ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಸಾಹಿತಿ ದೇವನೂರ ಮಹಾದೇವ ಅವರು ‘ಮುಷ್ಟಿಯೊಳಗಿರುವ ಗುಬ್ಬಚ್ಚಿ’ಗೆ ಹೋಲಿಸಿದ್ದಾರೆ. ಜನರು ಆ ಗುಬ್ಬಚ್ಚಿ ಸತ್ತಿದೆ ಎಂದರೆ, ತಮ್ಮ ಮುಷ್ಟಿಯಲ್ಲಿ ಹಿಡಿದಿರುವವರು ಬದುಕಿರುವುದನ್ನು ತೋರುತ್ತಾರೆ. ಬದುಕಿದೆ ಎಂದರೆ ಕೊಂದುಬಿಡುತ್ತಾರೆ. ಈ ಎಸ್ಐಆರ್ ಕೂಡ ಅದೇ ರೀತಿಯಲ್ಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಜಾಗೃತ ಕರ್ನಾಟಕ ಆಯೋಜಿಸಿದ್ದ ಆನ್ಲೈನ್ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಮತದಾರರ ಪಟ್ಟಿ ಪರಿಷ್ಕರಣೆಯ ಪ್ರಸ್ತುತ ವಿಧಾನವು ಜನರಲ್ಲಿ ಅನಗತ್ಯ ಭಯ, ಗೊಂದಲ ಹಾಗೂ ಅಸುರಕ್ಷತೆಯ ಭಾವನೆಯನ್ನು ಉಂಟುಮಾಡಿದೆ ಎಂದರು.
ತಮ್ಮ ಭಾಷಣದ ಆರಂಭದಲ್ಲೇ ಲೇಖಕ ಬಿ.ಎಂ. ಬಶೀರ್ ಅವರ ಮುಷ್ಟಿಯಲ್ಲಿ ಗುಬ್ಬಚ್ಚಿ’ ಎಂಬ ಕಥೆಯನ್ನು ಉಲ್ಲೇಖಿಸಿದ ದೇವನೂರ ಮಹಾದೇವ, ಆ ಕಥೆಯ ಮೂಲಕ ಇಂದಿನ ಪರಿಸ್ಥಿತಿಯನ್ನು ವಿವರಿಸಿದರು. “ಕಥೆಯಲ್ಲಿ ಒಬ್ಬ ವ್ಯಕ್ತಿ ತನ್ನ ಮುಷ್ಟಿಯೊಳಗೆ ಗುಬ್ಬಚ್ಚಿಯನ್ನು ಬಚ್ಚಿಟ್ಟುಕೊಂಡು, ‘ಇದು ಬದುಕಿದೆಯೋ, ಸತ್ತಿದೆಯೋ?’ ಎಂದು ಜನರನ್ನು ಪ್ರಶ್ನಿಸುತ್ತಾನೆ. ಜನರು ‘ಬದುಕಿದೆ’ ಎಂದರೆ ಆತ ಗುಬ್ಬಚ್ಚಿಯನ್ನು ಸಾಯಿಸಿಬಿಡುವ ಆತಂಕ; ‘ಸತ್ತಿದೆ’ ಎಂದರೆ ಬದುಕಿರುವುದನ್ನು ತೋರಿಸಿ ಅವರನ್ನೇ ಸೋಲಿಸುವ ಸಾಧ್ಯತೆ. ಹೀಗಾಗಿ ಜನರು ಯಾವುದನ್ನು ಹೇಳಿದರೂ ಒಂದು ಅಪಾಯ ತಪ್ಪದು. ಇದೇ ರೀತಿಯ ಇಕ್ಕಟ್ಟಿನ ಪರಿಸ್ಥಿತಿ ಇಂದು ಮತದಾರರಿಗೂ ಎದುರಾಗಿದೆ. ಇಂದು ಆ ಮುಷ್ಟಿಯೊಳಗೆ ಇರುವ ಗುಬ್ಬಚ್ಚಿ ಮತದಾರನಾದರೆ, ಆ ಮುಷ್ಟಿ ಹಿಡಿದಿರುವುದು ಚುನಾವಣಾ ಆಯೋಗ” ಎಂದು ತಿಳಿಸಿದರು.
