- ಅವ್ಯವಸ್ಥೆಯ ಹಾದಿಯಲ್ಲಿರುವ ಐಐಟಿ ಎಸ್‌ಸಿ/ಎಸ್‌ಟಿ ಕುಂದುಕೊರತೆ ವಿಭಾಗ
- ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗಾಗುತ್ತಿರುವ ತಾರತಮ್ಯದ ಬಗ್ಗೆ ಎನ್‌ಸಿಎಸ್‌ಟಿಗೆ ಮಾಹಿತಿ
ದೇಶದಲ್ಲಿರುವ 23 ಭಾರತೀಯ ತಂತ್ರಜ್ಞಾನ ಸಂಸ್ಥೆಗಳಲ್ಲಿ (ಐಐಟಿ) ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ವಿಭಾಗ ರಚಿಸಲಾಗಿದ್ದು, ಪ್ರತ್ಯೇಕ ಕೊಠಡಿ ಮತ್ತು ಸಮಸ್ಯೆ ನಿವಾರಣೆಗೆ ಅನುದಾನದ ವ್ಯವಸ್ಥೆ ಇಲ್ಲದೆ 16 ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ.
ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ವಿದ್ಯಾರ್ಥಿಗಳ ಸಮಸ್ಯೆ ಪರಿಹಾರಕ್ಕೆ ತೆರೆಯಲಾದ ಪ್ರತ್ಯೇಕ ವಿಭಾಗಗಳು ಕಾರ್ಯನಿರತವಾಗಿದೆಯೇ ಅಥವಾ ಇಲ್ಲವೇ ಎಂದು ತಲೆಕೆಡಿಸಿಕೊಳ್ಳುವವರೇ ಇಲ್ಲ ಎಂದು ಐಐಟಿ ಬಾಂಬೆಯ ವಿದ್ಯಾರ್ಥಿಗಳ ಸಮೂಹವಾದ ‘ಅಂಬೇಡ್ಕರ್ ಪೆರಿಯಾರ್ ಫುಲೆ ಸ್ಟಡಿ ಸರ್ಕಲ್’ (ಎಪಿಪಿಎಸ್‌ಸಿ) ಆರ್‌ಟಿಐನಿಂದ ಪಡೆದ ಮಾಹಿತಿಯಿಂದ ಬೆಳಕಿಗೆ ಬಂದಿದೆ.
ಮಾರ್ಚ್‌ನಲ್ಲಿ ನಡೆದ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಶಿಕ್ಷಣ ಸಚಿವಾಲಯ 19 ಐಐಟಿಗಳು ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ವಿಭಾಗ ಹೊಂದಿವೆ ಎಂದು ಲೋಕಸಭೆಗೆ ತಿಳಿಸಿತ್ತು. ಅಂಕಿ- ಅಂಶಗಳ ಪ್ರಕಾರ, ಇಂತಹ 18 ವಿಭಾಗಗಳಿಗೆ ಮಾತೃಸಂಸ್ಥೆ ಐಐಟಿಗಳು ಯಾವುದೇ ಅನುದಾನ ಸಹಕಾರ ನೀಡಿಲ್ಲ. 2022 ಆಗಸ್ಟ್ 16ರಿಂದ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳನ್ನೂ ಈ ವಿಭಾಗಗಳು ನಡೆಸಿಲ್ಲ. ಈ ಸಾಲಿನಲ್ಲಿ ಗಾಂಧಿನಗರ, ಭಿಲಾಯಿ, ಧಾರವಾಡ ಮತ್ತು ಇಂದೋರ್‌ನಲ್ಲಿರುವ ಐಐಟಿಗಳು ಬರುತ್ತವೆ.
ಐದು ವರ್ಷದಲ್ಲಿ 33 ವಿದ್ಯಾರ್ಥಿಗಳ ಆತ್ಮಹತ್ಯೆ
ಕಳೆದ ಐದು ವರ್ಷಗಳಲ್ಲಿ ಐಐಟಿಗಳಲ್ಲಿ 33 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ ಎಂದು ಲೋಕಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿತ್ತು. 2023ರ ಫೆಬ್ರವರಿಯಲ್ಲಿ, ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ಜಾತಿ ಆಧಾರಿತ ತಾರತಮ್ಯದಿಂದಾಗಿ ಪ್ರಥಮ ವರ್ಷದ ದಲಿತ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡರು. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗಾಗಿ ಇರುವ ಪ್ರತ್ಯೇಕ ವಿಭಾಗ ತನ್ನ ಚಟುವಟಿಕೆಗಳನ್ನು ನಡೆಸುವಂತೆ ಐಐಟಿಗಳು ಕ್ರಮ ಕೈಗೊಳ್ಳದ ಕಾರಣ ಈ ಸಮಸ್ಯೆ ಎದುರಾಗಿದೆ ಎಂದು ಆರೋಪಿಸಲಾಗಿದೆ.
