ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಣೆ ದಿನದ ಬಗ್ಗೆ ಹಲವೆಡೆ ಗೊಂದಲ ವ್ಯಕ್ತವಾಗಿದ್ದು, ಗೊಂದಲಗಳಿಗೆ ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್ಇಎಬಿ) ತೆರೆ ಎಳೆದಿದೆ. ಮೇ.10ರ ರಾಜ್ಯ ವಿಧಾನಸಭಾ ಚುನಾವಣೆ ನಂತರವೇ ಫಲಿತಾಂಶ ಪ್ರಕಟ ಎಂದು ಸ್ಪಷ್ಟ ಪಡಿಸಿದೆ.
ನೀರಿಕ್ಷೆಗೂ ಮುನ್ನವೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದಂತೆ, ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟಣೆಯ ದಿನವನ್ನು ವಿದ್ಯಾರ್ಥಿಗಳು ಕಾತುರತೆಯಿಂದ ಕಾಯುತ್ತಿದ್ದಾರೆ. ಫಲಿತಾಂಶ ಪ್ರಕಟಣೆಯ ದಿನದ ಬಗ್ಗೆ ಊಹಾಪೋಹ ಹೆಚ್ಚಾಗಿದೆ. ಹೀಗಾಗಿ, ಕೆಎಸ್ಇಎಬಿ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದೆ.
ಈಗಾಗಲೇ ಮೌಲ್ಯಮಾಪನ ಪೂರ್ಣಗೊಂಡಿದ್ದು, ಮೌಲ್ಯಮಾಪನದ ನಂತರದ ಕಾರ್ಯ ಪ್ರಗತಿಯಲ್ಲಿದೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಲೆಗಳನ್ನು ಮತಗಟ್ಟೆಗಳಾಗಿ ಗುರುತಿಸಿರುವುದು ಮತ್ತು ಶಿಕ್ಷಕರು ಚುನಾವಣೆ ಕೆಲಸದಲ್ಲಿ ತೊಡಗಿರುವುದರಿಂದ, ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಕಾಯಬೇಕಾಗಿದೆ. ಫಲಿತಾಂಶ ಸಿದ್ಧವಾಗಿದ್ದರೂ ಚುನಾವಣೆ ಪೂರ್ಣಗೊಳ್ಳುವವರೆಗೂ ಫಲಿತಾಂಶ ಪ್ರಕಟವಾಗುವುದಿಲ್ಲ ಎಂದು ಕೆಎಸ್ಇಎಬಿ ಹೇಳಿದೆ.
ಮೇ.10ರಂದು ಮತದಾನ ಮತ್ತು ಮೇ.13ರೊಳಗೆ ಮತ ಎಣಿಕೆ ಪೂರ್ಣಗೊಳ್ಳುತ್ತದೆ. ಈ ಮಧ್ಯೆ ಮೇ.11 ಅಥವಾ 12 ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಟವಾಗಬಹುದು. ಮೇ.13ರ ನಂತರವೂ ಪ್ರಕಟವಾಗಬಹುದು ಇನ್ನೂ ಸ್ಪಷ್ಟ ದಿನಾಂಕ ನಿಗದಿಯಾಗಿಲ್ಲ ಎನ್ನಲಾಗಿದೆ.
ರಾಜ್ಯದ 15,498 ಪ್ರೌಢಶಾಲೆಗಳ 8.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು. ಮಾರ್ಚ್ 31ರಿಂದ ಏ.15ರವರೆಗೆ 3,305 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿದ್ದವು. ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಮೌಲ್ಯಮಾಪನಕ್ಕೆ ವ್ಯವಸ್ಥೆ ಮಾಡಲಾಗಿತ್ತು. 63 ಸಾವಿರ ಶಿಕ್ಷಕರು ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸಿದ್ದರು.
ಈ ಸುದ್ದಿ ಓದಿದ್ದೀರಾ?: ಎಲ್ಕೆಜಿ ಪ್ರವೇಶ | ನಾಲ್ಕು ವರ್ಷ ವಯಸ್ಸು ಕಡ್ಡಾಯ