ಉತ್ತರ ಕನ್ನಡ ಜಿಲ್ಲೆ | ಅಭಿವೃದ್ಧಿಯ ಮಾತಿಲ್ಲ, ಜಾತಿ, ಧರ್ಮದ ರಾಜಕಾರಣವೇ ಎಲ್ಲ

0
242
ಉತ್ತರ ಕನ್ನಡ ಜಿಲ್ಲೆ

ಹಳಿಯಾಳ ಕ್ಷೇತ್ರವನ್ನು ಹೊರತುಪಡಿಸಿ ಜಿಲ್ಲೆಯ ಉಳಿದೆಲ್ಲ ಕ್ಷೇತ್ರಗಳಲ್ಲೂ ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿತ್ತು. ಈ ಬಾರಿ ಯಲ್ಲಾಪುರ, ಕುಮಟಾ ಮತ್ತು ಭಟ್ಕಳ ಕ್ಷೇತ್ರಗಳಲ್ಲಿ ಮತದಾರರ ಆಯ್ಕೆ ಬದಲಾಗುವ ಸಾಧ್ಯತೆ ಹೆಚ್ಚಾಗಿದೆ.

ಶಿರಸಿ ವಿಧಾನಸಭಾ ಕ್ಷೇತ್ರ

ಶಿರಸಿ, ಉತ್ತರ ಕನ್ನಡ ಜಿಲ್ಲೆಯ ರಾಜಕೀಯ ರಾಜಧಾನಿ. ಮೀಸಲು ಕ್ಷೇತ್ರವಾಗಿದ್ದ ಶಿರಸಿ 2008ರಲ್ಲಿ ಸ್ವತಂತ್ರ ಕ್ಷೇತ್ರವಾಗಿ ಹೊರಹೊಮ್ಮಿದ ದಿನದಿಂದ ಈವರೆಗೆ ನಡೆದ ಮೂರು ಚುನಾವಣೆಗಳಲ್ಲೂ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೇ ಈ ಕ್ಷೇತ್ರದಲ್ಲಿ ಗೆಲುವು ದಾಖಲಿಸುತ್ತಾ ಬಂದಿದ್ದಾರೆ. ಹ್ಯಾಟ್ರಿಕ್‌ ಗೆಲುವು ಕಂಡಿರುವ ಕಾಗೇರಿ ಅವರಿಗೆ ಈ ಬಾರಿಯ ಚುನಾವಣೆ ಸವಾಲಾಗಿ ಪರಿಣಮಿಸಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

2018ರ ಚುನಾವಣೆಯಲ್ಲಿ ಕಾಗೇರಿ ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 17 ಸಾವಿರ ಮತಗಳ ಅಂತರದಿಂದ ಸೋತಿದ್ದ ಭೀಮಣ್ಣ ನಾಯ್ಕ ಈ ಬಾರಿಯೂ ಕಣಕ್ಕಿಳಿದಿದ್ದಾರೆ. ಕಾಗೇರಿ ಅವರಿಗೆ ಬ್ರಾಹ್ಮಣ ಸಮುದಾಯದ ಬೆಂಬಲವಿದ್ದರೆ, ಭೀಮಣ್ಣನವರ ಬೆನ್ನಿಗೆ ನಾಮಧಾರಿ ನಾಯ್ಕ ಸಮುದಾಯ ನಿಂತಿದೆ. ಈ ಕ್ಷೇತ್ರದಲ್ಲಿ ಬ್ರಾಹ್ಮಣರ ಪ್ರಾಬಲ್ಯವಿದೆಯಾದರೂ ನಾಮಧಾರಿ ಸಮುದಾಯದವರೂ ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ ಎಂಬುದು ಗಮನಾರ್ಹ. ಹೀಗಾಗಿ ಕಾಗೇರಿ ಅವರಿಗೆ, ಭೀಮಣ್ಣ ತೀವ್ರ ಪೈಪೋಟಿ ನೀಡಲಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ. ಕ್ಷೇತ್ರದಲ್ಲಿ ಜೆಡಿಎಸ್‌ ಪರ ತಕ್ಕ ಮಟ್ಟಿನ ಒಲವಿದೆ. ಈ ಬಾರಿಯ ಜೆಡಿಎಸ್‌ ಅಭ್ಯರ್ಥಿ ಉಪೇಂದ್ರ ಪೈ ಕೂಡ ಸುದ್ದಿಯಲ್ಲಿದ್ದಾರೆ.

