“ಕನ್ನಡ ಸಾಂಸ್ಕೃತಿಕ ಲೋಕದಲ್ಲಿ `ರಾಯರೆಂದೇ’ ಕರೆಸಿಕೊಂಡಿದ್ದ ಡಾ. ರಾ.ಯ. ಧಾರವಾಡಕರ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಪ್ರಬಂಧ ಸಾಹಿತ್ಯದ ಸಾರ್ವಭೌಮರೆಂದೇ ಪ್ರಖ್ಯಾತಿ ಪಡೆದಿದ್ದಾರೆ” ಎಂದು ಧಾರವಾಡದ ಅಭಿನಯ ಭಾರತಿ ಅಧ್ಯಕ್ಷರು ಅರವಿಂದ ಕುಲಕರ್ಣಿ ಅಭಿಪ್ರಾಯಪಟ್ಟರು.
ಧಾರವಾಡ ಪಟ್ಟಣದ ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ.ರಾ.ಯ.ಧಾರವಾಡಕರ ಸಂಸ್ಮರಣೆ ದತ್ತಿ ಅಂಗವಾಗಿ ‘ಡಾ. ರಾ.ಯ. ಧಾರವಾಡಕರ ಪ್ರಬಂಧ ಸಾಹಿತ್ಯ’ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
“ಧಾರವಾಡಕರ ಅವರ ಆಸಕ್ತಿಯ ಕ್ಷೇತ್ರ ಪ್ರಬಂಧ ಸಾಹಿತ್ಯದ ಜೊತೆಗೆ ಕಥಾ ರಚನೆಯಲ್ಲೂ ಸಿದ್ಧಹಸ್ತರಾಗಿದ್ದರು. ಅವರು ಬರೆದ ಕಥೆಗಳು ಓದುಗರಲ್ಲಿ ಭಾವನೆ ಅರಳಿಸುವಂತವುಗಳಾಗಿವೆ. ಅವರ ಪ್ರಬಂಧ ಸಾಹಿತ್ಯದ ಧೂಮ್ರವಲಯಗಳು, ನವಿಲುಗರಿ, ಸೂರ್ಯಪಾನ ಹೆಚ್ಚು ಪ್ರಸಿದ್ದಿ ಪಡೆದವುಗಳಾಗಿವೆ. ಇವರು ಶಾಂತಕವಿಗಳ ಮೂರು ಕೀರ್ತನೆಗಳನ್ನು ಬೆಳಕಿಗೆ ತಂದರು. ವ್ಯಕ್ತಿಪರಿಚಯದಲ್ಲಿ ಐದು ಮಹಾನ್ ಸಾಧಕರ ಕುರಿತು ಕೃತಿ ರಚಿಸಿದ್ದಾರೆ. ಇವರ ಪ್ರಬಂಧ ಸಾಹಿತ್ಯದಲ್ಲಿ ಪ್ರಣಯ, ಪ್ರೀತಿ, ಉಪದೇಶ, ಮನರಂಜನೆ, ಅಹಂಕಾರ ಹಾಗೂ ಜ್ಞಾನದ ಸಾಮಾನ್ಯ ವಿಷಯಗಳನ್ನು ಅಸಾಮಾನ್ಯವಾಗಿ ಚಿತ್ರಿಸಿದ್ದಾರೆ. ಪ್ರಬಂಧ ಸಾಹಿತ್ಯದಲ್ಲಿ ಆರಂಭ ಹಾಗೂ ಅಂತ್ಯಗಳು ಮುಖ್ಯ” ಎಂದರು.
“ಡಾ. ರಾ.ಯ. ಧಾರವಾಡಕರ ಧಾರವಾಡದ ಜೆ.ಎಸ್.ಎಸ್. ಕಾಲೇಜಿನ ಪ್ರಾಚಾರ್ಯರಾಗಿ ೨೫ ವರ್ಷ ಸಾರ್ಥಕ ಸೇವೆ ಸಲ್ಲಿಸಿ ಅದರ ಉನ್ನತಿಗಾಗಿ ಶ್ರಮಿಸಿದರು. ಪ್ರಬಂಧ ಸಾಹಿತ್ಯದಲ್ಲಿ ಅವರಿಗಿದ್ದ ಅಪಾರ ಆಸಕ್ತಿ ಗಮನಿಸಿ ಅವರ ಹುಟ್ಟಿದ ದಿನವಾದ ಜುಲೈ 15ನ್ನು ಪ್ರಬಂಧ ದಿನ ಎಂದು ಆಚರಿಸಿ ಶಾಲಾ, ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ ಆಯೋಜಿಸಬೇಕು. ಅವರ ಪ್ರಬಂಧ ಸಾಹಿತ್ಯದಲ್ಲಿ ಜೀವನದ ಸಮಗ್ರ ಚಿತ್ರಣವೇ ಇದೆ” ಎಂದು ಹೇಳಿದರು.
ವೇದಿಕೆಯಲ್ಲಿ ಅನಿಲ ಧಾರವಾಡಕರ ಇದ್ದು ದತ್ತಿಪರವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಹ.ವೆಂ. ಕಾಖಂಡಕಿ ಮಾತನಾಡಿ, “ಡಾ. ರಾ. ಯ. ಧಾರವಾಡಕರ ಅವರ ಪಾಠ ಬೋಧನೆ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುವಂತಿತ್ತು. ಸಾಮಾನ್ಯ ವಿಷಯಗಳನ್ನು ಅರ್ಥಪೂರ್ಣವಾಗಿ ಹೇಳುವ ಕಲೆ ಅವರಲ್ಲಿತ್ತು. ಅವರ ಪಿ.ಎಚ್.ಡಿ. ಪ್ರಬಂಧ ‘ಹೊಸಗನ್ನಡದ ಉದಯ ಕಾಲದಲ್ಲಿ’ ಉತ್ತರ ಕರ್ನಾಟಕದ ಕನ್ನಡದ ಗಟ್ಟಿತನ ಕಾಣಬಹುದು” ಎಂದು ಹೇಳಿದರು.
ವೀರಣ್ಣ ಒಡ್ಡೀನ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರ್ವಹಿಸಿದರು. ಪ್ರೊ. ಧನವಂತ ಹಾಜವಗೋಳ ವಂದಿಸಿದರು. ಕಾರ್ಯಕ್ರಮದಲ್ಲಿ ಶಂಕರ ಹಲಗತ್ತಿ, ಸತೀಶ ತುರಮರಿ, ಸುಜಾತಾ ಧಾರವಾಡಕರ, ಎಂ.ಎಂ. ಚಿಕ್ಕಮಠ, ಸೋಮನಗೌಡ ಪಾಟೀಲ ಸೇರಿದಂತೆ ಮುಂತಾದವರಿದ್ದರು.




