸ್ಥಿತಿ
- ದೈಹಿಕ ಪರೀಕ್ಷೆ, ಸಂದರ್ಶನ ಪ್ರಕ್ರಿಯೆಗೆ ಇನ್ನೆಷ್ಟು ವರ್ಷ ಕಾಯಬೇಕು; ಆಕ್ರೋಶ
ಸಂರಕ್ಷಣಾಧಿಕಾರಿ (ಎಸಿಎಫ್) ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ ಮುಖ್ಯ ಪರೀಕ್ಷೆ ನಡೆಸಿತ್ತು. ಪರೀಕ್ಷೆ ಪೂರ್ಣಗೊಂಡು ವರ್ಷಗಳೇ ಕಳೆಯುತ್ತಿವೆ. ಆದರೆ, ಕನಿಷ್ಠ 160 ಅಭ್ಯರ್ಥಿಗಳನ್ನೊಳಗೊಂಡ ಫಲಿತಾಂಶ ಪ್ರಕಟವಾಗುತ್ತಿಲ್ಲ ಎಂದು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2022ರ ಮೇ 5 ಮತ್ತು 6ರಂದು ತಲಾ 100 ಅಂಕಗಳ ಎರಡು ಪತ್ರಿಕೆಗಳ ಪರೀಕ್ಷೆ ನಡೆಸಲಾಗಿತ್ತು. 1:10 ಅಂದರೆ ಕೇವಲ 160 ಅಭ್ಯರ್ಥಿಗಳಿಗೆ ಮಾತ್ರ ಮುಖ್ಯ ಪ್ರಶ್ನೆ ಪರೀಕ್ಷೆಯನ್ನು ನಡೆಸಲಾಗಿತ್ತು.
16 ಎಸಿಎಫ್ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ಅಧಿಸೂಚನೆ ಹೊರಡಿಸಿ ಎರಡೂವರೆ ವರ್ಷಗಳು ಕಳೆದಿವೆ. ಅಧಿಸೂಚನೆ ಹೊರಬಿದ್ದ ಒಂದು ವರ್ಷದ ಬಳಿಕ 2021ರಲ್ಲಿ ಪ್ರಿಲಿಮಿನರಿ ಪರೀಕ್ಷೆ ನಡೆಸಲಾಯಿತು. ಒಂದು ವರ್ಷದ ನಂತರ 2022ರಲ್ಲಿ ಮುಖ್ಯ ಪರೀಕ್ಷೆ ನಡೆಸಲಾಗಿದೆ. ಈಗಾಗಲೇ ಎರಡೂವರೆ ವರ್ಷ ಕಳೆದಿದೆ. ಇನ್ನೂ ಪರೀಕ್ಷೆ ಫಲಿತಾಂಶ ಪ್ರಕಟವಾಗಿಲ್ಲ. ಯಾವಾಗ ಫಲಿತಾಂಶ ಪ್ರಕಟವಾಗುತ್ತದೋ? ನಂತರ ದೈಹಿಕ ಪರೀಕ್ಷೆ, ಸಂದರ್ಶನ ಪ್ರಕ್ರಿಯೆ ಮುಗಿಯಲೂ ಇನ್ನೆಷ್ಟು ವರ್ಷ ಕಳೆಯುತ್ತವೋ? ಎಂದು ಅಭ್ಯರ್ಥಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಮೇ 13ರವರೆಗೂ ‘ಸಿಇಟಿ’ಗೆ ಅರ್ಜಿ ಸಲ್ಲಿಸಬಹುದು
ಸದ್ಯ ಎಸಿಎಫ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗದ ಕಾರಣ, ಅಭ್ಯರ್ಥಿಗಳು ಇತರ ಪರೀಕ್ಷೆಗಳತ್ತ ಗಮನಹರಿಸಲು ಸಾಧ್ಯವಾಗದೇ ಒದ್ದಾಡುವ ಪರಿಸ್ಥಿತಿ ಬಂದೊದಗಿದೆ.
160 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದ ಪರೀಕ್ಷಾ ಫಲಿತಾಂಶ ಪ್ರಕಟಿಸಲು ಇಷ್ಟು ವಿಳಂಬ ಮಾಡಿದರೆ, ಸಾವಿರಾರು ಅಭ್ಯರ್ಥಿಗಳು ಹಾಜರಾಗುವ ಪರೀಕ್ಷೆಗಳ ಫಲಿತಾಂಶಕ್ಕೆ ಇನ್ನೆಷ್ಟು ವರ್ಷ ಕಾಯಬೇಕು ಎಂದು ಅಭ್ಯರ್ಥಿಗಳು ಪ್ರಶ್ನಿಸಿದ್ದಾರೆ.