ಶಿರಸಿಗೆ ಪ್ರತ್ಯೇಕ ಜಿಲ್ಲೆಯ ಸ್ಥಾನಮಾನ ಸಿಗಬೇಕು ಎಂಬ ಕೂಗು ಮೊದಲಿನಿಂದಲೂ ಇದೆ. ಉತ್ತರ ಕನ್ನಡ ಜಿಲ್ಲೆಯ ಉಳಿದ ಕ್ಷೇತ್ರಗಳ ಜನರ ಬೇಡಿಕೆಯಂತೆ ಈ ಕ್ಷೇತ್ರದಲ್ಲೂ ಸುಸಜ್ಜಿತ ಆಸ್ಪತ್ರೆಗಾಗಿ ಬೇಡಿಕೆ ಇದೆ. ಈ ಕ್ಷೇತ್ರ ಅಘನಾಶಿನಿಯ ಉಗಮ ಸ್ಥಳವಾಗಿದ್ದರೂ ಕುಡಿಯುವ ನೀರಿನ ಸಮಸ್ಯೆ ಇದೆ. ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆಯೂ ಕ್ಷೇತ್ರದ ಜನರ ಆಗ್ರಹವಿದೆ. ಈ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ, ಸಚಿವ ಮತ್ತು ವಿಧಾನಸಭೆ ಸಭಾಪತಿಗಳ ಸ್ಥಾನ ಅಲಂಕರಿಸಿರುವ ಕಾಗೇರಿ ಹೇಳಿಕೊಳ್ಳುವಂಥ ಅಭಿವೃದ್ಧಿ ಮಾಡಿಲ್ಲ ಎಂಬ ಮಾತಿದೆ.

ಭಟ್ಕಳ ವಿಧಾನಸಭಾ ಕ್ಷೇತ್ರ

ಜಾತಿ ಮತ್ತು ಧರ್ಮ ರಾಜಕಾರಣವೇ ಪ್ರಮುಖವಾಗಿರುವ ಭಟ್ಕಳ ವಿಧಾನಸಭಾ ಕ್ರೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಕಾಂಗ್ರೆಸ್‌ನಿಂದ ಮಾಜಿ ಶಾಸಕ ಮಂಕಾಳ್ ವೈದ್ಯ ಕಣಕ್ಕಿಳಿದಿದ್ದು, ಬಿಜೆಪಿಯಿಂದ ಹಾಲಿ ಶಾಸಕ ಸುನೀಲ್‌ ನಾಯ್ಕ ಸ್ಪರ್ಧಿಸಿದ್ದಾರೆ. ಹಾಲಿ-ಮಾಜಿಗಳ ಸೆಣೆಸಾಟದ ನಡುವೆ ಅಭಿವೃದ್ಧಿಯ ಮಾತು ಹಿನ್ನೆಲೆಗೆ ಸರಿದಿದೆ. ಹೊಸಮುಖ ನಾಗೇಂದ್ರ ನಾಯ್ಕ ಕೂಡ ಜೆಡಿಎಸ್‌ನಿಂದ ಸ್ಪರ್ಧಿಸಿದ್ದು, ನಿರ್ಣಾಯಕ ಎನ್ನಿಸಿಕೊಂಡಿರುವ ನಾಯ್ಕ ಸಮುದಾಯದ ಮತಗಳು ಚದುರಲಿವೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.