ಎಸ್ಐಆರ್ ಪ್ರಕ್ರಿಯೆಯಲ್ಲಿ ಬಳಸಲಾಗುತ್ತಿರುವ ಮತದಾರರ ಗಣತಿ ನಮೂನೆಯ ಕುರಿತು ಮಾತನಾಡಿದ ಅವರು, “ಆ ನಮೂನೆಯ ಭಾಷೆಯೇ ಸಾಮಾನ್ಯ ನಾಗರಿಕರಿಗೆ ಅರ್ಥವಾಗದಷ್ಟು ಗೊಂದಲಕಾರಿಯಾಗಿದೆ. ನಾನು ಕನ್ನಡದಲ್ಲಿ ಎಂ.ಎ. ಮಾಡಿದ್ದೇನೆ. ಆದರೆ, ಈ ನಮೂನೆಯನ್ನು ಓದಿದ ನಂತರವೂ ಅದು ನನಗೆ ಅಸ್ಪಷ್ಟವಾಗಿಯೂ, ನಿಗೂಢವಾಗಿಯೂ ಅನಿಸಿತು. ನನ್ನಂತವರಿಗೆ ಹೀಗಾದರೆ, ಸಾಮಾನ್ಯ ಜನರ ಪರಿಸ್ಥಿತಿ ಏನಾಗಿರಬಹುದು” ಎಂದು ಪ್ರಶ್ನಿಸಿದರು.
“ನಮೂನೆಯಲ್ಲಿ ಬಳಸಿರುವ ‘ಹಿಂದಿನ ವಿಶೇಷ ಸಮಗ್ರ ಪರಿಷ್ಕರಣೆ’ ಎಂಬ ಪದಪ್ರಯೋಗವೇ ಗೊಂದಲ ಸೃಷ್ಟಿಸುತ್ತಿದೆ. ಯಾವ ಹಿಂದಿನ ಪರಿಷ್ಕರಣೆ? ಯಾವ ವರ್ಷದ್ದು? ಅದನ್ನು ಸ್ಪಷ್ಟವಾಗಿ ನಮೂದಿಸಲು ಏನು ತೊಂದರೆಯಾಗಿತ್ತು? ಆ ಮಾಹಿತಿಯೆಲ್ಲ ಬೂತ್ ಮಟ್ಟದ ಅಧಿಕಾರಿಗಳ ಬಳಿ ಇದ್ದರೆ, ಅವರೇ ಅದನ್ನು ತುಂಬಿ ನಾಗರಿಕರಿಂದ ಅಗತ್ಯ ಮಾಹಿತಿಯನ್ನು ಮಾತ್ರ ಪಡೆದುಕೊಳ್ಳಬಹುದಾಗಿತ್ತು. ಬದಲಾಗಿ, ಆ ಮಾಹಿತಿಯನ್ನು ಹುಡುಕುವ ಕೆಲಸಕ್ಕೆ ಜನರನ್ನೇ ತಳ್ಳಲಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ನಮೂನೆಯಲ್ಲಿರುವ ಹಲವಾರು ವಿವರಗಳು ತಾರ್ಕಿಕವಾಗಿಲ್ಲ. ತಂದೆ-ತಾಯಿ ಅಥವಾ ಪೋಷಕರ ಮಾಹಿತಿ ಕೇಳುವ ವಿಧಾನ, ವಿವಿಧ ಕಾಲಂಗಳ ಸ್ಪಷ್ಟತೆಯ ಕೊರತೆ ಹಾಗೂ ಪದಗಳ ಅಸ್ಪಷ್ಟ ಬಳಕೆ ನಾಗರಿಕರನ್ನು ಗೊಂದಲಕ್ಕೆ ತಳ್ಳುತ್ತಿದೆ. ಅಧಿಕಾರಿಗಳ ಮೇಲೆಯೂ ಇದೇ ರೀತಿಯ ಅನಗತ್ಯ ಹೊರೆ ಹಾಕಲಾಗಿದೆ” ಎಂದು ಅವರು ಅಭಿಪ್ರಾಯಪಟ್ಟರು.
ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಬಗ್ಗೆ ಮಾತನಾಡಿದ ದೇವನೂರ ಮಹಾದೇವ, “ಅನಾಥರು, ತಂದೆ-ತಾಯಿ ತ್ಯಜಿಸಿದ ಮಕ್ಕಳು, ಕುಟುಂಬದಿಂದ ಬೇರ್ಪಟ್ಟವರು ಹಾಗೂ ಇತರ ದುರ್ಬಲ ವರ್ಗಗಳಿಗೆ ಪ್ರತ್ಯೇಕವಾಗಿ ಪರಿಗಣಿಸುವ ವ್ಯವಸ್ಥೆಯೇ ಎಸ್ಐಆರ್ ಪ್ರಕ್ರಿಯೆಯಲ್ಲಿ ಇಲ್ಲ. ತಂದೆ-ತಾಯಿ ಇಲ್ಲದ ಮಗುವೂ ಭಾರತದ ಪ್ರಜೆಯೇ. ಅವನ ಮತದಾನದ ಹಕ್ಕು ದಾಖಲೆಗಳ ಕೊರತೆಯಿಂದ ಏಕೆ ಕಳೆದುಹೋಗಬೇಕು” ಎಂದು ಪ್ರಶ್ನಿಸಿದರು.
ನಮೂನೆಯ ಕೊನೆಯಲ್ಲಿ ತಪ್ಪು ಮಾಹಿತಿ ನೀಡಿದರೆ ಶಿಕ್ಷೆ ಮತ್ತು ದಂಡದ ಬಗ್ಗೆ ನೀಡಿರುವ ಎಚ್ಚರಿಕೆಯನ್ನೂ ದೇವನೂರ ಮಹಾದೇವ ಪ್ರಶ್ನಿಸಿದರು. “ಒಂದೆಡೆ ನಮೂನೆಯೇ ಗೊಂದಲದಿಂದ ಕೂಡಿದೆ. ಮತ್ತೊಂದೆಡೆ ತಪ್ಪಾದರೆ ಶಿಕ್ಷೆ ಎಂಬ ಎಚ್ಚರಿಕೆ ನೀಡಲಾಗಿದೆ. ಈ ರೀತಿಯ ಭಯ ಹುಟ್ಟಿಸುವ ಕ್ರಮ ಜನರಲ್ಲಿ ಮತ್ತಷ್ಟು ಆತಂಕ ಉಂಟುಮಾಡುತ್ತದೆ” ಎಂದರು.
“ಭಾರತದ ಗ್ರಾಮೀಣ ವಾಸ್ತವಿಕತೆಯನ್ನು ಅರ್ಥಮಾಡಿಕೊಳ್ಳದೆ ದಾಖಲೆಗಳನ್ನು ಆಧರಿಸಿ ತಾರ್ಕಿಕತೆ ಹುಡುಕುವುದು ಸರಿಯಲ್ಲ. ಗ್ರಾಮೀಣ ಜನರಲ್ಲಿ ಬಹುತೇಕರಿಗೆ ತಮ್ಮ ನಿಖರ ಜನ್ಮ ದಿನಾಂಕ ಗೊತ್ತಿರುವುದಿಲ್ಲ. ಪ್ರಾಥಮಿಕ ಶಾಲೆಯ ಶಿಕ್ಷಕರು ಅಥವಾ ಸರ್ಕಾರಿ ಕಚೇರಿಯ ಸಿಬ್ಬಂದಿಯೇ ಅಂದಾಜಿನ ಮೇಲೆ ವಯಸ್ಸು ದಾಖಲಿಸಿರುವ ಅನೇಕ ಉದಾಹರಣೆಗಳಿವೆ. ನನ್ನ ತಾಯಿಯೇ ನನ್ನ ವಯಸ್ಸಿಗಿಂತ ಎರಡು ವರ್ಷ ಕಿರಿಯವಳಾಗಿ ದಾಖಲಾಗಿದ್ದ ಘಟನೆ ನಡೆದಿದೆ. ಇದು ಭಾರತದ ಸಾಮಾಜಿಕ ವಾಸ್ತವ. ಇಂತಹ ವಾಸ್ತವವನ್ನು ಲೆಕ್ಕಿಸದೆ ದಾಖಲೆಗಳ ನಡುವೆ ತಾರ್ಕಿಕ ಹೊಂದಾಣಿಕೆ ಹುಡುಕುವುದು ನ್ಯಾಯಸಮ್ಮತವಲ್ಲ” ಎಂದು ಹೇಳಿದರು.
