ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರುಘಮಲೆಯಲ್ಲಿ ನೆಲೆಸಿರುವ ವಲಸೆ ಕಾರ್ಮಿಕನ ಪುತ್ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು, ಸಾಧನೆ ಮಾಡಿದ್ದಾರೆ.
ಮುರುಘಮಲೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಕಲಂದರ್ ದಸ್ತಗೀರ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 598 (95.68%) ಅಂಕ ಗಳಿಸಿದ್ದಾರೆ. ಶಾಲೆಗೆ ಅಗ್ರಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.
ಕಲಂದರ್ ಕುಟುಂಬವು ಮೂಲತಃ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹತ್ತಿಮತ್ತೂರಿನವರು. ಆ ಕುಟುಂಬವು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಆಶಯದೊಂದಿಗೆ ಮುರುಘಮಲೆಗೆ ವಲಸೆ ಬಂದು, ನೆಲೆಸಿದ್ದರು. ಮಗನ ಎಸ್‌ಎಸ್‌ಎಲ್‌ಸಿ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದೆ.
ವಲಸೆ ಕಾರ್ಮಿಕ ದಸ್ತಗೀರ್ ಹಾಗೂ ಖುರ್ಷಿದ್ ಬಾನುರವರ ನಾಲ್ವರು ಮಕ್ಕಳಲ್ಲಿ ಕಲಂದರ್ ಮೊದಲನೆಯವನರು. ಬಾಡಿಗೆ ಮನೆಯಲ್ಲಿ ನೆಲೆಸಿರುವ ಕುಟುಂಬಕ್ಕೆ ಅಪ್ಪನ ದುಡಿಮೆಯೇ ಆಸರೆಯಾಗಿದೆ. ಮಗನ ಮುಂದಿನ ಓದಿಗೆ ಬೇಕಾದ ಪ್ರೋತ್ಸಾಹ ದೊರೆತರೆ ಓದಿಸುವ ಬಯಕೆ ಇದೆ ಎಂದು ಹೆತ್ತವರು ಹೇಳುತ್ತಾರೆ.
ತಾನು ಭವಿಷ್ಯದಲ್ಲಿ ಇಂಜಿನಿಯರ್ ಆಗಬೇಕೆಂಬ ಕನಸನ್ನು ವಿದ್ಯಾರ್ಥಿ ಕಲಂದರ್ ಹೊಂದಿದ್ದಾರೆ.