ವಿದ್ಯುತ್, ಕುಡಿಯುವ ನೀರು, ಶಾಲೆ, ಆರೋಗ್ಯ ಕೇಂದ್ರದಂಥ ಮೂಲಸೌಕರ್ಯಗಳಿರದ ದುರ್ಗಮ ಹಳ್ಳಿಗಳಿರುವ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಮಾಮೂಲಿ ಬಜೆಟ್ ಕಾಮಗಾರಿಗಳ ಹೊರತಾಗಿ ಯುವಸಮೂಹಕ್ಕೆ, ರೈತ, ಮೀನುಗಾರರಿಗೆ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುವಂಥ ದೂರದೃಷ್ಟಿಯ ಯೋಜನೆಗಳು ಬಂದಿಲ್ಲ. ಜಿಲ್ಲೆಯ ಬೇರೆ ಕ್ಷೇತ್ರಗಳ ಜನರಂತೆ ಈ ಕ್ಷೇತ್ರದ ಮತದಾರರು ಕೂಡ ಸುಸಜ್ಜಿತ ಆಸ್ಪತ್ರೆಗಳಿಗಾಗಿ ಬೇಡಿಕೆ ಇಡುತ್ತಲೇ ಬಂದಿದ್ದಾರೆ.

ಹಳ್ಳಿಗಳಿಗೆ ಸಮರ್ಪಕ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ತರುವಂತೆಯೂ ಬೇಡಿಕೆ ಇದೆ. ಬೆಸ್ತರಿಗೆ ಮೀನು ಕೆಡದಂತೆ ಕಾಪಾಡುವ ಶೈತ್ಯಾಗಾರದ ಅನಿವಾರ್ಯತೆ ಇದೆ. ಹಾಲಿ ಶಾಸಕ, ಬಿಜೆಪಿ ಅಭ್ಯರ್ಥಿ ಸುನೀಲ್‌ ನಾಯ್ಕ ಜ್ವಲಂತ ಸಮಸ್ಯೆಗಳತ್ತ ಗಮನ ಹರಿಸುತ್ತಿಲ್ಲ. ಅಕ್ರಮ ಮರಳು ಲಾಬಿಯನ್ನು ಶಾಸಕರು ಪೋಷಿಸುತ್ತಿದ್ದಾರೆ. ಶಾಸಕರ ಆಪ್ತರೇ ಅಕ್ರಮ ಸಾರಾಯಿ ವ್ಯವಹಾರದಲ್ಲಿ ತೊಡೊಗಿಕೊಂಡಿದ್ದಾರೆ ಎಂಬ ಗಂಭೀರ ಆರೋಪಗಳು ಕೂಡ ಕೇಳಿ ಬಂದಿದ್ದವು.

ಕುಮಟಾ ವಿಧಾನಸಭಾ ಕ್ಷೇತ್ರ

ಕರಾವಳಿಗೆ ಹೊಂದಿಕೊಂಡಿರುವ ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಸತತವಾಗಿ ಒಂದೇ ಪಕ್ಷ ಅಧಿಕಾರಕ್ಕೆ ಬಂದಿದ್ದು ತೀರಾ ವಿರಳ. 1999ರಿಂದ 2018ರವರೆಗೆ ಈ ಕ್ಷೇತ್ರ (ಮೋಹನ್‌ ಶೆಟ್ಟಿ- ದಿನಕರ್‌ ಶೆಟ್ಟಿ) ದಾಯಾದಿ ರಾಜಕಾರಣಕ್ಕೆ ಸಾಕ್ಷಿಯಾಗಿತ್ತು. ಆದರೆ, ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಇದು ಕೊನೆಯ ಚುನಾವಣೆ ಎಂದು ಘೋಷಿಸಿರುವ ಬಿಜೆಪಿಯ ಹಾಲಿ ಶಾಸಕ ದಿನಕರ್‌ ಶೆಟ್ಟಿ ಕಣದಲ್ಲಿದ್ದು, ಕಾಂಗ್ರೆಸ್‌ನಿಂದ ಮಾರ್ಗರೇಟ್‌ ಆಳ್ವಾ ಅವರ ಪುತ್ರ ನಿವೇದಿತ್‌ ಸ್ಪರ್ಧಿಸಿದ್ದಾರೆ. ಕ್ಷೇತ್ರದಲ್ಲಿ ವ್ಯಕ್ತಿಗತ ವರ್ಚಸ್ಸು ಹೊಂದಿರುವ ಸೂರಜ್‌ ನಾಯ್ಕ ಜೆಡಿಎಸ್‌ನಿಂದ ಅಖಾಡಕ್ಕಿಳಿದಿದ್ದಾರೆ. ಟಿಕೆಟ್‌ ಹಂಚಿಕೆ ವಿಚಾರವಾಗಿ ಸ್ಥಳೀಯ ಕಾಂಗ್ರೆಸ್‌ ನಾಯಕರಲ್ಲಿ ಆಂತರಿಕ ಭಿನ್ನಮತ ಕೂಡ ಇದೆ.