ಇರುವ 23 ಭಾರತೀಯ ತಂತ್ರಜ್ಞಾನ ಸಂಸ್ಥೆಗಳಲ್ಲಿ, ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ವಿದ್ಯಾರ್ಥಿಗಳಿಗಾಗಿ 19 ಸಂಸ್ಥೆಗಳಲ್ಲಿ ಮಾತ್ರ ಪ್ರತ್ಯೇಕ ವಿಭಾಗ ಸ್ಥಾಪಿಸಲಾಗಿದೆ. ಆದರೆ, ಐಐಟಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ವಿದ್ಯಾರ್ಥಿಗಳ ಏಳಿಗೆಗಾಗಿ ವಿಭಾಗವೊಂದನ್ನು ಸ್ಥಾಪಿಸಿರುವುದು ನೆಪಮಾತ್ರ. ವಿದ್ಯಾರ್ಥಿಗಳ ಸಮಸ್ಯೆಗಳ ಪರಿಹಾರಕ್ಕೆ ವಿಭಾಗದಲ್ಲಿ ಅನುದಾನವಿಲ್ಲ. ಈ ಬಗ್ಗೆ ಐಐಟಿಗಳು ಸಹ ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬುದು ಆರ್‌ಟಿಐ ನೀಡಿರುವ ಮಾಹಿತಿಯಿಂದ ಬಹಿರಂಗವಾಗಿದೆ.
ಎರಡೇ ಐಐಟಿಗಳಲ್ಲಿ ಈ ವಿಭಾಗದ ಅಗತ್ಯಗಳಿಗೆ ಹಾಗೂ ಕಾರ್ಯಕರ್ಮಗಳು, ವಿದ್ಯಾರ್ಥಿಗಳ ಕುಂದುಕೊರತೆ ನಿವಾರಣೆ ಮತ್ತಿತ್ತರ ಚಟುವಟಿಕೆಗಳಿಗಾಗಿ ಅನುದಾನ ನೀಡಲಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಕೇವಲ ಮೂರು ಕಾಲೇಜುಗಳು ಈ ವಿಭಾಗಕ್ಕಾಗಿ ಮೀಸಲಾದ ಪ್ರತ್ಯೇಕ ಕೊಠಡಿಗಳನ್ನು ಕಾಲೇಜಿನಲ್ಲಿ ಒದಗಿಸಿವೆ. ಅನುದಾನ ಮತ್ತು ವಿಭಾಗಕ್ಕೆ ಕೊಠಡಿ ನೀಡುವ ವಿಚಾರದಲ್ಲಿ ಐಐಟಿಗಳು ತೋರುತ್ತಿರುವ ಅಲಕ್ಷ್ಯ ಧೋರಣೆಯಲ್ಲಿಯೇ ವಿಭಾಗದ ದುಸ್ಥಿತಿಯನ್ನು ಅರಿತುಕೊಳ್ಳಬಹುದು.
ಕೊಠಡಿ, ವೆಬ್‌ಪೇಜ್ ವ್ಯವಸ್ಥೆ ಇಲ್ಲ
ದೆಹಲಿ ಮತ್ತು ಬಾಂಬೆ ಸೇರಿದಂತೆ 12 ಐಐಟಿಗಳು ಮಾತ್ರ ವಿದ್ಯಾರ್ಥಿಗಳ ಏಳಿಗೆ, ಕುಂದುಕೊರತೆಗಾಗಿ ವೆಬ್‌ಸೈಟ್ ಹೊಂದಿವೆ ಎಂದು ಆಂಧ್ರಪ್ರದೇಶ ಸಾರ್ವಜನಿಕ ಸೇವಾ ಆಯೋಗದ (ಎಪಿಪಿಎಸ್‌ಸಿ) ಅಂಕಿ- ಅಂಶ ಬಹಿರಂಗಪಡಿಸಿದೆ.
ಈ ಸುದ್ದಿ ಓದಿದ್ದೀರಾ?: ಪಠ್ಯದಲ್ಲಿ ಡಾರ್ವಿನ್ ಸಿದ್ಧಾಂತ ನಾಪತ್ತೆ; ಫ್ಯಾಸಿಸಂ ಜಾರಿ ತರುವ ಹುನ್ನಾರ
ಗುವಾಹಟಿ ಐಐಟಿಯ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ವಿಭಾಗಕ್ಕೆ ಪ್ರತ್ಯೇಕ ಕೊಠಡಿ ಮತ್ತು ಅನುದಾನ ನೀಡಲಾಗುತ್ತಿದೆ. ಆದರೆ, ಇಲ್ಲಿಯೂ ಸಮುದಾಯದ ಏಳಿಗೆ ಅಥವಾ ಕುಂದುಕೊರತೆ ಪ್ರಸ್ತಾಪವಾಗುವಂತಹ ಯಾವುದೇ ‘ವೆಬ್‌ಪೇಜ್’ ಹೊಂದಿಲ್ಲ.