ಈ ಲೇಖನ ಓದಿದ್ದೀರಾ?: ಸೋನಂ ವಾಂಗ್ಚುಕ್ ನಿರಶನ ಮತ್ತು ಮೋದಿ ಮೌನ
ತಮ್ಮ ಭಾಷಣದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರನ್ನು ಉದ್ದೇಶಿಸಿ ಮಾತನಾಡಿದ ದೇವನೂರ ಮಹಾದೇವ, “ನೀವು ಮೃತಪಟ್ಟವರು ಎಂದು ಕೈಬಿಟ್ಟ ವ್ಯಕ್ತಿಯೇ ನಿಮ್ಮ ಮುಂದೆ ಬದುಕಿರುವುದಾಗಿ ಬಂದು ನಿಂತರೆ ನಿಮಗೆ ಹೇಗನಿಸುತ್ತದೆ? ಹುಟ್ಟಿದಾಗಿನಿಂದ ಮತ ಹಾಕುತ್ತಿದ್ದ ಹಿರಿಯ ವ್ಯಕ್ತಿಯೊಬ್ಬ ಈ ವ್ಯವಸ್ಥೆಯ ದೋಷದಿಂದ ಮತದಾನದ ಹಕ್ಕು ಕಳೆದುಕೊಂಡು ನಿಮ್ಮ ಮುಂದೆ ಬಂದರೆ ನಿಮ್ಮ ಮನಸ್ಸು ಏನು ಹೇಳುತ್ತದೆ” ಎಂದು ಪ್ರಶ್ನಿಸಿದರು.
“ಅಧಿಕಾರಿಗಳು ಕೇವಲ ನಿಯಮಗಳನ್ನು ಅನುಸರಿಸುವುದಷ್ಟೇ ಅಲ್ಲ, ಮಾನವೀಯತೆ ಮತ್ತು ನೈತಿಕತೆಯನ್ನೂ ಪಾಲಿಸಬೇಕು. ಮದುವೆಯಾಗಿ ಬೇರೆ ಊರಿಗೆ ತೆರಳಿದ ಮಹಿಳೆಯರು, ಆಸ್ಪತ್ರೆಗಳ ಮುಂದೆ ಬಿಟ್ಟುಹೋಗಲಾದ ಮಕ್ಕಳು, ದಾಖಲೆಗಳಿಲ್ಲದ ದುರ್ಬಲ ವರ್ಗದ ನಾಗರಿಕರು ಸೇರಿದಂತೆ ಪ್ರತಿಯೊಬ್ಬ ಅರ್ಹ ನಾಗರಿಕನ ಮತದಾನದ ಹಕ್ಕು ರಕ್ಷಿಸುವುದು ಚುನಾವಣಾ ವ್ಯವಸ್ಥೆಯ ಪ್ರಮುಖ ಹೊಣೆಗಾರಿಕೆ” ಎಂದು ಅವರು ಪ್ರತಿಪಾದಿಸಿದರು.
“ಕರ್ನಾಟಕದಲ್ಲಿ ಎಸ್ಐಆರ್ ಪ್ರಕ್ರಿಯೆ ಮಾನವೀಯತೆ, ನೈತಿಕತೆ ಮತ್ತು ಸಂವಿಧಾನಾತ್ಮಕ ಹಕ್ಕುಗಳನ್ನು ಗೌರವಿಸುವ ರೀತಿಯಲ್ಲಿ ಜಾರಿಯಾಗಬೇಕು. ಭಾರತವನ್ನು ದಾಖಲೆಗಳ ಮೂಲಕವಲ್ಲ, ಅದರ ಜನರ ಬದುಕಿನ ವಾಸ್ತವಗಳ ಮೂಲಕ ಅರ್ಥಮಾಡಿಕೊಳ್ಳಬೇಕು. ಕರ್ನಾಟಕದಲ್ಲಾದರೂ ಚುನಾವಣಾ ವ್ಯವಸ್ಥೆ ಮಾನವೀಯತೆ ಮತ್ತು ನೈತಿಕತೆಗೆ ಮಾದರಿಯಾಗಲಿ” ಎಂದು ಅವರು ಆಶಯ ವ್ಯಕ್ತಪಡಿಸಿದರು.