ಈ ಸುದ್ದಿ ಓದಿದ್ದೀರಾ? ಯಲ್ಲಾಪುರ ವಿಧಾನಸಭಾ ಕ್ಷೇತ್ರ | ಪಕ್ಷಾಂತರಿಗಳ ಸೆಣೆಸಾಟದಲ್ಲಿ ಅಭಿವೃದ್ಧಿಯ ಪ್ರಸ್ತಾಪವೇ ಇಲ್ಲ

ಸ್ಥಳೀಯರ ಸುದೀರ್ಘ ಹೋರಾಟದ ಬಳಿಕ ಕುಮಟಾ ನಗರಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾಗಿದೆ. ಆದರೆ, ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ. ಕರಾವಳಿ ನಿಯಂತ್ರಣ ವಲಯದ ನಿಯಮಗಳು ಸ್ಥಳೀಯರಿಗೆ ತೊಡಕಾಗಿವೆ ಎಂಬ ಕೂಗಿದೆ. ಜೊತೆಗೆ ಅರಣ್ಯಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಭೂಮಿಯ ಹಕ್ಕಿಗಾಗಿ ಬೇಡಿಕೆ ಈಡುತ್ತಲೇ ಬಂದಿದ್ದಾರೆ. ಆಸ್ಪತ್ರೆಯ ಹೊರತಾಗಿ ಉಳಿದ ಹಲವು ಸ್ಥಳೀಯ ಸಮಸ್ಯೆಗಳು ಕೇವಲ ಭರವಸೆಯಾಗಿಯೇ ಉಳಿದಿವೆ.

ಕಾರವಾರ ವಿಧಾನಸಭಾ ಕ್ಷೇತ್ರ

ಈ ಬಾರಿ ಕಾರವಾರ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್‌ನಿಂದ ಮಾಜಿ ಶಾಸಕ ಸತೀಶ್‌ ಕೃಷ್ಣ ಸೈಲ್‌ ಕಣದಲ್ಲಿದ್ದರೆ, ಬಿಜೆಪಿಯಿಂದ ಹಾಲಿ ಶಾಸಕಿ ರೂಪಾಲಿ ನಾಯ್ಕ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಟಿಕೆಟ್‌ ಸಿಗದ ಕಾರಣಕ್ಕೆ ಬಂಡಾಯವೆದ್ದು ಜೆಡಿಎಸ್‌ ಸೇರಿರುವ ಮಾಜಿ ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಚೈತ್ರಾ ಕೋಟೇಕಾರ್‌ ಕೂಡ ಸ್ಪರ್ಧೆಯಲ್ಲಿದ್ದಾರೆ. ಹಾಲಕ್ಕಿ ಸಮುದಾಯ, ಕೋಮಾರಪಂಥ ಮತ್ತು ಬೆಸ್ತರ ಸಮುದಾಯ ಈ ಕ್ಷೇತ್ರದಲ್ಲಿ ನಿರ್ಣಾಯಕ.

