- ಸಂದರ್ಶನ ಸಮಿತಿ ರಚನೆಯಲ್ಲಿ ಬದಲಾವಣೆಯಿಲ್ಲ ಎಂದ ಕೆಪಿಎಸ್‌ಸಿ
- ಕೆಪಿಎಸ್‌ಸಿ ಅಧಿಕಾರಿಗಳ ನಡುವೆ ಮುಸುಕಿನ ಗುದ್ದಾಟ
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಖಾಲಿ ಹುದ್ದೆ ನೇಮಕಾತಿಗೆ ಸಂದರ್ಶನ ಸಮಿತಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷರು ಮತ್ತು ಸದಸ್ಯರು ಇರಬೇಕೆಂದು ಸರ್ಕಾರ ನಿರ್ದೇಶಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೆಪಿಎಸ್‌ಸಿ ಅಧಿಕಾರಿಗಳು, ‘ಏಕಾಏಕಿ ಬಂದಿರುವ ಆದೇಶ ಪಾಲನೆ ಮಾಡಲಾಗುವುದಿಲ್ಲ’ ಎಂದು ತಳ್ಳಿಹಾಕಿದ್ದಾರೆ. ಅಧಿಕಾರಿಗಳ ನಡೆ ಸಮಂಜಸವಲ್ಲವೆಂದು ಕರ್ನಾಟಕ ಸ್ಟೇಟ್ ಕಾಂಪಿಟೇಟಿವ್ ಎಕ್ಸಾಮಿನೇಷನ್ ಆಸ್ಪಿರೆಂಟ್ಸ್ ಅಸೋಸಿಯೇಷನ್ ಆಕ್ರೋಶ ವ್ಯಕ್ತಪಡಿಸಿದೆ.
ನಾಲ್ಕು ಜನರನ್ನೊಳಗೊಂಡ ಸಮಿತಿಯಲ್ಲಿ ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಸದಸ್ಯರು ಇರಬೇಕೆನ್ನುವುದು ರಾಜ್ಯ ಸರ್ಕಾರದ ನಿರ್ದೇಶನ. ಆದರೆ, ಸರ್ಕಾರ ಮುಂಚಿತವಾಗಿ ಮಾಹಿತಿ ನೀಡದೆ ಏಕಾಏಕಿ ವಿಷಯದ ಕುರಿತು ನಿರ್ಧರಿಸುವುದು ಗೊಂದಲಕ್ಕೀಡು ಮಾಡಿದೆ ಎಂದು ಅಧಿಕಾರಿಗಳು ನಿರ್ಲಕ್ಷ್ಯ ಸ್ವಭಾವ ವ್ಯಕ್ತಪಡಿಸಿದ್ದಾರೆ.
“ಸದ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪೂರ್ವಭಾವಿ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆಗಳು ನಡೆದಿರುವುದರಿಂದ ಈ ಹಂತದಲ್ಲಿ ಸಂದರ್ಶನ ಸಮಿತಿ ರಚನೆಯಲ್ಲಿ ಬದಲಾವಣೆ ಮಾಡುವುದಕ್ಕೆ ಸಾಧ್ಯವಿಲ್ಲ” ಎಂದು ಕೆಪಿಎಸ್‌ಸಿ ಸರ್ಕಾರದ ಆದೇಶ ತಳ್ಳಿಹಾಕಿದೆ.
ಈ ಸುದ್ದಿ ಓದಿದ್ದೀರಾ?: ಬೋಧನಾ ಕೌಶಲ್ಯ ಕಾರ್ಯಗಾರ; ಕಣಜ ಯುವ ಸಂಶೋಧನಾ ಕೇಂದ್ರದಿಂದ ಅರ್ಜಿ ಆಹ್ವಾನ
ಈ ಹಿಂದೆ ಪಿಡಬ್ಲ್ಯೂಡಿಯ ಸಹಾಯಕ ಅಭಿಯಂತರ ಹುದ್ದೆಗೆ ಸಂದರ್ಶನ ಸಮಿತಿಯ ರಚನೆಯಲ್ಲಿ ಬದಲಾವಣೆ ತರಲಾಗಿತ್ತು. ಇದರಿಂದ ನೂರಾರು ಅಭ್ಯರ್ಥಿಗಳಿಗೆ ಪಾರದರ್ಶಕವಾಗಿ ಯಾವುದೇ ಸಮಸ್ಯೆಗಳಿಲ್ಲದೆ ಹುದ್ದೆ ಪಡೆಯಲು ಅನುಕೂಲವಾಗಿತ್ತು.
ಇಂತಹ ಒಳ್ಳೆಯ ಬದಲಾವಣೆಯನ್ನು ಕೆಪಿಎಸ್‌ಸಿ ಅಧ್ಯಕ್ಷರು ಹಾಗೂ ಸದಸ್ಯರು ತಳ್ಳಿಹಾಕಿರುವುದು ಶೋಭೆಯಲ್ಲ ಎಂದು ಅಭ್ಯರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಪಿಎಸ್‌ಸಿಯ ಸದಸ್ಯರು, ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ನಡುವಿನ ಮುಸುಕಿನ ಗುದ್ದಾಟದಿಂದ ಸ್ಪರ್ಧಾಕಾಂಕ್ಷಿಗಳು ಈಗಾಗಲೇ ಸಾಕಷ್ಟು ಬೇಸತ್ತಿದ್ದಾರೆ ಎಂದು ಹೇಳಲಾಗಿದೆ.
ಕಾರ್ಯದರ್ಶಿಗಳು ಕೈಗೊಳ್ಳುವ ಪ್ರತಿಯೊಂದು ಕೆಲಸ ಸ್ಪರ್ಧಾರ್ಥಿಗಳಿಗೆ ಅನುಕೂಲವಾಗಿರುತ್ತದೆ ಹಾಗೂ ಪಾರದರ್ಶಕತೆ ಇರುತ್ತದೆ. ಆದರೆ, ಇದಕ್ಕೆ ವಿರುದ್ಧವಾಗಿ ಕೆಪಿಎಸ್‌ಸಿ ಸದಸ್ಯರು ಮತ್ತು ಅಧ್ಯಕ್ಷರು ಕಾರ್ಯದರ್ಶಿಗಳ ನಡೆಗೆ ಸುಖಾ ಸುಮ್ಮನೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸ್ಪರ್ಧಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.ಇವುಗಳನ್ನೆಲ್ಲ ತ್ವರಿತವಾಗಿ ಸರಿಪಡಿಸಬೇಕೆಂದು ಕರ್ನಾಟಕ ಸ್ಟೇಟ್ ಕಾಂಪಿಟೇಟಿವ್ ಎಕ್ಸಾಮಿನೇಷನ್ ಆಸ್ಪಿರೆಂಟ್ಸ್ ಅಸೋಸಿಯೇಷನ್ ಆಗ್ರಹಿಸಿದೆ.