ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ವೈಫಲ್ಯ ವಿರೋಧಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನವದೆಹಲಿಯ ಜಂತರ್ ಮಂತರ್ನಲ್ಲಿ ಕಳೆದ 19 ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚೂಕ್ ಅವರ ಆರೋಗ್ಯ ಹದಗೆಡುತ್ತಿದ್ದು, ಅವರ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಲು ರಾಷ್ಟ್ರಪತಿಗಳು ತುರ್ತಾಗಿ ಮಧ್ಯಪ್ರವೇಶಿಸಬೇಕು ಎಂದು ಜನಪರ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.
ಈ ಸಂಬಂಧ ಶುಕ್ರವಾರ ಒಕ್ಕೂಟದ ಪ್ರಮುಖರು ರಾಷ್ಟ್ರಪತಿಗಳ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಸಲ್ಲಿಸಿದರು.
ಒಕ್ಕೂಟದ ಪ್ರಮುಖರು ಮಾತನಾಡಿ, “ಸತತ ಉಪವಾಸದಿಂದಾಗಿ ಸೋನಂ ವಾಂಗ್ಚೂಕ್ ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಅವರ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆಯಿದೆ ಎಂದು ವೈದ್ಯರು ಎಚ್ಚರಿಕೆ ನೀಡುತ್ತಿದ್ದಾರೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿಯೂ ಕೇಂದ್ರ ಸರ್ಕಾರದಿಂದ ಯಾವುದೇ ಸ್ಪಂದನೆ ದೊರೆಯದಿರುವುದು ವಿಷಾದನೀಯ” ಎಂದು ಆಕ್ಷೇಪಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತ ಹಾಗೂ ಅಹಿಂಸಾತ್ಮಕ ಹೋರಾಟಗಳಿಗೆ ಸರ್ಕಾರ ಸೂಕ್ತ ಸ್ಪಂದನೆ ನೀಡುವುದು ಅಗತ್ಯವಾಗಿದೆ. ಆದ್ದರಿಂದ ರಾಷ್ಟ್ರಪತಿಗಳು ಮಾನವೀಯ ನೆಲೆಯಲ್ಲಿ ತಕ್ಷಣ ಮಧ್ಯಪ್ರವೇಶಿಸಿ, ಸೋನಂ ವಾಂಗ್ಚೂಕ್ ಅವರೊಂದಿಗೆ ಸಂವಾದ ನಡೆಸುವಂತೆ ಹಾಗೂ ಅವರ ಬೇಡಿಕೆಗಳನ್ನು ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಜೊತೆಗೆ ಅವರ ಆರೋಗ್ಯದ ಹಿತದೃಷ್ಟಿಯಿಂದ ಉಪವಾಸ ಸತ್ಯಾಗ್ರಹವನ್ನು ಶೀಘ್ರ ಅಂತ್ಯಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಅರ್ಧಕ್ಕೆ ಓದು ನಿಲ್ಲಿಸಿದ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ
ಜನಪರ ಸಂಘಟನೆಗಳ ಒಕ್ಕೂಟದ ಪ್ರಮುಖರಾದ ಶ್ರೀಕಾಂತ ಸ್ವಾಮಿ, ನಿಜಾಮೋದ್ದೀನ್, ಜಗದೀಶ್ವರ ಬಿರಾದರ್, ಡಾ. ಮಕ್ಸೂದ್ ಚಂದಾ, ಮಹೇಶ ಗೊರನಾಳಕರ್, ರಜೀಯಾ ಬಳಬಟ್ಟಿ, ಸುಪ್ರಿಯಾ ಮಾಳಗೆ, ಸಂದೀಪ ಮುಕಿಂದೆ, ವಿನಯಕುಮಾರ ಮಾಳಗೆ, ಫಿರಾಸತ್ ಅಲಿ, ಮಛೇಂದ್ರ ವಾಘಮಾರೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.