ಐಐಟಿ ದೆಹಲಿಯಲ್ಲಿ ಎಸ್‌ಸಿ/ಎಸ್‌ಟಿ ಘಟಕದ ಉದ್ಧಾರಕ್ಕಾಗಿ ಅನುದಾನ ನೀಡಲಾಗುತ್ತಿದೆ. ಅನುದಾನದಿಂದ ಎಲ್ಲ ರೀತಿಯ ಚಟುವಟಿಕೆಗಳು ಕಾರ್ಯಗತವಾದರೂ, ಪ್ರತ್ಯೇಕ ಕೊಠಡಿಯಿಲ್ಲದೆ ಪರದಾಡುವಂತಾಗಿದೆ. ಇನ್ನೂ ಕೆಲ ಐಐಟಿಗಳಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡ ವಿಭಾಗಗಳಲ್ಲಿ ನಿಧಿ ಸಂಗ್ರಹವಾಗಿದೆ. ಆದರೆ, ಅದನ್ನು ಕ್ರಮಬದ್ಧವಾಗಿ ಬಳಸುವ ವ್ಯವಸ್ಥೆಯಾಗುತ್ತಿಲ್ಲ. ಕೆಲವೆಡೆ ಕೊಠಡಿಗಳೇ ಇಲ್ಲ. ಐಐಟಿ ರೂರ್ಕಿಯಲ್ಲೂ ಇದೇ ಪರಿಸ್ಥಿತಿ ಬಂದೊದಗಿದೆ.
ಆಂಧ್ರಪ್ರದೇಶ ಸಾರ್ವಜನಿಕ ಸೇವಾ ಆಯೋಗವು ಈ ಬಗ್ಗೆ ಮಾಹಿತಿ ಹಂಚಿಕೊಂಡ ನಂತರ, “ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯಗಳ ಮೇಲಾಗುತ್ತಿರುವ ತಾರತಮ್ಯ ನಿಲ್ಲಿಸಲು, ಮೀಸಲಾತಿ ನೀತಿ ಜಾರಿಗೆ ತರಲು, ಸಂವೇದನಾಶೀಲ ಘಟನೆಗಳು ಸಂಭವಿಸಿದಾಗ ಪರಿಶೀಲಿಸಲು ಐಐಟಿಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ” ಎಂದು ಶಿಕ್ಷಣ ಸಚಿವಾಲಯವನ್ನು ಒತ್ತಾಯಿಸಿದೆ.
ಎಪಿಪಿಎಸ್‌ಸಿ ಬಿಡುಗಡೆ ಮಾಡಿರುವ ಮಾಹಿತಿಯನ್ನು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗಕ್ಕೆ (ಎನ್‌ಸಿಎಸ್‌ಟಿ) ಪ್ರಸ್ತುತಪಡಿಸಲು ಯೋಜಿಸಿದೆ, ಅಲ್ಲಿ ವಿಚಾರಣೆ ನಡೆಸಲಾಗುತ್ತದೆ.
ಮೀಸಲಾತಿ ಸಂಬಂಧಿಸಿದ ಮಾಹಿತಿ ಇಲ್ಲ
ಐಐಟಿ ವೆಬ್‌ಸೈಟ್‌ಗಳಿಂದ ಎಪಿಪಿಎಸ್‌ಸಿ ಐಐಟಿ ಬಾಂಬೆ ಪ್ರವೇಶಿಸಿದ ಮಾಹಿತಿಯ ಪ್ರಕಾರ, ಐಐಟಿ ಬಾಂಬೆ, ಮದ್ರಾಸ್, ಕಾನ್ಪುರ, ದೆಹಲಿ, ತಿರುಪತಿ, ಗೋವಾ, ಹೈದರಾಬಾದ್, ರೋಪರ್, ಪಾಟ್ನಾ, ಹೈದರಾಬಾದ್, ಜಮ್ಮು ಮತ್ತು ಭುವನೇಶ್ವರ ಸೇರಿದಂತೆ 12 ವಿಭಾಗಗಳಲ್ಲಿ 10ರಲ್ಲಿ ಮೀಸಲಾತಿಗೆ ಸಂಬಂಧಿಸಿದ ಮಾಹಿತಿಯಿಲ್ಲ. ಕೆಲ ಐಐಟಿಗಳಲ್ಲಿ ಹಿಂದುಳಿದ ಸಮುದಾಯಗಳ ಕುಂದುಕೊರತೆಗೆ ಪರಿಹಾರಕ್ಕಾಗಿ ಫೋನ್ ಅಥವಾ ಇಮೇಲ್ ಅನ್ನು ಒದಗಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.