ಕಾರವಾರ ಜಿಲ್ಲಾ ಕೇಂದ್ರವಾದರೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ. ಉಷ್ಣ ವಿದ್ಯುತ್‌ ಸ್ಥಾವರದಿಂದ ಪರಿಸರಕ್ಕೆ ಹಾನಿ ಎಂಬ ಕೂಗು ಕೂಡ ಜೋರಾಗಿದೆ. ಬಂದರು ವಿಸ್ತರಣೆಗೆ ಮೀನುಗಾರರ ವಿರೋಧ ಕೂಡ ಹೆಚ್ಚಿದೆ. ಹಾಲಿ ಶಾಸಕರು ಸ್ಥಳೀಯ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ ಎಂಬ ಮಾತಿದೆ. ವಿಶೇಷವಾಗಿ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸಿಲ್ಲ ಎಂಬ ಆರೋಪವಿದೆ. ಏಲಕ್ಕಿ, ಮೆಣಸು, ಗೋಡಂಬಿಯಂಥ ಸ್ಥಳೀಯ ಪದಾರ್ಥಗಳಿಗೆ ರಾಜ್ಯದ ವಿವಿಧೆಡೆಗಳಲ್ಲಿ ಶಾಸಕರು ಸರಿಯಾದ ಮಾರುಕಟ್ಟೆಯ ಸಂಪರ್ಕ ಕಲ್ಪಿಸಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಹಳಿಯಾಳ ವಿಧಾನಸಭಾ ಕ್ಷೇತ್ರ

ಹಳಿಯಾಳ ಕ್ಷೇತ್ರ ಕಾಂಗ್ರೆಸ್‌ ಪಕ್ಷದ ಭದ್ರಕೋಟೆ. ಮಾಜಿ ಸಚಿವ ಆರ್‌.ವಿ ದೇಶಪಾಂಡೆ ಇಲ್ಲಿಂದ 8 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2008ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ದೇಶಪಾಂಡೆ ಎದುರು ಗೆಲುವು ದಾಖಲಿಸಿದ್ದ ಸುನೀಲ್‌ ಹೆಗಡೆ ಈಗ ಬಿಜೆಪಿಯಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದಲೇ ಸ್ಪರ್ಧಿಸಿ ಸೋತಿದ್ದ ಅವರು ಇದೀಗ ಮತ್ತೆ ಕಮಲ ಪಾಳಯದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ದೇಶಪಾಂಡೆಯವರಿಗೆ ಪೈಪೋಟಿ ನೀಡುವ ಸಲುವಾಗಿಯೇ ಬಿಜೆಪಿ ವರಿಷ್ಠರು ಸುನಿಲ್‌ ಹೆಗಡೆಗೆ ಮಣೆ ಹಾಕಿದ್ದಾರೆ. ಜೆಡಿಎಸ್‌ನಿಂದ ಎಸ್‌ಎಲ್‌ ಕೋಟ್ನೇಕರ್‌ ಕೂಡ ಸ್ಪರ್ಧಿಸಿದ್ದಾರೆ.

ಉತ್ತರ ಕನ್ನಡದ ಜನರ ಸಾಮಾನ್ಯ ಬೇಡಿಕೆಯಾಗಿರುವ ಸುಸಜ್ಜಿತ ಆಸ್ಪತ್ರೆಯ ಕೂಗು ಈ ಕ್ಷೇತ್ರದಲ್ಲೂ ಇದೆ. ರಾಜ್ಯ ರಾಜಕಾರಣದಲ್ಲಿ ಪ್ರಭಾವಿ ಎನ್ನಿಸಿಕೊಂಡಿರುವ, ಹಲವು ಬಾರಿ ಸಚಿವ ಸ್ಥಾನ ಅಲಂಕರಿಸಿರುವ ಆರ್‌.ವಿ ದೇಶಪಾಂಡೆ ಈ ವಿಚಾರವಾಗಿ ಹೆಚ್ಚು ಶ್ರಮಿಸಿಲ್ಲ ಎಂಬ ಆರೋಪವಿದೆ. ಕಬ್ಬು ಬೆಳೆಗಾರರ ಹಲವು ಸಮಸ್ಯೆಗಳಿವೆ. ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಕ್ಷೇತ್ರದಲ್ಲಿದೆ. ಮರಾಠ, ಕುಣಬಿ ಮತ್ತು ಮುಸ್ಲಿಂ ಸಮುದಾಯಗಳು ಈ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿವೆ.

LEAVE A REPLY

Please enter your comment!
Please enter your name here